“ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ನಮ್ಮನ್ನು ಬಂಧಿಸಿ, ಮಹಿಳಾ ಪೊಲೀಸರ ಮೂಲಕ ನಮ್ಮ ಮೊಬೈಲ್ ಅನ್ನು ಕಸಿದುಕೊಳ್ಳಲಾಗಿದೆ. ನಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬ ಸಂಶಯವಿದೆ. ನಮ್ಮ ಮೊಬೈಲ್ನಲ್ಲಿ ನಮ್ಮ ವಿರುದ್ಧವಾಗಿ ಸಾಕ್ಷ್ಯ ಸೇರಿಸಲಾಗಿದೆ ಎಂಬ ಶಂಕೆಯಿದೆ” ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕ ಸೌರವ್ ದಾಸ್ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಸಿಜೆಪಿ ಪ್ರತಿಭಟನೆಗೂ ಮುನ್ನವೇ ವಿಮಾನದಲ್ಲೇ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್ ಬಂಧನ ಮಾಡಲಾಗಿತ್ತು. ಇಂದು ಬಿಡುಗಡೆಯಾದ ಬಳಿಕ ನಾಯಕರು ಪತ್ರಿಕಾಗೋಷ್ಠಿ ನಡೆಸಿ ದೆಹಲಿ ಪೊಲೀಸರು, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಅಪರಾಧ ಎಸಗಿ ದೇಶದಿಂದ ಪರಾರಿಯಾದ ಮಲ್ಯ-ಮೋದಿಯನ್ನು ವಿಮಾನದಲ್ಲಿ ಕೂರಿಸಿ ಕಳುಹಿಸಲಾಗಿದೆ. ಆದರೆ ನಮ್ಮನ್ನು ವಿಮಾನದಲ್ಲೇ ಬಂಧನ ಮಾಡಲಾಗಿದೆ. ಇದು ಬಂಧನವಲ್ಲ ಅಪಹರಣವಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ದೆಹಲಿ ಈಗ ‘ಡಿಟೆನ್ಷನ್ ಸ್ಟೇಟ್’ – ಪ್ರತಿಭಟನಾಕಾರರ ಬಂಧನಕ್ಕೆ ಸಂಸದ ಸಂಜಯ್ ರಾವತ್ ಆಕ್ರೋಶ
ನಮ್ಮನ್ನು ಬಂಧಿಸಿ ಪ್ರತ್ಯೇಕ ಪ್ರತ್ಯೇಕ ಖಾಸಗಿ ವಾಹನಗಳಲ್ಲಿ ಕರೆದೊಯ್ಯಲಾಗಿದೆ. ಅಷ್ಟಕ್ಕೂ ಇದು ಬಂಧನವಲ್ಲ, ಅಪಹರಣ. ವಕೀಲರನ್ನು ಸಂಪರ್ಕಿಸುವುದು ನಮ್ಮ ಮೂಲಭೂತ ಹಕ್ಕು ಎಂದು ನಾವು ಹೇಳಿದೆವು. ಆದರೆ ಪೊಲೀಸರು ವಶಕ್ಕೆ ಪಡೆದಾಗ ವಕೀಲರನ್ನು ಸಂಪರ್ಕಿಸುವ ಅವಕಾಶವಿಲ್ಲ ಎಂದು ಪೊಲೀಸರು ಹೇಳಿ, ನಮ್ಮ ಹಕ್ಕನ್ನು ಕಸಿದಿದ್ದಾರೆ ಎಂದು ಆರೋಪಿಸಿದ್ದಾರೆ.
“ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವರದಿ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಲಾಗುತ್ತಿದೆ” ಎಂದೂ ಸಿಜೆಪಿ ನಾಯಕ ಸೌರವ್ ದಾಸ್ ಭಾನುವಾರ ಆರೋಪಿಸಿದ್ದಾರೆ.
“ಪ್ರತಿಭಟನೆಗಳ ವರದಿ ಮಾಡುವಾಗ ಪತ್ರಕರ್ತರು ಗುರುತಿನ ಚೀಟಿಗಳನ್ನು ಧರಿಸುವಂತೆ ಸೂಚಿಸಲಾಗಿತ್ತು. ಆದರೆ ಪೊಲೀಸರು ಯಾವುದೇ ನೇಮ್ ಟ್ಯಾಗ್ ಇಲ್ಲದೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದಾರೆ” ಎಂದು ದೂರಿದ್ದಾರೆ.
ಅಲ್ಲದೆ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ದೆಹಲಿ ಪೊಲೀಸರು ಬಂಗಲಾ ಸಾಹೀಬ್ ಗುರುದ್ವಾರದೊಳಗೆ ಪಾದರಕ್ಷೆಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದರು ಹಾಗೂ ಆವರಣದಿಂದ ಪ್ರತಿಭಟನಾಕಾರರನ್ನು ಹೊರಹಾಕುವಂತೆ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದರು ಎಂದೂ ಅವರು ಆರೋಪಿಸಿದರು. ಈ ಪ್ರತಿಭಟನಾ ಚಳವಳಿಯನ್ನು ಬೆಂಬಲಿಸುವಂತೆ ಸಿಖ್ ಸಮುದಾಯದ ಸದಸ್ಯರಿಗೆ ದಾಸ್ ಮನವಿ ಮಾಡಿದರು.
ಸಿಇಸಿ ವಿರುದ್ಧದ ಪ್ರತಿಭಟನೆ ಈಗ ಮೋದಿ-ಶಾ ವಿರೋಧಿ ಪ್ರತಿಭಟನೆಯನ್ನಾಗಿ ಸರ್ಕಾರ ಪರಿವರ್ತಿಸಿದೆ. ಅಷ್ಟಕ್ಕೂ ಗ್ಯಾನೇಶ್ ಕುಮಾರ್ ಅವರನ್ನು ಈ ಮೋದಿ ಸರ್ಕಾರ ಯಾಕೆ ರಕ್ಷಿಸುತ್ತಿದೆ? ವಾರಾಣಸಿಯಲ್ಲಿ ಮತ ಎಣಿಕೆ ನಡೆಯುವಾಗ ಪ್ರಧಾನಿ ಮೋದಿ ಹಿನ್ನಡೆಯಲ್ಲಿದ್ದರು, ಆದರೆ ದಿಢೀರ್ ಆಗಿ ಮುನ್ನಡೆ ಸಾಧಿಸಿದರು. ಇದರ ಹಿಂದೆ ಏನೋ ಇದೆ. ಅದು ಗ್ಯಾನೇಶ್ ಕುಮಾರ್ ಅವರಿಗೆ ತಿಳಿದಿದೆಯೇ? ಅದಕ್ಕಾಗಿ ಮೋದಿ-ಶಾ ಸರ್ಕಾರ ಅವರನ್ನು ರಕ್ಷಿಸುತ್ತಿದೆಯೇ ಎಂದು ದಾಸ್ ಪ್ರಶ್ನಿಸಿದ್ದಾರೆ.
ಹಾಗೆಯೇ ತಮ್ಮ ಈ ಪ್ರತಿಭಟನೆಗೆ ಬೆಂಬಲ ನೀಡುವಂತೆ, ಜನರೆಲ್ಲರೂ ಬೀದಿಗಿಳಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ದಾಸ್ ಕರೆ ನೀಡಿದರು.
ಬಂಧನದಲ್ಲಿದ್ದಾಗ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿ ನಿಧನರಾದರು. ಈ ಬಗ್ಗೆ ತಿಳಿಸುವಾಗ ಪೊಲೀಸರು ಸಂವೇದನಾಹೀನವಾಗಿ ವರ್ತಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕ್ಯಾಮೆರಾ ಮತ್ತು ಮೈಕ್ರೊಫೋನ್ನೊಂದಿಗೆ ಆಗಮಿಸಿ ಮಾಹಿತಿ ನೀಡಿದ್ದಾರೆ. ದೀಪ್ಕೆ ತಮ್ಮ ಸಂಬಂಧಿಕರೊಂದಿಗೆ ಒಮ್ಮೆ ಮಾತನಾಡಬೇಕು ಎಂದು ಪೊಲೀಸರಿಗೆ ಪದೇ ಪದೇ ಮನವಿ ಮಾಡಿದರು. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ತಮ್ಮ ಪೋಷಕರು ಅಜ್ಜಿಯ ನಿಧನದಿಂದ ಆತಂಕಕ್ಕೆ ಒಳಗಾಗಬಹುದು ಎಂದರು. ಆದರೆ ಅವಕಾಶ ನೀಡಲಾಗಿಲ್ಲ ಎಂದು ಅಶುತೋಷ್ ರಾಂಕಾ ದೂರಿದ್ದಾರೆ.
ಹಾಗೆಯೇ ತಮ್ಮ ಈ ಪ್ರತಿಭಟನೆಗೆ ಬೀದಿಗಿಳಿದು ಬೆಂಬಲ ನೀಡಿದ, ವಿಪಕ್ಷ ನಾಯಕರಿಗೆ, ವಿದ್ಯಾರ್ಥಿ ಸಂಘಟನೆಗಳಿಗೆ ರಾಂಕಾ ಧನ್ಯವಾದ ತಿಳಿಸಿದ್ದಾರೆ.





