ಎಸ್ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶಕುಮಾರ ರಾಜೀನಾಮೆ ನೀಡುವಂತೆ ಆಗ್ರಹಿಸಿ, ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೋಲಿಸರ ದಬ್ಬಾಳಿಕೆ ಖಂಡಿಸಿ ಧಾರವಾಡ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, “ಈ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಇದೆ. ಇದಕ್ಕೆ ಜನರ ಅಭಿಪ್ರಾಯ ಮುಖ್ಯ ಆಗಿರುವುದಿಲ್ಲ. ಪ್ರತಿಯೊಬ್ಬರು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಸಂವಿಧಾನಾತ್ಮಕವಾಗಿ ಕೊಟ್ಟಿದೆ. ಇದನ್ನು ಕೇಂದ್ರ ಸರಕಾರ ಕಿತ್ತುಕೊಳ್ಳಲು ಹೊರಟಿದೆ. ಇವತ್ತು ಘೋಷಣೆಯಾಗದಂತ ತುರ್ತು ಪರಿಸ್ಥಿತಿ ಇದೆ. ಕೇಂದ್ರ ಸರಕಾರಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳೇ ಗೊತ್ತಿಲ್ಲ. ದೆಹಲಿಯಲ್ಲಿ ನಡೆದಿರುವ ಹೋರಾಟವನ್ನ ಕೇಂದ್ರ ಸರಕಾರ ಬಲ ಪ್ರಯೋಗ ಮಾಡುವ ಮೂಲಕ ಹತ್ತಿಕ್ಕಲು ಹೊರಟಿದೆ” ಎಂದರು.
“ಇಂದಿನ ಯುವ ತಲೆಮಾರು ಪ್ರಜ್ಞಾ ಪೂರ್ವಕವಾಗಿ ಹೋರಾಟ ಮಾಡುತ್ತಿದ್ದಾರೆ. ದೇಶದ ವಿದ್ಯಾಮಾನಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸರ್ವಾಧಿಕಾರತ್ವವನ್ನು ವಿರೋಧಿಸಿ ಯುವ ತಲೆಮಾರು ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದರು.
ನಿವೃತ್ತ ಪ್ರಾಧ್ಯಾಪಕರು ಡಾ.ಕೆ.ಆರ್.ದುರ್ಗಾದಾಸ್ ಮಾತನಾಡಿ, “ಮುಕ್ಯ ಚುನಾವಣಾ ಆಯುಕ್ತ ಗ್ಯಾನೇಶಕುಮಾರ ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ನಿಜವಾಗಿಯೂ ಪ್ರಜಾಪ್ರಭುತ್ವ ಉಳಿಸುವ ಹೋರಾಟವಾಗಿದೆ. ಕೇಂದ್ರ ಸರಕಾರ ಈ ಹೋರಾಟದ ಉದ್ದೇಶವನ್ನೆ ಅರಿಯದೇ ತನ್ನ ಹಿತಕ್ಕಾಗಿ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಇದು ಸಂವಿಧಾನ ವಿರೋಧಿಯಾಗಿದೆ. ದೇಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರದಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡಿ, “ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರೂರ ವ್ಯವಸ್ಥೆಯನ್ನು ಕೇಂದ್ರ ಸರಕರ ಮಾಡುತ್ತಿದೆ. ಅವರಿಗೆ ಗೊತ್ತಿಲ್ಲ, ದೇಶದ ಯುವ ಜನತೆ ಎದ್ದು ನಿಂತರೆ ಯಾವ ಸರಕಾರಗಳು ನಿಲ್ಲುವುದಿಲ್ಲವೇಂದು ಅವರು ತಿಳಿದಿಲ್ಲ. ಇವತ್ತು ತಡೆಯಬಹುದು, ನಾಳೆಯ ದಿನಗಳಲ್ಲಿ ತಡೆಯಲಿಕ್ಕೆ ಆಗುವುದಲ್ಲ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಡಾ. ರಾಜೇಂದ್ರ ಪೊದ್ದಾರ್, ಮಹೇಶ ಪತ್ತಾರ, ಶಾರದಾ ಗೋಪಾಲ, ಸಿಂಧು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




