ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ‘ಜಂತರ್ ಮಂತರ್’ ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ ಸ್ಥಳ ಪಟ್ಟಿಯಿಂದ ತೆಗೆದುಹಾಕಿರುವುದನ್ನು ಖಂಡಿಸಿ, ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಹಾಗೂ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಸಂಘಟನೆಗಳ ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಘಟನೆಯ ನೂರಾರು ಕಾರ್ಯಕರ್ತರು ಫಿಫ್ರೋಜ್ ಷಾ ರಸ್ತೆಯಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆಯಲ್ಲಿ ತೆರಳಲು ಯತ್ನಿಸಿದರು. ಆದರೆ, ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಪ್ರತಿಭಟನಾಕಾರರನ್ನು ಮಧ್ಯದಲ್ಲೇ ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ ನಡೆದು, ಹಲವು ನಾಯಕರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು.
ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ನಾಯಕರಾದ ಸೌರವ್, ರಾಂಕಾ, ಅಜಿಂಕ್ಯಗೆ 5 ದಿನ ನ್ಯಾಯಾಂಗ ಬಂಧನ
ಜಂತರ್ ಮಂತರ್ ದಶಕಗಳಿಂದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯುವಜನರ ಹೋರಾಟದ ಧ್ವನಿಯಾಗಿದೆ. ಅದನ್ನು ತಕ್ಷಣವೇ ಮತ್ತೆ ಧರಣಿ ಸ್ಥಳವಾಗಿ ನಿಗದಿಪಡಿಸಬೇಕು ಎಂದು ಎಸ್ಎಫ್ಐ ಹಾಗೂ ಡಿವೈಎಫ್ಐ ಆಗ್ರಹಿಸಿವೆ. ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜೆಗಳ ಮೂಲಭೂತ ಹಕ್ಕು. ಸರ್ಕಾರ ಇಂತಹ ಸ್ಥಳಗಳನ್ನು ರದ್ದುಗೊಳಿಸುವ ಮೂಲಕ ಜನಸಾಮಾನ್ಯರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂದು ನಾಯಕರು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಡಿವೈಎಫ್ಐ ಅಧ್ಯಕ್ಷ ಎ. ಎ. ರಹೀಮ್, ಎಸ್ಎಫ್ಐ ಅಧ್ಯಕ್ಷ ಆದರ್ಶ ಎಂ ಎಸ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಜನ್ ಭಟ್ಟಾಚಾರ್ಯ ಹಾಗೂ ಹಿಮಾಘ್ನರಾಜ್ ಭಟ್ಟಾಚಾರ್ಯ ಜಂಟಿ ಹೇಳಿಕೆ ನೀಡಿ, ಸರ್ಕಾರದ ನಡವಳಿಕೆ ಪ್ರಜಾಪ್ರಭುತ್ವ ವಿರೋಧಿ ಎಂದಿದ್ದಾರೆ. ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತರನ್ನು ತಡೆದಿರುವುದನ್ನು ವಿವಿಧ ರಾಜಕೀಯ ನಾಯಕರು ಕೂಡ ಖಂಡಿಸಿದ್ದಾರೆ.




