ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಯೋಗೇಂದ್ರ ಸಾವ್ ನೀಡಿದ ಹೇಳಿಕೆಯು ಜಾರ್ಖಂಡ್‌ನ ಆಡಳಿತಾರೂಢ ಮೈತ್ರಿಕೂಟದಲ್ಲಿ ರಾಜಕೀಯ ಸಂಚಲನ ಉಂಟಾಗಿದೆ. ಇದಾದ ಬೆನ್ನಲ್ಲೇ ಕಾಂಗ್ರೆಸ್ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ, ಯೋಗೇಂದ್ರ ಸಾವ್ ಅವರಿಗೆ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಜಾರಿ ಮಾಡಿದೆ.
ಇತ್ತೀಚೆಗೆ ಹಜಾರಿಬಾಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯೋಗೇಂದ್ರ ಸಾವ್, ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು “ಅತ್ಯಂತ ಭ್ರಷ್ಟ ಮುಖ್ಯಮಂತ್ರಿ” ಎಂದು ಕರೆದಿದ್ದರು. ಜಲ-ಜಂಗಲ್-ಜಮೀನ್ (ನೀರು, ಕಾಡು, ಭೂಮಿ) ವಿಷಯದಲ್ಲಿ ಸರ್ಕಾರದ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದ್ದ ಅವರು, ಮೈತ್ರಿಕೂಟದ ನಾಯಕತ್ವದ ಕುರಿತು ಸಾರ್ವಜನಿಕವಾಗಿ ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ತಪ್ಪು: ಜಾರ್ಖಂಡ್ ಸರ್ಕಾರಕ್ಕೆ ರಾಹುಲ್ ಗಾಂಧಿ ಕಿವಿಮಾತು
ಈ ಹೇಳಿಕೆಗೆ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕತ್ವವು ತಕ್ಷಣವೇ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಸ್ವತಃ ಯೋಗೇಂದ್ರ ಸಾವ್ ಅವರ ಪುತ್ರಿ ಹಾಗೂ ಬಡ್ಕಾಗಾಂವ್ ಮಾಜಿ ಶಾಸಕಿ ಅಂಬಾ ಪ್ರಸಾದ್ ಕೂಡ ತಮ್ಮ ತಂದೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಸಿಎಂ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿಯ ಅಧ್ಯಕ್ಷ ಡಾ. ರಾಮೇಶ್ವರ್ ಉರಾವ್ ಅವರು ಯೋಗೇಂದ್ರ ಸಾವ್ ಅವರಿಗೆ ಈ ನೋಟಿಸ್ ನೀಡಿದ್ದಾರೆ. ಮುಂದಿನ 3 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಬೇಕು ಹಾಗೂ ಶಿಸ್ತು ಸಮಿತಿಯ ಮುಂದೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಲಾಗಿದೆ.
ಪಕ್ಷದ ಚೌಕಟ್ಟು ಮತ್ತು ನೀತಿ ನಿಯಮಗಳನ್ನು ಮೀರಿ ಸಾರ್ವಜನಿಕವಾಗಿ ಮೈತ್ರಿಕೂಟದ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವುದು ಪಕ್ಷದ ಸಂವಿಧಾನ ಮತ್ತು ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಗಮನಾರ್ಹವೆಂದರೆ, ಯೋಗೇಂದ್ರ ಸಾವ್ ಅವರನ್ನು ಈ ಹಿಂದೆ 2026ರ ಮಾರ್ಚ್‌ನಲ್ಲೂ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ 3 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ, ನಂತರ ಜೂನ್‌ನಲ್ಲಿ ಅವರ ಉಚ್ಚಾಟನೆಯನ್ನು ಹಿಂಪಡೆದು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಮತ್ತೆ ಅದೇ ಮಾದರಿಯ ಅಶಿಸ್ತು ತೋರಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.




