ಕರ್ತವ್ಯ ಲೋಪ ಮತ್ತು ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘನೆ ಆರೋಪದಡಿ ಅಮಾನತುಗೊಂಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಞಾನೇಶ್ವರ ನಿರ್ಗುಡೆ ಹಾಗೂ ಬಸವಕಲ್ಯಾಣ ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ ಮೈಲಾರೆ ಅವರ ಅಮಾನತು ಆದೇಶ ರದ್ದುಪಡಿಸಿ, ಕರ್ತವ್ಯಕ್ಕೆ ಮರುನಿಯೋಜಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್ ಮೂಲಕ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಡಾ.ಜ್ಞಾನೇಶ್ವರ ನಿರ್ಗುಡೆ ಹಾಗೂ ಡಾ.ಅಶೋಕ ಮೈಲಾರೆ ಅವರು ಆರೋಗ್ಯ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವಕಲ್ಯಾಣ ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದ ವೇದಿಕೆಯ ಬ್ಯಾನರ್‌ನಲ್ಲಿ ಗಣ್ಯರ ಭಾವಚಿತ್ರಗಳು ಕೈಬಿಟ್ಟುಹೋದ ಕಾರಣಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ಅಮಾನತುಗೊಳಿಸಿರುವುದು ಸರಿಯಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಾಧಿಕಾರಿಗಳ ಅಮಾನತು ಪ್ರಕರಣವು ಜಿಲ್ಲೆಯ ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಪ್ರಕರಣದ ವಾಸ್ತವಾಂಶವನ್ನು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ ಇಬ್ಬರನ್ನೂ ಕೂಡಲೇ ಕರ್ತವ್ಯಕ್ಕೆ ಮರುನಿಯೋಜಿಸಲು ಆದೇಶಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಬೀದರ್ | ವರ್ಷ ಕಳೆದರೂ ಸಿಗದ ರೈತ ಆತ್ಮಹತ್ಯೆ ಪರಿಹಾರ: ಸಂಕಷ್ಟದಲ್ಲಿ ಸಂತ್ರಸ್ತ ಕುಟುಂಬಗಳು!
ಈ ಸಂದರ್ಭದಲ್ಲಿ ಶಮಿ ಪಟೇಲ್, ಸುನಿಲ ಬಿರಾದಾರ, ಬಸವರಾಜ ಬಂಗಾರೆ, ರಾಜಪ್ಪ ಪಾಟೀಲ್, ಶರಣಬಸವ, ಪ್ರಭು ಡಿಗ್ಗೆ, ವಿವೇಕಾನಂದ ಸ್ವಾಮಿ, ಧನರಾಜ ಮೇತ್ರೆ, ಜಗದೇವಿ, ಸ್ಟೇಲುರಾಣಿ, ಡಾ.ರಂಗನಾಥ ಭಗವತಿ, ಡಾ. ವಿಲಾಸ ಕನಸೆ, ಡಾ.ವಿಕ್ರಮ ದೇವಪ್ಪ, ಡಾ.ವಿಜಯಕುಮಾರ, ಡಾ.ಚನ್ನವೀರ ಕಳಸೆ, ನಂದುಕುಮಾರ ಜಾಧವ, ಸುಲೋಚನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




