ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ಹೆಸರಿನಲ್ಲಿ ನೈಜ ಮತದಾರರನ್ನು ಬೇಟೆಯಾಡುವುದನ್ನು ಕೈಬಿಟ್ಟು, ರಾಜಕೀಯ ಪಕ್ಷಗಳಿಗೆ ಹರಿದುಬರುವ ಭಾರೀ ದೇಣಿಗೆಗಳ ಮೂಲವನ್ನು ಕೇಂದ್ರ ಚುನಾವಣಾ ಆಯೋಗ (ಇಸಿಐ) ಕಟ್ಟುನಿಟ್ಟಾಗಿ ತನಿಖೆ ಮಾಡಬೇಕು ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ ಆಗ್ರಹಿಸಿದ್ದಾರೆ. ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ‘The Murky World of Political Party Finance’ (ರಾಜಕೀಯ ಪಕ್ಷಗಳ ಹಣಕಾಸಿನ ಅಪಾರದರ್ಶಕ ಜಗತ್ತು) ಎಂಬ ಲೇಖನದಲ್ಲಿ ಅವರು ಈ ಮಹತ್ವದ ಆಶಯವನ್ನು ವ್ಯಕ್ತಪಡಿಸಿ, ಆಯೋಗದ ಪ್ರಸ್ತುತ ಕಾರ್ಯವೈಖರಿಯನ್ನು ವಿಮರ್ಶಿಸಿದ್ದಾರೆ.
ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ತುರ್ತು ಅಗತ್ಯವನ್ನು ಲವಾಸ ಅವರು ತಮ್ಮ ಲೇಖನದಲ್ಲಿ ಪ್ರಮುಖವಾಗಿ ಪ್ರತಿಪಾದಿಸಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷದ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ಮಹಾಲೇಖಪಾಲರ (ಸಿಎಜಿ) ಲೆಕ್ಕಪರಿಶೋಧನೆಗೆ ಒಳಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಇದರ ಜೊತೆಗೆ, ಚುನಾವಣಾ ವೆಚ್ಚಕ್ಕೆ ಕಟ್ಟುನಿಟ್ಟಿನ ಮಿತಿ ವಿಧಿಸುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಣಬಲದ ಪ್ರಭಾವವನ್ನು ತಗ್ಗಿಸಬೇಕು ಎಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಗುರುತಿಸಲ್ಪಡದ ನೋಂದಾಯಿತ ರಾಜಕೀಯ ಪಕ್ಷಗಳ (RUPP) ಹಣಕಾಸು ವಹಿವಾಟುಗಳಲ್ಲೂ ಹೆಚ್ಚಿನ ಪಾರದರ್ಶಕತೆ ತರಬೇಕಾದ ಅನಿವಾರ್ಯತೆ ಇದೆ. ನೈಜ ಮತದಾರರನ್ನು (Genuine electors) ವಿವಿಧ ಕಾರಣಗಳೊಡ್ಡಿ ಮತದಾರರ ಪಟ್ಟಿಯಿಂದ ಹೊರಹಾಕಲು ಶ್ರಮಿಸುವ ಬದಲು, ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಹಣದ ಹೊಳೆಯನ್ನು ತಡೆಯಲು ಆಯೋಗ ತನ್ನ ಸಾಂವಿಧಾನಿಕ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಬೇಕು ಎಂದು ಲವಾಸ ತಮ್ಮ ಲೇಖನದಲ್ಲಿ ನಿಖರವಾಗಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಚುನಾವಣಾ ಆಯೋಗವು ಕೈಗೆತ್ತಿಕೊಂಡಿರುವ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ – SIR) ಪ್ರಕ್ರಿಯೆಯ ಉದ್ದೇಶ ಮತ್ತು ವಿಧಾನವನ್ನು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಹೊಸ ಮತದಾರರ ಸೇರ್ಪಡೆಗೆ ಬಳಸುವ ನಮೂನೆ 6 (Form 6) ಹಾಗೂ ಮತದಾರರ ನೋಂದಣಾಧಿಕಾರಿಯ (ಇಆರ್‌ಒ) ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಹಾಲಿ ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಆಕ್ಷೇಪಣೆಗಳು ಅತ್ಯಂತ ‘ಗಂಭೀರವಾದ ಕಾನೂನು ಕಾಳಜಿಗಳನ್ನು’ ಹುಟ್ಟುಹಾಕುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಈ ವಿವಾದ ಮುಂದುವರಿದಿದೆ ಎಂದಿದ್ದಾರೆ. ಯಾವುದೇ ಸ್ಪಷ್ಟ ಉದ್ದೇಶವಿಲ್ಲದ ಇಂತಹ ವಿವಾದಾತ್ಮಕ ಹೆಜ್ಜೆಗಳಿಂದ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಹಾಗೂ ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸ ಮತದಾರರ ನೋಂದಣಿಗೆ ಬಳಸುವ ನಮೂನೆ 6ಕ್ಕೆ ಯಾವುದೇ ಮೂಲಭೂತ ಬದಲಾವಣೆ ಮಾಡಿಲ್ಲ ಹಾಗೂ ಎಸ್‌ಐಆರ್ ಪ್ರಕ್ರಿಯೆಗಾಗಿ ಕೇವಲ ಪ್ರತ್ಯೇಕ ಘೋಷಣಾಪತ್ರವನ್ನು (annexure) ಮಾತ್ರ ಸೇರ್ಪಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿತ್ತು. ಆದಾಗ್ಯೂ, ಈ ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ಪಾರದರ್ಶಕತೆಯ ಬಗ್ಗೆ ಆಯೋಗದ ಒಳಗೆ ಮತ್ತು ಹೊರಗೆ ಚರ್ಚೆಗಳು ತೀವ್ರಗೊಂಡಿವೆ.
ಹಾಲಿ ಇಬ್ಬರು ಆಯುಕ್ತರು ಎತ್ತಿರುವ ಪ್ರಶ್ನೆಗಳು ಸಂಪೂರ್ಣ ನ್ಯಾಯಸಮ್ಮತವಾಗಿವೆ ಎಂದು ಅಶೋಕ್ ಲವಾಸ ಅವರೊಂದಿಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ.ಪಿ. ರಾವತ್ ಕೂಡ ಬೆಂಬಲ ಸೂಚಿಸಿದ್ದಾರೆ. ಈ ಬೆಳವಣಿಗೆಯು ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿ, ಸಾಂವಿಧಾನಿಕ ಸ್ವಾಯತ್ತತೆ ಹಾಗೂ ಭವಿಷ್ಯದ ಚುನಾವಣಾ ಸುಧಾರಣೆಗಳ ಕುರಿತು ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.




