‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

Date:

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ ಪರಿಕಲ್ಪನೆಯೇ ಶಿಕ್ಷಣದ ಚೌಕಟ್ಟಿನಿಂದ ಕಣ್ಮರೆಯಾದರೆ, ಅಂತಹ ಶಿಕ್ಷಣದ ಸ್ವರೂಪ ಹೇಗಿರಲಿದೆ? ದೆಹಲಿಯ ಸತ್ಯ ನಿಕೇತನ PG ದುರಂತದ ಹಿನ್ನೆಲೆ ಮರೆತಿರುವ ಈ ಭಾಗವನ್ನು ಮತ್ತೆ ನೆನಪಿಸಿಕೊಳ್ಳಬೇಕಿದೆ.

- Advertisement -

ದೆಹಲಿ ದಕ್ಷಿಣ ಭಾಗದ ಸತ್ಯ ನಿಕೇತನದಲ್ಲಿ ಕಳೆದ ಸೆಪ್ಟೆಂಬರ್‌ 6ರಂದು ಮಧ್ಯಾಹ್ನ 5 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದುಬಿತ್ತು. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗಾಗಿ ಖಾಸಗಿ PG ಹಾಸ್ಟೆಲ್‌ ನಡೆಸಲಾಗುತ್ತಿತ್ತು. ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ನ ಕಾಲೇಜುಗಳಿಗೆ ಸಮೀಪದಲ್ಲಿದ್ದ ಕಾರಣ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳ ವಸತಿ ಹೆಚ್ಚು. ಕುಸಿದ ಕಟ್ಟಡದಲ್ಲೂ ಹಲವು ವಿದ್ಯಾರ್ಥಿಗಳು ವಾಸಿಸುತ್ತಿದ್ದರು. ಕಟ್ಟಡ ಕುಸಿದಾಗ ಹಲವರು ಅವಶೇಷಗಳಡಿ ಸಿಲುಕಿಕೊಂಡರು. ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಅವಶೇಷಗಳಿಂದ ಹೊರತೆಗೆದವು. ಅವರಲ್ಲಿ 7 ಮಂದಿ ಮೃತಪಟ್ಟರೆ, ಐವರು ಗಾಯಗೊಂಡರು. ಮೃತಪಟ್ಟವರ ಪೈಕಿ 5 ಮಂದಿ ವಿದ್ಯಾರ್ಥಿಗಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಸುಮಾರು ಐದು ದಶಕಗಳಷ್ಟು ಹಳೆಯದಾಗಿದ್ದ ಈ ಕಟ್ಟಡದಲ್ಲಿ ಇತ್ತೀಚೆಗೆ ದುರಸ್ತಿ ಮತ್ತು ನಿರ್ಮಾಣ ಕಾಮಗಾರಿ ನಡೆದಿತ್ತು. ಕುಸಿತ ಸಂಭವಿಸಿದ ವೇಳೆಯಲ್ಲೂ ನೆಲಮಾಳಿಗೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ನೆಲಮಾಳಿಗೆಯಲ್ಲಿ ನೀರು ಕೂಡ ಸಂಗ್ರಹವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಈ ಕಾಮಗಾರಿ ಹಾಗೂ ಕಟ್ಟಡದ ಹಳೆಯ ರಚನೆಯ ಮೇಲೆ ಬಿದ್ದ ಹೆಚ್ಚುವರಿ ಹೊರೆ ಕುಸಿತಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ತನಿಖೆ ಮುಂದುವರೆದಿದೆ.

ತರಗತಿ, ಪಠ್ಯಕ್ರಮ, ಪರೀಕ್ಷೆ, ಫಲಿತಾಂಶ, ಕಾಲೇಜಿನ ಮೂಲಸೌಕರ್ಯ.. ಇವೆಲ್ಲವನ್ನೂ ಶಿಕ್ಷಣದ ಅವಿಭಾಜ್ಯ ಭಾಗವೆಂದು ನೋಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ತಂಗುವ ಹಾಸ್ಟೆಲ್‌ ಅನ್ನು ಮಾತ್ರ ಬಹುತೇಕ ಕಾಲೇಜಿನ ಹೊರಗಿನ ಖಾಸಗಿ ವಿಷಯದಂತೆ ನೋಡಲಾಗುತ್ತದೆ. ದೆಹಲಿ PG ದುರಂತ ಈ ತಪ್ಪು ಕಲ್ಪನೆಯ ಅಪಾಯವನ್ನು ಬಯಲಿಗೆಳೆದಿದೆ.

ಇದೇ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ 2004ರಿಂದ 2010ರವರೆಗೆ NCERT ನಿರ್ದೇಶಕರಾಗಿದ್ದ ಕೃಷ್ಣ ಕುಮಾರ್‌ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಬರೆದಿರುವ ಲೇಖನವೊಂದು ಗಮನ ಸೆಳೆಯುತ್ತದೆ. ಸತ್ಯ ನಿಕೇತನದ ದುರಂತವನ್ನು ಆಧಾರವಾಗಿಟ್ಟುಕೊಂಡು, ಹಾಸ್ಟೆಲ್‌ ಎಂಬುದು ವಿದ್ಯಾರ್ಥಿಯ ರಾತ್ರಿ ತಂಗುವ ಸ್ಥಳ ಮಾತ್ರವಲ್ಲ, ಅದು ಆತನ ಶಿಕ್ಷಣದ ಅನುಭವದ ಪ್ರಮುಖ ಭಾಗ ಎಂಬ ವಿಚಾರವನ್ನು ಅವರು ಮುಂದಿಟ್ಟಿದ್ದಾರೆ.

ನಗರಗಳಲ್ಲಿ ಸಂಭವಿಸುವ ವಿಪತ್ತುಗಳ ಅಧ್ಯಯನದ ವೇಳೆ ಹಾಸ್ಟೆಲ್‌ಗಳಂತಹ ಸ್ಥಳಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಮನ್ನಣೆ ಸಿಗುವುದಿಲ್ಲ. ದಕ್ಷಿಣ ದೆಹಲಿಯ ಸತ್ಯ ನಿಕೇತನದ ಸಮೀಪ ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ನ ಹಲವು ಪ್ರತಿಷ್ಠಿತ ಕಾಲೇಜುಗಳಿವೆ. ಹತ್ತಿರದಲ್ಲೇ ದುಬಾರಿ ಹೋಟೆಲ್‌ಗಳು, ರಾಯಭಾರ ಕಚೇರಿಗಳು ಮತ್ತು ಶ್ರೀಮಂತ ಪ್ರದೇಶಗಳಿದ್ದರೂ, ವಿದ್ಯಾರ್ಥಿಗಳು ವಾಸಿಸುತ್ತಿದ್ದ ದುರ್ಬಲ ಕಟ್ಟಡವೊಂದು ಕುಸಿದಿರುವುದು ವಿಷಾದ. ಹಾಸ್ಟೆಲ್‌ ಜೀವನವು ಶೈಕ್ಷಣಿಕ ಅನುಭವದ ಒಂದು ಭಾಗ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾದರೂ, ಅದನ್ನು ಶಿಕ್ಷಣದ ಚರ್ಚೆಯಲ್ಲಿ ಸ್ಪಷ್ಟವಾಗಿ ಹೇಳುವುದು ಅಪರೂಪ ಎಂದು ಕೃಷ್ಣ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಗ್ವೈರ್‌ ಹಾಲ್‌ನಂತಹ ಹಳೆಯ ಹಾಸ್ಟೆಲ್‌ಗಳ ಉದಾಹರಣೆ ನೀಡಿರುವ ಅವರು, ವಿಶಾಲವಾದ ಆವರಣ, ಓದಲು ಅನುಕೂಲಕರ ವಾತಾವರಣ ಮತ್ತು ವಿದ್ಯಾರ್ಥಿಗಳ ನಡುವೆ ರೂಪುಗೊಳ್ಳುವ ಸಮುದಾಯದ ಅನುಭವವನ್ನು ವಿವರಿಸಿದ್ದಾರೆ. ಆದರೆ ಇಂತಹ ಹಾಸ್ಟೆಲ್‌ಗಳಲ್ಲಿ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಜಾಗ ಸಿಗುತ್ತದೆ. ಬಹುಪಾಲು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬಾಡಿಗೆ ಕೊಠಡಿಗಳು ಮತ್ತು ಖಾಸಗಿ ವಸತಿಗಳಲ್ಲಿ ಉಳಿಯಬೇಕಾಗುತ್ತದೆ. ಸತ್ಯ ನಿಕೇತನದ ಕಿರಿದಾದ ರಸ್ತೆಗಳು, ಜೋತುಬಿದ್ದ ವಿದ್ಯುತ್‌ ತಂತಿಗಳು ಮತ್ತು ಅಸ್ತವ್ಯಸ್ತ ವಸತಿ ಪರಿಸ್ಥಿತಿಯ ನಡುವೆ ವಿದ್ಯಾರ್ಥಿಗಳು ತಮ್ಮ ಓದನ್ನು ಮುಂದುವರಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಚಿತ್ರಿಸಿದ್ದಾರೆ.

ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಬೇರೆ ಬೇರೆ ನಗರಗಳಿಗೆ ತೆರಳಿ ಓದಲು ಅನುಕೂಲವಾಗುವಂತೆ ಪ್ರವೇಶ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಉಂಟಾಗುವ ಭೌಗೋಳಿಕ ಚಲನೆಗೆ ಅನುಗುಣವಾಗಿ ಹಾಸ್ಟೆಲ್‌ಗಳನ್ನೂ ನಿರ್ಮಿಸುವ ಯೋಜನೆಯ ಬಗ್ಗೆ ಯಾಕೆ ಎಲ್ಲೂ ಚರ್ಚೆಯಾಗಲಿಲ್ಲ. ಇದಕ್ಕೆ ಹಣದ ಕೊರತೆಯಾಗಿರಬಹುದು ಅಥವಾ ಅದಕ್ಕಿಂತ ಹೆಚ್ಚಾಗಿ ಯೋಜನೆಯ ಕಲ್ಪನೆಯಲ್ಲೇ ಕೊರತೆಯಾಗಿರುವುದು ಕಾರಣವಿರಬಹುದು. ಖಾಸಗಿ ಕೊಠಡಿಗಳ ಮಾಲೀಕರಿಗೆ ವಿದ್ಯಾರ್ಥಿಯಿಂದ ಸಮಯಕ್ಕೆ ಬಾಡಿಗೆ ಸಿಗುವುದು ಮುಖ್ಯ; ವಿದ್ಯಾರ್ಥಿಗೆ ಓದಲು ಪುಸ್ತಕದ ಕಪಾಟು, ಟೇಬಲ್‌ ಅಥವಾ ಟೇಬಲ್‌ ಲ್ಯಾಂಪ್‌ ಬೇಕೇ ಎಂಬುದು ಅವರ ಹೊಣೆಗಾರಿಕೆಯಲ್ಲ. ಇದೇ ವೇಳೆ ಕಾಲೇಜುಗಳೂ ವಿದ್ಯಾರ್ಥಿಗಳ ತರಗತಿಯ ಹೊರಗಿನ ದೈನಂದಿನ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಸತ್ಯ ನಿಕೇತನದ ಸುತ್ತಮುತ್ತಲಿನ ಏಳು ಕಾಲೇಜುಗಳಲ್ಲಿ ಮೂರಕ್ಕಷ್ಟೇ ಹಾಸ್ಟೆಲ್‌ಗಳಿದ್ದು, ಅವುಗಳಲ್ಲಿಯೂ ಒಟ್ಟು ವಿದ್ಯಾರ್ಥಿಗಳ ಒಂದು ಸಣ್ಣ ಭಾಗಕ್ಕಷ್ಟೇ ವಸತಿ ಸಿಗುತ್ತದೆ ಎಂದು ಕೃಷ್ಣ ಕುಮಾರ್‌ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಹಾಸ್ಟೆಲ್‌ಗಳ ಕೊರತೆಯಿಂದ ಹೆಚ್ಚೆಂದರೆ ಇನ್ನೇನಾಗಿಬಿಡಬಹುದು! ರೆಂಟೆಡ್‌ ರೂಂ, ಪೇಯಿಂಗ್‌ ಗೆಸ್ಟ್‌ಗಳು, ಹತ್ತಿರದವರ ಮನೆ, ಸ್ನೇಹಿತರ ಕೊಠಡಿ ಹೀಗೆ ಸಾಕಷ್ಟು ಪರ್ಯಾಯಗಳಿವೆಯಲ್ಲ ಎಂದುಕೊಳ್ಳಬಹುದು. ಆ ಕೊರತೆಯ ಪರಿಣಾಮವನ್ನು ಖಾಲಿ ಹಾಸಿಗೆಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಹಾಸ್ಟೆಲ್‌ನ ಒಂದೇ ಕಾರಣಕ್ಕೆ ನಗರಕ್ಕೆ ಓದಲು ಬರುವ ವಿದ್ಯಾರ್ಥಿಯ ಜೀವನದ ಸಂಪೂರ್ಣ ಲೆಕ್ಕಾಚಾರವೇ ಬದಲಾಗುತ್ತದೆ. ಕಾಲೇಜಿಗೆ ಹತ್ತಿರದ ಜಾಗ ದುಬಾರಿಯಾಗಿದ್ದರೆ ದೂರದ ಪ್ರದೇಶಕ್ಕೆ ಹೋಗಬೇಕು. ದೂರವಿದ್ದರೆ ಪ್ರಯಾಣದ ಸಮಯ ಮತ್ತು ವೆಚ್ಚ ಹೆಚ್ಚುತ್ತದೆ. ಕಡಿಮೆ ಬಾಡಿಗೆಯ ಜಾಗ ಹುಡುಕಿದರೆ ಸೌಲಭ್ಯ ಮತ್ತು ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು. ಹೀಗಾಗಿ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಶಿಕ್ಷಣ ಸಿಕ್ಕರೂ, ಕಾಲೇಜಿನ ಹೊರಗಿನ ಅವರ ಬದುಕಿನ ಪರಿಸ್ಥಿತಿ ಒಂದೇ ಆಗಿರುವುದಿಲ್ಲ.

ಇದರ ಪರಿಣಾಮ ಓದಿನ ಮೇಲೂ ಬೀಳುತ್ತದೆ. ಬೆಳಗ್ಗೆ ಕಾಲೇಜಿಗೆ ಹೋಗಲು ದೀರ್ಘ ಪ್ರಯಾಣ ಮಾಡಬೇಕಾದ ವಿದ್ಯಾರ್ಥಿ, ಸಂಜೆ ಮರಳಿ ಬಂದ ಬಳಿಕ ಓದಲು ಎಷ್ಟು ಸಮಯ ಮತ್ತು ಶಕ್ತಿ ಉಳಿಸಿಕೊಳ್ಳಬಲ್ಲ? ಹಾಸ್ಟೆಲ್‌ ಅಥವಾ PGಯಲ್ಲಿ ಜನದಟ್ಟಣೆ, ಶಬ್ದ, ಗೌಪ್ಯತೆಯ ಕೊರತೆ ಇದ್ದರೆ ಓದಿಗೆ ಬೇಕಾದ ಏಕಾಗ್ರತೆಯೂ ಕಷ್ಟವೇ. ಹೀಗಾಗಿ ವಸತಿ ಎನ್ನುವುದು ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಅಂಶ. ದೊಡ್ಡ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ ವೇಗಕ್ಕೆ ಅನುಗುಣವಾಗಿ ವಸತಿ ವ್ಯವಸ್ಥೆ ವಿಸ್ತರಿಸದಿದ್ದರೆ, ಆ ಕೊರತೆಯನ್ನು ಖಾಸಗಿ ಮಾರುಕಟ್ಟೆ ತುಂಬುತ್ತದೆ. ಬೇಡಿಕೆ ಇರುವ ಕಡೆ PGಗಳು, ಹಾಸ್ಟೆಲ್‌ಗಳು ಮತ್ತು ಬಾಡಿಗೆ ಕೊಠಡಿಗಳು ಹೆಚ್ಚೆಚ್ಚು ತಲೆ ಎತ್ತುತ್ತವೆ.

UGCಯ ಪ್ರಸ್ತುತ ಪಟ್ಟಿಯ ಪ್ರಕಾರ ದೇಶದಲ್ಲಿ ಒಟ್ಟು 1,289 ವಿಶ್ವವಿದ್ಯಾಲಯಗಳಿವೆ. ಇದರಲ್ಲಿ 57 ಕೇಂದ್ರ ವಿಶ್ವವಿದ್ಯಾಲಯಗಳು, 521 ರಾಜ್ಯ ವಿಶ್ವವಿದ್ಯಾಲಯಗಳು, 155 ಡೀಮ್ಡ್ ವಿಶ್ವವಿದ್ಯಾಲಯಗಳು ಹಾಗೂ 556 ಖಾಸಗಿ ವಿಶ್ವವಿದ್ಯಾಲಯಗಳು ಸೇರಿವೆ.

ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ AISHEಯಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಸೌಲಭ್ಯ, ಶೌಚಾಲಯ ಸೇರಿದಂತೆ ಹಲವು ಮಾಹಿತಿಗಳನ್ನು ದಾಖಲಿಸಲಾಗುತ್ತದೆ. ಆದರೆ ದೇಶದ ಪ್ರತಿಯೊಂದು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಕೊಠಡಿಯ ಗಾತ್ರ, ವಿದ್ಯಾರ್ಥಿಗಳ ಸಂಖ್ಯೆ, ಅಧ್ಯಯನ ಮೇಜು, ನೀರು, Wi-Fi, ಭದ್ರತೆ, ಅಗ್ನಿ ಸುರಕ್ಷತೆ, ಮೆಸ್ಸಿನ ಗುಣಮಟ್ಟ, ಶುಲ್ಕ ಇತ್ಯಾದಿಗಳ ಸಮಗ್ರ ನೋಟ ಒಂದೇ ರೀತಿ ಇರುವುದಿಲ್ಲ.

ದೇಶದಲ್ಲಿ 1,289 ವಿಶ್ವವಿದ್ಯಾಲಯಗಳಿವೆ. ಸಾವಿರಾರು ಹಾಸ್ಟೆಲ್‌ಗಳಿವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಸತಿ ಸಾಮರ್ಥ್ಯವೂ ಇದೆ. ಆದರೆ ಎಷ್ಟು ವಿದ್ಯಾರ್ಥಿಗಳಿಗೆ ಸುರಕ್ಷಿತ, ಕೈಗೆಟುಕುವ ಮತ್ತು ಉತ್ತಮ ಸೌಕರ್ಯಗಳಿರುವ ಹಾಸ್ಟೆಲ್ ಸಿಗುತ್ತಿದೆ ಎಂಬುದರ ಸ್ಪಷ್ಟ ರಾಷ್ಟ್ರೀಯ ಚಿತ್ರಣವೇ ಇಲ್ಲ. ಉನ್ನತ ಶಿಕ್ಷಣದ ವ್ಯಾಪ್ತಿ ಹೆಚ್ಚುತ್ತಿರುವಾಗ ವಿದ್ಯಾರ್ಥಿಯ ತರಗತಿ, ಪರೀಕ್ಷೆ ಮತ್ತು ಫಲಿತಾಂಶದ ಲೆಕ್ಕದಷ್ಟೇ, ಆತ ತರಗತಿಯ ಹೊರಗೆ ಎಲ್ಲಿ ಮತ್ತು ಹೇಗೆ ಬದುಕುತ್ತಿದ್ದಾನೆ ಎಂಬ ಲೆಕ್ಕವೂ ಮುಖ್ಯವಾಗುತ್ತದೆ.

ನಗರ ಯೋಜನೆಯ ದೃಷ್ಟಿಯಿಂದ ವಿದ್ಯಾರ್ಥಿ ವಸತಿಯನ್ನು ಪ್ರತ್ಯೇಕವಾಗಿ ಪರಿಗಣಿಸದಿದ್ದರೆ ಸಮಸ್ಯೆ ಬೇರೆ ರೂಪ ಪಡೆಯುತ್ತದೆ. ಒಂದೇ ಪ್ರದೇಶದಲ್ಲಿ ನೂರಾರು ವಿದ್ಯಾರ್ಥಿಗಳು ವಾಸಿಸಲು ಆರಂಭಿಸಿದರೂ ರಸ್ತೆ, ನೀರು, ಒಳಚರಂಡಿ, ವಿದ್ಯುತ್‌, ತುರ್ತು ಸೇವೆ, ಕಸದ ನಿರ್ವಹಣೆ ಸೇರಿದಂತೆ ಮೂಲಸೌಕರ್ಯ ಅದಕ್ಕೆ ತಕ್ಕಂತೆ ಬದಲಾಗದೇ ಇರಬಹುದು. ಸತ್ಯ ನಿಕೇತನದಂತಹ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ವಸತಿ ಹೇಗೆ ನಗರ ಪ್ರದೇಶವನ್ನೇ ಬದಲಿಸಿದೆ ಎಂಬುದನ್ನು ಈ ದುರಂತ ತೋರಿಸಿದೆ.

ವಿದ್ಯಾರ್ಥಿ ವಾಸಿಸುವ ಕಟ್ಟಡ ಸುರಕ್ಷಿತವಾಗಿರಬೇಕು ಎಂಬುದು ಕನಿಷ್ಠ ನಿರೀಕ್ಷೆ. ಆದರೆ ಸುರಕ್ಷತೆಯನ್ನು ಕೇವಲ ಕಟ್ಟಡ ಕುಸಿಯುತ್ತದೆಯೇ ಇಲ್ಲವೇ ಎಂಬ ಮಟ್ಟಕ್ಕೆ ಸೀಮಿತಗೊಳಿಸಲಾಗದು. ಬೆಂಕಿ ಹೊತ್ತಿಕೊಂಡರೆ ಹೊರಬರಲು ದಾರಿ ಇದೆಯೇ? ತುರ್ತು ನಿರ್ಗಮನ ಎಲ್ಲಿದೆ? ಒಂದೇ ಕೊಠಡಿಯಲ್ಲಿ ಎಷ್ಟು ಜನರಿಗೆ ಅವಕಾಶವಿದೆ? ವಿದ್ಯುತ್‌ ಸಂಪರ್ಕ ಸುರಕ್ಷಿತವಾಗಿದೆಯೇ? ಕಟ್ಟಡದಲ್ಲಿ ಅನುಮತಿ ಇಲ್ಲದ ಬದಲಾವಣೆಗಳಾಗಿವೆಯೇ? ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಅಥವಾ ಅಗ್ನಿಶಾಮಕ ವಾಹನ ಒಳಬರಲು ಸಾಧ್ಯವೇ? ಎಂಬೆಲ್ಲಾ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರದ ಅಗತ್ಯವಿದೆ.

ಇದನ್ನೂ ಓದಿ: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಪ್ರತಿ ವಿದ್ಯಾರ್ಥಿಗೂ ವಿಶ್ವವಿದ್ಯಾಲಯವೇ ಹಾಸ್ಟೆಲ್‌ ಒದಗಿಸುವುದು ಎಲ್ಲೆಡೆ ಸಾಧ್ಯವಾಗದಿರಬಹುದು. ಆದರೆ ಅದರಿಂದ ವಿಶ್ವವಿದ್ಯಾಲಯಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯದ ಬಳಿ ಲಭ್ಯವಿರುವ ಸುರಕ್ಷಿತ ಖಾಸಗಿ ಹಾಸ್ಟೆಲ್‌ಗಳ ಪಟ್ಟಿ ಇರಬಹುದು. ಕಟ್ಟಡದ ಸುರಕ್ಷತಾ ಪ್ರಮಾಣಪತ್ರ, ಅಗ್ನಿ ಸುರಕ್ಷತೆ, ಸಾಮರ್ಥ್ಯ, ಬಾಡಿಗೆ ಸೇರಿದಂತೆ ಮೂಲಭೂತ ವಿವರಗಳನ್ನು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಬಹುದು. ಖಾಸಗಿ ವಸತಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನಿಗದಿತ ಮಾನದಂಡದ ವಸತಿ ವ್ಯವಸ್ಥೆಯನ್ನೂ ರೂಪಿಸಬಹುದು. ಜೊತೆಗೆ ಹೊಸ ಕ್ಯಾಂಪಸ್‌ ಅಥವಾ ಹೊಸ ಕೋರ್ಸ್‌ಗಳ ಯೋಜನೆಯಲ್ಲೇ ವಿದ್ಯಾರ್ಥಿ ವಸತಿಯನ್ನು ಸೇರಿಸಬೇಕು. ಎಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದು ಎಂಬ ಲೆಕ್ಕದ ಜೊತೆಗೆ, ಅವರಲ್ಲಿ ಎಷ್ಟು ಮಂದಿಗೆ ವಸತಿ ಬೇಕಾಗುತ್ತದೆ ಎಂಬ ಲೆಕ್ಕವೂ ಇರಬೇಕು.

ಮನೆಯ ವಾತಾವರಣದಿಂದ ಹೊರಬಂದು ಬೇರೆ ರಾಜ್ಯ, ಭಾಷೆ, ಸಂಸ್ಕೃತಿಯ ವಿದ್ಯಾರ್ಥಿಗಳೊಂದಿಗೆ ಬದುಕುವುದು ಕೂಡ ವಿಶ್ವವಿದ್ಯಾಲಯದ ಅನುಭವದ ಒಂದು ಭಾಗ. ಸ್ನೇಹ, ಭಿನ್ನಾಭಿಪ್ರಾಯ, ಹೊಂದಾಣಿಕೆ, ಸ್ವತಂತ್ರ ನಿರ್ಧಾರ.. ಇವೆಲ್ಲವೂ ತರಗತಿಯ ಹೊರಗೆ ನಡೆಯುವ ಕಲಿಕೆಯ ಭಾಗಗಳು. ಹಾಗಾಗಿ ಹಾಸ್ಟೆಲ್‌ಗಳನ್ನು ಕೇವಲ “ವಿದ್ಯಾರ್ಥಿಗಳ ವಸತಿ ಸಾಮರ್ಥ್ಯ” ಎಂದು ಲೆಕ್ಕ ಹಾಕುವುದಕ್ಕಿಂತ, ವಿಶ್ವವಿದ್ಯಾಲಯದ ಸಾಮಾಜಿಕ ಮೂಲಸೌಕರ್ಯದ ಭಾಗವಾಗಿ ನೋಡುವ ಅಗತ್ಯವಿದೆ.

ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಸ್ಟೆಲ್‌ ಪಡೆಯಲಾಗದ ಸ್ಥಿತಿ ಎದುರಾದಾಗ ಅವರನ್ನು ಖಾಸಗಿ ವಸತಿಯತ್ತ ತಳ್ಳುವ ವ್ಯವಸ್ಥೆಯ ಹೊಣೆ ಯಾರದ್ದು? ಈ ಪ್ರಶ್ನೆಗೆ ವಿಶ್ವವಿದ್ಯಾಲಯ, ಸ್ಥಳೀಯ ಆಡಳಿತ, ಕಟ್ಟಡ ನಿಯಂತ್ರಣ ಸಂಸ್ಥೆಗಳು, ಖಾಸಗಿ ವಸತಿ ನಿರ್ವಾಹಕರು.. ಪ್ರತಿಯೊಬ್ಬರೂ ಹೊಣೆಗಾರಿಕೆ ಹೊರಬೇಕು. ಶಿಕ್ಷಣದ ಗುಣಮಟ್ಟವನ್ನು ಅಳೆಯುವಾಗ ತರಗತಿಯ ಗಾತ್ರ, ಶಿಕ್ಷಕರ ಸಂಖ್ಯೆ, ಫಲಿತಾಂಶ ಮತ್ತು ಮೂಲಸೌಕರ್ಯದ ಜೊತೆಗೆ “ಈ ವಿದ್ಯಾರ್ಥಿ ಓದುತ್ತಿರುವ ನಗರದಲ್ಲಿ ಸುರಕ್ಷಿತವಾಗಿ ಬದುಕಲು ಅವನಿಗೆ ಜಾಗವಿದೆಯೇ?” ಎಂಬುದಕ್ಕೆ ಉತ್ತರ ಸಿಕ್ಕಾಗ ಮಾತ್ರ ಶಿಕ್ಷಣದ ವ್ಯವಸ್ಥೆ ಸಂಪೂರ್ಣವಾಗುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2026–27ನೇ ಸಾಲಿನ ಧನಶ್ರೀ,...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ...

ಲಗ್ಗೆರೆ | ಜೆಡಿಎಸ್ ನಾಯಕ ಅಂದಾನಪ್ಪ ನಿವಾಸದಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಬೆಂಗಳೂರಿನ ಲಗ್ಗೆರೆ ನಿವಾಸದಲ್ಲಿ ವಾಚ್‌ಮ್ಯಾನ್ ಆಗಿ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97...