ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ (ಡಿ-ನೋವೊ) ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರು, ಸದಸ್ಯರ ಆಯ್ಕೆ ಇದೀಗ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದ ಈ ಸೂಕ್ಷ್ಮ ಪ್ರಕರಣದ ತನಿಖೆ ನಡೆಸಲಿರುವ ಅಧಿಕಾರಿಗಳ ಹಿಂದಿನ ಸೇವಾ ದಾಖಲೆಗಳು, ಅವರ ಮೇಲಿರುವ ಆರೋಪಗಳು ಹಾಗೂ ವಿಶ್ವಾಸಾರ್ಹತೆಯ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ, ದಿನೇಶ್ ಕುಮಾರ್, ಕೊಂದವರು ಯಾರು ಸಂಘಟನೆಯ ಸದಸ್ಯರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್ ಶಶಿಕುಮಾರ್ ಹಿಂದೆ ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಥಳೀಯವಾಗಿ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿರುವ ಕಾರಣ ಪ್ರಭಾವಿಗಳ ಸಂಪರ್ಕ ಇದ್ದೇ ಇರುತ್ತದೆ. ಅವರಿಂದ ಈ ಕ್ಲಿಷ್ಟ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿವಾದದ ಕೇಂದ್ರಬಿಂದುವಾಗಿರುವುದು ಬಹುಕೋಟಿ ರೂಪಾಯಿಗಳ ಆಂಬಿಡೆಂಟ್ ವಂಚನೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಎಸ್‌ಐಟಿಗೆ ನೇಮಕ ಮಾಡಿರುವುದು. ಅತ್ಯಂತ ಪಾರದರ್ಶಕವಾಗಿ ನಡೆಯಬೇಕಿದ್ದ ತನಿಖಾ ತಂಡದ ರಚನೆಯಲ್ಲಿ ವಿವಾದಿತ ಹಿನ್ನೆಲೆಯುಳ್ಳ ಅಧಿಕಾರಿಯನ್ನು ಸೇರ್ಪಡೆಗೊಳಿಸಿರುವುದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.
ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ಉದ್ಯಮಿ ಆರ್. ವಿಜಯ್ ತಾತ ಅವರು ಗಂಭೀರ ಆರೋಪಗಳನ್ನು ಮಾಡಿದ್ದ ಹಿನ್ನೆಲೆ ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ವಿಜಯ್ ತಾತ ಅವರು 2018ರ ನವೆಂಬರ್ 21ರಂದು ಅಂದಿನ ಡಿಜಿ-ಐಜಿಪಿ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು ಎಂಬ ಅಂಶವನ್ನು ಮಾಧ್ಯಮಗಳು ವರದಿ ಮಾಡಿದ್ದವು.
This video cannot be played in your browser. Open the video directly
ಇದೇ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ತಾತ ಅವರು 2018ರ ಡಿಸೆಂಬರ್ 18ರಂದು ನೀಡಿದ್ದ ಖಾಸಗಿ ದೂರಿನ ವಿವರಗಳು ಕರ್ನಾಟಕ ಹೈಕೋರ್ಟ್‌ನ 2021ರ ನವೆಂಬರ್ 18ರ ತೀರ್ಪಿನಲ್ಲೂ (ಆರ್. ವಿಜಯ್ ತಾತ ವಿರುದ್ಧ ಸ್ಟೇಟ್ ಆಫ್ ಕರ್ನಾಟಕ) ಅಧಿಕೃತವಾಗಿ ದಾಖಲಾಗಿವೆ. ಅಷ್ಟೇ ಅಲ್ಲದೆ, ಆಂಬಿಡೆಂಟ್ ಪ್ರಕರಣದಲ್ಲಿ ವಿಜಯ್ ತಾತ ಅವರನ್ನು ಬಂಧಿಸಲು ಮುಂದಾಗಿದ್ದ ವೆಂಕಟೇಶ್ ಪ್ರಸನ್ನ ಅವರನ್ನು ಆ ತನಿಖೆಯಿಂದಲೇ ಬದಲಾಯಿಸಿ ಸಿಸಿಬಿಯಿಂದ ಸಿಸಿಆರ್‌ಬಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದು ಅಂದಿನ ವರದಿಗಳಿಂದ ಸ್ಪಷ್ಟವಾಗುತ್ತದೆ.
ಸೌಜನ್ಯ ಪ್ರಕರಣದ ಈ ಹಿಂದಿನ ತನಿಖೆಗಳ ಬಗ್ಗೆ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಶಬ್ದಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ತನಿಖಾಧಿಕಾರಿಗಳ ಕರ್ತವ್ಯಲೋಪದಿಂದಾಗಿ ಅವರಿಗೇ ‘ಪ್ರೀಮಿಯಂ’ (ಲಾಭ) ಸಿಕ್ಕಂತಾಗಿದೆ ಎಂದು ಹೇಳಿದ್ದ ನ್ಯಾಯಾಲಯ, ನೈಜ ಆರೋಪಿಗಳು ತನಿಖೆಯ ಹಾದಿ ತಪ್ಪಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಕಾರಣಕ್ಕಾಗಿಯೇ ಹಳೆಯ ತನಿಖೆಯನ್ನು ಬದಿಗಿಟ್ಟು ಹೊಸ ತನಿಖೆಗೆ ಆದೇಶಿಸಿತ್ತು.
ತನ್ನ ತೀರ್ಪಿನ 60ನೇ ಪ್ಯಾರಾದಲ್ಲಿ ನ್ಯಾಯಾಲಯವು ಮತ್ತೊಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದು, ಸುಳ್ಳು ಆರೋಪಕ್ಕೆ ಒಳಗಾದ ವ್ಯಕ್ತಿಗೆ ಆದ ಅನ್ಯಾಯವನ್ನು ಸರಿಪಡಿಸಬಹುದು; ಆದರೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸಂತ್ರಸ್ತೆಗೆ ತನಿಖಾ ವೈಫಲ್ಯದಿಂದಾಗುವ ಅನ್ಯಾಯವನ್ನು ಪರಿಹರಿಸಲು ಅಸಾಧ್ಯ ಎಂದು ಮಾರ್ಮಿಕವಾಗಿ ನುಡಿದಿದೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸದಿದ್ದರೆ ಸಮಾಜವೇ ವಿಫಲವಾದಂತೆ ಎಂದು ಎಚ್ಚರಿಸಿರುವಾಗ, ಹೊಸ ತನಿಖಾ ತಂಡದ ಆಯ್ಕೆ ಅತ್ಯಂತ ಕಟ್ಟುನಿಟ್ಟಿನ ಮಾನದಂಡಗಳಡಿ ನಡೆಯಬೇಕಿತ್ತು ಎಂಬುದು ಸಾರ್ವಜನಿಕರ ಹಕ್ಕೊತ್ತಾಯವಾಗಿದೆ.
ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಈ ಎಸ್‌ಐಟಿಯ ಮುಖ್ಯಸ್ಥರಾಗಬಾರದು ಹಾಗೂ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿದ ಐಪಿಎಸ್ ಅಧಿಕಾರಿಗಳಿಗೆ ಇದರ ನೇತೃತ್ವ ನೀಡಬಾರದು ಎಂದು ಕೆಲವರು ಪ್ರತಿಪಾದಿಸಿದ್ದಾರೆ.
“ರಾಜ್ಯದೊಳಗಿನ ಯಾರನ್ನೂ ನಂಬಲಾಗದಂತಹ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಹೊರ ರಾಜ್ಯದ ಅಧಿಕಾರಿಗಳಿರಬೇಕು ಎಂಬ ನಿಯಮವಿದೆ. ಅಲ್ಲದೆ, ಎನ್ ಶಶಿಕುಮಾರ್ ಅವರು ಪ್ರಭಾವಿಗಳೊಂದಿಗಿನ ಒಡನಾಟವನ್ನು ಬಿಂಬಿಸುವ ಚಿತ್ರಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇಂತಹ ಹಿತಾಸಕ್ತಿ ಸಂಘರ್ಷದ ಅನುಮಾನಗಳಿರುವ ಅಧಿಕಾರಿಗಳು ಎಸ್‌ಐಟಿಯಲ್ಲಿ ಇರಬಾರದು ಎಂಬ ಆಗ್ರಹ ವ್ಯಕ್ತವಾಗಿದೆ. ಈ ಎಲ್ಲಾ ವಿವಾದಿತ ಅಂಶಗಳನ್ನು ನಿರ್ಲಕ್ಷಿಸಿ ತನಿಖೆ ಮುಂದುವರಿಸಿದರೆ, ಇದು ಮೊದಲೇ ನಿರ್ಧರಿತವಾದ ತನಿಖೆಯ ಕಥೆಯಾಗಲಷ್ಟೇ (Chronicle of an Investigation Foretold) ಸೀಮಿತವಾಗಲಿದೆ” ಎಂಬ ಆತಂಕ ದಟ್ಟವಾಗಿದೆ.





