“ಕೇಂದ್ರ ಸರ್ಕಾರವು ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಂತೆ, ರೈತರ ಸಾಲವನ್ನೂ ಮನ್ನಾ ಮಾಡಲಿ. ಅದರಲ್ಲಿ ರಾಜ್ಯದ ಪಾಲನ್ನು ಭರಿಸಲು ನಾವು ಸಿದ್ಧರಿದ್ದೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಬರಗಾಲದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಇದಕ್ಕೂ ಮುನ್ನ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಮಠದ ಕಾರ್ಯಕ್ರಮ ಹಾಗೂ ರೈತರ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಸರ್ಕಾರದ ನಿಲುವುಗಳನ್ನು ಸ್ಪಷ್ಟಪಡಿಸಿದರು.
ರೈತರ ಸಾಲ ಮನ್ನಾ: ಕೇಂದ್ರಕ್ಕೆ ಸಿಎಂ ಸವಾಲು ಮತ್ತು ಆಹ್ವಾನ
ವಿಧಾನಮಂಡಲದ ಉಭಯ ಸದನಗಳಲ್ಲಿ ಮಾತನಾಡಿದ ಸಿಎಂ, ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನೇರ ಸವಾಲು ಹಾಕಿದರು. “ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡಲು ಮುಂದಾದರೆ, ಬೇಕಿದ್ದರೆ ಸರ್ಕಾರದ ಉಳಿದೆಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಿ ರೈತರಿಗಾಗಿ ರಾಜ್ಯದ ಪಾಲಿನ ಹಣವನ್ನು ನೀಡುತ್ತೇನೆ. 50:50, 60:40, 70:30 ಹೀಗೆ ಯಾವುದೇ ಸೂತ್ರಕ್ಕಾದರೂ ನಾವು ಸಿದ್ಧ. ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಲು ಸರ್ವಪಕ್ಷ ನಿಯೋಗ ಕೊಂಡೊಯ್ಯೋಣ. ನನ್ನ ಜೊತೆ ಬರುವುದಾಗಿ ಹೇಳಿದ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಅಭಿನಂದನೆಗಳು. ತಕ್ಷಣವೇ ಪ್ರಧಾನಿಗೆ ಪತ್ರ ಬರೆದು ಸಮಯ ಕೇಳುತ್ತೇನೆ” ಎಂದು ಸ್ಪಷ್ಟಪಡಿಸಿದರು.
”ಕಳೆದ ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ 3 ಸಾವಿರ ಕೋಟಿ ರೂ. ಪರಿಹಾರ ತಂದೆವು. ಆಗ ರಾಜ್ಯದ ಒಬ್ಬನೇ ಒಬ್ಬ ಸಂಸದ ಪ್ರಧಾನಿ ಮುಂದೆ ಬಾಯಿ ಬಿಡಲಿಲ್ಲ. ಅಭಿವೃದ್ಧಿಗೂ, ಮತಕ್ಕೂ ವ್ಯತ್ಯಾಸವಿದೆ. ನಮಗೆ ಮತ ಹಾಕದವರಿಗೂ (ಉಡುಪಿ, ಮಂಗಳೂರು) ನಾವು ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತಿದ್ದೇವೆ. ಅಸ್ಸಾಂ ಸರ್ಕಾರದಂತೆ ನಮಗೆ ಮತ ಹಾಕಿದವರಿಗೆ ಮಾತ್ರ ಯೋಜನೆ ಎಂಬ ತಾರತಮ್ಯ ನಮ್ಮಲ್ಲಿಲ್ಲ” ಎಂದು ತಿರುಗೇಟು ನೀಡಿದರು.
ಆರ್ಥಿಕ ಶಿಸ್ತು ಮತ್ತು ವಿದ್ಯುತ್ ಖರೀದಿ ಸಂಕಷ್ಟ
“ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 16 ಸಾವಿರ ಕೋಟಿ ರೂ. ಅನುದಾನ ಇಟ್ಟುಕೊಂಡು 1.25 ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ನೀಡಲಾಗಿತ್ತು. ಆದರೂ ನಾನು ಅವರ ಇತಿಹಾಸ ಕೆದಕಲು ಹೋಗುವುದಿಲ್ಲ. ಸದ್ಯ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಶೇ.10ರಷ್ಟು ಹೆಚ್ಚಾಗುತ್ತಿದ್ದು, ಅನಿವಾರ್ಯವಾಗಿ ಪ್ರತಿ ಯೂನಿಟ್‌ಗೆ 22 ರೂ. ಕೊಟ್ಟು ವಿದ್ಯುತ್ ಖರೀದಿಸುವ ಸಂಕಷ್ಟಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸಿಲುಕಿದ್ದಾರೆ. ಬೆಂಗಳೂರಿನಿಂದ ಕೇಂದ್ರಕ್ಕೆ ಅತಿ ಹೆಚ್ಚು ಜಿಎಸ್‌ಟಿ ಹೋಗುತ್ತಿದೆ. ಆದರೆ ಆ ಪ್ರಮಾಣದಲ್ಲಿ ರಾಜ್ಯಕ್ಕೆ ವಾಪಸ್ ಬರುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. (ಶಾಸಕ ಸುನೀಲ್ ಕುಮಾರ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ‘ನಾನು ಅದಾನಿ ಹುಡುಕಿಕೊಂಡು ಹೋಗಿಲ್ಲ, ನಿಮ್ಮ ಕಾಲದಲ್ಲೂ ಅದಾನಿ ಕೆಲಸ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು).
ತುಂಗಭದ್ರಾ ಸಮಾನಾಂತರ ಜಲಾಶಯ: ರಿಯಲ್ ಎಸ್ಟೇಟ್ ಅಲ್ಲ
“ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದೆ. ಇದನ್ನು ಸದ್ಬಳಕೆ ಮಾಡಲು ಆಂಧ್ರ ಮತ್ತು ತೆಲಂಗಾಣ ಸಿಎಂ ಜೊತೆ ಮಾತನಾಡಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒಮ್ಮತದ ನಿರ್ಧಾರ ಕೈಗೊಂಡಿದ್ದೇನೆ. ಇದು ರೈತರ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವೇ ಹೊರತು, ಇದರಲ್ಲಿ ನನ್ನ ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ” ಎಂದು ಸಿಎಂ ಗುಡುಗಿದರು.
ಭದ್ರಾ ಯೋಜನೆಗೆ ಕೇಂದ್ರದಿಂದ ನಯಾಪೈಸೆ ಬಂದಿಲ್ಲ
ಚಿತ್ರದುರ್ಗದಲ್ಲಿ ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,400 ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರು ಕೇಂದ್ರದಿಂದ ಒಂದು ರೂಪಾಯಿಯನ್ನೂ ತರಲಿಲ್ಲ. ಇವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ” ಎಂದು ವಾಗ್ದಾಳಿ ನಡೆಸಿದರು.
”ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಜೊತೆಗೆ ರೈತರಿಗೆ ‘ಭೂಮಿ ಮತ್ತು ನೀರಿನ ಗ್ಯಾರಂಟಿ’ ನೀಡುತ್ತಿದೆ. 2028ರ ಒಳಗೆ ಬಯಲುಸೀಮೆಗೆ ಭದ್ರಾ ನೀರು ಹರಿಸುವುದು ನಮ್ಮ ಗುರಿ. ದಿವಂಗತ ಡಿ. ಸುಧಾಕರ್ ಅವರ ಸ್ಮರಣಾರ್ಥ ಭದ್ರಾ ಯೋಜನೆಯ ಒಂದು ಭಾಗಕ್ಕೆ ಅವರ ಹೆಸರಿಡುವ ಬೇಡಿಕೆ ಇದೆ. ಜೊತೆಗೆ ರೈತರಿಗಾಗಿ ‘ತೇಗದ ಸಿರಿ’, ‘ಉಚಿತ ಉಳುಮೆ’ ಹಾಗೂ ‘ರೈತ ಚೈತನ್ಯ’ ಯೋಜನೆಗಳನ್ನು ತರಲಾಗಿದೆ. ಪಂಪ್‌ಸೆಟ್‌ಗಳ ಉಚಿತ ವಿದ್ಯುತ್‌ಗೆ ಸರ್ಕಾರ 24 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ” ಎಂದು ವಿವರಿಸಿದರು.
ಕಸ್ತೂರಿ ರಂಗನ್ ವರದಿ ಒಪ್ಪುವುದಿಲ್ಲ
“ಮಲೆನಾಡು ಮತ್ತು ಕರಾವಳಿ ಭಾಗದ ರೈತರನ್ನು ಒಕ್ಕಲೆಬ್ಬಿಸುವ ‘ಕಸ್ತೂರಿ ರಂಗನ್ ವರದಿ’ಯನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ. ಕಾಡು ಉಳಿಯಬೇಕು, ಜೊತೆಗೆ ತಲತಲಾಂತರದಿಂದ ಅಲ್ಲಿ ಬದುಕುತ್ತಿರುವ ರೈತರೂ ಉಳಿಯಬೇಕು. ಇದು ಸರ್ಕಾರದ ಐತಿಹಾಸಿಕ ನಿರ್ಧಾರ” ಎಂದು ಸಿಎಂ ಸ್ಪಷ್ಟಪಡಿಸಿದರು. ಜೊತೆಗೆ ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗೆ 90:10 (ಕೇಂದ್ರ:ರಾಜ್ಯ) ಅನುಪಾತದಲ್ಲಿ ಡಿಪಿಆರ್ ತಯಾರಿಸಲು ಒಪ್ಪಿಗೆ ನೀಡಿರುವುದಾಗಿ ತಿಳಿಸಿದರು.
ತರಳಬಾಳು ಮಠದ ಜಾತ್ಯತೀತ ತತ್ವಕ್ಕೆ ನಮನ
ಸಿರಿಗೆರೆಯ ಬೃಹನ್ಮಠದಲ್ಲಿ ನಡೆದ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಸಿಎಂ, “ಮನುಕುಲಕ್ಕೆ ಬೆಳಕು, ನ್ಯಾಯ ಮತ್ತು ನೀರು ಅತ್ಯಗತ್ಯ ಎಂಬ ಅದ್ಭುತ ಸಂದೇಶವನ್ನು ತರಳಬಾಳು ಮಠ ಸಾರಿದೆ. ಇಸ್ಲಾಂನಿಂದ ಸಮಾನತೆ, ಕ್ರೈಸ್ತ ಧರ್ಮದಿಂದ ಶಿಸ್ತು ಕಲಿಯಬೇಕು. ಅಂತಿಮವಾಗಿ ಮಾನವೀಯತೆಯೇ ಎಲ್ಲ ಧರ್ಮಗಳ ಸಾರ. ನ್ಯಾಯಾಲಯಗಳಿಲ್ಲದ ಕಾಲದಲ್ಲಿ ಧರ್ಮಪೀಠಗಳೇ ನ್ಯಾಯಾಲಯಗಳಾಗಿದ್ದವು. ಜ್ಞಾನ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ತರಳಬಾಳು ಮಠದ ಸೇವೆ ಅನನ್ಯ” ಎಂದು ಬಣ್ಣಿಸಿದರು.
ಗವಿಸಿದ್ದೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ
ಈ ವರ್ಷದ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ಆಹ್ವಾನ ಪತ್ರ ಕಳುಹಿಸಲಾಗಿದ್ದು, ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿಧಾನಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದರು. ಅಲ್ಲದೆ, ನಾಡಹಬ್ಬದಲ್ಲಿ ಪಾಲ್ಗೊಳ್ಳುವಂತೆ ಉಭಯ ಸದನಗಳ ಎಲ್ಲ ಸದಸ್ಯರಿಗೂ ಅವರು ಆಹ್ವಾನ ನೀಡಿದರು.




