ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಿದಾಗ ಅದನ್ನು ಸಮಾಜದ ಗಮನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಸಮಾನತೆ ಕೇವಲ ಮಾತು ಮತ್ತು ಘೋಷಣೆಗೆ ಸೀಮಿತವಾಗದೆ, ಬದುಕಿನಲ್ಲಿ ಪಾಲಿಸುವ ಮೌಲ್ಯವಾಗಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಅವಳ ಹೆಜ್ಜೆ ಕಿರುಚಿತ್ರ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗ ಸಂವೇದನೆ ಮತ್ತು ಮಹಿಳಾ ಸಬಲೀಕರಣದ ವಿಚಾರಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಮಹಿಳೆಯರನ್ನು ಪುರುಷರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಉನ್ನತ ಶಿಕ್ಷಣದ ಮೂಲಕ ಗಳಿಸಿದ ಜ್ಞಾನವನ್ನು ಕೇವಲ ತಲೆಯಲ್ಲಿಟ್ಟುಕೊಳ್ಳದೆ, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ನಿಲುವುಗಳನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದರು.
ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಕಿರುಚಿತ್ರಗಳು ಸಮಾಜದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ವೇದಿಕೆ ಕಲ್ಪಿಸುತ್ತವೆ. ಇಂತಹ ಚಿತ್ರಗಳ ಮೂಲಕ ಸಮಸ್ಯೆಗಳನ್ನು ಪ್ರಶ್ನಿಸುವುದರ ಜತೆಗೆ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆಯಬೇಕು ಎಂದು ಹೇಳಿದರು.
ಮಂಡ್ಯದ ಗುಬ್ಬಿವಾಣಿ ಟ್ರಸ್ಟ್‌ನ ‘ಅವಳ ಹೆಜ್ಜೆ’ ಕಾರ್ಯಕ್ರಮದ ನಿರ್ದೇಶಕಿ ಶಾಂತಲಾ ದಾಮ್ಲೆ ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗುವುದಾಗಿದೆ ಎಂದರು.
This video cannot be played in your browser. Open the video directly
ಮಹಿಳೆಯರು ತಮ್ಮ ಅನುಭವ, ನೋವು, ಹೋರಾಟ ಹಾಗೂ ವಿಚಾರಗಳನ್ನು ತಾವೇ ಹೇಳಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಬೇಕು. ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಹೆಚ್ಚಾಗಬೇಕು. ಮಹಿಳೆಯರ ದೃಷ್ಟಿಕೋನದಿಂದ ಸಮಾಜದ ಸಮಸ್ಯೆಗಳನ್ನು ಕಟ್ಟಿಕೊಡುವ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಬೇಕು ಎಂದು ಹೇಳಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜತೆಗೆ, ತಾವು ಸಂಪಾದಿಸಿದ ಹಣವನ್ನು ತಮ್ಮ ನಿರ್ಧಾರದಂತೆ ಬಳಸುವ ಸ್ವಾತಂತ್ರ್ಯ ಹೊಂದಬೇಕು. ರಾಜಕೀಯ ಹಕ್ಕುಗಳು, ನೀತಿಗಳು ಮತ್ತು ನಿರ್ಧಾರ ಪ್ರಕ್ರಿಯೆಗಳ ಕುರಿತು ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದು ಅಗತ್ಯವಾಗಿದೆ ಎಂದರು.
ಮಾನಸಿಕ ಧೈರ್ಯದ ಜತೆಗೆ ದೈಹಿಕ ಆರೋಗ್ಯ ಮತ್ತು ಶಕ್ತಿಗೂ ಮಹಿಳೆಯರು ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಇಂದಿನ ಸಮಸ್ಯೆಗಳನ್ನು ಎದುರಿಸುವಂತಾಗಲು ಮಹಿಳೆಯರು ಸಕ್ರಿಯವಾಗಿ ಸಬಲರಾಗಬೇಕು ಎಂದು ಶಾಂತಲಾ ದಾಮ್ಲೆ ಹೇಳಿದರು.
ಕಾರ್ಯಕ್ರಮದಲ್ಲಿ ಗುಬ್ಬಿವಾಣಿ ಟ್ರಸ್ಟ್‌ನ ಔಟ್ರೀಚ್ ಸಂಯೋಜಕಿ ಉಷಾ ಸಂಪತ್ ಕುಮಾರ್, ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ. ಡಿ.ಎಂ. ಮದರಿ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ್ ಕಾಕಡೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ವೈ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯಶ್ರೀ ದೊಡಮನಿ ಹಾಗೂ ಡಾ. ಸರೋಜಾ ಸಂತಿ ಅತಿಥಿಗಳನ್ನು ಪರಿಚಯಿಸಿದರು. ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





