ಹನೂರು ಗ್ರೌಂಡ್ ರಿಪೋರ್ಟ್: ‘ಇದು ಕೌಂಟರ್ ಅಟ್ಯಾಕ್ ಅಲ್ಲ, ಎನ್‌ಕೌಂಟರ್?’

Date:

ಈದಿನ ತಂಡ ಹನೂರಿನ ಹಳ್ಳಿಗಳಲ್ಲಿ ಸುತ್ತಾಡಿ, ಅಲ್ಲಿಯ ಜನರನ್ನು ಮಾತನಾಡಿಸಿ, ಗ್ರೌಂಡ್ ರಿಪೋರ್ಟ್ ಅನ್ನು ನಿಮ್ಮ ಮುಂದೆ ಇಟ್ಟಿದೆ. ನೊಂದವರು ಹೇಳುವುದೊಂದೆ: 'ಆತ್ಮರಕ್ಷಣೆ' ಎಂಬುದು ಎನ್‌ಕೌಂಟರ್‍‌ನಿಂದ ತಪ್ಪಿಸಿಕೊಳ್ಳಲು ಅಸ್ತ್ರವಾಗುತ್ತಿದೆಯೇ? ಅಥವಾ ಅರಣ್ಯ ಇಲಾಖೆಯು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆಯೇ? -ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯೇ ಉತ್ತರಿಸಬೇಕು.

”ನನ್ನ ತಮ್ಮನ ಶವವನ್ನು ಮೈಸೂರಿಗೆ ಕೊಂಡೊಯ್ದಿದ್ದರು. ನನ್ನ ತಮ್ಮನ ಕುತ್ತಿಗೆ ಭಾಗದಲ್ಲಿ ಆಳವಾದ ಗುರುತು ಇತ್ತು. ಕುತ್ತಿಗೆಯ ಮೇಲ್ಭಾಗದಿಂದ ಬಂದೂಕು ಇಟ್ಟು ದೇಹಕ್ಕೆ ಗುಂಡು ತೂರಿಸಲಾಗಿದೆ ಎಂದು ಭಾಸವಾಗುತ್ತಿತ್ತು. ಎದುರಿನಿಂದ ಹೊಡೆದಿದ್ದರೆ ಬಹುಶಃ ದೇಹವನ್ನು ಸೀಳಿಕೊಂಡು ಹೊರಗೆ ಬರುತ್ತಿತ್ತು ಅನಿಸುತ್ತದೆ. ಆದರೆ ಗುಂಡು ಹೊಡೆದಿರುವ ರೀತಿಯನ್ನು ನೋಡಿದರೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾರೆಂದು ಅನಿಸುವುದಿಲ್ಲ. ಮಲಗಿದ್ದ ವೇಳೆ ಶೂಟ್ ಮಾಡಿರುವಂತೆ ಕಾಣುತ್ತದೆ” ಎನ್ನುತ್ತಾರೆ ಜಾನ್ ರೋಸ್‌ ಪೀಟರ್ ಸಹೋದರಿ ಮಾರ್ಗರೆಟ್.

- Advertisement -

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮರಿಯಮಂಗಲ, ಜಗನ್ನಾಥ ದೊಡ್ಡಿ, ಲಾಸರ್ ದೊಡ್ಡಿ ಗ್ರಾಮದ ಮೂವರನ್ನು ಶೂಟೌಟ್ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಜೀವ ತೆಗೆದಿರುವುದಂತೂ ದಿಟ. ಸಾವಿಗೀಡಾದವರೆಲ್ಲರೂ ಸಂಬಂಧಿಕರಾಗಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ವಾಸಿಸುತ್ತಿದ್ದರು‌. ಮರಿಯಮಂಗಲದ ಆಂಟೋನಿ ಸ್ವಾಮಿ (50), ಜಗನ್ನಾಥದೊಡ್ಡಿಯ ಜಾನ್‌ ರೋಸ್ ಪೀಟರ್ (43), ಲಾಸರ್ ದೊಡ್ಡಿಯ ಸಬಾಸ್ಟಿಯನ್ ಡೇವಿಡ್ ಕುಮಾರ್ (35) ಮೃತರು. ಇಲಾಖೆಯ ದಾಳಿ ಸಂದರ್ಭದಲ್ಲಿ ತಪ್ಪಿಸಿಕೊಂಡ ಮಹಿಮಾ ದಾಸ್ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆಂಬ ಮಾಹಿತಿ ಆಧಾರದಲ್ಲಿ ಆಂಟೋನಿಯವರ ಪತ್ನಿ ಲೂರ್ದ್ ಮೇರಿಯವರು ನೀಡಿದ ದೂರಿನ ಅನ್ವಯ ಅರಣ್ಯ ಇಲಾಖೆಯ ಮೇಲೆ ಪ್ರಕರಣವೂ ಆಗಿದೆ. ಇತ್ತ ಸರ್ಕಾರವು ಇದು ಆತ್ಮರಕ್ಷಣೆಗಾಗಿ ನಡೆದ ಪ್ರತಿದಾಳಿ ಎಂದು ಹೇಳುತ್ತಿದೆ. “ಶರಣಾಗುವಂತೆ ಕಳ್ಳಬೇಟೆಗಾರರಲ್ಲಿ ಕೋರಿಕೊಂಡರೂ ನಾಡಬಂದೂಕಿನಿಂದ ದಾಳಿ ನಡೆಸಿದರು. ಆಗ ಅರಣ್ಯ ಇಲಾಖೆ ಕೌಂಟರ್ ಅಟ್ಯಾಕ್ ಮಾಡಬೇಕಾಯಿತು” ಎಂದು ಇಲಾಖೆ ಸಮಜಾಯಿಷಿ ನೀಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಆದರೆ ಮೂವರ ಜೀವ ತೆಗೆಯುವ ಮಟ್ಟಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಹೇಗೆ? ಸರ್ಕಾರ ಕೊಡುತ್ತಿರುವ ಕಾರಣಗಳು ನಂಬಲಾರ್ಹವೇ? ಕಳ್ಳಬೇಟೆಯ ಕಾರಣಕ್ಕೆ ಜೀವಗಳನ್ನೇ ತೆಗೆಯಬಹುದೇ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.

“ಸರ್ಕಾರ ಪ್ರಕರಣವನ್ನು ತಿರುಚಲು ಯತ್ನಿಸುತ್ತಿದೆ” ಎಂಬ ಆರೋಪವನ್ನು ಮೃತರ ಸಂಬಂಧಿಗಳು ಮತ್ತು ಗ್ರಾಮಸ್ಥರು ಮಾಡುತ್ತಾರೆ. ಗುಂಡಿನ ಸದ್ದಿಗೆ ತತ್ತರಿಸಿರುವ ಈ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ‘ಈದಿನ ಡಾಟ್ ಕಾಮ್’ ಮುಂದೆ ಸಂತ್ರಸ್ತರು ಹೇಳಿಕೊಂಡಿರುವ ವಿಚಾರಗಳನ್ನು ನಿಮ್ಮ ಮುಂದೆ ಯಥಾವತ್ ಇಡಲಾಗುತ್ತಿದೆ.

”ಸತ್ತವರನ್ನು ಕಳ್ಳಬೇಟೆಗಾರರು ಎಂದು ಬಿಂಬಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಇದು ಬೇಕಂತಲೇ ಮಾಡಿರುವ ಕೊಲೆ. ಅರಣ್ಯ ಇಲಾಖೆ ಅಧಿಕಾರಿಗಳು ಈಗ ಕಥೆ ಕಟ್ಟುತ್ತಿದ್ದಾರೆ” ಎನ್ನುವ ಮಾರ್ಗರೆಟ್‌, ಮುಂದುವರಿದು, ”ರಕ್ಷಣೆ ಮಾಡಿಕೊಳ್ಳಲು ಶೂಟೌಟ್ ಮಾಡುತ್ತಿದ್ದಾರೆಂಬುದು ಅರಣ್ಯ ಇಲಾಖೆಯ ವಾದ. ಕಾಡಿಗೆ ಹೋಗಿದ್ದವರು ಹಲ್ಲೆ ಮಾಡಿದ್ದರೆ ಅರಣ್ಯ ಅಧಿಕಾರಿಗಳಲ್ಲಿ ಯಾರು ಗಾಯಗೊಂಡಿದ್ದಾರೆ? ಈವರೆಗೆ ಯಾವೊಬ್ಬ ಸಿಬ್ಬಂದಿಯೂ ಆಸ್ಪತ್ರೆಗೆ ದಾಖಲಾದ ಮಾಹಿತಿ ಇಲ್ಲ. ಅವರಿಗೆ ಒಂದೇ ಒಂದು ಪೆಟ್ಟು ಬಿದ್ದದ್ದು ವರದಿಯಾಗಿಲ್ಲ. ಗೋಣಿಚೀಲದಲ್ಲಿ ಮಾಂಸವಿತ್ತು ಎನ್ನುತ್ತಾರೆ. ಚಪ್ಪಲಿಗಳನ್ನು ಜಪ್ತಿ ಮಾಡಿದ್ದೇವೆ ಎನ್ನುತ್ತಾರೆ. ಸರ್ಕಾರಿ ಅಧಿಕಾರಿಗಳು ತೋರಿಸುತ್ತಿರುವ ಚಪ್ಪಲಿಗಳ ಚಿತ್ರಗಳನ್ನು ನೋಡಿದ್ದೇವೆ. ಇವು ಸತ್ತವರಿಗೆ ಸಂಬಂಧಪಟ್ಟ ಚಪ್ಪಲಿಗಳಲ್ಲ. ಡೆಡ್ ಬಾಡಿ ಜೊತೆಯಲ್ಲಿ ಸ್ಥಳದಲ್ಲಿಯೇ ಫೋಟೋ ತೆಗೆದುಕೊಂಡಿರುವ ಪುರಾವೆಯನ್ನು ತೋರಿಸುತ್ತಿಲ್ಲ. ಇವರಿಗೆ ಅಧಿಕಾರವಿದೆ ಎಂದು ಏನು ಬೇಕಾದರೂ ಮಾಡಬಹುದೇ? ಗುಂಡು ಹಾರಿಸಿದಾಗ ಜೀವ ಇತ್ತು, ಹೀಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದೆವು ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಳ್ಳೇಗಾಲಕ್ಕೆ ಬಾಡಿಗಳನ್ನು ತಂದಿದ್ದಾರೆ. ಅಲ್ಲಿಂದ ಮೈಸೂರಿಗೆ ರವಾನಿಸಿದ್ದಾರೆ. ಬಂದೂಕು ಬಳಸಿದ ಅಧಿಕಾರಿ ಯಾರೆಂದು ಹೇಳುತ್ತಿಲ್ಲ. ಕೊಂದವರ ಹೆಸರುಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಲಿ” ಎಂಬುದು ಪೀಟರ್ ಸಹೋದರಿಯ ಆಗ್ರಹ.

ಇಲಾಖೆಯವರೇ ಪ್ರಾಣಿವಧೆ ಮಾಡಿರಬಹುದಲ್ಲವೇ?

ಗ್ರಾಮದ ಮುಖಂಡ ಸೆಲ್ವಂ ಅವರು ಮಾರ್ಗರೇಟ್ ಅವರ ವಾದವನ್ನೇ ಮುಂದಿಡುತ್ತಾ ಮತ್ತಷ್ಟು ಸಾಧ್ಯತೆಗಳನ್ನು ಊಹಿಸುತ್ತಾರೆ. ”ಕಾಡಿನಲ್ಲಿ ಮಾಂಸವನ್ನು ಹೊತ್ತು ತರುತ್ತಿದ್ದರು ಎಂದು ಅಧಿಕಾರಿಗಳು ಹೇಳುತ್ತಾರಲ್ಲ, ಕಾಡಿನೊಳಗಿದ್ದ ಆ ಏಳು ಜನ ಫಾರೆಸ್ಟ್‌ ಅಧಿಕಾರಿ-ಸಿಬ್ಬಂದಿಯೇ ಜಿಂಕೆಯನ್ನು ಕಡಿದಿರಬಹುದಲ್ಲವೇ? ನಾವು ಹೀಗೆ ಆರೋಪ ಮಾಡುತ್ತೇವೆ. ಜಿಂಕೆ ಮಾಂಸದ ಬಿಸಿನೆಸ್ ಅರಣ್ಯ ಇಲಾಖೆಯವರು ಮಾಡುತ್ತಿದ್ದರೆಂದು ಭಾವಿಸಬಹುದಲ್ಲವೇ? ಅಧಿಕಾರಿಗಳು ಜಿಂಕೆಯನ್ನು ಕಡಿದಿರುವ ಸಂದರ್ಭದಲ್ಲಿ ಈ ಮೂವರು ಹೋಗಿರಬಹುದು ಎಂದು ದೂರಬಹುದಲ್ಲವೇ? ಇದಕ್ಕೆ ಸಾಕ್ಷಿ ಇದೆಯೇ?” ಎಂದು ಪ್ರಶ್ನಿಸುತ್ತಾರೆ.

”ಸ್ವರಕ್ಷಣೆಯ ನೆಪವೊಡ್ಡಿ ಗುಂಡು ಹಾರಿಸಿ ಸಾಯಿಸುತ್ತಾರೆ. ಕಾಡಂಚಿನ ರೈತರು ತಮ್ಮ ದನಕರುಗಳನ್ನು ಕಾಡಿಗೆ ಬಿಟ್ಟು ಸಂಜೆ ವಾಪಸ್ ಕರೆತರುತ್ತಾರೆ. ಕಾಡಿಗೆ ಬಿಟ್ಟ ಕೆಲವು ದನಕರುಗಳು ವಾಪಸ್ ಬರುವುದಿಲ್ಲ. ಅವುಗಳನ್ನು ಹುಡುಕಿ ಹೋದವರು ರಾತ್ರಿ ಕಾಡಲ್ಲೇ ಉಳಿದುಕೊಳ್ಳುವುದು ಸಾಮಾನ್ಯವಾಗಿದೆ. ಬೇರೆ ಕಡೆಯಿಂದ ಹುಲಿ, ಚಿರತೆಗಳನ್ನು ಹಿಡಿದು ತಂದು ಇಲ್ಲಿಯೇ ಬಿಡುವಾಗ ನಮ್ಮನ್ನೇನೂ ಅಧಿಕಾರಿಗಳು ಕೇಳುವುದಿಲ್ಲ. ಗ್ರಾಮಸಭೆಗಳನ್ನು ಮಾಡುವುದಿಲ್ಲ. ಪಂಚಾಯಿತಿಗೂ ಮಾಹಿತಿ ನೀಡುವುದಿಲ್ಲ. ಚಿರತೆ ಹಾವಳಿಯಿಂದಾಗಿ ಹಸುಗಳು ಬೇಗಬೇಗ ಕಾಣೆಯಾಗುತ್ತವೆ” ಎನ್ನುವ ಸೆಲ್ವಂ, ”ಸತ್ತವರಲ್ಲಿ ಆಂಟೋನಿ ಸ್ವಾಮಿ ಒಡಿಪಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಮಾರ್ ಜೆಸಿಬಿ ಆಪರೇಟರ್ ಆಗಿದ್ದರು. ಪೀಟರ್ ರೈತರಾಗಿದ್ದರು. ಮನೆಗಳಿಗೆ ಆಸರೆಯಾಗಿದ್ದವರನ್ನು ಇಲಾಖೆ ಕೊಂದಿದೆ. ಅನಾಥವಾಗಿರುವ ಮಕ್ಕಳ ಭವಿಷ್ಯ ನೆನೆದರೆ ಆತಂಕವಾಗುತ್ತದೆ” ಎನ್ನುತ್ತಾರೆ.

encounter1
ಪೀಟರ್ ಸಹೋದರಿ ಮಾರ್ಗರೆಟ್, ಸೆಲ್ವಂ, ಅಜಯ್ ಆಂಥೋನಿ

ಮಾಹಿತಿ ನೀಡದೆ ಶವ ರವಾನೆ

“ಎನ್‌ಕೌಂಟರ್ ಆದತಕ್ಷಣ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪೊಲೀಸರಿಗೆ ಮಾಹಿತಿ ನೀಡದೆಯೇ ಶವಗಳನ್ನು ಮೈಸೂರಿಗೆ ಸಾಗಿಸಿದ್ದಾರೆ. ಎನ್‌ಕೌಂಟರ್ ಆದತಕ್ಷಣ ಕುಟುಂಬಸ್ಥರಿಗೆ ಏಕೆ ತಿಳಿಸಿಲ್ಲ? ಚಾಮರಾಜನಗರ ಜಿಲ್ಲೆಯಿಂದ ಮೈಸೂರಿಗೆ ಶವವನ್ನು ಸಾಗಿಸಿದ್ದು ಏತಕ್ಕೆ? ಇಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಬಹುದಿತ್ತಲ್ಲವೇ? ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಮರಣೋತ್ತರ ಪರೀಕ್ಷೆಯೂ ಆಗಿಲ್ಲವೇ? ಎಲ್ಲವನ್ನೂ ಮೈಸೂರಿಗೆ ಕೊಂಡೊಯ್ಯಲಾಗುತ್ತದೆಯೇ? ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸೌಕರ್ಯಗಳಿಲ್ಲವೇ?” ಎಂದು ಕೇಳುತ್ತಾರೆ ಸ್ಥಳೀಯ ಯುವಕ ಅಜಯ್ ಆಂಥೋನಿ.

”ಅರಣ್ಯಾಧಿಕಾರಿಗಳು ಮಾಹಿತಿಯನ್ನು ತಡವಾಗಿ ಬಿಡುಗಡೆ ಮಾಡಿದ್ದು ಏತಕ್ಕೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆಂದು ನಾವು ಭಾವಿಸಬಹುದಲ್ಲವೇ? ಅಧಿಕಾರಿಗಳು ಕುಡಿದಿದ್ದಾಗ ಈ ಅಮಾಯಕರು ಸ್ಥಳಕ್ಕೆ ಹೋಗಿದ್ದರಾ? ಈ ಆಯಾಮದಲ್ಲೂ ತನಿಖೆಯಾಗಬೇಕು” ಎಂದು ಆಗ್ರಹಿಸುತ್ತಾರೆ.

”ಕಾಡಿನ ಒಳಗಡೆ ಹೋದರೆ ಹೀಗೆಲ್ಲ ಶೂಟೌಟ್ ಮಾಡಲಾಗುತ್ತದೆ, ಕಾನೂನುಗಳು ಹೀಗಿವೆ ಎಂದು ಒಂದೇ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಈವರೆಗೆ ಮಾಡಿದ್ದು ನಾನು ನೋಡಿಲ್ಲ” ಎಂದು ಜನರಲ್ಲಿ ಇರುವ ಕಾನೂನು ಅರಿವಿನ ಕೊರತೆ ಹಾಗೂ ಜಾಗೃತಿ ಮೂಡಿಸುವ ಬಗ್ಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಪೊಲೀಸ್ ಎನ್‌ಕೌಂಟರ್ ವಿರುದ್ಧ ಪ್ರಕರಣ ದಾಖಲಿಸಿರುವ ಆಂಥೋನಿ ಸ್ವಾಮಿ ಪತ್ನಿ ಲೂರ್ದ್ ಮೇರಿ ಅವರು ಸರ್ಕಾರದ ಆರೋಪಗಳನ್ನು ಅಲ್ಲಗಳೆಯುತ್ತಾರೆ. ”ಕಳೆದು ಹೋದ ಹಸುವನ್ನು ಹುಡುಕಿಕೊಂಡು ಕಾಡಿಗೆ ಒಬ್ಬರೇ ಹೋಗಲು ಸಾಧ್ಯವಿಲ್ಲ. ಜೊತೆ ತಮ್ಮ ಮೂವರು ಸಂಬಂಧಿಕರನ್ನು ಕರೆದೊಯ್ದರು. ಹಸು ಸಿಕ್ಕಿಲ್ಲವೆಂದು ಅಲ್ಲೇ ಮಲಗಿದ್ದಾರೆ. ನಿದ್ರೆ ಮಾಡುವಾಗ ಗನ್‌ನಲ್ಲಿ ಶೂಟ್ ಮಾಡಿದ್ದಾರೆ. ನಾವು ಕಳ್ಳಬೇಟೆಗಾರರಲ್ಲ. ನನ್ನ ಗಂಡ ಸಮಾಜ ಸೇವೆ ಹಾಗೂ ಜಮೀನು ಕೆಲಸ ಮಾಡುವವರು, ಹನ್ನೆರಡು ಹಸುಗಳಿವೆ. ದಿನವೂ 80 ಲೀಟರ್ ಹಾಲು ಹಾಕುತ್ತೇವೆ. ಅದರಲ್ಲಿ ಜೀವನ ಮಾಡುತ್ತೇವೆ. ನಮ್ಮನ್ನು ಸಿಕ್ಕಿಸಿ, ಅಧಿಕಾರಿಗಳು ಬಚಾವಾಗಲು ನೋಡುತ್ತಿದ್ದಾರೆ” ಎನ್ನುತ್ತಾರೆ.

ಆಂಥೋನಿ ಸ್ವಾಮಿಯವರ ಸಹೋದರ ಪ್ರಾನ್ಸಿಸ್ ಜೇವಿಯರ್ ಪ್ರತಿಕ್ರಿಯಿಸಿ, “ಎನ್‌ಕೌಂಟರ್ ಆದ ನಮ್ಮ ಅಣ್ಣನವರು ಮೊದಲು ಒಡಿಪಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಣ್ಣಪುಟ್ಟ ಅಣೆಕಟ್ಟು ನಿರ್ಮಿಸುವುದು, ತೋಟಗಳನ್ನು ಕ್ಲೀನ್ ಮಾಡಿಸುವುದು- ಈ ರೀತಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ಸಂಪೂರ್ಣ ವ್ಯವಸಾಯದಲ್ಲಿ ನಿರತರಾಗಿದ್ದರು. ಹೈನುಗಾರಿಕೆಯೇ ಅವರ ಕಸುಬಾಗಿತ್ತು” ಎನ್ನುತ್ತಾರೆ.

”ಪೊಲೀಸ್ ಎನ್‌ಕೌಂಟರ್‌ ವೇಳೆ ಮಹಿಮಾ ದಾಸ್‌ ದೂರದಲ್ಲಿ ಇದ್ದರಂತೆ. ಹೀಗಾಗಿ ಅವರು ತಪ್ಪಿಸಿಕೊಂಡಿದ್ದಾರೆ. ಅವರು ತಿಳಿಸಿರುವ ಪ್ರಕಾರ ಅರಣ್ಯ ಸಿಬ್ಬಂದಿ ಹತ್ತಿರದಿಂದಲೇ ಗುಂಡು ಹೊಡೆದಿದ್ದಾರೆ. ಇವರನ್ನು ಕಳ್ಳಬೇಟೆಗಾರರು ಅಂತೀರಲ್ಲ, ತಿಂಗಳಿಗೆ ಎಷ್ಟು ಸಲ ಬಂದು ಇವರ ಮನೆಗಳಲ್ಲಿ ಸರ್ಚ್ ಮಾಡಿದ್ದೀರಿ? ಕಳ್ಳಬೇಟೆಗಾರರು ಅಂತ ನಿಮಗೆ ಮಾಹಿತಿ ಕೊಟ್ಟವರು ಯಾರು? ದೂರು ಬಂದಿದ್ದರೆ ತಿಂಗಳಿಗೆ ಎರಡು ಸಲ ಮನೆಗಳನ್ನು ಸರ್ಚ್ ಮಾಡಬಹುದಿತ್ತಲ್ಲವೇ? ಮನೆಯ ಬಳಿ ಕ್ಯಾಮೆರಾ ಅಳವಡಿಸಿ, ಕಣ್ಗಾವಲು ಇಡಬಹುದಿತ್ತಲ್ಲವೇ?” ಎಂದು ಕೇಳುತ್ತಾರೆ.

encounter2
ಡೇವಿಡ್ ಕುಮಾರ್ ಪತ್ನಿ ದೇಮಿಲಾ ಮೇರಿ, ಆಂಥೋನಿ ಸ್ವಾಮಿ ಸಹೋದರ ಫ್ರಾನ್ಸಿಸ್ ಜೀವಿಯರ್, ಆಂಥೋನಿ ಸ್ವಾಮಿ ಪತ್ನಿ ಲೂರ್ದ್ ಮೇರಿ

ಮೃತ ಕುಮಾರ್ ಪತ್ನಿ ದೋಮಿನಾ ಮೇರಿ ಎರಡು ಹೆಣ್ಣು ಮಕ್ಕಳ ತಾಯಿ. ‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಅವರು, ”ನನ್ನ ಗಂಡ ಕೇರಳದಲ್ಲಿ ಹಿಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಇಲ್ಲಿ ಮನೆ ಕಟ್ಟಿಸಿದ್ದಾರೆ. ಗೃಹ ಪ್ರವೇಶಕ್ಕೆ ಮುನ್ನ ಕೆಲವು ಕೆಲಸ ಇವೆ, ಮುಗಿಸಿ ಹೋಗೋಣ ಎಂದು ಊರಿಗೆ ಬಂದಿದ್ದರು. ಶುಕ್ರವಾರ ಸಂಜೆ ಮಾವ ಆಂಥೋನಿ ಸ್ವಾಮಿಯವರು ಒಬ್ಬರೇ ಹಸು ಹುಡುಕಲು ಹೋಗುತ್ತಾರೆಂದು ಜೊತೆಯಲ್ಲಿ ತೆರಳಿದ್ದರು” ಎಂದರು.

ಮೃತದೇಹಗಳನ್ನು ಹತ್ತಿರದಿಂದ ನೋಡಿರುವ ಕುಮಾರ್ ಸಹೋದರ ಚಿನ್ನಪ್ಪನ್ ಮಾಹಿತಿ ನೀಡಿ, “ಮೂರು ಜನರ ಬಾಡಿಗಳನ್ನು ನಾನು ನೋಡಿದ್ದೀನಿ. ಎಲ್ಲರಿಗೂ ಹತ್ತಿರದಿಂದಲೇ ಹೊಡೆದಿದ್ದಾರೆ ಅನಿಸಿತು. ಬಂದೂಕಿನ ಗುಂಡು ಬಿದ್ದ ದೇಹದ ಭಾಗವು ಚದುರಿ ಹೋಗಿತ್ತು. ಸುಮಾರು ಆರು ಇಂಚು ಒಳಗೆ ಗುಂಡು ತೂರಿತ್ತು. ಹತ್ತಿರದಿಂದ ಹೊಡೆದರೆ ಮಾತ್ರ ಚದುರಲು ಸಾಧ್ಯ. ಪಾಯಿಂಟ್ ಮಾಡಿ ಹೊಡೆದಿದ್ದಾರೆ. ಕೈ ಎತ್ತಿ ನಿಲ್ಲಿಸಿ ಗುಂಡು ಹಾರಿಸಿದ್ದಾರೆಂದು ಅನಿಸುತ್ತದೆ” ಎಂದು ದೂರಿದರು.

ಕುಮಾರ್ ಸಹೋದರ ಸಂಬಂಧಿ ಡೇವಿಡ್ ಸಂತೋಷ್ ಕುಮಾರ್ ಮಾತನಾಡಿ, ”ಈ ಊರಿನಲ್ಲಿ ಕುಡಿಯಲು ನೀರಿನ ಅಭಾವವಿದೆ. ಹಸುಗಳನ್ನು ಮೇಯಿಸಲು ಫಾರೆಸ್ಟ್‌ಗೆ ಹೋಗಬೇಕು. ಬೇರೆ ದಾರಿ ಇಲ್ಲ. ಫಾರೆಸ್ಟ್‌ನವರಿಂದ ಕಿರುಕುಳ ತಪ್ಪುವುದಿಲ್ಲ. ಒಂದು ಸೌದೆ ತರುವುದಕ್ಕೂ ಬಿಡುವುದಿಲ್ಲ” ಎಂದು ಹೇಳಿದರು.

ಮುಂದುವರಿದು, “ಕಾಡಿಗೆ ಹೋದವರ ಬಳಿ ವೆಪನ್ ಇತ್ತು ಎಂಬುದು ಸುಳ್ಳು. ಫಾರೆಸ್ಟ್ ಅಧಿಕಾರಿಗಳು ಇಷ್ಟು ಕ್ರೂರತೆ ಮೆರೆಯುತ್ತಾರೆಂದು ಅಂದುಕೊಂಡಿರಲಿಲ್ಲ. ಕಾಡಿನೊಳಗೆ ಹೋದರೆ ಕರೆದುಕೊಂಡು ಹೋಗಿ ಎಫ್‌ಐಆರ್ ಮಾಡ್ತಾರೆ, ಒಂದೆರಡು ದಿನ ಇರಿಸಿಕೊಂಡು, ಹೊಡಿತಾರೆ ಎಂಬುದಷ್ಟೇ ಗೊತ್ತಿತ್ತು. ಆದರೆ ಈ ರೀತಿಯಲ್ಲಿ ಎನ್‌ಕೌಂಟರ್ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ. ಇದೊಂದು ಶಾಕಿಂಗ್” ಎಂದು ಆಘಾತ ವ್ಯಕ್ತಪಡಿಸುತ್ತಾರೆ.

ಕಾಡಂಚಿನ ಈ ಗ್ರಾಮಗಳಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆ ಮಿತಿಮೀರಿದೆ ಎಂಬುದು ಅನೇಕರ ಆರೋಪ. ಇಲ್ಲಿ ಹೈನುಗಾರಿಕೆಯೇ ಜನರಿಗೆ ಆಧಾರ. ಇಲ್ಲಿನ ಪ್ರತಿ ಮನೆಗಳ ಮುಂದೆಯೂ ಕನಿಷ್ಠ ಮೂರ್ನಾಲ್ಕು ಹಸುಗಳಾದರೂ ಕಟ್ಟಿರುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ತಮ್ಮ ರಾಸುಗಳನ್ನು ಕಾಡಿಗೆ ಅಟ್ಟಿ, ಸಂಜೆ ವೇಳೆ ವಾಪಸ್ ಕರೆತರುವುದು ಇಲ್ಲಿನ ನಿತ್ಯದ ಬದುಕು. ಕಾಡಿಗೆ ಹೋದ ಹಸುಗಳು ಹಿಂತಿರುಗದಿದ್ದರೆ, ಮತ್ತೆ ಹುಡುಕಿಕೊಂಡು ಹೋಗುವುದು ಸಾಮಾನ್ಯ ಎಂಬುದು ಕೆಲವರ ವಾದ.

WhatsApp Image 2026 08 18 at 14.21.58 1
ಇಲ್ಲಿ ಹೈನುಗಾರಿಕೆಯೇ ಜನರಿಗೆ ಆಧಾರ…

”ಎನ್‌ಕೌಂಟರ್‌ಗೆ ಒಳಗಾದವರು ಬೇಟೆಯಾಡಿದ್ದಾರೆಂದೇ ಭಾವಿಸಿದ್ದರೂ ಜೀವ ತೆಗೆಯುವ ಮಟ್ಟಕ್ಕೆ ಹೋಗಿದ್ದು ಹೇಗೆ? ಮಹಿಮಾ ದಾಸ್ ಎಂಬ ವ್ಯಕ್ತಿ ತಪ್ಪಿಸಿಕೊಂಡ ಕಾರಣಕ್ಕೆ ಪ್ರಕರಣ ಹೊರಗೆ ಬಂದಿದೆ. ಇಲ್ಲವಾಗಿದ್ದರೆ ಅರಣ್ಯ ಇಲಾಖೆಯು ಇದನ್ನು ಸಲೀಸಾಗಿ ಮುಚ್ಚಿ ಹಾಕುತ್ತಿದ್ದ ಸಾಧ್ಯತೆಯೇ ಇತ್ತು” ಎಂದು ಅನೇಕರು ಗುಮಾನಿ ವ್ಯಕ್ತಪಡಿಸುತ್ತಾರೆ.

2014ರಿಂದ 2026ರವರೆಗೆ ನಾಲ್ಕು ಶೂಟೌಟ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಏಳು ಜನರ ಜೀವ ತೆಗೆಯಲಾಗಿದೆ. 2014ರಲ್ಲಿ ಪಾಲಾರ್ ವನ್ಯಧಾಮದ ಪಾಲಾರ್ ಗಡಿ ಪ್ರದೇಶದಲ್ಲಿ ಕರ್ನಾಟಕದ ಅರಣ್ಯ ಸಿಬ್ಬಂದಿ ಮತ್ತು ತಮಿಳುನಾಡಿನ ನಡುವೆ ಗುಂಡಿನ ಕಾಳಗ ನಡೆದಿತ್ತು. ಗುಂಡೇಟು ತಿಂದಿದ್ದ ಪಳನಿ ಎಂಬ ವ್ಯಕ್ತಿಯ ಮೃತದೇಹ ಕಾವೇರಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. 2023ರ ಫೆಬ್ರವರಿಯಲ್ಲಿ ಗೋಪಿನಾಥಂ ವಲಯದ ಅಡಿಪಾಲಾರ್ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಾಜು ಎಂಬಾತನಿಗೆ ಗುಂಡು ಹಾರಿಸಲಾಗಿತ್ತು. ಆತ ಪಾಲಾರ್ ನದಿಗೆ ಜಿಗಿದಿದ್ದ ಎಂದು ಅರಣ್ಯ ಇಲಾಖೆ ಹೇಳಿತ್ತು. ಮೂರು ದಿನಗಳ ಬಳಿಕ ಶವ ಪತ್ತೆಯಾಗಿತ್ತು. 2023ರ ನವೆಂಬರ್‍‌ನಲ್ಲಿ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಮದ್ದೂರು ವಲಯದಲ್ಲಿ ಭೀಮನಬೀಡು ಗ್ರಾಮದ ಮಧು ಎಂಬ ಯುವಕ ಇಲಾಖಾ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದ. ಎಲ್ಲ ಪ್ರಕರಣಗಳಲ್ಲೂ ಸಿಬ್ಬಂದಿ ಕೊಡುವ ಕಾರಣ- ಆತ್ಮರಕ್ಷಣೆ. ಈಗ ನಡೆದಿರುವ ಪ್ರಕರಣದಲ್ಲೂ ಪೊಲೀಸರು ಆತ್ಮರಕ್ಷಣೆಯ ಕಾರಣ ಹೇಳುತ್ತಿದ್ದಾರೆ.

‘ಆತ್ಮರಕ್ಷಣೆ’ ಎಂಬುದು ಎನ್‌ಕೌಂಟರ್‍‌ನಿಂದ ತಪ್ಪಿಸಿಕೊಳ್ಳಲು ಅಸ್ತ್ರವಾಗುತ್ತಿದೆಯೇ? ಅಥವಾ ಅರಣ್ಯ ಇಲಾಖೆಯು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆಯೇ? -ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯೇ ಉತ್ತರಿಸಬೇಕು. ಈಗ ನಡೆದಿರುವ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಮಹಿಮಾ ದಾಸ್ ಏನು ಹೇಳುತ್ತಾರೆ ಎಂಬುದರ ಮೇಲೆ ಪ್ರಕರಣ ನಿಲ್ಲುತ್ತದೆ.

51b357c4b2eb5ea348958f05f0063c7eae6f76468e16497b5d93e6a37750116e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...