ಇತ್ತೀಚಿಗೆ ಬಿಡುಗಡೆಯಾದ ಲಡಾಖ್ ಹೋರಾಟಗಾರ, ಪರಿಸರವಾಗಿ ಸೋನಮ್ ವಾಂಗ್‌ಚುಕ್ ಅವರನ್ನು ಕಾರ್ಗಿಲ್ ಜನತೆ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಗಿಲ್‌ನಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸೋನಮ್ ಅವರು ಲಡಾಖ್‌ನಾದ್ಯಂತ ಏಕತೆಗೆ ಕರೆ ನೀಡಿದರು.
ಸೆಪ್ಟೆಂಬರ್‌ನಲ್ಲಿ ಲೇಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸೋನಮ್ ಅವರನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಸುಮಾರು ಆರು ತಿಂಗಳುಗಳ ಕಾಲ ಜೋಧಪುರ ಜೈಲಿನಲ್ಲಿದ್ದ ಅವರು ಮಾರ್ಚ್ 14ರಂದು ಬಿಡುಗಡೆಯಾದ ವಾಂಗ್‌ಚುಕ್ ಅವರು ಏಪ್ರಿಲ್ 5ರಂದು ಕಾರ್ಗಿಲ್‌ಗೆ ಭೇಟಿ ನೀಡಿದರು.
ಇದನ್ನು ಓದಿದ್ದೀರಾ? ಹಿಂಸಾಚಾರಕ್ಕೆ ಭದ್ರತಾ ಪಡೆ ಕ್ರಮವೇ ಕಾರಣ: ಸೋನಮ್ ವಾಂಗ್‌ಚುಕ್‌ಗೆ ಪಾಕಿಸ್ತಾನ ಸಂಪರ್ಕ ಆರೋಪ ತಳ್ಳಿಹಾಕಿದ ಪತ್ನಿ
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿ ಸೇರ್ಪಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳನ್ನು ನಡೆಸುತ್ತಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ನಾಯಕರು ಅವರನ್ನು ಸ್ವಾಗತಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಾಂಗ್‌ಚುಕ್, “ಧಾರ್ಮಿಕ ಅಥವಾ ಪ್ರಾದೇಶಿಕ ವಿಭಜನೆಗಳನ್ನು ಮೀರಿ ಏಕತೆಯಿಂದ ನಾವು ಹೋರಾಡಬೇಕು. ನಮ್ಮನ್ನು ಒಗ್ಗೂಡಿಸುವುದು ಮಾನವೀಯತೆ ಮತ್ತು ಭಾರತೀಯರು ಎಂಬ ಭಾವನೆ. ನಾವು ಪರಸ್ಪರ ಹತ್ತಿರವಾಗಬೇಕು, ದೂರ ಸರಿಯಬಾರದು. ಲಡಾಖ್‌ನ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಅದರ ಸಂಪನ್ಮೂಲಗಳ ಮೇಲಿನ ನಿಯಂತ್ರಣದ ಬೇಡಿಕೆಗಳನ್ನು ದೇಶದ ಉಳಿದ ಭಾಗಗಳಂತೆ ಪರಿಹರಿಸಬೇಕು” ಎಂದು ಹೇಳಿದರು.
ಇನ್ನು ತಮ್ಮ ಬಂಧನದ ಬಗ್ಗೆ ಮಾತನಾಡಿದ ವಾಂಗ್‌ಚುಕ್, “ಬಂಧನವು ಕಷ್ಟಕರ ಆದರೆ ಅರ್ಥಪೂರ್ಣ. ಇದು ಸುಲಭವಲ್ಲ. ಆದರೆ ಸೇವೆ ಸಲ್ಲಿಸಿದ ನನಗೆ ಅದು ಅಮೂಲ್ಯವಾದ ಅನುಭವ. ಮುಂದೆ ಹೊಸ ಉದಯವಾಗಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲೇ ತಮ್ಮ ಅನುಪಸ್ಥಿತಿಯಲ್ಲಿ ಚಳುವಳಿಯನ್ನು ಮುಂದುವರೆಸಿದ ಇತರರ ಕೊಡುಗೆಗಳನ್ನು ಸಹ ಪ್ರಶಂಸಿಸಿದರು.




