ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ನಾನಾ ರೀತಿಯಲ್ಲಿ ಅದ್ವಾನ ಸೃಷ್ಟಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ, ಬಕ್ರೀದ್ ರಜೆಯನ್ನು ರದ್ದುಗೊಳಿಸಲಾಗಿದೆ, ಹಸುಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಎಸ್‌ಐಆರ್‌ನಿಂದಾಗಿ ಮತಪಟ್ಟಿಯಿಂದ ಹೊರಗುಳಿದವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲವೆಂದೂ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಹೇಳುತ್ತಿದೆ. ಈ ಆಡಳಿತಾತ್ಮಕ ದಾಳಿಗಳ ನಡುವೆ ಜನೋಪಯೋಗಿ ಘೋಷಣೆಯೊಂದನ್ನು ಸರ್ಕಾರ ಮಾಡಿದೆ. ವಾರದಲ್ಲಿ ಎರಡು ದಿನ 5 ರೂ.ಗೆ ಮೀನು ಊಟ ನೀಡುವುದಾಗಿ ತಿಳಿಸಿದೆ.
ಬಂಗಾಳಿ ಸಂಸ್ಕೃತಿ ಮತ್ತು ಆಹಾರ ಪದ್ಧತಿಯಲ್ಲಿ ಮೀನು ಮತ್ತು ಅನ್ನಕ್ಕೆ (ಮಾಚ್-ಭಾತ್) ಅತ್ಯಂತ ಪ್ರಮುಖ ಸ್ಥಾನವಿದೆ. ಈ ಹಿಂದೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ನೇತೃತ್ವದ ಸರ್ಕಾರವು ಬಡವರಿಗಾಗಿ ಆರಂಭಿಸಿದ್ದ ‘ಮಾ ಕ್ಯಾಂಟೀನ್’ ಯೋಜನೆಯಡಿ 5 ರೂಪಾಯಿಗೆ ಮೊಟ್ಟೆ-ಅನ್ನದ ಊಟವನ್ನು ನೀಡಲಾಗುತ್ತಿತ್ತು. ಈಗ, ಆ ಯೋಜನೆಯನ್ನು ಬಿಜೆಪಿ ಸರ್ಕಾರ ಪರಿಷ್ಕರಿಸಿದೆ.
“ರಾಜ್ಯದ ಎಲ್ಲ 400 ಸಬ್ಸಿಡಿ ಆಧಾರಿತ ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ವಾರಕ್ಕೆ ಎರಡು ದಿನ ಕೇವಲ 5 ರೂಪಾಯಿಗೆ ಮೀನು ಮತ್ತು ಅನ್ನದ ಊಟವನ್ನು ನೀಡಲಾಗುವುದು. ಉಳಿದ ದಿನಗಳಲ್ಲಿ ಎಂದಿನಂತೆ ಮೊಟ್ಟೆ-ಅನ್ನದ ಊಟ ವಿತರಿಸಲಾಗುತ್ತದೆ” ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.



