ಸಾಮಾಜಿಕ ಜಾಲತಾಣದ ವಿಡಿಯೊವೊಂದರಲ್ಲಿ ‘ಅಸ್ಸಲಾಮು ಅಲೈಕುಂ'(ನಿಮಗೆ ಶಾಂತಿಯಾಗಲಿ), ‘ಇನ್ಶಾ ಅಲ್ಲಾ'(ದೇವರು ಇಚ್ಛಿಸಿದರೆ) ಹಾಗೂ ‘ಜಜಾಕಲ್ಲಾ'(ದೇವರು ನಿಮಗೆ ಒಳ್ಳೆಯದನ್ನು ಮಾಡಲಿ) ಎಂಬ ಪದಗಳನ್ನು ಬಳಸಿದ್ದ ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿಯೊಬ್ಬರನ್ನು ದಿಢೀರನೆ ಎತ್ತಂಗಡಿ ಮಾಡಲಾಗಿದೆ. ಖರಗ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ (ಎಎಸ್‌ಪಿ) ಬುಶ್ರಾ ಬಾನೊ ಅವರನ್ನು ಸೋಮವಾರ ಪಶ್ಚಿಮ ಬಂಗಾಳ ಸಶಸ್ತ್ರ ಪಡೆಯ ಡೆಪ್ಯುಟಿ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಲಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಲಪಂಥೀಯರ ಆಕ್ಷೇಪಕ್ಕೆ ಮಣಿದು ಸರ್ಕಾರ ಕೈಗೊಂಡಿರುವ ಈ ವರ್ಗಾವಣೆ ಕ್ರಮಕ್ಕೆ ಪ್ರಜ್ಞಾವಂತ ವಲಯದಲ್ಲಿ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. “ಹಿಂದೂ ಅಧಿಕಾರಿಯೊಬ್ಬರು ‘ದೇವರೇ ಕಾಪಾಡಪ್ಪ’ ಅಥವಾ ‘ದೇವರು ಒಳ್ಳೆದ್ ಮಾಡ್ಲಿ’ ಎಂದು ಸಹಜವಾಗಿ ಹೇಳಿದರೆ ಅವರನ್ನೂ ಇದೇ ರೀತಿ ವರ್ಗಾವಣೆ ಅಥವಾ ಸೇವೆಯಿಂದ ವಜಾಗೊಳಿಸುತ್ತೀರಾ?” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದು, ಸರ್ಕಾರದ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸೆಪ್ಟೆಂಬರ್ 13ರಂದು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಬುಶ್ರಾ ಬಾನೊ, ತಮ್ಮ ಯುಪಿಎಸ್‌ಸಿ ಪರೀಕ್ಷಾ ಸಿದ್ಧತೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದ್ದರು. ಈ ವಿಡಿಯೊದಲ್ಲಿ ಅವರು ಮಾತನಾಡುವಾಗ ಇಸ್ಲಾಮಿಕ್ ಶುಭಾಶಯ ಹಾಗೂ ಪ್ರಾರ್ಥನಾ ಪದಗಳಾದ ‘ಅಸ್ಸಲಾಮು ಅಲೈಕುಂ’ (ನಿಮಗೆ ಶಾಂತಿಯಾಗಲಿ), ‘ಇನ್ಶಾ ಅಲ್ಲಾ’ (ದೇವರು ಇಚ್ಛಿಸಿದರೆ) ಹಾಗೂ ‘ಜಜಾಕಲ್ಲಾ’ (ದೇವರು ನಿಮಗೆ ಒಳ್ಳೆಯದನ್ನು ಮಾಡಲಿ) ಎಂಬ ಪದಗಳನ್ನು ಬಳಸಿದ್ದರು.
‘ದ ಜೈಪುರ್ ಡೈಲಾಗ್ಸ್’ ಹಾಗೂ ‘ಹಿಂದೂ ಲೀಗಲ್ ಫಂಡ್’ನಂತಹ ಬಲಪಂಥೀಯ ಸಾಮಾಜಿಕ ಜಾಲತಾಣ ಖಾತೆಗಳು ಅಧಿಕಾರಿಯ ಪದಬಳಕೆಯನ್ನು ಟೀಕಿಸಿದ್ದವು. ಇದರ ಬೆನ್ನಲ್ಲೇ ‘ಸುದರ್ಶನ್ ನ್ಯೂಸ್’ ವಾಹಿನಿಯು ಈ ಪ್ರಕರಣವನ್ನು ‘ಯುಪಿಎಸ್‌ಸಿ ಜಿಹಾದ್’ ಎಂದು ಬಿಂಬಿಸಿ ಅಧಿಕಾರಿಯನ್ನು ಗುರಿಯಾಗಿಸಿ ವರದಿ ಪ್ರಸಾರ ಮಾಡಿತ್ತು . ಈ ಹಿನ್ನಲೆಯಲ್ಲಿ ಸರ್ಕಾರ ವರ್ಗಾವಣೆ ಅಸ್ತ್ರ ಪ್ರಯೋಗಿಸಿದೆ.
ಮೂಲತಃ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರಾದ ಬುಶ್ರಾ ಬಾನೊ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರು. ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ ಪೂರೈಸಿರುವ ಇವರು, ಕಿರಿಯ ಸಂಶೋಧನಾ ಫೆಲೋಶಿಪ್‌ಗಾಗಿ (JRF) ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೂ (NET) ಪಾಸ್ ಮಾಡಿದ್ದರು. ಐಎಎಸ್/ಐಪಿಎಸ್ ಅಧಿಕಾರಿಯಾಗುವ ಕನಸು ಹೊತ್ತು ಭಾರತಕ್ಕೆ ಮರಳುವ ಮುನ್ನ ಅವರು ಸೌದಿ ಅರೇಬಿಯಾದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದ್ದರು.
ಬುಶ್ರಾ ಬಾನೊ ಅವರ ಯುಪಿಎಸ್‌ಸಿ ಪಯಣ ಕೂಡ ಸಾಕಷ್ಟು ಸ್ಫೂರ್ತಿದಾಯಕವಾಗಿದೆ. 2018ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 277ನೇ ರ‍್ಯಾಂಕ್ ಗಳಿಸಿದ್ದ ಅವರಿಗೆ, ‘ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸ್’ (IRTS) ಹುದ್ದೆ ಒಲಿದುಬಂದಿತ್ತು. ಆದರೆ, ಆ ಸಮಯದಲ್ಲಿ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಆ ಹುದ್ದೆಗೆ ಸೇರಿರಲಿಲ್ಲ. ತಾಯ್ತನ ಮತ್ತು ಪರೀಕ್ಷಾ ಸಿದ್ಧತೆ ಎರಡನ್ನೂ ಸರಿದೂಗಿಸಿದ ಅವರು, ಮರುವರ್ಷವೇ ಮತ್ತೆ ಪರೀಕ್ಷೆ ಬರೆದು 234ನೇ ರ‍್ಯಾಂಕ್‌ಗೆ ಏರುವ ಮೂಲಕ ಐಪಿಎಸ್‌ಗೆ ಆಯ್ಕೆಯಾದರು. 2021ರ ಬ್ಯಾಚ್‌ನ ಪಶ್ಚಿಮ ಬಂಗಾಳ ಕೆಡರ್‌ನ ಅಧಿಕಾರಿಯಾಗಿರುವ ಅವರು, ಹೂಗ್ಲಿ ಗ್ರಾಮಾಂತರ ವಿಭಾಗದಲ್ಲಿ ಎಎಸ್‌ಪಿ ಆಗಿ ತಮ್ಮ ಪೊಲೀಸ್ ವೃತ್ತಿಜೀವನ ಆರಂಭಿಸಿದ್ದರು.
ಈ ವರ್ಗಾವಣೆಯ ನಂತರ ‘ಅಖಿಲ ಭಾರತ ಸೇವಾ (ನಡತೆ) ನಿಯಮಾವಳಿ, 1968’ರ ನಿಯಮಗಳ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ನಿಯಮ 3ರ ಅಡಿಯಲ್ಲಿ ಅಧಿಕಾರಿಗಳಿಗೆ ತಮ್ಮ ಖಾಸಗಿ ಬದುಕಿನಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದ್ದರೂ, ಸಾರ್ವಜನಿಕ ಕರ್ತವ್ಯದಲ್ಲಿ ನಿಷ್ಪಕ್ಷಪಾತ ಹಾಗೂ ತಟಸ್ಥ ನೀತಿಯನ್ನು ಕಾಯ್ದುಕೊಳ್ಳಬೇಕು. ಆದರೆ, ಈ ಸೇವಾ ನಿಯಮಾವಳಿಗಳಲ್ಲಿ ಕಡ್ಡಾಯವಾಗಿ ‘ಜೈ ಹಿಂದ್’ ಅಥವಾ ‘ವಂದೇ ಮಾತರಂ’ ಅನ್ನೇ ಬಳಸಬೇಕು ಎಂಬ ಯಾವುದೇ ಲಿಖಿತ ನಿಯಮಗಳಿಲ್ಲ ಹಾಗೂ ನಿರ್ದಿಷ್ಟ ಧಾರ್ಮಿಕ ಶುಭಾಶಯಗಳನ್ನು ಎಲ್ಲಿಯೂ ನಿಷೇಧಿಸಿಲ್ಲ. ಸರ್ಕಾರ ಕೂಡ ಬುಶ್ರಾ ಅವರ ಮೇಲಿನ ಶಿಸ್ತುಕ್ರಮದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈ ಪ್ರಕರಣವು ಇದೀಗ ಇತರ ಅಧಿಕಾರಿಗಳ ವಿವಾದಾತ್ಮಕ ನಡವಳಿಕೆಗಳೊಂದಿಗೆ ತಳುಕು ಹಾಕಿಕೊಂಡಿದೆ. 2025ರಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ, ‘ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರುತ್ತದೆ, ಶುಕ್ರವಾರದ ನಮಾಜ್ 52 ಬಾರಿ ಬರುತ್ತದೆ. ಬಣ್ಣದ ಸಮಸ್ಯೆ ಇದ್ದರೆ ಮುಸ್ಲಿಮರು ನಮಾಜ್‌ಗೆ ಹೋಗದೆ ಮನೆಯಲ್ಲೇ ಇರಲಿ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರೂ, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸಮರ್ಥಿಸಿಕೊಂಡಿದ್ದರು. ಅದೇ ರೀತಿ 2024ರಲ್ಲಿ ಕೇರಳದ ಐಎಎಸ್ ಅಧಿಕಾರಿ ಕೆ. ಗೋಪಾಲಕೃಷ್ಣನ್ ‘ಮಲ್ಲು ಹಿಂದೂ ಆಫೀಸರ್ಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದ ಪ್ರಕರಣವೂ ಮರುಕಳಿಸಿದೆ. ಅಧಿಕಾರಿಗಳ ಧಾರ್ಮಿಕ ಗುರುತಿನ ಆಧಾರದ ಮೇಲೆ ಸೇವಾ ನಿಯಮಗಳ ಅನ್ವಯದಲ್ಲಿ ತಾರತಮ್ಯ ಮಾಡಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಈ ವಿದ್ಯಮಾನ ಹುಟ್ಟುಹಾಕಿದೆ.




