ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ ಮತದಾರರ ಪಟ್ಟಿ ನಿಯಂತ್ರಣ!

Date:

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡುಮಾಡಿವೆ

- Advertisement -

ದೇಶದ ಪ್ರಜಾಪ್ರಭುತ್ವದ ಕಾವಲುಗಾರನಾಗಬೇಕಿದ್ದ ಕೇಂದ್ರ ಚುನಾವಣಾ ಆಯೋಗವೇ ಇದೀಗ ತಂತ್ರಜ್ಞಾನದ ಕಪಿಮುಷ್ಟಿಯಲ್ಲಿ ಸಿಲುಕಿ, ಆಡಳಿತಶಾಹಿಯ ಕೈಗೊಂಬೆಯಾಗುತ್ತಿರುವ ಕರಾಳ ವಾಸ್ತವವೊಂದು ಕಣ್ಣೆದುರೇ ಅನಾವರಣಗೊಂಡಿದೆ. ಮುಂಬರುವ ಚುನಾವಣೆಗಳ ಹೊಸ್ತಿಲಲ್ಲಿ, ದೆಹಲಿಯ ಹವಾನಿಯಂತ್ರಿತ ಕೊಠಡಿಯಿಂದ ಇಡೀ ದೇಶದ ‘ಮತದಾರರ ಪಟ್ಟಿ’ಯನ್ನು ಏಕಸ್ವಾಮ್ಯಕ್ಕೆ ಒಳಪಡಿಸುವ ಅಪಾಯಕಾರಿ ಹುನ್ನಾರವೊಂದು ಬಯಲಾಗಿದೆ. ತಂತ್ರಜ್ಞಾನದ ಹೆಸರಿನಲ್ಲಿ ನಡೆಯುತ್ತಿರುವ ದತ್ತಾಂಶ ನಿಯಂತ್ರಣದ ಈ ಸರ್ವಾಧಿಕಾರ ಕೇವಲ ತಾಂತ್ರಿಕ ದೋಷವಲ್ಲ; ಬದಲಾಗಿ ಇದು ಚುನಾವಣಾ ಪ್ರಕ್ರಿಯೆಯ ಬುಡವನ್ನೇ ಅಲುಗಾಡಿಸುವ ಹಾಗೂ ವ್ಯವಸ್ಥೆಯನ್ನು ಹೈಜಾಕ್ ಮಾಡುವ ತಂತ್ರ ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಈ ಇಡೀ ಸಾಂಸ್ಥಿಕ ಬಿಕ್ಕಟ್ಟಿನ ಕೇಂದ್ರಬಿಂದುವಾಗಿ ನಿಂತಿರುವುದು ಆಯೋಗದ ಮಾಹಿತಿ ತಂತ್ರಜ್ಞಾನ ವಿಭಾಗದ ಮಹಾನಿರ್ದೇಶಕಿ ಡಾ. ಸೀಮಾ ಖನ್ನಾ. ದೆಹಲಿಯ ಐಐಟಿಯಿಂದ ಮಾಹಿತಿ ಭದ್ರತೆಯಲ್ಲಿ ಡಾಕ್ಟರೇಟ್ ಪಡೆದಿರುವ ಮತ್ತು ಈ ಹಿಂದೆ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್‌ನಲ್ಲಿ (NIC) ಕಾರ್ಯನಿರ್ವಹಿಸಿದ್ದ ಇವರು, ‘ಇಸಿಐ-ನೆಟ್’ (ECINet) ಎಂಬ ಕೇಂದ್ರೀಕೃತ ಸಾಫ್ಟ್‌ವೇರ್ ಮೂಲಕ ಇಡೀ ದೇಶದ ಮತದಾರರ ಡೇಟಾಬೇಸ್ ಅನ್ನು ಸಂಪೂರ್ಣವಾಗಿ ತಮ್ಮ ವಿಭಾಗದ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಜನವರಿ 2026ರಲ್ಲಿ ಈ ಸಾಫ್ಟ್‌ವೇರ್ ಉದ್ಘಾಟನೆಗೊಂಡಾಗ ಪಾರದರ್ಶಕತೆಯ ದೊಡ್ಡ ಭರವಸೆಗಳನ್ನು ನೀಡಲಾಗಿತ್ತು. ಆದರೆ, ಇಂದು ಅದೇ ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸಿಕೊಂಡು, ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಾದ ಸ್ಥಳೀಯ ಚುನಾವಣಾಧಿಕಾರಿಗಳ ಅಧಿಕಾರವನ್ನು ನಿರ್ದಯವಾಗಿ ಕಸಿದುಕೊಳ್ಳಲಾಗುತ್ತಿದೆ.

ನಿಯಮಗಳ ಪ್ರಕಾರ, ಯಾವುದೇ ಮತದಾರನನ್ನು ಪಟ್ಟಿಗೆ ಸೇರಿಸುವ, ತೆಗೆದುಹಾಕುವ ಅಥವಾ ಮರುಸೇರ್ಪಡೆ ಮಾಡುವ ಪರಮಾಧಿಕಾರ ಇರುವುದು ಸ್ಥಳೀಯ ಎಲೆಕ್ಟೋರಲ್ ರಿಜಿಸ್ಟ್ರೇಷನ್ ಅಧಿಕಾರಿಗಳಿಗೆ (EROs). ಆದರೆ ಸೀಮಾ ಖನ್ನಾ ನೇತೃತ್ವದ ಐಟಿ ವಿಭಾಗವು ಈ ಸಾಫ್ಟ್‌ವೇರ್ ಒಳಗೆ ಅದೆಂಥಾ ‘ಲಾಕ್-ಇನ್’ ವ್ಯವಸ್ಥೆ ರೂಪಿಸಿದೆಯೆಂದರೆ, ಖುದ್ದು ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಅರ್ಹರೆಂದು ತೀರ್ಮಾನಿಸಿದರೂ, ದೆಹಲಿಯ ಐಟಿ ವಿಭಾಗದ ಅನುಮೋದನೆ ಇಲ್ಲದೆ ಯಾರೊಬ್ಬರ ಹೆಸರನ್ನೂ ಪಟ್ಟಿಗೆ ಸೇರಿಸುವಂತಿಲ್ಲ. ಇದು ಆಡಳಿತ ವಿಕೇಂದ್ರೀಕರಣದ ಆಶಯದ ಕಗ್ಗೊಲೆಯಷ್ಟೇ ಅಲ್ಲ, ದತ್ತಾಂಶ ಸುರಕ್ಷತೆಯ ನೆಪದಲ್ಲಿ ಮತದಾರರ ಸಾಂವಿಧಾನಿಕ ಹಕ್ಕಿನ ಮೇಲೆ ನಡೆಯುತ್ತಿರುವ ನೇರ ದಬ್ಬಾಳಿಕೆಯಾಗಿದೆ.

ಈ ಕೇಂದ್ರೀಕೃತ ಸರ್ವಾಧಿಕಾರಕ್ಕೆ ಗೋವಾದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಅತ್ಯಂತ ಕಟು ನಿದರ್ಶನ. ಗೋವಾದಲ್ಲಿ 97 ಜನ ಅರ್ಹ ಮತದಾರರ ಹೆಸರುಗಳನ್ನು ಹಿಂದಿನ ಪಟ್ಟಿಯಿಂದ ಅಚಾತುರ್ಯದಿಂದ ಕೈಬಿಡಲಾಗಿತ್ತು. ಆ 97 ಜನರೂ ಮತದಾನಕ್ಕೆ ಅರ್ಹರು ಎಂದು ಸ್ಥಳೀಯ ಅಧಿಕಾರಿಗಳೇ ದೃಢಪಡಿಸಿದ್ದರು. ಅವರನ್ನು ಮರುಸೇರ್ಪಡೆ ಮಾಡಲು ಅವಕಾಶ ನೀಡುವಂತೆ ಸೀಮಾ ಖನ್ನಾ ಅವರ ವಿಭಾಗಕ್ಕೆ ಸತತ ಏಳು ದಿನಗಳಲ್ಲಿ ಎಂಟು ತುರ್ತು ಇಮೇಲ್‌ಗಳನ್ನು ಕಳುಹಿಸಲಾಯಿತು. ಆದರೆ, ದೆಹಲಿಯಲ್ಲಿ ಕುಳಿತಿದ್ದ ಐಟಿ ದರ್ಬಾರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಪರಿಣಾಮವಾಗಿ, ಯಾವುದೇ ತಪ್ಪಿಲ್ಲದಿದ್ದರೂ ಆ 97 ಜನ ಅರ್ಹ ಮತದಾರರು ಅಂತಿಮ ಪಟ್ಟಿಯಿಂದ ಅನ್ಯಾಯವಾಗಿ ಹೊರಗುಳಿಯಬೇಕಾಯಿತು.

ಈ ತಾಂತ್ರಿಕ ಅಸಹಾಯಕತೆ ಕೇವಲ ಕೆಳಹಂತದ ಅಧಿಕಾರಿಗಳಿಗಷ್ಟೇ ಸೀಮಿತವಾಗಿಲ್ಲ; ಸ್ವತಃ ಚುನಾವಣಾ ಆಯೋಗದ ಉನ್ನತ ಮಟ್ಟದಲ್ಲೂ ತೀವ್ರ ತಲ್ಲಣ ಸೃಷ್ಟಿಸಿದೆ. ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಬರೋಬ್ಬರಿ 14 ಬಾರಿ ಐಟಿ ವಿಭಾಗದ ಈ ಏಕಪಕ್ಷೀಯ ನಡೆಯ ಬಗ್ಗೆ ಲಿಖಿತ ಆಕ್ಷೇಪಗಳನ್ನು ದಾಖಲಿಸಿದ್ದಾರೆ ಎಂಬ ಆಘಾತಕಾರಿ ಅಂಶ ತನಿಖಾ ವರದಿಗಳಿಂದ ಬಯಲಾಗಿದೆ. ಆಯೋಗದ ಒಳಗಿನ ಭಿನ್ನಾಭಿಪ್ರಾಯ ಎಷ್ಟರಮಟ್ಟಿಗೆ ತಲುಪಿದೆಯೆಂದರೆ, ಈ ಇಬ್ಬರೂ ಆಯುಕ್ತರು ಸಾಫ್ಟ್‌ವೇರ್ ಸಮಗ್ರತೆ ಹಾಗೂ ದತ್ತಾಂಶ ನಿಯಂತ್ರಣದ ಬಗ್ಗೆ ನೇರವಾಗಿ ಕ್ಯಾಬಿನೆಟ್ ಕಾರ್ಯದರ್ಶಿಗೇ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ್ದಾರೆ. ಆಯೋಗದ ಒಳಗೇ ಇಷ್ಟೊಂದು ವಿರೋಧವಿದ್ದರೂ, ಐಟಿ ವಿಭಾಗವು ಯಾರಿಗೂ ಜವಾಬ್ದಾರಿಯಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಗ್ಯಾನೇಶ್‌ ಕುಮಾರ್

ಈ ಸಾಂಸ್ಥಿಕ ವೈಫಲ್ಯವು ಸಹಜವಾಗಿಯೇ ಕೇಂದ್ರ ಸರ್ಕಾರದ ಕಡೆಗೂ ಬೊಟ್ಟು ಮಾಡುವಂತೆ ಮಾಡಿದೆ. ಕೇಂದ್ರದ ಮೋದಿ ನೇತೃತ್ವದ ಸರ್ಕಾರವು ಇಂತಹ ಕೇಂದ್ರೀಕೃತ ಸಾಫ್ಟ್‌ವೇರ್‌ಗಳ ಮೂಲಕ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮತ್ತು ಸೀಮಾ ಖನ್ನಾ ಜಂಟಿಯಾಗಿ ಇಡೀ ಚುನಾವಣಾ ಪ್ರಕ್ರಿಯೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಆಯೋಗವು ಆಡಳಿತಾರೂಢ ವ್ಯವಸ್ಥೆಯ ಹಿತಾಸಕ್ತಿ ಕಾಯುವ ಯಂತ್ರವಾಗಿ ಬದಲಾಗುತ್ತಿದೆಯೇ ಎಂಬ ವಿರೋಧ ಪಕ್ಷಗಳ ಆತಂಕಕ್ಕೆ ಈ ಡೇಟಾಬೇಸ್ ಬಿಕ್ಕಟ್ಟು ಮತ್ತಷ್ಟು ಪುಷ್ಟಿ ನೀಡುವಂತಿದೆ.

ಈ ಆಕ್ರೋಶಕ್ಕೆ ಅಂತಿಮ ಸ್ವರೂಪ ನೀಡಿದ್ದು ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ ಅವರ ಕಾನೂನು ಹೋರಾಟ. ಸೆಪ್ಟೆಂಬರ್ 30ರಂದು ಸೀಮಾ ಖನ್ನಾ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಅವರು, ಖನ್ನಾ ಅವರನ್ನು ನೇರವಾಗಿ ‘ಸೈಬರ್ ಟೆರರಿಸ್ಟ್’ ಎಂದು ಕರೆದಿದ್ದಾರೆ. ಇಸಿಐ-ನೆಟ್ ಮೂಲಕ ಎಲೆಕ್ಟ್ರಾನಿಕ್ ದಾಖಲೆಗಳನ್ನು ತಿರುಚಲಾಗುತ್ತಿದೆ ಹಾಗೂ ವ್ಯವಸ್ಥಿತವಾಗಿ ಎಲೆಕ್ಟೋರಲ್ ಅಧಿಕಾರಿಗಳ ಅಧಿಕಾರ ಕಸಿದುಕೊಳ್ಳುವ ಅಪರಾಧ ಸಂಚು ರೂಪಿಸಲಾಗಿದೆ ಎಂಬುದು ಅವರ ಗಂಭೀರ ಆರೋಪವಾಗಿದೆ. ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ವ್ಯವಸ್ಥೆಯ ಹಿಂದಿರುವ ಕರಾಳ ಮುಖಗಳನ್ನು ಇನ್ನಷ್ಟು ಬೆತ್ತಲಾಗಿಸುವ ಸಾಧ್ಯತೆಯಿದೆ.

ಒಂದೆಡೆ ದೆಹಲಿಯಲ್ಲಿ ದತ್ತಾಂಶ ನಿಯಂತ್ರಣದ ಹಠ ಮುಂದುವರಿದಿದ್ದರೆ, ಇನ್ನೊಂದೆಡೆ ರಾಜ್ಯ ಮಟ್ಟದ ಅಧಿಕಾರಿಗಳು ಈ ಅವೈಜ್ಞಾನಿಕ ವ್ಯವಸ್ಥೆಯ ವಿರುದ್ಧ ಸಿಡಿದೇಳಲಾರಂಭಿಸಿದ್ದಾರೆ. ಇದಕ್ಕೆ ಕನ್ನಡಿಯಂತಿದೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ (CEO) ಎಸ್. ಚೊಕ್ಕಲಿಂಗಂ ಅವರ ದಿಟ್ಟ ನಿಲುವು. ಸಾಫ್ಟ್‌ವೇರ್‌ನ ಅರ್ಥಹೀನ ಅಡೆತಡೆಗಳಿಂದ ಬೇಸತ್ತ ಅವರು ಅಕ್ಟೋಬರ್ 1ರಂದು ಅತ್ಯಂತ ಸ್ಪಷ್ಟವಾದ ಅಧಿಕೃತ ಹೇಳಿಕೆಯೊಂದನ್ನು ಹೊರಡಿಸಿದರು. ಇಸಿಐ-ನೆಟ್ ಸಾಫ್ಟ್‌ವೇರ್ ಗೊಂದಲದಿಂದಾಗಿ ‘ಲಾಜಿಕಲ್ ಡಿಸ್ಕ್ರಿಪನ್ಸಿ’ (Logical Discrepancy) ಅಥವಾ ‘ನೋ ಮ್ಯಾಪಿಂಗ್’ ಅಡಿ ನೋಟಿಸ್ ಪಡೆದ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ ಎಂದು ಎಸ್. ಚೊಕ್ಕಲಿಂಗಂ ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆಗೆ ಭೇಟಿ ನೀಡಿ ಅಥವಾ ವಾಟ್ಸಾಪ್ ಮೂಲಕವೇ ದಾಖಲೆಗಳನ್ನು ಪರಿಶೀಲಿಸಬೇಕು, ತಾಂತ್ರಿಕ ಕಾರಣಗಳಿಗಾಗಿ ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಇದು ದೆಹಲಿಯ ಐಟಿ ಸರ್ವಾಧಿಕಾರಕ್ಕೆ ಸ್ಥಳೀಯ ಮಟ್ಟದಲ್ಲಿ ಸಿಕ್ಕ ಅತ್ಯಂತ ಪ್ರಬಲ ಹಾಗೂ ಆಡಳಿತಾತ್ಮಕ ತಿರುಗೇಟಾಗಿದೆ.

ವಿವಾದ ಕೈಮೀರುತ್ತಿರುವುದನ್ನು ಅರಿತ ಚುನಾವಣಾ ಆಯೋಗವು ತರಾತುರಿಯ ಸಭೆ ನಡೆಸಿ, ಸಾಫ್ಟ್‌‌ವೇರ್ ಪರಿಶೀಲನೆಗೆ ಐಐಟಿ ತಜ್ಞರ ಸಮಿತಿ ರಚಿಸುವುದಾಗಿ ಹೇಳಿ ತೇಪೆ ಹಚ್ಚುವ ಯತ್ನ ಮಾಡಿದೆ. ಹೊರಗುಳಿದ ಮತದಾರರ ಮರುಸೇರ್ಪಡೆಗೆ 20 ರಾಜ್ಯಗಳಲ್ಲಿ ವಿಶೇಷ ಅಭಿಯಾನವನ್ನೂ ಘೋಷಿಸಿದೆ. ಆದರೆ, ಇಷ್ಟೆಲ್ಲಾ ಅವಾಂತರಗಳಿಗೂ ಕಾರಣವಾದ ಐಟಿ ವಿಭಾಗದ ಮೇಲ್ವಿಚಾರಣೆಯನ್ನು ಮಾತ್ರ ಇನ್ನೂ ಹಿಂತೆಗೆದುಕೊಂಡಿಲ್ಲ.

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡುಮಾಡಿವೆ. ಮತದಾರನ ಹಕ್ಕುಗಳು ಸ್ಥಳೀಯ ವಾಸ್ತವಗಳ ಬದಲು ದೆಹಲಿಯ ಕಂಪ್ಯೂಟರ್‌ವೊಂದರ ಕೃತಕ ತಂತ್ರಾಂಶದ ಮೇಲೆ ನಿರ್ಧಾರವಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೇಶದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಎದುರಾಗಿರುವ ಅತ್ಯಂತ ಅಪಾಯಕಾರಿ ಮುನ್ಸೂಚನೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಮಾಜಘಾತುಕರಲ್ಲ, ಅವರಿಗೆ ಹೋರಾಡುವ ಹಕ್ಕಿದೆ’: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ...

ಗುಜರಾತ್ | ʼಶುದ್ಧೀಕರಣʼ ಹೆಸರಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅತ್ಯಾಚಾರ; 9 ಮಂದಿ ವಶಕ್ಕೆ

ಶುದ್ಧೀಕರಣ ವಿಧಿ (Purification Ritual) ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ, ಮನಬಂದಂತೆ...

ಪ್ರೀಮಿಯಂ ಲೇಖನ | ಉರ್ದು- ವಿಧಾನಸೌಧದ ಮೆಟ್ಟಿಲುಗಳ ವಿವಾದದಾಚೆ ಭಾರತದ ಭಾಷಾ–ಸಾಂಸ್ಕೃತಿಕ ಪರಂಪರೆಯ ಪ್ರಶ್ನೆ

ವಿಧಾನಸೌಧದ ಮೆಟ್ಟಿಲುಗಳು ಉರ್ದು ಹಬ್ಬಕ್ಕೆ ಸಿಗುತ್ತವೆಯೇ ಇಲ್ಲವೇ ಎಂಬುದು ಆಡಳಿತಾತ್ಮಕ ನಿರ್ಧಾರ....

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ ಕಾರಬಾರು!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ...