ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಗೆ ಪಟ್ಟಿ ಅಂತಿಮಗೊಂಡಿದೆ. ಇಂದು (ಸೋಮವಾರ) ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿದೆ ನೂತನ ಸಚಿವರು ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಸಚಿವರ ಅಂತಿಮ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್‌ನೊಳಗೆ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ಕೈತಪ್ಪಿದ ಹಲವು ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗರು ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ.
ಸಚಿವ ಸ್ಥಾನಕ್ಕೆ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅವರಿಗೂ ಮತ್ತು ಅವರ ಬೆಂಬಲಿಗರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಅಸಮಾಧಾನವನ್ನು ಪಕ್ಷದ ನಾಯಕತ್ವದ ಮುಂದೆ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದಾರೆ. ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದು, ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಅಪ್ಪಾಜಿ ನಾಡಗೌಡ ಕೂಡ ರಾಜೀನಾಮೆ ಕುರಿತು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ, ಕೆಲವು ಶಾಸಕರು ನೇರವಾಗಿ ಅಸಮಾಧಾನ ವ್ಯಕ್ತಪಡಿಸದೇ ಇದ್ದರೂ, ಅವರ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಅವರ ಬೆಂಬಲಿಗರು ನಾಗರಭಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅದೇ ರೀತಿ ಮೈಸೂರು ನಗರದಲ್ಲೂ ಸ್ಥಳೀಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ ಬೆಂಬಲಿಗರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದ್ದಾರೆ. ಹೈಕಮಾಂಡ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಸಮತೋಲನ, ಸಾಮಾಜಿಕ ಪ್ರತಿನಿಧಿತ್ವ, ಜಾತಿ ಸಮೀಕರಣ ಹಾಗೂ ಆಡಳಿತದ ಅನುಭವ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದಾಗ್ಯೂ, ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದ ಕೆಲ ಪ್ರಮುಖ ಶಾಸಕರು ಅವಕಾಶದಿಂದ ವಂಚಿತರಾಗಿರುವುದು ಪಕ್ಷದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದೆ.



