ನಮ್ಮ ಸಚಿವರು | ಕೆ ಎಚ್ ಮುನಿಯಪ್ಪ: ದಲಿತ ರಾಜಕಾರಣದ ಅನಪೇಕ್ಷಿತ ಮಾದರಿಯೇ?

Date:

ಕೆ ಎಚ್ ಮುನಿಯಪ್ಪ ವಿರುದ್ಧ ಹಿಂದೊಮ್ಮೆ ‘ಮುನಿಯಪ್ಪ ಹಠಾವೋ ಕಾಂಗ್ರೆಸ್ ಬಚಾವೋ’ ಎಂಬ ಅಭಿಯಾನ ನಡೆದಿತ್ತು. ಒಂದು ಕಾಲದಲ್ಲಿ ಕೇವಲ ನಾಲ್ಕು ಎಕರೆ ಜಮೀನು ಹೊಂದಿದ್ದ ಬಡ ದಲಿತ ಇಂದು ಕರ್ನಾಟಕದ ವಿವಿಧೆಡೆ ಸುಮಾರು 680 ಎಕರೆ ಜಮೀನಿನ ಒಡೆಯನಾಗಿದ್ದು ಹೇಗೆ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. 

ಚುನಾವಣೆಯ ಒಂದು ಸೋಲು ರಾಜಕೀಯ ಜೀವನದ ದೊಡ್ಡ ತಿರುವಿಗೆ ಕಾರಣವಾಗಬಹುದು, ದೊಡ್ಡ ಅವಕಾಶವೊಂದನ್ನು ಹೊತ್ತು ತರಬಹುದು ಎನ್ನುವುದಕ್ಕೆ ಸದ್ಯ ಸಾಕ್ಷಿಯಾಗಿರುವವರು ಕೆ ಎಚ್ ಮುನಿಯಪ್ಪ. 2019ರ ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತಿದ್ದೇ ಕೆ ಎಚ್ ಮುನಿಯಪ್ಪ ಅವರಿಗೆ ವರದಾನವಾಗಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗೆದ್ದು ಶಾಸಕರಾದ ಅವರಿಗೆ, ವಿಧಾನಸಭೆ ಪ್ರವೇಶದ ಮೊದಲ ಪ್ರಯತ್ನದಲ್ಲಿಯೇ ಮಂತ್ರಿಯಾಗುವ ಅವಕಾಶ ದಕ್ಕಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಕೆ ಎಚ್ ಮುನಿಯಪ್ಪ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕೆ ಎಚ್ ಮುನಿಯಪ್ಪ ಸೋತಿದ್ದು ಅವರ ರಾಜಕೀಯ ಬದುಕಿಗೆ ಕನ್ನಡಿ ಹಿಡಿದಂತಿತ್ತು. ಅವರ ರಾಜಕೀಯ ಜೀವನದಲ್ಲಿ ಕಂಡ ಮೊದಲ ಸೋಲು ಅದು. ವಕೀಲಿಕೆ ಮಾಡುತ್ತಿದ್ದ ಕೆ ಎಚ್‌ ಮುನಿಯಪ್ಪ ಚಿಕ್ಕಬಳ್ಳಾಪುರದ ಮಾಜಿ ಸಂಸದ ಎಸ್ ವಿ ಕೃಷ್ಣರಾವ್ ಅವರ ಒತ್ತಾಸೆಯಿಂದ 1991ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಆಗ ಅವರ ನೆರವಿಗೆ ನಿಂತಿದ್ದವರು ಶಿಡ್ಲಘಟ್ಟದ ವಿ ಮುನಿಯಪ್ಪ. ಆನಂತರ ಸತತ ಏಳು ಬಾರಿ ಕೆ ಎಚ್ ಮುನಿಯಪ್ಪ ಕಾಂಗ್ರೆಸ್‌ನಿಂದ ಸಂಸತ್‌ಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದರು.

ಯುಪಿಎ ಸರ್ಕಾರದ ಒಂದನೇ ಅವಧಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ಅವರು, 2009ರಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವರಾಗಿ ಎರಡನೇ ಬಾರಿಗೆ ಅಧಿಕಾರ ನಡೆಸಿದ್ದರು. ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ, ಬೆಂಗಳೂರಿನ ಕೆ ಆರ್ ಪುರಂನಿಂದ ಮುಳಬಾಗಿಲಿನ ನಂಗಲಿವರೆಗೆ ಹೆದ್ದಾರಿ ನಿರ್ಮಾಣ ಅವರ ಅವಧಿಯಲ್ಲಿ ಆದಂತಹ ಮುಖ್ಯ ಅಭಿವೃದ್ಧಿ ಕೆಲಸಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಸೋದರನಿಗೇ ಸಡ್ಡು ಹೊಡೆದು ಸಚಿವರಾದ ಭೈರತಿ ಸುರೇಶ್

ಚುನಾವಣೆಯಲ್ಲಿ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಮುನಿಯಪ್ಪ, ಸೋಲಿಲ್ಲದ ಸರದಾರ ಆಗಿದ್ದು ಹೇಗೆ ಎನ್ನುವುದು ಕುತೂಹಲಕರವಾಗಿದೆ. ಮುನಿಯಪ್ಪ ತಮ್ಮ ಗೆಲುವಿಗೆ ಅಗತ್ಯವಾದಾಗಲೆಲ್ಲ ಕ್ಷೇತ್ರ ವ್ಯಾಪ್ತಿಯ ಇತರೆ ಪಕ್ಷಗಳ ಮುಖಂಡರ ನೆರವು ಪಡೆಯುತ್ತಿದ್ದರು. ಅದಕ್ಕೆ ಪ್ರತಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬಿಟ್ಟು ತಮ್ಮ ಗೆಲುವಿಗೆ ನೆರವಾಗಿದ್ದ ಅಥವಾ ತಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇತರೆ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುತ್ತಿದ್ದರು ಎನ್ನಲಾಗುತ್ತದೆ. ಈ ಕಾರಣದಿಂದಾಗಿ ಶಿಡ್ಲಘಟ್ಟದ ವಿ ಮುನಿಯಪ್ಪ ಅವರನ್ನು ಹೊರತುಪಡಿಸಿದರೆ, ತಮ್ಮ ಜಿಲ್ಲೆಯ ಸ್ವಪಕ್ಷದ ಉಳಿದ ಎಲ್ಲರೊಂದಿಗೂ ಕೆ ಎಚ್ ಮುನಿಯಪ್ಪ ಅವರದ್ದು ವಿಷಮ ಸಂಬಂಧ.

ಮುನಿಯಪ್ಪ ಅವರ ಈ ‘ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌’ಗೆ ಬಲಿಯಾಗದ ಕೋಲಾರದ ಕಾಂಗ್ರೆಸ್‌ ಮುಖಂಡರೇ ಇಲ್ಲ ಎನ್ನುವ ಮಾತುಗಳಿವೆ. ಕೋಲಾರ ಜಿಲ್ಲೆಯಲ್ಲಿ ಮುನಿಯಪ್ಪ ಸ್ವಂತ ಪಕ್ಷದ ಯಾರ್‍ಯಾರ ಸೋಲಿಗೆ ಕಾರಣರಾಗಿದ್ದರು ಎನ್ನುವ ಆರೋಪ ಪಟ್ಟಿ ತಯಾರಿಸಿದ್ದ ಕೆಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿಗೆ ದೂರು ಸಲ್ಲಿಸಿದ್ದರು. 2009ರಲ್ಲಿ ಕಾಂಗ್ರೆಸ್‌ನ ಶ್ರೀನಿವಾಸಗೌಡ ಅವರಿಗೆ ವಿರುದ್ಧವಾಗಿ ಪಕ್ಷೇತರರಾಗಿದ್ದ ವರ್ತೂರು ಪ್ರಕಾಶ್ ಅವರನ್ನು ಮುನಿಯಪ್ಪ ಬೆಂಬಲಿಸಿ ಗೆಲ್ಲಿಸಿದ್ದರು. ಕೆಜಿಎಫ್‌ನಲ್ಲಿ ಬಿಜೆಪಿಯ ವೈ ಸಂಪಂಗಿ ಪರ ಕೆಲಸ ನಿರ್ವಹಿಸಿ ಕಾಂಗ್ರೆಸ್‌ನ ಶ್ರೀನಿವಾಸ್ ಸೋಲಿಗೆ ಕಾರಣರಾಗಿದ್ದರು.

2013ರಲ್ಲಿ ಕೋಲಾರ ಕ್ಷೇತ್ರದಿಂದ ನಸೀರ್ ಅಹಮದ್ ಅವರನ್ನು ನಿಲ್ಲುವಂತೆ ಪ್ರೇರೇಪಿಸಿದ್ದ ಮುನಿಯಪ್ಪ, ನಂತರ ಅವರ ವಿರುದ್ಧ ಕೆಲಸ ಮಾಡಿ ಅವರನ್ನು ಸೋಲಿಸಿದ್ದರು. ಇದೇ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ ಸಿ ಸಮೀರ್ ಅವರ ಸೋಲಿಗೂ ಕಾರಣ ಮುನಿಯಪ್ಪನವರೇ ಎನ್ನುವ ಮಾಹಿತಿ ಆರೋಪ ಪಟ್ಟಿಯಲ್ಲಿತ್ತು. ಇನ್ನು ರಮೇಶ್‌ ಕುಮಾರ್-ಮುನಿಯಪ್ಪ ನಡುವಿನ ಹಗೆತನ ರಾಜ್ಯ ರಾಜಕಾರಣದ ಬಹು ಚರ್ಚಿತ ವಸ್ತು. ಒಂದೇ ಪಕ್ಷದಲ್ಲಿದ್ದರೂ ಇವರ ನಡುವಿನ ಮನಸ್ತಾಪ ಪರಸ್ಪರ ದ್ವೇಷ ಕಾರುವ ಮಟ್ಟದಲ್ಲಿದೆ. 2004, 2008ರಲ್ಲಿ ಚಿಂತಾಮಣಿಯ ಕಾಂಗ್ರೆಸ್ ಶಾಸಕರಾಗಿದ್ದ ಡಾ ಎಂ ಸಿ ಸುಧಾಕರ್, ಮುನಿಯಪ್ಪ ಅವರಿಂದಾಗಿ 2013 ಮತ್ತು 2018ರಲ್ಲಿ ಕಾಂಗ್ರೆಸ್ ತ್ಯಜಿಸಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಈ ಸುದ್ದಿ ಓದಿದ್ದೀರಾ: ನಮ್ಮ ಸಿಎಂ | ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದ ಸಿದ್ದರಾಮಯ್ಯ

ಹೀಗೆ ರಮೇಶ್ ಕುಮಾರ್, ಸುಧಾಕರ್, ನಸೀರ್ ಅಹಮದ್, ಅನಿಲ್‌ಕುಮಾರ್, ನಂಜೇಗೌಡ, ಶ್ರೀನಿವಾಸ ಗೌಡ, ಕೊತ್ತೂರು ಮಂಜುನಾಥ್ ಮುಂತಾದ ಯಾರೊಂದಿಗೂ ಮುನಿಯಪ್ಪ ಸೌಹಾರ್ದಯುತ ಸಂಬಂಧ ಹೊಂದಿದವರೇ ಅಲ್ಲ. ಪ್ರತೀಕಾರವಾಗಿ, ಇವರೆಲ್ಲ ಸೇರಿಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಕೆ ಎಚ್ ಮುನಿಯಪ್ಪ ಅವರನ್ನು ಸೋಲಿಸಿದ್ದರು. ಕಾಡುಗೋಡಿಯ ಆಚೆಗೆ ಯಾರಿಗೂ ಗೊತ್ತಿರದಿದ್ದ ಮಾಜಿ ಕಾರ್ಪೊರೇಟರ್ ಮುನಿಸ್ವಾಮಿ ಕೆ ಎಚ್ ಮುನಿಯಪ್ಪ ಅವರ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು.  

ವಿಚಿತ್ರವೆಂದರೆ, ಕೋಲಾರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಮುನಿಯಪ್ಪ, ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಈ ಸಂಬಂಧ ಡಾ ಕೆ ಸುಧಾಕರ್, ಬೊಮ್ಮಾಯಿ ಮತ್ತಿತರನ್ನು ಭೇಟಿ ಮಾಡಿದ್ದರು. ತಮ್ಮ ಹುಟ್ಟೂರು ಶಿಡ್ಲಘಟ್ಟದ ಕಂಬದಹಳ್ಳಿಯ ಜಾತ್ರೆಗೆ ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಜೆಡಿಎಸ್‌ನ ಜೆ ಕೆ ಕೃಷ್ಣಾರೆಡ್ಡಿ ಎಲ್ಲರನ್ನೂ ತಮ್ಮ ಮನೆಯಲ್ಲಿ ಸೇರಿಸಿದ್ದರು. ಆದರೆ, ತಮ್ಮ ಪಕ್ಷದ ಯಾರೊಬ್ಬರನ್ನೂ ಆಹ್ವಾನಿಸಿರಲಿಲ್ಲ.      

ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನದ ಭರವಸೆ ಸಿಕ್ಕಿದ್ದರಿಂದಲೋ ಏನೋ, ಆಗ ಕೆ ಎಚ್ ಮುನಿಯಪ್ಪ ಪಕ್ಷ ತೊರೆಯಲಿಲ್ಲ. ಹಾಗೆಂದು ತಮ್ಮ ಸೋಲಿಗೆ ಕಾರಣರಾದವರನ್ನು ಅವರು ಸುಮ್ಮನೆ ಬಿಡಲೂ ಇಲ್ಲ. ಮುಖ್ಯವಾಗಿ ರಮೇಶ್ ಕುಮಾರ್ ವಿರುದ್ಧ ಪಕ್ಷದ ಪದಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೂ ಅವರ ವಿರುದ್ಧ ಯಾವ ಕ್ರಮವನ್ನೂ ಜರುಗಿಸಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಏಕವಚನದಲ್ಲಿಯೇ ಕೆಂಡ ಕಾರಿದ್ದರು ಎಂದು ಆಗ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈಗ ಅದೇ ಸಿದ್ದರಾಮಯ್ಯನವರ ಸಂಪುಟದಲ್ಲಿ ಕೆ ಎಚ್ ಮುನಿಯಪ್ಪ ಮಂತ್ರಿಯಾಗಿದ್ದಾರೆ. ದಲಿತ ಮೀಸಲು ಕ್ಷೇತ್ರದಲ್ಲಿ ಗೆದ್ದು ಮಾದಿಗ ಕೋಟಾದಲ್ಲಿ ಕೇಂದ್ರ ಸಚಿವ ಸೇರಿದಂತೆ ಹಲವು ಅಧಿಕಾರಗಳನ್ನು ಅನುಭವಿಸಿದ ಕೆ ಎಚ್ ಮುನಿಯಪ್ಪ, ತನ್ನ ಕ್ಷೇತ್ರಕ್ಕೆ, ರಾಜ್ಯಕ್ಕೆ, ತನ್ನ ನೊಂದ ಸಮುದಾಯಕ್ಕೆ ಮಾಡಿದ್ದೇನು ಎನ್ನುವುದನ್ನು ನೋಡಿದರೆ, ನಿರಾಶೆಯಾಗುತ್ತದೆ. 28 ವರ್ಷ ಕೋಲಾರದ ಸಂಸದರಾಗಿದ್ದ ಮುನಿಯಪ್ಪ ಎಂದೂ ಬಯಲು ಸೀಮೆ ಶಾಶ್ವತ ನೀರಾವರಿ ಹೋರಾಟಕ್ಕೆ ಹೆಗಲು ಕೊಡಲಿಲ್ಲ.

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಡಾ. ಎಂ ಸಿ ಸುಧಾಕರ್: ಅಹಂ ಹೆಚ್ಚು; ಕೆಲಸದಲ್ಲಿ ಅಚ್ಚುಮೆಚ್ಚು

ಒಮ್ಮೆ ಕೆ ಎಚ್ ಮುನಿಯಪ್ಪ ತನ್ನನ್ನು ಬಿಟ್ಟು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿದ್ದಕ್ಕಾಗಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ತನ್ನ ಸ್ವಂತಕ್ಕಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಲ್ಲ ಮುನಿಯಪ್ಪ, ತನ್ನ ಕ್ಷೇತ್ರ, ತನ್ನ ಸಮುದಾಯದ ಕಾರಣಕ್ಕಾಗಿ ಎಂದೂ ರಿಸ್ಕ್ ತೆಗೆದುಕೊಂಡವರಲ್ಲ. ಮಾದಿಗ ಕೋಟಾದಲ್ಲಿ ಸ್ಥಾನಮಾನ ಕೇಳುವ ಕೆ ಎಚ್ ಮುನಿಯಪ್ಪ, ತನ್ನ ಅಧಿಕಾರ, ಸ್ಥಾನಮಾನ ಬಳಸಿಕೊಂಡು ಮಾದಿಗ ಮೀಸಲಾತಿ ಹೋರಾಟವನ್ನು ತಮ್ಮದೇ ಸರ್ಕಾರವಿದ್ದಾಗಲೂ ತಾರ್ಕಿಕ ಅಂತ್ಯಕ್ಕೆ ಒಯ್ಯಲಿಲ್ಲ. ಆ ಹೋರಾಟದ ಗಟ್ಟಿ ಧ್ವನಿಯಾಗಿ ಹೊಮ್ಮಲಿಲ್ಲ.

ಕೆ ಎಚ್ ಮುನಿಯಪ್ಪ ವಿರುದ್ಧ ಹಿಂದೊಮ್ಮೆ ಕೆಲವು ದಲಿತ ಮುಖಂಡರೇ ‘ಮುನಿಯಪ್ಪ ಹಠಾವೋ ಕಾಂಗ್ರೆಸ್ ಬಚಾವೋ’ ಎಂಬ ಅಭಿಯಾನ ನಡೆಸಿದ್ದರು. ಸಂವಿಧಾನ ಕಲ್ಪಿಸಿದ ಸಾಮಾಜಿಕ ನ್ಯಾಯವನ್ನು ಮುನಿಯಪ್ಪ ಕೇವಲ ತನ್ನ ಕುಟುಂಬದ ಏಳಿಗೆಗೆ ಬಳಸಿಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ಕಾಲದಲ್ಲಿ ಕೇವಲ ನಾಲ್ಕು ಎಕರೆ ಜಮೀನು ಹೊಂದಿದ್ದ ಕೆ ಎಚ್ ಮುನಿಯಪ್ಪ, ನಂತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುಮಾರು 680 ಎಕರೆ ಜಮೀನು ಸಂಪಾದನೆ ಮಾಡಿದ್ದು ಹೇಗೆ ಎಂದು ದಾಖಲೆಗಳನ್ನು ಹಿಡಿದು ಪ್ರಶ್ನಿಸಿದ್ದರು; ಮುನಿಯಪ್ಪ ದಲಿತ ರಾಜಕಾರಣದ ಅನಪೇಕ್ಷಿತ ಮಾದರಿ ಎಂದು ಕರೆದಿದ್ದರು. ತಮ್ಮ ಮಗಳು ರೂಪಕಲಾ ಶಶಿಧರ್ ಅವರನ್ನು ಕೆಜಿಎಫ್ ಕ್ಷೇತ್ರದ ಶಾಸಕಿಯಾಗಿಸಿದ್ದಷ್ಟೇ ಅವರ ಸಾಧನೆ ಎನ್ನುವುದು ಅವರ ವಿರೋಧಿಗಳ ವಾದ.

ರಾಜಕೀಯ ಚಕ್ರ ಒಂದು ಸುತ್ತು ತಿರುಗಿ ಮಾಜಿ ಸಂಸದರಾಗಿದ್ದ ಮುನಿಯಪ್ಪ ಈಗ ರಾಜ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದಾರೆ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಸಿದ್ದರಾಮಯ್ಯ ಹೊರತುಪಡಿಸಿದರೆ ಸಂಪುಟದಲ್ಲಿರುವ ಎರಡನೇ ಅತ್ಯಂತ ಹಿರಿಯ ಮಂತ್ರಿಯಾಗಿರುವ ಕೆ ಎಚ್ ಮುನಿಯಪ್ಪ, ಕಾಂಗ್ರೆಸ್ ಆಡಳಿತದ ದೃಷ್ಟಿಯಿಂದ ಮತ್ತು ವೈಯಕ್ತಿಕ ರಾಜಕಾರಣದ ದೃಷ್ಟಿಯಿಂದ ನಿರ್ಣಾಯಕ ಸ್ಥಿತಿಯಲ್ಲಿದ್ದಾರೆ.          

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕೆ ಹೆಚ್ ಮುನಿಯಪ್ಪ ನವರ ವಿರುದ್ಧ ಆಪಾದನೆ ಮಾಡುತ್ತಿರುವ
    ದಲಿತ ಮುಖಂಡರು ಏನೂ ಇಲ್ಲದೇ ಬಂದವರು ಇಂದು ನೂರಾರು ಎಕರೆ ಜಮೀನು ಮಾಡಿಕೊಂಡಿದ್ದಾರೆ ಇವರ ಆದಾಯದ ಮೂಲ ಏನು? ಎಂಬುದನ್ನು ಜನತೆಗೆ ತಿಳಿಸಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ,...

ಬೀದರ್‌ | ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ...

ವಿಜಯಪುರ | ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆ ಅವ್ಯವಸ್ಥೆ ಸರಿಪಡಿಸುವಂತೆ ಡಿಎಸ್‌ಎಸ್‌ ಮನವಿ 

ವಿಜಯಪುರ ಜಿಲ್ಲೆಯ ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ...