ಚುನಾವಣೆ 2023 | ಮೈಸೂರು-ಚಾಮರಾಜನಗರ: ಮೊದಲ ಬಾರಿಗೆ ಗೆದ್ದಿದ್ದ ಎಂಟು ಶಾಸಕರ ಕತೆ ಈಗೇನು?

Date:

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 15 ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ಎಂಟು ಮಂದಿ ಹೊಸಬರು ಗೆದ್ದಿದ್ದರು. ಅವರೆಲ್ಲರೂ ತಮ್ಮ ಕ್ಷೇತ್ರಗಳನ್ನು ಮತ್ತೊಮ್ಮೆ ವಿಧಾನಸಭೆಯಲ್ಲಿ ಪ್ರತಿನಿಧಿಸಲು ಮುಂದಾಗಿದ್ದಾರೆ. ಅವರು ಸೋಲು-ಗೆಲುವಿನ ಹಾವು-ಏಣಿ ಆಟಕ್ಕೆ ಮತ್ತೊಮ್ಮೆ ಸಜ್ಜಾಗಿದ್ದಾರೆ. ಯಾರು ಗೆಲುತ್ತಾರೆ. ಯಾರು ಸೋಲುತ್ತಾರೆ. ಮತದಾರರು ಏನನ್ನು ನಿರ್ಣಯಿಸುತ್ತಾರೆ ಇವೆಲ್ಲವೂ ಸದ್ಯಕ್ಕೆ ಪ್ರಶ್ನೆಗಳೇ...!

2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚೊಚ್ಚಲ ಸ್ಪರ್ಧೆ ಹಾಗೂ ಮೊದಲ ಬಾರಿಗೆ ಎಂಟು ಮಂದಿ ಗೆಲುವು ಸಾಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. ಅವರೆಲ್ಲರೂ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಸ್ಪರ್ಧೆ ಪ್ರಶ್ನಾರ್ಥವೆನಿಸಿದೆ. ಅವರು ಪ್ರತಿನಿಧಿಸುತ್ತಿದ್ದ ವರುಣಾ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ.

ಮೈಸೂರು (11) ಮತ್ತು ಚಾಮರಾಜನಗರ (4) ಜಿಲ್ಲೆಗಳಲ್ಲಿ ಒಟ್ಟು 15 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಎಂಟು ಮಂದಿ ಹೊಸಬರು ಕಳೆದ ಚುನಾವಣೆಯಲ್ಲಿ ವಿಧಾನಸಭೆ ಆಯ್ಕೆಯಾಗಿದ್ದರು. 2018ರ ರಾಜಕೀಯ ಅಖಾಡದಲ್ಲಿ ವರುಣಾದಿಂದ ಯತೀಂದ್ರ ಮತ್ತು ಎಚ್‌ಡಿ ಕೋಟೆಯಲ್ಲಿ (ಎಸ್‌ಟಿ ಮೀಸಲು) ಅನಿಲ್‌ ಚಿಕ್ಕಮಾದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ತಮ್ಮ ಮೊದಲ ಸ್ಪರ್ಧೆಯಲ್ಲೇ ಗೆಲುವು ಸಾಧಿಸಿದ್ದರು. ಇನ್ನು ಬಿಜೆಪಿಯ ಎಲ್ ನಾಗೇಂದ್ರ (ಚಾಮರಾಜನಗರ), ಬಿ ಹರ್ಷವರ್ಧನ (ನಂಜನಗೂಡು-ಎಸ್‌ಸಿ ಮೀಸಲು), ಮತ್ತು ಸಿಎಸ್ ನಿರಂಜನ್ ಕುಮಾರ್ (ಗುಂಡ್ಲುಪೇಟೆ), ಜೆಡಿಎಸ್‌ನಿಂದ ಕೆ ಮಹದೇವ (ಪಿರಿಯಾಪಟ್ಟಣ) ಮತ್ತು ಅಶ್ವಿನ್ ಕುಮಾರ್ (ಟಿ ನರಸೀಪುರ), ಬಿಎಸ್‌ಸಿಯಿಂದ ಸ್ಪರ್ಧಿಸಿ ಸದ್ಯ ಬಿಜೆಪಿಯಲ್ಲಿರುವ ಎನ್‌ ಮಹೇಶ್‌ (ಕೊಳ್ಳೇಗಾಲ) ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲೇರಿದ್ದರು.

ಇದೀಗ, ಮತ್ತೊಮ್ಮೆ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ವರುಣಾ ಕ್ಷೇತ್ರ ರಚನೆಯಾದ ಬಳಿಕ ಆ ಕ್ಷೇತ್ರವನ್ನು ಎರಡು ಬಾರಿ ಸ್ಪರ್ಧಿಸಿ, 2018ರ ಚುನಾವಣೆಯಲ್ಲಿ ಮಗನಿಗೆ (ಯತೀಂದ್ರ) ಜಾಗ ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಮತ್ತೆ ವರುಣಾಗೆ ಮರಳಿದ್ದಾರೆ. ಹೀಗಾಗಿ, ಯತೀಂದ್ರ ಕತೆ ಏನು ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ. ಉಳಿದಂತೆ, ಅನಿಲ್‌ ಕುಮಾರ್‌ ಅವರಿಗೆ ಎಚ್‌ಡಿ ಕೋಟೆಯಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಟಿಕೆಟ್‌ ನೀಡಿದೆ.

ಸದ್ಯ ನಂಜನಗೂಡು ಕ್ಷೇತ್ರವನ್ನು ಬಿಜೆಪಿ ಶಾಸಕ ಬಿ ಹರ್ಷವರ್ಧನ್ ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ್‌ ಅವರು ಹಠಾತ್ ನಿಧನರಾದರು. ಈ ಹಿನ್ನೆಲೆಯಲ್ಲಿ ಅನುಕಂಪದ ಅಲೆಯನ್ನು ಎಳೆದುಕೊಳ್ಳಲು ಧ್ರುವನಾರಾಯಣ್‌ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ನಂಜನಗೂಡಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಹೀಗಾಗಿ, ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಹರ್ಷವರ್ಧನ್‌ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಕಠಿಣ ಸವಾಲು ಎದುರಾಗಿದೆ.

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯ ಎಲ್ ನಾಗೇಂದ್ರ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದರು. ಈ ಬಾರಿಯೂ ಅವರೇ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ, ಕಳೆದ ಬಾರಿಯಂತೆ ಮತ್ತೆ ಗೆಲುವು ಸಾಧಿಸುವುದು ಅಷ್ಟು ಸುಲಭವಾಗಿಲ್ಲ. ಚಾಮರಾಜದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಪೈಪೋಟಿ ಒಡ್ಡಲು ಸಜ್ಜಾಗಿವೆ.

ಗುಂಡ್ಲುಪೇಟೆಯಲ್ಲಿ ಹಾಲಿ ಬಿಜೆಪಿ ಶಾಸಕ ಸಿಎಸ್‌ ನಿರಂಜನ್‌ಕುಮಾರ್‌ ವಿರುದ್ಧ ಕಾಂಗ್ರೆಸ್‌ ಮಾಜಿ ಸಚಿವ ಎಚ್‌ ಎಸ್‌ ಮಹದೇವಪ್ರಸಾದ್‌ ಪುತ್ರ ಎಚ್‌ ಎಂ ಗಣೇಶ್‌ ಪ್ರಸಾದ್‌ ಕಣಕ್ಕಿಳಿದಿದ್ದಾರೆ. ಈ ಬಾರಿ ಮತದಾರರು ಕಾಂಗ್ರೆಸ್‌ನತ್ತ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ. ಆ ಕ್ಷೇತ್ರದಲ್ಲಿ ಮುಂದೇನಾಗಬಹುದು ಎಂಬುದನ್ನು ಕಾದುನೋಡಬೇಕಿದೆ.

ಜೆಡಿಎಸ್ ಶಾಸಕ ಕೆ ಮಹದೇವ ಮತ್ತು ಅಶ್ವಿನ್ ಕುಮಾರ್ ಅವರು ಪಿರಿಯಾಪಟ್ಟಣ ಮತ್ತು ಟಿ ನರಸೀಪುರದಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕೂಡ ಭಾರೀ ಪೈಪೋಟಿ ನೀಡಲಿದೆ. ಆದರೂ, ಅವರಿಬ್ಬರೂ ಮತ್ತೊಮ್ಮೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕರ್ನಾಟಕ ಚುನಾವಣೆ | ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಐತಿಹಾಸಿಕ ನಾಯಕರೇ ದಾಳ

ಸದ್ಯ ಬಿಜೆಪಿಯಲ್ಲಿರುವ ಎನ್‌ ಮಹೇಶ್‌, ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ, ಜೆಡಿಎಸ್‌ ಬೆಂಬಲ ಪಡೆದು ಗೆಲುವು ಸಾಧಿಸಿದ್ದರು. ಈ ಬಾರಿ ಅವರು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ದಲಿತ ನಾಯಕನಾಗಿ ಬೆಳೆದು, ದಲಿತ ಪ್ರತಿನಿಧಿಯಾಗಿ ವಿಧಾನಸಭೆ ಮೆಟ್ಟಿಲೇರಿದ್ದ ಮಹೇಶ್‌, ಕೋಮು ರಾಜಕಾರಣ ಮಾಡುತ್ತಿರುವ ಬಿಜೆಪಿಯ ಕೇಸರಿ ತಿಲಕ ಇಟ್ಟುಕೊಂಡಿದ್ದಾರೆ. ಅವರಿಗೆ ಕ್ಷೇತ್ರದ ಜನರು ಮತ್ತೆ ಮಣೆ ಹಾಕಲಾರರು ಎಂಬ ಮಾತುಗಳೂ ಕೇಳಿಬರುತ್ತಿವೆ.

ಸದ್ಯ ಯತೀಂದ್ರ ಅವರು ಈ ಬಾರಿ ಚುನಾವಣೆಯಲ್ಲಿ ಬೇರೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವರೇ ಅಥವಾ ತಮ್ಮ ಕ್ಷೇತ್ರದಲ್ಲಿ ತನ್ನ ತಂದೆ ಸಿದ್ದರಾಮಯ್ಯಗಾಗಿ ದುಡಿಯುವರೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಯತೀಂದ್ರ ಹೊರತುಪಡಿಸಿ ಉಳಿದ ಏಳು ಮಂದಿ ಶಾಸಕರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮತ್ತೆ, ತಮ್ಮ ಪ್ರತಿನಿಧಿಯಾಗಿ ವಿಧಾನಸಭೆಯ ಮೆಟ್ಟಿಲೇರಲು ಅವಕಾಶ ಕೊಡುತ್ತಾರೆಯೇ? ಅಥವಾ ಒಂದು ಬಾರಿ ಪ್ರತಿನಿಧಿಸಿದ್ದೇ ಸಾಕು ಎನ್ನುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೂ ಚುನಾವಣಾ ಕಣ ಉತ್ತರ ನೀಡಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಯುವತಿಗೆ ಕಿರುಕುಳ ನೀಡಿದವನಿಗೆ ಚಪ್ಪಲಿ ಏಟು

ತನ್ನನ್ನು ಹಿಂಬಾಲಿಸಿ ಬಂದು ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಯುವತಿಯೊಬ್ಬಳು ಯುವಕನಿಗೆ ಚಪ್ಪಲಿಯಿಂದ...

ಬಳ್ಳಾರಿ | ʼಕೈಗಾರಿಕೆ ಆರಂಭಿಸಿ, ಇಲ್ಲವೇ ಭೂಮಿ ಬಿಡಿʼ; ಸಂತ್ರಸ್ತ ರೈತರ ಹೋರಾಟ

ಬಿಎಸ್‌ಎಎಲ್ ಸ್ಟೀಲ್ ಕೈಗಾರಿಕೆಗಾಗಿ 1995 ಹಾಗೂ 1998ರಲ್ಲಿ ಭೂಮಿ ಕಳೆದುಕೊಂಡು ವಂಚನೆಗೊಳಗಾಗಿರುವ...

ಬಿಜೆಪಿ ಆತ್ಮಾವಲೋಕನ : ಕೆ ಸುಧಾಕರ್ ಕುಯಿಲು, ಎಂಟಿಬಿ ಹುಯಿಲು!

ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆ. ಸುಧಾಕರ್...

ಧಾರವಾಡ | ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್; ಯುವಕನ ಬಂಧನ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಯುವಕನನ್ನು...