ಏಕಪಕ್ಷೀಯ ನಿರ್ಧಾರ ಕೈಗೊಂಡು, ಎಸ್‌ಐಆರ್ ಮೂಲಕ ಚುನಾವಣಾ ಅಕ್ರಮಗಳನ್ನು ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಸದ್ಯ ದೇಶಾದ್ಯಂತ ಆಗ್ರಹ ಕೇಳಿಬರುತ್ತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಮುಂದಾದ ಹಲವು ಮಂದಿಯ ಮೇಲೆ, ಮುಖ್ಯವಾಗಿ ಹೆಣ್ಣುಮಕ್ಕಳ ಮೇಲೆ ಆರ್‌ಎಸ್‌ಎಸ್-ಬಿಜೆಪಿ ಗೂಂಡಾಗಳು ದೌರ್ಜನ್ಯ ಎಸಗಿದ್ದಾರೆ. ಈ ಗೂಂಡಾಗಿರಿಯನ್ನು ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಾಗೃತ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಹಲವು ಜೆನ್-ಝೀಗಳು ಗೂಂಡಾಗಿರಿಯನ್ನು ಖಂಡಿಸಿದರು, ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಜಾಗೃತ ಕರ್ನಾಟಕ ಮುಖಂಡ ಮುತ್ತುರಾಜ್, “ಮೋದಿ ಸರ್ಕಾರ ಗೆದ್ದು ಬಂದ ಸರ್ಕಾರವಲ್ಲ, ವೋಟು ಕದ್ದು ಬಂದ ಸರ್ಕಾರ. ಇವರು ನಿಜವಾಗಿಯೂ ಗೆದ್ದು ಬಂದಿದ್ದರೆ ಜನರ ಪ್ರತಿಭಟನೆಗೆ ಹೆದರುವ ಅಗತ್ಯವಿರಲಿಲ್ಲ. ರೈಲುಗಳನ್ನು, ಮೆಟ್ರೋಗಳನ್ನು ಬಂದ್ ಮಾಡಬೇಕಾಗಿರಲಿಲ್ಲ. ಇಂಟರ್‌ನೆಟ್ ಅನ್ನು ಸ್ಥಗಿತ ಮಾಡಬೇಕಾಗಿರಲಿಲ್ಲ. ಆದರೆ ಅವರು ಎಸ್‌ಐಆರ್ ಎಂಬ ಸಂವಿಧಾನ ವಿರೋಧಿ, ಅವೈಜ್ಞಾನಿಕ ಪ್ರಕ್ರಿಯೆ ನಡೆಸಿ ಚುನಾವಣೆಯನ್ನು ಕದ್ದು ಅಧಿಕಾರದಲ್ಲಿದ್ದಾರೆ. ಹಾಗಾಗಿ ಈ ಎಸ್‌ಐಆರ್‌ನ ಎಲ್ಲ ಕುತಂತ್ರಗಳು ಬಯಲಿಗೆ ಬಂದಾಗ, ಯುವ ಜನರು ಸಿಇಸಿ ಗ್ಯಾನೇಶ್ ಕುಮಾರ್ ಅವನ್ನು ಕಿತ್ತು ಹಾಕಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾಗ ಮೋದಿ ಸರ್ಕಾರ ಹೆದರಿಕೊಂಡಿದೆ” ಎಂದು ಟೀಕಿಸಿದರು.
ಇದನ್ನೂ ಓದಿ: SIR | ಬದುಕಿದ್ದವರನ್ನೂ ಸತ್ತರೆಂದು ನಕಲಿ ದಾಖಲೆ ಸಲ್ಲಿಸಿದ ಯತ್ನಾಳ್: ಎಫ್‌ಐಆರ್ ದಾಖಲು
“ಆ ಯುವಜನರನ್ನು ಹತ್ತಿಕ್ಕಲು ಬಿಜೆಪಿ-ಆರ್‌ಎಸ್‌ಎಸ್ ಗೂಂಡಾಗಳನ್ನು ಕರೆಸಿ ಅವರ ಮೂಲಕ ಅಮಾನುಷವಾಗಿ ಥಳಿಸುತ್ತಿದೆ. ಅಕ್ಟೋಬರ್ 8ರಂದು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ನಮ್ಮ ಯುವಜನರು, ಹೆಣ್ಣುಮಕ್ಕಳ ಮೇಲೆ ಈ ಆರ್‌ಎಸ್‌ಎಸ್-ಬಿಜೆಪಿ ಗೂಂಡಾಗಳು ದೌರ್ಜನ್ಯ ಎಸಗಿದ್ದಾರೆ. ಅದನ್ನು ಖಂಡಿಸಿ ನಾವಿಲ್ಲಿ ಪ್ರತಿಭಟಿಸುತ್ತಿದ್ದೇವೆ” ಎಂದು ಹೇಳಿದರು.
“ಮೋದಿ, ಅಮಿತ್ ಶಾ, ಗ್ಯಾನೇಶ್ ಕುಮಾರ್ ಅವರಿಗೆ ಈ ಮೂಲಕ ನೇರ ಎಚ್ಚರಿಕೆ ನೀಡಲಾಗುತ್ತಿದೆ. ನೀವು ಚುನಾವಣೆಗಳನ್ನು ಕದಿಯುತ್ತಿರುವುದು ನಮಗೆ ಗೊತ್ತಾಗಿದೆ. ಇನ್ನು ಮುಂದೆ ನಿಮ್ಮ ಆಟ ನಡೆಯದು. ಜನರು ಎಚ್ಚೆತ್ತುಕೊಂಡಿದ್ದಾರೆ. ಜನರ ಪ್ರತಿಭಟನೆಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ, ಜನರ ಮಾತುಗಳನ್ನು ಕೇಳಿಸಿಕೊಳ್ಳಿ. ನಿಮ್ಮ ಮನ್ ಕಿ ಬಾತ್ (ಮನದ ಮಾತು) ಸಾಕಾಗಿದೆ. ಜನರ ಮಾತುಗಳನ್ನು ನೀವು ಕೇಳಿಸಿಕೊಳ್ಳದಿದ್ದರೆ ಜನರು ನಿಮ್ಮನ್ನು ಕಿತ್ತು ಒಂದೇ ಕ್ಷಣದಲ್ಲಿ ಎಸೆಯುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಇನ್ನು ವಕೀಲೆ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಆರ್‌ಎಸ್‌ಎಸ್-ಬಿಜೆಪಿ ಗೂಂಡಾಗಳು ಎನ್ನುವುದಕ್ಕಿಂತ ಅವರು ನೇಮಿಸಿದ ಬಾಡಿಗೆ ಟಟ್ಟೂಗಳು (ಸಣ್ಣ ತಳಿಯ ಕುದುರೆ) ಇವರು. ನಿಷೇದಾಜ್ಞೆ ಇದೆ ಐದಾರು ಜನ ಒಟ್ಟು ಸೇರುವಂತಿಲ್ಲ ಎಂದು ದೆಹಲಿ ಪೊಲೀಸರು ಹೇಳಿದರು. ಆದರೆ ಒಬ್ಬೊಬ್ಬರು ಬಂದರೂ ಅವರನ್ನು ಎತ್ತಿ ತಮ್ಮ ವಶಕ್ಕೆ ಪಡೆದು ಕಸ್ಟಡಿ ಬಸ್‌ಗಳಿಗೆ ಹಾಕುತ್ತಿದ್ದರು. ಆದರೆ ಅಂತಹ ಜಾಗದಲ್ಲಿ ಗುಂಪಾಗಿ ಬಂದ ಗೂಂಡಾಗಳನ್ನು ಪೊಲೀಸರು ಹಾಗೆಯೇ ಬಿಡುತ್ತಿದ್ದಾರೆ. ಕೇಸರಿ ಶಾಲು ಹಾಕಿ, ಕೈಯಲ್ಲಿ ಲಾಠಿ ಹಿಡಿದವರಿಗೆ ಜಂತರ್ ಮಂತರ್ ಒಳಗೆ ಹೋಗಲು ಪೊಲೀಸರು ಬಿಡುತ್ತಿದ್ದಾರೆ” ಎಂದು ದೂರಿದರು.
“ದೆಹಲಿಯಲ್ಲಿ ಪೊಲೀಸ್ ಇಲಾಖೆ ಕೇಂದ್ರದ ಅಡಿಯಲ್ಲಿ ಬರುತ್ತದೆ. ಹಾಗಾಗಿ ಇದು ಸಂಪೂರ್ಣವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ನಡೆದಿರುವ ದಾಳಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಂದ ಸಣ್ಣ ಸಣ್ಣ ಮಕ್ಕಳ ಮೇಲೆ ದಾಳಿ ನಡೆದಿದೆ. ಇದರಂತಹ ಪ್ರಜಾಪ್ರಭುತ್ವ ವಿರೋಧಿ ನಡೆ ಬೇರೆ ಯಾವುದೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಜಾಗೃತ ಕರ್ನಾಟಕದ ನಾಯಕಿ ಸೀತಾಲಕ್ಷ್ಮೀ ಮಾತನಾಡಿ, “ಎಸ್ಐಆರ್ ಮೂಲಕ ಹಲವಾರು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಯಾವುದೇ ಪ್ರಜಾತಾಂತ್ರಿಕ ವ್ಯವಸ್ಥೆಯ ಮೂಲಕ ನಡೆದಿಲ್ಲ. ಇವೆಲ್ಲವನ್ನೂ ಖಂಡಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದ ಹೆಣ್ಣುಮಕ್ಕಳ ಮೇಲೆ ದೆಹಲಿ ಪೊಲೀಸರು ಯಾವ ರೀತಿ ದೌರ್ಜನ್ಯ ನಡೆಸಿದ್ದಾರೆ ಎಂಬುದನ್ನು ಇಡೀ ದೇಶವೇ ನೋಡಿದೆ. ದೆಹಲಿ ಪೊಲೀಸರು, ಪೊಲೀಸರ ವೇಷದಲ್ಲಿ ಬಂದಂತಹ ಬಿಜೆಪಿ, ಆರ್‌ಎಸ್‌ಎಸ್ ಗೂಂಡಾಗಳು ಈ ಹಲ್ಲೆ ನಡೆಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ” ಎಂದು ತಿಳಿಸಿದರು.




