ಸಾವರ್ಕರ್ ಯಾರು? ಪಾರ್ಲಿಮೆಂಟ್‌ನಲ್ಲಿ ಗಾಂಧಿ ಪೋಟೋಗೆ ಎದುರಾಗಿ ಸಾವರ್ಕರ್ ಫೋಟೋ ಇಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರವೇನು? ದೇಶಕ್ಕೆ ಆತನ ಕೊಡುಗೆ ಏನು? ಆತನ ಹಿಂದು ಮಹಾಸಭಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಅಸಹಾಕಾರ ಚಳುವಳಿಯಿಂದ ದೂರ ಉಳಿಯಲು ನಿರ್ಧರಿಸಿತ್ತು. ಆತನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಯಲು ಸಾಧ್ಯವೇ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಬೆಂಗಳೂರಿನಲ್ಲಿ ಕ್ರಿಯಾ ಮಾಧ್ಯಮ ಆಯೋಜಿಸಿದ್ದ ‘ವಿ.ಡಿ ಸಾವರ್ಕರ್ – ಏಳು ಮಿಥ್ಯೆಗಳು’ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಆರ್‌ಎಸ್‌ಎಸ್ ಸಂಸ್ಥಾಪಕ ಹೆಗಡೆವಾರ್‌ಗೆ ಸಾವರ್ಕರ್ ಪ್ರೇರಣೆ. ಅವರೆಲ್ಲರಿಗೂ ಇಟಲಿಯಲ್ಲಿದ್ದ ಮೂಂಜೆ ಆದರ್ಶನಾಗಿದ್ದ. ಸಂಘಪರಿವಾರದವರು ಕಾಂಗ್ರೆಸ್ಸಿಗರನ್ನು ಇಟಲಿ ಪ್ರಭಾವಿತರು ಎನ್ನುತ್ತಾರೆ. ಮೂಲದಲ್ಲಿ ಅವರೇ ಇಟಲಿಯಿಂದ ಪ್ರಭಾವಿತರಾಗಿದ್ದಾರೆ” ಎಂದರು.
“ದೇಶಕ್ಕೆ ಸ್ವಾತ್ಯಂತ್ರ್ಯ ಬಂದು 75 ವರ್ಷಗಳಾಗಿವೆ. ಸುಮಾರು ವರ್ಷಗಳ ಕಾಲ ಧರ್ಮ ಪ್ರಭುತ್ವ, ರಾಜ ಪ್ರಭುತ್ವ ಈ ದೇಶವನ್ನು ಆಳಿವೆ. ಧರ್ಮ ಮತ್ತು ರಾಜ ಪ್ರಭುತ್ವದಲ್ಲಿ ಧರ್ಮವು ಹೆಚ್ಚಾಗಿ ಆಳ್ವಿಕೆ ನಡೆಸುತ್ತಿತ್ತು. ರಾಜ ಯುದ್ಧ ಗೆದ್ದಾಗ, ಸಿಂಹಾಸನ ಏರುವಾಗ ಪುರೋಹಿತರು ಪೂಜೆ ಮಾಡುತ್ತಿದ್ದರು. ರಾಜ ‘ಹಂ ದಂಡೋಸ್ಮಿ’ ಎನ್ನುತತ್ತಿದ್ದ. ಅವರ ತಲೆ ಮೇಲೆ ಪುರೋಹಿತರು ದಂಡವಿಟ್ಟು, ‘ಧರ್ಮ ದಂಡೋಸ್ಮಿ’ ಎನ್ನುತ್ತಿದ್ದರು. ನನ್ನನು ಯಾರೂ ದಂಡಿಸಲು ಸಾಧ್ಯವಿಲ್ಲವೆಂದು ರಾಜ ಹೇಳಿದರೆ, ಧರ್ಮ ನಿನ್ನನ್ನು ದಂಡಿಸುತ್ತದೆ ಎಂದು ಪುರೋಹಿತರು ಹೇಳುತ್ತಿದ್ದರು” ಎಂದು ತಿಳಿಸಿದರು.
“ಗಾಂಧಿ ಅವರು ಕೋಲ್ತತ್ತಾದಲ್ಲಿ ವೈಸ್‌ರಾಯ್‌ನ ಭೇಟಿ ಮಾಡಲು ತೆರಳಿದ್ದಾಗ, ಅಲ್ಲಿ ದೇಶದ ನಾನಾ ರಾಜರು ನಿಂತಿದ್ದರು. ಅವರನ್ನ ಗಾಂಧಿ, ‘ರಾಜ, ಮಹಾರಾಜರು ಹೇಗೆ ಕಾಣುತ್ತಿದ್ದಾರೆ’ ಎಂದು ಟೀಕಿಸಿದ್ದರು. 1937ರಲ್ಲಿ ನಡೆದ ಚುನಾವಣೆಯಲ್ಲಿ ಹಿಂದು ಮಹಾಸಭಾ, ಕಾಂಗ್ರೆಸ್, ಮುಸ್ಲಿಂ ಲೀಗ್ ಸ್ಪರ್ಧೆಯಲ್ಲಿದ್ದವು. ಆಗ ದೇಶದ ಎಲ್ಲ ಸಮುದಾಯದ ಜನರು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಕಾಂಗ್ರೆಸ್ಸಿಗರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂದರೆ ತಪ್ಪಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವಾರು ನಾಯಕರು ಹೋರಾಟ ಮಾಡಿದ್ದಾರೆ” ಎಂದರು.
“ಸದನಗಳಲ್ಲಿ ಸಂವಿಧಾನ ರಚನೆ ಬಗ್ಗೆ ಚರ್ಚೆಯಾಗುವಾಗ ಪೀಠಿಕೆಯಲ್ಲಿ ಧರ್ಮವನ್ನ ಸೇರಿಸಬೇಕೆಂದು ಕರ್ನಾಟಕದ ಮಂಗಳೂರಿನ ಕಾಮತ್ ಎಂಬವರು ವಾದ ಮಂಡಿಸಿದ್ದರು. ಅದನ್ನ ಬಲವಾಗಿ ವಿರೋಧಿಸಿದವರು ಆಚಾರ್ಯ ಕ್ರಿಪ್ಲಾನ್. ಅವರು ದೇಶದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ. ಎಲ್ಲ ಧರ್ಮ, ದೇವರ ಹೆಸರನ್ನು ಸೇರಿಸಲು ಸಾಧ್ಯವಿಲ್ಲ. ಪೀಠಿಕೆಯಲ್ಲಿ ‘ಭಾರತದ ಪ್ರಜೆಗಳಾದ ನಾವು’ ಎಂಬುದನ್ನು ಸೇರಿಸಬೇಕೆಂದಿ ಆಚಾರ್ಯ ಕ್ರಿಪ್ಲಾನ್ ಬಲವಾಗಿ ಪ್ರತಿಪಾದಿಸಿದರು” ಎಂದು ತಿಳಿಸಿದರು.
“ಪ್ರಬಲ ಜಾತಿಗರು ಕ್ಷೂದ್ರನ ಮೇಲೆ ದೌರ್ಜನ್ಯ ಎಸಗಿದರೆ, ಅವರನ್ನು ಬೈದು ಬಿಟ್ಟುಬಿಡಬೇಕು. ಅದೇ ಕ್ಷೂದ್ರನಿಂದ ಪ್ರಬಲ ಜಾತಿಗರಿಗೆ ಅಪಮಾನವಾದರೆ, ಅವರನ್ನು ಗಲ್ಲಿಗೇರಿಸಬೇಕೆಂದು ಮನುಸ್ಕೃತಿ ಹೇಳುತ್ತದೆ. ಮಹಿಳೆಯರು, ದಲಿತರು, ಕ್ಷೂದ್ರದನ್ನು ಶೋಷಿಸುವುದೇ ಮನುಸ್ಕೃತಿಯ ಜೀವಾಳ” ಎಂದು ಹೇಳಿದರು.
“ಉತ್ತರ ಭಾರತಕ್ಕೆ ಹೋಲಿಕೆ ಮಾಡಿ ನೋಡಿದರೆ, ದಕ್ಷಿಣ ಭಾರತ 200 ವರ್ಷ ಮುಂದಿದೆ. ಗುಜರಾತ್, ಮಹಾರಾಷ್ಟ್ರಕ್ಕೆ ಹೋಲಿಸಿದರೆ, ನಾವು 50 ವರ್ಷ ಮುಂದಿದ್ದೇವೆ. ಯಾಕೆಂದರೆ, ದಕ್ಷಿಣ ಭಾರತದಲ್ಲಿ ಬಸವಣ್ಣ, ಪೆರಿಯಾರ್, ಫುಲೆ, ಅಂಬೇಡ್ಕರ್, ವೇಮನ ಸೇರಿದಂತೆ ಹಲವಾರು ಮಹನೀಯರು ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ಅವರೆಲ್ಲರ ಪರಿಶ್ರಮದಿಂದ ನಾವು ಮುಂದಿದ್ದೇವೆ. ಇಂದಿಗೂ ಉತ್ತರದಲ್ಲಿ ನಾನಾ ಮೂಲ ಸೌಲಭ್ಯಗಳ ಕೊರತೆ ಹೇರಳವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಬ್ರಿಟಿಷರಿಗೆ ಸಹಾಯ ಮಾಡಿದ್ದ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವೇ: ಸುರೇಂದ್ರ ರಾವ್
“ಹಿಂದಿ ಮಾತನಾಡುವ ಭಾಗಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಧ್ಯಪ್ರದೇಶದಲ್ಲಿ 2013ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಎಫ್‌ಐಆರ್ ಕೂಡ ದಾಖಲಿಸುವಲ್ಲಿ ಪೊಲೀಸರು ಹಿಂದೇಟು ಹಾಕಿದ್ದರು. ಕಾರಣವಿಷ್ಟೇ, ಆರೋಪಿಗಳು ಪ್ರಬಲ ಜಾತಿಯವರಾಗಿದ್ದರು. ಇನ್ನು, ಬಿಲ್ಕೀಸ್ ಬಾನೋ ಪ್ರಕರಣದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಗೋದ್ರಾ ಹತ್ಯಾಕಾಂಡವನ್ನು ನಾವು ಮರೆಯಲು ಸಾಧ್ಯವಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ತಡಗಡಲೆ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಶಂಕುಲ್ ಇಸ್ಲಾಂ, ಡಾ. ಕೆ ಪ್ರಕಾಶ್ ಇದ್ದರು.