“ಇದು ಸಂವಿಧಾನದ ಉಳಿವು–ಅಳಿವಿನ ಪ್ರಶ್ನೆ, ಪ್ರಜಾಪ್ರಭುತ್ವದ ಪ್ರಶ್ನೆ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ ಹೋರಾಟ. ಜನರು ಬೀದಿಗಿಳಿದು ಪ್ರತಿರೋಧ ವ್ಯಕ್ತಪಡಿಸಬೇಕು” ಎಂದು ಬಹುಭಾಷಾ ನಟ ಪ್ರಕಾಶ್ ರೈ ಕರೆ ನೀಡಿದರು.
ಜನಪರ ಸಂಘಟನೆಗಳ ನೇತೃತ್ವದಲ್ಲಿ ಫ್ಯಾಶಿಸ್ಟ್ ಶಕ್ತಿಗಳ ದಬ್ಬಾಳಿಕೆಯ ವಿರುದ್ಧ, ರಾಜ್ಯ ಮಟ್ಟದ ಬೃಹತ್ ಪ್ರತಿರೋಧ ಸಮಾವೇಶದ ರ್ಯಾಲಿಯನ್ನು ಧಾರವಾಡ ಪಟ್ಟಣದ ಡಾ.ಎಮ್.ಎಮ್ ಕಲಬುರ್ಗಿ ಅವರ ನಿವಾಸದಿಂದ ಆರ್. ಎನ್ ಶೆಟ್ಟಿ ಕ್ರೀಡಾಂಗಣದವರೆಗೂ ಬೈಕ್ ರ್ಯಾಲಿ ನಡೆಸಿ, ಅಲ್ಲಿಂದ ಸಮಾವೇಶ ನಡೆಯುವ ವೇದಿಕೆ ವರೆಗೂ ‘ಪ್ರಜಾಪ್ರಭುತ್ವ ಉಳಿಯಲಿ, ಫ್ಯಾಶಿಸ್ಟ್ ಅಳಿಯಲಿ’ ಘೋಷವಾಕ್ಯ ಕೂಗುತ್ತ ಜಾಥಾ ನಡೆಸಿದರು. ಸಮಾವೇಶವನ್ನು ಸಂವಿಧಾನ ಪೂರ್ವ ಪೀಠಿಕೆ ಓದುವುದರ ಮೂಲಕ ಆರಂಭವಾಯಿತು. ನಂತರ ಪ್ರಕಾಶ್ ರೈ ಅವರು ಮಾತನಾಡಿದರು.
“ಎಸ್‌ಐಆರ್ ಕೇವಲ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕುತಂತ್ರವಲ್ಲ; ಅದಕ್ಕಿಂತಲೂ ದೊಡ್ಡ ಪರಿಣಾಮ ಬೀರುವ ಪ್ರಕ್ರಿಯೆಯಾಗಿದೆ ಎಂಬ ಆತಂಕವಿದೆ. ಜನರ ಹಕ್ಕುಗಳನ್ನು ರಕ್ಷಿಸಲು ಪ್ರತಿಭಟನೆ ನಡೆಸುವುದು, ಈ ಘಳಿಗೆಯ ಅಗತ್ಯವಾಗಿದೆ. ಜನರೊಂದಿಗೆ ಬೀದಿಗಿಳಿಯಬೇಕು. ಬಡವರು, ಅಲ್ಪಸಂಖ್ಯಾತರು ಹಾಗೂ ದನಿ ಇಲ್ಲದವರ ಪರವಾಗಿ ಧ್ವನಿಯಾಗಬೇಕು” ಎಂದರು.
ಪ್ರತಿಭಟನಾ ಸಮಾವೇಶದ ಪ್ರಾಸ್ತಾವಿಕವಾಗಿ ಬಸವರಾಜ ಸುಳಿಬಾವಿ ಮಾತನಾಡಿ, “ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಸಮಾಜದ ಸಾಮರಸ್ಯವನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇವುಗಳ ವಿರುದ್ಧ ಈ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದರು.
ಸಾಹಿತಿ ಕು.ವೀರಭದ್ರಪ್ಪ ಮಾತನಾಡಿ, “ಫ್ಯಾಸಿಸಂ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಧಾರವಾಡ ಎಂದರೆ ಚಳವಳಿಗಳ ನೆಲ. ನಮ್ಮನ್ನು ಲೇಖಕರನ್ನಾಗಿ, ಚಿಂತಕರನ್ನಾಗಿ ರೂಪಿಸಿದ ನಗರವೂ ಇದೇ. ಜನವಿರೋಧಿ ಶಕ್ತಿಗಳ ವಿರುದ್ಧ ನಿರಂತರವಾಗಿ ಪ್ರತಿರೋಧ ವ್ಯಕ್ತಪಡಿಸಬೇಕಿದೆ” ಎಂದರು.
ಸಾಹಿತಿ ಹಾಗೂ ಪತ್ರಕರ್ತ ದಿನೇಶ್ ಅಮೀನಮಟ್ಟು ಮಾತನಾಡಿ, “ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಯಿತು. ಇಂದು ನ್ಯಾಯಾಲಯಗಳಲ್ಲಿಯೂ ಕಾನೂನಿನ ಹತ್ಯೆಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟ ಫ್ಯಾಸಿಸಂ ವಿರುದ್ಧವಾಗಿದೆ. ಆರ್‌ಎಸ್‌ಎಸ್‌ನಲ್ಲಿ ಏಕೆ ಚುನಾವಣೆಗಳು ನಡೆಯುವುದಿಲ್ಲ? ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆದಾಗ ಆರ್‌ಎಸ್‌ಎಸ್‌ನವರು ಏಕೆ ಪ್ರಶ್ನಿಸುವುದಿಲ್ಲ?” ಎಂದು ಪ್ರಶ್ನಿಸಿದರು.
ಮೀನಾಕ್ಷಿ ಬಾಳಿ ಮಾತನಾಡಿ, “ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಅವುಗಳ ಚಿಂತನೆಗಳ ವಿರುದ್ಧವೂ ಹೋರಾಡಬೇಕಿದೆ. ಅಂತರಂಗದಲ್ಲಿರುವ ಫ್ಯಾಸಿಸಂ ಅನ್ನು ಎದುರಿಸುವುದು ಮುಖ್ಯ. ಈ ಹೋರಾಟ ಧಾರವಾಡದಿಂದಲೇ ಮತ್ತಷ್ಟು ಬಲವಾಗಿ ಆರಂಭವಾಗಬೇಕು” ಎಂದು ಹೇಳಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಮಾತನಾಡಿ, “ಎಸ್‌ಐಆರ್ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಿಸಲು ಜನಾಂದೋಲನ ಬಲಪಡಿಸಬೇಕಿದೆ” ಎಂದು ಹೇಳಿದರು.
ರ್ಯಾಲಿಯಲ್ಲಿ ವಿವಿಧ ಜನಪರ, ಪ್ರಗತಿಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಒಗ್ಗಟ್ಟಿನ ಹೋರಾಟದ ಸಂಕಲ್ಪ ವ್ಯಕ್ತಪಡಿಸಿದರು.




