ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಸೈನಿಕನೊಬ್ಬನನ್ನು ಆಂಧ್ರಪ್ರದೇಶ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ (ಸಿಐ) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಅಧಿಕಾರಿಯು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಹೆಣೆದಿದ್ದ ‘ಹನಿಟ್ರ್ಯಾಪ್’ ಬಲೆಗೆ ಬಿದ್ದು, ಭಾರತದ ಅತ್ಯಂತ ಸೂಕ್ಷ್ಮ ಮತ್ತು ಗೌಪ್ಯ ರಕ್ಷಣಾ ಮಾಹಿತಿಗಳನ್ನು ಪಾಕ್‌ಗೆ ಒದಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ 31 ವರ್ಷದ ಪ್ರದೀಪ್ ಮುಖರ್ಜಿ ಬಂಧಿತ ನೌಕಾಪಡೆಯ ಸೈನಿಕ. ಈತ 2014ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು, ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾಪಡೆ ಕಮಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ, ವ್ಯವಸ್ಥಾಪನಾ ಅಭಿವೃದ್ಧಿ ಕೋರ್ಸ್‌ನಲ್ಲಿ ತರಬೇತಿ ಪಡೆಯಲು ಕೊಯಮತ್ತೂರಿನಲ್ಲಿರುವ ನೌಕಾಪಡೆಯ ನಾಯಕತ್ವ ತರಬೇತಿ ಸಂಸ್ಥೆಯಾದ ‘ಐಎನ್‌ಎಸ್ ಅಗ್ರಣಿ’ಗೆ ತೆರಳಿದ್ದರು. ಇದೀಗ, ಅವರನ್ನು ಅಕ್ಟೋಬರ್ 3ರಂದು ಕೌಂಟರ್ ಇಂಟೆಲಿಜೆನ್ಸ್ ಪಡೆ ವಶಕ್ಕೆ ಪಡೆದುಕೊಂಡಿದೆ.
ತನಿಖಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಮಹಿಳಾ ಏಜೆಂಟ್ ಒಬ್ಬಳು ಪ್ರದೀಪ್ ಮುಖರ್ಜಿಯವರ ಪರಿಚಯ ಬೆಳೆಸಿಕೊಂಡಿದ್ದರು. ಆಕೆ ಪ್ರೀತಿಯ ನಟನೆ ಮಾಡಿ, ಪ್ರದೀಪ್‌ನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದರು. ಬಳಿಕ, ವಿಶಾಖಪಟ್ಟಣಂ ನೌಕಾ ನೆಲೆಯ ಕಾರ್ಯತಂತ್ರದ ಸ್ವತ್ತುಗಳು, ಯುದ್ಧನೌಕೆಗಳ ಚಲನವಲನಗಳು ಹಾಗೂ ಕಾರ್ಯಾಚರಣೆಯ ಪ್ರಮುಖ ಮಾಹಿತಿಗಳನ್ನು ಹಂತ ಹಂತವಾಗಿ ಆಕೆ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.
ಗಡಿಯಾಚೆಗಿನ ಗೂಢಚರ್ಯೆ ಮತ್ತು ಭಯೋತ್ಪಾದನಾ ಬೆದರಿಕೆಗಳ ಮೇಲೆ ನಿರಂತರ ನಿಗಾ ಇರಿಸುವ ಆಂಧ್ರಪ್ರದೇಶದ ಸಿಐ ವಿಭಾಗವು, ಪ್ರದೀಪ್ ಮುಖರ್ಜಿಯವರ ಸಂಶಯಾಸ್ಪದ ಡಿಜಿಟಲ್ ಚಟುವಟಿಕೆಗಳನ್ನು ಪತ್ತೆಹಚ್ಚಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆತನನ್ನು ತೀವ್ರ ನಿಗಾದಲ್ಲಿಟ್ಟು ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಈಗ ಬಂಧಿಸಿದ್ದಾರೆ ಎಂದು ವರದಿಯಾಗಿದೆ.



