ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ, ಸಿಜೆಪಿ ಪ್ರಭಟನೆಯನ್ನು ಉಸ್ತುವಾರಿಯನ್ನು ಮಹಾರಾಷ್ಟ್ರ ಮೂಲದ ಅಜಿಂಕ್ಯ ಶಿಂಧೆ ವಹಿಸಿಕೊಂಡಿದ್ದಾರೆ. ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ. ಹೋರಾಟಕ್ಕೆ ಬರುತ್ತಿರುವ ಯುವಜರನ್ನು ಪೊಲೀಸರು ಎಲ್ಲಿ ತಡೆಯುತ್ತಾರೆಯೋ, ಅಲ್ಲಿಯೇ ಪ್ರತಿಭಟನೆ ನಡೆಸಿ, ಆ ಸ್ಥಳವನ್ನೇ ಜಂತರ್ ಮಂತರ್ ಮಾಡಿಕೊಳ್ಳಿ ಎಂದು ಅಜಿಂಕ್ಯ ಕರೆಕೊಟ್ಟಿದ್ದಾರೆ.
ಶನಿವಾರ ಬೆಳಿಗ್ಗೆ ಮುಂಬೈನಿಂದ ದೆಹಲಿಗೆ ಆಗಮಿಸಿದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧನದ ಸಾಧ್ಯತೆಯನ್ನು ಮೊದಲೇ ಊಹಿಸಿದ್ದ ಅಭಿಜಿತ್ ದೀಪ್ಕೆ, ಶುಕ್ರವಾರ ರಾತ್ರಿಯೇ ವಿಡಿಯೋ ಸಂದೇಶವೊಂದನ್ನು ಮುಂಚಿತವಾಗಿಯೇ ರೆಕಾರ್ಡ್ ಮಾಡಿಟ್ಟಿದ್ದರು. ದೀಪ್ಕೆ ಬಂಧನದ ನಂತರ ಆ ವಿಡಿಯೋವನ್ನು ಸಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ದೀಪ್ಕೆ, “ನೀವು ಈ ವಿಡಿಯೋ ನೋಡುತ್ತಿದ್ದರೆ ನನ್ನನ್ನು, ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಬಂಧಿಸಲಾಗಿದೆ ಎಂದರ್ಥ. ನಮ್ಮ ಅನುಪಸ್ಥಿತಿಯಲ್ಲಿ ಅಜಿಂಕ್ಯ ಶಿಂಧೆ ಈ ಪ್ರತಿಭಟನೆ ಮತ್ತು ಸಿಜೆಪಿ ಚಳವಳಿಯನ್ನು ಮುನ್ನಡೆಸಲಿದ್ದಾರೆ. ಎಲ್ಲರೂ ಅವರ ಸೂಚನೆಗಳನ್ನು ಅನುಸರಿಸಬೇಕು” ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದರು.
ದೀಪ್ಕೆ ಬಂಧನದ ನಂತರ ಪ್ರತಿಕ್ರಿಯಿಸಿದ ಅಜಿಂಕ್ಯ ಶಿಂದೆ, ಪ್ರತಿಭಟನಾಕಾರರು ಹಿಂಜರಿಯದೆ ಜಂತರ್ ಮಂತರ್ ಕಡೆಗೆ ಸಾಗಬೇಕು ಎಂದು ಆಹ್ವಾನ ನೀಡಿದ್ದಾರೆ. ನಮ್ಮ ಒಗ್ಗಟ್ಟನ್ನು ಕಂಡು ಸರ್ಕಾರ ಹೆದರಿದೆ. ಪೊಲೀಸರು ಸಾರ್ವಜನಿಕರನ್ನು ಎಲ್ಲಿ ತಡೆಯುತ್ತಾರೋ, ಅದೇ ಸ್ಥಳವನ್ನು ಜಂತರ್ ಮಂತರ್ ಆಗಿ ಪರಿವರ್ತಿಸಿ ಪ್ರತಿಭಟನೆ ನಡೆಸಿ ಎಂದು ಅವರು ಕರೆ ನೀಡಿದ್ದಾರೆ.
ಯಾರೀ ಅಜಿಂಕ್ಯ ಶಿಂಧೆ?
35 ವರ್ಷದ ಅಜಿಂಕ್ಯ ಶಿಂಧೆ ಮಹಾರಾಷ್ಟ್ರ ಮೂಲದವರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪುಣೆಯ ಅಂತರರಾಷ್ಟ್ರೀಯ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಅಂಜಿಕ್ಯ, ಈ ಹಿಂದೆಯೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಎಎಪಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಸೇರ್ಪಡೆಯಾಗಿದ್ದರು. ಅವರು ಪಿಂಪ್ರಿ-ಚಿಂಚ್‌ವಡ್‌ನಲ್ಲಿ ಎಎಪಿ ಸಂಚಾಲಕರಾಗಿ, ಗೋವಾ ಚುನಾವಣಾ ಉಸ್ತುವಾರಿಯಾಗಿ ಹಾಗೂ ಎಎಪಿ ಮಹಾರಾಷ್ಟ್ರ ಯುವ ಘಟಕದ ಅಧ್ಯಕ್ಷರಾಗಿ ಮತ್ತು ಸೋಶಿಯಲ್ ಮೀಡಿಯಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.
2026ರ ಆಗಸ್ಟ್‌ನಲ್ಲಿ ಅಭಿಜಿತ್ ದೀಪ್ಕೆ ಅವರು ಅಜಿಂಕ್ಯ ಶಿಂಧೆ ಅವರನ್ನು ಸಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನಡೆಸಲಾದ ‘ಸ್ಕೂಲ್ ಠೀಕ್ ಕರೋ’ ಚಳವಳಿ ಮತ್ತು ಮುಂಬೈ ಪ್ರತಿಭಟನೆಗಳ ಸಂಘಟನೆಯಲ್ಲಿ ಶಿಂಧೆ ಪ್ರಮುಖ ಪಾತ್ರ ವಹಿಸಿದ್ದರು. ತೆರೆಯ ಮರೆಯಲ್ಲಿಯೇ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದ ಶಿಂಧೆ, ಇದೀಗ ಸಿಜೆಪಿ ಉನ್ನತ ನಾಯಕರ ಬಂಧನದ ಬಳಿಕ ಪಕ್ಷದ ಪ್ರಮುಖ ನಾಯಕನಾಗಿ ಪ್ರತಿಭಟನೆಯ ಸಾರಥ್ಯ ವಹಿಸಿಕೊಂಡಿದ್ದಾರೆ.



