ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿ ಎಎಪಿ ನಾಯಕರು ಬೀದಿಗಿಳಿದಿದ್ದಾರೆ. ದೆಹಲಿಯ ಲೊಧಿ ಎಸ್ಟೇಟ್‌ನಲ್ಲಿರುವ ತಮ್ಮ ನಿವಾಸದಿಂದ ಜಂತರ್ ಮಂತರ್‌ಗೆ ಮೆರವಣಿಗೆ ಹೊರಟಿದ್ದ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಜೆಪಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದ ಕೇಜ್ರಿವಾಲ್, “ಯುವಜನರು ಮತ್ತು ಸಾರ್ವಜನಿಕರೊಂದಿಗೆ ನಾನೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇವೆ. ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ವಿಷಯವಲ್ಲ, ಇದು ದೇಶದ ಪ್ರಜಾಪ್ರಭುತ್ವದ ಹಿತದೃಷ್ಟಿಯ ಪ್ರಶ್ನೆ. ದೇಶದ ಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್‌ಗೆ ಬರಬೇಕು” ಎಂದು ಮನವಿ ಮಾಡಿದ್ದರು.
ಅದರಂತೆ, ಶನಿವಾರ ಮಧ್ಯಾಹ್ನ ತಮ್ಮ ನಿವಾಸದಿಂದ ಜಂತರ್ ಮಂತರ್ ಎಡೆಗೆ ಹೊರಟಿದ್ದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ಸಿನಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ, ಎಎಪಿ ಕಾರ್ಯಕರ್ತರು ಮತ್ತು ನಾಯಕರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಕೇಜ್ರಿವಾಲ್ ಮಾತ್ರವಲ್ಲದೆ, ಎಎಪಿ ನಾಯಕರಾದ ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಹಾಗೂ ಚಂಡೀಘಢದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ದೆಹಲಿ ಹಾಗೂ ಇತರೆಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳ ಮಾರಣಹೋಮ ಎಂದು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.



