ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮಾಣಿಕ್ತಲದ ಇಎಸ್ಐ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಮಹಿಳೆಯ ಮೃತದೇಹವನ್ನು ಇಲಿಗಳು ಕಚ್ಚಿ ತಿಂದಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ಮಂಡಳಿ 10 ಸದಸ್ಯರ ತನಿಖಾ ಸಮಿತಿ ರಚಿಸಿದ್ದು, ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಹೌರಾದ ಅಂಡುಲ್ ನಿವಾಸಿ ಅಲ್ಪನಾ ಡೇ ಅವರು ಅಕ್ಟೋಬರ್ 8ರಂದು ಡಯಾಲಿಸಿಸ್‌ಗಾಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ 108ನೇ ಹಾಸಿಗೆಯಲ್ಲಿ ದಾಖಲಾಗಿದ್ದರು. ಆದರೆ, ಅದೇ ರಾತ್ರಿ ಅವರು ಮೃತಪಟ್ಟಿದ್ದರು. ಅಕ್ಟೋಬರ್ 9ರಂದು ಬೆಳಗ್ಗೆ ಆಸ್ಪತ್ರೆಗೆ ಬಂದ ಕುಟುಂಬಸ್ಥರು ಮೃತದೇಹದ ದವಡೆ, ಹಣೆ, ಕಣ್ಣು, ಕೈ ಮತ್ತು ಕಾಲುಗಳ ಭಾಗಗಳಲ್ಲಿ ಗಾಯಗಳನ್ನು ಗಮನಿಸಿದ್ದಾರೆ. ಇಲಿಗಳು ದೇಹದ ವಿವಿಧ ಭಾಗಗಳನ್ನು ಕಚ್ಚಿ ಮಾಂಸವನ್ನು ತಿಂದಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಿಳೆಯ ಸಾವಿನ ಬಳಿಕ ದೇಹದ ಮೇಲೆ ಗಾಯಗಳು ಹೇಗೆ ಉಂಟಾದವು ಎಂಬುದನ್ನು ಆಸ್ಪತ್ರೆಯ ಸಿಬ್ಬಂದಿ ಸ್ಪಷ್ಟಪಡಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವಿನ ನಿಖರ ಕಾರಣದ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ದೂರಿದ್ದಾರೆ. ಈ ಸಂಬಂಧ ಮಾಣಿಕ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಸ್ಪತ್ರೆಯ ಅಧೀಕ್ಷಕರಿಗೂ ಲಿಖಿತ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ
ಮಹಿಳೆ ರಾತ್ರಿ ಕಿರುಚಾಡಿದ್ದರು ಎನ್ನಲಾಗಿದ್ದು, ಆ ವೇಳೆ ಸಿಬ್ಬಂದಿ ಏಕೆ ಗಮನ ಹರಿಸಲಿಲ್ಲ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಶಸ್ತ್ರಚಿಕಿತ್ಸಾ ವಿಭಾಗದಲ್ಲೇ ಇಂತಹ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ, ಪ್ರಕರಣದ ತನಿಖೆಗಾಗಿ ಆಸ್ಪತ್ರೆಯು 10 ಸದಸ್ಯರ ಸಮಿತಿ ರಚಿಸಿದೆ ಎಂದು ತಿಳಿಸಿದೆ. ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಘಟನೆಯ ಸಂದರ್ಭಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಲಿದೆ.




