ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ, ಯುವ ನಾಯಕ ಅಭಿಜೀತ್ ದೀಪ್ಕೆ ಅವರ ದೆಹಲಿಯ ಪ್ರತಿಭಟನಾ ಸ್ಥಳದ ಬಂಧನ ಮತ್ತು ಪೊಲೀಸರ ತೀವ್ರ ನಿಗ್ರಹ ಕ್ರಮವನ್ನು ಅವರ ಪೋಷಕರು ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದ್ದ ಅಭಿಜೀತ್ ದೀಪ್ಕೆ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ನಂತರ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ಅವರ ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್ ದೀಪ್ಕೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ “ವಿದ್ಯಾರ್ಥಿಗಳ ಸಾಧಾರಣ ಪ್ರತಿಭಟನೆಗೆ ದೆಹಲಿಯಲ್ಲಿ ಇಷ್ಟೊಂದು ಪ್ರಮಾಣದ ಪೊಲೀಸ್ ಪಡೆಗಳನ್ನು ಏಕೆ ನಿಯೋಜಿಸಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ದೆಹಲಿಯಲ್ಲಿ ಸೇರಿರುವ ಈ ವಿದ್ಯಾರ್ಥಿಗಳು ಚಂಬಲ್ ಕಣಿವೆಯ ದರೋಡೆಕೋರರೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ ನಿಜವಾದ ದರೋಡೆಕೋರರು ಸಂಸತ್ತಿನಲ್ಲಿ (ಪಾರ್ಲಿಮೆಂಟ್) ಕುಳಿತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅಜ್ಜಿ ನಿಧನ
ಪ್ರತಿಭಟನೆಗೆ ಅನುಮತಿ ಪಡೆಯದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಸರ್ಕಾರದ ವಿರುದ್ಧ ಪ್ರತಿಭಟಿಸಲು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಾತ್ಮಕ ಹಕ್ಕಿದೆ. ಅದಕ್ಕೆ ಅನುಮತಿ ಏಕೆ ಬೇಕು? ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯುವ ಪ್ರತಿಭಟನೆಗೆ ಸರ್ಕಾರವೇ ಹೇಗೆ ಅನುಮತಿ ನೀಡುತ್ತದೆ? ನನ್ನ ಮಗ ಅಭಿಜೀತ್ ನನಗೆ ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಇದ್ದಂತೆ” ಎಂದು ಹೇಳಿದರು.
ಅಭಿಜೀತ್ ಅವರ ತಾಯಿ ಅನಿತಾ ದೀಪ್ಕೆ ಮಾತನಾಡಿ, “ವಿಮಾನದಲ್ಲಿದ್ದವರನ್ನು ಇಳಿಸಿ ಬಂಧಿಸುವಂತಹ ಪರಿಸ್ಥಿತಿ ಏನು ಬಂದಿತ್ತು? ಇವರು ಯಾವುದೇ ಅಪರಾಧ ಮಾಡಿಲ್ಲ. ಪೊಲೀಸರು ಅತ್ಯಾಚಾರಿಗಳ ಮನೆಗೆ ಹೋಗಿ ಈ ರೀತಿ ಕ್ಷಿಪ್ರವಾಗಿ ಬಂಧಿಸುತ್ತಾರೆಯೇ? ಇಲ್ಲ. ಆದರೆ ಶಾಂತಿಯುತವಾಗಿ ಹೋರಾಡುವ ಅಭಿಜೀತ್ ಮತ್ತು ಅವರ ಸಹೋದ್ಯೋಗಿಗಳನ್ನು ಅನಗತ್ಯವಾಗಿ ಬಂಧಿಸಿದ್ದಾರೆ. ಈ ಸರ್ಕಾರಕ್ಕೆ ಅಂಬೇಡ್ಕರ್ ವಾದಿಗಳು ಸರಿಯಾದ ಪಾಠ ಕಲಿಸುತ್ತಾರೆ” ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗದ ವಿರುದ್ಧ, ವಿವಿಧ ವಿದ್ಯಾರ್ಥಿ ಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ದೆಹಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದು, ನೂರಾರು ಪ್ರತಿಭಟನಾಕಾರರು ಮತ್ತು ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.




