ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಜೊತೆಗೆ, ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ವಿಡಿಯೊ ಮೂಲಕ ಸ್ಪಷ್ಟನೆ ನೀಡಿರುವ ದೆಹಲಿ ಜಂಟಿ ಪೊಲೀಸ್ ಆಯುಕ್ತೆ (Joint CP) ನೂಪುರ್ ಪ್ರಸಾದ್, “ಕಾಕ್ರೋಚ್ ಜನತಾ ಪಾರ್ಟಿಯ ಸಹ-ಸಂಚಾಲಕ ಸೌರವ್ ದಾಸ್ ಅವರು ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ನಮಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದಾಗ, ಅತ್ಯಂತ ಕಡಿಮೆ ಅವಧಿಯಲ್ಲಿ ಮಾಹಿತಿ ನೀಡಿರುವುದು ಕಂಡುಬಂದಿದೆ. ನಿಯಮಾವಳಿಗಳ ಪ್ರಕಾರ, ಯಾವುದೇ ಪೂರ್ವನಿಯೋಜಿತ ಪ್ರತಿಭಟನೆ ನಡೆಸುವ ಕನಿಷ್ಠ 10 ದಿನಗಳ ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕಿರುತ್ತದೆ,” ಎಂದಿದ್ದಾರೆ.
”ಇದರ ಜೊತೆಗೆ, ಈ ಹಿಂದೊಮ್ಮೆ ಇದೇ ಸಂಘಟನೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾಗ, ಅವರು ಕಾನೂನುಬದ್ಧ ಸೂಚನೆಗಳನ್ನು ಪಾಲಿಸಿರಲಿಲ್ಲ. ಅಲ್ಲದೆ ತಾವು ನೀಡಿದ್ದ ಮುಚ್ಚಳಿಕೆಯ (Undertaking) ಷರತ್ತುಗಳನ್ನೂ ಉಲ್ಲಂಘಿಸಿದ್ದರು. ಅವರ ಈ ಹಿಂದಿನ ನಡವಳಿಕೆ, ಪ್ರಸ್ತುತ ಇರುವ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಮತ್ತು ಸುಗಮ ಸಂಚಾರ ನಿಯಂತ್ರಣದ ದೃಷ್ಟಿಯಿಂದ ಈ ಬಾರಿ ಅವರಿಗೆ ಪ್ರತಿಭಟನೆಗೆ ಅನುಮತಿ ನೀಡಲಾಗಿಲ್ಲ, ಅರ್ಜಿಯನ್ನು ತಿರಸ್ಕರಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ.
ನವದೆಹಲಿ ಪ್ರದೇಶದಲ್ಲಿ ಪ್ರಸ್ತುತ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿ ನಿರ್ಬಂಧಗಳನ್ನು (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ. ಒಂದು ವೇಳೆ ಯಾರಾದರೂ ಬಿಎನ್ಎಸ್ಎಸ್ ಸೆಕ್ಷನ್ 163ರ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಜಮಾವಣೆಯಾದರೆ, ಅಂತಹವರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತೆ ಎಚ್ಚರಿಕೆ ನೀಡಿದ್ದಾರೆ.




