ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಉಪಚುನಾವಣೆಗೂ ಮುನ್ನ ‘ವಿಶೇಷ ತೀವ್ರಗತಿಯ ಪರಿಷ್ಕರಣೆ’ (Special Intensive Revision – SIR) ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು, “ಇವು ಕೇವಲ ಉಪಚುನಾವಣೆಗಳು” ಎಂದು ಪ್ರತಿಕ್ರಿಯಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ. ಅಕ್ಟೋಬರ್ 6ರಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, “ಈ ಪ್ರಕರಣದ ವಿಚಾರಣೆಯನ್ನು ಮೊದಲು ಸೆಪ್ಟೆಂಬರ್ 29ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಅಕ್ಟೋಬರ್ 5ಕ್ಕೆ ಮುಂದೂಡಲಾಗಿದೆ. ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳಲ್ಲಿ 18,000ಕ್ಕೂ ಹೆಚ್ಚು ಮೇಲ್ಮನವಿಗಳು ಇನ್ನೂ ಇತ್ಯರ್ಥವಾಗದೆ ಉಳಿದಿವೆ. ಇದರಿಂದಾಗಿ ಈ ಭಾಗದ ಮತದಾರರು ಸತತ ಎರಡನೇ ಬಾರಿಗೆ ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ಪುರಸ್ಕರಿಸದ ಸಿಜೆಐ, “ಇವು ಕೇವಲ ಉಪಚುನಾವಣೆಗಳು” ಎಂದು ಹೇಳಿ, ನಿಗದಿತ ದಿನಾಂಕದಂದೇ ವಿಚಾರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಕೇಂದ್ರ ಚುನಾವಣಾ ಆಯೋಗ (ECI) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರಾಜ್ಯದಲ್ಲಿ ಒಟ್ಟು 38.31 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 22.21 ಲಕ್ಷ ಜನರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಹಾಗೂ 16.10 ಲಕ್ಷ ಜನರು ಅಕ್ರಮ ಸೇರ್ಪಡೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 16ರವರೆಗೆ ಕೇವಲ 1.26 ಲಕ್ಷ ಮೇಲ್ಮನವಿಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 37.05 ಲಕ್ಷ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ, ಮೇಲ್ಮನವಿ ನ್ಯಾಯಮಂಡಳಿಗಳ ಸಂಖ್ಯೆಯನ್ನು 19ರಿಂದ 42ಕ್ಕೆ ಹೆಚ್ಚಿಸಲು ಸಿದ್ಧವಿರುವುದಾಗಿ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಚುನಾವಣೆ ಯಾವುದೇ ಇರಲಿ (ಲೋಕಸಭೆ, ವಿಧಾನಸಭೆ ಅಥವಾ ಪಂಚಾಯತ್), ಮತದಾನದ ಹಕ್ಕು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಉಳಿಸುವ ಮೂಲಭೂತ ಹಕ್ಕಾಗಿದೆ” ಎಂದಿದ್ದಾರೆ.
ಅಲ್ಲದೆ, ಎಸ್‌ಐಆರ್ ಪ್ರಕ್ರಿಯೆಯನ್ನು “ಭಾರತೀಯ ಮತಗಳ ಅಮಾನ್ಯೀಕರಣ” (Demonetisation of the Indian vote) ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ. ಅಕ್ಟೋಬರ್ 6ರಂದು ನಡೆಯಲಿರುವ ಈ ಉಪಚುನಾವಣೆಗಳು ಇದೀಗ ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿವೆ.




