ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಒಟ್ಟಾಗಿ ಎದುರಿಸಲಿವೆ. ಬರೋಬ್ಬರಿ ಆರು ವರ್ಷಗಳ ಸುದೀರ್ಘ ವಿರಾಮದ ಬಳಿಕ ಈ ಎರಡೂ ಪಕ್ಷಗಳು ಮೈತ್ರಿಗೆ ಮರಳಿದ್ದು, ಪಂಜಾಬ್ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ. ಮೈತ್ರಿಯಲ್ಲಿ ಅಕಾಲಿದಳ ‘ದೊಡ್ಡಣ್ಣ’ನ ಪಾತ್ರ ವಹಿಸಲಿದ್ದು, ಮುಖ್ಯಮಂತ್ರಿ ಸ್ಥಾನವೂ ಅದೇ ಪಕ್ಷಕ್ಕೆ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ (ನವೆಂಬರ್ 24) ಗುರುಪುರಬ್‌ನ ಶುಭ ದಿನದಂದು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ಘೋಷಣೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಅಕಾಲಿದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಸಮ್ಮುಖದಲ್ಲಿ ಮಾತನಾಡಿದ ಅಮಿತ್ ಶಾ, “ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಲಿವೆ. ಸಹಜವಾಗಿಯೇ ಅಕಾಲಿದಳ ಮೈತ್ರಿಯಲ್ಲಿ ದೊಡ್ಡಣ್ಣನ ಪಾತ್ರ ವಹಿಸಲಿದೆ. ದೊಡ್ಡಣ್ಣನ ಸ್ಥಾನದಲ್ಲಿರುವವರೇ ಮುಖ್ಯಮಂತ್ರಿಯಾಗುತ್ತಾರೆ” ಎಂದು ತಿಳಿಸಿದರು. ಇದೇ ವೇಳೆ, ಸುಖಬೀರ್ ಸಿಂಗ್ ಬಾದಲ್ ಅವರೇ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ದೆಹಲಿ ಸಚಿವ ಹಾಗೂ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಖಚಿತಪಡಿಸಿದ್ದಾರೆ.
ಗಡಿ ರಾಜ್ಯವಾದ ಪಂಜಾಬ್‌ನ ಭದ್ರತೆ ಮತ್ತು ಅಭಿವೃದ್ಧಿಗೆ ಮೈತ್ರಿಕೂಟ ಒತ್ತು ನೀಡಲಿದೆ ಎಂದ ಅಮಿತ್ ಶಾ, ಪ್ರಮುಖ ಆದ್ಯತೆಗಳನ್ನು ಪಟ್ಟಿ ಮಾಡಿದರು.
2029ರ ಡಿಸೆಂಬರ್ 31ರೊಳಗೆ ಪಂಜಾಬ್ ಅನ್ನು ಸಂಪೂರ್ಣವಾಗಿ ಮಾದಕವಸ್ತು ಮುಕ್ತಗೊಳಿಸುವುದಾಗಿ ಶಾ ಭರವಸೆ ನೀಡಿದರು. ಹಿಂದಿನ ಕಾಂಗ್ರೆಸ್ ಮತ್ತು ಪ್ರಸ್ತುತ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಡ್ರಗ್ಸ್ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು. ಗ್ಯಾಂಗ್‌ಸ್ಟರ್‌ಗಳ ನಿರ್ಮೂಲನೆ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಗಡಿ ರಾಜ್ಯದ ಭದ್ರತೆಯನ್ನು ಬಲಪಡಿಸುವುದು ಪ್ರಣಾಳಿಕೆಯ ಪ್ರಮುಖ ಅಂಶಗಳಾಗಲಿವೆ. ಬಿಜೆಪಿ ಮತ್ತು ಅಕಾಲಿದಳ ಮೈತ್ರಿಯು ‘ಹಿಂದೂ-ಸಿಖ್ ಭಾಯಿಚಾರ’ (ಸಹೋದರತ್ವ) ಸಂಕೇತವಾಗಿದೆ. ಅಲ್ಲದೆ, ರೈತರ ಸಮಸ್ಯೆಗಳಿಗೆ ಪರಿಹಾರ ಮತ್ತು ರಾಜ್ಯವನ್ನು ಸಾಲಮುಕ್ತಗೊಳಿಸುವ ಗುರಿ ಹೊಂದಲಾಗಿದೆ.
#WATCH | Delhi: On who will be the Chief Ministerial face of the NDA alliance in Punjab, Union Home Minister Amit Shah says, “The elder brother becomes the Chief Minister. Whoever is the elder brother becomes the Chief Minister.”
“The biggest hallmark of the Bharatiya Janata… https://t.co/MAioyiZEW0 pic.twitter.com/3IxfNO7PpA— ANI (@ANI) November 24, 2026
ಎನ್‌ಡಿಎ ಮೈತ್ರಿಕೂಟದ ಅತ್ಯಂತ ಹಳೆಯ ಮಿತ್ರಪಕ್ಷ ಮರಳಿರುವುದಕ್ಕೆ ಅಮಿತ್ ಶಾ ಸಂತಸ ವ್ಯಕ್ತಪಡಿಸಿದರೆ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಒಟ್ಟಾಗಿ ಶ್ರಮಿಸುವುದಾಗಿ ಹೇಳಿದರು. ಅಕಾಲಿದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮಾತನಾಡಿ, “ಇದು ಕೇವಲ ರಾಜಕೀಯ ಹೊಂದಾಣಿಕೆಯಲ್ಲ, ಬದಲಾಗಿ ಒಂದು ಭಾವನಾತ್ಮಕ ಬಂಧ” ಎಂದು ಬಣ್ಣಿಸಿದರು.
1996ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರ ಬೆಂಬಲದೊಂದಿಗೆ ಆರಂಭವಾಗಿದ್ದ ಬಿಜೆಪಿ-ಅಕಾಲಿದಳ ಮೈತ್ರಿ, 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮುರಿದುಬಿದ್ದಿತ್ತು. ಆ ಸಂದರ್ಭದಲ್ಲಿ ಹರ್ಸಿಮ್ರತ್ ಕೌರ್ ಬಾದಲ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 2022ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಅಕಾಲಿದಳ 3 ಮತ್ತು ಬಿಜೆಪಿ 2 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದ್ದವು. 2024ರ ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿ ಮಾತುಕತೆ ನಡೆದಿದ್ದರೂ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿರಲಿಲ್ಲ. ಇದೀಗ ಹಳೆಯ ಕಹಿ ಮರೆತು ಉಭಯ ಪಕ್ಷಗಳು 2027ರ ಚುನಾವಣೆಗೆ ಸಜ್ಜಾಗಿವೆ.



