1947ರ ಆಗಸ್ಟ್ 29ರಂದು ರಚನೆಯಾದ ಕರಡು ಸಮಿತಿ ಕೇವಲ ಒಂದು ಕಾನೂನು ಗ್ರಂಥವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿಲ್ಲ; ಅಧಿಕಾರ ಯಾರ ಕೈಯಲ್ಲಿದ್ದರೂ ಅದು ಸಂವಿಧಾನಕ್ಕೆ ಒಳಪಟ್ಟಿರಬೇಕು ಎಂಬ ಆಧುನಿಕ ಭಾರತದ ಮಹತ್ವದ ರಾಜಕೀಯ ಒಪ್ಪಂದಕ್ಕೆ ರೂಪ ನೀಡಿತು.
ಭಾರತ 1947ರ ಆಗಸ್ಟ್ 15ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾಯಿತು. ಆದರೆ ರಾಜಕೀಯ ಸ್ವಾತಂತ್ರ್ಯ ದೊರೆತ ಮಾತ್ರಕ್ಕೆ ಹೊಸ ರಾಷ್ಟ್ರದ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಹಾಗಾಗಿ ಸ್ವಾತಂತ್ರ್ಯ ದೊರೆತ ಎರಡು ವಾರಗಳ ಬಳಿಕ ಆಗಸ್ಟ್ 29ರಂದು ಸಂವಿಧಾನ ಸಭೆಯು, ದೇಶದ ಪ್ರಜಾಪ್ರಭುತ್ವ ಭವಿಷ್ಯವನ್ನು ಕಾನೂನಿನ ಭಾಷೆಯಲ್ಲಿ ಕಟ್ಟಿಕೊಡುವ ಮಹತ್ವದ ಹೊಣೆಗಾರಿಕೆಯನ್ನು ಏಳು ಮಂದಿ ಸದಸ್ಯರ ಕರಡು ಸಮಿತಿಗೆ ನೀಡಿತು. ಅದರ ಕೇಂದ್ರಬಿಂದುವಾಗಿದ್ದವರು ಡಾ. ಬಿ ಆರ್ ಅಂಬೇಡ್ಕರ್.
ಸಂವಿಧಾನ ಸಭೆಯಲ್ಲಿ ಸತ್ಯನಾರಾಯಣ ಸಿನ್ಹಾ ಮಂಡಿಸಿದ ನಿರ್ಣಯದ ಮೂಲಕ ಏಳು ಮಂದಿ ಸದಸ್ಯರ ಸಮಿತಿಯನ್ನು ನೇಮಕ ಮಾಡಲಾಯಿತು. ಈ ಸಮಿತಿಯ ಕೆಲಸ ಕೇವಲ ಹೊಸದಾಗಿ ಸಂವಿಧಾನ ಬರೆಯುವುದಷ್ಟೇ ಆಗಿರಲಿಲ್ಲ. ಸಂವಿಧಾನ ಸಭೆ ಈಗಾಗಲೇ ತೆಗೆದುಕೊಂಡಿದ್ದ ನಿರ್ಧಾರಗಳು, ವಿವಿಧ ಸಮಿತಿಗಳ ವರದಿಗಳು ಹಾಗೂ ಸಂವಿಧಾನ ಸಲಹೆಗಾರರು ಸಿದ್ಧಪಡಿಸುತ್ತಿದ್ದ ಕರಡು ಇವೆಲ್ಲವನ್ನೂ ಪರಿಶೀಲಿಸಿ, ಅವುಗಳನ್ನು ಕಾನೂನಾತ್ಮಕವಾಗಿ ಸುಸಂಬದ್ಧವಾದ ಸಂವಿಧಾನದ ರೂಪಕ್ಕೆ ತರುವ ಜವಾಬ್ದಾರಿ ಇತ್ತು. ಆಗಿನ ಚರ್ಚೆಯಲ್ಲೇ ಇದನ್ನು ‘ಸಂಪೂರ್ಣವಾಗಿ ತಜ್ಞರ ಸಮಿತಿ’ ಎಂದೇ ವಿವರಿಸಲಾಗಿತ್ತು.
ಸಂವಿಧಾನದ ಕರಡು ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಡಾ. ಬಿ ಆರ್ ಅಂಬೇಡ್ಕರ್, ಕೆ ಎಂ ಮುನ್ಷಿ, ಸಯ್ಯದ್ ಮೊಹಮ್ಮದ್ ಸಾದುಲ್ಲಾ, ಬಿ ಎಲ್ ಮಿಟ್ಟರ್ ಹಾಗೂ ಡಿ ಪಿ ಖೈತಾನ್ ಅವರು ಮೂಲ ಸದಸ್ಯರಾಗಿದ್ದರು. ಬಳಿಕ ಕೆಲ ಕಾರಣಾಂತರಗಳಿಂದ ಸದಸ್ಯತ್ವದಲ್ಲಿ ಬದಲಾವಣೆಗಳೂ ನಡೆದವು. ಸದಸ್ಯ ಬಿ ಎಲ್ ಮಿಟ್ಟರ್ ಅವರು ಅನಾರೋಗ್ಯದ ಕಾರಣ ಸಮಿತಿಯಿಂದ ಹಿಂದೆ ಸರಿದರು. ಅವರ ಸ್ಥಾನಕ್ಕೆ ಎನ್ ಮಾಧವ ರಾವ್ ಬಂದರು. ಡಿ ಪಿ ಖೈತಾನ್ ನಿಧನದ ಬಳಿಕ ಟಿ ಟಿ ಕೃಷ್ಣಮಾಚಾರಿ ಸಮಿತಿ ಸೇರಿದರು.
1947ರ ಆಗಸ್ಟ್ 30ರಂದು ನಡೆದ ಕರಡು ಸಮಿತಿಯ ಮೊದಲ ಸಭೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಈ ನಿರ್ಧಾರವು ಮುಂದಿನ ಭಾರತದ ರಾಜಕೀಯ ಮತ್ತು ಸಾಂವಿಧಾನಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಪಡೆಯಿತು.
ಅಂಬೇಡ್ಕರ್ ಅವರನ್ನೇ ಏಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು?
ಅಂಬೇಡ್ಕರ್ ಕೇವಲ ಕಾನೂನು ತಜ್ಞರಾಗಿರಲಿಲ್ಲ. ಅರ್ಥಶಾಸ್ತ್ರ, ರಾಜಕೀಯ, ಸಾಂವಿಧಾನಿಕ ಕಾನೂನು ಮತ್ತು ಸಾಮಾಜಿಕ ನ್ಯಾಯ ಕುರಿತು ಅವರಿಗೆ ಆಳವಾದ ಪಾಂಡಿತ್ಯವಿತ್ತು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಜಗತ್ತಿನ ವಿವಿಧ ಪ್ರಜಾಪ್ರಭುತ್ವ ವ್ಯವಸ್ಥೆಗಳ ಕುರಿತು ಅಧ್ಯಯನ ಮಾಡಿದ್ದರು.
ಅದೇ ಸಮಯದಲ್ಲಿ ಭಾರತದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಹಾಗೂ ಅಸಮಾನತೆಯ ವಿರುದ್ಧ ಹಲವು ದಶಕಗಳಿಂದ ಹೋರಾಟ ನಡೆಸಿದ್ದರು. ಹೀಗಾಗಿ ಅವರ ದೃಷ್ಟಿಯಲ್ಲಿ ಸಂವಿಧಾನ ಎಂದರೆ ಕೇವಲ ಸರ್ಕಾರದ ಅಂಗಗಳ ಅಧಿಕಾರವನ್ನು ನಿರ್ಧರಿಸುವ ಕಾನೂನು ಪುಸ್ತಕವಾಗಿರಲಿಲ್ಲ. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕು ಮತ್ತು ಗೌರವ ಒದಗಿಸಬೇಕಾದ ಸಾಧನವಾಗಿತ್ತು. ಅದಕ್ಕೆ ನ್ಯಾಯ ಒದಗಿಸುವ ಸೂಕ್ತ ವ್ಯಕ್ತಿ ಅಂಬೇಡ್ಕರ್ ಅವರೇ ಆಗಿದ್ದರು. ಹಾಗಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಕರಡು ಸಮಿತಿ ತನ್ನ ಮೊದಲ ಪ್ರಮುಖ ಕರಡನ್ನು 1948ರ ಫೆಬ್ರವರಿ 21ರಂದು ಸಂವಿಧಾನ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಿಸಿತು. ಬಳಿಕ ಸಾರ್ವಜನಿಕ ಚರ್ಚೆಗೂ ಇಡಲಾಯಿತು. ಪ್ರಾಂತೀಯ ಸರ್ಕಾರಗಳು, ವಿವಿಧ ಸಂಸ್ಥೆಗಳು, ಕಾನೂನು ತಜ್ಞರು ಹಾಗೂ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಶೀಲಿಸಲಾಯಿತು. 1948ರ ನವೆಂಬರ್ 4ರಂದು ಅಂಬೇಡ್ಕರ್ ಕರಡು ಸಂವಿಧಾನವನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದರು. ಅಲ್ಲಿಂದ ಆರಂಭವಾದ ಚರ್ಚೆ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅಪರೂಪದ ವಿಸ್ತಾರ ಹೊಂದಿತ್ತು.
ಇದೇ ವೇಳೆ ಸಂಘರ್ಷ ಮತ್ತು ಹಲವು ಟೀಕೆಗಳು ಎದುರಾದವು. ಸಾವಿರಾರು ತಿದ್ದುಪಡಿಗಳು ಪ್ರಸ್ತಾಪಿಸಲ್ಪಟ್ಟವು. ಒಟ್ಟು ಸುಮಾರು 7,635 ತಿದ್ದುಪಡಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 2,473 ತಿದ್ದುಪಡಿಗಳು ಸಭೆಯಲ್ಲಿ ಚರ್ಚೆಗೆ ಬಂದವು. ಸಂವಿಧಾನ ಸಭೆ ವಾಸ್ತವವಾಗಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿತ್ತು
| ಪ್ರಶ್ನೆ | ಸಂಘರ್ಷ |
| ಅಧಿಕಾರ ಯಾರ ಬಳಿ? | ಕೇಂದ್ರ vs ರಾಜ್ಯ |
| ಪ್ರಜಾಪ್ರಭುತ್ವದ ಘಟಕ ಯಾವುದು? | ಗ್ರಾಮ vs ವ್ಯಕ್ತಿ |
| ಸ್ವಾತಂತ್ರ್ಯ ಎಷ್ಟು? | ನಾಗರಿಕ ಹಕ್ಕು vs ರಾಜ್ಯದ ಭದ್ರತೆ |
| ಸಮಾನತೆ ಎಂದರೇನು? | ಒಂದೇ ನಿಯಮ vs ವಿಶೇಷ ರಕ್ಷಣೆ |
| ಆರ್ಥಿಕ ವ್ಯವಸ್ಥೆ? | ಆಸ್ತಿ ಹಕ್ಕು vs ಸಾಮಾಜಿಕ ನ್ಯಾಯ |
| ಆಡಳಿತ ಮಾದರಿ? | ಅಧ್ಯಕ್ಷೀಯ vs ಸಂಸದೀಯ |
| ಭಾಷೆ? | ಹಿಂದಿ vs ಬಹುಭಾಷಿಕ ಭಾರತ |
| ಅಲ್ಪಸಂಖ್ಯಾತ ಪ್ರತಿನಿಧಿತ್ವ? | ಪ್ರತ್ಯೇಕ ಮತಕ್ಷೇತ್ರ vs ಸಾಮಾನ್ಯ ನಾಗರಿಕತ್ವ |
| ಸಂವಿಧಾನದ ಮೂಲ? | ಭಾರತೀಯ ಪರಂಪರೆ vs ಜಾಗತಿಕ ಅನುಭವ |
| ಪ್ರಜಾಪ್ರಭುತ್ವದ ಗುರಿ? | ರಾಜಕೀಯ ಹಕ್ಕು vs ಸಾಮಾಜಿಕ–ಆರ್ಥಿಕ ನ್ಯಾಯ |
ಅವುಗಳಲ್ಲಿ ಕೆಲವನ್ನು ದಾಖಲಿಸಲಾಗಿದೆ.
ಮೊದಲಿನಿಂದಲೂ ಬಂದ ಪ್ರಮುಖ ಟೀಕೆ ಎಂದರೆ, ಸಂವಿಧಾನ ಸಭೆಯನ್ನು ಜನರು ನೇರವಾಗಿ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆ ಮಾಡಿರಲಿಲ್ಲ. ಪ್ರಾಂತೀಯ ವಿಧಾನಸಭೆಗಳ ಸದಸ್ಯರು ಪರೋಕ್ಷವಾಗಿ ಸದಸ್ಯರನ್ನು ಆಯ್ಕೆ ಮಾಡಿದ್ದರು. ಕಾಂಗ್ರೆಸ್ಗೆ ಬಹುಮತ ಇದ್ದುದರಿಂದ, “ಇದು ನಿಜವಾಗಿಯೂ ಇಡೀ ಭಾರತದ ಪ್ರಜೆಗಳ ಸಭೆಯೇ?” ಎಂಬ ಪ್ರಶ್ನೆಯೂ ಕೇಳಿಬಂತು.
ಆದರೆ ಸಂವಿಧಾನ ರಚನೆ ಮುಂದುವರೆದಂತೆ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು, ಸಂಸ್ಥಾನಗಳ ಪ್ರತಿನಿಧಿಗಳು ಸೇರಿದಂತೆ ವಿವಿಧ ವರ್ಗಗಳ ಸದಸ್ಯರು ಸಾಕಷ್ಟು ತೀವ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ʼಇದು ಭಾರತದ ಸಂವಿಧಾನವೇ? ವಿದೇಶಿ ಸಂವಿಧಾನಗಳ ನಕಲಾ?ʼ
ರಾಮನಾರಾಯಣ ಸಿಂಗ್ ಸೇರಿದಂತೆ ಹಲವು ಸದಸ್ಯರು, “ಕರಡು ಸಂವಿಧಾನವು ʼಭಾರತದ ಸಂವಿಧಾನವೇ? ವಿದೇಶಿ ಸಂವಿಧಾನಗಳ ನಕಲಾ?ʼ ಇದು ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ Government of India Act, 1935ರಿಂದ ಅತಿಯಾಗಿ ಎರವಲು ಪಡೆದಿದೆ” ಎಂದು ಟೀಕಿಸಿದರು. ರಾಮನಾರಾಯಣ ಸಿಂಗ್ 1948ರ ನವೆಂಬರ್ 5ರಂದು, ಈ ಸಂವಿಧಾನವು ಭಾರತದ ಸ್ವಂತ ರಾಜಕೀಯ ಸೃಜನಶೀಲತೆಯನ್ನು ತೋರಿಸುವುದಿಲ್ಲವೆಂದು ಆಕ್ಷೇಪಿಸಿದರು.
ಅಂಬೇಡ್ಕರ್ ಉತ್ತರ ಏನು?
ಆದರೆ, ಅಂಬೇಡ್ಕರ್ ಯಾವುದನ್ನೂ ಮರೆಮಾಚಲೇ ಇಲ್ಲ. ಆಗಲೇ, “ಸಾಂವಿಧಾನಿಕ ತತ್ವಗಳಿಗೆ ಯಾರೂ ಪೇಟೆಂಟ್ ಪಡೆದಿಲ್ಲ; ಬೇರೆ ದೇಶಗಳ ಉತ್ತಮ ಅನುಭವವನ್ನು ಭಾರತದ ಪರಿಸ್ಥಿತಿಗೆ ಹೊಂದಿಸಿಕೊಳ್ಳುವುದು ಕಳ್ಳತನವಲ್ಲ(“There is nothing to be ashamed of in borrowing.”)ವೆಂದು ಪ್ರತಿಪಾದಿಸಿದ ಅವರು, ಅಲ್ಲಿಯ ಅಂಧತೆ ಮತ್ತು ಗುಲಾಮಗಿರಿಯನ್ನು ಅನುಕರಣೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಳಿಕ, ಭಾರತವು ಒಂದೇ ದೇಶದ ಮಾದರಿಯನ್ನು ಅನುಕರಿಸದೆ, ಹಲವು ವ್ಯವಸ್ಥೆಗಳ ಅಂಶಗಳನ್ನು ತೆಗೆದುಕೊಂಡು ಭಾರತೀಯ ಸಾಮಾಜಿಕ–ರಾಜಕೀಯ ಪರಿಸ್ಥಿತಿಗೆ ಹೊಂದುವಂಥ ವಿಶಿಷ್ಟ ಸಂಯೋಜನೆಯನ್ನು ರೂಪಿಸಿತು.
ಭಾರತ ನಿಜವಾದ ರಾಜ್ಯಗಳ ಒಕ್ಕೂಟವೇ? ಅಥವಾ ಕೇಂದ್ರವೇ ಎಲ್ಲವನ್ನೂ ನಿಯಂತ್ರಿಸುತ್ತದೆಯಾ?
ವಿಭಜನೆ ಮತ್ತು ಪಾಕಿಸ್ತಾನದ ಹುಟ್ಟು, ಸಂಸ್ಥಾನಗಳ ವಿಲೀನದಿಂದ ದೇಶದ ಏಕೀಕರಣದ ಹಿನ್ನೆಲೆಯಿಂದ ನೆಹರೂ, ಅಂಬೇಡ್ಕರ್, ಪಟೇಲ್ ಮೊದಲಾದವರು ಬಲವಾದ ಕೇಂದ್ರ ಸರ್ಕಾರ ಅಗತ್ಯವೆಂದು ಭಾವಿಸಿದ್ದರು. ಆದರೆ, ಕೆಲವರು ಈ ವ್ಯವಸ್ಥೆ ಅತಿಯಾಗಿ ಕೇಂದ್ರಿಕೃತವಾಗಿದೆ ಎಂದು ಟೀಕಿಸಿದರು.
1948ರ ನವೆಂಬರ್ 15ರಂದು ಪ್ರೊ. ಕೆ.ಟಿ. ಶಾ ಅವರು, Article 1ರಲ್ಲಿ ಕೇವಲ ʼಒಕ್ಕೂಟʼ ಎನ್ನದೆ; ʼಫೆಡರಲ್ ಒಕ್ಕೂಟʼವೆಂದು ಸ್ಪಷ್ಟವಾಗಿ ಬರೆಯಬೇಕೆಂದು ಒತ್ತಾಯಿಸಿದರು. ಫೆಡರೇಷನ್ ಎಂದರೆ ರಾಜ್ಯಗಳಿಗೆ ಸ್ಪಷ್ಟವಾದ ಹಕ್ಕು, ಅಧಿಕಾರ ಮತ್ತು ಸಮಾನ ಸಾಂವಿಧಾನಿಕ ಸ್ಥಾನ ಇರಬೇಕೆಂದು ಅವರು ಪ್ರತಿಪಾದಿಸಿದರು.
ವಿವಾದ ಏಕೆ?
ಕೇಂದ್ರಕ್ಕೆ ನೀಡಿದ್ದ ಅಧಿಕಾರಗಳು ಬಹಳ ದೊಡ್ಡವು:
ತುರ್ತು ಪರಿಸ್ಥಿತಿ
ಸಮವರ್ತಿ ಪಟ್ಟಿ
ರಾಜ್ಯಪಾಲರ ವ್ಯವಸ್ಥೆ
ಕೆಲವು ಸಂದರ್ಭಗಳಲ್ಲಿ ರಾಜ್ಯದ ಆಡಳಿತವನ್ನು ಕೇಂದ್ರ ವಹಿಸಿಕೊಳ್ಳುವ ಅವಕಾಶ
ರಾಜ್ಯಗಳ ಗಡಿಗಳನ್ನು ಬದಲಿಸುವ ಸಂಸತ್ತಿನ ಅಧಿಕಾರ ಇವೆಲ್ಲವೂ ಮುಂದೆ ಕೇಂದ್ರ ಸರ್ಕಾರ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು ಎಂಬ ಆತಂಕವಿತ್ತು. ಇವುಗಳ ಕಾರಣದಿಂದ ಕೆಲವರು ಭಾರತವನ್ನು “ಒಕ್ಕೂಟ ರೂಪದಲ್ಲಿರುವ ಏಕೀಕೃತ ಪ್ರವೃತ್ತಿʼ ಎಂದು ಟೀಕಿಸಿದರು.
ಅಂತಿಮವಾಗಿ, ʼಇಂಡಿಯಾ ಅಂದ್ರೆ ಭಾರತ ಅದು ರಾಜ್ಯಗಳ ಒಕ್ಕೂಟವಾಗಬೇಕುʼ ಎಂಬ ರೂಪ ಉಳಿಯಿತು. ರಾಷ್ಟ್ರೀಯ ಏಕತೆಗೆ ಬಲಿಷ್ಠ ಕೇಂದ್ರ vs ರಾಜ್ಯಗಳ ಸ್ವಾಯತ್ತತೆ ಎಂಬ ಸಂಘರ್ಷ ಉಂಟಾಯಿತು.
ಗಣರಾಜ್ಯದ ಮೂಲ ಗ್ರಾಮವೇ? ವ್ಯಕ್ತಿಯೇ?
ಇದು ಅಂಬೇಡ್ಕರ್ ಅವರ ಅತ್ಯಂತ ಪ್ರಸಿದ್ಧ ಮತ್ತು ವಿವಾದಾತ್ಮಕ ನಿಲುವುಗಳಲ್ಲಿ ಒಂದು. ಗಾಂಧಿವಾದಿ ಧೋರಣೆಯ ಹಲವರು ಭಾರತವನ್ನು ಕೆಳಮಟ್ಟದಿಂದ ಕಟ್ಟಬೇಕು; ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಗಣರಾಜ್ಯಗಳೇ ಪ್ರಜಾಪ್ರಭುತ್ವದ ಮೂಲ ಘಟಕವಾಗಬೇಕು ಎಂದು ವಾದಿಸಿದರು.
ಅಂಬೇಡ್ಕರ್ ಏನು ಹೇಳಿದರು?
1948ರ ನವೆಂಬರ್ 4ರಂದು ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಗ್ರಾಮಗಳನ್ನು ರೊಮ್ಯಾಂಟಿಕ್ ರೀತಿಯಲ್ಲಿ ನೋಡುವುದಲ್ಲ. ಜಾತಿ, ಅಸ್ಪೃಶ್ಯತೆ, ಸ್ಥಳೀಯ ಪ್ರಭುತ್ವ ಮತ್ತು ಸಂಕುಚಿತ ಸಾಮಾಜಿಕ ವ್ಯವಸ್ಥೆ ಗ್ರಾಮಗಳಲ್ಲಿ ಅತ್ಯಂತ ಬಲವಾಗಿದೆ ಎಂದು ಪ್ರತಿಪಾದಿಸಿದರು. ಬಳಿಕ ಕರಡು ಸಂವಿಧಾನವು ʼಹಳ್ಳಿʼಗಳ ಬದಲು ʼವ್ಯಕ್ತಿʼಯನ್ನು ಮೂಲ ಘಟಕವಾಗಿ ಸ್ವೀಕರಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಇದಕ್ಕೆ ವಿರೋಧವೂ ಬಂತು
ಬಿ.ಪಿ. ಝುಂಜುನ್ವಾಲಾ 1949ರ ನವೆಂಬರ್ 23ರಂದು ಅಂಬೇಡ್ಕರ್ ಹೇಳಿಕೆಯನ್ನು ಕಟುವಾಗಿ ಪ್ರಶ್ನಿಸಿ, “ಸ್ವಾತಂತ್ರ್ಯ ಚಳವಳಿಯಲ್ಲಿ ಗ್ರಾಮೀಣ ಭಾರತದ ಕೊಡುಗೆಯನ್ನು ಮರೆತರೆ ತಪ್ಪು; ಗ್ರಾಮಗಳನ್ನು ನಾಶಮಾಡಿದ್ದು ಬ್ರಿಟಿಷ್ ಕೇಂದ್ರಿಕೃತ ಆಡಳಿತ” ಎಂದು ವಾದಿಸಿದರು.
ಅಂತಿಮವಾಗಿ, ವ್ಯಕ್ತಿಯ ಮೂಲಭೂತ ಹಕ್ಕುಗಳು ಸಂವಿಧಾನದ ಕೇಂದ್ರದಲ್ಲಿ ಉಳಿದವು. ಪಂಚಾಯಿತಿಗಳಿಗೆ ನಿರ್ದೇಶಕ ತತ್ವಗಳಲ್ಲಿ ಸ್ಥಾನ ಸಿಕ್ಕಿತು; ನಂತರ 73ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸ್ವರಾಜ್ಯಕ್ಕೆ ಬಲವಾದ ಸಾಂವಿಧಾನಿಕ ಸ್ಥಾನ ದೊರೆಯಿತು.
ಗಾಂಧಿಯ ಗ್ರಾಮ ಸ್ವರಾಜ್ಯ vs ಅಂಬೇಡ್ಕರ್ರ ವ್ಯಕ್ತಿಕೇಂದ್ರಿತ ನಾಗರಿಕತ್ವ
ಮೂಲಭೂತ ಹಕ್ಕುಗಳ ಕರಡು ಹೊರಬಂದಾಗಲೇ ಅತ್ಯಂತ ತೀಕ್ಷ್ಣ ಟೀಕೆ ಮಾಡಿದವರಲ್ಲಿ ಕಮ್ಯುನಿಸ್ಟ್ ಸದಸ್ಯ ಸೋಮನಾಥ ಲಾಹಿರಿ ಪ್ರಮುಖರು. ಇವರು 1947ರ ಏಪ್ರಿಲ್ 29ರಂದು, “ಹಕ್ಕು ನೀಡಿದ ಪ್ರತಿಯೊಂದು ವಿಧಿಯ ಜೊತೆ ಸರ್ಕಾರಕ್ಕೆ ನಿರ್ಬಂಧ ವಿಧಿಸುವ ಅವಕಾಶ ಇಟ್ಟಿದ್ದೀರಿ; ಬ್ರಿಟಿಷ್ ಸರ್ಕಾರಕ್ಕಿಂತ ಸ್ವತಂತ್ರ ಭಾರತದ ಸರ್ಕಾರಕ್ಕೆ ಏಕೆ ಅಷ್ಟು ಅಧಿಕಾರ ಬೇಕು?” ಎಂದು ಕೇಳಿದರು.
ಅವರ ಪ್ರಶ್ನೆಯ ಅರ್ಥ ಸರಳ: ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟು, ಅದನ್ನು ನಿರ್ಬಂಧಿಸಲು ಸರ್ಕಾರಕ್ಕೆ ವಿಶಾಲ ಅಧಿಕಾರ ನೀಡಿದರೆ ಆ ಸ್ವಾತಂತ್ರ್ಯದ ಮೌಲ್ಯವೇನು? ಎಂಬುದು.
ಅಂತಿಮವಾಗಿ, ಭಾರತದ ಸಂವಿಧಾನ ಸಂಪೂರ್ಣ ಅನಿಯಂತ್ರಿತ ಸ್ವಾತಂತ್ರ್ಯ ನೀಡಲಿಲ್ಲ. ಮಾತು, ಸಭೆ, ಸಂಘಟನೆ ಮುಂತಾದ ಸ್ವಾತಂತ್ರ್ಯಗಳನ್ನು ರಕ್ಷಿಸುತ್ತಲೇ ಕೆಲವು ಸಂವಿಧಾನಾತ್ಮಕ ನಿರ್ಬಂಧಗಳಿಗೆ ಅವಕಾಶ ನೀಡಿತು. ಈ ವಿವಾದ ಇಂದಿಗೂ Article 19 ಕುರಿತ ಪ್ರತಿಯೊಂದು ದೊಡ್ಡ ಪ್ರಕರಣದಲ್ಲೂ ಮರುಕಳಿಸುತ್ತಲೇ ಇರುತ್ತದೆ.
“ಬ್ರಿಟಿಷರು ನಮ್ಮನ್ನು ವಿಚಾರಣೆ ಇಲ್ಲದೆ ಬಂಧಿಸಿದರು; ಈಗ ನಾವೂ ಅದೇ ಅಧಿಕಾರ ಇಟ್ಟುಕೊಳ್ಳಬೇಕೇ?: H.V. ಕಾಮತ್
ಇದು ಸಂವಿಧಾನ ಸಭೆಯ ಅತ್ಯಂತ ಅಸಹಜ ಮತ್ತು ಗಂಭೀರ ಚರ್ಚೆಗಳಲ್ಲಿ preventive detention(ತಡೆಗಟ್ಟುವ, ಬಂಧಿಸುವುದು) ಒಂದಾಗಿತ್ತು. ಕಾಮತ್ ಅವರು, ಸರ್ಕಾರಕ್ಕೆ ತಡೆಹಿಡಿಯುವ ಮತ್ತು ಬಂಧಿಸುವ ಹಿಡಿತ ಸಾಧಿಸುವುದನ್ನು ಮತ್ತೆ ಮತ್ತೆ ವಿರೋಧಿಸಿದರು.
“ಏಕೈಕ ಮೂಲಭೂತ ಹಕ್ಕು… ವಿಚಾರಣೆಯಿಲ್ಲದೆ ಬಂಧಿಸುವ ಹಕ್ಕು” ಎಂದು ವ್ಯಂಗ್ಯ ಮಾಡಿದರು. ಜತೆಗೆ ವ್ಯಕ್ತಿಯನ್ನು ಮೂರು ತಿಂಗಳಿಗಿಂತ ಹೆಚ್ಚು ಬಂಧಿಸಿದರೆ ಕನಿಷ್ಠ ಸಲಹಾ ಮಂಡಳಿ ಮುಂದೆ ಪ್ರಕರಣ ಹೋಗಬೇಕು ಎಂಬ ರಕ್ಷಣೆಯನ್ನು ಒತ್ತಾಯಿಸಿದರು. ಅಲ್ಲದೆ 1949ರ ಸೆಪ್ಟೆಂಬರ್ನಲ್ಲೂ ಅವರು ʼವ್ಯಕ್ತಿಯ ಸ್ವಾತಂತ್ರ್ಯ ಮತ್ತು ರಾಷ್ಟ್ರದ ಭದ್ರತೆಯ ನಡುವೆ ಸಮತೋಲನ ಬೇಕುʼ ಎಂದು ಎಚ್ಚರಿಸಿದ್ದರು.
ಅಂತಿಮವಾಗಿ, Preventive detention ಅನ್ನು ಸಂಪೂರ್ಣ ತೆಗೆದುಹಾಕಲಿಲ್ಲ. ಅಂದರೆ, ಸ್ವಾತಂತ್ರ್ಯ ಹೋರಾಟಗಾರರನ್ನೇ ಬಂಧಿಸಲು ಬ್ರಿಟಿಷರು ಬಳಸಿದ್ದ ಸಾಧನದ ಒಂದು ರೂಪ ಸ್ವತಂತ್ರ ಭಾರತದ ಸಂವಿಧಾನದಲ್ಲಿಯೂ ಉಳಿಯಿತು. ಇದು ಕರಡು ಸಂವಿಧಾನದ ದೊಡ್ಡ ವಿರೋಧಾಭಾಸಗಳಲ್ಲಿ ಒಂದೆಂದು ವಿಮರ್ಶಕರು ನೋಡಿದರು.
“ಅಮೆರಿಕದಂತೆ ಬಲಿಷ್ಠ ಅಧ್ಯಕ್ಷ ಬೇಕಾ? ಬ್ರಿಟನ್ನಂತೆ ಸಂಸತ್ತಿಗೆ ಉತ್ತರದಾಯಿ ಸರ್ಕಾರ ಬೇಕಾ?“
ಭಾರತದ ಆಡಳಿತ ಮಾದರಿಯನ್ನು ನಿರ್ಧರಿಸಿದ ಮೂಲಭೂತ ಸಂಘರ್ಷವಾಗಿತ್ತು. ಇದಕ್ಕೆ, 1948ರ ನವೆಂಬರ್ 4ರಂದು ಅಂಬೇಡ್ಕರ್ ಸ್ಪಷ್ಟನೆ : “ಅಮೆರಿಕದಲ್ಲಿ ಅಧ್ಯಕ್ಷನೇ ನಿಜವಾದ ಕಾರ್ಯಾಂಗ. ಆದರೆ ಭಾರತದಲ್ಲಿ ರಾಷ್ಟ್ರಪತಿ, ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಆದರೆ ರಾಷ್ಟ್ರವನ್ನು ಆಳುವುದಿಲ್ಲ. ಅಂದರೆ ಭಾರತದ ರಾಷ್ಟ್ರಪತಿ ಮಂತ್ರಿಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸಬೇಕು” ಎಂದು ವಿವರಿಸಿದರು.
ಅವರ ಮುಖ್ಯ ತರ್ಕ: ಒಂದು ಪ್ರಜಾಪ್ರಭುತ್ವದ ಕಾರ್ಯಾಂಗಕ್ಕೆ ಸ್ಥಿರತೆ ಮತ್ತು ಉತ್ತರದಾಯಿತ್ವ ಎಂಬ ಎರಡು ಗುಣ ಬೇಕು. ಹಾಗಾಗಿ ಅಧ್ಯಕ್ಷತೆ ವ್ಯವಸ್ಥೆ ಹೆಚ್ಚು ಸ್ಥಿರತೆ ಕೊಡಬಹುದು; ಆದರೆ ಸಂಸದೀಯ ವ್ಯವಸ್ಥೆ ಹೆಚ್ಚು ಉತ್ತರದಾಯಿತ್ವವಾಗಿರುತ್ತದೆ” ಎಂದರು. ಇದರಿಂದ ಭಾರತ ಉತ್ತರದಾಯಿತ್ವ ಸರ್ಕಾರಕ್ಕೆ ಆದ್ಯತೆ ನೀಡಿತು.
ವಿರೋಧ
ಕೆ ಟಿ ಶಾ ನೇರವಾಗಿ ಜನರಿಂದ ಆಯ್ಕೆಯಾಗುವ ಅಧ್ಯಕ್ಷನ ಪರ ವಾದ ಮಂಡಿಸಿದ್ದರು. ಡಿಸೆಂಬರ್ 1948ರ ಚರ್ಚೆಗಳಲ್ಲಿ ಅಂಬೇಡ್ಕರ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು. ಅಂತಿಮವಾಗಿ ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲವೇ ನಿಜವಾದ ಕಾರ್ಯಾಂಗ ಕೇಂದ್ರವಾಯಿತು.
“ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತಕ್ಷೇತ್ರ ಬೇಕಾ?“
ಭಾರತ ವಿಭಜನೆಯ ನಂತರ ಈ ಪ್ರಶ್ನೆ ಅತ್ಯಂತ ಸೂಕ್ಷ್ಮವಾಗಿತ್ತು. ಬ್ರಿಟಿಷ್ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಧರ್ಮ ಮತ್ತು ಸಮುದಾಯ ಆಧಾರಿತ ಪ್ರತ್ಯೇಕ ಮತದಾರರ ಕ್ಷೇತ್ರಗಳು ಇದ್ದವು. ಆದರೆ, 1949ರ ಜೂನ್ 16ರ ಸಂವಿಧಾನ ಸಭೆಯ ನಿರ್ಧಾರದಲ್ಲಿ ಅಂಬೇಡ್ಕರ್ ಅವರು, “ಇನ್ನು ಮುಂದೆ ಯಾವುದೇ ಪ್ರತ್ಯೇಕ ಮತದಾರರು ಇರುವುದಿಲ್ಲ. ಅಂತೆಯೇ ಒಂದೇ ಪ್ರಾದೇಶಿಕ ಕ್ಷೇತ್ರದಲ್ಲಿ ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಆಧಾರದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಇರಬಾರದು” ಎಂಬುದನ್ನು ಪ್ರಸ್ತಾಪಿಸಿದರು.
ಮುಸ್ಲಿಂ ಸದಸ್ಯರೊಳಗೂ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿತ್ತು. ಈ ಹಿನ್ನೆಲೆಯಲ್ಲಿ ತಾಜಮುಲ್ ಹುಸೇನ್ ಅವರು, ಜಂಟಿ ಮತಕ್ಷೇತ್ರದ ಪರವಾಗಿ ಬಲವಾಗಿ ವಾದಿಸಿದರು; ಕೆಲವು ಇತರ ಸದಸ್ಯರು ಪ್ರತ್ಯೇಕ ಅಥವಾ ವಿಶೇಷ ಪ್ರತಿನಿಧಿತ್ವವನ್ನು ಮುಂದುವರಿಸಲು ಬಯಸಿದರು.
ಹಾಗಾದರೆ SC/ST ಮೀಸಲಾತಿ?
ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳ ಜಂಟಿ ಮತದಾರರ ಒಳಗೇ ಮೀಸಲು ಸ್ಥಾನಗಳನ್ನು ನೀಡಲಾಯಿತು. ಹೀಗಾಗಿ ಎರಡು ತತ್ವಗಳ ನಡುವೆ ಸಮತೋಲನಕ್ಕಾಗಿ ಪ್ರತ್ಯೇಕ ರಾಜಕೀಯ ಸಮುದಾಯಗಳ ನಿರ್ಮಾಣ ಬೇಡ.
ಆದರೆ ಇತಿಹಾಸದಿಂದ ಹೊರಗಿಟ್ಟ ಸಮುದಾಯಗಳಿಗೆ ಪ್ರತಿನಿಧಿತ್ವ ಬೇಕು ಎಂಬುದನ್ನು ಅಂಬೇಡ್ಕರ್ ಪ್ರತಿಪಾದಿಸಿದರು.
“ಜಮೀನ್ದಾರರ ಆಸ್ತಿ ಹಕ್ಕು ಮುಖ್ಯವೇ? ಭೂಸುಧಾರಣೆ ಮುಖ್ಯವೇ?“
ಇದು ಆರ್ಥಿಕವಾಗಿ ಅತ್ಯಂತ ದೊಡ್ಡ ಸಂಘರ್ಷ. ಸ್ವಾತಂತ್ರ್ಯದ ನಂತರ ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಬೇಕಿತ್ತು. ಆದರೆ ಸರ್ಕಾರ ಭೂಮಿ ವಶಪಡಿಸಿಕೊಂಡರೆ ಪೂರ್ಣ ಪರಿಹಾರ ಕೊಡಬೇಕೇ? ನ್ಯಾಯಾಲಯ ಅದನ್ನು ಪರಿಶೀಲಿಸಬಹುದೇ? ಎಂಬ ಪ್ರಶ್ನೆ ಬಂತು.
ಜಮೀನ್ದಾರರ ಪರ ವಾದ : ಶ್ಯಾಮನಂದನ್ ಸಹಾಯ್ ಸೇರಿದಂತೆ ಕೆಲವರು ಖಾಸಗಿ ಆಸ್ತಿಗೆ ಗೌರವ ಕೊಡಬೇಕು ಮತ್ತು ಸ್ವಾಧೀನ ಮಾಡಿದರೆ ಸಂಪೂರ್ಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನೊಂದು ಪಾಳಯದ ವಿರುದ್ಧ ವಾದ: ಜಮೀನ್ದಾರಿ ಸಾಮಾನ್ಯ ಖಾಸಗಿ ಆಸ್ತಿಯಂತಲ್ಲ; ಸಾಮಾಜಿಕ ಪರಿವರ್ತನೆಗಾಗಿ ಭೂಸುಧಾರಣೆಯನ್ನು ನ್ಯಾಯಾಲಯದ ಕೊನೆಯಿಲ್ಲದ ಮೊಕದ್ದಮೆಗೆ ಬಲಿಯಾಗಲು ಬಿಡಬಾರದು ಎಂಬ ವಾದ ಸೃಷ್ಟಿಯಾಯಿತು. 1949ರ ಸೆಪ್ಟೆಂಬರ್ 10ರ ಚರ್ಚೆಯಲ್ಲಿಯೂ ಜಮೀನ್ದಾರರ ಆಸ್ತಿ ಹಕ್ಕಿನ ಸ್ವರೂಪವನ್ನೇ ಪ್ರಶ್ನಿಸಲಾಯಿತು.
ಅಂತಿಮವಾಗಿ, ಮೂಲ ಸಂವಿಧಾನದಲ್ಲಿ ಆಸ್ತಿ ಮೂಲಭೂತ ಹಕ್ಕಾಗಿದ್ದರೂ, ಭೂಸುಧಾರಣೆ–ಆಸ್ತಿ ಹಕ್ಕಿನ ಸಂಘರ್ಷ ಸ್ವಾತಂತ್ರ್ಯಾನಂತರದ ಮೊದಲ ದಶಕಗಳ ದೊಡ್ಡ ನ್ಯಾಯಾಂಗ–ಸಂಸತ್ ಸಂಘರ್ಷವಾಯಿತು. 1978ರಲ್ಲಿ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾಯಿತು.
ಹಿಂದಿ ತಕ್ಷಣ ಬರಬೇಕಾ? ಇಂಗ್ಲಿಷ್ ಮುಂದುವರಿಯಬೇಕಾ?
ಸಂವಿಧಾನ ಸಭೆಯಲ್ಲಿ ತೀವ್ರ ಒತ್ತಡ ಹೆಚ್ಚಿಸಿದ ವಿಚಾರಗಳಲ್ಲಿ ಭಾಷೆಯ ಪ್ರಶ್ನೆ ಪ್ರಮುಖವಾಗಿತ್ತು. ಹಿಂದಿ ಪರ ಪಾಳಯ, ಪುರುಷೋತ್ತಮ ದಾಸ್ ಟಂಡನ್ ಸೇರಿದಂತೆ ಹಿಂದಿ ಪರ ಸದಸ್ಯರು, “ಹಿಂದಿ ಆಡಳಿತ ಭಾಷೆಯಾಗಿ ಸ್ವೀಕಾರವಾದ ಮೇಲೆ ನ್ಯಾಯಾಲಯ ಮತ್ತು ಆಡಳಿತದಲ್ಲೂ ಅದಕ್ಕೆ ತ್ವರಿತ ಅವಕಾಶ ಕೊಡಬೇಕು” ಎಂದು ಒತ್ತಾಯಿಸಿದರು.
ದಕ್ಷಿಣ ಮತ್ತು ಹಿಂದಿಯೇತರ ಪ್ರದೇಶಗಳ ಆತಂಕ
ಹಿಂದಿಯನ್ನು ತಕ್ಷಣ ಆಡಳಿತ ಭಾಷೆಯನ್ನಾಗಿಸಿದರೆ ಲಕ್ಷಾಂತರ ಮಂದಿ ಮತ್ತು ಹಲವು ರಾಜ್ಯಗಳು ಅನನುಕೂಲಕ್ಕೆ ಒಳಗಾಗುತ್ತಾರೆ ಎಂಬ ಬಲವಾದ ಆತಂಕವಿತ್ತು.
ಗೋಪಾಲಸ್ವಾಮಿ ಅಯ್ಯಂಗಾರ್, “ಹಿಂದಿ ಅಂತಿಮ ಗುರಿಯಾಗಿರಬಹುದು. ಆದರೆ ನಾವು ಇಂಗ್ಲಿಷ್ ಭಾಷೆಯನ್ನು ಒಂದೇ ಬಾರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು. ಹೀಗಾಗಿ 15 ವರ್ಷಗಳ ಬದಲಾವಣೆಯ ಅವಧಿಯನ್ನು ಪ್ರಸ್ತಾಪಿಸಲಾಯಿತೇ ಹೊರತು, ಸಂವಿಧಾನದಲ್ಲಿ ಹಿಂದಿಯನ್ನು ʼರಾಷ್ಟ್ರಭಾಷೆʼ ಎಂದು ಘೋಷಿಸಿಲ್ಲ.
Article 343ರಲ್ಲಿ, ಒಕ್ಕೂಟ ಅಧಿಕೃತ ಭಾಷೆ = ದೇವನಾಗರಿ ಲಿಪಿಯಲ್ಲಿ ಹಿಂದಿ ಎನ್ನಲಾಗಿದೆ. ಈ ವ್ಯತ್ಯಾಸ ಇಂದಿಗೂ ಭಾಷಾ ರಾಜಕಾರಣದಲ್ಲಿ ಮಹತ್ವದ್ದಾಗಿದೆ.
ಹೊಟ್ಟೆ ತುಂಬಿಸುವ ಹಕ್ಕು ನ್ಯಾಯಾಲಯದಲ್ಲಿ ಕೇಳಲಾಗದಿದ್ದರೆ ಅದು ಯಾವ ಹಕ್ಕು?”
ಇದು ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವಗಳ ನಡುವಿನ ಮಹತ್ವದ ಸಂಘರ್ಷವಾಗಿತ್ತು. ಉದ್ಯೋಗ, ಸಮಾನ ವೇತನ, ಶಿಕ್ಷಣ, ಆರೋಗ್ಯ, ಬದುಕಿಗೆ ಅಗತ್ಯವಾದ ಸಾಮಾಜಿಕ–ಆರ್ಥಿಕ ವ್ಯವಸ್ಥೆಗಳನ್ನು ನ್ಯಾಯಾಲಯದಲ್ಲಿ ಜಾರಿಗೊಳಿಸಬೇಕಾದ ಹಕ್ಕುಗಳನ್ನಾಗಿಸಬೇಕೇ? ಎಂಬ ಪ್ರಶ್ನೆ ಇತ್ತು.
ಟೀಕೆ : ಕೆಲ ಸದಸ್ಯರು ನಿರ್ದೇಶನ ತತ್ವಗಳನ್ನು ಕೇವಲ ʼಧಾರ್ಮಿಕ ಅಭಿವ್ಯಕ್ತಿಗಳುʼ ಎಂದು ಟೀಕಿಸಿದರು. ನ್ಯಾಯಾಲಯದಲ್ಲಿ ಜಾರಿಯಾಗದ ಸಾಂವಿಧಾನಿಕ ಹಕ್ಕು ಅಥವಾ ತತ್ವಕ್ಕೆ ಅರ್ಥವೇನು? ಎಂಬ ಪ್ರಶ್ನೆ ಎತ್ತಲಾಯಿತು.
ಅಂಬೇಡ್ಕರ್ ಉತ್ತರ : ಅಂಬೇಡ್ಕರ್ ಅದನ್ನು ಒಪ್ಪಲಿಲ್ಲ. ಅವರು, “ನಿರ್ದೇಶನ ತತ್ವಗಳು ಕೇವಲ ಧಾರ್ಮಿಕ ಹಾರೈಕೆಗಳ ಅಧ್ಯಾಯವಲ್ಲ. ಅವು ಮುಂದಿನ ಸರ್ಕಾರಗಳು ಯಾವ ದಿಕ್ಕಿನಲ್ಲಿ ಆಡಳಿತ ನಡೆಸಬೇಕು ಎಂಬ ಸಾಂವಿಧಾನಿಕ ನಿರ್ದೇಶನ” ಎಂದು ಉತ್ತರಿಸಿದರು. ಮುಂದುವರೆದು, ಸಂವಿಧಾನದ ಗುರಿ ಕೇವಲ ರಾಜಕೀಯ ಪ್ರಜಾಪ್ರಭುತ್ವ ಅಲ್ಲ; ಆರ್ಥಿಕ ಪ್ರಜಾಪ್ರಭುತ್ವವೂ ಆಗಬೇಕು” ಎಂದು ಪ್ರತಿಪಾದಿಸಿದರು.
ಅಂತಿಮವಾಗಿ, ಮೂಲಭೂತ ಹಕ್ಕುಗಳು ನ್ಯಾಯಾಲಯದಲ್ಲಿ ಜಾರಿಯಾಗುವ ಹಕ್ಕುಗಳಾದವು. ನಿರ್ದೇಶನ ತತ್ವಗಳು ಸರ್ಕಾರದ ಸಾಮಾಜಿಕ–ಆರ್ಥಿಕ ಗುರಿಗಳಾದವು. ಮುಂದೆ ಭಾರತೀಯ ಸಂವಿಧಾನದ ಬಹುತೇಕ ದೊಡ್ಡ ಸಾಮಾಜಿಕ ನ್ಯಾಯ ಕಾರ್ಯಕ್ರಮಗಳು ಈ ಎರಡೂ ಭಾಗಗಳ ನಡುವಿನ ಸಂವಾದದಿಂದಲೇ ಬೆಳೆದವು.
ಸಂವಿಧಾನ ರಚನೆ ಒಂದು ಬೃಹತ್ ಸಾಮೂಹಿಕ ಪ್ರಕ್ರಿಯೆಯಾಗಿತ್ತು. ಸಂವಿಧಾನ ಸಭೆಯ ವಿವಿಧ ಸಮಿತಿಗಳು ಹಲವು ಪ್ರಮುಖ ವಿಷಯಗಳ ಕುರಿತು ವರದಿ ಮತ್ತು ಶಿಫಾರಸುಗಳನ್ನು ನೀಡಿದ್ದವು. ಜವಾಹರಲಾಲ್ ನೆಹರೂ ಅವರು ಮಂಡಿಸಿದ ಉದ್ದೇಶಗಳ ನಿರ್ಣಯ, ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಸಲಹಾ ಸಮಿತಿಯ ವರದಿಗಳು ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಕುರಿತ ಸಮಿತಿಗಳ ನಿರ್ಧಾರಗಳು ಸಂವಿಧಾನದ ಮೂಲಭೂತ ದಿಕ್ಕನ್ನು ರೂಪಿಸಿದ್ದವು. ಅಲ್ಲದೆ, ಸಂವಿಧಾನ ಸಭೆಯ ಸಂವಿಧಾನ ಸಲಹೆಗಾರರಾಗಿದ್ದ ಬಿ ಎನ್ ರಾವ್ ಅವರ ಪಾತ್ರವೂ ಮಹತ್ವದ್ದಾಗಿತ್ತು. ವಿವಿಧ ಸಮಿತಿಗಳ ವರದಿ ಮತ್ತು ನಿರ್ಧಾರಗಳನ್ನು ಒಟ್ಟುಗೂಡಿಸಿ ಅವರು ಮೊದಲ ಸಮಗ್ರ ಕರಡನ್ನು ಸಿದ್ಧಪಡಿಸಿದ್ದರು. ಆ ಕರಡನ್ನು ಆಧಾರವಾಗಿಟ್ಟುಕೊಂಡು ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ ಸಂವಿಧಾನಕ್ಕೆ ಕಾನೂನಾತ್ಮಕ, ಆಡಳಿತಾತ್ಮಕ ಮತ್ತು ರಾಜಕೀಯವಾಗಿ ಸುಸಂಬದ್ಧವಾದ ಆಕಾರ ನೀಡಿತು.
“ಕರಡು ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದರೂ ಎಲ್ಲರೂ ನಿರಂತರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಒಬ್ಬರು ರಾಜೀನಾಮೆ ನೀಡಿದರು, ಒಬ್ಬರು ನಿಧನರಾದರು, ಕೆಲವರು ಆರೋಗ್ಯ ಮತ್ತು ಇತರ ಜವಾಬ್ದಾರಿಗಳ ಕಾರಣಗಳಿಂದ ಕಳಚಿಕೊಂಡರು. ಹಾಗಾಗಿ ಸಂವಿಧಾನದ ಕರಡು ರೂಪಿಸುವ ಗುರುತರ ಹೊಣೆ ಅಂಬೇಡ್ಕರ್ ಅವರ ಮೇಲೆ ಬಿದ್ದಿತ್ತು. ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು” ಎಂದು ಕರಡು ಸಮಿತಿಯ ಸದಸ್ಯರಾಗಿದ್ದ ಟಿ ಟಿ ಕೃಷ್ಣಮಾಚಾರಿ ಅವರು 1948ರ ನವೆಂಬರ್ನಲ್ಲಿ ಸಂವಿಧಾನ ಸಭೆಯಲ್ಲೇ ಪ್ರಸ್ತಾಪಿಸಿದ್ದರು. ಈ ದಾಖಲೆಯೇ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಏಕೆ ವಿಶಿಷ್ಟವಾಗಿತ್ತು ಎಂಬುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.
ಕರಡು ಸಮಿತಿ 1947ರ ಆಗಸ್ಟ್ 30ರಿಂದ ಒಟ್ಟು 141 ದಿನಗಳ ಕಾಲ ಸಂವಿಧಾನ ಕರಡು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಸಂವಿಧಾನ ಸಲಹೆಗಾರರ ಕರಡಿನಲ್ಲಿ 243 ವಿಧಿಗಳು ಮತ್ತು 13 ಅನುಸೂಚಿಗಳಿದ್ದವು. ಕರಡು ಸಮಿತಿ ಸಂವಿಧಾನ ಸಭೆಗೆ ನೀಡಿದ ಮೊದಲ ಕರಡಿನಲ್ಲಿ 315 ವಿಧಿಗಳು ಮತ್ತು ಎಂಟು ಅನುಸೂಚಿಗಳಿದ್ದವು. ಅಂತಿಮ ಸಂವಿಧಾನದಲ್ಲಿ 395 ವಿಧಿಗಳು ಮತ್ತು ಎಂಟು ಅನುಸೂಚಿಗಳು ಉಳಿದವು.
ಈ ಚರ್ಚೆಗಳ ಸಮಯದಲ್ಲಿ ಪ್ರತಿಯೊಂದು ಪ್ರಮುಖ ವಿಧಿಯ ಹಿಂದಿನ ಉದ್ದೇಶವನ್ನು ವಿವರಿಸುವುದು, ವಿರೋಧಗಳಿಗೆ ಉತ್ತರಿಸುವುದು, ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಒಪ್ಪಿಕೊಳ್ಳುವುದು, ತಿರಸ್ಕರಿಸುವುದಕ್ಕೆ ಕಾರಣಗಳನ್ನು ವಿವರಿಸುವುದರ ಜತೆಗೆ ಕರಡು ಸಂವಿಧಾನದ ಸಮಗ್ರತೆಯನ್ನು ಕಾಪಾಡುವುದು ಅಂಬೇಡ್ಕರ್ ಅವರ ಪ್ರಮುಖ ಹೊಣೆಗಾರಿಕೆಯಾಗಿತ್ತು. ಅದಕ್ಕಾಗಿಯೇ ಅವರನ್ನು ‘ಭಾರತ ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗುತ್ತದೆ.
ಸಾಮಾಜಿಕ ನ್ಯಾಯದ ದಿಕ್ಕು
ಭಾರತದ ಸಂವಿಧಾನ ಕೇಂದ್ರದಲ್ಲಿ ಕೇವಲ ಆಡಳಿತದ ಚೌಕಟ್ಟನ್ನು ರೂಪಿಸಲಿಲ್ಲ. ವ್ಯಕ್ತಿಯ ಗೌರವ, ಕಾನೂನಿನ ಮುಂದೆ ಸಮಾನತೆ, ತಾರತಮ್ಯ ನಿಷೇಧ, ಅಸ್ಪೃಶ್ಯತೆ ನಿರ್ಮೂಲನೆ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯ, ಸಂವಿಧಾನಾತ್ಮಕ ಪರಿಹಾರ, ಸ್ವತಂತ್ರ ನ್ಯಾಯಾಂಗ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ಸಾರ್ವತ್ರಿಕ ವಯಸ್ಕ ಮತದಾನಗಳಂತಹ ಹಕ್ಕು ಮತ್ತು ತತ್ವಗಳಿಗೆ ಕಾನೂನಾತ್ಮಕ ಭದ್ರತೆ ನೀಡಿತು.
ಶತಮಾನಗಳ ಕಾಲ ಜಾತಿ, ವರ್ಣ, ಲಿಂಗ ಹಾಗೂ ಆರ್ಥಿಕ, ಸಾಮಾಜಿಕ ಸ್ಥಾನಮಾನಗಳೇ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತಿದ್ದ ಸಮಾಜದಲ್ಲಿ ಪ್ರತಿ ನಾಗರಿಕರಿಗೂ ಹಕ್ಕುಗಳನ್ನು ನೀಡಿದ್ದಷ್ಟೇ ಅಲ್ಲದೆ; ಅಧಿಕಾರಕ್ಕೆ ಮಿತಿ ಹಾಕಿದ ಸಂವಿಧಾನ ರಚನೆ ಒಂದು ಸಾಮಾಜಿಕ ಕ್ರಾಂತಿಯ ಹೆಜ್ಜೆಯಾಗಿತ್ತು.
ಸುಮಾರು ಮೂರು ವರ್ಷಗಳ ಚರ್ಚೆ ಮತ್ತು ಪರಿಶೀಲನೆಯ ಬಳಿಕ 1949ರ ನವೆಂಬರ್ 26ರಂದು ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 24ರಂದು ಸದಸ್ಯರು ಸಂವಿಧಾನದ ಅಂತಿಮ ಪ್ರತಿಗೆ ಸಹಿ ಹಾಕಿದರು. 1950ರ ಜನವರಿ 26ರಂದು ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂತು. ಅಂದು ಭಾರತ ಕೇವಲ ಸ್ವತಂತ್ರ ರಾಷ್ಟ್ರವಾಗಿರಲಿಲ್ಲ; ಭಾರತದ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನದ ಅಡಿಯಲ್ಲಿ ನಡೆಯುವ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಯಿತು.
ಹೀಗಾಗಿ ಆಗಸ್ಟ್ 29 ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ವಿಶೇಷವಾದ ದಿನ. ಸ್ವತಂತ್ರ ಭಾರತದ ರಾಜಕೀಯ ಆಶಯಗಳನ್ನು ಕಾನೂನಿನ ರೂಪಕ್ಕೆ ತರುವ ನಿರ್ಣಾಯಕ ಹಂತ ಆರಂಭವಾದ ದಿನವದು. ಹಾಗಾಗಿ ಅಂಬೇಡ್ಕರ್ ಅವರನ್ನು ‘ಸಂವಿಧಾನದ ಶಿಲ್ಪಿ’ಯಾಗಿ ನೆನಪಿಸಿಕೊಳ್ಳುವುದರ ಜತೆಗೆ, ಅವರು ಒತ್ತಿಹೇಳಿದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಆಡಳಿತದ ಮೌಲ್ಯಗಳು ಪ್ರಸ್ತುತ ಭಾರತದಲ್ಲಿ ಎಷ್ಟರ ಮಟ್ಟಿಗೆ ಜೀವಂತವಾಗಿವೆ ಎಂಬುದನ್ನೂ ಅವಲೋಕಿಸಬೇಕಾಗಿದೆ.
ಇದನ್ನೂ ಓದಿದ್ದೀರಾ? ರಾಮಕೃಷ್ಣ ಹೆಗಡೆ @ 100 | ಪಂಚಾಯತ್ ರಾಜ್ ವ್ಯವಸ್ಥೆಯ ಹರಿಕಾರ; ವಿವಾದಗಳ ಹೊದ್ದ…
ಸ್ವತಂತ್ರ ದೇಶವನ್ನು ಯಾವ ತತ್ವಗಳ ಆಧಾರದಲ್ಲಿ ನಡೆಸಬೇಕು? ನಾಗರಿಕರಿಗೆ ಯಾವ ಹಕ್ಕುಗಳನ್ನು ನೀಡಬೇಕು? ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ ಹೇಗಿರಬೇಕು? ಸರ್ಕಾರದ ಅಧಿಕಾರಕ್ಕೆ ಯಾವ ಮಿತಿಗಳಿರಬೇಕು? ಜಾತಿ, ಧರ್ಮ, ಲಿಂಗದ ಆಧಾರದ ತಾರತಮ್ಯದಿಂದ ಜನರನ್ನು ಹೇಗೆ ರಕ್ಷಿಸಬೇಕು ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲೆಂದು, 1947ರ ಆಗಸ್ಟ್ 29ರಂದು ರಚನೆಯಾದ ಕರಡು ಸಮಿತಿ ಕೇವಲ ಒಂದು ಕಾನೂನು ಗ್ರಂಥವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿಲ್ಲ; ʼಅಧಿಕಾರ ಯಾರ ಕೈಯಲ್ಲಿದ್ದರೂ ಅದು ಸಂವಿಧಾನಕ್ಕೆ ಒಳಪಟ್ಟಿರಬೇಕುʼ ಎಂಬ ಆಧುನಿಕ ಭಾರತದ ಮಹತ್ವದ ರಾಜಕೀಯ ಒಪ್ಪಂದಕ್ಕೆ ರೂಪ ನೀಡಿತು.





