ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ

Date:

ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಒಂದು ಪುರಾಣದ ಪುನರಾವಿಷ್ಕಾರ. ಅದು ಹೋಮರ್‍‌ನ ಕಾವ್ಯವನ್ನು ನಕಲಿಸುವುದಿಲ್ಲ; ಅದನ್ನು ಆಧುನಿಕ ಮಾನವ ಮನಸ್ಸಿನ ಪ್ರಶ್ನೆಗಳೊಂದಿಗೆ ಮರುಸಂವಾದಕ್ಕೆ ತರುತ್ತದೆ. ಯುದ್ಧದಿಂದ ಮರಳುವ ಮನುಷ್ಯ, ಮನೆಗೆ ತಲುಪಲು ಹೋರಾಡುವ ಆತ್ಮ, ನೆನಪುಗಳ ನಡುವೆ ದಾರಿ ಹುಡುಕುವ ವ್ಯಕ್ತಿ-ಇವೆಲ್ಲವೂ ಈ ಚಿತ್ರದ ಹೃದಯದಲ್ಲಿವೆ.

ಸಮಕಾಲೀನ ವಿಶ್ವ ಸಿನಿಮಾದ ಅಪರೂಪದ ನಿರ್ದೇಶಕ ಕ್ರಿಸ್ಟೋಫರ್ ನೋಲನ್. ಅವರ ಪ್ರತಿಯೊಂದು ಚಿತ್ರವೂ ಕಾಲ, ಸ್ಮೃತಿ, ಚೇತನ, ನೈತಿಕತೆ ಮತ್ತು ಮಾನವ ಅಸ್ತಿತ್ವದ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತುತ್ತದೆ. ಮೆಮೆಂಟೊ, ಇನ್ಸೆಪ್ಷನ್, ಇಂಟರ್‍‌ಸ್ಟೆಲ್ಲರ್, ಡಂಕಿರ್ಕ್, ಟೆನೆಟ್ ಮತ್ತು ಓಪೆನ್ಹೈಮರ್ ಚಿತ್ರಗಳಲ್ಲಿ ಅವರು ನಿರಂತರವಾಗಿ ಮಾನವನ ಒಳಜಗತ್ತಿನ ಸಂಕೀರ್ಣತೆಯನ್ನು ಶೋಧಿಸಿದ್ದಾರೆ. ಈಗ ಅವರು ಎರಡು ಸಾವಿರ ಎಂಟು ನೂರು ವರ್ಷಗಳಷ್ಟು ಹಳೆಯ ಹೋಮರ್‍‌ನ ಒಡಿಸ್ಸಿಯನ್ನು ಚಿತ್ರರೂಪಕ್ಕೆ ತಂದಿರುವುದು ಕೇವಲ ಒಂದು ಸಾಹಿತ್ಯ ಕೃತಿಯ ರೂಪಾಂತರವಲ್ಲ; ಅದು ನಾಗರಿಕತೆಯ ಮೂಲ ಪುರಾಣವನ್ನೇ ಸಮಕಾಲೀನ ಸಿನೆಮಾದ ಭಾಷೆಯಲ್ಲಿ ಮರುಚಿಂತಿಸುವ ಸೃಜನಾತ್ಮಕ ಸಾಹಸವಾಗಿದೆ. ಪ್ರಾಚೀನ ಗ್ರೀಕ್ ಪೌರಾಣಿಕ ಕಥೆಗಳ ಪ್ರಕಾರ, ಟ್ರೋಜನ್ ಯುದ್ಧವು ಕೇವಲ ಒಂದೇ ಒಂದು ಘಟನೆಯಿಂದ ಸಂಭವಿಸಲಿಲ್ಲ. ಬದಲಿಗೆ ದೇವತೆಗಳ ನಾಟಕೀಯ ಕೃತ್ಯಗಳು, ಮಾನವನ ಆಸೆಗಳು ಮತ್ತು ಮುರಿದ ಪ್ರಮಾಣಗಳ ಸರಣಿಯ ಪರಿಣಾಮದಿಂದ ಈ ಯುದ್ಧ ಸಂಭವಿಸಿತು. ಈ ಹಿನ್ನೆಲೆಯಲ್ಲಿ ಭಗ್ನಗೊಂಡ ಮನುಷ್ಯನ ಅಂತರಂಗದ ಶೋಧನೆಯನ್ನೂ ಚಿತ್ರ ಮಾಡುತ್ತದೆ.

- Advertisement -

ಈ ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ಆನಂದಿಸಲು ಗ್ರೀಕ್‌ನ ‘ಇಲಿಯಡ್’ ಮತ್ತು ‘ಒಡಿಸ್ಸಿ’ ಮಹಾಕಾವ್ಯಗಳ ತುಸು ಪರಿಚಯವಿರುವುದು ಅಗತ್ಯ. ಕಥೆಯ ಹಿನ್ನೆಲೆ ಹೀಗಿದೆ. ಗ್ರೀಕ್ ರಾಜ ಮೆನೆಲಾಸನ ಅತಿಥಿಯಾಗಿ ಸ್ಪಾರ್ಟಾಗೆ ಬಂದ ಟ್ರಾಯ್‌ನ ಯುವರಾಜ ಪ್ಯಾರಿಸ್, ಸ್ಪಾರ್ಟಾದ ರಾಣಿ ಹೆಲೆನ್‌ಳನ್ನು ಅಪಹರಿಸಿ ಒಯ್ಯತ್ತಾನೆ. ತಮ್ಮನ ಹೆಂಡತಿಯನ್ನು ಯುದ್ಧ ಸಾರಿ ಬಿಡಿಸಿಕೊಂಡು ಬರುವುದು ಅಣ್ಣ ಅಗೆಮೆನ್ಮಾನ್‌ಗೆ ವಂಶದ ಪ್ರತಿಷ್ಠೆಗಿಂತ ಗ್ರೀಕರ ಸಾಮ್ರಾಜ್ಯ ವಿಸ್ತರಣೆಗೆ ನೆಪವಾಗುತ್ತದೆ. ಅಗೆಮೆನ್ಮಾನ್ ಜೊತೆಯಲ್ಲಿ ವೀರಾಧಿವೀರರೆನಿಸಿದ ಅಖಿಲಸ್, ಒಡಿಸಿಯಸ್, ಅಯಾಕ್ಸ್ ಮೊದಲಾದವರ ಸೇನೆಯು ಹತ್ತು ವರ್ಷಗಳ ಕಾಲ ಸತತ ಪ್ರಯತ್ನಿಸಿದರೂ ಟ್ರಾಯ್ ನಗರದ ದಿಡ್ಡಿ ಬಾಗಿಲು ದಾಟಿ ಹೋಗುವುದು ಸಾಧ್ಯವಾಗಲಿಲ್ಲ. ಇಲಿಯಡ್ ಪ್ರಮುಖವಾಗಿ ಹತ್ತು ವರ್ಷಗಳ ಟ್ರಾಯ್ ಯುದ್ಧದ ಕೊನೆಯ ವಾರಗಳ ಅವಧಿಯಲ್ಲಿ, ಪ್ರಧಾನವಾಗಿ ಅಖಿಲಸ್ ಟ್ರೋಜನ್‌ನ ವೀರ ಹೆಕ್ಟರ್‍‌ನನ್ನು ಕೊಲ್ಲುವ ಘಟನೆಯ ಹಿಂದು ಮುಂದಿನ ಕಥೆಗೆ ಸಂಬಂಧಿಸಿದ್ದು. ಒಡಿಸಿಯಸ್ ಕಾವ್ಯವು ಮರದ ಕುದುರೆಯನ್ನು ಉಡುಗೊರೆಯಾಗಿ ನೀಡುವ ಸಂಚಿನ ಮೂಲಕ ಟ್ರಾಯ್ ನಗರ ಪ್ರವೇಶಿಸಿದ ಗ್ರೀಕರು, ಸಂಭ್ರಮಾಚರಣೆಯಲ್ಲಿದ್ದ ರಾಜಪರಿವಾರ, ಸೈನಿಕರು ಮತ್ತು ಜನರನ್ನು ಕೊಂದು ನಗರವನ್ನು ಧ್ವಂಸ ಮಾಡಿ ಹೆಲೆನ್‌ಳನ್ನು ಮತ್ತೆ ಕರೆದೊಯ್ದ ನಂತರ ಒಡಿಸಿಯಸ್‌ನ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿದ್ದು. ಒಡಿಸ್ಸಿ ಕತೆಯು ಟ್ರೋಜನ್ ಯುದ್ಧದ ನಂತರ ತನ್ನ ರಾಜ್ಯವಾದ ಇಥಾಕಾಕ್ಕೆ ಮರಳಲು ಹತ್ತು ವರ್ಷಗಳ ಕಾಲ ಸಮುದ್ರದಲ್ಲಿ ಅಲೆದಾಡಿದ ಒಡಿಸಿಯಸ್‌ನ ಸಾಹಸಯಾತ್ರೆಗೆ ಸಂಬಂಧಿಸಿದೆ. ಅದೇ ಕಾಲದಲ್ಲಿ ಅತ್ತ ಇಥಾಕಾದಲ್ಲಿರುವ ಅವನ ಪತ್ನಿ ಪೆನೆಲೊಪೆ, ತನ್ನ ರಾಜ್ಯವನ್ನು ಕಬಳಿಸಲು ಯತ್ನಿಸುತ್ತಿದ್ದ 108 ಮದುವೆಯ ಪ್ರಸ್ತಾಪಕರನ್ನು ದೂರವಿಡಲು ಯತ್ನಿಸುತ್ತಿದ್ದರೆ, ಮಗ ಟೆಲೆಮಾಕಸ್ ಅಪ್ಪನ ಇರುವನ್ನು ಪತ್ತೆಹಚ್ಚುವ ಕೆಲಸದಲ್ಲಿ ನಿರತನಾಗುತ್ತಾನೆ. ಒಡಿಸಿಯಸ್ ತನ್ನ ಯಾತ್ರೆಯಲ್ಲಿ ಸೈಕ್ಲೋಪ್ಸ್ ಪಾಲಿಫೆಮಸ್, ಸರ್ಸಿ ಎಂಬ ಮಂತ್ರ ತಂತ್ರ ಬಲ್ಲ ಮಹಿಳೆ ಮತ್ತು ನೌಕಾ ಅಪ್ಸರೆ ಕ್ಯಾಲಿಪ್ಸೊ ಸೇರಿದಂತೆ ಹಲವು ರಾಕ್ಷಸರು, ದೇವತೆಗಳು ಮತ್ತು ಮೋಹಕ ಸ್ತ್ರೀಯರನ್ನು ಎದುರಿಸುತ್ತಾನೆ. ಕೊನೆಗೆ ಭಿಕ್ಷುಕನ ವೇಷದಲ್ಲಿ ತನ್ನ ಮನೆಗೆ ಹಿಂತಿರುಗುವ ಒಡಿಸಿಯಸ್, ತನ್ನ ಮನೆಮಂದಿಯ ನಿಷ್ಠೆಯನ್ನು ಪರೀಕ್ಷಿಸಿ, ತನ್ನ ಮಗ ಟೆಲೆಮಾಕಸ್‌ನೊಂದಿಗೆ ಸೇರಿ ಆ ಪ್ರಸ್ತಾಪಕರನ್ನು ಸಂಹರಿಸಿ, ತನ್ನ ಸಿಂಹಾಸನ ಮತ್ತು ವೈವಾಹಿಕ ಜೀವನವನ್ನು ಮರಳಿ ಪಡೆಯುತ್ತಾನೆ. ‘ದಿ ಒಡಿಸ್ಸಿ’ ಚಿತ್ರವು ಟ್ರಾಯ್ ನಾಶದ ನಂತರದ ಘಟನೆಗಳಿಗೆ ಸಂಬಂಧಿಸಿದರೂ ಇಡೀ ಹಿನ್ನೆಲೆಯ ಕತೆ, ಘಟನೆಗಳು ಅಲ್ಲಲ್ಲಿ ಪ್ರಸ್ತಾಪವಾಗುತ್ತಾ ಒಡಿಸಿಯಸ್‌ನ ಮನಸಿನ ಸಂಕ್ಷೋಭೆಗೆ ಕಾರಣಗಳನ್ನು ಹುಡುಕುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...
ftcms 8ec14493 206a 4a2d ad5a 5523d40ae5c3
‘ದಿ ಒಡಿಸ್ಸಿ’ ಚಿತ್ರದ ಒಂದು ದೃಶ್ಯ… ಒಡಿಸಿಯಸ್‌ನ ಪತ್ನಿ ಪೆನೆಲೊಪೆ ಮತ್ತು ಪುತ್ರ ಟೆಲೆಮಾಕಸ್

ಮಾನವ ನಾಗರಿಕತೆಯ ಇತಿಹಾಸದಲ್ಲಿ ಕಾಲವನ್ನು ಮೀರಿ ಬದುಕುವ ಕೆಲವು ಕಥೆಗಳು ಪ್ರತಿಯುಗದಲ್ಲೂ ಹೊಸ ಅರ್ಥಗಳನ್ನು ಕಂಡುಕೊಳ್ಳುತ್ತವೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ರಚಿತವಾದ ಒಡಿಸ್ಸಿ ಇಂದಿಗೂ ವಿಶ್ವದ ಸಾಹಿತ್ಯ, ರಂಗಭೂಮಿ, ತತ್ವಶಾಸ್ತ್ರ ಮತ್ತು ಚಲನಚಿತ್ರಗಳಿಗೆ ಸ್ಫೂರ್ತಿಯಾಗಿರುವುದು ಅದರ ಕಥೆಯು ಮಾನವ ಅಸ್ತಿತ್ವದ ಮೂಲಭೂತ ಪ್ರಶ್ನೆಗಳನ್ನು ಸ್ಪರ್ಶಿಸಿರುವುದನ್ನೂ ಸೂಚಿಸುತ್ತದೆ. ಈ ಮಹಾಕಾವ್ಯವನ್ನು ಆಧುನಿಕ ಭಿತ್ತಿಯಲ್ಲಿಟ್ಟು ಚಿತ್ರವಾಗಿಸುವುದು ಸುಲಭದ ಕೆಲಸವಲ್ಲ. ಹಿಂದೆ ಒಡಿಸ್ಸಿಯನ್ನು ತೆರೆಗೆ ತರಲು ಪ್ರಯತ್ನಿಸಿದ ಬಹುತೇಕ ನಿರ್ದೇಶಕರು ಹೋಮರ್‍‌ನ ಪುರಾಣವನ್ನು ಸಾಹಸಮಯ ದೃಶ್ಯ ವೈಭವದ ಮಟ್ಟದಲ್ಲೇ ಕಟ್ಟಿಹಾಕಿದ್ದರು. ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಈ ಸಂಪ್ರದಾಯವನ್ನು ಮುರಿದಿದೆ. ಅವರು ಈ ಕೃತಿಯನ್ನು ದೇವತೆಗಳು, ರಾಕ್ಷಸರು ಮತ್ತು ಅದ್ಭುತಗಳ ಕಥೆಯಾಗಿ ನೋಡುವುದಿಲ್ಲ; ಟ್ರೋಜನ್ ಯುದ್ಧವನ್ನು ಇಲ್ಲಿ ವೈಭವೀಕರಿಸದೆ ‘ಟ್ರೋಜನ್ ಹಾರ್ಸ್’ ತಂತ್ರವನ್ನು ಸಾಹಸವೆಂದು ತೋರಿಸುವ ಬದಲು, ವಂಚನೆ ಮತ್ತು ನೈತಿಕ ರಾಜಿಗಳಿಂದ ಹುಟ್ಟಿದ ಉಸಿರುಗಟ್ಟಿಸುವ ಘಟನೆ ಎಂದು ತೋರಿಸಲಾಗಿದೆ. ಯುದ್ಧದಿಂದ ಮರಳುವ ಮನುಷ್ಯನ ಭಗ್ನಗೊಂಡ ಮನಸ್ಸಿನ ಕಥೆಯಾಗಿ ಕಾಣಲು ಯತ್ನಿಸಿದ್ದಾರೆ. ಹಾಗಾಗಿ ನೋಲನ್ ಇಲ್ಲಿ ಭಗ್ನಗೊಂಡ ಮನುಷ್ಯರ ಅಂತರಂಗದ ಪದರಗಳನ್ನೇ ಹುಡುಕುತ್ತಾರೆ. ಅವರ ಚಿತ್ರಗಳಲ್ಲಿ ಘಟನೆಗಳಿಗಿಂತ ನೆನಪುಗಳು ಮುಖ್ಯ; ಯುದ್ಧಗಳಿಗಿಂತ ಯುದ್ಧದ ನಂತರದ ಮೌನ ಮುಖ್ಯ; ವಿಜಯಗಳಿಗಿಂತ ವಿಜಯದ ಬೆಲೆ ಮುಖ್ಯ. ಆದ್ದರಿಂದ ಅವರ ‘ದಿ ಒಡಿಸ್ಸಿ’ ಪುರಾಣದ ಪುನರಾವರ್ತನೆಯಾಗದೆ, ಆಧುನಿಕ ಮನುಷ್ಯನ ಆತ್ಮಶೋಧನೆಯಾಗಿ ರೂಪುಗೊಳ್ಳುತ್ತದೆ. ಹೋಮರ್‍‌ನ ಕಾವ್ಯದಲ್ಲಿರುವ ಹಿಂದಿನ ನೆನಪುಗಳು, ಕನಸುಗಳು ಮತ್ತು ಕಥೆಯೊಳಗಿನ ಕಥೆಗಳು ನೋಲನ್ ಅವರ ಕೈಯಲ್ಲಿ ಬಹುಸ್ತರೀಯ ಸಿನೆಮಾ ಭಾಷೆಯಾಗಿ ಪರಿವರ್ತನೆಯಾಗುತ್ತವೆ. ಪ್ರೇಕ್ಷಕರು ಒಡಿಸಿಯಸ್‌ನ ಪ್ರಯಾಣವನ್ನು ನೋಡುವುದಿಲ್ಲ; ಅವನ ನೆನಪುಗಳೊಳಗೆ ಪ್ರವೇಶಿಸುತ್ತಾರೆ.

ಇದನ್ನು ಓದಿದ್ದೀರಾ?: ‘ಸಟ್ಲುಜ್‌’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?

ಇಲ್ಲಿ ಟ್ರೋಜನ್ ಯುದ್ಧವು ಇತಿಹಾಸದ ಘಟನೆಯಲ್ಲ; ಅದು ಮಾನವನ ಮನಸ್ಸಿನ ಮೇಲೆ ಅಚ್ಚೊತ್ತಿದ ಗಾಯ. ಯುದ್ಧ ಗೆದ್ದ ನಂತರವೂ ಒಡಿಸಿಯಸ್ ಶಾಂತಿಯನ್ನು ಪಡೆಯುವುದಿಲ್ಲ. ದೈತ್ಯ ಸೈಕ್ಲೋಪ್ಸ್, ಮಾಯಾವಿನಿ ಸರ್ಸಿ, ಮೋಹಿನಿ ಸೈರನ್‌ಗಳು, ಪೆಡಂಭೂತ ಸ್ಕಿಲ್ಲಾ ಮತ್ತು ಬೃಹತ್ ಚಕ್ರತೀರ್ಥ ಕ್ಯಾರಿಬ್ಡಿಸ್‌ಗಳು ಕೇವಲ ಪೌರಾಣಿಕ ಜೀವಿಗಳಲ್ಲ; ಅವು ಅವನ ಅಪರಾಧಗಳು, ಅಹಂಕಾರ, ಪ್ರಲೋಭನೆ, ಭಯ ಮತ್ತು ಆತ್ಮಸಂಶಯಗಳ ರೂಪಕಗಳು. ಹೀಗಾಗಿ ಪ್ರತಿಯೊಂದು ದೈತ್ಯದೊಂದಿಗೆ ನಡೆಯುವ ಹೋರಾಟವೂ ಮನುಷ್ಯ ತನ್ನೊಳಗಿನ ಕತ್ತಲೆಯೊಂದಿಗೆ ನಡೆಸುವ ಸಂಘರ್ಷವಾಗುತ್ತದೆ. ಇದೇ ನೋಲನ್ ಅವರ ಚಿತ್ರಭಾಷೆಯ ವಿಶಿಷ್ಟತೆ. ಅವರು ಅದ್ಭುತಗಳನ್ನು ವಿಸ್ಮಯವಾಗಿ ತೋರಿಸುವುದಿಲ್ಲ; ಅವುಗಳನ್ನು ಮನಸ್ಸಿನ ರೂಪಕಗಳಾಗಿ ಬಳಸುತ್ತಾರೆ. ಈ ಕಾರಣದಿಂದಲೇ ಅವರ ಪುರಾಣವೂ ಆಧುನಿಕವಾಗುತ್ತದೆ.

ಈ ಚಿತ್ರದ ಕೇಂದ್ರದಲ್ಲಿ ಮನೆಗೆ ಮರಳುವ ಹಂಬಲವಿದೆ. ಆದರೆ ಇಥಾಕಾ ಕೇವಲ ಒಂದು ದ್ವೀಪವಲ್ಲ. ಅದು ಪ್ರೀತಿ, ಕುಟುಂಬ, ನೆನಪು, ಹೊಣೆಗಾರಿಕೆ ಮತ್ತು ಆತ್ಮಪರಿಚಯದ ಸಂಕೇತ. ಯುದ್ಧದಿಂದ ಹಿಂದಿರುಗುವ ಪ್ರತಿಯೊಬ್ಬ ಸೈನಿಕನಿಗೂ, ದೇಶಾಂತರದಲ್ಲಿ ಅಲೆದಾಡುವ ಪ್ರತಿಯೊಬ್ಬ ವಲಸಿಗನಿಗೂ, ತನ್ನನ್ನೇ ಕಳೆದುಕೊಂಡ ಪ್ರತಿಯೊಬ್ಬ ಮನುಷ್ಯನಿಗೂ ಇಥಾಕಾ ಒಂದು ಆಂತರಿಕ ಹಂಬಲ. ಈ ಅರ್ಥದಲ್ಲಿ ಒಡಿಸ್ಸಿ ಪ್ರಾಚೀನ ಗ್ರೀಸ್‌ನ ಕಥೆಯಾಗದೆ, ಪ್ರತಿಯೊಬ್ಬ ಮನುಷ್ಯನ ಜೀವನದ ರೂಪಕವಾಗುತ್ತದೆ.
ಕ್ರಿಸ್ಟೋಫರ್ ನೋಲನ್ ಅವರ ಚಿತ್ರಗಳಲ್ಲಿನ ಅತ್ಯಂತ ಗುರುತಿಸಬಹುದಾದ ಲಕ್ಷಣವೆಂದರೆ ನಾನ್ ಲೀನಿಯರ್ ನಿರೂಪಣೆ. ಕಾಲವನ್ನು ಹಿಂದು ಮುಂದಾಗಿ ಜಗ್ಗಿ ಕಥೆ ಹೇಳುವುದು ಅವರಿಗೆ ಪ್ರಿಯವಾದ ಸಂಗತಿ. ‘ದಿ ಒಡಿಸ್ಸಿ’ಯಲ್ಲಿಯೂ ಅವರು ಅದೇ ಶೈಲಿಯನ್ನು ಮುಂದುವರಿಸುತ್ತಾರೆ. ಆದರೆ ಇಲ್ಲಿ ಆ ತಂತ್ರ ಕೇವಲ ಶೈಲಿಯ ಪ್ರದರ್ಶನವಾಗುವುದಿಲ್ಲ; ಅದು ಕಥೆಯ ಅಂತರಂಗದ ಅವಶ್ಯಕತೆಯಾಗುತ್ತದೆ.

ಒಡಿಸ್ಸಿ
‘ದಿ ಒಡಿಸ್ಸಿ’ ಚಿತ್ರದ ದೃಶ್ಯ… ಒಡಿಸಿಯಸ್ ಪಾತ್ರದಲ್ಲಿ ಮ್ಯಾಟ್ ಡೇಮನ್ ಮತ್ತಿತರರು

ಒಡಿಸಿಯಸ್‌ನ ಪಯಣವನ್ನು ನೋಲನ್ ಸರಳವಾಗಿ ‘ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ಸಾಹಸ’ವಾಗಿ ಕಟ್ಟುವುದಿಲ್ಲ. ಬದಲಾಗಿ, ಅವರು ಅದನ್ನು ನೆನಪುಗಳ ತುಂಡುಗಳು, ಅಪರಾಧಪ್ರಜ್ಞೆಯ ಪ್ರತಿಧ್ವನಿಗಳು ಮತ್ತು ಕಾಲದ ಅಸಮತೋಲನದ ಮೂಲಕ ಕಟ್ಟುತ್ತಾರೆ. ಪ್ರಸ್ತುತ ಕಾಲದಲ್ಲಿ ನಡೆಯುವ ಪ್ರಯಾಣದ ನಡುವೆ ಯುದ್ಧದ ದೃಶ್ಯಗಳು, ಕಳೆದುಹೋದ ಮನೆ, ಪೆನೆಲೊಪೆಯ ನೆನಪು ಮತ್ತು ಟೆಲೆಮಾಕಸ್‌ನ ಬೆಳವಣಿಗೆ- ಇವೆಲ್ಲವೂ ಪ್ರೇಕ್ಷಕರಿಗೆ ಒಡಿಸಿಯಸ್‌ನ ಭಗ್ನಗೊಂಡ ಮನಸ್ಥಿತಿಯ ನೇರ ಅನುಭವವನ್ನು ನೀಡುವಷ್ಟು ಕೌಶಲ್ಯಪೂರ್ಣವಾಗಿ ಹೆಣೆದುಕೊಂಡಿವೆ.

ಈ ರಚನೆಯಿಂದ ಚಿತ್ರವು ಕೇವಲ ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸುವುದಿಲ್ಲ, ಅದು ಮನಸ್ಸಿನಲ್ಲಿ ಹೇಗೆ ಉಳಿಯಿತು ಎಂಬ ಇನ್ನಷ್ಟು ಗಂಭೀರ ಪ್ರಶ್ನೆಯನ್ನು ಮುಂದಿಡುತ್ತದೆ. ಇದೇ ಕಾರಣಕ್ಕೆ ‘ದಿ ಒಡಿಸ್ಸಿ’ಯ ಕಥಾವಿನ್ಯಾಸವು ಸಾಹಸಮಯವಾಗಿದ್ದರೂ, ಅದರ ನಿಜವಾದ ಕೇಂದ್ರ ಮಾನಸಿಕವಾಗಿದೆ.

ಇದನ್ನು ಓದಿದ್ದೀರಾ?: ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ

ನೋಲನ್ ಅವರ ನಿರ್ದೇಶನದ ಮತ್ತೊಂದು ವಿಶೇಷತೆ ಎಂದರೆ ಅವರು ಭವ್ಯತೆಯನ್ನು ಸಂಯಮದೊಂದಿಗೆ ಸಮತೋಲನಗೊಳಿಸಿರುವ ಕ್ರಮ. ಸಮುದ್ರದ ಅಲೆಗಳು, ದ್ವೀಪಗಳ ವಿಶಾಲತೆ, ಯುದ್ಧದ ಅವಶೇಷಗಳು ಮತ್ತು ಪೌರಾಣಿಕ ಭವ್ಯತೆಯ ಮಧ್ಯೆಯೂ ನಿರ್ದೇಶಕರು ಪಾತ್ರಗಳ ಒಳಜಗತ್ತನ್ನು ಮರೆಮಾಡುವುದಿಲ್ಲ. ದೃಶ್ಯ ವೈಭವವನ್ನು ಕೇವಲ ಆಕರ್ಷಣೆಯಾಗಿ ಬಳಸದೆ ಅದನ್ನು ಮಾನಸಿಕ ಒತ್ತಡವನ್ನು ಹೆಚ್ಚಿಸುವ ಸಾಧನವಾಗಿ ಬಳಸಿದ್ಧಾರೆ. ಉದಾಹರಣೆಗೆ, ಸಮುದ್ರದ ವಿಶಾಲ ಶಾಟ್‌ಗಳು ಒಡಿಸ್ಸಿಯಸ್‌ನ ಸ್ವಾತಂತ್ರ್ಯವನ್ನು ಸೂಚಿಸುವುದಿಲ್ಲ; ಬದಲಾಗಿ ಅವನ ಏಕಾಂತವನ್ನು, ದಿಕ್ಕಿಲ್ಲದ ಸ್ಥಿತಿಯನ್ನು ಮತ್ತು ಮನೆಗೆ ಮರಳುವ ಅಸಾಧ್ಯತೆಯನ್ನು ಸೂಚಿಸುತ್ತವೆ.

ನೋಲನ್ ಅವರ ನಿರ್ದೇಶನದಲ್ಲಿ ಮೌನಕ್ಕೂ ಮಹತ್ವವಿದೆ. ಅನೇಕ ಸಂದರ್ಭಗಳಲ್ಲಿ ಸಂಭಾಷಣೆಯ ಕೊರತೆ, ಅಲೆಗಳ ಶಬ್ದ, ಗಾಳಿಯ ಸದ್ದು ಅಥವಾ ದೂರದ ಯುದ್ಧದ ಪ್ರತಿಧ್ವನಿ ಪಾತ್ರಗಳ ಮನಸ್ಸಿನ ಅಸ್ಥಿರತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತವೆ. ಈ ಸಂಯಮವೇ ಚಿತ್ರದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಅದೇ ವೇಳೆ ಧ್ವನಿ ವಿನ್ಯಾಸದಲ್ಲಿ ಸಾಧಿಸಿರುವ ಗುಣಮಟ್ಟ ಪರಾಕಾಷ್ಠೆಯನ್ನು ತಲುಪಿದೆ.

ಈ ಚಿತ್ರದ ಯಶಸ್ಸಿನಲ್ಲಿ ಕಲಾವಿದರ ಅಭಿನಯಕ್ಕೂ ದೊಡ್ಡ ಪಾಲಿದೆ. ಪಾತ್ರ ಅತ್ಯಂತ ಪ್ರಮುಖ. ಪ್ರತಿಭಾವಂತ ಕಲಾವಿದರ ದಂಡೇ ಇಲ್ಲಿದೆ. ಒಡಿಸಿಯಸ್ ಪಾತ್ರವನ್ನು ನಿರ್ವಹಿಸಿರುವ ಸಾಹಸ, ಥ್ರಿಲ್ಲರ್ ಮಾದರಿಯ ಚಿತ್ರಗಳಲ್ಲೇ ಹೆಚ್ಚು ಪರಿಚಿತರಾಗಿದ್ದ ನಟ ಮ್ಯಾಟ್ ಡೇಮನ್ ಒಡಿಸಿಯಸ್ ಪಾತ್ರಕ್ಕಾಗಿ ತನ್ನ ತೂಕವನ್ನು ಇಳಿಸಿಕೊಳ್ಳುವುದರ ಜೊತೆಗೆ ಬಲಶಾಲಿಯಂತೆ ಕಾಣಲು ಹಾಕಿದ ಶ್ರಮ ಪಾತ್ರವು ಕಳೆಗಟ್ಟುವಂತೆ ಮಾಡಿದೆ. ನಿಜವಾದ ಗಡ್ಡವನ್ನು ತೆಗೆಯಬಾರದೆಂದು ನಿರ್ದೇಶಕ ಹಾಕಿದ ಷರತ್ತು ಯಾಕೆಂದು ಈ ಪಾತ್ರವನ್ನು ನೋಡುವಾಗ ಅನುಭವಕ್ಕೆ ಬರುತ್ತದೆ. ಡೇಮನ್ ಒಡಿಸಿಯಸ್‌ನ ಪಾತ್ರದಲ್ಲಿ ಕೇವಲ ಯೋಧನ ಶೌರ್ಯವನ್ನು ತೋರಿಸುವುದಿಲ್ಲ; ಅವನ ಕಣ್ಣುಗಳಲ್ಲಿ ಕಾಣುವ ದಣಿವು, ಸಂಶಯ, ಅಪರಾಧಪ್ರಜ್ಞೆ ಮತ್ತು ಮೌನ ಪಾತ್ರದ ಒಳತೋಟಿಗಳನ್ನು ಸಮರ್ಥವಾಗಿ ಹಿಡಿದಿಟ್ಟಿದೆ. ನೋಲನ್ ಅವರ ಚಿತ್ರಗಳಲ್ಲಿ ನಾಯಕರು ಸಾಮಾನ್ಯವಾಗಿ ಒಳಗಿನಿಂದ ಭಗ್ನಗೊಂಡವರಾಗಿರುತ್ತಾರೆ. ಈ ಚಿತ್ರದಲ್ಲಿಯೂ ಒಡಿಸಿಯಸ್ ಹೊರಗೆ ದೃಢನಿಶ್ಚಯದ ವ್ಯಕ್ತಿಯಾಗಿ ಕಾಣಿಸಿದರೂ, ಒಳಗೆ ಆತ ತನ್ನದೇ ನೆನಪುಗಳೊಂದಿಗೆ ಹೋರಾಡುತ್ತಾನೆ. ನಟನ ಅಭಿನಯವು ಈ ದ್ವಂದ್ವವನ್ನು ಸೂಕ್ಷ್ಮವಾಗಿ ಹಿಡಿದಿಡುತ್ತದೆ.

Ody 4

ಪೆನೆಲೊಪೆ ಪಾತ್ರವೂ ಇಲ್ಲಿ ಕೇವಲ ‘ಕಾದು ಕುಳಿತ ಹೆಂಡತಿ’ಯಾಗಿ ಉಳಿಯುವುದಿಲ್ಲ. ಅವಳು ಬುದ್ಧಿವಂತಿಕೆ, ಸಹನೆ ಮತ್ತು ರಾಜಕೀಯ ಜಾಣ್ಮೆಯ ಪ್ರತೀಕವಾಗಿ ಕಾಣಿಸುತ್ತಾಳೆ. ಅವಳ ಮೌನದಲ್ಲಿಯೇ ಪ್ರತಿರೋಧವಿದೆ. ಟೆಲೆಮಾಕಸ್ ಪಾತ್ರವು ಬಾಲ್ಯದಿಂದ ಪ್ರೌಢತೆಗೆ ಸಾಗುವ ಹಾದಿಯನ್ನು ಪ್ರತಿನಿಧಿಸುತ್ತದೆ. ಅವನ ಅಭಿನಯದಲ್ಲಿ ಕಾಣುವ ಅಸಹಾಯಕತೆ ಮತ್ತು ಕ್ರಮೇಣ ಬೆಳೆಯುವ ಆತ್ಮವಿಶ್ವಾಸ ಚಿತ್ರದ ಭಾವನಾತ್ಮಕ ತೂಕವನ್ನು ಹೆಚ್ಚಿಸುತ್ತದೆ.

ಸಹಾಯಕ ಪಾತ್ರಗಳೂ ಕೇವಲ ಪೌರಾಣಿಕ ಅಲಂಕಾರಗಳಾಗಿ ಉಳಿಯುವುದಿಲ್ಲ. ಅಥೇನಾ, ಸೈರನ್‌ಗಳು, ಸೈಕ್ಲೋಪ್ಸ್ ಅಥವಾ ಇತರ ಪಾತ್ರಗಳು ಮಾನವ ಮನಸ್ಸಿನ ವಿಭಿನ್ನ ಸ್ಥಿತಿಗಳನ್ನು ಪ್ರತಿನಿಧಿಸುವಂತೆ ಅಭಿನಯಿಸಲ್ಪಟ್ಟಿವೆ. ಈ ಮಾನವೀಕರಣವೇ ಚಿತ್ರದ ಅಭಿನಯವನ್ನು ಸಾಂಪ್ರದಾಯಿಕ ಪೌರಾಣಿಕ ಚಿತ್ರಗಳಿಂದ ವಿಭಿನ್ನಗೊಳಿಸುತ್ತದೆ.
ಇನ್ನು ತಾಂತ್ರಿಕ ಕುಶಲತೆಯು ಚಿತ್ರದ ಆಶಯವನ್ನು ಅನುಭವಗಮ್ಯವಾಗಿಸಲು ಅದನ್ನು ಬಳಸಿರುವ ಕ್ರಮದ ಬಗ್ಗೆಯೂ ಹೇಳಬೇಕು. ತಾಂತ್ರಿಕವಾಗಿ ‘ದಿ ಒಡಿಸ್ಸಿ’ ಚಿತ್ರ ಪರಾಕಾಷ್ಠೆ ತಲುಪಿದೆ. ಐಮ್ಯಾಕ್ಸ್ ಕ್ಯಾಮೆರಾವು ‘ದಿ ಒಡಿಸ್ಸಿ’ ಚಿತ್ರದ ದೃಶ್ಯ ಸೌಂದರ್ಯ ಮಾತ್ರವಲ್ಲ; ಕಥೆಯ ಅರ್ಥವನ್ನೇ ನಿರ್ಮಿಸುವ ಸಾಧನವಾಗಿದೆ. ಕಣ್ಣು ಚಾಚುವಷ್ಟೂ ಕಾಣುವ ಸಮುದ್ರ ಇಲ್ಲಿ ಹಿನ್ನೆಲೆಯಲ್ಲ, ಒಂದು ಜೀವಂತ ಪಾತ್ರ. ಅದು ಕೆಲವೊಮ್ಮೆ ಆಶ್ರಯದಂತೆ, ಕೆಲವೊಮ್ಮೆ ಅಪಾಯದಂತೆ ಮತ್ತೆ ಕೆಲವೊಮ್ಮೆ ನೆನಪುಗಳ ಅಂತರಾಳದಂತೆ ಕಾಣುತ್ತದೆ. ಚಿತ್ರದ ಬೆಳಕು ಮತ್ತು ನೆರಳಿನ ಬಳಕೆ ಅತ್ಯಂತ ಗಮನಾರ್ಹ. ಇಥಾಕಾದ ಉಷ್ಣ ಬೆಳಕು, ಯುದ್ಧಭೂಮಿಯ ಕಠಿಣ ನೆರಳು ಮತ್ತು ಸಮುದ್ರದ ಮೇಲಿನ ಮಂಕು ಬೆಳಕು- ಇವೆಲ್ಲವೂ ವಿಶಿಷ್ಟವಾದ ಭಾವನಾತ್ಮಕ ಸ್ತರಗಳನ್ನು ಸೃಷ್ಟಿಸುತ್ತವೆ. ನೋಲನ್ ಮತ್ತು ಅವರ ಛಾಯಾಗ್ರಾಹಕರು ಪ್ರಕೃತಿಯ ವಿಶಾಲತೆಯನ್ನು ತೋರಿಸುವಾಗಲೂ, ಪಾತ್ರಗಳ ಮಿಡಿತಗಳನ್ನು ಸೆರೆಹಿಡಿಯುವುದನ್ನು ಮರೆಯುವುದಿಲ್ಲ. ವಿಶೇಷವಾಗಿ, ಒಳಾಂಗಣ ದೃಶ್ಯಗಳಲ್ಲಿ ಬಳಸಿದ ಕಡಿಮೆ ಬೆಳಕು ಮತ್ತು ಸೀಮಿತ ಫ್ರೇಮಿಂಗ್ ಪಾತ್ರಗಳ ಮನಸ್ಸಿನ ಬಂಧನವನ್ನು ಸೂಚಿಸುತ್ತದೆ. ಹೊರಗಿನ ಜಗತ್ತು ಎಷ್ಟೇ ವಿಶಾಲವಾಗಿದ್ದರೂ, ಒಳಗಿನ ಜಗತ್ತು ಎಷ್ಟು ಸೀಮಿತವಾಗಿರಬಹುದು ಎಂಬುದನ್ನು ಈ ದೃಶ್ಯಭಾಷೆ ಸ್ಪಷ್ಟಪಡಿಸುತ್ತದೆ.

ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ

ನೋಲನ್ ಅವರ ಚಿತ್ರಗಳಲ್ಲಿ ಸಂಗೀತ ಎಂದಿಗೂ ಕೇವಲ ಹಿನ್ನೆಲೆ ಅಲ್ಲ. ಅದು ಭಾವನಾತ್ಮಕ ಮತ್ತು ತಾತ್ವಿಕ ಒತ್ತಡವನ್ನು ನಿರ್ಮಿಸುವ ಪ್ರಮುಖ ಅಂಶ. ‘ದಿ ಒಡಿಸ್ಸಿ’ ಚಿತ್ರದಲ್ಲಿಯೂ ಸಂಗೀತವು ಭವ್ಯತೆಯನ್ನು ಹೆಚ್ಚಿಸುವುದಕ್ಕಿಂತ ಹೆಚ್ಚಾಗಿ, ಮನಸ್ಸಿನ ಅಸ್ಥಿರತೆಯನ್ನು ವ್ಯಕ್ತಪಡಿಸುತ್ತದೆ. ಸಂಗೀತದಲ್ಲಿ ಪುನರಾವರ್ತನೆಯಾಗುವ ಕೆಲವು ಥೀಮ್‌ಗಳು ಒಡಿಸಿಯಸ್‌ಗೆ ಮರಳುವ ಹಂಬಲವನ್ನು, ಪೆನೆಲೊಪೆಯ ನಿರೀಕ್ಷೆಯನ್ನು ಮತ್ತು ಟೆಲೆಮಾಕಸ್‌ನ ಅನಿಶ್ಚಿತತೆಯನ್ನು ಪ್ರತಿನಿಧಿಸುತ್ತವೆ. ಆದರೆ ಈ ಸಂಗೀತ ಎಂದಿಗೂ ಅತಿರೇಕಕ್ಕೆ ಹೋಗುವುದಿಲ್ಲ. ಅದು ಮೌನದೊಂದಿಗೆ ಸಂವಾದ ನಡೆಸುತ್ತದೆ.

ಧ್ವನಿ ವಿನ್ಯಾಸವೂ ಅಷ್ಟೇ ಮಹತ್ವದ್ದು. ಅಲೆಗಳ ಶಬ್ದ, ಹಡಗಿನ ಮರದ ಕಿರಿಕಿರಿ, ಗಾಳಿಯ ಸದ್ದು, ದೂರದ ಕೂಗು ಮತ್ತು ಯುದ್ಧದ ಕೂಗುಗಳು ನೈಜ ಹಾಗೂ ಸಾಂಕೇತಿಕವಾಗಿ ಅನುಭವಕ್ಕೆ ಬರುವಂತಹ ಒಂದು ವಿಶಿಷ್ಟ ಸಂವೇದನಾ ಜಗತ್ತನ್ನು ಸೃಷ್ಟಿಸುತ್ತವೆ. ನೋಲನ್ ಅವರ ಚಿತ್ರಗಳಲ್ಲಿ ಧ್ವನಿ ಎಂದಿಗೂ ಕೇವಲ ಕೇಳಿಸಿಕೊಳ್ಳುವುದಿಲ್ಲ; ಅದು ಅನುಭವವಾಗುತ್ತದೆ.

Ody 7

ಯಾವುದೇ ಮಹಾಕಾವ್ಯವನ್ನು ಚಿತ್ರಕ್ಕೆ ರೂಪಾಂತರಿಸುವಾಗ ಕೆಲವು ಬದಲಾವಣೆಗಳು ಅನಿವಾರ್ಯ. ಇಲ್ಲಿ ಒಡಿಸಿಯಸ್‌ನ ಜೊತೆ ಹೊರಡುವ ನೌಕೆಗಳ ಸಂಖ್ಯೆಯನ್ನು ಮೂರಕ್ಕೆ ಮಿತಿಗಿಳಿಸಿದೆ. ಕಮಲದ ಹೂವು ತಿನ್ನುವವರ ದ್ವೀಪವನ್ನು ಕ್ಯಾಲಿಪ್ಸೋ ದ್ವೀಪದ ಜೊತೆ ಹೆಣೆಯಲಾಗಿದೆ. ಮಗನನ್ನು ದಾಳಿಕೋರರಿಂದ ಒಡಿಸಿಯಸ್ ಸಾಹಸದಿಂದ ರಕ್ಷಿಸುವ ಮೂಲದಲ್ಲಿ ಇಲ್ಲದ ಘಟನೆ ಸೇರಿದೆ. ಆದರೆ ನೋಲನ್ ಮಾಡಿದ ಬದಲಾವಣೆಗಳು ಕೇವಲ ಕಥೆಯನ್ನು ಸರಳಗೊಳಿಸುವುದಕ್ಕಾಗಿ ಅಲ್ಲ; ಅವು ಕಥೆಯ ಅರ್ಥವನ್ನೇ ಮರುಸಂರಚಿಸುವುದಕ್ಕಾಗಿ.

ಇಲ್ಲಿ ದೇವತೆಗಳ ಪಾತ್ರವನ್ನು ಅವರು ಬಹುತೇಕ ಮಾನಸಿಕ ಮತ್ತು ಸಂಕೇತಾತ್ಮಕ ಮಟ್ಟಕ್ಕೆ ಇಳಿಸುತ್ತಾರೆ. ಹೋಮರ್‍‌ನ ಕಾವ್ಯದಲ್ಲಿ ದೇವತೆಗಳು ನೇರವಾಗಿ ಹಸ್ತಕ್ಷೇಪ ಮಾಡುತ್ತವೆ. ಒಡಿಸಿಯಸ್‌ನ ಹಣೆಬರಹವನ್ನು ನಿರ್ಧರಿಸುತ್ತವೆ ಆದರೆ ಚಿತ್ರದಲ್ಲಿ ಆ ಹಸ್ತಕ್ಷೇಪವು ಮಾನವನ ಒಳಗಿನ ಭಯ, ಆಶೆ ಮತ್ತು ಆತ್ಮಸಂಶಯಗಳ ರೂಪದಲ್ಲಿ ಕಾಣುತ್ತದೆ. ಹೋಮರ್‍‌ನ ನಾಯಕನು ಚತುರ, ಧೈರ್ಯಶಾಲಿ ಮತ್ತು ಕೆಲವೊಮ್ಮೆ ಕ್ರೂರನೂ ಹೌದು. ನೋಲನ್ ಈ ಸಂಕೀರ್ಣತೆಯನ್ನು ಉಳಿಸಿಕೊಂಡರೂ, ಅವನ ಯುದ್ಧಾನಂತರದ ಆಘಾತವನ್ನು ಹೆಚ್ಚು ಕೇಂದ್ರಸ್ಥಾನಕ್ಕೆ ತರುತ್ತಾರೆ. ಹೀಗಾಗಿ ನಾಯಕನು ವಿಜಯಶಾಲಿ ಯೋಧನಿಗಿಂತ, ಯುದ್ಧದಲ್ಲಿ ಬದುಕುಳಿದು ಅಪರಾಧಿ ಪ್ರಜ್ಞೆಯಿಂದ ನರಳುವ ಮಾನವನಾಗಿ ಕಾಣುತ್ತಾನೆ.

ಇದನ್ನು ಓದಿದ್ದೀರಾ?: ಹೆಬ್ಬುಲಿ ಕಟ್: ಜಾತಿ, ಧರ್ಮದಿಂದ ಹಳಿತಪ್ಪಿದ ಸರಳ ಜೀವಿಗಳ ದುರಂತಗಾಥೆ

ಮೂಲ ಕಾವ್ಯದಲ್ಲಿ ಪೆನೆಲೊಪೆ ಮತ್ತು ಟೆಲೆಮಾಕಸ್ ಅವರು ಮುಖ್ಯವಾಗಿ ಒಡಿಸಿಯಸ್‌ನ ಮರಳುವಿಕೆಗೆ ಸಂಬಂಧಿಸಿದ ಪಾತ್ರಗಳಾಗಿದ್ದರೆ, ಇಲ್ಲಿ ಅವರು ತಮ್ಮದೇ ಆದ ಭಾವನಾತ್ಮಕ ಮತ್ತು ನೈತಿಕ ಜಗತ್ತನ್ನು ಪಡೆದು ಹೆಚ್ಚಿನ ಸ್ವಾಯತ್ತತೆ ಗಳಿಸಿದ ಪಾತ್ರಗಳಾಗಿವೆ. ಕೆಲವು ಪೌರಾಣಿಕ ಘಟನೆಗಳನ್ನು ನೋಲನ್ ನೇರ ಅದ್ಭುತಗಳಾಗಿ ತೋರಿಸುವ ಬದಲು, ಅವುಗಳನ್ನು ಮನಸ್ಸಿನ ಅನುಭವಗಳಾಗಿ ಮರುಸೃಷ್ಟಿಸುತ್ತಾರೆ. ಇದರಿಂದ ಚಿತ್ರವು ಪುರಾಣದ ಅದ್ಭುತತೆಯನ್ನು ಕಳೆದುಕೊಳ್ಳುವುದಿಲ್ಲ; ಬದಲಾಗಿ ಅದನ್ನು ಆಧುನಿಕ ಪ್ರೇಕ್ಷಕರಿಗೆ ಹೆಚ್ಚು ನಂಬಬಹುದಾದ ಮತ್ತು ಆಳವಾದ ರೂಪದಲ್ಲಿ ನೀಡುತ್ತದೆ. ಚಿತ್ರವು ಪುರಾಣವನ್ನು ಆಧುನಿಕ ಮಾನವ ಅನುಭವದೊಂದಿಗೆ ಯಶಸ್ವಿಯಾಗಿ ಜೋಡಿಸುತ್ತದೆ. ಇದು ಕೇವಲ ಹಳೆಯ ಕಥೆಯನ್ನು ಹೊಸ ದೃಶ್ಯಗಳಲ್ಲಿ ಹೇಳುವುದಲ್ಲ; ಹಳೆಯ ಕಥೆಯೊಳಗಿನ ಸಾರ್ವಕಾಲಿಕ ಪ್ರಸ್ತುತತೆಯ ಪ್ರಶ್ನೆಗಳನ್ನು ಇಂದಿನ ಭಾಷೆಯಲ್ಲಿ ಮರುಪ್ರಸ್ತುತಪಡಿಸುತ್ತದೆ.

ಆದರೆ ಯಾವುದೇ ಮಹತ್ವದ ಕೃತಿಯಂತೆ, ದಿ ಒಡಿಸ್ಸಿ ಚಿತ್ರದಲ್ಲೂ ಕೆಲವು ಮಿತಿಗಳಿವೆ. ಅದರ ಅತ್ಯಂತ ದೊಡ್ಡ ಮಿತಿ ಎಂದರೆ ಅದು ಎಲ್ಲ ಪ್ರೇಕ್ಷಕರೂ ತಕ್ಷಣ ಪ್ರವೇಶಿಸಬಹುದಾದ ಚಿತ್ರವಲ್ಲ. ಅದರ ನಿಧಾನಗತಿ, ಸಂಕೇತಾತ್ಮಕ ಭಾಷೆ ಮತ್ತು ಮಾನಸಿಕ ಒತ್ತಡದ ಮೇಲಿನ ಕೇಂದ್ರ ಕೆಲವರಿಗೆ ದೂರದ ಅನುಭವವಾಗಬಹುದು. ಮತ್ತೊಂದು, ಪೌರಾಣಿಕ ಅದ್ಭುತತೆಯನ್ನು ಮಾನಸಿಕ ವಾಸ್ತವಿಕತೆಯೊಳಗೆ ತರುವ ಪ್ರಯತ್ನದಲ್ಲಿ ಕೆಲವು ದೃಶ್ಯಗಳು ತಮ್ಮ ಮೂಲದ ಮಾಂತ್ರಿಕತೆಯನ್ನು ಸ್ವಲ್ಪ ಕಳೆದುಕೊಳ್ಳಬಹುದು. ಹೋಮರ್‍‌ನ ಕಾವ್ಯದಲ್ಲಿ ಇರುವ ಅಚ್ಚರಿ ಮತ್ತು ಅತೀಂದ್ರಿಯತೆ ಇಲ್ಲಿ ಹೆಚ್ಚು ನಿಯಂತ್ರಿತವಾಗಿವೆ. ಇದು ಕಲಾತ್ಮಕ ನಿರ್ಧಾರವಾದರೂ, ಕೆಲವು ಪ್ರೇಕ್ಷಕರಿಗೆ ಅದು ಇಷ್ಟವಾಗದಿರಬಹುದು. ಆದರೂ ಈ ಮಿತಿಗಳು ಚಿತ್ರದ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ, ಅವು ನೋಲನ್ ಅವರ ದೃಷ್ಟಿಯ ಸ್ಪಷ್ಟತೆಯನ್ನು ತೋರಿಸುತ್ತವೆ. ಅವರು ಎಲ್ಲರಿಗೂ ಎಲ್ಲವನ್ನೂ ನೀಡಲು ಪ್ರಯತ್ನಿಸುವುದಿಲ್ಲ; ಬದಲಾಗಿ, ಒಂದು ನಿರ್ದಿಷ್ಟ ತಾತ್ವಿಕ ಮತ್ತು ಭಾವನಾತ್ಮಕ ಅನುಭವವನ್ನು ಕಟ್ಟಲು ಪ್ರಯತ್ನಿಸುತ್ತಾರೆ.

Ody 6

ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ‘ ಒಂದು ಪುರಾಣದ ಪುನರಾವಿಷ್ಕಾರ. ಅದು ಹೋಮರ್‍‌ನ ಕಾವ್ಯವನ್ನು ನಕಲಿಸುವುದಿಲ್ಲ; ಅದನ್ನು ಆಧುನಿಕ ಮಾನವ ಮನಸ್ಸಿನ ಪ್ರಶ್ನೆಗಳೊಂದಿಗೆ ಮರುಸಂವಾದಕ್ಕೆ ತರುತ್ತದೆ. ಯುದ್ಧದಿಂದ ಮರಳುವ ಮನುಷ್ಯ, ಮನೆಗೆ ತಲುಪಲು ಹೋರಾಡುವ ಆತ್ಮ, ನೆನಪುಗಳ ನಡುವೆ ದಾರಿ ಹುಡುಕುವ ವ್ಯಕ್ತಿ-ಇವೆಲ್ಲವೂ ಈ ಚಿತ್ರದ ಹೃದಯದಲ್ಲಿವೆ.

ಈ ಕಾರಣದಿಂದ ಚಿತ್ರವು ಮರಳುವಿಕೆಯ ಅರ್ಥವನ್ನು ಮರುಪರಿಶೀಲಿಸುವ ಒಂದು ಚಲನಚಿತ್ರಾತ್ಮಕ ಚಿಂತನೆ. ಹೋಮರ್‍‌ನ ಪುರಾಣವು ಸಾವಿರಾರು ವರ್ಷಗಳ ನಂತರವೂ ಜೀವಂತವಾಗಿರುವುದಕ್ಕೆ ಕಾರಣ, ಅದು ಯಾವ ಯುಗದಲ್ಲಾದರೂ ಮನುಷ್ಯನ ಒಳಗಿನ ಯಾತ್ರೆಯನ್ನು ಮಾತನಾಡಬಲ್ಲದು. ನೋಲನ್ ಅವರ ಚಿತ್ರ ಅದೇ ಯಾತ್ರೆಯನ್ನು ಇಪ್ಪತ್ತೊಂದನೆಯ ಶತಮಾನದ ಭಾಷೆಯಲ್ಲಿ ಮತ್ತೆ ಹೇಳುತ್ತಿರುವ ಹಾಗೆ ನೋಲಾನ್ ಪ್ರಸ್ತುತಪಡಿಸಿದ್ದಾರೆ.

ಕೊನೆಯದಾಗಿ…
ಸಂಪೂರ್ಣ ಐಮ್ಯಾಕ್ಸ್ (IMAX) ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡ, ಸುಮಾರು 250 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 2,500 ಕೋಟಿ ರೂಪಾಯಿ) ನಿರ್ಮಾಣ ವೆಚ್ಚ ಹಾಗೂ 150 ಮಿಲಿಯನ್ ಡಾಲರ್ ಪ್ರಚಾರ ವೆಚ್ಚದ ಬಿಗ್ ಬಜೆಟ್ ಸಿನೆಮಾ. ಜಗತ್ತಿನ ಅಮರ ಕಾವ್ಯ ಒಡಿಸ್ಸಿಯನ್ನು ಆಧರಿಸಿ ಸೃಜನಾತ್ಮಕ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ಚಿತ್ರವನ್ನು ವೀಕ್ಷಿಸುವ ಕುತೂಹಲ ಸಿನೆಮಾಪ್ರೇಮಿಗಳಲ್ಲಿರುವುದು ಸಹಜ. ಚಿತ್ರವನ್ನು ನೋಡಲು ಅಳಿಯ ಪ್ರಸನ್ನಕುಮಾರ್ ಎರಡು ಟಿಕೆಟ್‌ಗೆ 2,662 ರೂಪಾಯಿ ತೆತ್ತು ಐಮ್ಯಾಕ್ಸ್ ಚಿತ್ರಮಂದಿರಕ್ಕೆ ಕರೆದುಕೊಂಡು ಹೋದರು. ಆದರೆ, ಪ್ರೇಕ್ಷಕರ ಹಂಬಲವನ್ನೇ ಬಂಡವಾಳ ಮಾಡಿಕೊಂಡು ಚಿತ್ರಮಂದಿರಗಳು ಟಿಕೆಟ್ ದರವನ್ನು ವಿಪರೀತ ಏರಿಸಿ ಶೋಷಿಸುತ್ತಿರುವುದು ಪ್ರಸ್ತುತ ಚಿತ್ರರಂಗದ ಕಹಿ ಸತ್ಯ.

ದಿ ಒಡಿಸ್ಸಿ ಟೀಮ್
WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...