ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

Date:

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ ಪೀಳಿಗೆಗೆ ಹಸಿರು ಪ್ರೇರಣೆಯಾಗಿದ್ದಾರೆ...

ಭಾರತೀಯ ಆಡಳಿತ ಸೇವೆಯ ಬಹುತೇಕ ಹಿರಿಯ ಅಧಿಕಾರಿಗಳು ಶಾಂತಿಯುತ ನಿವೃತ್ತಿ ಜೀವನವನ್ನು ಸವಿಯುತ್ತಿರುವಾಗ, ತಮ್ಮ 89ನೇ ವರ್ಷಕ್ಕೆ ಕಾಲಿಡುತ್ತಿರುವ ಅ.ಚ. ಲಕ್ಷ್ಮಣ (ಅಚಲ) ಅವರು ಹಸಿರು ಕಾವಲುಗಾರನಂತೆ ಅಚಲ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಉತ್ಸಾಹದಿಂದ ಪುಟಿಯುವ ಲಕ್ಷ್ಮಣ ಅವರು ನಾಡಿನ ಏಳ್ಗೆಯ ಬಗ್ಗೆ ಬಸವಳಿಯದ ಆಶಾವಾದಿ. ರಾಮಾಯಣದ ಲಕ್ಷ್ಮಣನಂತೆ ನಿಸ್ವಾರ್ಥ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಇವರ 89 ವರ್ಷಗಳ ಪಯಣವು, ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಮತ್ತು ಕೃಷಿಕರ ಕಲ್ಯಾಣಕ್ಕಾಗಿ ಸಲ್ಲಿಸಿದ ಮಹೋನ್ನತ ಕರ್ತವ್ಯನಿಷ್ಠೆಗೆ ಜೀವಂತ ಸಾಕ್ಷಿಯಾಗಿದೆ.

- Advertisement -

ಶ್ರೀರಂಗಪಟ್ಟಣದ ಬಳಿಯ ಶ್ರೀನಿವಾಸ ಅಗ್ರಹಾರ ಎಂಬ ಸಣ್ಣ ಗ್ರಾಮದಲ್ಲಿ ದಿವಂಗತ ಚಲುವೇಗೌಡ ಮತ್ತು ಶ್ರೀಮತಿ ಶ್ಯಾಮಲಮ್ಮ ದಂಪತಿಯ ಪುತ್ರರಾಗಿ ಸೆಪ್ಟೆಂಬರ್ 20, 1938ರಂದು ಜನಿಸಿದ ಲಕ್ಷ್ಮಣ್ ಅವರ ಒಡನಾಟ ಬಾಲ್ಯದಿಂದಲೂ ಮಣ್ಣು ಮತ್ತು ಪ್ರಕೃತಿಯೊಂದಿಗಿತ್ತು. ತಂದೆಯವರನ್ನು ಬಹುಬೇಗ ಕಳೆದುಕೊಂಡರೂ ತಾಯಿಯ ಮಾರ್ಗದರ್ಶನದಲ್ಲಿ ಶಿಸ್ತಿನ ಬದುಕನ್ನು ಕಲಿತು ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿದರು. ತಮ್ಮ ತಾಯಿಯಿಂದ ಗಟ್ಟಿಯಾದ ನೈತಿಕ ಮೌಲ್ಯಗಳನ್ನು, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡರು. ಶಿಶುಸಹಜವಾದ ಕಲಿಕೆಯ ಆಸಕ್ತಿ ಮತ್ತು ಶಿಸ್ತಿನ ಬದುಕು ಮತ್ತು ಸುತ್ತಮುತ್ತಲಿನ ಆಗುಹೋಗುಗಳನ್ನು ತೆರೆದ ಕಣ್ಣಿನಿಂದ ಗಮನಿಸುತ್ತಾ ಬೆಳೆದ ಅವರಿಗೆ ಸಮಾಜಕ್ಕೆ ಸೇವೆ ಸಲ್ಲಿಸುವುದರ ಕಾಳಜಿ ಎಳವೆಯಿಂದಲೇ ಬೆಳೆಯಿತು. 1960ರಲ್ಲಿ ಕೃಷಿ ವಿಜ್ಞಾನದಲ್ಲಿ ಬಿ.ಎಸ್ಸಿ. ಪದವಿ ಪಡೆದ ನಂತರ, ಅವರು ಕರ್ನಾಟಕ ರಾಜ್ಯ ಅರಣ್ಯ ಸೇವೆಗೆ ಸೇರ್ಪಡೆಯಾಗಿ, ಎರಡು ವರ್ಷ ಡೆಹರಾಡೂನ್‌ನಲ್ಲಿ ಅರಣ್ಯ ಆಡಳಿತ, ಸಂರಕ್ಷಣೆ ಮತ್ತು ಸಂಶೋಧನೆಯ ವಿಧಾನಗಳಲ್ಲಿ ತರಬೇತಿ ಪಡೆದರು. ನಂತರ 1962ರಿಂದ ರಾಜ್ಯ ಅರಣ್ಯ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ ಸುಮಾರು 35 ವರ್ಷಗಳ ಸುದೀರ್ಘ ಆಡಳಿತಾತ್ಮಕ ಸೇವೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ, ಅಂತಿಮವಾಗಿ ಕರ್ನಾಟಕ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಅರಣ್ಯ ತರಬೇತಿಯ ಕಾಲದಲ್ಲಿ ಶಿಸ್ತಿನ ಅಧ್ಯಯನದ ಜೊತೆಗೆ ಇಲಾಖೆಗೆ ಸೇರಿದ ನಂತರ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಷ್ಟೇ ಪ್ರಮಾಣದಲ್ಲಿ ಅಪಾರವಾದ ಅರಣ್ಯ ತಿಳಿವಳಿಕೆಯಿದ್ದ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿಬ್ಬಂದಿಗಳ ಅನುಭವದಿಂದಲೂ ಅರಣ್ಯದ ಬಗ್ಗೆ ಸಮಗ್ರ ತಿಳಿವಳಿಕೆಯನ್ನು ರೂಢಿಸಿಕೊಂಡರು. ಸಾಂಘಿಕ ಶಕ್ತಿಯಲ್ಲಿ ನಂಬಿಕೆಯಿಟ್ಟ ಅವರು ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಮತ್ತು ಕಿರಿಯ ಸಹೋದ್ಯೋಗಿಗಳ ಸಹಕಾರದೊಡನೆ ಆಡಳಿತದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಂಡರು.

Advertisements
prajavani 2025 11 29 tdgkfrg3 file83cezsxe947ig7gglv0 1
ಕೃಷಿ ಕ್ಷೇತ್ರದ ನಂಟನ್ನು ಕರಕುಶಲಿಗಳ ಬದುಕಿನೊಂದಿಗೆ ಬೆಸೆದ ಲಕ್ಷ್ಮಣ್

ಲಕ್ಷ್ಮಣ್ ಅವರು ಕೇವಲ ಕಚೇರಿಗೆ ಸೀಮಿತವಾದ ಅಧಿಕಾರಿಯಾಗಿರಲಿಲ್ಲ. ಒಬ್ಬ ಸಮರ್ಥ ಅರಣ್ಯಾಧಿಕಾರಿಯು ಒಬ್ಬ ದಕ್ಷ ಆಡಳಿತಗಾರನಾದರೆ ಸಾಲದು, ಅರಣ್ಯ-ಪರಿಸರ ಸಂರಕ್ಷಕನಾಗಿಯೂ ಇರಬೇಕು; ಜೊತೆಗೆ ಸಮರ್ಥ ಸಂಶೋಧಕನಾಗಿಯೂ ಬೆಳೆಯಬೇಕೆಂದು ಅವರು ತಮ್ಮ ವೃತ್ತಿ ಬದುಕಿನುದ್ದಕ್ಕೂ ನಂಬಿದ್ದರು. ಈ ಮೂರರ ತತ್ವವು ಅರಣ್ಯದ ಪಾಲುದಾರರೆನಿಸಿದ ರೈತವರ್ಗ ಮತ್ತು ಅರಣ್ಯಾಧಾರಿತ ಕರಕುಶಲಿಗಳ ಬದುಕಿಗೂ ಜೊತೆಯಾದರೆ ಆಗ ಅರಣ್ಯದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ತಮ್ಮ ಅನುಭವದಿಂದ ಕಂಡುಕೊಂಡರು. ಮಾನವೀಯತೆಯನ್ನು ಹೊರತುಪಡಿಸಿ ನೈಜ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿದ್ದರು. “ಜನರ ಭವಿಷ್ಯವು ಅರಣ್ಯ ಸಂರಕ್ಷಣೆಯೊಂದಿಗೆ ಬೆಸೆದುಕೊಂಡಿದೆ” ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ಅರಣ್ಯ ಇಲಾಖೆಯ ತ್ರಿವಿಧ ಕಾರ್ಯಗಳ (ಆಡಳಿತ, ಸಂರಕ್ಷಣೆ ಮತ್ತು ಸಂಶೋಧನೆ) ಜೊತೆಗೆ ಮೂರು ಕ್ಷೇತ್ರಗಳ ಜೊತೆಗೆ ಕೃಷಿ ಕ್ಷೇತ್ರದ ನಂಟನ್ನು ಕರಕುಶಲಿಗಳ ಬದುಕನ್ನು ಬೆಸೆದ ಅವರು ಕೇವಲ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಉಳಿಯಲಿಲ್ಲ. ತಮ್ಮ ಸೇವಾ ಅವಧಿಯಲ್ಲಿ, ಅವರು ಪರಿಸರ ಸಮತೋಲನ ಮತ್ತು ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣವನ್ನು ಒಳಗೊಂಡ ಅನೇಕ ಸುಸ್ಥಿರ ಯೋಜನೆಗಳನ್ನು ರೂಪಿಸಿದರು. ನಾಡಿನ ರೈತರು ಮತ್ತು ಅರಣ್ಯ ಅವಲಂಬಿತ ಕರಕುಶಲಿಗಳ ಆರ್ಥಿಕಾಭಿವೃದ್ಧಿಯನ್ನು ಕೇಂದ್ರವಾಗಿಸಿಕೊಂಡು ವಿಶಿಷ್ಟ ಸೇವಾವಿಧಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡದ್ದು ಅವರನ್ನು ಇನ್ನಿತರ ಅಧಿಕಾರಿಗಳಿಂದ ಭಿನ್ನವಾಗಿಸಿತು.

ಇದನ್ನು ಓದಿದ್ದೀರಾ?: ಭೂಹೀನರ ಬೆನ್ನೆಲುಬು ಪಶುಪಾಲನೆ: ಈ ಆರ್ಥಿಕತೆಯತ್ತ ಗಮನ ಹರಿಸುವರೆ ಸಚಿವರು?

ಲಕ್ಷ್ಮಣ್ ಅವರ ಜೀವನವು ಸಾಹಸಮಯ ಅರಣ್ಯ ಕಥಾನಕದಂತಿದೆ. ಕಾಡಿನ ಕಠಿಣ ಸವಾಲುಗಳು, ವನ್ಯಜೀವಿಗಳೊಂದಿಗಿನ ಮುಖಾಮುಖಿ ಮತ್ತು ವಿನೂತನ ಪರಿಸರ ಪ್ರಯೋಗಗಳಿಂದ ಕೂಡಿದೆ. 1963ರಲ್ಲಿ ಚಾಮರಾಜನಗರ ಅರಣ್ಯ ಉಪವಿಭಾಗದಲ್ಲಿ ಸೇವಾವಧಿಯ ಆರಂಭದಲ್ಲಿಯೇ ವಿಶಾಲವಾದ ಮತ್ತು ಶ್ರೀಮಂತವಾದ ಅರಣ್ಯ ಪ್ರದೇಶದ ಸಂರಕ್ಷಣೆಯ ಹೊಣೆಗಾರಿಕೆ ಹೊತ್ತ ಅವರು ಪ್ರಾಣಾಪಾಯ ಲೆಕ್ಕಿಸದೇ ಅರಣ್ಯ ಕಳ್ಳಸಾಗಣೆ, ಶಿಕಾರಿಯನ್ನು ನಿಯಂತ್ರಿಸಿ ಅಚ್ಚರಿ ಮೂಡಿಸಿದರು. ಆಗಲೇ ಅವರಿಗೆ ಅಳಿವಿನಂಚಿನಲ್ಲಿದ್ದ ಸೀಳು ನಾಯಿಗಳ ಸಂತತಿ ರಕ್ಷಣೆಗೆ ಮುಂದಾಗಿದ್ದರು. ಮುಂದೆ ಸಾಗರ ವಲಯದಲ್ಲಿ ಶರಾವತಿ ಮುಳುಗಡೆ ಪ್ರದೇಶದ ಉಸ್ತುವಾರಿ ಅರಣ್ಯ ಅಧಿಕಾರಿಯಾಗಿ ಅಭಿವೃದ್ಧಿ ತರುವ ಅನಾಹುತಗಳನ್ನು ಕಣ್ಣಾರೆ ಕಂಡರು. 1968 ಮತ್ತು 1970ರಲ್ಲಿ ನಡೆದ ಎರಡು ಖೆಡ್ಡಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ತಮ್ಮ ವನ್ಯಮೃಗಗಳ ಬದುಕಿನ ಬಗ್ಗೆ ಅನುಭವ ಹೆಚ್ಚಿಸಿಕೊಂಡರು. 1972ರಲ್ಲಿ ಕಾರವಾರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಸಮಯದಲ್ಲಿ ಜನರು ತಮ್ಮ ದೈನಂದಿನ ಉರುವಲಿನ ಬಳಕೆಯ ಪ್ರಮಾಣದ ಬಗ್ಗೆ ಸಂಶೋಧನೆ ಕೈಗೊಂಡು ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಅರಣ್ಯ ಅಕ್ಷಯ ಪಾತ್ರೆಯಲ್ಲ; ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮನುಷ್ಯನ ಬದುಕಿಗೆ ತೀವ್ರ ಸಂಕಷ್ಟ ಒದಗಲಿದೆ ಎಂಬ ಸ್ಫೋಟಕ ಸತ್ಯವನ್ನು ಪ್ರಕಟಿಸಿದರು. ಸಾಮಾಜಿಕ ಅರಣ್ಯ ಯೋಜನೆ ಇನ್ನೂ ಕಲ್ಪನೆಯ ಹಂತದಲ್ಲೂ ಇರದ ಕಾಲದಲ್ಲಿ ಮನುಷ್ಯರಿಗೆ ಅಬಾಧಿತವಾಗಿ ಉರುವಲು ಒದಗಿಸುವ ಸುಸ್ಥಿರ ಯೋಜನೆಯ ಅಗತ್ಯವನ್ನು ಮುಂದಿಟ್ಟರು. ಮಡಿಕೇರಿಯಲ್ಲಿ (1974-75) ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಅಮೂಲ್ಯ ಅರಣ್ಯ ಸಂಪತ್ತಿನ ಲೂಟಿಯನ್ನು ನಿಯಂತ್ರಿಸಿದ್ದೇ ಅಲ್ಲದೆ, ಕಳ್ಳ ಸಾಗಾಣಿಕೆದಾರರನ್ನೂ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸುವ ಪರಿವರ್ತನಾ ಕೆಲಸದಲ್ಲೂ ಯಶಸ್ವಿಯಾದರು. ಸರ್ಕಾರದ ಅನೇಕ ಸಂಸ್ಥೆಗಳಿಗೆ ಅಭಿವೃದ್ಧಿಯ ನೆಪದಲ್ಲಿ ಅರಣ್ಯದ ಜಮೀನು ಬಿಡುಗಡೆಯಾಗುವ ಆದೇಶಗಳ ವಿರುದ್ಧ ನಿಂತರು.
ಇದೇ ವೇಳೆಯಲ್ಲಿ ಅರಣ್ಯ ಸಂಶೋಧನೆಗೂ ಸಮಯ ಮೀಸಲಿರಿಸಿ ಉಪಯುಕ್ತ ಯಶಸ್ಸು ಕಂಡರು. ಮುಖ್ಯವಾಗಿ ಪಶ್ಚಿಮ ಘಟ್ಟಗಳ ಮರು ಹಸಿರೀಕರಣದಲ್ಲಿ ಅವರು ನಡೆಸಿದ ಪ್ರಯೋಗಗಳು ಶ್ಲಾಘನೀಯ. ಅತಿಕ್ರಮಣ ಮತ್ತು ಸವಕಳಿಗೆ ಒಳಗಾಗಿದ್ದ ಪಶ್ಚಿಮ ಘಟ್ಟಗಳ ಬಂಜರು ಹುಲ್ಲುಗಾವಲು ಬೋಳುಗುಡ್ಡಗಳನ್ನು ಹಸಿರು ಮಾಡುವ ಕಾರ್ಯ 1906ರಲ್ಲೇ ಆರಂಭವಾಗಿದ್ದರೂ ಯಶಸ್ಸು ಕಂಡಿರಲಿಲ್ಲ. ಮಣ್ಣು ವಿಜ್ಞಾನಿಯ ಜೊತೆ ಪ್ರಾಯೋಗಿಕವಾಗಿ ಆ ಬೋಳುಗುಡ್ಡ ಪ್ರದೇಶಗಳಲ್ಲಿ 46 ಸ್ಥಳೀಯ ಸಸ್ಯ ಪ್ರಭೇದಗಳನ್ನು ಬೆಳೆಸಿ ಇಂದು ದಟ್ಟ ಅರಣ್ಯವಾಗಿ ಮಾರ್ಪಡುವಂತೆ ಮಾಡಿದ ಯಶಸ್ಸು ಅವರಿಗೆ ಸಲ್ಲುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದ್ದ 80 ಕುಟುಂಬಗಳನ್ನು ಸ್ಥಳಾಂತರಿಸಬೇಕಾದಾಗ, ಲಕ್ಷ್ಮಣ್ ಅವರು ಬಲಪ್ರಯೋಗ ಮಾಡದೆ, ರೈತರ ವಿಶ್ವಾಸವನ್ನು ಗೆದ್ದು ವಿರಾಜಪೇಟೆ ತಾಲೂಕಿನ ಗೂಡ್ಲೂರು ಮತ್ತು ಚನ್ನಂಗಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಪುನರ್ವಸತಿ ಕಲ್ಪಿಸಿದರು. ಮಾನವ ಪುನರ್ವಸತಿ ಕಾರ್ಯವು ದುರಂತಗಳಲ್ಲೇ ಪರ್ಯವಸಾನವಾದ ದೃಷ್ಟಾಂತಗಳಿರುವ ಸಮಯದಲ್ಲಿ ಲಕ್ಷ್ಮಣ್ ಅವರು ಜಾರಿಗೊಳಿಸಿದ ಪುನರ್ವಸತಿ ಕಾರ್ಯವು ಅತ್ಯಂತ ಮಾನವೀಯ ಕಾರ್ಯಕ್ರಮವೆಂದು ಹೆಸರು ಪಡೆಯಿತು.

ಲಕ್ಷ್ಮಣ್ ಬಿದಿರು
ಇಂದು ಬಿದಿರು ಹೀಗಿರಲು ಲಕ್ಷ್ಮಣ್ ಅವರ ಶ್ರಮವೂ ಇದೆ

ರಾಜ್ಯಾದ್ಯಂತ ‘ಬಿದಿರು ಲಕ್ಷ್ಮಣ್’ ಎಂದೇ ಪ್ರಸಿದ್ಧರಾದ ಇವರು, ಸೂಕ್ತ ಮಣ್ಣಿನ ಆರೈಕೆಯ ಮೂಲಕ ಅರಣ್ಯಗಳಲ್ಲಿ ಬಿದಿರು ಸಮೃದ್ಧವಾಗಿ ಬೆಳೆಯುವಂತೆ ಮಾಡಿದರು. ಕೊಡಗಿನ ಕೃಷಿಕರಿಗೆ ಬರ್ಮಾ ಬಿದಿರು ಬೆಳೆಯಲು ಪ್ರೋತ್ಸಾಹಿಸಿದರು. 1980ರ ದಶಕದಲ್ಲಿ ಶಿವಮೊಗ್ಗದಲ್ಲಿದ್ದಾಗ, ”ಕೊರತೆಯಿಂದ ಸಮೃದ್ಧಿಯತ್ತ” ಎಂಬ ವಿನೂತನ ಯೋಜನೆಯ ಮೂಲಕ ಬಿದಿರು ಕೊರತೆ ಎದುರಿಸುತ್ತಿದ್ದ ಸಾಂಪ್ರದಾಯಿಕ ‘ಮೇದರ’ ಸಮುದಾಯಕ್ಕೆ ಬಿದಿರು ಸಿಗುವಂತೆ ಮಾಡಿ, ಅವರ ಜೀವನೋಪಾಯಕ್ಕೆ ಆಸರೆಯಾದರು. ಅವರ ಅಸಾಂಪ್ರದಾಯಕ ಪ್ರಯೋಗಗಳಿಗೆ ಮೊದಲು ಟೀಕೆಗಳು ಎದುರಾದರೂ ದೊರೆತ ಫಲಿತಾಂಶ ಟೀಕೆಗಳಿಗೆ ಸಮರ್ಥ ಉತ್ತರ ನೀಡಿದ್ದವು.

ಬಿದಿರು ಮಾತ್ರವಲ್ಲದೆ ಲಕ್ಷ್ಮಣ್ ಅವರ ಹೆಸರು ಬೆತ್ತದೊಡನೆಯೂ ಬಿಡಿಸಲಾಗದ ಬೆಸುಗೆ ಹೊಂದಿದೆ. ಮಲೆನಾಡಿನ ಅರಣ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಲದಲ್ಲಿ ಅವರ ಲಕ್ಷ್ಯ ಬೆತ್ತದತ್ತ ಹೊರಳಿತು. ಪಶ್ಚಿಮ ಘಟ್ಟಗಳಲ್ಲಿ ಸಮೃದ್ಧವಾಗಿ ಬೆಳೆಯುವ ಬಹುಪಯೋಗಿ ಬೆತ್ತದ ಬಗ್ಗೆ ಹೆಚ್ಚಿನ ದಾಖಲೆಗಳಾಗಿರಲಿಲ್ಲ. ಕೇರಳದ ಸಸ್ಯವಿಜ್ಞಾನಿ ಡಾ. ರೇಣುಕಾ ಅವರೊಂದಿಗೆ ಸೇರಿ ಕರ್ನಾಟಕದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆತ್ತದ ಪ್ರಭೇದಗಳ ಸಂಶೋಧನೆ ನಡೆಸಿ ದಾಖಲಾಗದ ಹಲವು ಬೆತ್ತದ ಪ್ರಭೇದಗಳನ್ನು ಬೆಳಕಿಗೆ ತಂದರು. ಈ ಸಂಶೋಧನೆಯಲ್ಲಿ ಪತ್ತೆ ಹಚ್ಚಿದ ಎರಡು ಬೆತ್ತದ ಹೊಸ ಪ್ರಭೇದಗಳಿಗೆ ಅಂತಾರಾಷ್ಟ್ರೀಯ ಮನ್ನಣೆಯ ಹೊಸ ಹೆಸರನ್ನು ನೀಡಲಾಯಿತು. ಸ್ಥಳೀಯವಾಗಿ ಸುಕ್ಕು ಬೆತ್ತ ಎಂದು ಕರೆಯುವ ಪ್ರಭೇದಕ್ಕೆ ಕ್ಯಲಾಮಸ್ ಕರ್ನಾಟಕೆನ್ಸಿಸ್(Calamus karnatakensis) ಎಂದು ಕರ್ನಾಟಕದ ಹೆಸರಿಟ್ಟರೆ ಮತ್ತೊಂದು ‘ಹಾಲು ಬೆತ್ತ’ ಪ್ರಭೇದಕ್ಕೆ ಲಕ್ಷ್ಮಣ್ ಅವರ ಗೌರವಾರ್ಥವಾಗಿ ಕ್ಯಲಾಮಸ್ ಲಕ್ಷ್ಮಣೆ (Calamus lakshmanae) ಎಂದು ಹೆಸರಿಸಲಾಯಿತು. ಇದು ಲಕ್ಷ್ಮಣ್ ಅವರ ಹೆಸರು ಸಸ್ಯಶಾಸ್ತ್ರೀಯ ಅಧ್ಯಯನದಲ್ಲಿ ಅಮರವಾಗುವಂತೆ ಮಾಡಿದೆ.

ಅರಣ್ಯವೇ ಇವರ ನಿಜವಾದ ಕರ್ಮಭೂಮಿಯಾಗಿದ್ದರೂ, ತಮ್ಮ ಅನುಭವ ಮತ್ತು ಸಂಶೋಧನೆಗಳನ್ನು ಹಲವು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಸಾಮಾಜಿಕ ಅರಣ್ಯ ಕಲ್ಪನೆ ಬರುವ ಮುನ್ನವೇ ರಾಜ್ಯದಲ್ಲಿ ಎದುರಾಗಬಹುದಾದ ಇಂಧನ ಹಾಗೂ ಕಟ್ಟಿಗೆ ಅಭಾವದ ಬಗ್ಗೆ ಮುನ್ಸೂಚನೆ ನೀಡಿದ ಪ್ರವಾದಾತ್ಮಕ ಕೃತಿ ‘ಕರ್ನಾಟಕ ವನ್ಯ ಸಂಪತ್ತು’ (1976) ಅವರ ಮುನ್ನೋಟಕ್ಕೆ ಸಾಕ್ಷಿಯಾದ ಕಿರು ಹೊತ್ತಗೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಸ್ಯರಾಶಿ, ಪ್ರಾಣಿ ಸಂಕುಲ ಮತ್ತು ಸಂರಕ್ಷಣೆಯ ಕುರಿತು ಬರೆದ ವಿವರವಾದ ಪುಸ್ತಕ ‘ನಾಗರಹೊಳೆ’ (1976) ಮತ್ತೊಂದು ಜನಪ್ರಿಯ ಕೃತಿ.

ದಕ್ಷಿಣ ಭಾರತದ ಬೆತ್ತಗಳ ವಿಶಿಷ್ಟತೆಯನ್ನು ಜಗತ್ತಿನ ಬೆತ್ತಗಳ ಹಿನ್ನೆಲೆಯಲ್ಲಿಟ್ಟು ಅವುಗಳ ಸಸ್ಯಶಾಸ್ತ್ರೀಯ ವಿವರ, ಬೆಳವಣಿಗೆ ಮತ್ತು ಆರ್ಥಿಕ ಮೌಲ್ಯ ಕುರಿತಾದ ಸಮಗ್ರ ಸಂಶೋಧನಾ ಕೃತಿಯನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ‘Rattans of South India’ (1996) ಮತ್ತು ಕನ್ನಡದಲ್ಲಿ ‘ದಕ್ಷಿಣ ಭಾರತದ ಬೆತ್ತಗಳು’- ಕೃತಿಗಳು ಇಂದು ಅಂತಾರಾಷ್ಟ್ರೀಯ ವಿಜ್ಞಾನಿಗಳಿಗೆ ಮುಖ್ಯ ಪರಾಮರ್ಶನಾ ಗ್ರಂಥಗಳಾಗಿ ಪರಿಗಣಿತವಾಗಿವೆ. ಲಕ್ಷ್ಮಣ್ ಅವರು ಅರಣ್ಯಾಧಿಕಾರಿಯಾಗಿ ಉಷ್ಣವಲಯದ ಕಾಡುಗಳಲ್ಲಿ ನಡೆದ ಅನುಭವಗಳ ಸಂಕಲನವೇ ‘Challenges of a Tropical Forester for Sustainable Development’ ಕೃತಿ.

AC Laxman Books

ಇದನ್ನು ಓದಿದ್ದೀರಾ?: ಹಸ್ದೇವ್ ಅರಣ್ಯ ಉಳಿಸಿ ಎಂದ ಜನ; ಹರಾಜಾದ ʼತಾರಾʼ; ಕಲ್ಲಿದ್ದಲು ಕದನದಲ್ಲಿ ಗೆದ್ದವರು ಯಾರು?

ಇದರ ಜೊತೆಗೆ ತಮ್ಮ ಸಮಗ್ರ ಜೀವನದ ವಿವರಗಳಿರುವ ಆತ್ಮಕಥೆ ‘ವನವೆಲ್ಲ ಕಲ್ಪತರು’ (2022) ಕೃತಿಯನ್ನು ರಚಿಸಿದ್ದು ಅದು ಅವರ ಜೀವನ, ಬೆಳವಣಿಗೆ, ಜೀವನೋತ್ಸಾಹ, ಸಾಧನೆಗಳನ್ನು ಸಮಗ್ರವಾಗಿ ಬಿಂಬಿಸುತ್ತದೆ. ತಮ್ಮ ಸಾಹಸಮಯ ಕಾಡಿನ ಅನುಭವಗಳನ್ನು ಅವರು ‘ಕಾಡಿನ ಕಥೆಗಳು’ ಕೃತಿಯಲ್ಲಿ ಸಂಕಲಿಸಿದ್ದು, ಅದು ಪ್ರಕೃತಿಯೊಂದಿಗಿನ ಅವರ ಆತ್ಮೀಯ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ನಿವೃತ್ತಿಯ ನಂತರವೂ ಮುಂದುವರಿದ ಕೃಷಿ ಅರಣ್ಯ ಅಭಿಯಾನ

1996ರಲ್ಲಿ ನಿವೃತ್ತರಾದ ನಂತರವೂ ಅವರ ಸೇವೆ ನಿಲ್ಲಲಿಲ್ಲ. ಒಮ್ಮೆ ದಕ್ಷ ಅರಣ್ಯಾಧಿಕಾರಿ, ಸಮರ್ಥ ಆಡಳಿತಗಾರ ಹಾಗೂ ವಿನೂತನ ಸಂಶೋಧಕರಾಗಿದ್ದ ಎ.ಸಿ. ಲಕ್ಷ್ಮಣ್ ಅವರು, ನಿವೃತ್ತಿಯ ನಂತರ ಕ್ಷೀಣಿಸುತ್ತಿರುವ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಆರ್ಥಿಕವಾಗಿ ನೆರವಾಗಲು ಸಾಮಾಜಿಕ ಅರಣ್ಯೀಕರಣದ ಕಾರ್ಯಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ರಾಷ್ಟ್ರೀಯ ಮಟ್ಟದಲ್ಲಿ ಶೇ. 33ರಷ್ಟು ಅರಣ್ಯ ಪ್ರದೇಶ ಹೊಂದುವ ಗುರಿಯನ್ನು ತಲುಪಲು ಕೃಷಿ ಅರಣ್ಯ (Farm Forestry) ಪದ್ಧತಿಯನ್ನು ಉತ್ತೇಜಿಸಿದರು. ಕೃಷಿ ಕಾರ್ಮಿಕರ ಕೊರತೆ ಮತ್ತು ವೆಚ್ಚದ ಹೆಚ್ಚಳದಿಂದ ಕಂಗಾಲಾಗಿದ್ದ ರೈತರಿಗೆ ಕೃಷಿ ಜಮೀನುಗಳಲ್ಲಿ ಮರಗಳನ್ನು ಬೆಳೆಸಲು ಸಲಹೆ ನೀಡಿದರು. ಹೆಬ್ಬೇವು, ಶ್ರೀಗಂಧ ಹಾಗೂ ಸಿಲ್ವಿ-ಹಾರ್ಟಿಕಲ್ಚರ್ ಪದ್ಧತಿಗಳ ಕುರಿತು ಅವರು ನೀಡಿದ ನಿರಂತರ ಮಾರ್ಗದರ್ಶನದಿಂದಾಗಿ, ಇಂದು ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಹಸಿರು ಸಿರಿ ಕಂಗೊಳಿಸುತ್ತಿದೆ.

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ ಪೀಳಿಗೆಗೆ ಹಸಿರು ಪ್ರೇರಣೆಯಾಗಿದ್ದಾರೆ…

AC Laxman1 1
ನಿವೃತ್ತಿಯ ನಂತರವೂ ಮುಂದುವರಿದ ಕೃಷಿ ಅರಣ್ಯ ಅಭಿಯಾನ
WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ಸೆ.21ರಂದು ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಸಮಾರಂಭ

ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ...

ಸೂರಜ್ ರೇವಣ್ಣಗೆ ಬಿಗ್ ರಿಲೀಫ್! 2 ಪ್ರಕರಣಗಳ ಬಿ-ರಿಪೋರ್ಟ್ ಸಲ್ಲಿಸಿದ ಸಿಐಡಿ

ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ...

ಟಿಎಂಸಿ ಚಿಹ್ನೆ ಮುಟ್ಟುಗೋಲು: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಟಿಎಂಸಿ ಪಕ್ಷದ ಆಂತರಿಕ ಭಿನ್ನಮತ ಮತ್ತು ಬಂಡಾಯದ ಬಳಿಕ ಚುನಾವಣಾ ಆಯೋಗವು...