'ಎ ಫಾಗಿ ಟೇಲ್' ಕೇವಲ 1950ರ ದಶಕದ ತೈವಾನಿನ ರಾಜಕೀಯ ಪರಿಸ್ಥಿತಿಯ ಕತೆಯಲ್ಲ. ಐತಿಹಾಸಿಕ ಚಿತ್ರವಲ್ಲ. ಕಷ್ಟದ ಕಾಲದಲ್ಲಿ ಮನುಷ್ಯತ್ವ ಹೇಗೆ ಬದುಕುಳಿಯುತ್ತದೆ ಎಂಬುದನ್ನು ತೋರುವ ಚಿತ್ರ. ರಾಜಕೀಯ-ಮಾನವೀಯ ಪ್ರಶ್ನೆಗಳನ್ನು ಎತ್ತುವ ಚಿತ್ರ. ದೇಶದ ಪ್ರಸ್ತುತ ಸ್ಥಿತಿ ಕುರಿತು ಚಿಂತಿಸುವಂತೆ ಮಾಡುವ ಚಿತ್ರ.
‘ಎ ಫಾಗಿ ಟೇಲ್’- ಡಿಸೆಂಬರ್ 2025ರಲ್ಲಿ ಬಿಡುಗಡೆಯಾದ ಚೈನೀಸ್ ಭಾಷೆಯ ಚಿತ್ರ. ಇದು ತೈವಾನ್ ದೇಶದ ವೈಟ್ ಟೆರರ್- ರಾಜಕೀಯ ದಮನದ ಕಾಲದ ಕರಾಳ ದಿನಗಳ ಕತೆ ಹೇಳುತ್ತದೆ.
ಕತೆ ಆರಂಭವಾಗುವುದು 1953-54ರ ಕಾಲಘಟ್ಟದಲ್ಲಿ. ಕಮ್ಯುನಿಸ್ಟ್ ಎಂದು ತಿಳಿದಾಕ್ಷಣ, ಸರ್ಕಾರವನ್ನು ಟೀಕಿಸುವ-ಪ್ರಶ್ನಿಸುವ ವ್ಯಕ್ತಿಗಳನ್ನು ರಾಜಕೀಯ ಭಿನ್ನಾಭಿಪ್ರಾಯದ ನೆಪದಲ್ಲಿ ಬಂಧಿಸುವುದು, ಕಿರುಕುಳ ನೀಡುವುದು, ಹತ್ಯೆಗೈಯುವುದು ಅಲ್ಲಿ ಸಲೀಸು. ಹತ್ಯೆಗೆ ಒಳಗಾದ ಶವಗಳನ್ನು ಸಾಮೂಹಿಕ ಸಮಾಧಿಗಳಿಗೆ ಎಸೆಯುತ್ತಾರೆ. ಅಕಸ್ಮಾತ್ ಶವಗಳನ್ನು ಪಡೆಯಲು ಬಯಸುವ ಬಂಧುಗಳಿದ್ದರೆ, ಭಾರಿ ಮೊತ್ತದ ಹಣ ಕಟ್ಟಿದರೆ ಕೊಡುತ್ತಾರೆ.
15 ವರ್ಷದ ಹಳ್ಳಿಗಾಡಿನ ಮುಗ್ಧ ಹುಡುಗಿ ಯುಯೆ, ರಾಜಕೀಯ ಕಾರಣಗಳಿಗಾಗಿ ಸರ್ಕಾರದಿಂದ ಹತ್ಯೆಯಾದ ತನ್ನ ಅಣ್ಣನ ಶವವನ್ನು ಪಡೆಯಬೇಕೆಂದು ಪರದಾಡುತ್ತಾಳೆ. ಆದರೆ, ಆಕೆಯ ಬಳಿ ಅಧಿಕಾರಿಗಳು ಕೇಳುವಷ್ಟು ಹಣವಿರುವುದಿಲ್ಲ. ಕೆಲಸ ಮಾಡಿ ಹಣ ಸಂಗ್ರಹಿಸಲೆಂದು ತೈಪೈ ನಗರಕ್ಕೆ ಒಂಟಿಯಾಗಿ ಹೊರಡುತ್ತಾಳೆ. ತನ್ನ ಅಣ್ಣನಿಗೆ ಗೌರವಯುತ ಅಂತ್ಯಕ್ರಿಯೆ ಮಾಡಬೇಕೆಂಬುದಷ್ಟೇ ಅವಳ ಆಸೆ.
ಆದರೆ, ಅಪರಿಚಿತ ನಗರದಲ್ಲಿ ಅವಳು ಮಾನವ ಕಳ್ಳಸಾಗಣೆದಾರರ ಜಾಲಕ್ಕೆ ಸಿಲುಕುತ್ತಾಳೆ. ಆ ಸಂದರ್ಭದಲ್ಲಿ ಚಾವೋ ಗಾಂಗ್-ಟಾವೋ ಎಂಬ ವಿಚಿತ್ರ ಸ್ವಭಾವದ, ಮಾಜಿ ಸೈನಿಕ ಹಾಗೂ ರಿಕ್ಷಾ ಚಾಲಕ ಅವಳ ರಕ್ಷಣೆಗೆ ನಿಲ್ಲುತ್ತಾನೆ. ಹಣದ ಮುಗ್ಗಟ್ಟು ಎದುರಾದಾಗ ಅಣ್ಣನ ಕೊನೆಯ ಕುರುಹಾದ ಕೈಗಡಿಯಾರವನ್ನು ಮಾರಲು ಮುಂದಾಗುತ್ತಾಳೆ. ಟಾವೋ ಅದನ್ನು ಕಡಿಮೆ ಬೆಲೆಗೆ ಮಾರಿಸಿ, ಆ ಹಣದಲ್ಲಿ ಜೂಜಾಡಿ ಕಳೆಯುತ್ತಾನೆ. ಆತನ ಕೆಲಸ ಹೋಗುತ್ತದೆ, ಈಕೆಯ ಬಳಿ ಹಣವಿಲ್ಲದಾಗುತ್ತದೆ. ಇಂತಹ ಕಠಿಣ ಪರಿಸ್ಥಿತಿ ಮತ್ತು ಸರ್ಕಾರದ ನಿರಂತರ ಕಣ್ಗಾವಲಿನ ನಡುವೆಯೂ ಈ ಇಬ್ಬರ ನಡುವೆ ಬೆಳೆಯುವ ಅಪರೂಪದ ಸ್ನೇಹ ಹಾಗೂ ಯುಯೆ ತನ್ನ ಅಣ್ಣನ ಶವ ಪಡೆದು ಅಂತ್ಯಕ್ರಿಯೆ ಹೇಗೆ ಮಾಡುತ್ತಾಳೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು.
ಇದನ್ನು ಓದಿದ್ದೀರಾ?: ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ
ರಿಕ್ಷಾ ಚಾಲಕ ಗಾಂಗ್ ಟಾವೋ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದವನು. ಅವನ ಮೃತ ಸಹೋದ್ಯೋಗಿಗಳಂತೆ ಅವನೂ ಕಮ್ಯುನಿಸ್ಟ್ ಆಗಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಅವನನ್ನು ಹಿಂಬಾಲಿಸುತ್ತಿರುತ್ತಾರೆ. ಆತನ ಮನೆಯನ್ನು ತಡಕಾಡುವಾಗ ಮೂರು ಡಬ್ಬಗಳು ಕಾಣುತ್ತವೆ. ಏನೆಂದು ಕೇಳಿದರೆ, ನನ್ನ ಮೃತ ಸಹೋದ್ಯೋಗಿಗಳ ಬೆರಳಿನ ಮೂಳೆ ಎನ್ನುತ್ತಾನೆ. ನೋಡುಗರಿಗೆ ಆ ದೃಶ್ಯ ಅಸಂಬದ್ಧವಾಗಿ ಕಾಣುತ್ತದೆ. ಆದರೆ, ಆ ಅಸಂಬದ್ಧತೆಯೇ ಆ ಕಾಲದ ಕ್ರೌರ್ಯವನ್ನು ಬಹಿರಂಗಗೊಳಿಸುತ್ತದೆ. ಅದು ಚಿತ್ರದ ರಾಜಕೀಯ ಆಯಾಮಗಳನ್ನು ಬಿಡಿಸಿಡುತ್ತದೆ. ವಿಶೇಷವಾಗಿ ಸರ್ವಾಧಿಕಾರಿ ಆಡಳಿತದ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಎಷ್ಟು ಸುಲಭವಾಗಿ ಅಪರಾಧಿಯನ್ನಾಗಿ ಮಾಡಿ ಜೈಲಿಗೆ ತಳ್ಳಬಹುದು ಎಂಬುದನ್ನು ತೆರೆದಿಡುತ್ತದೆ. ಸರ್ಕಾರದ ರೀತಿ-ನೀತಿಗೆ ವಿರುದ್ಧವಾಗಿ ಯೋಚಿಸುವವರನ್ನು ರಾಜಕೀಯ ಬಂಧಿಗಳನ್ನಾಗಿ ಮಾಡುವ ಸರ್ವಾಧಿಕಾರಿ ವ್ಯವಸ್ಥೆಗಳ ಬಗ್ಗೆ ಚಿತ್ರ ಎಚ್ಚರಿಕೆಯನ್ನೂ ನೀಡುತ್ತದೆ.

ಯುದ್ಧ ಮತ್ತು ರಾಜಕೀಯ ದಮನದ ಕಾಲದಲ್ಲಿ ಮನುಷ್ಯರನ್ನು ಬಳಸಿ ಬಿಸಾಡಬಹುದಾದ ವಸ್ತುಗಳಂತೆ ಪರಿಗಣಿಸಲಾಗುತ್ತದೆ. ಬದುಕಿರುವಾಗಲೂ, ಸತ್ತ ನಂತರವೂ ಗೌರವವಿಲ್ಲ. ಮೃತದೇಹಗಳನ್ನು ಆಟಿಕೆಯಂತೆ ನೋಡಲಾಗುತ್ತದೆ. ಕೆಲವು ವೈದ್ಯಕೀಯ ಸಂಶೋಧನೆಗಾಗಿ ಒಳಗಾಗುತ್ತವೆ; ಕೆಲವು ಕಸದಂತೆ ವಿಲೇವಾರಿಯಾಗುತ್ತವೆ. ಚಿತ್ರ, ಈ ಎಲ್ಲವನ್ನು ಯಾವುದೇ ಅಲಂಕಾರವಿಲ್ಲದೆ, ಪ್ರಾಮಾಣಿಕವಾಗಿ ಬಿಚ್ಚಿಡುತ್ತದೆ.
ಚಿತ್ರದ ಕಪ್ಪು-ಬಿಳುಪು ಛಾಯಾಗ್ರಹಣವು ನಮ್ಮನ್ನು ನೇರವಾಗಿ ಭೂತಕಾಲಕ್ಕೆ ಕರೆದೊಯ್ಯುತ್ತದೆ. ನಾವು ಆ ಕಾಲಘಟ್ಟದಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ. ಮಸುಕಾದ ಬಣ್ಣಗಳು, ಮಂಜು ಮತ್ತು ಮಳೆಯ ದೃಶ್ಯಗಳನ್ನು ಬಳಸಿ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಅಂದಿನ ಉಸಿರುಗಟ್ಟಿಸುವ ವಾತಾವರಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಅದಕ್ಕೆ ಹಳ್ಳಿಯ ಮುಗ್ಧ ಬಾಲಕಿಯ ದುಃಖ-ದುಮ್ಮಾನ, ತವಕ-ತಲ್ಲಣಗಳನ್ನು ಸಂಪರ್ಕ ಸೇತುವೆಯಂತೆ ಬಳಸಿಕೊಳ್ಳಲಾಗಿದೆ.
‘ಎ ಫಾಗಿ ಟೇಲ್’ ಕೇವಲ 1950ರ ದಶಕದ ತೈವಾನಿನ ರಾಜಕೀಯ ಪರಿಸ್ಥಿತಿಯ ಕತೆಯಲ್ಲ. ಐತಿಹಾಸಿಕ ಚಿತ್ರವಲ್ಲ. ಇದು ಕಷ್ಟದ ಕಾಲದಲ್ಲಿ ಮನುಷ್ಯತ್ವ ಹೇಗೆ ಬದುಕುಳಿಯುತ್ತದೆ ಎಂಬುದನ್ನು ತೋರುವ ಚಿತ್ರ. ಅದು, ಕಠಿಣ ಪರಿಸ್ಥಿತಿಗೆ ತಲೆಬಾಗದೆ, ಅಧಿಕಾರಸ್ಥರ ಅಟಾಟೋಪಕ್ಕೆ ಬೆದರದೆ, ಅದನ್ನು ಧೈರ್ಯದಿಂದ ಎದುರಿಸುವ ಬಾಲಕಿಯ ಕಥೆಯೂ ಹೌದು. ಐತಿಹಾಸಿಕ ಹಿನ್ನೆಲೆಯುಳ್ಳ, ಭಾವನಾತ್ಮಕ ಬಂಧವಿರುವ ಮತ್ತು ರಾಜಕೀಯ-ಮಾನವೀಯ ಪ್ರಶ್ನೆಗಳನ್ನು ಎತ್ತುವ ಚಿತ್ರವನ್ನು ಹುಡುಕುತ್ತಿರುವವರಿಗೆ ಈ ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ.
ಸಾಮಾನ್ಯವಾಗಿ ಇಂತಹ ರಾಜಕೀಯ ಹಿನ್ನೆಲೆಯ ಚಿತ್ರಗಳು ಕೇವಲ ಹಿಂಸೆ ಮತ್ತು ಸರ್ಕಾರದ ಕ್ರೌರ್ಯವನ್ನು ತೋರಿಸುತ್ತವೆ. ಆದರೆ, ನಿರ್ದೇಶಕ ಚೆನ್ ಯು-ಹ್ಸುನ್ ಇಲ್ಲಿ ರಾಜಕೀಯವನ್ನು ಕೇವಲ ಹಿನ್ನೆಲೆಯಾಗಿ ಇಟ್ಟುಕೊಂಡು, ದಿಕ್ಕೆಟ್ಟ ಸ್ಥಿತಿಯಲ್ಲೂ ಮನುಷ್ಯರಲ್ಲಿ ಉಳಿಯುವ ಪ್ರೀತಿ, ನಂಬಿಕೆ ಮತ್ತು ಮುಗ್ಧತೆಯನ್ನು ಮುನ್ನಲೆಗೆ ತಂದಿದ್ದಾರೆ. ಜನರ ದೈನಂದಿನ ಬದುಕಿನೊಂದಿಗೆ ಬೆಸೆದಿರುವ ಭಯಭೀತ ಮೌನ, ಅನುಮಾನಗಳತ್ತ ಬೆಳಕು ಚೆಲ್ಲಿದ್ದಾರೆ. ಬಾಲಕಿಯ ತಲ್ಲಣವನ್ನು ರಾಷ್ಟ್ರದ ತಲ್ಲಣವಾಗಿಸಿದ್ದಾರೆ. ಖಾಸಗಿ ದುಃಖ-ದುಮ್ಮಾನಗಳು ಕೂಡ ರಾಜಕೀಯವೇ ಎಂಬ ತತ್ವವನ್ನು ಸಿನೆಮಾ ಪ್ರತಿಪಾದಿಸುತ್ತದೆ. ‘ಮಂಜು’ ಇಲ್ಲಿ ಕೇವಲ ಪ್ರಕೃತಿ ಅಂಶವಲ್ಲ, ಅದು ಮರೆಮಾಚಲ್ಪಟ್ಟ ಇತಿಹಾಸದ ರೂಪಕವಾಗಿದೆ.
ಹಾಗಂತ ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದಲ್ಲ. ಚಿತ್ರವು ಕತೆಗಿಂತ ಹೆಚ್ಚಾಗಿ ಪಾತ್ರಗಳ ಭಾವನೆಗಳ ಮೇಲೆ ಗಮನ ಹರಿಸುವುದರಿಂದ, ಕೆಲವು ಕಡೆ ತೀರಾ ನಿಧಾನ ಎನಿಸುತ್ತದೆ. ಚಿತ್ರದ ಕೊನೆಯ ಭಾಗದಲ್ಲಿ ಬರುವ ಕೆಲವು ಸನ್ನಿವೇಶಗಳು ಸ್ವಲ್ಪ ನಾಟಕೀಯವೆನಿಸಿ, ಕತೆಯ ನೈಜತೆಗೆ ಧಕ್ಕೆ ತರುತ್ತದೆ.
ಇಷ್ಟಾದರೂ ಈ ಚಿತ್ರವನ್ನು ನಾವು- ಭಾರತೀಯರು- ನೋಡಲೇಬೇಕಿದೆ. ಏಕೆಂದರೆ, 50ರ ದಶಕದ ತೈವಾನ್ ದೇಶದ ಸರ್ವಾಧಿಕಾರಿ ಆಳ್ವಿಕೆಯಲ್ಲಿ ನಡೆದ ರಾಜಕೀಯ ದಮನಕಾರಿ ಘಟನೆಗಳು ಪ್ರಸ್ತುತ ನಮ್ಮ ದೇಶದಲ್ಲೂ ಜರುಗುತ್ತಿವೆ. ಸರ್ಕಾರದ ವಿರುದ್ಧ ದನಿ ಎತ್ತುವ, ಟೀಕಿಸುವ, ಪ್ರಶ್ನಿಸುವ, ಪ್ರತಿಭಟಿಸುವ ವ್ಯಕ್ತಿಗಳನ್ನು- ಸ್ಟ್ಯಾನ್ ಸ್ವಾಮಿ, ಗೌತಮ್ ನವ್ಲಾಖಾ, ಆನಂದ್ ತೇಲ್ತುಂಡೆ, ಹ್ಯಾನಿ ಬಾಬು, ಸುಧಾ ಭಾರದ್ವಾಜ್, ವರವರ ರಾವ್, ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಗುಲ್ಫಿಷಾ ಫಾತೀಮಾ, ಮೀರನ್ ಹೈದರ್, ಸಫೂರ ಝರ್ಗಾರ್(ಇವರಲ್ಲಿ ಅನೇಕರಿಗೆ ಜಾಮೀನು ಸಿಕ್ಕಿ ಹೊರಬಂದಿದ್ದಾರೆ)- ವಿನಾಕಾರಣ ಬಂಧಿಸಿದೆ.
ಇದನ್ನು ಓದಿದ್ದೀರಾ?: ಆಂದ್ರೆ ಟಾರ್ಕೋವ್ಸ್ಕಿ ಚಿತ್ರಗಳ ಶಬ್ದಲೋಕ
ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಇವರ ಮೇಲೆ ಭಯೋತ್ಪಾದನೆ, ಮಾವೋವಾದಿ ಸಂಪರ್ಕ, ಸಂಚು, ಹಿಂಸಾಚಾರ ಪ್ರಚೋದನೆ ಮುಂತಾದ ಆರೋಪಗಳನ್ನು ಹೊರಿಸಿವೆ. ಇವರನ್ನು ದೇಶದ್ರೋಹಿಗಳೆಂದು ಬ್ರ್ಯಾಂಡ್ ಮಾಡಿವೆ. ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಯುಎಪಿಎಯಂತಹ ಕರಾಳ ಕಾಯ್ದೆಗಳ ಅಡಿಯಲ್ಲಿ ಬಂಧಿಸಿ, ಕಂಬಿಗಳ ಹಿಂದಕ್ಕೆ ತಳ್ಳಿವೆ. ಆ ಮೂಲಕ, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಪರಿಮಿತ ಅಧಿಕಾರದ ಬಲದಿಂದ ಭಿನ್ನ ದನಿಗಳನ್ನು ಹೊಸಕಿ ಹಾಕಲಾಗುತ್ತಿದೆ. ಪ್ರತಿರೋಧವಿಲ್ಲದೆ ಪ್ರಜಾಪ್ರಭುತ್ವ ಕಳೆಗುಂದುತ್ತಿದೆ, ಪ್ರಜಾಪ್ರಭುತ್ವದ ನೆಪದಲ್ಲಿ ಸರ್ವಾಧಿಕಾರ ಮೆರೆಯುತ್ತಿದೆ.
ಜಾಗತಿಕ ಇತಿಹಾಸ, 1949ರಲ್ಲಿ ತೈವಾನ್ ನಲ್ಲಿ ಸರ್ವಾಧಿಕಾರಿಯ ಆಳ್ವಿಕೆಯಿತ್ತು, ರಾಜಕೀಯ ದಮನದ ಕಾಲವಿತ್ತು ಎಂದು ಹೇಳುತ್ತದೆ. ಅದನ್ನು ‘ದಿ ಫಾಗಿ ಟೇಲ್’ ಚಿತ್ರ ಕೂಡ ಹೇಳುತ್ತದೆ. ಅಂಥದ್ದೇ ಘಟನೆಗಳು ಸದ್ಯ ನಮ್ಮ ದೇಶದಲ್ಲೂ ಘಟಿಸುತ್ತಿವೆ. ಐದು ವರ್ಷಗಳಿಂದ ವಿಚಾರಣೆ-ಜಾಮೀನು ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವ ಉಮರ್ ಖಾಲಿದ್- ದಿ ಫಾಗಿ ಟೇಲ್ ಚಿತ್ರದ ಮುಗ್ಧ ಬಾಲಕಿಯ ಅಣ್ಣನಂತೆ ಕಾಣುತ್ತಾನಲ್ಲ, ಆತನ ಕುರಿತು ಚಿತ್ರ ಮಾಡಬಹುದಲ್ಲ ಎಂದು ಯಾರಿಗಾದರೂ ಅನಿಸದೇ ಇರುವುದಿಲ್ಲ.

ವಿಪರ್ಯಾಸವೆಂದರೆ, ಧುರಂಧರ್, ದಿ ಕಶ್ಮೀರಿ ಫೈಲ್ಸ್, ದಿ ಕೇರಳ ಸ್ಟೋರಿ, ಆರ್ಟಿಕಲ್ 370ಯಂತಹ ಪ್ರಾಪಗ್ಯಾಂಡ ಚಿತ್ರಗಳ ಭರಾಟೆ ನಮ್ಮಲ್ಲಿ ಜೋರಾಗಿದೆ. ಅಂತಹ ಚಿತ್ರಗಳನ್ನು ಸರ್ಕಾರವೇ ಮುಂದೆ ನಿಂತು ಪ್ರಚಾರ ಮಾಡುತ್ತಿದೆ. ಗೋದಿ ಮೀಡಿಯಾಗಳು ಈ ಚಿತ್ರಗಳನ್ನು ಬೆಂಬಲಿಸುತ್ತ ‘ಇತಿಹಾಸದ ಸತ್ಯವನ್ನು ಹೇಳುತ್ತವೆ’ ಎಂದು ವಾದಿಸುತ್ತಿವೆ. ಸರ್ವಾಧಿಕಾರಿಯನ್ನು ದೇಶಪ್ರೇಮಿ ಎನ್ನುತ್ತಿವೆ. ಈ ‘ದೇಶಪ್ರೇಮಿ’ ಕುರಿತು ಇವತ್ತು ಚಿತ್ರ ಮಾಡಲಾಗುವುದಿಲ್ಲ. ಮಾಡಿದರೂ ತೆರೆ ಕಾಣುವುದು ಸಾಧ್ಯವಿಲ್ಲ. ‘ದಿ ಫಾಗಿ ಟೇಲ್’ನಂತೆ ಮುಂದೊಂದು ದಿನ ಜಗತ್ತಿನ ಮುಂದೆ ಬರದೇ ಇರುವುದಿಲ್ಲ.
(A Foggy Tale– ನೆಟ್ ಫ್ಲಿಕ್ಸ್ ಒಟಿಟಿನಲ್ಲಿ ಚಿತ್ರ ಲಭ್ಯ, ಆಸಕ್ತರು ನೋಡಬಹುದು)

ಲೇಖಕ, ಪತ್ರಕರ್ತ




