ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಅಸ್ಸಾಮಿನ ಕವಿ ಜಿಬಾನ್ ನರ್ಹಾ ಅವರ “ಅಂಚಿನವರು” ಕವನವನ್ನು ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್ ಭಾಗ್ಯ
ಅಂಚಿನವರು
ಇತಿಹಾಸವನ್ನು ಅಗೆಯುತ್ತಾ ಅಗೆಯುತ್ತಾ
ಸಾವಿರಾರು ಹಳ್ಳಿಗಳು ಭೂಮಿಯ ಒಳಗೆ ಹೂತುಹೋಗಿ
ನದಿ ನೀರಿನೊಳಗೆ ಇಲ್ಲವಾಗುವುವು.
ಯಾರೋ ಖೊಟ್ಟಿ ಮನುಷ್ಯ ನೀರಿನೊಳಗಿಂದ ಪುಟಿದು ಗರಬಡಿದಂತೆ
ಇತಿಹಾಸಕಾರ ಹಾಗೂ ಇತಿಹಾಸದ ನಾಯಕ-
ಸತ್ತವರ ನೆರಳಿನೆದುರು ನಿಂತಿರುವವನನ್ನು ನಿಟ್ಟಿಸುವನು.
ಇತಿಹಾಸಕಾರ ಅಪಸವ್ಯಗಳನ್ನು ಎಬ್ಬುವನು
ಸಾಂದ್ರಗೊಳಿಸಿದ ಸಿದ್ಧಾಂತಗಳು ಗತವನ್ನು ಕಲೆಸುವುದು.
ಕಲಸಿಮೇಲೋಗರವಾಗಿರುವ
ಅಕ್ಷರಗಳ ಸಿದ್ಧಾಂತವನ್ನು ತಿಳಿಯುತ್ತಾ
ಎಷ್ಟೋ ವರ್ಷಗಳ ನಂತರ
ಘೊಳ್ಳನೆ ನಕ್ಕು ಹಾಡುವನು:
ಕುತ್ಸಿತ ಹುಡುಗರು ಖೊಟ್ಟಿ ಹುಡುಗಿಯರನ್ನು ಪ್ರೀತಿಸುವರು
ಇತಿಹಾಸವು ಮೂಗರನ್ನು ಪ್ರೀತಿಸುವುದು.
ಈ ಹಾಡು
ಖೊಟ್ಟಿ ಮನುಷ್ಯನು ಚಪ್ಪಾಳೆ ತಟ್ಟುತ್ತಾ
ನದಿಯೊಳಗೆ ಮುಳುಗುವಂತೆ ಮಾಡುವುದು,
ತಾನೇ ಹಾಡಿದ ಹಾಡಿನೊಳಗೆ ಮುಳುಗುವಂತೆ:
ಯಾರೂ ನೀರಿನ ಶಕ್ತಿಯನ್ನು ಅಳೆಯಲಾರರು
ಯಾರೂ ನೀರಿನ ಸುಳಿಯನ್ನು ಅಳೆಯಲಾರರು.
ಮತ್ತು
ಯಾರೂ ಚರಿತ್ರೆಯ ಸುಳ್ಳುಗಳನ್ನು ಎಣಿಸಿ ಮುಗಿಸಲಾರರು.





