ಆಡಳಿತ ಯಂತ್ರವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತಿನಿಧಿಗಳು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆದರೆ, ಪ್ರಸ್ತುತ ನಡೆಯುತ್ತಿರುವ ಈ ‘ಕೊಡು-ಕೊಳ್ಳುವಿಕೆ’(Quid Pro Quo) ನೀತಿಯು ಆಡಳಿತ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದೆ. ಸರ್ಕಾರದ ತಪ್ಪುಗಳನ್ನು ನಿರ್ಭೀತಿಯಿಂದ ಪ್ರಶ್ನಿಸಬೇಕಾದ ವ್ಯವಸ್ಥೆಗಳೇ ಭವಿಷ್ಯದ ಹುದ್ದೆಗಳ ಲಾಭದಾಸೆಗೆ ಬಲಿಯಾಗುತ್ತಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ತಮ್ಮದೇ ಆದ ಸ್ವತಂತ್ರ ಅಸ್ತಿತ್ವ ಹಾಗೂ ಘನತೆಯನ್ನು ಹೊಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ನಿವೃತ್ತಿಯ ನಂತರದ ಹುದ್ದೆಗಳ ಆಮಿಷವೊಡ್ಡಿ ಉನ್ನತ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳಿಂದ ಆಡಳಿತಾರೂಢ ಸರ್ಕಾರಗಳು ತಮಗೆ ಬೇಕಾದಂತೆ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂಬ ಗಂಭೀರ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಆಡಳಿತ ನಿಷ್ಪಕ್ಷಪಾತ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಈ ಬೆಳವಣಿಗೆಗಳು ಭಾರೀ ಅನುಮಾನಗಳನ್ನು ಹುಟ್ಟುಹಾಕಿದೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳು ಈ ಚರ್ಚೆಗೆ ಮರುಜೀವ ನೀಡಿವೆ. ಬಂಗಾಳದಲ್ಲಿ ಬರೋಬ್ಬರಿ 91 ಲಕ್ಷ ಮತದಾರರ ಮತಾಧಿಕಾರವನ್ನು ಕಸಿದುಕೊಂಡ ಪ್ರಕ್ರಿಯೆಯಲ್ಲಿ ಹೊಣೆಗಾರರಾಗಿದ್ದ ಗಂಭೀರ ಆರೋಪ ಎದುರಿಸುತ್ತಿರುವ ಇಬ್ಬರು ಐಎಎಸ್ ಅಧಿಕಾರಿಗಳಿಗೆ, ಹಾಲಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಲ್ಲಿ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಒಬ್ಬರು ರಾಜ್ಯ ಮುಖ್ಯ ಕಾರ್ಯದರ್ಶಿಗಳಾದರೆ, ಮತ್ತೊಬ್ಬರು ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಪ್ರಜಾಪ್ರಭುತ್ವದ ಅಡಿಪಾಯವೇ ಪ್ರಜೆಗಳ ಹಕ್ಕು ಮತ್ತು ಅವರು ಚಲಾಯಿಸುವ ಮತದಾನ. ಅಂತಹ ಮೂಲಭೂತ ಹಕ್ಕನ್ನೇ ಬೃಹತ್ ಪ್ರಮಾಣದಲ್ಲಿ ಕಿತ್ತುಹಾಕಿದ ಆಡಳಿತಾತ್ಮಮಕ ವೈಫಲ್ಯ ಅಥವಾ ಸಂಚಿನಲ್ಲಿ ಭಾಗಿಯಾದವರಿಗೆ ಉನ್ನತ ಸ್ಥಾನಮಾನ ನೀಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆಗೆ ನೆರವಾದ ಅಧಿಕಾರಿಗಳನ್ನು ವ್ಯವಸ್ಥೆಯೇ ಪುರಸ್ಕರಿಸುತ್ತಿದೆ ಎನ್ನುವುದು, ಆಡಳಿತ ಯಂತ್ರವನ್ನು ಆಳುವವರು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಆದರೆ, ಅಧಿಕಾರಿಗಳು ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿದ್ದವರಿಗೆ ನಿವೃತ್ತಿಯ ನಂತರ ಅಥವಾ ಆಡಳಿತಾರೂಢರಿಗೆ ನಿರ್ದಿಷ್ಟ ‘ಸಹಾಯ’ ಮಾಡಿದ ನಂತರ ಲಾಭದಾಯಕ ಹುದ್ದೆಗಳನ್ನು ನೀಡುವ ಸಂಸ್ಕೃತಿ ಕೇವಲ ಒಂದು ರಾಜ್ಯಕ್ಕೆ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೂ ಇಂತಹ ಹಲವು ಗಂಭೀರ ಆರೋಪಗಳನ್ನು ವಿರೋಧ ಪಕ್ಷಗಳು ಈ ಹಿಂದಿನಿಂದಲೂ ಮಾಡುತ್ತಲೇ ಬಂದಿವೆ.
ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಟೀಕೆಗೆ ಮತ್ತು ವಿವಾದಕ್ಕೆ ಗುರಿಯಾದ ಪ್ರಮುಖ ಪ್ರಕರಣವೆಂದರೆ, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ರಾಜ್ಯಸಭಾ ನಾಮನಿರ್ದೇಶನ. ಅಯೋಧ್ಯೆ ರಾಮಮಂದಿರದ ವಿವಾದ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಪೂರಕವಾದ ಹಲವು ಮಹತ್ವದ ತೀರ್ಪುಗಳನ್ನು ನೀಡಿದ ಕೆಲವೇ ತಿಂಗಳುಗಳಲ್ಲಿ ಅವರನ್ನು ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆಯೇ ಕರಾಳ ಛಾಯೆ ಮೂಡಿಸಿತ್ತು.
ಇದನ್ನು ಓದಿದ್ದೀರಾ? ಬೆಳ್ಳಿತೆರೆಯಿಂದ ವಿಧಾನಸಭೆಗೆ ಆಪ್ತ ಗೆಳೆಯರು: ಸಿಎಂ ವಿಜಯ್‌ಗೆ ವಿಪಕ್ಷ ನಾಯಕ ಉದಯನಿಧಿ ಮುಖಾಮುಖಿ
ಹಾಗೆಯೇ ನಿವೃತ್ತಿಯ ನಂತರ ಉನ್ನತ ಹುದ್ದೆಗಳನ್ನು ಪಡೆದ ಪ್ರಮುಖರಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ (ಕೇರಳ ರಾಜ್ಯಪಾಲ) ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ (ಆಂಧ್ರಪ್ರದೇಶ ರಾಜ್ಯಪಾಲ) ಸೇರಿದ್ದಾರೆ. ಇಷ್ಟೇ ಅಲ್ಲದೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ರಾಜಕೀಯ ಪ್ರವೇಶಿಸಿ ಸಚಿವರಾಗಿದ್ದು ಹಾಗೂ ಹಲವು ನಿವೃತ್ತ ಅಧಿಕಾರಿಗಳು ವಿವಿಧ ಆಯೋಗಗಳ ಹುದ್ದೆಗಳನ್ನಲಂಕರಿಸಿದ್ದಾರೆ.
ಇದೇ ರೀತಿ, ಕೇಂದ್ರ ಸರ್ಕಾರದ ನೀತಿಗಳ ಪರವಾಗಿ ನಿಂತ ಅಥವಾ ಆಡಳಿತಾರೂಢರ ಹಿತಾಸಕ್ತಿ ಕಾಯ್ದ ಹಲವು ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, ಸೇನಾ ಮುಖ್ಯಸ್ಥರು ಮತ್ತು ನ್ಯಾಯಮೂರ್ತಿಗಳನ್ನು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ಹಾಗೂ ಆಯೋಗಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ನೇಮಕಾತಿಗಳು ಸರ್ಕಾರದ ಪರವಾಗಿ ಕೆಲಸ ಮಾಡಿದವರಿಗೆ ನೀಡಲಾದ ‘ಪ್ರತಿಫಲ’ ಅಥವಾ ‘ಉಡುಗೊರೆ’ ಎಂದೇ ಪ್ರತಿಪಕ್ಷಗಳು ಬಲವಾಗಿ ಬಿಂಬಿಸುತ್ತಿವೆ.
ಆಡಳಿತ ಯಂತ್ರವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತಿನಿಧಿಗಳು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆದರೆ, ಪ್ರಸ್ತುತ ನಡೆಯುತ್ತಿರುವ ಈ ‘ಕೊಡು-ಕೊಳ್ಳುವಿಕೆ’ (Quid Pro Quo) ನೀತಿಯು ಆಡಳಿತ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದೆ. ಸರ್ಕಾರದ ತಪ್ಪುಗಳನ್ನು ನಿರ್ಭೀತಿಯಿಂದ ಪ್ರಶ್ನಿಸಬೇಕಾದ ವ್ಯವಸ್ಥೆಗಳೇ ಭವಿಷ್ಯದ ಹುದ್ದೆಗಳ ಲಾಭದಾಸೆಗೆ ಬಲಿಯಾಗುತ್ತಿರುವುದು ದೇಶದ ಪ್ರಜಾಪ್ರಭುತ್ವ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ.
ಬಂಗಾಳದ 91 ಲಕ್ಷ ಮತದಾರರ ಹಕ್ಕು ಕಸಿದ ಐಎಎಸ್ ಅಧಿಕಾರಿಗಳ ಪ್ರಕರಣವಿರಲಿ ಅಥವಾ ಕೇಂದ್ರ ಸರ್ಕಾರದ ಉನ್ನತ ಮಟ್ಟದ ನೇಮಕಾತಿಗಳಿರಲಿ, ಇವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾಮಾನ್ಯ ಜನರ ನಂಬಿಕೆಯನ್ನು ಹುಸಿಗೊಳಿಸುತ್ತವೆ. ಅಧಿಕಾರಿಗಳು ಜನರಿಗಾಗಿ ಪ್ರಮಾಣಿಕವಾಗಿ ಕೆಲಸ ಮಾಡುವ ಬದಲು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಅಪಾಯಕಾರಿ ಸಂಸ್ಕೃತಿಯನ್ನು ಇದು ಪೋಷಿಸುತ್ತದೆ.
ಇಂತಹ ಪ್ರವೃತ್ತಿಗಳಿಗೆ ಶಾಶ್ವತ ಕಡಿವಾಣ ಹಾಕಲು ಕಠಿಣ ಕಾನೂನು ಮತ್ತು ನಿಯಮಾವಳಿಗಳ ಅಗತ್ಯವಿದೆ. ನ್ಯಾಯಮೂರ್ತಿಗಳು, ಚುನಾವಣಾ ಆಯುಕ್ತರು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ನಿವೃತ್ತಿಯಾದ ನಂತರ ಕನಿಷ್ಠ ಐದಾರು ವರ್ಷಗಳ ಕಾಲ ಯಾವುದೇ ರಾಜಕೀಯ, ಸಾಂವಿಧಾನಿಕ ಅಥವಾ ಲಾಭದಾಯಕ ಹುದ್ದೆಗಳನ್ನು ಸ್ವೀಕರಿಸಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರ ಪ್ರಜಾಪ್ರಭುತ್ವದ ನೈಜ ಆಶಯಗಳನ್ನು ಮತ್ತು ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯ.




