ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ(ಜಾರಿ ನಿರ್ದೇಶನಾಲಯ) ಕಸ್ಟಡಿಯಲ್ಲಿರುವ ಪಂಜಾಬ್‌ನ ಎಎಪಿ ಸಚಿವ ಸಂಜೀವ್ ಅರೋರಾ, ‘ಬಿಜೆಪಿ ಸೇರಿದ ನಾಯಕರಿಗೆ ಒದಗಿಸಿದಂತೆ ನನಗೂ ಸಮಾನ ರಕ್ಷಣೆ ನೀಡಿ’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆಹೋಗಿದ್ದಾರೆ. ಇದು ‘ರಾಜಕೀಯ ಪ್ರೇರಿತ ದ್ವೇಷದ ಕ್ರಮ’ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಹಾಗೂ ನ್ಯಾ. ಸಂಜೀವ್ ಬೆರ್ರಿ ಅವರಿದ್ದ ಪೀಠದ ಮುಂದೆ ಅರೋರಾ ಪರ ವಾದಿಸಿದ ಹಿರಿಯ ವಕೀಲ ಪುನೀತ್ ಬಾಲಿ “ಎಎಪಿ ತೊರೆದು ಬಿಜೆಪಿ ಸೇರಿದ ಸಂಸದರಾದ ಸಂದೀಪ್ ಪಾಠಕ್, ರಾಜಿಂದರ್ ಗುಪ್ತಾ ಅವರಿಗೆ ಇದೇ ನ್ಯಾಯಾಲಯ ರಕ್ಷಣೆ ನೀಡಿದೆ. ಹಾಗೆಯೇ, ಫೆಮಾ ಆರೋಪ ಎದುರಿಸುತ್ತಿದ್ದ ಅಶೋಕ್ ಮಿತ್ತಲ್ ಬಿಜೆಪಿ ಸೇರಿದ ಕೂಡಲೇ ಅವರ ವಿರುದ್ಧದ ಕ್ರಮ ಕೈಬಿಡಲಾಗಿದೆ. ಅರೋರಾಗೂ ಇದೇ ರೀತಿ ರಕ್ಷಣೆ ಒದಗಿಸಬೇಕು” ಎಂದು ಕೋರಿದರು.
ಹ್ಯಾಂಪ್ಟನ್ ಸ್ಕೈ ರಿಯಾಲ್ಟಿ ಲಿಮಿಟೆಡ್ ಎಂಡಿ ಆಗಿದ್ದ ಅರೋರಾ ಅವರನ್ನು ಮೇ 9ರಂದು ಇ.ಡಿ ಬಂಧಿಸಿದ್ದು, ಮೇ 16ರವರೆಗೆ ಕಸ್ಟಡಿಗೆ ಒಪ್ಪಿಸಲಾಗಿದೆ. 2023-24ರಲ್ಲಿ ಕಂಪನಿಯು ₹157.12 ಕೋಟಿ ಮೌಲ್ಯದ ಮೊಬೈಲ್ ಮಾರಾಟ ಮಾಡಿದ್ದಾಗಿ ವರದಿ ಮಾಡಿತ್ತು. ಈ ಪೈಕಿ ಯುಎಇಯ ಎರಡು ಸಂಸ್ಥೆಗಳಿಗೆ ₹102.50 ಕೋಟಿಯ ನಕಲಿ ರಫ್ತು ತೋರಿಸಿ, ಯಾವುದೇ ಸರಕು ಸಾಗಿಸದೆ ಭಾರತಕ್ಕೆ ಅಕ್ರಮವಾಗಿ ಹಣ ರವಾನಿಸಿದ ಆರೋಪ ಇವರ ಮೇಲಿದೆ.
ಇದನ್ನು ಓದಿದ್ದೀರಾ? ಬೆಳ್ಳಿತೆರೆಯಿಂದ ವಿಧಾನಸಭೆಗೆ ಆಪ್ತ ಗೆಳೆಯರು: ಸಿಎಂ ವಿಜಯ್‌ಗೆ ವಿಪಕ್ಷ ನಾಯಕ ಉದಯನಿಧಿ ಮುಖಾಮುಖಿ
“ಗುರುಗ್ರಾಮ ಪೊಲೀಸರು ಪ್ರಾಥಮಿಕ ತನಿಖೆಯಿಲ್ಲದೆ ರಾತ್ರಿ 1.50ಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ. ಕಕ್ಷಿದಾರರನ್ನು ಬೆಳಗ್ಗೆ 7ಕ್ಕೆ ಬಂಧಿಸಿ, ಸಂಜೆ 4 ಗಂಟೆಗೆ ಕಾರಣ ನೀಡಲಾಗಿದೆ. ವಹಿವಾಟುಗಳು ಚೆಕ್ ಮೂಲಕವೇ ನಡೆದಿದ್ದರೂ, ವಿತರಕರೊಬ್ಬರ ಜಿಎಸ್‌ಟಿ ಸಂಖ್ಯೆ ಚಾಲ್ತಿಯಲ್ಲಿಲ್ಲ ಎಂಬ ಕಾರಣಕ್ಕೆ ಬಂಧಿಸಿರುವುದು ಸಂಪೂರ್ಣ ಕಾನೂನುಬಾಹಿರ” ಎಂದು ಬಾಲಿ ವಾದಿಸಿದರು.
‘ಎಫ್‌ಐಆರ್ ಪ್ರಶ್ನಿಸದೆ ಕೇವಲ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ನಾವು ಮಧ್ಯಪ್ರವೇಶಿಸುವಂತಿಲ್ಲ’ ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಪೀಠವು, ಸಮಯದ ಅಭಾವದಿಂದ ಮುಂದಿನ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.




