ಕರುನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಜಯಂತಿ

Date:

ಮೈಸೂರು ಜಿಲ್ಲೆಯ ಕಲ್ಲಹಳ್ಳಿಯ ಮಣ್ಣಿನಲ್ಲಿ ಅರಳಿದ ಅರಸು ಎಂಬ ಹೂವು ಕೇವಲ ವ್ಯಕ್ತಿಯಾಗಿರಲಿಲ್ಲ; ಕರ್ನಾಟಕದ ಸಾಮಾಜಿಕ ನ್ಯಾಯದ ಪರಿಮಳವಾಗಿತ್ತು. ಹಿಂದುಳಿದವರ ಪಾಲಿಗೆ ಭರವಸೆಯಾಗಿ, ರೈತರ ಬದುಕಿನಲ್ಲಿ ಹಕ್ಕಿನ ಧ್ವನಿಯಾಗಿ, ಬಡವರ ಪಾಲಿಗೆ ಆಶಾಕಿರಣವಾಗಿ ಹಾಗೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಸಂಕೇತವಾಗಿ, ಶಾಶ್ವತವಾಗಿ ಉಳಿದವರು ಡಿ. ದೇವರಾಜ ಅರಸು.

ʼಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಾ ಸರ್ವಜ್ಞʼ ಎಂಬ ಸಾಲುಗಳು ಒಬ್ಬ ವ್ಯಕ್ತಿಯ ಮಹತ್ವ, ಅವರ ಬದುಕು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಎಲ್ಲರಿಗೂ ಉಪಯುಕ್ತವಾಗುವ ವ್ಯಕ್ತಿತ್ವವನ್ನು ನೆನಪಿಸುತ್ತವೆ. ಇದೇ ಭಾವವನ್ನು ಕರ್ನಾಟಕದ ಸಾಮಾಜಿಕ ಪರಿವರ್ತನೆಯ ಇತಿಹಾಸದಲ್ಲಿ ಡಿ.ದೇವರಾಜ ಅರಸು ಅವರ ಬದುಕಿಗೂ ಅನ್ವಯಿಸಬಹುದು.

- Advertisement -

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಮಣ್ಣಿನಲ್ಲಿ ಹುಟ್ಟಿ, ಕರುನಾಡಿನ ಜನಜೀವನದೊಂದಿಗೆ ಬೆರೆತ ಜೀವವದು. ಶೋಷಿತರು, ಹಿಂದುಳಿದವರು, ದಲಿತರು, ಬಡವರು, ರೈತರು ಹಾಗೂ ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ಸಮಾನತೆ ಮತ್ತು ನ್ಯಾಯದ ದಾರಿ ತೋರಿದ ಮಹಾನ್ ನಾಯಕ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಕಲ್ಲಹಳ್ಳಿಯಲ್ಲಿ ಅರಳಿದ ಹೂವು; ಕರುನಾಡಿಗೆ ಬೆಳಕಾಗಿ, ದಲಿತ ದಮನಿತ ವರ್ಗಗಳಿಗೆ ಆಶಾಕಿರಣವಾಗಿ, ಹಿಂದುಳಿದವರ ಬದುಕಿಗೆ ಹೊಸ ದಾರಿಯಾದವರು ಅರಸು. ರೈತರ ಪಾಲಿಗೆ ಹಕ್ಕಿನ ಧ್ವನಿಯಾಗಿ, ಅಭಿವೃದ್ಧಿಯ ಹೆಜ್ಜೆ ಗುರುತು ಮೂಡಿಸಿದವರು ಅರಸು ಎಂಬುದಕ್ಕೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ದಾಖಲಾಗಿರುವ ಅವರ ಕೊಡುಗೆಯೇ ಸಾಕ್ಷಿ.

ಡಿ. ದೇವರಾಜ ಅರಸು ಅವರು 20 ಆಗಸ್ಟ್ 1915ರಂದು ಮೈಸೂರು ಸಂಸ್ಥಾನದ ಹುಣಸೂರು ಪ್ರದೇಶದ ಕಲ್ಲಹಳ್ಳಿಯಲ್ಲಿ ಜನಿಸಿದರು. ಗ್ರಾಮೀಣ ಬದುಕಿನ ವಾಸ್ತವತೆ, ರೈತರ ಸಂಕಷ್ಟ, ಬಡತನ, ಸಾಮಾಜಿಕ ಅಸಮಾನತೆ ಹಾಗೂ ಅವಕಾಶಗಳ ಕೊರತೆಯನ್ನು ಹತ್ತಿರದಿಂದ ಕಂಡು ಬೆಳೆದ ಅವರ ವ್ಯಕ್ತಿತ್ವದ ಮೇಲೆ ಈ ಅನುಭವಗಳು ಗಾಢವಾದ ಪ್ರಭಾವ ಬೀರಿದವು. ಅಧಿಕಾರವೆಂಬುದು ವೈಯಕ್ತಿಕ ಪ್ರತಿಷ್ಠೆಗಾಗಿ ಬಳಸುವ ಸಾಧನವಲ್ಲ. ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತರಲು ದೊರೆತ ಜವಾಬ್ದಾರಿ ಎಂಬ ನಿಲುವು ಅವರ ರಾಜಕೀಯ ಚಿಂತನೆಯ ಪ್ರಮುಖ ಅಂಶವಾಗಿತ್ತು.

1972ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರಸು ಅವರು ರಾಜ್ಯದ ಆಡಳಿತಕ್ಕೆ ಹೊಸ ಸಾಮಾಜಿಕ ದೃಷ್ಟಿಕೋನ ನೀಡಿದರು. ಅವರ ಆಡಳಿತಾವಧಿ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಗುರುತಿಸಲ್ಪಟ್ಟಿದೆ. ಆಡಳಿತದ ಕೇಂದ್ರಬಿಂದುವಿನಲ್ಲಿ ಸಾಮಾನ್ಯ ನಾಗರಿಕನನ್ನು ಇರಿಸಿ, ದಶಕಗಳ ಕಾಲ ಅವಕಾಶಗಳಿಂದ ದೂರವಿದ್ದ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಸಾಮಾಜಿಕ ಗೌರವ ದೊರಕಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡರು.

ಅರಸು ಅವರ ಆಡಳಿತದ ಅತ್ಯಂತ ಗಮನಾರ್ಹ ಕೊಡುಗೆಗಳಲ್ಲಿ ಭೂಸುಧಾರಣೆ ಪ್ರಮುಖವಾದುದು. ʼಉಳುವವನೇ ಭೂಮಿಯ ಒಡೆಯʼ ಎಂಬ ಆಶಯವನ್ನು ಕಾರ್ಯರೂಪಕ್ಕೆ ತರುವ ಭೂಸುಧಾರಣಾ ಕ್ರಮಗಳು ಗ್ರಾಮೀಣ ಸಮಾಜದ ಸ್ವರೂಪವನ್ನೇ ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಭೂಮಿಯನ್ನು ಉಳುಮೆ ಮಾಡುತ್ತಿದ್ದರೂ ಮಾಲೀಕತ್ವ ಹೊಂದಿರದ ಅನೇಕ ಗೇಣಿದಾರ ಕುಟುಂಬಗಳಿಗೆ ಹಕ್ಕಿನ ಭರವಸೆ ದೊರೆಯಿತು.

ರೈತನಿಗೆ ಭೂಮಿ ಎಂದರೆ ಕೇವಲ ಆಸ್ತಿಯಲ್ಲ; ಅದು ಜೀವನೋಪಾಯದ ಆಧಾರ, ಆತ್ಮಗೌರವದ ಸಂಕೇತ ಹಾಗೂ ಸಮಾಜದಲ್ಲಿ ತನ್ನ ಸ್ಥಾನವನ್ನು ಕಟ್ಟಿಕೊಳ್ಳುವ ಪ್ರಮುಖ ಸಾಧನ. ಈ ಸತ್ಯವನ್ನು ಅರಿತುಕೊಂಡ ಆಡಳಿತವು ಕೃಷಿಕರ ಬದುಕಿನಲ್ಲಿ ಸ್ವಾವಲಂಬನೆಯ ಹೊಸ ಭರವಸೆಯನ್ನು ಮೂಡಿಸಿತು.

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಅರಸು ಅವರು ವಿಶೇಷ ಸ್ಥಾನ ನೀಡಿದರು. ಶಿಕ್ಷಣ, ಉದ್ಯೋಗ ಹಾಗೂ ಆಡಳಿತದ ಅವಕಾಶಗಳು ಕೆಲವೇ ಸಮುದಾಯಗಳಿಗೆ ಸೀಮಿತವಾಗಿದ್ದ ಸಂದರ್ಭದಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಸಮಾನ ಅವಕಾಶ ಕಲ್ಪಿಸುವ ಅಗತ್ಯವನ್ನು ಅವರು ಮನಗಂಡಿದ್ದರು. ಎಲ್ ಜಿ ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ನೀಡಿದ ಹಾವನೂರು ಆಯೋಗದ ವರದಿ, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಚರ್ಚೆಗೆ ಹೊಸ ಆಯಾಮ ನೀಡಿತು. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಮತ್ತು ಮೀಸಲಾತಿ ಕುರಿತ ನೀತಿಗಳ ಬೆಳವಣಿಗೆಗೆ ಇದು ಪ್ರಮುಖ ಆಧಾರವಾಯಿತು.

ಅರಸು ಅವರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಜ್ಞಾನಾರ್ಜನೆಯ ಸಾಧನವಲ್ಲ. ಅದು ಸಾಮಾಜಿಕ ಅಸಮಾನತೆಯ ಗೋಡೆಗಳನ್ನು ಒಡೆಯುವ ಪ್ರಬಲ ಶಕ್ತಿಯಾಗಿತ್ತು. ಬಡವರು ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿನಿಲಯಗಳು, ವಿದ್ಯಾರ್ಥಿವೇತನಗಳು ಹಾಗೂ ವಿವಿಧ ಶೈಕ್ಷಣಿಕ ನೆರವುಗಳಿಗೆ ಆದ್ಯತೆ ನೀಡಲಾಯಿತು.

ಒಂದು ಮಗುವಿನ ಕೈಗೆ ಪುಸ್ತಕ ನೀಡುವುದು ಎಂದರೆ ಅದರ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯುವುದು ಎಂಬ ಚಿಂತನೆ ಈ ಕ್ರಮಗಳ ಹಿಂದಿತ್ತು. ಶಿಕ್ಷಣದ ಅವಕಾಶಗಳು ವಿಸ್ತಾರಗೊಂಡಾಗ ಮಾತ್ರ ಸಾಮಾಜಿಕ ಚಲನೆ ಸಾಧ್ಯ ಎಂಬ ನಂಬಿಕೆ ಅವರ ಆಡಳಿತದ ಹಲವು ನಿರ್ಧಾರಗಳಲ್ಲಿ ಪ್ರತಿಫಲಿಸಿತು.

ದಲಿತರು, ಹಿಂದುಳಿದವರು ಹಾಗೂ ಆರ್ಥಿಕವಾಗಿ ದುರ್ಬಲ ಸಮುದಾಯಗಳ ಬದುಕಿನಲ್ಲಿದ್ದ ಶೋಷಣೆಯನ್ನು ಕಡಿಮೆ ಮಾಡುವ ಪ್ರಯತ್ನವೂ ಅರಸು ಅವರ ಆಡಳಿತದ ಪ್ರಮುಖ ವೈಶಿಷ್ಟ್ಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವದಿಂದ ಬದುಕುವ ಹಕ್ಕಿದೆ ಎಂಬ ಮಾನವೀಯ ನಿಲುವು ಅವರ ಕಾರ್ಯಗಳಲ್ಲಿ ವ್ಯಕ್ತವಾಯಿತು.

ಬಂಧಿತ ಕಾರ್ಮಿಕ ಪದ್ಧತಿಯಂತಹ ಶೋಷಣಾತ್ಮಕ ವ್ಯವಸ್ಥೆಗಳ ವಿರುದ್ಧ ಕೈಗೊಂಡ ಕ್ರಮಗಳು ದುರ್ಬಲ ವರ್ಗಗಳ ಮಾನವ ಘನತೆಯನ್ನು ರಕ್ಷಿಸುವ ಪ್ರಯತ್ನಗಳಾಗಿದ್ದವು. ಸಾಮಾಜಿಕ ಸುಧಾರಣೆಯ ಅರ್ಥ ಕೇವಲ ಕಾನೂನು ಬದಲಾವಣೆಗಳಲ್ಲ. ವ್ಯಕ್ತಿಯ ಬದುಕಿನಲ್ಲಿ ಗೌರವ, ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಖಾತ್ರಿಪಡಿಸುವುದೂ ಆಗಿದೆ ಎಂಬ ಸಂದೇಶ ಅವರ ಕಾರ್ಯಶೈಲಿಯಲ್ಲಿ ಕಾಣುತ್ತದೆ.

ಅರಸು ಅವರ ಆಡಳಿತವು ಸಾಮಾಜಿಕ ನ್ಯಾಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣ, ಉದ್ಯೋಗಾವಕಾಶ, ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣಕ್ಕೂ ಮಹತ್ವ ನೀಡಲಾಯಿತು. ಅಭಿವೃದ್ಧಿಯ ಫಲ ನಗರಗಳಲ್ಲಿರುವ ಕೆಲವರಿಗಷ್ಟೇ ಸೀಮಿತವಾಗದೆ, ಹಳ್ಳಿಯ ರೈತನ ಮನೆಗೂ, ಕೂಲಿ ಕಾರ್ಮಿಕನ ಬದುಕಿಗೂ ಹಾಗೂ ಹಿಂದುಳಿದ ಕುಟುಂಬದ ಮಗುವಿನ ಭವಿಷ್ಯಕ್ಕೂ ತಲುಪಬೇಕು ಎಂಬುದು ಅವರ ಆಡಳಿತದ ಮೂಲ ಆಶಯವಾಗಿತ್ತು.

ಅವರ ರಾಜಕೀಯ ಚಿಂತನೆಯ ವಿಶೇಷತೆ ಎಂದರೆ ಅಭಿವೃದ್ಧಿಯನ್ನು ಸಾಮಾಜಿಕ ಸಮಾನತೆಯೊಂದಿಗೆ ಜೋಡಿಸಿರುವುದು. ಸಮಾಜದ ದುರ್ಬಲ ವರ್ಗಗಳು ಅಭಿವೃದ್ಧಿಯ ಮುಖ್ಯವಾಹಿನಿಗೆ ಬಂದಾಗ ಮಾತ್ರ ಪ್ರಗತಿ ಅರ್ಥಪೂರ್ಣವಾಗುತ್ತದೆ ಎಂಬ ನಿಲುವು ಅವರ ಕಾರ್ಯಗಳಲ್ಲಿ ಸ್ಪಷ್ಟವಾಗಿತ್ತು.

ಮೈಸೂರು ರಾಜ್ಯಕ್ಕೆ ʼಕರ್ನಾಟಕʼ ಎಂಬ ಹೆಸರು ಬಂದದ್ದು ಕನ್ನಡ ನಾಡಿನ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದೆ. ನಾಡು, ನುಡಿ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನು ಬಲಪಡಿಸಿದ ಈ ಬದಲಾವಣೆ ಕನ್ನಡಿಗರ ಭಾವನಾತ್ಮಕ ಸಂಬಂಧವನ್ನು ರಾಜ್ಯದ ಹೆಸರಿನೊಂದಿಗೆ ಮತ್ತಷ್ಟು ಗಟ್ಟಿಗೊಳಿಸಿತು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸು ಅವರ ಕಾಲಘಟ್ಟವನ್ನು ಸ್ಮರಿಸುವಾಗ ಈ ಬೆಳವಣಿಗೆಯನ್ನೂ ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಡಿ. ದೇವರಾಜ ಅರಸು ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಕ್ಕಿಂತ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಗುರುತಿಸುವುದು ಹೆಚ್ಚು ಸೂಕ್ತ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರು ಕೈಗೊಂಡ ಹಲವು ನಿರ್ಧಾರಗಳು ಸಮಾಜದಲ್ಲಿದ್ದ ಅಸಮಾನ ಶಕ್ತಿಸಂಬಂಧಗಳನ್ನು ಬದಲಿಸುವ ಉದ್ದೇಶ ಹೊಂದಿದ್ದವು. ಭೂಮಿಯ ಹಕ್ಕು, ಶಿಕ್ಷಣದ ಅವಕಾಶ, ಸಾಮಾಜಿಕ ಪ್ರಾತಿನಿಧ್ಯ, ಬಡವರ ಕಲ್ಯಾಣ ಹಾಗೂ ಹಿಂದುಳಿದ ಸಮುದಾಯಗಳ ಸಬಲೀಕರಣ. ಇವೆಲ್ಲವೂ ಅವರ ವಿಶಾಲವಾದ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವಿವಿಧ ಮುಖಗಳಾಗಿದ್ದವು. ಆದ್ದರಿಂದ ಅವರ ಬದುಕನ್ನು ಸ್ಮರಿಸುವ ಸಂದರ್ಭದಲ್ಲಿ ಈ ಸಾಲುಗಳು ಮತ್ತಷ್ಟು ಅರ್ಥಪೂರ್ಣವಾಗುತ್ತವೆ.

“ಕಲ್ಲಹಳ್ಳಿಯ ಹೂವಾಗಿ ಕರುನಾಡಿಗೆ ಬೆಳಕಾಗಿ,
ದಲಿತ, ದಮನಿತ ವರ್ಗಗಳಿಗೆ ಆಶಾಕಿರಣವಾಗಿ,
ಹಿಂದುಳಿದವರ ಬದುಕಿಗೆ ಹೊಸ ದಾರಿಯಾಗಿ,
ರೈತರ ಪಾಲಿಗೆ ಭೂಮಿಯ ಹಕ್ಕಿನ ಧ್ವನಿಯಾಗಿ,
ಶಿಕ್ಷಣದ ಮೂಲಕ ಸಮಾನತೆಯ ಕನಸು ಬಿತ್ತಿದವರಾಗಿ,
ಅಭಿವೃದ್ಧಿಯ ಹೊಸ ಹೆಜ್ಜೆ ಗುರುತು ಮೂಡಿಸಿದವರಾಗಿ,
ಸಾಮಾಜಿಕ ನ್ಯಾಯದ ಕೀರ್ತಿಯನ್ನು ಉಳಿಸಿ ಹೋದವರು
ಡಿ. ದೇವರಾಜ ಅರಸು

ಅವರ 111ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕೇವಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದಷ್ಟೇ ಸಾಕಾಗುವುದಿಲ್ಲ. ಅವರು ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಮ್ಮದೇ ಆದ ಕೊಡುಗೆ ನೀಡುವುದು ನಿಜವಾದ ಗೌರವ.

ಜಾತಿ, ವರ್ಗ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣದಿಂದ ಯಾರೊಬ್ಬರೂ ಅವಕಾಶಗಳಿಂದ ವಂಚಿತರಾಗದ ವ್ಯವಸ್ಥೆ ರೂಪುಗೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ದುಡಿಯುವ ಕೈಗಳಿಗೆ ಗೌರವ ಸಿಗಬೇಕು. ಬಡವರ ಬದುಕಿಗೆ ಭದ್ರತೆ ದೊರೆಯಬೇಕು. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಲಭ್ಯವಾಗಬೇಕು ಎಂಬುದು ಅರಸು ಅವರ ಬದುಕಿನ ನಿಜವಾದ ಸಂದೇಶವೂ ಆಗಿತ್ತು.

ಈ ಸುದ್ದಿ ಓದಿದ್ದೀರಾ? ಅನುಗ್ರಹ ಯೋಜನೆ: ಜಾನುವಾರುಗಳ ಆಕಸ್ಮಿಕ ಮರಣ ಪರಿಹಾರಕ್ಕಾಗಿ ಪಶುಪಾಲಕ ಕರ್ನಾಟಕ ಸಂಘಟನೆ ಆಗ್ರಹ

ಅಧಿಕಾರವು ಕೆಲವರ ಕೈಯಲ್ಲಿರುವ ವಿಶೇಷಾಧಿಕಾರವಲ್ಲ. ಅದು ಜನರ ಬದುಕನ್ನು ಸುಧಾರಿಸುವ ಹೊಣೆಗಾರಿಕೆ. ಅಭಿವೃದ್ಧಿಯ ಅರ್ಥ ಕೇವಲ ದೊಡ್ಡ ಕಟ್ಟಡಗಳು, ರಸ್ತೆಗಳು ಅಥವಾ ಮೂಲಸೌಕರ್ಯಗಳ ನಿರ್ಮಾಣವಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಭರವಸೆಯ ಬೆಳಕು ಮೂಡುವುದೇ ನಿಜವಾದ ಪ್ರಗತಿ.

ಮೈಸೂರು ಜಿಲ್ಲೆಯ ಕಲ್ಲಹಳ್ಳಿಯ ಮಣ್ಣಿನಲ್ಲಿ ಅರಳಿದ ಅರಸು ಎಂಬ ಹೂವು ಕೇವಲ ವ್ಯಕ್ತಿಯಾಗಿರಲಿಲ್ಲ; ಕರ್ನಾಟಕದ ಸಾಮಾಜಿಕ ನ್ಯಾಯದ ಪರಿಮಳವಾಗಿತ್ತು. ಹಿಂದುಳಿದವರ ಪಾಲಿಗೆ ಭರವಸೆಯಾಗಿ, ರೈತರ ಬದುಕಿನಲ್ಲಿ ಹಕ್ಕಿನ ಧ್ವನಿಯಾಗಿ, ಬಡವರ ಪಾಲಿಗೆ ಆಶಾಕಿರಣವಾಗಿ ಹಾಗೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಸಂಕೇತವಾಗಿ, ಶಾಶ್ವತವಾಗಿ ಉಳಿದವರು ಡಿ. ದೇವರಾಜ ಅರಸು.

WhatsApp Image 2026 07 28 at 13.24.25
ಆರ್‌ ಕಾವೇರಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...

ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು

ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ...