ನಾಗರಪಂಚಮಿ ನಮಗೆ ಒಂದು ಪ್ರಶ್ನೆಯನ್ನು ಕೇಳುತ್ತದೆ. ನಾವು ಪೂಜಿಸುವುದು ಕಲ್ಲಿನ ರೂಪವನ್ನೋ ಅಥವಾ ಅದರ ಮೂಲಕ ಜೀವದ ಮೌಲ್ಯವನ್ನು ಅರಿಯುವ ಸಂಸ್ಕೃತಿಯನ್ನೋ, ಬಸವಣ್ಣನವರ ʼಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು, ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾʼ ಎಂಬ ವಚನದ ವೈಚಾರಿಕ ಬೆಳಕಿನಲ್ಲಿ ನೋಡಿದಾಗ ಉತ್ತರ ಸ್ಪಷ್ಟವಾಗುತ್ತದೆ. ಆಚರಣೆಯ ಅಂತಿಮ ಗುರಿ ಮಾನವೀಯತೆ ಮತ್ತು ಪ್ರಾಣಿ ಪಕ್ಷಿಗಳ ಜೀವದಯೆಯಾಗಬೇಕು.
ಕರ್ನಾಟಕದ ಜನಪದ ಮತ್ತು ಧಾರ್ಮಿಕ ಸಂಸ್ಕೃತಿಯಲ್ಲಿ ಮಹತ್ವದ ಹಬ್ಬವಾಗಿರುವ ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ನಾಗದೇವತೆಯನ್ನು ಪೂಜಿಸುವ ಸಂಪ್ರದಾಯ ಹಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ನಾಗನನ್ನು ಪ್ರಕೃತಿ, ಮಳೆ, ಫಲವತ್ತತೆ ಮತ್ತು ಜೀವಚಕ್ರದ ಸಂಕೇತವಾಗಿ ಕಾಣುವ ಜನಪದ ನಂಬಿಕೆಗಳೂ ಇದರೊಂದಿಗೆ ಬೆಸೆದುಕೊಂಡಿವೆ. ಆದರೆ ಹನ್ನೆರಡನೆಯ ಶತಮಾನದ ವಚನ ಚಳವಳಿಯು ಯಾವುದೇ ಆಚರಣೆಯನ್ನು ಕೇವಲ ಸಂಪ್ರದಾಯವೆಂಬ ಕಾರಣಕ್ಕೆ ಒಪ್ಪಿಕೊಳ್ಳದೆ, ಅದರ ಹಿಂದಿರುವ ಮಾನವೀಯತೆ, ಸತ್ಯ, ಅಸತ್ಯ, ನೈತಿಕತೆ ಮತ್ತು ವೈಚಾರಿಕತೆಯನ್ನು ಪ್ರಶ್ನಿಸುವ ದೃಷ್ಟಿಯನ್ನು ಬೆಳೆಸುತ್ತದೆ.
ನಾಗರಪಂಚಮಿಯ ಸಂದರ್ಭದಲ್ಲಿ ಅತ್ಯಂತ ಹೆಚ್ಚು ನೆನಪಿಗೆ ಬರುವ ಬಸವಣ್ಣನವರ ವಚನವೆಂದರೆ:
“ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ…”
ಎಂಬ ಈ ವಚನದಲ್ಲಿ ಬಸವಣ್ಣನವರು, ʼಕಲ್ಲಿನಿಂದ ನಿರ್ಮಿಸಿದ ನಾಗರ ಮೂರ್ತಿಗೆ ಹಾಲೆರೆಯುವ ಜನರು ನಿಜವಾದ ಜೀವಂತ ನಾಗನನ್ನು ಕಂಡಾಗ ಅದನ್ನು ಕೊಲ್ಲಲು ಮುಂದಾಗುವರುʼ ಎಂಬ ವೈರುಧ್ಯವನ್ನು ಎತ್ತಿ ತೋರಿಸುತ್ತಾರೆ. ಇಲ್ಲಿ ಬಸವಣ್ಣನವರ ಉದ್ದೇಶ ನಾಗಪೂಜೆಯನ್ನು ಮಾತ್ರ ಟೀಕಿಸುವುದಲ್ಲ; ಜೀವಂತ ಜೀವಿಯ ಮೇಲಿನ ಕರುಣೆಯನ್ನು ಬಿಟ್ಟು ನಿರ್ಜೀವ ಪ್ರತಿಮೆಯ ಮುಂದೆ ಮಾಡುವ ಆಚರಣೆಯ ಅರ್ಥವೇನು? ಎಂಬ ಮೂಲಭೂತ ಪ್ರಶ್ನೆಯನ್ನು ಸಮಾಜದ ಮುಂದಿಡುತ್ತದೆ.
ಅದೇ ವಚನದಲ್ಲಿ ಬಸವಣ್ಣನವರು ಮತ್ತೊಂದು ಗಂಭೀರವಾದ ಸಾಮಾಜಿಕ ಸಂದೇಶವನ್ನು ನೀಡುತ್ತಾರೆ. ʼಜೀವಂತವಾಗಿ ನಮ್ಮ ಮುಂದೆ ಬರುವ ಜಂಗಮನನ್ನು ನಿರ್ಲಕ್ಷಿಸುವವರು, ಉಣ್ಣದ ಲಿಂಗಕ್ಕೆ ನೈವೇದ್ಯ ಅರ್ಪಿಸುವುದರಲ್ಲಿ ಅರ್ಥ ಹುಡುಕುತ್ತಾರೆʼ ಎಂಬ ವೈರುಧ್ಯವನ್ನು ಅವರು ಪ್ರಶ್ನಿಸುತ್ತಾರೆ. ಅಂತಿಮವಾಗಿ, ನಿಜವಾದ ಶರಣರನ್ನು ಕಂಡು ಉದಾಸೀನರಾಗುವುದೇ ಆತ್ಮವಂಚನೆ ಎಂಬ ಸಂದೇಶವನ್ನು ನೀಡುತ್ತಾರೆ. ಹೀಗಾಗಿ ಈ ವಚನದ ಕೇಂದ್ರದಲ್ಲಿ ಆಚಾರಕ್ಕಿಂತ ಆಚಾರದ ಹಿಂದಿರುವ ಮೌಲ್ಯ, ಪ್ರತಿಮೆಯಿಗಿಂತ ಜೀವ, ಹೊರಗಿನ ಪೂಜೆಗಿಂತ ಒಳಗಿನ ಮಾನವೀಯತೆ ಮುಖ್ಯವಾಗುತ್ತದೆ.
ವಚನಕಾರರ ಚಿಂತನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅವರು ಜನಸಾಮಾನ್ಯರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವಿಷಯಗಳನ್ನು ತಮ್ಮ ವಚನಗಳ ಮೂಲಕ ಚರ್ಚಿಸಿದರು. ವಚನ ಸಾಹಿತ್ಯವು ಕೇವಲ ದೇವರು ಮತ್ತು ಧಾರ್ಮಿಕ ಆಚರಣೆಗಳ ಕುರಿತು ಮಾತನಾಡದೆ, ಸಮಾಜದ ಸೂಕ್ಷ್ಮ ಸಮಸ್ಯೆಗಳು, ಮಾನವ ಸಂಬಂಧಗಳು, ಕಾಯಕ, ದಾಸೋಹ, ಸಮಾನತೆ, ನೈತಿಕತೆ ಮತ್ತು ಅಂಧಾಚಾರಗಳನ್ನೂ ಪ್ರಶ್ನಿಸುತ್ತದೆ.
ಆದ್ದರಿಂದ ಇಂದಿನ ನಾಗರಪಂಚಮಿಯ ಆಚರಣೆಯನ್ನೂ ವಚನದ ಬೆಳಕಿನಲ್ಲಿ ನೋಡಬೇಕಾದ ಅಗತ್ಯವಿದೆ. ಹಬ್ಬದ ಆಚರಣೆಯು ಜನರ ನಂಬಿಕೆ, ಸಂಸ್ಕೃತಿ ಮತ್ತು ಭಾವನೆಗಳೊಂದಿಗೆ ಸಂಬಂಧ ಹೊಂದಿರಬಹುದು. ಆದರೆ ಅದರ ಜತೆಗೆ ಜೀವಜಾಲದ ಮೇಲಿನ ಕರುಣೆ, ಪರಿಸರ ಸಂರಕ್ಷಣೆ ಮತ್ತು ವೈಚಾರಿಕ ಮನೋಭಾವ ಬೆಳೆಸುವುದು ಇನ್ನಷ್ಟು ಅರ್ಥಪೂರ್ಣ. ನಾಗನನ್ನು ದೇವರೆಂದು ಪೂಜಿಸುವುದಕ್ಕಿಂತ ಮೊದಲು ನಾಗವೂ ಪ್ರಕೃತಿಯ ಜೀವಿಯೆಂಬ ಅರಿವು ನಮ್ಮಲ್ಲಿ ಮೂಡಬೇಕು.
ಇಲ್ಲಿ ಬಸವಣ್ಣನವರ ಚಿಂತನೆ ಇಂದಿಗೂ ಪ್ರಸ್ತುತವಾಗುತ್ತದೆ. ಇಂದಿನ ಸಮಾಜದಲ್ಲಿ ಧಾರ್ಮಿಕ ಆಚರಣೆಗಳು ವಿಜ್ಞಾನ, ಪರಿಸರ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಸಂಘರ್ಷಿಸದಂತೆ ಅವುಗಳಿಗೆ ಹೊಸ ಅರ್ಥ ನೀಡಬೇಕಾಗಿದೆ. ನಾಗರ ಪಂಚಮಿಯನ್ನು ಕೇವಲ ಪೂಜೆ, ಹಾಲೆರೆಯುವಿಕೆ ಮತ್ತು ಸಂಪ್ರದಾಯದ ದಿನವನ್ನಾಗಿ ನೋಡದೆ, ಜೀವದಯೆ, ಪರಿಸರ ಕಾಳಜಿ ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆಯ ಸಂಕೇತವಾಗಿ ಆಚರಿಸುವುದು ವಚನಕಾರರ ವೈಚಾರಿಕ ಪರಂಪರೆಗೆ ಹೆಚ್ಚು ಹತ್ತಿರವಾಗುತ್ತದೆ.
ವಚನಕಾರರ ದೃಷ್ಟಿಯಲ್ಲಿ ನಿಜವಾದ ಭಕ್ತಿ ಎಂದರೆ ಕೇವಲ ಬಾಹ್ಯ ಆಚರಣೆಯಲ್ಲ, ಅದು ಬದುಕಿನಲ್ಲಿ ವ್ಯಕ್ತವಾಗಬೇಕು ಎಂಬುದು. ಬಸವಣ್ಣನವರ ವಚನಗಳಲ್ಲಿ ಕಾಣುವ ಸಾಮಾಜಿಕ ಕಳಕಳಿ ಮತ್ತು ವೈಚಾರಿಕತೆ ಇದೇ ಸಂದೇಶವನ್ನು ನೀಡುತ್ತದೆ. ಆದ್ದರಿಂದ ನಾಗರ ಪಂಚಮಿಯಂದು ನಾಗನ ಪ್ರತಿಮೆಯ ಮುಂದೆ ಹಾಲು ಸುರಿಸುವುದಕ್ಕಿಂತ, ಜೀವಂತ ಜೀವಿಗಳ ಬಗ್ಗೆ ಕರುಣೆ ತೋರುವುದು, ಪ್ರಕೃತಿಯನ್ನು ರಕ್ಷಿಸುವುದು ಮತ್ತು ಜೀವಜಾಲದೊಂದಿಗೆ ಸಹಬಾಳ್ವೆ ನಡೆಸುವುದು ಈ ನಾಗರ ಪಂಚಮಿಯ ಹಬ್ಬದ ಅರ್ಥವನ್ನು ಮತ್ತಷ್ಟು ಗಾಢಗೊಳಿಸುತ್ತದೆ.
ನಾಗರಪಂಚಮಿ ನಮಗೆ ಒಂದು ಪ್ರಶ್ನೆಯನ್ನು ಕೇಳುತ್ತದೆ. ನಾವು ಪೂಜಿಸುವುದು ಕಲ್ಲಿನ ರೂಪವನ್ನೋ ಅಥವಾ ಅದರ ಮೂಲಕ ಜೀವದ ಮೌಲ್ಯವನ್ನು ಅರಿಯುವ ಸಂಸ್ಕೃತಿಯನ್ನೋ, ಬಸವಣ್ಣನವರ ʼಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು, ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾʼ ಎಂಬ ವಚನದ ವೈಚಾರಿಕ ಬೆಳಕಿನಲ್ಲಿ ನೋಡಿದಾಗ ಉತ್ತರ ಸ್ಪಷ್ಟವಾಗುತ್ತದೆ. ಆಚರಣೆಯ ಅಂತಿಮ ಗುರಿ ಮಾನವೀಯತೆ ಮತ್ತು ಪ್ರಾಣಿ ಪಕ್ಷಿಗಳ ಜೀವದಯೆಯಾಗಬೇಕು.
ಇದನ್ನೂ ಓದಿದ್ದೀರಾ? ಜೆನ್ ಝಿ ಆಕ್ರೋಶಕ್ಕೆ ನಾಯಕರ ನಡುಕ: ಸ್ವಾತಂತ್ರ್ಯ ದಿನಾಚರಣೆಯ ಸಿಎಂಗಳ ಭಾಷಣಗಳಲ್ಲಿ ‘ಯುವಶಕ್ತಿ’ ಜಪ
ನಾಗರಪಂಚಮಿ ಕೇವಲ ಒಂದು ಧಾರ್ಮಿಕ ಹಬ್ಬವಲ್ಲ, ಅದನ್ನು ಜನಪದ ಸಂಸ್ಕೃತಿ, ಪ್ರಕೃತಿಯ ಪ್ರೀತಿ, ಜೀವದಯೆ ಮತ್ತು ವೈಚಾರಿಕ ಚಿಂತನೆಯೊಂದಿಗೆ ಜೋಡಿಸುವ ಅವಕಾಶವಾಗಿಯೂ ಕಾಣಬಹುದು. ವಚನಕಾರರ ಈ ಚಿಂತನೆ ಇಂದಿನ ಪೀಳಿಗೆಗೂ ಪ್ರಸ್ತುತವಾಗಿದ್ದು, ಹಬ್ಬಗಳ ಆಚರಣೆಗೆ ಹೊಸ ಮಾನವೀಯ ಅರ್ಥವನ್ನು ನೀಡುವ ದಾರಿಯನ್ನು ತೋರಿಸುತ್ತದೆ.




