ಕ್ರಿಸ್ತನನ್ನು ಆರಾಧಿಸಿ, ಆದರ್ಶವಾಗಿಟ್ಟುಕೊಂಡ ರಾಷ್ಟ್ರಗಳೇ ಯುದ್ಧದ ಮುಂಚೂಣಿಯಲ್ಲಿರುವುದು ಹಾಗೂ ಒಂದು ವರ್ಗ ಯುದ್ಧಕ್ಕಾಗಿ ಪರಿತಪಿಸುತ್ತಿರುವುದು ಕುಸಿಯುತ್ತಿರುವ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಕನಿಷ್ಠ ಈ “ಶುಭ ಶುಕ್ರವಾರ”ದ ಕಾರಣಕ್ಕಾದರೂ ಯುದ್ಧದಾಹಿಗಳ ಮನಸ್ಸು ಬದಲಾಗಿ, ಕ್ರಿಸ್ತನ ಪರಮೋಚ್ಛ ಆಜ್ಞೆ “ನಿನ್ನಂತೆಯೇ ನಿನ್ನ ಪರರನ್ನೂ ಪ್ರೀತಿಸು” ಎಂಬ ಸಂದೇಶವನ್ನು ಪಾಲಿಸುವಂತಾಗಲಿ
ಕ್ರೈಸ್ತರಲ್ಲದ ನನ್ನ ಅನೇಕ ಗೆಳೆಯರು ಕ್ರೈಸ್ತ ಆಚರಣೆಗಳ ಪೈಕಿ ಶುಭ ಶುಕ್ರವಾರ ಅಥವಾ “Good Friday” ಕುರಿತು ನನ್ನನ್ನು ಕೇಳುವ ಅನೇಕ ಪ್ರಶ್ನೆಗಳಲ್ಲಿ ಮೊದಲನೆಯದು ಹಾಗೂ ಸಾಮಾನ್ಯವಾದ ಪ್ರಶ್ನೆ ಎಂದರೆ “ಶುಭ ಶುಕ್ರವಾರದಲ್ಲಿ ಶುಭವೆನ್ನುವಂತಹದ್ದು ಏನಿದೆ?”. ಯೇಸುಕ್ರಿಸ್ತರು ಪ್ರಭುತ್ವ ಹಾಗೂ ಯೆಹೂದಿ ಕಟ್ಟರ್ ಸಂಪ್ರದಾಯಸ್ಥರ ಕೈಯಿಂದ ಶಿಲುಬೆಗೇರಿಸಲ್ಪಟ್ಟು, ಶಿಲುಬೆಯ ಮೇಲೆ ಮರಣ ಹೊಂದಿದ ದಿನವೇ ಶುಭ ಶುಕ್ರವಾರ ಎಂದರೆ ಹಲವರು ದಿಗ್ಬ್ರಾಂತರಾಗುತ್ತಾರೆ! ಮುಂದುವರೆದು, ಕ್ರಿಸ್ತ ಮರಣಿಸಿದ ದಿನ ಕ್ರೈಸ್ತರಿಗೆ ಅತ್ಯಂತ ಶೋಕಭರಿತ ದಿನವಾಗಬೇಕಿತ್ತು. ಆದರೆ, ನಿಮಗೇಕೆ ಅದು “ಗುಡ್” ಅಥವಾ ಶುಭವಾಗಿದೆ ಎಂಬ ಮರು ಪ್ರಶ್ನೆಗಳಿಗೆ ಅದೇ ಉತ್ಸಾಹದಿಂದ ಉತ್ತರಿಸುವುದು ಕ್ರೈಸ್ತನಾದ ನನ್ನ ಕರ್ತವ್ಯವೆಂದೇ ಭಾವಿಸಿದ್ದೇನೆ.
ಅದು ಜುದೇಯ ನಾಡಿನ ಯೆಹೂದ್ಯರು ರೋಮ್ ಸಾಮ್ರಾಜ್ಯದ ಆಡಳಿತದಲ್ಲಿ ನಲುಗುತ್ತಿದ್ದ ಕಾಲ. ರೋಮನ್ ಪ್ರಭುತ್ವಕ್ಕಿಂತ ಹೆಚ್ಚಾಗಿ, ಸಾಮಾನ್ಯ ಜನತೆ ತಮ್ಮದೇ ಯೆಹೂದ್ಯ ಪುರೋಹಿತಶಾಹಿ ವಿಧಿಸುತ್ತಿದ್ದ ಅತ್ಯಂತ ಕಠಿಣ ಧಾರ್ಮಿಕ ಕಟ್ಟುಪಾಡುಗಳಿಂದ ಕನಲಿಹೋಗಿದ್ದರು. ಇತ್ತ ಧಾರ್ಮಿಕ ಕಟ್ಟಳೆಗಳ ಹೆಸರಿನಲ್ಲಿ ಪುರೋಹಿತವರ್ಗವು ಇವರ ಮೇಲೆ ಮಾನಸಿಕವಾಗಿ ಹಿಂಸಿಸುತ್ತಿದ್ದರೆ, ಅತ್ತ ಇದೇ ಜನತೆ ರೋಮನ್ ಸಾಮ್ರಾಜ್ಯಕ್ಕೆ ಹಲವು ವಿಧಗಳ ಸುಂಕ ಅಥವಾ ತೆರಿಗೆಯನ್ನು ನೀಡಬೇಕಿತ್ತು. ಪ್ರಭುತ್ವ ಮತ್ತು ಪುರೋಹಿತಶಾಹಿ ಎಂಬ ಇಬ್ಬಾಯಿಯ ಕತ್ತಿಯ ಅಂಚಿನಲ್ಲಿ ಜನರು ನಿಟ್ಟುಸಿರು ಬಿಡುತ್ತಾ, ತಮ್ಮ ಧರ್ಮಶಾಸ್ತ್ರಗಳಲ್ಲಿ ಪ್ರವಾದಿಸಲಾದ ‘ಮೆಸ್ಸಾಯ’ (ರಕ್ಷಕ)ನ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಇಗೋ ಅವರ ಮೆಸ್ಸಾಯ ಮೇಘದೂತರೊಡನೆ, ರಕ್ಷಕನಾಗಿ, ಅರಸನಾಗಿ ಸ್ವರ್ಗೀಯ ಸೇನಾಗಣಗಳೊಡನೆ ರಕ್ಷಿಸಲು ನಮಗಾಗಿ ಬರುತ್ತಾನೆ ಎಂದೆಣಿಸಿದ್ದ ಬಹುತೇಕರಿಗೆ, ಯೇಸುಕ್ರಿಸ್ತನೆಂಬ ‘ಮೆಸ್ಸಾಯ’ ದೀನರೊಡನೆ ದೀನನಾಗಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಅವರ ನಡುವೆಯೇ ಜನಿಸುತ್ತಾನೆ ಎಂಬುದನ್ನು ಊಹಿಸಲಾಗಲಿಲ್ಲ. ಬೆತ್ಲೆಹೆಮಿನಲ್ಲಿ ಸಾಮಾನ್ಯ ಬಡಗಿಯ ಸಾಕುಮಗನಾಗಿ ಜನಿಸಿದ ಜಗದ ಬಡಗಿ ಕ್ರಿಸ್ತ, ಮುಂದೆ ಅದೇ ಶಿಲುಬೆಯ ಮರದ ಮೇಲೆ ತನ್ನ ಜನತೆಗಾಗಿ ತನ್ನ ಜೀವವನ್ನೇ ಅರ್ಪಿಸಿದ್ದು ಇತಿಹಾಸ.

ಬೈಬಲ್ ಗ್ರಂಥದಲ್ಲಿನ ಮತ್ತಾಯ, ಮಾರ್ಕ, ಲೂಕ ಮತ್ತು ಯೊವಾನ್ನ ಬರೆದ ಶುಭಸಂದೇಶಗಳಲ್ಲಿ ಯೇಸುಕ್ರಿಸ್ತರ ಜೀವನದ ಕುರಿತು ಬರೆಯಲಾಗಿದೆ. ಇದರಲ್ಲಿ ಲೂಕನನ್ನು ಹೊರತುಪಡಿಸಿದರೆ ಇನ್ನುಳಿದ ಮೂವರೂ ಯೇಸುವಿನ ಶಿಷ್ಯರಾಗಿದ್ದವರೇ. ಯೇಸುಕ್ರಿಸ್ತ ತನ್ನ ಸಾರ್ವಜನಿಕ ಬದುಕಿನಲ್ಲಿ ಎಲ್ಲರೊಳಗೊಂದಾಗಿ ಜೀವಿಸುತ್ತಾನೆ. ಅನ್ಯರು, ಪರರೆನ್ನದೆ, ಪುರೋಹಿತವರ್ಗವು ದೂರಮಾಡಿದ, ವಿರೋಧಿಸಿದ ದೀನ-ದಲಿತರ, ಸಮಾಜದಿಂದ ಬಹಿಷ್ಕೃತರಾದವರ, ಕುರುಡ-ಕಿವುಡ-ಕುಷ್ಠರೋಗಿಗಳ ಜೊತೆಗಿದ್ದು ಅವರನ್ನು ಆಧರಿಸುತ್ತಾನೆ. ಕಂದಾಚಾರ, ದೈವಿಕ ಶಿಕ್ಷೆ, ಭಯ ಹಾಗೂ ಭ್ರಾಂತಿಗಳ ನಡುವೆ ನಡುಗುತ್ತಿದ್ದ ಜನತೆಯನ್ನು ಕ್ರಿಸ್ತ ತನ್ನೆಡೆಗೆ ಬರಮಾಡಿಕೊಂಡು, ಅವರಿಗೆ ತನ್ನ ಭೋದನೆಯ ಮೂಲಕ ಮಾನವ ಪ್ರೇಮ, ಸೋದರತ್ವ ಹಾಗೂ ಬಾಂಧವ್ಯವೆಂಬ ಸುಮಧುರ ಸಿಂಚನವನ್ನೆರೆಯುತ್ತಾನೆ. ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ದಣಿದವರಿಗೆ ನೆರಳು ನೀಡುವ ಮೂಲಕ, ಅವರೊಳಗೆ ಜೀವಪ್ರೇಮದ ಕಾರುಣ್ಯವನ್ನು ತುಂಬುತ್ತಾ, ಸ್ಪೂರ್ತಿಯ ಸೆಲೆಯಾಗುತ್ತಾನೆ. ಸಮಾಜದಿಂದ ಅತ್ಯಂತ ನಿಕೃಷ್ಟವಾಗಿದ್ದ ವೇಶ್ಯೆಯರಿಗೂ ಸಹ ನ್ಯಾಯವನ್ನು ಒದಗಿಸಿ, ಅವರನ್ನು ಉದ್ಧರಿಸುವ ಸಾಂತ್ವನದ ಮಾತುಗಳನ್ನಾಡುತ್ತಾನೆ. “ದುಡಿದು ಬಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ನೀಡುತ್ತೇನೆ” ಎಂದು ಹೇಳಿದ ಕ್ರಿಸ್ತ, ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸಲು ಜನತೆ ಮಾಡಬೇಕಾಗಿರುವುದೇನು ಎಂಬುದನ್ನು ಸಾರುತ್ತಾನೆ. ಸ್ವತಃ ಯೆಹೂದಿಯಾಗಿದ್ದ ಕ್ರಿಸ್ತ, ಪುರೋಹಿತಶಾಹಿಗಳನ್ನು ಧಿಕ್ಕರಿಸಿ, ಅವರನ್ನು ಸುಣ್ಣ ಬಳಿದ ಸಮಾಧಿಗಳು ಎನ್ನುವ ಮೂಲಕ ಬಹಿರಂಗ ಶುದ್ಧಿ ಮಾತ್ರವಲ್ಲ, ಅಂತರಂಗ ಶುದ್ಧಿಯ ಪ್ರಾಮುಖ್ಯತೆಯ ಕುರಿತು ಹೇಳುತ್ತಾನೆ.
This video cannot be played in your browser. Open the video directly
ಸಹಜವಾಗಿಯೇ, ಕ್ರಿಸ್ತನ ಈ ಸಮಾಜವಾದಿ ನಿಲುವುಗಳು ಪುರೋಹಿತವರ್ಗದವರ ಕೆಂಗಣ್ಣಿಗೆ ಗುರಿಯಾಗಿ, ಅವರನ್ನು ಕೆರಳಿಸುತ್ತವೆ. ಯೇಸುಕ್ರಿಸ್ತರ ತಮ್ಮ ಧಾರ್ಮಿಕ ಆಚರಣೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಮಾತ್ರವಲ್ಲದೇ, ತನ್ನನ್ನೇ ತಾನು ಮೆಸ್ಸಾಯ ಎಂದು ಹೇಳಿಕೊಳ್ಳುತ್ತಿದ್ದಾನೆಂದು ದೂರುವ ಅವರು, ಯೇಸುವನ್ನು ಕೊಲ್ಲಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಯೇಸುವಿಗೆ ಮೂವತ್ಮೂರು ವರ್ಷವಾದಾಗ, ಫರಿಸಾಯರೆಂಬ ಪುರೋಹಿತವರ್ಗವು ನಿರೀಕ್ಷಿಸಿದ ಸಮಯ ಬಂದೇ ಬಿಟ್ಟಿತು. ಯೇಸುವಿನ ಶಿಷ್ಯರಲ್ಲೊಬ್ಬನಾದ ಜೂದಾಸನು ಕೇವಲ ಮೂವತ್ತು ಬೆಳ್ಳಿನಾಣ್ಯಗಳಿಗೆ ಯೇಸುವಿಗೆ ದ್ರೋಹವೆಸಗುತ್ತಾನೆ. ಯೇಸುವನ್ನು ಬಂಧಿಸಲಾಗಿ, ವಿಚಾರಣೆಯ ಸಂದರ್ಭದಲ್ಲಿ ಜುದೇಯದ ರಾಜ್ಯಪಾಲನಾಗಿದ್ದ ಪಿಲಾತನಿಗೆ ಯೇಸು ನಿರಪರಾಧಿಯೆಂಬ ಅರಿವಿದ್ದರೂ, ಜನತೆಗೆ ಹೆದರಿ, ತನ್ನ ಅಧಿಕಾರವನ್ನು ಕಳೆದುಕೊಳ್ಳುವೆನೆಂಬ ಭಯದಿಂದ, ಯೇಸುವನ್ನು ಯೆಹೂದ್ಯರಿಗೆ ಒಪ್ಪಿಸಿಬಿಡುತ್ತಾನೆ. ತರುವಾಯ ಅವರು ಕ್ರಿಸ್ತನನ್ನು ಗೊಲ್ಗೋಥಾ ಎಂಬ ಬೆಟ್ಟದ ಮೇಲೆ ಇಬ್ಬರು ಕಳ್ಳರ ನಡುವೆ ಶಿಲುಬೆಗೇರಿಸುತ್ತಾರೆ. ಕನ್ನಡದ ಮೊದಲ ರಾಷ್ಟ್ರಕವಿ ಎಂದೇ ಪ್ರಸಿದ್ಧರಾಗಿರುವ ಮಂಜೇಶ್ವರ ಗೋವಿಂದ ಪೈಗಳು ತಮ್ಮ ‘ಗೊಲ್ಗೋಥಾ” ಎಂಬ ಮಹಾಖಂಡಕಾವ್ಯದಲ್ಲಿ ಯೇಸುವಿನ ಮರಣದ ಕುರಿತು ಇಂತೆನ್ನುತ್ತಾರೆ:
“… ಹದ್ದು ಬಿಗಿವಿಡಿದ
ಲಾವಿಗೆಯಂತೆ, ಪಡುವಣದಿ ಬಿಳಿಯ
ಬಿದಿಗೆಯ ತಿಂಗಳಂತೆ, ಬಿಲ್ಲಿಗೆ ತೊಟ್ಟ ಸರಳಂತೆ,
ಮರಣವೃಕ್ಷದೊಳಮೃತ ಫಲದಂತೆ.”
ಇಲ್ಲಿನ ಕವಿಯ ಪ್ರತಿ ಮಾತೂ ಕ್ರಿಸ್ತನ ಮರಣದ ವೇಳೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತದೆ. ಹದ್ದಿನ ಬಾಯಲ್ಲಿ ಬಂಧಿಯಾಗಿರುವ ಲಾವಕ್ಕಿಯು ಸೌಮ್ಯಚಿತ್ತದಿಂದ ತನ್ನ ಸಾವಿಗೆ ಸಿದ್ಧವಾಗುವಂತೆ, ಪಡುವಣದ ಆಗಸದಲ್ಲಿ ಬಿದಿಗೆಯ ಚಂದ್ರನು ಮೂಡಿ ಕೆಂಪು ಬೆಳಕನ್ನು ಸೂಸುತ್ತಿದ್ದಾನೆ. ಬಿಲ್ಲಿಗೆ ನೆಟ್ಟಿರುವ ಬಾಣವು ಗುರಿಯೆಡೆಗೆ ಸಾಗಲು ಸಿದ್ಧವಾಗಿದೆ ಎಂಬ ರೂಪಕಗಳಿಂದ ಕ್ರಿಸ್ತನ ಪರಿಸ್ಥಿತಿಯನ್ನು ವಿವರಿಸುವ ಕವಿಯು, ಕ್ರಿಸ್ತನನ್ನು ಮರಣವೆಂಬ ವೃಕ್ಷದಲ್ಲಿ ಬಿಟ್ಟ ಅಮೃತಫಲ ಎಂದು ಅತ್ಯಂತ ಸಾಫಲ್ಯತೆಯಿಂದ ನುಡಿಯುತ್ತಾರೆ. ತನ್ನ ಬದುಕಿನುದ್ದಕ್ಕೂ ಕ್ರಿಸ್ತ “ನಾನು ಸೇವೆ ಮಾಡಿಸಿಕೊಳ್ಳುವುದಕ್ಕಲ್ಲ, ಬದಲಿಗೆ ಸೇವೆ ಮಾಡಲು ಬಂದವನು”, “ನನ್ನ ಕುರಿಮಂದೆಗಾಗಿ ಪ್ರಾಣ ನೀಡುವಂತಹ ನಿಷ್ಠಾವಂತ ಕುರುಬನು ನಾನು”, “ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ” ಎಂಬ ಸಂದೇಶವನ್ನು ಸಾರುತ್ತಾನೆ ಹಾಗೂ ಆ ಮೂಲಕ ಮಾನವ ಪ್ರೇಮದ ಹಾಗೂ ದೈವ ಕಾರುಣ್ಯದ ಬಂಧನದ ಸೇತುವೆಯಾಗುತ್ತಾನೆ. ಶಿಲುಬೆಯ ಮೇಲೆ ಮಡಿಯುವಾಗ, ಸೈನಿಕರು ಮಾಡಿದ ಪರಿಹಾಸ್ಯಕ್ಕೆ ಪ್ರತ್ಯುತ್ತರವಾಗಿ “ಕ್ಷಮಿಸಿವರನೆಲೆ ತಂದೆ! ತಾವೇನು ಮಾಡುತ್ತಿರುವರೆಂದು ಇವರು ಅರಿಯರು” ಎನ್ನುವ ಮೂಲಕ ಯೇಸು ಶಿಲುಬೆಯ ಮೇಲಿಂದಲೇ ಕ್ಷಮೆಯ ಉದಾತ್ತತೆಯನ್ನು ತೋರಿದರು. ಅಂದು ಅವಮಾನ, ಶಿಕ್ಷೆ, ಹಾಗೂ ಭಯದ ಸಂಕೇತವಾಗಿದ್ದ ಶಿಲುಬೆ, ಕ್ರಿಸ್ತನ ಮರಣಾನಂತರ ರಕ್ಷಣೆಯ ಸಂಕೇತವಾಯಿತು. ಜಗತ್ತಿನ ಜನರ ಪಾಪಗಳಿಗೆ ಪರಿಹಾರ ಬಲಿಯಾಗಿ ಮರಣಿಸಿದ ಕ್ರಿಸ್ತ, ಮೂರನೇ ದಿನ ಪುನರುತ್ಥಾನರಾದರು. ಈ ಕಾರಣದಿಂದಲೇ ಕ್ರಿಸ್ತನ ಮರಣದ ದಿನವಾದ ಶುಕ್ರವಾರವು ಕ್ರೈಸ್ತರಿಗೆ “ಶುಭ ಶುಕ್ರವಾರ”ವಾಯಿತು.
ಪ್ರಸ್ತುತ ನಾವು ಬದುಕುತ್ತಿರುವ ವಿಷಮ ಕಾಲಘಟ್ಟದಲ್ಲಿ, ಮನುಷ್ಯನ ಜೀವವೆಂಬುದು ಅದೆಷ್ಟು ದುಸ್ತರವಾಗಿದೆ ಎಂದರೆ ಯುದ್ಧದ ಪರಿಣಾಮವಾಗಿ ಸಾಯುತ್ತಿರುವ ಜನರು, ವಿಶೇಷವಾಗಿ ಮಕ್ಕಳ ಸಾವಿಗೂ ಮಿಡಿಯಲಾರದಷ್ಟು ನಾವು ಜಡವಾಗಿದ್ದೇವೆ. ಕ್ರಿಸ್ತನನ್ನು ಆರಾಧಿಸಿ, ಆದರ್ಶವಾಗಿಟ್ಟುಕೊಂಡ ರಾಷ್ಟ್ರಗಳೇ ಯುದ್ಧದ ಮುಂಚೂಣಿಯಲ್ಲಿರುವುದು ಹಾಗೂ ಜನತೆಯ ಒಂದು ವರ್ಗ ಯುದ್ಧಕ್ಕಾಗಿ ಪರಿತಪಿಸುತ್ತಿರುವುದು ಕುಸಿಯುತ್ತಿರುವ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಕನಿಷ್ಠ ಈ “ಶುಭ ಶುಕ್ರವಾರ”ದ ಕಾರಣಕ್ಕಾದರೂ ಯುದ್ಧದಾಹಿಗಳ ಮನಸ್ಸು ಬದಲಾಗಿ, ಕ್ರಿಸ್ತನ ಪರಮೋಚ್ಛ ಆಜ್ಞೆ“ನಿನ್ನಂತೆಯೇ ನಿನ್ನ ಪರರನ್ನೂ ಪ್ರೀತಿಸು” ಎಂಬ ಸಂದೇಶವನ್ನು ಪಾಲಿಸುವಂತಾಗಲಿ ಎಂಬುದೇ ಎಲ್ಲರ ಆಶಯ.





