ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹಾಸನ ಜಿಲ್ಲೆಯ ಮಹಿಳೆಯರು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಅವರು ಸದ್ದಿಲ್ಲದೇ ಸಾಧನೆ ಮಾಡುತ್ತಾ ಬಂದಿದ್ದಾರೆ. ಅವರನ್ನು ಗುರುತಿಸುವಲ್ಲಿ ಸಮಾಜ ಅಸಡ್ಡೆ ತೋರಿರಬಹುದು. ಹಾಗೆ ಕ್ರೀಡಾ ಕ್ಷೇತ್ರದಲ್ಲಿ ಸಹ ಜಿಲ್ಲೆಯ ಹೆಣ್ಣುಮಕ್ಕಳು ಅದ್ವಿತೀಯ ಸಾಧನೆಯ ಮೂಲಕ ರಾಷ್ಟ್ರ ಮತ್ತು ಜಾಗತಿಕ ಭೂಪಟದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ಈ ಕ್ಷೇತ್ರವು ಅಪಾರ ಶ್ರಮ, ಸಮಯ ಮತ್ತು ಸಹನೆಯನ್ನು ಬೇಡುವಂಥದ್ದು. ತಮ್ಮ ವೈಯಕ್ತಿಕ ಕೌಟುಂಬಿಕ ಆದ್ಯತೆಗಳನ್ನು ಬದಿಗೊತ್ತಿ ಅವರು ನಿರಂತರವಾಗಿ ತಮ್ಮ ಗುರಿಯೆಡೆಗೆ ಸಾಗಬೇಕೆಂದರೆ ಅಪಾರ ಮನಃಶಕ್ತಿಯೂ ಅವರಿಗೆ ಬೇಕಾಗುತ್ತದೆ. ಇವೆಲ್ಲವನ್ನೂ ಒಳಗೊಂಡೇ ನಾವು ಹೆಣ್ಣುಮಕ್ಕಳ ಸಾಧನೆಯನ್ನು ಗುರುತಿಸಬೇಕು. ಆ ಕಣ್ಣು ಸಮಾಜಕ್ಕೆ ಬಹಳ ಬೇಗನೆ ಬರಲಿ.
ಮೂರು ದಶಕಗಳ ಹಿಂದೆಯೇ ಅನನ್ಯ ಸಾಧನೆ ಮಾಡಿದ ಚಿನ್ನದ ಓಟಗಾರ್ತಿ ಗಂಗಮ್ಮ ಜಿಲ್ಲೆಯ ಹೆಮ್ಮೆ. ಹಾಗೇ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಸಾಧನೆಗೈದಿರುವ ಸಕಲೇಶಪುರ ತಾಲೂಕಿನ ಕೊಡುಗೆ ಅಥ್ಲೀಟ್ ಎಚ್.ಜಿ.ಅಪ್ಸರಾ, ಅರಕಲಗೂಡು ತಾಲೂಕಿನ ಕ್ರೀಡಾಪಟು ಉಷಾ ಬನ್ನೂರು ವೇಟ್ ಲಿಫ್ಟಿಂಗ್‌ನಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳ ಕ್ರೀಡಾ ಸಾಧನೆಗೆ ಕರ್ನಾಟಕ ಸರ್ಕಾರ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವ ‘ಏಕಲವ್ಯ ಪುರಸ್ಕಾರ’ ನೀಡಿ ಗೌರವಿಸಿದೆ. ಚಲನಚಿತ್ರ ನಟಿ ಮಿಲನಾ ನಾಗರಾಜ್ ರಾಷ್ಟ್ರೀಯ ಮಟ್ಟದ ಈಜು ಪಟು, ಎಂ.ಕೆ.ಆಶಾ ಅಥ್ಲೆಟಿಕ್ಸ್, ಮಧುರಾ ಆರ್ಮ್ ರೆಸ್ಲಿಂಗ್, ಸಿಂಚನಾ ಪವರ್ ಲಿಫ್ಟಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅನೇಕ ಹೆಣ್ಣುಮಕ್ಕಳು ವಿವಿಧ ಕ್ರೀಡಾವಲಯವನ್ನು ಪ್ರವೇಶಿಸಿ ತಮ್ಮ ದಿಟ್ಟ ಹೆಜ್ಜೆಗಳನ್ನು ಮೂಡಿಸಿರುವುದು ನಮ್ಮ ಹಾಸನದ ಹೆಮ್ಮೆಯನ್ನು ಹೆಚ್ಚಿಸಿದೆ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಗಂಗಮ್ಮ: ಜಿಲ್ಲೆಯ ಹಿರಿಯ ಚಿನ್ನದ ಓಟಗಾರ್ತಿ, ಗಂಗಮ್ಮ ನಮ್ಮ ಹೆಮ್ಮೆಯ ಮಾದರಿ. ಅವರಿಗೀಗ ಅಂದಾಜು 70ರ ವಯಸ್ಸು. ಅವರು ತಮ್ಮ ಮಧ್ಯ ವಯಸ್ಸಿನಲ್ಲಿ ಮಾಡಿದ ಕ್ರೀಡಾ ಸಾಧನೆಗಳು ಹುಬ್ಬೇರಿಸುವಂತಿವೆ. ಹೊಣೆಗಾರಿಕೆಗಳ ಒತ್ತಡದಲ್ಲಿರುವ 40ರ ಹೊಸ್ತಿಲಲ್ಲಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಳಿಸಿದ ಪದಕಗಳು ಬರೋಬ್ಬರಿ 28. ನಾಲ್ಕನೆಯ ದರ್ಜೆಯ ಸರ್ಕಾರಿ ನೌಕರರಾಗಿ, ಮಕ್ಕಳ ತಾಯಿಯಾದ ನಂತರದ ಅವರ ಸಾಧನೆ ಪ್ರಶಂಸನೀಯ. ಸತತ 16 ವರ್ಷಗಳ ಕಾಲ ಅಥ್ಲೆಟಿಕ್ಸ್ ಓಟದ ಸ್ಪರ್ಧೆಗಳ ಎಲ್ಲ ವಿಭಾಗಗಳು, ಉದ್ದ ಜಿಗಿತ ಹಾಗೂ ಕೇರಂ ಸ್ಪರ್ಧೆಯಲ್ಲಿಯೂ ಅವರು ಸಾಧನೆಯನ್ನು ಮಾಡಿದ್ದಾರೆ. 2009ರಲ್ಲಿ ಪುಣೆಯಲ್ಲಿ ಜರುಗಿದ ಕ್ರೀಡಾಕೂಟ, 2009ರಲ್ಲಿ ಉತ್ತರಪ್ರದೇಶದ ಲಕ್ನೋದಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾಕೂಟ, 2010ರಲ್ಲಿ ಸಿಂಗಾಪುರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಇವರು ತಮ್ಮ ಸಾಧನೆಯ ಗುರುತು ಮೂಡಿಸಿದ್ದಾರೆ. ಈವರೆಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಇವರು ಗಳಿಸಿರುವ 21 ಚಿನ್ನದ ಪದಕಗಳು ಇವರ ಪರಿಶ್ರಮವನ್ನು ಸಾಬೀತುಪಡಿಸಿವೆ. ಆರ್ಥಿಕ ಸಂಕಷ್ಟಗಳಿದ್ದರೂ ವೈಯಕ್ತಿಕ ಕ್ರೀಡಾ ಸಾಧನೆಗಳ ಮೂಲಕ ಚಿನ್ನದ ಮಹಿಳೆಯಾಗಿ ಮಾದರಿಯಾಗಿದ್ದಾರೆ ಗಂಗಮ್ಮ.
ಮಿಲನಾ ನಾಗರಾಜ್: ಹಾಸನ ನಗರದ ಮಿಲನಾ ನಾಗರಾಜ್ ಚಂದನವನದಲ್ಲಿ ನಾಯಕಿ ನಟಿಯಾಗಿ ಹೆಸರು ಮಾಡಿದ್ದಾರೆ. ಇವರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಕ್ರೀಡಾಪಟುವೂ ಹೌದು. ಅವರು ಶಾಲಾ-ಕಾಲೇಜು ದಿನಗಳಲ್ಲಿಯೇ ಕ್ರೀಡೆಯೆಡೆಗೆ ಆಕರ್ಷಿತರಾದರು. ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ ಗಳಿಸಿದ್ದಾರೆ. ಬ್ಯಾಕ್ ಸ್ಟ್ರೋಕ್ ಈಜು ಪಟುವಾಗಿ ಹತ್ತು ಹಲವಾರು ಪದಕಗಳನ್ನು, ಗೌರವ ಪುರಸ್ಕಾರಗಳನ್ನು ಗಳಿಸಿದ್ದಾರೆ. ಇವರ ಕ್ರೀಡಾ ಜೀವನದ ಸಾಧನೆಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಕ್ರೀಡಾ ಪ್ರಧಾನಚಿತ್ರ ‘ಮಿಲಿ’ ಸಿದ್ಧವಾಗುತ್ತಿದೆ. ಸ್ವತಃ ಮಿಲನಾ ನಾಗರಾಜ್ ಈ ಚಿತ್ರದಲ್ಲಿ ಕ್ರೀಡಾಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಎಚ್.ಜಿ.ಅಪ್ಸರ: ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದವರು ಅಥ್ಲೀಟ್ ಎಚ್.ಜಿ.ಅಪ್ಸರ. ತಂದೆ ಗೋವಿಂದೇಗೌಡ ಕಾಫಿ ಬೆಳೆಗಾರರು. ಮಗಳ ಆಸಕ್ತಿಗೆ ಪ್ರೋತ್ಸಾಹ ನೀಡಿದರು. 1984ರಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕ ಶನಿವಾರಸಂತೆಯ ಸುಬ್ಬಯ್ಯ, ಅಪ್ಸರ ಅವರನ್ನು ಮಡಿಕೇರಿ ಜಿಲ್ಲೆಯ ಕೂಡಿಗೆಯಲ್ಲಿರುವ ಕ್ರೀಡಾ ಹಾಸ್ಟೆಲ್‌ಗೆ ಸೇರ್ಪಡೆಮಾಡಲು ಕಾರಣಕರ್ತರಾದರು. ಇಲ್ಲಿನ ದೈಹಿಕ ಶಿಕ್ಷಕರುಗಳಾದ ಬಾಲಚಂದ್ರ ಮತ್ತು ಕರಿಯಪ್ಪ ತರಬೇತಿಯಲ್ಲಿ ಮರುವರ್ಷವೇ ಶಿವಮೊಗ್ಗದಲ್ಲಿ ಜರುಗಿದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಮತ್ತು ಬಿಹಾರದ ರಾಂಚಿಯಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ರಾಷ್ಟ್ರೀಯ ದಾಖಲೆ ಮಾಡಿದರು. 1986ರಲ್ಲಿ ತಿರುಚರಾಪಳ್ಳಿಯಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕಗಳನ್ನು ಪಡೆದು ಚಾಂಪಿಯನ್ ಆದರು. ಈ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಇವರ ಸ್ಥಾನ ಭದ್ರವಾಯಿತು.
ಮುಂದೆ ಹರಿಯಾಣ ರಾಜ್ಯದ ಹಿಸ್ಸಾರ್‌ನಲ್ಲಿ ನಡೆದ ಜ್ಯೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಅಪೂರ್ವ ಸಾಧನೆಗೈದರು. ಇದು ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್‌ಗೆ ಅವರ ಸೇರ್ಪಡೆಗೆ ನಾಂದಿಯಾಯ್ತು. ನಂತರ ದೇಶ ವಿದೇಶಗಳಲ್ಲಿ ಜರುಗಿದ ಎಲ್ಲಾ ಪ್ರಮುಖ ಕ್ರೀಡಾಕೂಟಗಳ ಅಥ್ಲೆಟಿಕ್ಸ್ ವಿಭಾಗದಲ್ಲಿ ಸತತ ಗೆಲುವುಗಳನ್ನು ದಾಖಲಿಸಿ, ದೇಶದ ಅದ್ವಿತೀಯ ಕ್ರೀಡಾಪಟು ಎನಿಸಿದರು. ಖ್ಯಾತ ಅಥ್ಲೀಟ್‌ಗಳಾದ ಶೈನಿ ವಿಲ್ಸನ್, ಪಿ.ಟಿ.ಉಷಾ ಒಡನಾಟವು ಅವರ ಸಾಧನೆಗೆ ಸ್ಪೂರ್ತಿಯಾಗಿತ್ತು. ಎಚ್.ಜಿ.ಅಪ್ಸರಾ ಅವರು ನ್ಯಾಷನಲ್ ಗೇಮ್ಸ್‌ನಲ್ಲಿ ಸತತ ಮೂರು ಭಾರಿ ಹಾಗೂ ಒಟ್ಟು 4 ಸಲ ಅಥ್ಲೆಟಿಕ್ ಚಾಂಪಿಯನ್ ಆಗಿದ್ದಾರೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಆದರೆ ಅಲ್ಲಿ ಆಡುವ ಅವಕಾಶ ಸಿಗಲಿಲ್ಲ. ನಂತರದಲ್ಲಿ ಅವರ ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡಿದ ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ವೃತ್ತಿಗೆ ಸೇರಿದರು. ರಾಷ್ಟ್ರೀಯ ಹೈಜಂಪ್ ಕ್ರೀಡಾಪಟು ರೋಹಿತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಅಪ್ಸರಾ, ಈಗ ಕರಾವಳಿಯಲ್ಲಿ ನೆಲೆಸಿದ್ದಾರೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಉಷಾ ಬನ್ನೂರು: ಗ್ರಾಮೀಣ ಪ್ರತಿಭೆಗಳಿಗೆ ಅಪರೂಪ ಎನಿಸುವ ಕ್ರೀಡೆ ವೇಟ್ ಲಿಫ್ಟಿಂಗ್. ಮನೋಬಲ, ದೈಹಿಕ ಶಕ್ತಿ- ತೂಕ ಎತ್ತುವ ಕ್ರೀಡೆಗೆ ಅತ್ಯಗತ್ಯ. ಇಂತಹ ಕ್ರೀಡೆಯಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆ ಉಷಾ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಗುರುತಿಸಲ್ಪಡುತ್ತಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬನ್ನೂರು ಗ್ರಾಮದ ಕೃಷಿಕ ದಂಪತಿ ನಟೇಶ್ ಕುಮಾರ್ ಮತ್ತು ವನಜಾಕ್ಷಿಯವರ ಪುತ್ರಿ ಉಷಾ, ಪೋಷಕರ ಪ್ರೋತ್ಸಾಹದಿಂದ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಶಾಲಾ ಕಾಲೇಜಿನಲ್ಲಿ ದೈಹಿಕ ಶಿಕ್ಷಕರ ಮಾರ್ಗದರ್ಶನ ಅವರನ್ನು ವೇಟ್ ಲಿಫ್ಟಿಂಗ್‌ನತ್ತ ಸೆಳೆಯಿತು. ಮೊದಲಿಗೆ 2013ರಿಂದ ರಾಜ್ಯಮಟ್ಟದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಉಷಾ ಸತತವಾಗಿ 3 ವರ್ಷ ಹ್ಯಾಟ್ರಿಕ್ ಗೆಲುವು ಪಡೆದು, 2 ಚಿನ್ನದ ಪದಕ, 1 ಬೆಳ್ಳಿ ಪದಕ ಗಳಿಸಿದರು.
2018ರವರೆಗೂ ಇವರ ಚಿನ್ನದ ಬೇಟೆ ಮುಂದುವರೆದಿತ್ತು. 2017ರಲ್ಲಿ ಚಂಡಿಗಢದಲ್ಲಿ ನಡೆದ ಅಂತಾರಾಜ್ಯ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಪಡೆದ ಚಿನ್ನದ ಪದಕ ಇವರ ಕ್ರೀಡಾ ಬದುಕಿಗೆ ರಹದಾರಿಯಂತಿತ್ತು. ನಂತರ ರಾಷ್ಟ್ರೀಯ ಮಟ್ಟದಲ್ಲಿ 2018ರಿಂದ 2023ರವರೆಗೆ ಜರುಗಿದ ವೇಟ್ ಲಿಫ್ಟಿಂಗ್ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಗ್ರಸ್ಥಾನ ಪಡೆದಿದ್ದಾರೆ. 2022ರಲ್ಲಿ ಸಿಂಗಾಪುರದಲ್ಲಿ ಜರುಗಿದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಮೊದಲ ಚಿನ್ನದ ಪದಕವಾಗಿತ್ತು. 2022ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಉಷಾ ಯುವಜನರ ಸ್ಪೂರ್ತಿಯಾಗಿದ್ದಾರೆ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಎಂ.ಕೆ.ಆಶಾ: ನಮ್ಮ ದೇಶದ ಹಿರಿಯ ಅಥ್ಲೀಟ್ ಆಗಿ ಹೆಸರು ಮಾಡಿದವರು. ಹಾಸನ ಜಿಲ್ಲೆಯ ಎಂ.ಕೆ.ಆಶಾ. 400 ಮೀಟರ್ ಹರ್ಡಲ್ಸ್ ಮತ್ತು ರಿಲೇ ಓಟಗಾರ್ತಿಯಾಗಿದ್ದರು. 1999ರಲ್ಲಿ ಸ್ಪೇನ್ ದೇಶದಲ್ಲಿ ಜರುಗಿದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸ್ಪರ್ಧೆಯಲ್ಲಿ ನಮ್ಮ ದೇಶದ ಹೆಸರಾಂತ ಕ್ರೀಡಾಪಟುಗಳಾಗಿದ್ದ ಬೀನಾಮೋಳ್, ರೋಸಾಕುಟ್ಟಿ ಮತ್ತು ಜಿನ್ಸಿಫಿಲಿಪ್ ಅವರನ್ನೊಳಗೊಂಡ ಭಾರತೀಯ ಮಹಿಳಾ 4x400 ಮೀಟರ್ ರಿಲೇ ತಂಡದ ಸದಸ್ಯರಾಗಿದ್ದರು. ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕೆ.ಎನ್.ಮಧುರ: ಹಾಸನ ತಾಲೂಕಿನ ಕೊಂಡಜ್ಜಿ ಗ್ರಾಮದ ಕುಟುಂಬದಿಂದ ಬಂದ ಕೆ.ಎನ್.ಮಧುರಾ ವಿಶ್ವಕುಸ್ತಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹಾಸನದ ಎವಿಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ದಿನಗಳಿಂದಲೇ ಕುಸ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅವರು ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟದಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗಳಿಸಿದ್ದಾರೆ. 14 ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಎಲ್ಲ ಪಂದ್ಯಗಳಲ್ಲಿಯೂ ಚಿನ್ನ ಗಳಿಸಿದ ಹೆಗ್ಗಳಿಕೆ ಇವರದ್ದು. 2018ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸಹ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಸಿಂಚನಾ: ಹಾಸನ ನಗರದ ಸಿಂಚನಾ, ಕಿರಿಯ ವಯಸ್ಸಿನಲ್ಲಿಯೇ ಪವರ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಹನಮಂತೇಗೌಡರ ಪುತ್ರಿ ಸಿಂಚನಾ. ಡೆಹ್ರಾಡೂನ್‌ನಲ್ಲಿ ನಡೆದ ಏಷ್ಯನ್ ಸಬ್ ಜ್ಯೂನಿಯರ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಇವರಲ್ಲದೇ- ದಶಕಗಳ ಹಿಂದೆಯೇ ಥ್ರೋಬಾಲ್‌ನಲ್ಲಿ ಸಾಧನೆ ಮಾಡಿರುವ 55ರ ಹರೆಯದ ಕೆ.ಎಸ್.ನಿರ್ಮಲಾ ವಿ.ದೇವ್, ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪ್ರಥಮ ಬಹುಮಾನ ಪಡೆದಿದ್ದರು. ನಿರ್ಮಲಾ ಅವರ ಪುತ್ರಿ 29ರ ಹರೆಯದ ಡಾ.ಚಾತುರ್ಯ ವಿ.ದೇವ್, ತಿರುವನಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 58ರ ಹರೆಯದ ಸುಮ ಎಚ್.ಎನ್. ಎಲ್‌ಐಸಿ ಉದ್ಯೋಗಿಯಾಗಿದ್ದು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಮೂರು ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. 33ರ ಹರೆಯದ ಭೂಮಿಕ ಡಿ.ಎನ್. ಡಾಡ್ಜ್ ಬಾಲ್‌ನಲ್ಲಿ ಎರಡು ಬಾರಿ ಇಂಡಿಯಾ ತಂಡವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಈಗ 55ರ ಹರೆಯದ ಎಚ್.ಎನ್.ಭಾರತಿ, ಜಿಮ್ನಾಸ್ಟಿಕ್‌ನಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಹಾಗೇ ಎಲ್‌ಐಸಿಯ ಉದ್ಯೋಗಿಗಳಾದ ಕೆ.ಎಲ್.ಜ್ಯೋತಿಯವರು ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಐದು ಬಾರಿ ರಾಷ್ಟ್ರೀಯ ಪದಕ ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಪಟ್ಟಿ ಹೀಗೇ ಇನ್ನೂ ಬೆಳೆಯುತ್ತಾ ಹೋಗುತ್ತದೆ…
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಈ ಬರಹದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ, ಹಾಸನ ಜಿಲ್ಲೆಯ ಕೆಲ ಮಹಿಳಾ ಕ್ರೀಡಾಪಟುಗಳನ್ನು ಮಾತ್ರ ಪರಿಚಯಿಸುವ ಕಿರು ಪ್ರಯತ್ನ ಮಾಡಲಾಗಿದೆ. ಲಭ್ಯವಿರುವ ಮಾಹಿತಿಗಳನ್ನಷ್ಟೆ ಇಲ್ಲಿ ತರಲಾಗಿದೆ. ಹಾಸನ ಜಿಲ್ಲೆಯಾದ್ಯಂತ ಕ್ರೀಡಾಲೋಕದ ವಿವಿಧ ಕ್ಷೇತ್ರಗಳಲ್ಲಿ ಇಂತಹ ಹತ್ತು ಹಲವು ನಕ್ಷತ್ರಗಳು ತಮ್ಮ ಪ್ರತಿಭೆಯಿಂದ ಮಿಂಚುತ್ತಿವೆ. ಮುಂದೆ ಉನ್ನತವಾದುದನ್ನು ಸಾಧಿಸುವ ಭರವಸೆಯನ್ನು ನೀಡಿವೆ. ಕೆಲವು ಪ್ರತಿಭೆಗಳು ಸರಿಯಾದ ಪ್ರೋತ್ಸಾಹ, ಅನುಕೂಲ ದೊರಕದೇ ಅಲ್ಲಿಯೇ ಕಮರುತ್ತಿವೆ, ಮುರುಟಿಹೋಗುತ್ತಿವೆ. ಹೀಗಾಗದಂತೆ ನೋಡಿಕೊಳ್ಳಬೇಕಾದ್ದು ಸಮಾಜದ ಹೊಣೆ. ನಮ್ಮ ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ಸಮರ್ಪಕವಾದ ಕಲಿಯುವ ವಾತಾವರಣ, ಅವಕಾಶ, ಪ್ರೋತ್ಸಾಹ, ಕ್ರೀಡಾ ಸಾಮಗ್ರಿಗಳು… ಸರಿಯಾದ ಸಮಯದಲ್ಲಿ ದೊರಕಿದರೆ ನಿಜಕ್ಕೂ ಉತ್ತಮ ಸಾಧನೆ ಮಾಡಬಲ್ಲರು. ಎಲ್ಲರ ಚಿತ್ತ ಇತ್ತ ಹರಿಯಲೆಂದು ಹಾರೈಸೋಣ.
-ಅರಕಲಗೂಡು ಜಯಕುಮಾರ್




