ಜಂತರ್‌ ಮಂತರ್‌ ಜೆನ್‌ ಝಿ ಆಂದೋಲನ | ಪ್ರತಿಭಟನೆಯ ಸಂಭ್ರಮ; ಮರೆಯಲಾರದ ಅನುಭವ

Date:

ಪ್ರತಿಭಟನೆಯಲ್ಲಿ 15ರಿಂದ 20 ಆಜುಬಾಜಿನ ವಯಸ್ಸಿನ ಹುಡುಗ ಹುಡುಗಿಯರೇ ಹೆಚ್ಚು ಇದ್ದರು. ನಗರ, ಪಟ್ಟಣದಿಂದ ಬಂದ ಸ್ಥಿತಿವಂತ ಯುವಕ ಯುವತಿಯರು, ದಿಲ್ಲಿಗೆ ಹಳ್ಳಿಯಿಂದ ಬಂದ ಮಧ್ಯಮ ವರ್ಗದವರು, ಬಡವರು ಇದ್ದರು. ನಾನು ಮಾತನಾಡಿಸಿದ್ದವರಲ್ಲಿ ಹೆಚ್ಚಿನವರು ದೆಹಲಿ ಮತ್ತು ಸುತ್ತಮುತ್ತ ಪ್ರದೇಶದವರು. ಉತ್ತರಪ್ರದೇಶ, ಬಿಹಾರ, ಅಸ್ಸಾಂ, ಮಣಿಪುರ, ಪ. ಬಂಗಾಳ, ರಾಜಸ್ಥಾನದಿಂದಲೂ ಬಂದಿದ್ದರು. ಸಂಜೆ ಹೊತ್ತಿಗೆ ದೆಹಲಿ ನಿವಾಸಿಗಳಾದ ಯುವಕರು ಕೆಲಸ ಮುಗಿಸಿ ಬರುತ್ತಿದ್ದರು.

- Advertisement -

Be Political..
It is the right of every youth to be political

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಜಂತರ್‌ ಮಂತರ್‌ ಪ್ರತಿಭಟನಾ ಸ್ಥಳದಲ್ಲಿ ನವ ಯುವಕರ ಹಲವು ಸೃಜನಶೀಲ ಪೋಸ್ಟರ್‌ ಗಳ ನಡುವೆ, ಪ್ರತಿಭಟನಾ ನಿರತ ವಿದ್ಯಾರ್ಥಿನಿಯೊಬ್ಬಳು ಹಿಡಿದ ಈ ಪೋಸ್ಟರ್‌ ನನ್ನ ಗಮನ ಸೆಳೆಯಿತು. ವಿದ್ಯಾರ್ಥಿನಿಯನ್ನು “ಸ್ವಲ್ಪ ವಿವರಿಸಿ” ಎಂದು ಕೇಳಿದೆ. “ಇಟ್ಸ್‌ ಸಿಂಪಲ್… ಜನರು ಸಾಮಾನ್ಯವಾಗಿ ರಾಜಕೀಯ ಎಂಬ ಪದ ಕೇಳಿದರೆ ಸಾಕು ಹೇಸಿಕೊಂಡು ದೂರ ಸರಿಯುತ್ತಾರೆ. ಆದರೆ, ನಾವು ಉಡುವ ದಿರಿಸು, ಉಣ್ಣುವ ಆಹಾರ ಸೇರಿದಂತೆ ನಾವಾಡುವ ಮಾತು ಎಲ್ಲವನ್ನೂ ಆಳುವ ರಾಜಕೀಯ ಶಕ್ತಿ ನಿಯಂತ್ರಿಸಲು ಯತ್ನಿಸುತ್ತಿರುವಾಗ, ರಾಜಕೀಯದಿಂದ ದೂರ ಎನ್ನುವ ಮಾತಿಗೆ ಏನರ್ಥ? ಎಷ್ಟು ಸರಿ? ಹೊಟೇಲಿನಲ್ಲಿ ತಿನ್ನುವ ಫುಟ್‌ ಪಾತ್‌ ವಾಸಿಯೂ ತೆರಿಗೆ ಕಟ್ಟುತ್ತಾನೆ. ಅವನು ಕೂಡ ರಾಜಕೀಯದಲ್ಲಿದ್ದಾನೆ. ಅಲ್ಲವೇ?” ಎಂದಳು. ಹನ್ನೆರಡನೇ ತರಗತಿಯ ವಿದ್ಯಾರ್ಥಿನಿಯಲ್ಲಿ ಇಂತಹ ಪ್ರಬುದ್ಧತೆ ಎಲ್ಲಿಂದ ಬಂತು ಎನ್ನಿಸಿತು. ಇಂತಹ ಅನೇಕ ಹೊಸ ಅನುಭವಗಳು ಜಂತರ್‌ ಮಂತರ್‌ ಸೈಟಿನಲ್ಲಿ ಆದವು. ಅವು ಮರೆಯಲಾರದಂತವು.

ಪ್ರತಿಭಟನೆಯಲ್ಲಿ ಹದಿನೈದರಿಂದ ಹಿಡಿದು ಇಪ್ಪತ್ತು ಆಜುಬಾಜಿನ ವಯಸ್ಸಿನ ಹುಡುಗ ಹುಡುಗಿಯರೇ ಹೆಚ್ಚು ಇದ್ದದ್ದು. ನಗರ, ಪಟ್ಟಣದಿಂದ ಬಂದ ಸ್ಥಿತಿವಂತ ಯುವಕ ಯುವತಿಯರು ಅಲ್ಲದೆ ದಿಲ್ಲಿಗೆ ಮೂಲೆ ಹಳ್ಳಿಯಿಂದ ಬಂದ ಮಧ್ಯಮ ವರ್ಗದವರು, ಬಡವರು ಇದ್ದರು. ನಾನು ಮಾತನಾಡಿಸಿದ್ದವರಲ್ಲಿ ಹೆಚ್ಚಿನವರು ದೆಹಲಿ ಮತ್ತು ಸುತ್ತಮುತ್ತ ಪ್ರದೇಶದವರು. ಉತ್ತರಪ್ರದೇಶ, ಬಿಹಾರ, ಅಸ್ಸಾಂ, ಮಣಿಪುರ, ಪ. ಬಂಗಾಳ, ರಾಜಸ್ಥಾನದಿಂದಲೂ ಬಂದಿದ್ದರು. ಸಂಜೆ ಹೊತ್ತಿಗೆ ದೆಹಲಿ ನಿವಾಸಿಗಳಾದ ಯುವಕರು ಕೆಲಸ ಮುಗಿಸಿ ಬರುತ್ತಿದ್ದರು. ದೂರದ ರಾಜ್ಯಗಳಿಂದ ಬಂದವರಲ್ಲಿ, ಕೆಲವರು ಅಪ್ಪ ಅಮ್ಮನ ಒಪ್ಪಿಗೆಯೊಂದಿಗೆ ಬಂದಿದ್ದರೆ, ಇನ್ನೂ ಕೆಲವರು ಬಿಜೆಪಿ, ಮೋದಿ ಅಭಿಮಾನದ ಪೋಷಕರನ್ನೇ ಧಿಕ್ಕರಿಸಿ ಬಂದಿದ್ದರು. ಈ ಎರಡು ಗುಂಪಿಗಿಂತ ವ್ಯತಿರಿಕ್ತವಾಗಿ, ಅಪ್ಪ ಅಮ್ಮಂದಿರು ದೂರದ ದೆಹಲಿಗೆ ಅದೂ ಪ್ರತಿಭಟನೆಗಾಗಿ ಎಂದರೆ ನಿರಾಕರಿಸುತ್ತಾರೆಂದು ಮನೆಗೆ ಹೇಳದೆ ಹಲವರು ಬಂದಿದ್ದರು. ನನಗೆ ಗಾಬರಿಯಾಗಿ ಒಬ್ಬಾತನನ್ನು “ಮನೆಯಲ್ಲಿ ಹುಡುಕುತ್ತ ಕಳವಳಗೊಳ್ಳುವುದಿಲ್ಲವೇ?” ಅಂದರೆ, “ಸಾರ್…ಇದು ನಮ್ಮಂಥ ಯುವಕರ ಭವಿಷ್ಯದ ಪ್ರಶ್ನೆ. ಮನೇಲಿದ್ದರೆ ಹೇಗೆ?” ಅಂದರು.

1 74

ಸೊ ಕಾಲ್ಡ್‌ ಜಿರಳೆಗಳ(?) ಈ ವಿದ್ಯಾರ್ಥಿ ಆಂದೋಲನವು ಆರಂಭದಿಂದಲೂ ಅಚ್ಚರಿ, ಆಕಸ್ಮಿಕ, ಗತ್ಯಂತರವಿಲ್ಲದೆ ಹಿಡಿದ ಹೋರಾಟ ಹಾದಿಯಾಗಿ ತೋರುತ್ತದೆ. ಆ ದಿನ ಸುಪ್ರೀಮ್‌ ಕೋರ್ಟಿನ ಮುಖ್ಯ ನ್ಯಾಯಾಧೀಶರು ಏನನ್ನು ಮನದಲ್ಲಿಟ್ಟು “ನಿರುದ್ಯೋಗಿ ಯುವಕರು ಜಿರಳೆಗಳು, ಪರಾವಲಂಬಿಗಳಂತೆ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ!” ಎಂದು ಹೇಳಿದರೊ ಗೊತ್ತಿಲ್ಲ? ಅಭಿಜಿತ್‌ ದೀಪ್ಕೆ ಸಾಗರದಾಚೆಯ ಅಮೆರಿಕದಲ್ಲಿ ಕುಳಿತ ಯುವಕ “ಕೆಟ್ಟ ರಾಜಕಾರಣಿಗಳು ದೇಶವನ್ನು ಚರಂಡಿ ಮಾಡಿದ್ದಾರೆ. ಅಲ್ಲಿ ಜಿರಳೆಗಳು ಹುಟ್ಟದೆ ಬೇರೇನು ಹುಟ್ಟಲು ಸಾಧ್ಯ? ಬನ್ನಿ ಜಿರಳೆಗಳೇ…ಎಲ್ಲರೂ ಒಂದೆಡೆ ಸೇರೋಣ” ಎಂದು ವಿಡಂಬನೆಯಾಗಿ ಟ್ವೀಟ್‌ ಮಾಡಿದ್ದಷ್ಟೇ! ನಂತರ ಅದಕ್ಕೆ ಸಿಕ್ಕ ಯುವಕರ ಸ್ಪಂದನೆ ಮತ್ತು ಅಸಂಘಟಿತ ಹೋರಾಟಕ್ಕೆ ಸಿಕ್ಕ ಚಾಲನೆಯು ಯಾವ ಸಮಾಜ ಶಾಸ್ತ್ರಜ್ಞರ ಊಹೆಗೂ ನಿಲುಕಲಾರದ್ದು. ಅದೇ ಕಾರಣಕ್ಕೆ ಕಾಕ್ರೋಚ್‌ ಜನತಾ ಪಾರ್ಟಿಯ ಜನ್ಮ ತಾಳಿ, ಆನ್‌ ಲೈನ್‌ ಯಿಂದ ಆಫ್‌ ಲೈನ್‌ – ಬೀದಿ ಹೋರಾಟಕ್ಕೆ ಇಳಿದದ್ದು ಈಗ ಇತಿಹಾಸ.

ಮೊದಲಿಂದ ಈ ವಿದ್ಯಾರ್ಥಿ ಪ್ರತಿಭಟನೆಯ ಮಜಲುಗಳನ್ನು ಗಮನಿಸುತ್ತ ಬಂದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗುಮಾನಿ, ನಿರ್ಲಕ್ಷತೆಯನ್ನು ದಾಖಲಿಸಿದ್ದರು. ಅದಕ್ಕೆ ಅವರು ಕೊಡುತ್ತಿದ್ದ ಮುಖ್ಯ ಕಾರಣ – ದಶಕಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ಜಂತರ್‌ ಮಂತರ್‌ ನಲ್ಲೇ ನಡೆದ ಅಣ್ಣಾ ಹಜಾರೆ ಉಪವಾಸ ನಿರಶನದ ಗೆಲುವಿನ ಸೋಲು. ಆ ಹೋರಾಟ ಫಲ ಕೊಟ್ಟಿತ್ತು. ಆ ಫಲವನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುಮಂದಿ ಲಜ್ಜೆ ಇಲ್ಲದೆ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಹಿಡಿದು ಚಪ್ಪರಿಸಿದ್ದರು.

ಆ ಕಹಿ ಅನುಭವ ಈಗಲೂ ನೆನಪಲ್ಲಿ ಹಸಿಯಾಗಿರುವಾಗ, ಈ ವಿದ್ಯಾರ್ಥಿ ಹೋರಾಟವು ಕೂಡ ಆಮ್‌ ಆದ್ಮಿ ಪಾರ್ಟಿ ಅಥವಾ ಆಳುವ ಬಿಜೆಪಿ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿರಬಹುದು ಎಂದು ಗುಮಾನಿ ಪಟ್ಟಿದ್ದರು; ಅದು ಸಹಜ. ಆದರೆ – ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮನೆಮನೆಗಳಲ್ಲಿಯೂ, ಮೋದಿ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವವರನ್ನೇ ಪ್ರಶ್ನಿಸುವ ವಾತಾವರಣ ನಿರ್ಮಾಣವಾಗಿ ದಶಕಗಳಾಯಿತು. ಎತ್ತಿದ ಪ್ರಶ್ನೆಗಳು ಕ್ರೋಢೀಕರಣಗೊಂಡು ಜನಾಭಿಪ್ರಾಯ ರೂಪಿತವಾಗದಂತೆ, ಜನಗಳೇ ವಿಷಯಾಂತರ ಮಾಡಿ ಧ್ವಂಸ ಮಾಡುತ್ತಿರುವ ದುರಿತಕಾಲದಲ್ಲಿ, ಜೆನ್‌ ಜಿ ಯುವಕರು ಆಳುವ ಸರ್ಕಾರವನ್ನು ಎದುರು ಹಾಕಿಕೊಳ್ಳಲು ಅಂಜದೆ ಆಂದೋಲನಕ್ಕೆ ಸ್ಪಂದಿಸುತ್ತಿರುವುದು ಮತ್ತು ಪ್ರತಿರೋಧದ ಎಲ್ಲಾ ದಾರಿಗಳು ಮುಚ್ಚಿವೆ ಎನ್ನುವ ಹೊತ್ತಲ್ಲಿ ಈ ದೇಶದ ಭವಿಷ್ಯಕ್ಕೊಂದು ಭರವಸೆ ಮೂಡುತ್ತಿದೆ ಎನಿಸಿತು.

ವಿದ್ಯಾರ್ಥಿ ಆಂದೋಲನ ಯಶ್ವಸಿಯಾಗುತ್ತದೋ? ಇಲ್ಲವೋ? ಅದರ ಚರ್ಚೆಯೇ ಅಪ್ರಸ್ತುತ ಅನಿಸಿತು. ಸಾಮಾನ್ಯವಾಗಿ ಜೆನ್‌ ಜಿಗಳು ತಮ್ಮದೇ ಲೋಕದಲ್ಲಿ ಕಂಫರ್ಟ್‌ ಆಗಿರುತ್ತಾರೆ. ಮೊಬೈಲ್‌ ನೋಡುತ್ತ ಕೂರುವ ಅವರ ಏಕಾಂತದಲ್ಲಿ ಲೋಕಾಂತಕ್ಕೆ ಪ್ರವೇಶವಿರದು ಎಂಬುದು ತಪ್ಪು ಗ್ರಹಿಕೆಯೆಂದು ಅವರ ನಡೆ ಸಾಬೀತು ಮಾಡುತ್ತಿತ್ತು.

ಜೂನ್‌ 20 ರಂದು ರಾಜಧಾನಿ ದೆಹಲಿಯ ಜಂತರ್‌ ಮಂತರ್‌ ಸೈಟಿನಲ್ಲಿ ಪ್ರಾರಂಭವಾದ ಜೆನ್‌ ಜಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ತಿರಸ್ಕಾರದ ಕಡೆಗಣ್ಣು ಬೀರಿದಾಗ, ಉಪವಾಸ ನಿರಶನ ಕೂತ ಸೋನಮ್‌ ವಾಂಗ್ಚುಕ್‌ ಅವರು ಜುಲೈ 20 ರಂದು ಸಂಸತ್‌ ಚಲೋ ಪ್ರತಿಭಟನಾ ರ್ಯಾಲಿಗೆ ಸಾರ್ವಜನಿಕ ಕರೆ ನೀಡಿದ್ದರು. ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸುತ್ತ ಕೂತ ಅವರ ಉಪವಾಸ ನಿರಶನ ಅದಾಗಲೇ ಹದಿನೆಂಟು ದಿನಗಳು ಕಳೆದಿತ್ತು. ಆರೋಗ್ಯ ದಿನೇ ದಿನೇ ಕ್ಷೀಣಿಸಿ, ಜೀವಕ್ಕೆ ಕುತ್ತಾಗುವ ಎಲ್ಲಾ ಸೂಚನೆ ಇದ್ದವು.

ಇದೇ ಕಾರಣವಾಗಿ – ಜಂತರ್‌ ಮಂತರ್‌ ನಲ್ಲಿಯೇ ಮನಸ್ಸು ನೆ̧ಟ್ಟು ಆತಂಕದಿಂದ ಮನೆಯಲ್ಲಿ ಚಡಪಡಿಸುವುದರ ಬದಲು ಅಲ್ಲಿಗೆ ಹೋಗುವುದೇ ಸರಿಯೆನಿಸಿತು. ಕಳೆದ ವರ್ಷ ಬಾಪು ಹುಟ್ಟುದಿನದಂದು ಸಹಪಾಠಿ ಗೆಳೆಯನನ್ನು ವರಿಸಿದ ಜೆನ್‌ ಜಿ ಮಗಳಿಗೆ ದೆಹಲಿಗೆ ಹೋಗುವ ನಿರ್ಧಾರ ತಿಳಿಸಿದೆ. “ಕೆಲಸದ ಒತ್ತಡದಲ್ಲಿ ನಾವಂತೂ ಹೋಗಲು ಸಾಧ್ಯವಾಗುತ್ತಿಲ್ಲ. ನೀನು ಮೊದಲು ಹೊರಡು. ಇಲ್ಲದಿದ್ದರೆ ನಾವುಗಳು ಜೀವನವಿಡೀ ಪಾಪಪ್ರಜ್ಞೆಯಿಂದ ನರಳಬೇಕಾದೀತು” ಅಂದಳು. ಅವಳು ಹೇಳಿದ ಮಾತು ನನ್ನನ್ನು ಭಾವುಕಗೊಳಿಸಿತು. ಮಗಳು -ಅಳಿಯ ಇಬ್ಬರೂ ವಿಮಾನಯಾನಕ್ಕೆ ಟಿಕೇಟು ತೆಗೆದು ಬೀಳ್ಕೊಟ್ಟರು. ಬೆಂಗಳೂರಿನಿಂದ ದೆಹಲಿಗೆ ಹೊರಟಾಗಲೇ, ಸೊನಮ್‌ ವಾಂಗ್ಚುಕ್‌ ಅವರನ್ನು ಪ್ರೊಟೆಸ್ಟ್‌ ಸೈಟಿನಿಂದ, ಸಿವಿಲ್‌ ಡ್ರೆಸ್ಸಿನಲ್ಲಿದ್ದ ಪೊಲೀಸರು (?) ನಿಶ್ಯಕ್ತರಾಗಿದ್ದರೂ ಅನುಕಂಪ ತೋರದೆ, ಸ್ಟ್ರೆಚರ್‌ ಇಲ್ಲದೆ ಬೆಡ್‌ ಶೀಟಲ್ಲಿ ಸುತ್ತಿಕೊಂಡು ಹೊತ್ತೊಯ್ದ ಸುದ್ದಿ ಸಿಟ್ಟು, ನೋವನ್ನು ತಂದಿತ್ತು.

ಜುಲೈ 18ರ ರಾತ್ರಿ ಎಂಟರ ಹೊತ್ತಿಗೆ ಇಂದಿರಾಗಾಂಧಿ ಏರ್‌ ಪೋರ್ಟಿಂದ ಪಹರ್‌ಗಂಜ್‌ ಪ್ರದೇಶದ ಚೂನಾಮಂಡಿಯಲ್ಲಿದ್ದ ಹೊಟೇಲಿಗೆ ಬಂದೆ. ಬೆಂಗಳೂರಿನ ಅವಿನ್ಯೂ ರಸ್ತೆ, ಬಳೇಪೇಟೆ, ಚಿಕ್ಕಪೇಟೆಯಂತಹ ಗಲ್ಲಿಗಳ ಆ ಜಾಗ ಧೂಳುಮಯ. ಇಡೀ ಮೈ ಬೆವರಿನ ಸ್ನಾನ. ಬೆಂಗಳೂರಿನ ತಂಪು ವಾತಾವರಣದಲ್ಲಿ ಬೆಳೆದವರಿಗೆ ದೆಹಲಿ ಬಿಸಿಲಿನ ಧಗೆ ಹಿಮ್ಮೆಟ್ಟಿಸುವಂತಾದ್ದು. ಇಲ್ಲಿಗೆ ಬಂದ ಕೂಡಲೇ ಜಂತರ್‌ ಮಂತರ್‌ ಗೆ ಹೋಗಬೇಕೆಂದು ಕೊಂಡವನಿಗೆ ಆಯಾಸದಿಂದ ಸಾಧ್ಯವಾಗಲಿಲ್ಲ.

protest

́ಸಂಸತ್‌ ಚಲೋ ಪ್ರತಿಭಟನೆಯ ಹಿಂದಿನ ದಿನ ಅಂದರೆ ಜುಲೈ 19ರಂದು, ಸಂಸತ್‌ ಮಾರ್ಗ್‌ ನಲ್ಲಿರುವ ಪಟೇಲ್‌ ಚೌಕ್‌ ದಾಟಿ ಆಟೊದಲ್ಲಿ ಬರುವಾಗ, ನೂರಾರು ಸಂಖ್ಯೆಯಲ್ಲಿ ಯುವಕರು ಉತ್ಸಾಹದಿಂದ ದಾಪುಗಾಲು ಹಾಕುತ್ತ, ಧಿಕ್ಕಾರದ ಘೋಷಣೆ ಕೂಗುತ್ತ ಜಂತರ್‌ ಮಂತರ್‌ ಕಡೆಗೆ ಹೊರಟಿದ್ದರು.

ವಾಂಗ್ಚುಕ್‌ ಅವರನ್ನು ಪ್ರತಿಭಟನಾ ಸ್ಥಳದಿಂದ ಎತ್ತಂಗಡಿ ಮಾಡಿದ್ದ ನೋವು, ಸಿಟ್ಟು ವಿದ್ಯಾರ್ಥಿಗಳ ಆ ಆಕ್ರೋಶದ ಕೂಗಲ್ಲಿ ವ್ಯಕ್ತವಾಗುತ್ತಿತ್ತು.

ಪ್ರತಿಭಟನಾ ಸ್ಥಳದ ಅನತಿ ದೂರದಲ್ಲಿಯೇ, ಕೇಂದ್ರ ಗೃಹ ಮಂತ್ರಾಲಯ, ನವದೆಹಲಿ ಪಾಲಿಕಾ ಕೇಂದ್ರ, ಎಸ್‌ ಬಿ ಎಮ್‌ ಬ್ಯಾಂಕಿನ ಕಟ್ಟಡ ಇರುವ ಜೈ ಸಿಂಗ್‌ ಮಾರ್ಗ್,‌ ಸಂಸತ್‌ ಮಾರ್ಗ್‌ ಕೂಡು ರಸ್ತೆಯಲ್ಲಿನ ಟಾಲ್‌ ಸ್ಟಾಯ್‌ ಮಾರ್ಗ್‌ಗೆ ಬ್ಯಾರಿಕೇಡ್‌ ಗಳನ್ನು ಹಾಕಿ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಅಲ್ಲಿಂದ ಪ್ರೊಟೆಸ್ಟ್‌ ಸೈಟಿಗೆ ನಡೆದೇ ಹೋಗಬೇಕಿತ್ತು. ಎಲ್ಲಿ ನೋಡಿದರಲ್ಲಿ ದೆಹಲಿ ಪೊಲೀಸರು, ಆರ್‌ಎಎಫ್‌, ಸಿಆರ್‌ಪಿಎಫ್‌ ತುಕಡಿಗಳು ಲಾಠಿ ಹಿಡಿದು ಜಂತರ್‌ ಮಂತರ್‌ ಸೈಟಿನವರೆಗೂ ಅಧಿಕ ಸಂಖ್ಯೆಯಲ್ಲಿ ಕಂಡರು. ಕಡೆಗೂ ಜಂತರ್‌ ಮಂತರ್ ಪ್ರತಿಭಟನಾ ಸ್ಥಳ ಕಂಡಾಗ ಎಂತದೋ ನಿರಾಳತೆ.

ಸೈಟಿನ ಪ್ರವೇಶದಲ್ಲಿ ಪೊಲೀಸ್‌ ಬಂದೋಬಸ್ತು ಮತ್ತೂ ಜೋರಾಗಿತ್ತು. ಮೆಟಲ್‌ ಡಿಟೆಕ್ಟರ್‌ ಹಾದು ಒಳ ಹೋಗುವ ಮೊದಲು ಬ್ಯಾಗ್‌ ಪ್ಯಾಕ್‌, ಕೈಚೀಲಗಳ ಸ್ಕ್ಯಾನಿಂಗ್‌ ಮಾಡಿ, ಚೆಕ್ಕಿಂಗ್‌ ಸ್ಟಿಕ್ಟರನ್ನು ಬ್ಯಾಗಿಗೆ ಅಂಟಿಸುತ್ತಿದ್ದರು. ಪ್ಯಾಂಟು ಶರಟಿನ ಜೇಬಿನ ತಪಾಸಣೆ ಇಲ್ಲದೆ ಒಳಗೆ ಯಾರನ್ನೂ ಬಿಡುತ್ತಿರಲಿಲ್ಲ. ನಿರಂತರವಾಗಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಚೆಕ್‌ ಮಾಡುತ್ತ, ಆ ಬಿಸಿಲಿನ ಧಗೆಗೆ ಅವರೂ ಬಸವಳಿಯುತ್ತಿದ್ದರು.

ಒಳ ಹೋದಾಗ ಟೀವಿಯಲ್ಲಿ ನೋಡಿದಂತೆ, ವೇದಿಕೆಯ ಮುಂದೆ ಇಪ್ಪತ್ತು ಮೂವತ್ತು ಅಡಿ ಅಂತರದಲ್ಲಿ ಹಾಕಿದ್ದ ಬ್ಯಾರಿಕೇಡ್‌ ವರೆಗೂ ಹೋಗಬಹುದಾಗಿದ್ದರೂ, ಈಗ ಅದರ ಸಮೀಪಕ್ಕೆ ಹೋಗಲಾರದಷ್ಟು ವಿದ್ಯಾರ್ಥಿಗಳು ನೆರೆದಿದ್ದರು. ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕೋರಿ, ಮೋದಿ ಸರ್ಕಾರ ಶಿಕ್ಷಣ ನೀತಿ ವಿರುದ್ಧ ಹಲವು ಬಗೆಯ ಘೋಷಣೆಗಳು ಮೊಳಗುತ್ತಿದ್ದವು. ಜೊತೆಜೊತೆಗೆ ʼಇಂಕ್ವಿಲಾಬ್‌ ಜಿಂದಾಬಾದ್‌ʼ ʼಜೈ ಭೀಮ್‌ ಜೈ ಭೀಮ್‌ʼ ʼವಂದೇ ಮಾತರಮ್‌ʼ ʼಭಾರತ್‌ ಮಾತಾಕೀ…ಜೈʼ ಎಂಬ ಜಯಕಾರಗಳು ಇದ್ದವು.

ಗುಂಪುಗುಂಪಾಗಿ ಕೂತ ವಿದ್ಯಾರ್ಥಿಗಳು ಪ್ರತಿರೋಧದ ಹಾಡುಗಳನ್ನು ಹಾಡುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭಟನೆಯ ಸಂಭ್ರಮಕ್ಕೆ ಬಿಸಿಲಿನ ಬೆಂಕಿಯ ಬೇಗೆ ದಣಿದಿತ್ತು. ವ್ಯವಸ್ಥೆಯ ಮೇಲಿನ ಸಿಟ್ಟು, ಕೋಪ, ಹತಾಶೆ, ನಿಟ್ಟುಸಿರು ಜಂತರ್‌ ಮಂತರ್‌ ಪ್ರತಿಭಟನಾ ಸೈಟಿನಲ್ಲಿ ವಾತಾವರಣದಲ್ಲಿ ಮಿಳಿತವಾಗಿತ್ತು. ಅವು ಸೃಜನಶೀಲ ಪೋಸ್ಟರ್‌ ಬರಹಗಳಲ್ಲಿ ಅಭಿವ್ಯಕ್ತವಾಗುತ್ತಿತ್ತು. ಕೇವಲ ತಲೆಯ ಮೇಲೊಂದು ಟಾರಪಾಲಿನ ಹೊದಿಕೆ ಇದ್ದ ಟೆಂಟ್‌ ಗಳಲ್ಲಿ ASIA ವಿದ್ಯಾರ್ಥಿಗಳನ್ನು ಸೇರಿದಂತೆ ಹಲವು ಸಂಘಟನೆಗಳು, ಅಸಂಘಟಿತ ವಿದ್ಯಾರ್ಥಿಗಳು ಉಪವಾಸ ಕೂತಿದ್ದರು.

ಸಂಜೆಯಾಗಿ ರಾತ್ರಿಯಾಗುತ್ತಿದ್ದಂತೆ, ಅದೂ ನಡುರಾತ್ರಿಯ ವರೆಗೂ ಜನರು ಬರುತ್ತಲೇ ಇದ್ದರು. ಆ ಸೈಟಿನಲ್ಲಿ ಕಾಲು ಇರಿಸಲು ಜಾಗವಿಲ್ಲದಾಗಿ ಸೈಟಿನ ಆಚೆ ಟಾಲ್‌ ಸ್ಟಾಯ್‌ ಮಾರ್ಗ್, ಜನಪಥ್‌ ಮಾರ್ಗ್‌ ಗೆ ಹೋಗುವ ಅಡ್ಡರಸ್ತೆಗಳಲ್ಲಿ ವಿದ್ಯಾರ್ಥಿಗಳು ಜಮಾಯಿಸುತ್ತಿದ್ದರು. ಪ್ರತಿಭಟನೆಯ ಕಾವು ಏರುತ್ತಿದ್ದರೂ, ಮರುದಿನದ ಸಂಸತ್‌ ಚಲೋ ರ್ಯಾಲಿ ನಡೆಯದಂತೆ ದೆಹಲಿ ಸರ್ಕಾರ ಸೆಕ್ಷನ್‌ 144 ನಿಷೇಧಾಜ್ಞೆ ಹೊರಡಿಸಿತ್ತು. ಒಳಗೊಳಗೆ ರ್ಯಾಲಿಗೆ ಪೊಲೀಸರು ತಡೆ ಒಡ್ಡುವ ಆತಂಕ ಇತ್ತಾದರೂ ರಣ ಉತ್ಸಾಹದಲ್ಲಿದ್ದ ಯಾವ ವಿದ್ಯಾರ್ಥಿಯು ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಜುಲೈ 20ರಂದು ಬೆಳಿಗ್ಗೆ ಸುಮಾರು 9ರ ಹೊತ್ತಿಗೆ ಎಂದಿನಂತೆ ಪಟೇಲ್‌ ಚೌಕ್‌ ಹಾದು ಜಂತರ್‌ ಮಂತರ್‌ ಸೈಟಿಗೆಂದು ಬಂದರೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ದೂರದಲ್ಲೇ – ಮೊದಲೇ ಹೇಳಿದ ಕೇಂದ್ರ ಗೃಹ ಮಂತ್ರಾಲಯ, ನವದೆಹಲಿ ಪಾಲಿಕಾ ಕೇಂದ್ರ, ಎಸ್‌ ಬಿಎಮ್‌ ಬ್ಯಾಂಕಿನ ಕಟ್ಟಡ ಇರುವ ಕೂಡು ರಸ್ತೆಯಲ್ಲಿಯೇ ಬ್ಯಾರಿಕೇಡ್‌ ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ತಡೆದಿದ್ದರು. ಅಂದರೆ ಜಂತರ್‌ ಮಂತರ್ ಪ್ರೋಟೆಸ್ಟ್‌ ಸೈಟಿನಲ್ಲಿ ನೆರೆದಿದ್ದ ಅಷ್ಟೂ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರಬರದಂತೆ ಹಲವು ಸಾಲಿನ ಬ್ಯಾರೀಕೆಡ್‌ ಹಾಕಿ ನಿರ್ಬಂಧಿಸಿ, ಅದರಾಚೆ ಸುಮಾರು 300 ಮೀ. ಉದ್ದವಿದ್ದ ಟಾಲ್‌ ಸ್ಟಾಯ್‌ ಮಾರ್ಗ್‌ ನಲ್ಲಿದ್ದ ವಿದ್ಯಾರ್ಥಿಗಳನ್ನೂ, ಕೂಡು ರಸ್ತೆಯಲ್ಲಿ ಪಾರ್ಲಿಮೆಂಟ್‌ ಗೆ ಹೋಗದಂತೆ ತಡೆದಿದ್ದರು. ವಿದ್ಯಾರ್ಥಿ ಯುವಕರ ಕೂಗು, ಘೋಷಣೆ, ಆಕ್ರೋಶ ಮುಗಿಲು ಮುಟ್ಟಿತ್ತು. ಸಂಸತ್ ಮಾರ್ಚ್‌ ಗೆ ಹೋಗದಂತೆ ತಡೆದಿದ್ದು ಅವರನ್ನು ಅಸಮಾಧಾನಕ್ಕೆ ತಳ್ಳಿತ್ತು. ಲಾಠಿ ಹಿಡಿದ ಎಲ್ಲಾ ವಿವಿಧ ಖಾತೆಗಳ ಪೊಲೀಸರು ಅಧಿಕ ಸಂಖ್ಯೆಯಲ್ಲಿದ್ದರು. ಅತ್ತಲ್ಲಿಂದ ವಿದ್ಯಾರ್ಥಿಗಳು ಬ್ಯಾರೀಕೆಡ್‌ ಅನ್ನು ದಾಟಿ ಬರಲು ಪ್ರಯತ್ನಿಸುತ್ತಿದ್ದರೆ,‌ ಇತ್ತಲ್ಲಿಂದ ಪೊಲೀಸರು ಲಾಠಿ ಬೀಸಿ ತಡೆಯುತ್ತಿದ್ದರು. ಕೆಲವು ಆಕ್ರಮಣಕಾರಿ ವಿದ್ಯಾರ್ಥಿಗಳು ಬ್ಯಾರಿಕೇಡ್‌ ಏರಿ ಅಥವಾ ಗುಂಪು ಪೊಲೀಸರ ಮಧ್ಯೆ ನುಸುಳಿ ಬಂದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಅಲ್ಲೇ ಇದ್ದ ಪೊಲೀಸ್‌ ಬಸ್ಸಿನೊಳಗೆ ತುರುಕುತ್ತಿದ್ದರು. ಹಾಗೆ ಬಂಧಿಸಲ್ಪಟ್ಟ ನಡು ವಯಸ್ಸಿನ ಹೆಂಗಸೊಬ್ಬಳು ಕಣ್ಣೀರು ಹಾಕುತ್ತ ಬಸ್ಸಿನ ಬಾಗಿಲು ತೆಗೆಯುವಂತೆ ಒಳಗೇ ಗೋಳಾಡುತ್ತಿದ್ದಳು. ಅದೇ ಬಸ್ಸಿನಲ್ಲಿದ್ದ ಬಂಧಿತ ಯುವಕ ಯುವತಿಯರು ತ್ರಿವರ್ಣ ಬಾವುಟ ಹಾರಿಸುತ್ತ ಪೊಲೀಸರ ದೌರ್ಜನ್ಯಕ್ಕೆ, ಮೋದಿ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿದ್ದರು.

vlcsnap 2026 08 26 13h24m37s178

ಬಲ ಪ್ರಯೋಗದಿಂದ ಬ್ಯಾರಿಕೇಡ್‌ ನ ಮುರಿಯಲು ಯತ್ನಿಸುವ ವಿದ್ಯಾರ್ಥಿಗಳು; ಆಚೆ ಬದಿಯಲ್ಲಿ ನಿಂತು ಅವರನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ ಪೊಲೀಸರು – ಈ ಹಗ್ಗಜಗ್ಗಾಟದಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನ ಸುಮಾರು ಎರಡರ ಹೊತ್ತಿಗೆ ಬ್ಯಾರಿಕೇಡ್‌ ಗಳನ್ನು ಬೀಳಿಸಿ ಆಚೆ ಬರತೊಡಗಿದರು. ಅಣೆಕಟ್ಟು ಒಡೆದಂತೆ ಸಾಗರೋಪಾದಿಯಲ್ಲಿ ಹೊರ ಬಿದ್ದ ವಿದ್ಯಾರ್ಥಿಗಳು ಪಟೇಲ್‌ ಚೌಕ್‌ ನತ್ತ ಓಡ ತೊಡಗಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಅವರನ್ನು ಪೊಲೀಸರು ತಡೆಯಲಾಗಲಿಲ್ಲ. ಆದರೆ, ಆ ಸುನಾಮಿ ಪಟೇಲ್‌ ಚೌಕನ್ನು ತಲುಪದಂತೆ, ಸರ್ಕಲ್ಲಿಗೆ ಮುಂಚೆಯೇ ಬ್ಯಾರಿಕೇಡ್‌ ಗಳ ಜೊತೆಗೆ ಬಸ್ಸುಗಳನ್ನು ಅಡ್ಡಲಾಗಿ ನಿಲ್ಲಿಸಿ ತಡೆಯಲಾಯಿತು. ಎಷ್ಟು ವಿದ್ಯಾರ್ಥಿಗಳು ಅಲ್ಲಿದ್ದರು ಎಂದರೆ ಕೂಡು ರಸ್ತೆಯಿಂದ ಪಟೇಲ್‌ ಚೌಕ್‌ ವರೆಗೆ ಸುಮಾರು 600 ಮೀ ಇರುವ ರಸ್ತೆಯಲ್ಲಿ ಕಾಲಿಡಲಾಗದಂತೆ ವಿದ್ಯಾರ್ಥಿಗಳು ನೆರೆದಿದ್ದರು. ನಾನು ವಿದ್ಯಾರ್ಥಿಗಳ ಮಧ್ಯೆ ಇರುಕಿಸಿಕೊಂಡೆ. ಬಿಸಿಲ ಧಗೆ…ಕೈಕಾಲು ಮಿಸುಕಾಡಿಸಲು ಆಗುತ್ತಿರಲಿಲ್ಲ.

ಜನ ನಿಭಿಡತೆಯಲ್ಲಿ ಉಸಿರು ಕಟ್ಟಿದಂತಾಗಿತ್ತು. ಅಲ್ಲಿಯೇ ನಿಂತರೆ, ಮುಂದಿರುವ ಪಟೇಲ್‌ ಚೌಕಲ್ಲಿ ಏನಾಗುತ್ತಿದೆಯೆಂದು ನೋಡಲು ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಮಧ್ಯೆ ಸಾವರಿಸಿಕೊಂಡು ಕಿರುರಸ್ತೆಯೊಂದರ ಬಳಿ ಬಂದೆ. ಬ್ಯಾರಿಕೇಡ್‌ ಇದ್ದ ಆ ಕಿರುರಸ್ತೆಯಲ್ಲಿ ಒಳಬರಲು ಬಿಡದೆ, ಹೊರಗೆ ಹೋಗಲು ಮಾತ್ರ ಪೊಲೀಸರು ಬಿಡುತ್ತಿದ್ದರು. ಅಲ್ಲಿಂದ ಬಳಸಿಕೊಂಡು ಮುಖ್ಯರಸ್ತೆಯಲ್ಲಿ ಸಾಗಿ ಪಟೇಲ್‌ ಚೌಕಿಗೆ ಬಂದರೆ, ಅಲ್ಲಿ ಮೆಟ್ರೊ ಸ್ಟೇಷನ್‌ ಗಳಲ್ಲಿ ವಿದ್ಯಾರ್ಥಿಗಳನ್ನು ತಡೆ ಹಿಡಿದಿದ್ದರೂ, ಟಿಕೇಟ್‌ ಚೆಕ್ಕಿಂಗ್‌ ಪಾಯಿಂಟನ್ನು ಹಾರಿ ಬರುತ್ತಲೇ ಇದ್ದರು!

ಸುಮಾರು ಮೂರುವರೆ ಹೊತ್ತಿಗೆ ಪಟೇಲ್‌ ಚೌಕಿನಲ್ಲಿ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಜಂತರ್‌ ಮಂತರ್‌ ನಲ್ಲಿ ಇದ್ದವರು ಅಲ್ಲಿಯೇ ಇದ್ದಾರೆ. ಅಲ್ಲಿ ಏನು ನಡೆಯುತ್ತಿದೆ ತಿಳಿಯುತ್ತಿರಲಿಲ್ಲ. ಅದರಾಚೆ ಇದ್ದ ಬ್ಯಾರಿಕೇಡ್‌ ಮುರಿದು ಬಂದವರನ್ನು ತಡೆ ಹಿಡಿದು ನಿಲ್ಲಿಸಲಾಗಿ, ಹೆಚ್ಚಿದ್ದ ಪೊಲೀಸ್‌ ಪಡೆಗಳನ್ನು ಪ್ರತಿರೋಧಿಸಿ ಹೊರ ಬರುವುದು ಅವರಿಗೆ ಸಾಧ್ಯವಿರಲಿಲ್ಲ.

ಆದರೆ, ಪಟೇಲ್‌ ಚೌಕದಲ್ಲಿದ್ದ ಸುಮಾರು ಮೂವತ್ತು ನಲವತ್ತು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿ ಯುವಕರು, ಬ್ಯಾರಿಕೇಡ್ ಒಳಗೆ ಸಿಕ್ಕು ಬಿದ್ದವರಿಗೆ ಕಾದು ಸಾಕಾಗಿ ನಾವಷ್ಟೇ ಮಂದಿ ಸಂಸತ್ತಿಗೆ ಹೊರಡೋಣ ಎಂದು ಅಲ್ಲಿದ್ದವರನ್ನು ಹುರಿದುಂಬಿಸಿ, ಸರ್ಕಲ್‌ ನ ಮತ್ತೊಂದು ಬದಿಗಿದ್ದ ಸಂಸತ್‌ ಮಾರ್ಗ್‌ ರಸ್ತೆಯಲ್ಲಿ ಜಮಾವಣೆಯಾಗತೊಡಗಿದರು. ಅಲ್ಲಿಂದ ಕೇವಲ ಅರ್ಧ ಕಿಲೋಮೀಟರ್‌ ದೂರದಲ್ಲೇ ಸಂಸತ್ ಭವನ ಇದ್ದದ್ದು.

vlcsnap 2026 08 26 13h18m44s459

ಈ ಜಾಗದಲ್ಲಿ ಪೊಲೀಸ್‌ ಕಾವಲು ಅಷ್ಟಿರಲಿಲ್ಲ. ಬ್ಯಾರಿಕೇಡ್‌ ಕೂಡ ಒಂದೇ ಸಾಲಿತ್ತು. ಬಹುಶಃ ಪೊಲೀಸರು ಪಟೇಲ್‌ ಚೌಕ್ ನಿಂದ‌ ಆಚೆಗೆ ಬರುವಷ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರೀಕ್ಷಿಸಿರಲಿಲ್ಲ ಅನಿಸುತ್ತದೆ. ಟಾಲ್‌ ಸ್ಟಾಯ್‌ ಮಾರ್ಗ್‌ ನಲ್ಲಿ ಮಧ್ಯಾಹ್ನ ಏನಾಯಿತೊ ಇಲ್ಲಿಯೂ ಅದೇ ಪುನರಾವರ್ತನೆಯಾಯಿತು.

ಕೆಲವು ವಿದ್ಯಾರ್ಥಿಗಳು, ಮಧ್ಯಮ ವಯಸ್ಕ ಹೆಣ್ಣು ಪೋಷಕರು ಸಂಸತ್‌ ಗೆ ಹೋಗಲು ಬಿಡುವಂತೆ ದುಂಬಾಲು ಬಿದ್ದರು. ಆದರೆ, ಪೊಲೀಸರು ಬಿಡಲು ಸುತರಾಂ ಒಪ್ಪಲಿಲ್ಲ. ಕೇವಲ ಮೂವತ್ತರಷ್ಟಿದ ವಿದ್ಯಾರ್ಥಿಗಳ ಸಂಖ್ಯೆ ಬರಬರುತ್ತ ಹೆಚ್ಚಾಗಿ, ನಿರಾಯಾಸವಾಗಿ ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ಸರಿಸಿ ಘೋಷಣೆ ಕೂಗುತ್ತ ಸಂಸತ್‌ ಭವನದತ್ತ ಓಡತೊಡಗಿದರು. ಆ ದಾರಿಯಲ್ಲಿ ಅರ್ಧ ದೂರ ಕ್ರಮಿಸಿರಬಹುದು…ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಟ್ಟಡ ದಾಟಿ ತುಸು ದೂರ ಕ್ರಮಿಸುವಷ್ಟರಲ್ಲಿ ಅಲ್ಲಿದ್ದ ಕೆಲವೇ ಪೊಲೀಸರು ತಡೆ ಹಾಕಿದರು. ಅಲ್ಲಿ ಬ್ಯಾರಿಕೇಡ್‌ ಇರಲಿಲ್ಲ. ಸಂಸತ್‌ ಭವನ ಅಲ್ಲಿಂದ ಕೇವಲ ಕಾಲು ಕೀಲೊಮೀಟರ್‌ ದೂರದಲ್ಲಿರಬಹುದು. ಬೇಡಿಕೊಂಡರೂ ಪೊಲೀಸರು ಬಿಡದಾಗ ವಿದ್ಯಾರ್ಥಿಗಳು “Peaceful Protest” ಎಂದು ಕೂಗುತ್ತ ರಸ್ತೆಯಲ್ಲೇ ಕುಳಿತರು.

ವಿದ್ಯಾರ್ಥಿಗಳು ಬರುವುದು ಹೆಚ್ಚುತ್ತಲೇ ಇತ್ತು. ಪೊಲೀಸರು ಹಿಂದೆ ಸರಿಯುವಂತೆ ಹೇಳಿದರೂ ವಿದ್ಯಾರ್ಥಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈಗ ಪೊಲೀಸರು ಲಾಠಿ ಚಾರ್ಜ್‌ ಆರಂಭಿಸಿ, ಗುಂಪನ್ನು ಚದುರಿಸ ತೊಡಗಿದರು. ಎಲ್ಲರೂ ದಿಕ್ಕಾಪಾಲಾಗಿ ಓಡಿದೆವು. ಕೆಲವರು ಲಾಠಿ ಏಟು ತಿಂದರು. ಕೆಲವರು ಬಿದ್ದು ಗಾಯ ಮಾಡಿಕೊಂಡರು. ಆದರೆ, ದೂರ ಓಡಿ ಹೋದವರು ತಿರುಗಿ ಬಂದು ಪೊಲೀಸರ ಎದುರಿದೆ ಹೆದರದೆ ನಿಲ್ಲುತ್ತಿದ್ದದ್ದು ಬೆರಗಾಗುವಂತಿತ್ತು. ಪ್ರತಿಭಟನಾಕಾರರಲ್ಲಿ ಯಾವ ಅಂಜಿಕೆ ಇರಲಿಲ್ಲ.

ಆವರೆಗೆ ನಾನು ಸತತವಾಗಿ ಮೊಬೈಲಿನಲ್ಲಿ ಶೂಟಿಂಗ್‌ ಮಾಡುತ್ತಿದ್ದರಿಂದ ಬ್ಯಾಟರಿ ಖಾಲಿಯಾಗಿ ಮೊಬೈಲ್‌ ಆಫ್‌ ಆಗುವ ಹಂತ ತಲುಪಿತ್ತು. ಕನ್ನಡ ಸುದ್ದಿ ವಾಹಿನಿಯೊಂದು ಕರೆ ಮಾಡಿ, ಪ್ರತಿಭಟನೆಯ ಲೈವ್‌ ಫೂಟೇಜ್‌ ಕಳುಹಿಸಲು ಹೇಳಿ, ಸಂದರ್ಶನಕ್ಕಾಗಿ ಕೋರಿದರು. ಆದರೆ, ಜಂತರ್‌ ಮಂತರ್‌ ಸುತ್ತ ಸುಮಾರು ಮೂರ್ನಾಲ್ಕು ಕಿಲೋಮೀಟರ್‌ ಸುತ್ತಳತೆಯಲ್ಲಿ ಕಳೆದ ದಿನಗಳಿಂದ ಮೊಬೈಲ್‌ ಸಂಪರ್ಕವನ್ನು ಸರಕಾರ ನಿರ್ಬಂಧಿಸಿತ್ತು. ಹಾಗಾಗಿ ಲೈವ್‌ ಸಂದರ್ಶನ ಸಾಧ್ಯವಾಗುತ್ತಿರಲಿಲ್ಲ.

ನಾಲ್ಕುವರೆ ಹೊತ್ತಿಗೆ ಮಳೆ ಸುರಿಯತೊಡಗಿತು. ಪಟೇಲ್‌ ಚೌಕದಲ್ಲಿ ಈ ಮೊದಲು ಸರಾಗವಾಗಿ ಸಾಗುತ್ತಿದ್ದ ಸಂಚಾರವು ಬಂದಾಗಿ ವಾಹನಗಳು ಸಂಪೂರ್ಣ ನಿಂತಲ್ಲೇ ನಿಂತವು. ಸರ್ಕಲ್‌ ನ ರಸ್ತೆಯಲ್ಲಿಯೇ ಜಮಾವಣೆಯಾದ, ಬಸ್‌ ಗಳ ಮೇಲೆತ್ತಿದ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಲೇ ಧರ್ಮೇಂದ್ರ ಪ್ರಧಾನ್‌ ವಿರುದ್ಧ ಘೋಷಣೆ ಕೂಗುತ್ತಿದ್ದರು.

ಬ್ಯಾಟರಿ ಇಲ್ಲದೆ ನನ್ನ ಮೊಬೈಲ್‌ ಬಂದಾಯಿತು. ಧೋ ಎಂದು ಸುರಿಯುತ್ತಿದ್ದ ಮಳೆ. ಬಿಸಿಲಲ್ಲಿ ನಡೆದು, ಓಡಿ ದಣಿವಾಗಿತ್ತು. ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಮನಸ್ಸಿಲ್ಲದ ಮನಸ್ಸಿಂದ, ಹೊಟೇಲ್‌ ಗೆ ಹೋಗಲು, ಆಟೊಗಳು ಸಿಗದೆ ಚೂನಾಮಂಡಿ ಕಡೆಗೆ ನಡಿಗೆಯಲ್ಲೇ ಹೊರಟೆ.

ಹೊಟೇಲ್‌ ರೂಮಲ್ಲಿ ಒಂದೆರೆಡು ತಾಸು ಕಳೆದರೂ, ನೈಟ್‌ ವರ್ಕ್‌ ಸಮಸ್ಯೆಯಿಂದ ಲೈವ್ ಪತ್ರಿಕಾ ಸಂದರ್ಶನ ಸಾಧ್ಯವಾಗಲಿಲ್ಲ. ಹೊರಗೆ ಹೋಗಿ ಗೂಡಂಗಡಿಯಲ್ಲಿ ಸಿಕ್ಕ ಅರೆಬರೆ ಬೆಂದ ಫ್ರೈಡ್‌ ರೈಸನ್ನು ತಿಂದು ಬಂದೆ.

ಬಹಳ ದಣಿವಾಗಿತ್ತಾದ್ದರಿಂದ ಮತ್ತೆ ಪ್ರತಿಭಟನೆಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗೆಂದು ರೂಮ್‌ ನಲ್ಲಿಯೇ ಉಳಿದು, ಸಮಾಧಾನವಿರಲಿಲ್ಲ. ಏನೋ ಆತಂಕ! ನಾನಿದ್ದ ವಿದ್ಯಾರ್ಥಿಗಳ ಗುಂಪು ಪಾರ್ಲಿಮೆಂಟ್‌ ವರೆಗೂ ಹೋದರೊ ಅಥವಾ ಪೊಲೀಸ್‌ ದಾಳಿಗೆ ತುತ್ತಾದರೊ…ತಿಳಿಯಲಿಲ್ಲ.

ದೇಶದ ಪ್ರಮುಖ ಸುದ್ದಿ ಚಾನೆಲ್‌ ಗಳು ಪ್ರತಿಭಟನೆಯನ್ನು ದೇಶದ್ರೋಹಿ ಕೃತ್ಯವೆಂದು ಬಿಂಬಿಸುತ್ತಿರುವ ಹೊತ್ತಲ್ಲಿ, ಯುಟೂಬ್ ನಲ್ಲಿ‌ ಮಾತ್ರ ಬಿತ್ತರವಾಗುತ್ತಿದ್ದ ಕೆಲವೇ ಕೆಲವು ಇಂಡಿಪೆಂಡೆಟ್‌ ನ್ಯೂಸ್‌ ಚಾನೆಲ್‌ ಗಳಲ್ಲಿ ಪ್ರತಿಭಟನೆಯ ಬೆಳವಣಿಗೆಯನ್ನು ಶೋಧಿಸುತ್ತ ಕೂತೆ. ಪೊಲೀಸ್‌ ಮತ್ತು ಪೊಲೀಸ್‌ ವೇಷದ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಬರ್ಬರವಾಗಿ ದಾಳಿ ಮಾಡಿದ ದೃಶ್ಯಗಳು ಬಿತ್ತರವಾಗುತ್ತಿದ್ದವು. ಎದೆ ಒಡೆದುಹೋಯಿತು. ಲಾಠಿ ಚಾರ್ಜ್‌ ಮಾಡಿ, ಟಿಯರ್‌ ಗ್ಯಾಸ್‌ ಸಿಡಿಸಿ, ಪೆಲೇಟ್‌ ಗನ್ ಬಳಸಿ…ವಿದ್ಯಾರ್ಥಿಗಳನ್ನು ಪ್ರಾಣಿಗಳಂತೆ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದರು. ಆ ಕ್ಷಣ ರೂಮಿಗೆ ಬಂದು ತಪ್ಪು ಮಾಡಿದೆ ಅನಿಸಿತು.

WhatsApp Image 2026 07 22 at 18.23.32

ಮತ್ತಷ್ಟು ನೋವು ಉಂಟಾದದ್ದು – ಜಂತರ್‌ ಮಂತರ್‌ ಸೈಟಿಗೆ ನುಗ್ಗಿದ ಪೊಲೀಸರು ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿ ಅಲ್ಲಿಂದ ಓಡಿಸಿದ್ದ ದೃಶ್ಯಗಳು. ಅಲ್ಲಿದ್ದ ವೇದಿಕೆ, ಉಪವಾಸ ನಿರಶನ ಕೂತಿದ್ದ ಟೆಂಟ್‌ ಗಳನ್ನು ಧ್ವಂಸಮಾಡಿ, ಈ ಮುಂಚೆ ಅಲ್ಲಿ ಏನೂ ಇರಲಿಲ್ಲವೇನೊ ಅನ್ನುವಂತೆ ನೆಲಸಮ ಮಾಡಿದ್ದರು. ವಿದ್ಯಾರ್ಥಿ ಯುವಕರಿಂದ ತುಂಬಿ ತುಳುಕುತ್ತಿದ್ದ ಸೈಟ್‌ ಈಗ ಸ್ಮಶಾನದಂತಿತ್ತು. ಎದೆ ಭಾರವಾಯಿತು.

ನಿದ್ದೆ ಬಾರದೆ ಏನು ಮಾಡಬೇಕೆಂದು ತೋಚಲಿಲ್ಲ. ನಡುರಾತ್ರಿ ಕಳೆದ ಹೊತ್ತಲ್ಲಿ, ಹಾಗೇ ಸುದ್ದಿ ವಾಹಿನಿಗಳನ್ನು ನೋಡುತ್ತಿದ್ದಾಗ, ದೀಪ್ಕೆ ಮತ್ತವರ ಸಂಗಡಿಗರು ಮತ್ತೆ ಜಂತರ್‌ ಮಂತರ್‌ ನಲ್ಲಿ ಪೊಲೀಸರು ಧ್ವಂಸ ಮಾಡಿದ್ದ ವೇದಿಕೆಯನ್ನು ಪುನರ್‌ ನಿರ್ಮಿಸುತ್ತಿದ್ದ ಸುದ್ದಿ ನೋಡಿ ಸಮಾಧಾನ ತಂದಿತು.

ಜುಲೈ 21ರಂದು ಬೆಳಿಗ್ಗೆ ಜಂತರ್‌ ಮಂತರ್‌ ಸೈಟಿಗೆ ಬಂದರೆ ಅಲ್ಲಿ ಯುವಕರ ದಂಡು ನೋಡಿ ಆಶ್ಚರ್ಯವಾಯಿತು. ನೆನ್ನೆ ಇಡೀ ದಿನ ಪೊಲೀಸರ ಅಷ್ಟೆಲ್ಲಾ ರಾಕ್ಷಸ ದಾಳಿಯಿಂದ ನೊಂದಿದ್ದ, ವಿದ್ಯಾರ್ಥಿ ಸಮುದಾಯ ಈಗ ಮತ್ತಷ್ಟು ಉತ್ಸಾಹದಿಂದ ಆಕ್ರೋಶವನ್ನು ಘೋಷಣೆ, ಹಾಡು, ಪೋಸ್ಟರ್‌ ಮೂಲಕ ಅಭಿವ್ಯಕ್ತಿಸುತ್ತಿದ್ದರು. ಮಾತ್ರವಲ್ಲ ಯುವಜನತೆಯ ಬರುವಿಕೆ ಇನ್ನೂ ಹೆಚ್ಚಾಗುತ್ತಿತ್ತು.

ಈವರೆಗೆ ಇದ್ದ ಶಿಕ್ಷಣ ಮಂತ್ರಿ ಧರ್ಮೇಂದರ್‌ ಪ್ರಧಾನರ ರಾಜೀನಾಮೆ ಬೇಡಿಕೆ, ಪೊಲೀಸರ ಅಟ್ಟಹಾಸವನ್ನು ವಿರೋಧಿಸಿ ಗೃಹಮಂತ್ರಿ ಅಮಿತ್‌ ಶಾ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಜೀನಾಮೆಗೆ ವಿಸ್ತರಿಸಿಕೊಂಡು ಕೂಗುಗಳು ಕೇಳಿ ಬರತೊಡಗಿತು. ಜಂತರ್‌ ಮಂತರ್‌ ನಲ್ಲಿ ಮತ್ತೆ ಪ್ರತಿಭಟನೆಯ ಜೀವಂತಿಕೆ ಮರುಕಳಿಸಿತು.

ಅಲ್ಲಿಯೇ ಕಟ್ಟಿ ಹಾಡುತ್ತಿದ್ದ ಹಲವು ಹಾಡುಗಳು; ಮುಖ್ಯವಾಗಿ ಹಿಂದಿ ಭಾಷೆಯಲ್ಲಿದ್ದರೂ, ಬೊಜ್‌ ಪುರಿ, ಪಂಜಾಬಿ ಮತ್ತು ಇನ್ನಿತರ ಉತ್ತರಭಾರತದ ಗ್ರಾಮ್ಯ ಸೊಗಡಿನ ಭಾಷೆಯಲ್ಲಿಯೂ ಹಾಡುತ್ತಿದ್ದರು. ʼಧರ್ಮೇಂದರ್‌ ಪ್ರಧಾನ್‌ ಇಸ್ತಿಫಾ ದೊʼ ಮುಖ್ಯ ಘೋಷಣೆಯಾಗಿತ್ತು. ಜೊತೆಗೆ ನೀಟ್‌ ಪರೀಕ್ಷೆಯೇ ಕಾರಣವಾಗಿ ಆತ್ಮಹತ್ಯೆ ಮಾಡಿದ ಇಪ್ಪತ್ತಕ್ಕೂ ವಿದ್ಯಾರ್ಥಿಗಳ ಬಗ್ಗೆ ಪ್ರಧಾನಿ ಮೋದಿಗಿದ್ದ ಅಸಂವೇದನೆ ಮತ್ತು ಸಂಸತ್‌ ಚಲೋದಂದು ಆದ ಪೊಲೀಸರ ದೌರ್ಜನ್ಯದ ಹೊಣೆ ಹೊರದ ಗೃಹಮಂತ್ರಿ ಅಮಿತ್‌ ಶಾರ ಉತ್ತರದಾಯಿತ್ವ ಬಗೆಗೂ ಘೋಷಣೆಗಳು ಮೊಳಗುತ್ತಿದ್ದವು.

ಪ್ರಮುಖವಾಗಿ – ʼಸರ್ಫರೋಷಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈʼ ʼ ಮೈನೇ ಮೋದಿ ಜನತಾ ವಿರೋಧಿʼ ʼಗಲಿ ಗಲಿ ಮೇ ಶೋರ್‌ ಹೇ…ಮೋದಿ ಸಾಲಾ ಚೋರ್‌ ಹೇ” “ನೀಮ್‌ ಕ ಪತ್ತಾ ಕಡವ ಹೈ ಮೋದಿ ಸಾಲಾ ಬಡ್ವಾ ಹೇ” “ಚಪ್ಪನ್‌ ಇಂಚ್ಕಾ ಚೋಟಾ ಬಂದರ್‌ ಬಾಲ್‌ ನರೇಂದರ್”‌ “ಜಬ್‌ ಜಬ್‌ ಮೋದಿ ಡರ್‌ ತ ಹೇ…ಪೊಲೀಸ್‌ ಕು ಆಗೇ ಕರ್ತಾ ಹೇ” ಎಂಬ ಘೋಷಣೆಗಳು ಅನುರಣಿಸುತ್ತಿದ್ದವು.

ಜುಲೈ 20ರಂದು ಸಂಸತ್‌ ಮಾರ್ಚ್‌ ಇದ್ದದ್ದರಿಂದ ಅದರಲ್ಲಿ ಭಾಗವಹಿಸಿ, ಜುಲೈ 21ಕ್ಕೆ ಬೆಂಗಳೂರಿಗೆ ವಾಪಸ್ಸು ಬರುವ ಯೋಚನೆ ಮೊದಲಿತ್ತು. ಆದರೆ, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ಗೂಂಡಾಗಿರಿ, ಅತ್ಯಾಚಾರಗಳು ಹಾಗೂ ಮುಂದೆ ಪ್ರತಿಭಟನೆ ತಾರ್ಕಿಕ ಅಂತ್ಯ ಕಾಣುತ್ತದೊ? ಇಲ್ಲವೊ? ಎಂಬ ಆತಂಕದಲ್ಲಿ ದೆಹಲಿಯಲ್ಲೇ ಉಳಿಯಲು ನಿರ್ಧರಿಸಿದೆ. ತಂಗಿದ್ದ ಹೊಟೇಲಿನ ಬುಕ್ಕಿಂಗ್ ದಿನಗಳು‌ ಮುಗಿದು ಬೇರೆ ಹೊಟೇಲನ್ನು ಹುಡುಕಿ, ರೂಮು ಬದಲಿಸಬೇಕಾಯಿತು.

19 07 2026 g 1

ಅದೇ ಹೊತ್ತಲ್ಲಿ ನನ್ನ ಸುರಕ್ಷತೆ ಮತ್ತು ಆರೋಗ್ಯ ವಿಚಾರಿಸಿ ಬೆಂಗಳೂರಿಂದ ಫೋನ್‌ ಮಾಡಿದ್ದ ಮಡದಿ ಮಾತಾಡುತ್ತ ಒಂದೇ ಸಮನೆ ಅಳಲು ಪ್ರಾರಂಭಿಸಿದಳು. ಫೋನಿನಲ್ಲಿ ಅವಳನ್ನು ಸಂತೈಸುವುದು ಸಾಧ್ಯವಾಗಲಿಲ್ಲ. ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದ, ನಾಗರಿಕತೆಯೇ ತಲೆತಗ್ಗಿಸುವಂತ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಹಲ್ಲೆಗಳ ವಿಡಿಯೊಗಳು ಅವಳನ್ನು ಜರ್ಜರಿತಗೊಳಿಸಿತ್ತು.

ಲಾಠಿಯಿಂದ ತಲೆ ಒಡೆದು ಸುರಿವ ರಕ್ತ, ಕೈಕಾಲುಗಳಲ್ಲದೆ ಮುಖದ ಮೇಲೆ ಬಿದ್ದ ಪೆಟ್ಟುಗಳು, ಪೆಲೆಟ್‌ ಗನ್‌ ಬಳಸಿ ದೃಷ್ಟಿ ಹಾನಿ ಮಾಡಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿನಿ ಮೈ ಮೇಲೆ ಕೈಯಾಡಿಸಿದ ಪೊಲೀಸರು, ಹಿಂಬದಿ ಖಾಸಗಿ ಭಾಗಕ್ಕೆ ಲಾಠಿ ತುರಿಸಿದ್ದು….ಇತ್ಯಾದಿ ಬರ್ಬರ ದೃಶ್ಯಗಳಿಂದ ಅವಳು ಕಂಗಾಲಾಗಿದ್ದಳು. “ಈ ಮಕ್ಕಳನ್ನು ಕಾಪಾಡುವವರು ಯಾರು ಇಲ್ಲವೇ?” ಎಂದು ರೋದಿಸತೊಡಗಿದಳು. ಅವಳು ಮತ್ತಷ್ಟು ನೊಂದು ಕೊಳ್ಳಲು ಮತ್ತೊಂದು ಕಾರಣ –ಇಷ್ಟೇಲ್ಲಾ ಅನಾಹುತಗಳಾದರೂ, ಮೋದಿ – ಬಿಜೆಪಿ ಅಭಿಮಾನಿಗಳಾದ ಸಹಪಾಠಿಗಳು, ಸಂಬಂಧಿಕರು, ಗೆಳತಿ/ಗೆಳೆಯರು ವಾಟ್ಸಾಪ್‌ ಗ್ರೂಪ್‌ ಗಳಲ್ಲಿ ಆ ಹಿಂಸೆಯನ್ನು ಸಂಭ್ರಮಿಸಿ ಅಸಹ್ಯವಾಗಿ ಕಾಮೆಂಟ್‌ ಹಾಕುತ್ತಿದ್ದದ್ದು. ಮಗಳಿಗೆ ಫೋನ್‌ ಮಾಡಿ ಅವಳಿಗೆ ಸಮಾಧಾನ ಮಾಡಲು ತಿಳಿಸಿದೆ.

ಅಲ್ಲಿ ದೂರದ ಬೆಂಗಳೂರಲ್ಲಿ, ಮೊಬೈಲ್‌ ನಲ್ಲಿ ಹಿಂಸೆಯ ದೃಶ್ಯಗಳನ್ನು ನೋಡಿಯೇ ಕಣ್ಣೀರು ಬರುವಂತಾಗಿದ್ದರೆ, ಇನ್ನು ಪ್ರತಿಭಟನೆಯಲ್ಲಿ ಪೊಲೀಸರಿಂದ ನಿಜಕ್ಕೂ ಲಾಠಿ ಏಟುಗಳನ್ನು ತಿಂದ ಮಕ್ಕಳ ತಾಯಿಯಂದಿರ ಗತಿಯೇನು?

ಜಂತರ್‌ ಮಂತರ್‌ ಸೈಟಿನಲ್ಲಿ ಹಿಂದಿನ ದಿನ ಪೊಲೀಸರು ತನ್ನ ಮಕ್ಕಳಿಗೆ ಬೀಸಿದ ಲಾಠಿ ಏಟುಗಳು ತನ್ನ ಹೆತ್ತೊಡಲಿಗೆ ಬಿದ್ದ ಹೊಡೆತಗಳಾಗಿ ಓರ್ವ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅಲ್ಲಿ ಗುಂಪುಗುಂಪಾಗಿ ನಿಂತಿದ್ದ RAF ಪೊಲೀಸರಿಗೆ “ಕಾಲುಗಳಿಗೆ ಏಟು ಕೊಟ್ಟಿದ್ದರೆ ಸಾಕಿತ್ತು. ಮಕ್ಕಳು ಓಡಿಹೋಗುತ್ತಿದ್ದರು. ಮೈ ಮೂಳೆ ಮುರಿಯುವಂತೆ ಹೊಡೆದಿದ್ದೀರಲ್ಲ? ನಿಮಗೂ ಮಕ್ಕಳಿದ್ದಾರೆ, ಅಲ್ಲವೇ?” ಎಂದು ಪ್ರಶ್ನಿಸುತ್ತಿದ್ದಳು. “ಮೇರಾ ಭಾರತ್‌ ಮಹಾನ್‌ ಎಂದು ಕೂಗಿದರೆ ದೇಶ ಮಹಾನ್‌ ಆಗುವುದೇ? ಕೇವಲ ಮಿನಿಷ್ಟರ್‌ ರಾಜೀನಾಮೆ ಕೇಳಿದ್ದಕ್ಕೆ ಹೀಗೆ ಹೊಡೆಯುವುದೇ? ಮಕ್ಕಳೇನು ಭಯೋತ್ಪಾದಕರೇ? ” ಎಂದು ಗೋಳಿಡುತ್ತ ಆಕ್ರಂದಿಸುತ್ತಿದ್ದಳು. ಬರೀ ಘೋಷಣೆಯಲ್ಲೇ ಭಾರತವನ್ನು ಮಹಾನ್‌ ಮಾಡಿದ ಮೋದಿ ಸರ್ಕಾರದಿಂದ ಉತ್ತರವನ್ನು ಕೇಳುತ್ತಿದ್ದಳು.

ಪ್ರತಿಭಟನೆಯಲ್ಲಿದ್ದ ಜೆನ್‌ ಜಿ ಯುವಕರಲ್ಲಿ ಪೊಲೀಸರ ಬಗ್ಗೆ ಒಂದಿನಿತೂ ಅಂಜಿಕೆ ಕಾಣಲಿಲ್ಲ. ಹಾಗೆಂದು ಅಗೌರವವಿರಲಿಲ್ಲ. ಆದರೆ, ಜುಲೈ 20ರ ಪೊಲೀಸರ ಕ್ರೌರ್ಯ ಅವರನ್ನು ರಚ್ಚಿಗೇಳಿಸಿತ್ತು. ಆ ಆಕ್ರೋಶವನ್ನು ಅವರು ಪೊಲೀಸರನ್ನು ಗೇಲಿ ಮಾಡಿ, ಕಿಚಾಯಿಸುವುದರ ಮೂಲಕ ಹೊರಹಾಕುತ್ತಿದ್ದರು.

ಪಟೇಲ್‌ ಸ್ಕೇರ್‌ ನಿಂದ ಕೊನಾಟ್‌ ಪ್ಲೇಸ್‌ ಕಡೆಗೆ ಹೋಗುವ ಸಂಸತ್‌ ಮಾರ್ಗ್‌ ರಸ್ತೆಯಲ್ಲಿ ಪೊಲೀಸರು ಆ ತುದಿಯಿಂದ ಈ ತುದಿಯವರೆಗೆ ಸುರಕ್ಷತೆ ದೃಷ್ಟಿಯಿಂದ ಪರೇಡ್‌ ಮಾರ್ಚ್‌ ಮಾಡುತ್ತಿದ್ದರು. ಪೊಲೀಸರ ಆ ದಂಡು ಟಾಲ್‌ ಸ್ಟಾಯ್‌ ಮಾರ್ಗ್‌ ಕ್ಕೆ ಬಂದೊಡನೆ, ಯುವಕರು ಚಪ್ಪಾಳೆ ಹೊಡೆದು, ಅವರನ್ನು ಅಭಿನಂದಿಸುವ ರೀತಿಯಲ್ಲಿ ಗೇಲಿ ಮಾಡತೊಡಗಿದರು. ಲಾಠಿ ಹಿಡಿದು ನಿಂತ ಪೊಲೀಸರನ್ನು “ಹಲೋ…ಪೊಲೀಸ್‌ ಅಂಕಲ್‌ ಹೌ ಅರ್‌ ಯು….ಕಾನಾ ಹೊಗಯಾ…ಕ್ಯಾ” ಎಂದು ಲೇವಡಿ ಮಾಡುತ್ತಿದ್ದರು. “ದೆಹಲಿ ಪೊಲೀಸ್‌ ಹಾಯ್…ಹಾಯ್” ಘೋಷಣೆ ಪ್ರತಿಭಟನೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿತ್ತು.

ಸಂಸತ್‌ ಮಾರ್ಚ್‌ ನ ನಂತರ ಉಪವಾಸ ತೊರೆಯುವುದಾಗಿ ಹೇಳಿದ್ದ ಸೊನಮ್ ವಾಂಗ್ಚುಕ್‌ ಅವರು ಪೊಲೀಸರ ದುಷ್ಕೃತ್ಯಕ್ಕೆ ನೊಂದು ಉಪವಾಸ ಮುಂದುವರೆಸಿದ್ದರು. ಜಂತರ್‌ ಮಂತರ್‌ ನ ಪ್ರತಿಭಟನೆಯ ಮುಂದುವರಿಕೆಯಲ್ಲಿ ಅನಿಶ್ಚಿತೆ, ಆತಂಕ ಇತ್ತು. ಆದರೆ, ವಿದ್ಯಾರ್ಥಿ ಯುವಕರಲ್ಲಿ ನ್ಯಾಯ ಸಿಗುವವರೆಗೂ ಜಂತರ್‌ ಮಂತರ್‌ ನಲ್ಲಿಯೇ ಉಳಿದು ಪ್ರತಿರೋಧ ತೋರುವ ಬದ್ಧತೆ, ಉತ್ಸಾಹ ಹೆಚ್ಚಾಗಿತ್ತು. ಮೊದಲಿಗಿಂತಲೂ ವಿದ್ಯಾರ್ಥಿಗಳು ನದಿಗಳಂತೆ, ಕಾನೆಟ್‌ ಪ್ಲೇಸ್‌ ಕಡೆಯಿಂದ, ಜನ್‌ ಪತ್‌ ಮಾರ್ಗದಿಂದ, ಟಾಲ್ ಸ್ಟಾಯ್‌ ಮಾರ್ಗ್….ಜಂತರ್‌ ಮಂತರ್‌ ಗೆ ಬಂದು ಸೇರುವ ಎಲ್ಲಾ ರಸ್ತೆಗಳಿಂದಲೂ ಬಂದು ಪ್ರತಿಭಟನೆಯ ಸಾಗರವನ್ನು ಸೇರುತ್ತಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಜಂತರ್‌ ಮಂತರ್‌ ಪ್ರೊಟೆಸ್ಟ್‌ ಸೈಟು ಪ್ರತಿಭಟನೆಯನ್ನೇ ಸಂಭ್ರಮಿಸುತ್ತಿತ್ತು. ಹಬ್ಬದ ಆಚರಣೆಯಂತಿತ್ತು.

vlcsnap 2026 08 26 13h20m24s180

ಪೊಲೀಸರ ಸುರಕ್ಷತೆಯಲ್ಲಿ ಪ್ರಮುಖ ಮಾರ್ಪಾಡುಗಳಾಯಿತು. ಮುಂಚೆ ಇದ್ದಂತೆ ಸೈಟಿನ ಪ್ರಮುಖ ದ್ವಾರದಲ್ಲಿದ್ದ ಮೆಟಲ್‌ ಡಿಟೆಕ್ಟರ್‌ ನಿಷ್ಕ್ರಿಯವಾದವು. ವಿದ್ಯಾರ್ಥಿಗಳ ಬ್ಯಾಗುಗಳನ್ನು ಪರಿಶೀಲಿಸುತ್ತಿದ್ದ ಸ್ಕ್ಯಾನರ್ ಅನ್ನು ತೆರೆವುಗೊಳಿಸಲಾಯಿತು. ಅಲ್ಲೇ ಇದ್ದು, ತೊಟ್ಟ ಉಡುಪುಗಳನ್ನು ಚೆಕ್‌ ಮಾಡುತ್ತಿದ್ದ ಪೊಲೀಸರ ದಂಡು ಇರಲಿಲ್ಲ. ಅಷ್ಟಲ್ಲದೆ ಸೈಟಿನಲ್ಲಿ ಒಬ್ಬನೇ ಒಬ್ಬ ಪೊಲೀಸು ಇರಲಿಲ್ಲ. ಎಲ್ಲರೂ ತುಸು ದೂರ ಟಾಲ್‌ ಸ್ಟಾಯ್‌ ಮಾರ್ಗಕ್ಕೆ ಶಿಫ್ಟ್‌ ಆಗಿದ್ದರು. ಬ್ಯಾರಿಕೇಡುಗಳನ್ನು ತೆಗೆದು ಹಾಕಲಾಯಿತು. ಇಡೀ ಪ್ರತಿಭಟನೆಯ ಪ್ರದೇಶದಲ್ಲಿ ದಿಢೀರನೆ ಪೊಲೀಸ್‌ ಸುರಕ್ಷತೆ ವ್ಯವಸ್ಥೆಯನ್ನು ತೆಗೆದದ್ದು ಅಪಾಯಕಾರಿಯಾಗಿತ್ತು.

ಆದರೆ, ವಿದ್ಯಾರ್ಥಿ ವಾಲೆಂಟಿರ್‌ ಗಳು ಹೆಚ್ಚಾದರು. ಪ್ರತಿಭಟನೆಯನ್ನು ಸ್ಥಗಿತಗೊಳಿಸುವ ದುರದ್ದೇಶದಿಂದ ಮಾರುವೇಷದಲ್ಲಿ ಬರುವ ಹಿಂದುತ್ವವಾದಿ, ಸರ್ಕಾರ ಪ್ರಯೋಜಿತ ಗೂಂಡಾ, ಮೋದಿ ಬಿಜೆಪಿ ಬೆಂಬಗಲಿರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರು ಕ್ರೌಡನ್ನು ನಿಯಂತ್ರಿಸ ತೊಡಗಿದರು. ಸೈಟಿನ ಒಳಗೆ ಹೋಗಲು ಮತ್ತು ಹೊರ ಬರಲು, ಶಿಸ್ತಿನಿಂದ ಸಾಲುಗಳಲ್ಲಿ ಹೋಗುವಂತೆ, ಒಬ್ಬರ ಕೈ ಮತ್ತೊಬ್ಬರು ಹಿಡಿದು ಸರಪಳಿ ಮಾಡಿ, ಹರಿದು ಬರುತ್ತಿದ್ದ ಜನರ ಗುಂಪನ್ನು ನಿರ್ದೇಶಿಸ ತೊಡಗಿದರು.

ಈ ಮಧ್ಯೆ ರಾಷ್ಟ್ರಿಯ ಮಾಧ್ಯಮ ಅಥವಾ ಸ್ಥಳೀಯ ಗೋದಿ ಮೀಡಿಯಾಗಳ ಪತ್ರಕರ್ತರು ಮೈಕ್‌ ಹಿಡಿದು ಬಂದರೆ, ವಿದ್ಯಾರ್ಥಿಗಳು ಅವರನ್ನು ಸುತ್ತಿಗಟ್ಟಿ “ಗೋದಿ ಮೀಡಿಯಾ ಚೋರ್‌ ಹೈ…ಗೋದಿ ಮೀಡಿಯಾ ಗೊ ಬ್ಯಾಕ್”‌ ಎಂದು ಕೂಗುತ್ತ ಜಂತರ್‌ ಮಂತರ್‌ ಸೈಟಿನಾಚೆ ಘೇರಾವ್‌ ಮಾಡುತ್ತಿದ್ದರು.

ಜುಲೈ 22ರಂದು ಪರಿಚಿತ ಕನ್ನಡ ಸುದ್ದಿವಾಹಿನಿಯೊಂದು ಜಂತರ್‌ ಮಂತರ್‌ ನಡೆಯುತ್ತಿರುವ ವಿದ್ಯಮಾನಗಳನ್ನು ಕುರಿತು ವಿಡಿಯೊವನ್ನು ಕಳುಹಿಸಲು ಕೋರಿತ್ತು. ಸಂಸತ್‌ ಮಾರ್ಗ್‌ ಮತ್ತು ಟಾಲ್‌ ಸ್ಟಾಯ್‌ ಮಾರ್ಗ್‌ ಕೂಡು ರಸ್ತೆಯಲ್ಲಿ ನಿಂತು ವಿಡಿಯೊ ಮಾಡುತ್ತಿದೆ. ವಿಡಿಯೊ ಮಾಡಿದ್ದು ಮುಗಿದ ತಕ್ಷಣ, ಅಲ್ಲೇ ನನ್ನನ್ನು ಗಮನಿಸುತ್ತಿದ್ದ ಒಬ್ಬಾತ ಬಂದು ಮಾತನಾಡಿಸಿದ. ಎತ್ತರಕ್ಕಿದ್ದ, ಅಜಾನುಬಾಹು ದೇಹದ ಆತ ನೋಡಲಿಕ್ಕೆ ಪೊಲೀಸ್‌ ನಂತೆ ಕಾಣುತ್ತಿದ್ದ. ತಾನು ದೈನಿಕ್‌ ಜಾಗರಣ್ ಪತ್ರಿಕೆಯ ಪತ್ರಕರ್ತ ಎಂದು ಪರಿಚಯಿಸಿಕೊಂಡು, ನನ್ನ ಹೆಸರು, ಊರು ಇತ್ಯಾದಿ ವಿವರ ಕೇಳಿದ. ಇದ್ದಕ್ಕಿದಂತೆ ನಿಮ್ಮ ಫೋಟೊ ಬೇಕು ನಿಲ್ಲಿ ತೆಗೆದುಕೊಳ್ಳುತ್ತೇನೆ ಎಂದಾಗ, ನಾನು ಎಚ್ಚರಗೊಂಡೆ. “ಅಲ್ಲ…ನನ್ನೊಬ್ಬನ ಫೋಟೊ ತೆಗೆದುಕೊಂಡು ಏನು ಮಾಡುವಿರಿ? ನೀವೂ ನಿಲ್ಲಿ…ಸೆಲ್ಫಿ ತೆಗೆದುಕೊಳ್ಳೋಣ” ಎಂದು, ಅದೇ ಹೊತ್ತಿಗೆ ಪರಿಚಯವಾಗಿದ್ದ ಆಂಧ್ರಪ್ರದೇಶದಿಂದ ಬಂದ ಯುವಕನೊಂದಿಗೆ ಫೋಟೊ ಕ್ಲಿಕ್ಕಿಸಿದೆ. ಮತ್ತೆ ಸಿಗೋಣ ಎಂದು ಅವರಸದಲ್ಲಿ ಹೊರಟ. ನನ್ನ ಗುಮಾನಿ ಹೆಚ್ಚಾಯಿತು. ತಡೆದು, ಫೋನ್‌ ನಂಬರ್‌ ಕೇಳಿ ಪಡೆದುಕೊಂಡೆ.

ನನ್ನ ಸುರಕ್ಷೆ, ಆರೋಗ್ಯ ವಿಚಾರಿಸಿ ಬೆಂಗಳೂರಿಂದ ಹಲವು ಪರಿಚಿತರು, ಗೆಳೆಯರು ಫೋನ್‌ ಮಾಡುತ್ತಿದ್ದರು. ಹಾಗೆ ಒಬ್ಬ ಮಿತ್ರರು ಫೋನ್‌ ಮಾಡಿದಾಗ “ದಯವಿಟ್ಟು ಪೊಲೀಸರಿಂದ ದೂರವಿರಿ. ನಮ್ಮ ಊರಲ್ಲಿ ಏನೇ ಆದರೂ ಪಾರು ಮಾಡಬಹುದು. ದೂರದ ದೆಹಲಿಯಲ್ಲಿ ಆಕಸ್ಮಾತ್‌ ಪೊಲೀಸರ ಕೈಗೆ ಬಿದ್ದಿರೊ… ಬಚಾವು ಮಾಡುವುದು ಕಷ್ಟ ಸಾಧ್ಯ” ಎಂಬ ಎಚ್ಚರಿಕೆಯ ಮಾತು ನನ್ನನ್ನು ಜಾಗೃತವಾಗಿರಿಸಿತ್ತು. ಹೊಟೇಲ್‌ ಗೆ ಬಂದು ರೂಮು ಸೇರಿದರೂ, ಯಾರಾದರೂ ಬಾಗಿಲು ತಟ್ಟಿದರೆ, ಫೋನ್‌ ಕಾಲ್‌ ಬಂದರೆ ಎಚ್ಚರಗೊಳ್ಳುತ್ತಿದೆ. ಕೂದಲೆಳೆಯಲ್ಲಿ ಅಂತಹ ಘಟನೆಯಿಂದ ಜುಲೈ 20ರಂದು ಪಾರಾಗಿದ್ದೆ.

ಬ್ಯಾರಿಕೇಡ್‌ ಅನ್ನು ಮುರಿಯಲು ವಿದ್ಯಾರ್ಥಿಗಳು ಹರಸಾಹಸ ಮಾಡುತ್ತಿದ್ದರೆ, ಹೊರ ನಿಂತ ಪೊಲೀಸರ ದಂಡು ಅದನ್ನು ಶತಾಯಗತಾಯ ವಿಫಲಗೊಳಿಸಲು ಹೆಣಗಾಡುತ್ತಿದ್ದರು. ನುಸುಳಿ ಬಂದ ವಿದ್ಯಾರ್ಥಿಗಳನ್ನು ದಯೆ, ದಾಕ್ಷಿಣ್ಯವಿಲ್ಲದೆ ಪೊಲೀಸ್‌ ಬಸ್ಸಲ್ಲಿ ತುರುಕುತ್ತಿದ್ದರು. ಪೊಲೀಸ್‌ ಅಧಿಕಾರಿಗಳು ಬ್ಯಾರಿಕೇಡ್‌ ಬಳಿ ಪತ್ರಕರ್ತರು ಸುಳಿಯದಂತೆ ದೂರ ಅಟ್ಟುತ್ತಿದ್ದರು. ನಾನು ಬ್ಯಾರಿಕೇಡ್‌ ಸಮೀಪ ನಿಂತು ಶೂಟ್‌ ಮಾಡುತ್ತಿದ್ದೆ. ಅದನ್ನು ಗಮನಿಸಿದ ತ್ರಿಬ್ಬಲ್‌ ಸ್ಟಾರ್‌ ಪೊಲೀಸ್‌ ಅಧಿಕಾರಿ ನನ್ನನ್ನು ಹತ್ತಿರಕ್ಕೆ ಕರೆದು “ನೀವ್ಯಾರು? ಪ್ರೊಟೆಸ್ಟ್‌ ನಲ್ಲಿದ್ದೀರ?” ಎಂದ. ಅನಿರೀಕ್ಷಿತ ಪ್ರಶ್ನೆಗೆ ಗಲಿಬಿಲಿಗೊಂಡವನು ತಟ್ಟನೆ “ಇಲ್ಲ. ನಾನು ಟೂರಿಸ್ಟ್‌” ಎಂದು ಸುಳ್ಳು ಹೇಳಿದೆ. “ಹಾಗಿದ್ದರೆ ವಿಡಿಯೊ ಶೂಟಿಂಗ್‌ ಯಾಕೆ ಮಾಡುತ್ತಿದ್ದೀರ?…..” ಎಂದೇನೊ ಹೇಳುತ್ತಿದ್ದವನ ಮಾತಿಗೆ ಪ್ರತಿಕ್ರಯಿಸದೆ ಅಲ್ಲಿಂದ ನಿಧಾನವಾಗಿ ದೂರ ಸರಿದೆ. ನಂತರ ನಾನು ಸುಳ್ಳು ಹೇಳಬಾರದಿತ್ತು ಅನಿಸಿತು. ಪತ್ರಕರ್ತ ಎಂದು ಒಮ್ಮೆ ಬುಸಿ ಬಿಟ್ಟಿದ್ದರೂ, ಆತ ಐಡೆಂಟಿಟಿ ಕೇಳಿದ್ದರೆ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುತ್ತಿದ್ದೆ. ಪ್ರತಿಭಟನೆಯಲ್ಲಿ ಉಳಿಯಬೇಕು ಎಂದರೆ ಸುಳ್ಳು ಹೇಳಿದ್ದು ತಪ್ಪಲ್ಲ ಎಂದು ನಂತರ ಕರೆ ಮಾಡಿದ ಗೆಳೆಯನೊಬ್ಬ ಸಮಾಧಾನ ಮಾಡಿದ.

ಶಿಕ್ಷಣ ಮಂತ್ರಿ ಧರ್ಮೇಂಧರ್‌ ಪ್ರಧಾನ್‌ ರಾಜೀನಾಮೆಗೆ ಪಟ್ಟು ಹಿಡಿದು ದಿನರಾತ್ರಿ ಪ್ರತಿಭಟನೆ ನಿರತ ವಿದ್ಯಾರ್ಥಿಗಳಲ್ಲಿ ಅದನ್ನು ಸಾಧಿಸಿಯೇ ತೀರುವ ಬದ್ಧತೆ ಅಖಂಡವಾಗಿತ್ತು. ಹಾಗಾಗಿ ಪ್ರತಿಭಟನೆಯ ನಿರಂತರತೆ ಕಾಲಮಿತಿಯನ್ನು ಮೀರಿದ್ದಾಯಿತು. ನಿರಂತರತೆ ಜೊತೆಗೆ ಪ್ರತಿಭಟನೆಯು, ಚಲನೆಗಾಗಿ, ವಿಸ್ತರಣೆಗಾಗಿ ಹಾತೊರೆಯುತ್ತಿತ್ತು. ಅಂದು ಜುಲೈ 22ರ ಸಂಜೆಯ ಹೊತ್ತಿಗೆ ಪ್ರತಿಭಟನೆಯಲ್ಲಿ ಅದು ಪ್ರಕಟಗೊಂಡಿತು.

WhatsApp Image 2026 07 22 at 18.27.31

ಜಂತರ್‌ ಮಂತರ್‌ ಸೈಟಿನಲ್ಲಿ ಕಾಲಿರಿಸಲು ಜಾಗವಿಲ್ಲದಷ್ಟು ವಿದ್ಯಾರ್ಥಿಗಳು ತುಂಬಿ ಹೋಗಿದ್ದರು. ಸೈಟಿನಾಚೆ ಟಾಲ್‌ ಸ್ಟಾಯ್‌ ಮಾರ್ಗ್‌ ಕೂಡ ಭರ್ತಿಯಾಗಿ, , ಕೇಂದ್ರ ಗೃಹ ಮಂತ್ರಾಲಯ, ಎಸ್‌ ಬಿ ಐ ಪಾಲಿಕೆ ಕೇಂದ್ರ ಇರುವ ಕೂಡು ಮುಖ್ಯರಸ್ತೆಯ ವರೆಗೂ ವಿದ್ಯಾರ್ಥಿಗಳು ನೆರೆಯುತ್ತಿದ್ದರು. ಬೆಳಿಗ್ಗೆಯಿಂದ ಆ ಸಂಸತ್‌ ಮಾರ್ಗ್‌ ಮುಖ್ಯರಸ್ತೆಯಲ್ಲಿ ಬಸ್ಸು, ಕಾರು, ವಾಹನಗಳ ಓಡಾಟ ಸರಾಗವಾಗಿತ್ತು. ಆದರೆ, ಸಂಜೆಯ ಹೊತ್ತಿಗೆ ವಿದ್ಯಾರ್ಥಿಗಳು ಕೂಡುರಸ್ತೆಯಲ್ಲಿ ಜಮಾವಣೆಯಾಗ ತೊಡಗಿ ವಾಹನ ಸಂಚಾರ ಬಂದಾಯಿತು. ಪೊಲೀಸರು ಮೈಕಿನಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡುವುದು ಅಪರಾಧವೆಂದು ಘೋಷಿಸುತ್ತಿದ್ದರೂ, ವಿದ್ಯಾರ್ಥಿಗಳು ಅದಕ್ಕೆ ಮೂರು ಕಾಸಿನ ಬೆಲೆ ಕೊಡದೆ ರಸ್ತೆಯಲ್ಲೇ ಕುಳಿತು ಘೋಷಣೆ ಕೂಗ ತೊಡಗಿದರು. ಈಗ ಪಟೇಲ್‌ ಚೌಕ್‌ ನಿಂದ ಕಾನೆಟ್‌ ಪ್ಲೇಸ್‌ ಗೆ ಹೋಗುವ ಮಾರ್ಗದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಂತು ಹೋಯಿತು. ರಾತ್ರಿ ಹತ್ತರ ಹೊತ್ತಿಗೆ ಇಡೀ ಪ್ರದೇಶ ವಿದ್ಯಾರ್ಥಿಮಯವಾಯಿತು.

ಜಂತರ್‌ ಮಂತರ್‌ ಸೈಟ್‌ ಗೆ ಹಲವು ರಸ್ತೆಗಳಿಂದ ಸೇರಬಹುದು; ಆ ಎಲ್ಲಾ ರಸ್ತೆಗಳ ಪ್ರವೇಶದಲ್ಲೇ ಪೊಲೀಸರು ಸಂಚಾರವನ್ನು ನಿರ್ಬಂಧಿಸಿದ್ದರಿಂದ ಆಟೋದವರು ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಬರಲು ತಯಾರಿದ್ದವರು ಸುತ್ತಿ ಬಳಸಿ ಬರಬೇಕಾದ್ದರಿಂದ ಹೆಚ್ಚು ಹಣ ಕೇಳುತ್ತಿದ್ದರು. ಅಂದು ರಾತ್ರಿ ಸುಮಾರು ಹತ್ತು ಗಂಟೆ, ಹಾಗೆ ಆಟೋ ಹತ್ತಿದಾಗ ಜೈಸಿಂಗ್‌ ಮಾರ್ಗ್‌, ಪಟೇಲ್‌ ಚೌಕ್‌ ನಿಂದ ರಸ್ತೆ ಬಂದಾಗಿದ್ದರಿಂದ ಆಟೋದವ ಅದೆಲ್ಲಿ ತಂದು ಬಿಟ್ಟನೊ ಮೊದಲಿಗೆ ನನಗೆ ತಿಳಿಯಲಿಲ್ಲ. ಆಮೇಲೆ ಅದು ಜನಪಥ್‌ ಮಾರ್ಗ್‌ ಎಂದು ತಿಳಿದದ್ದು. ಅಲ್ಲಿಂದ ಕಾಲ್ನಡಿಗೆಯಲ್ಲಿ ಸೈಟಿನತ್ತ ಹೊರಟರೆ ಎಲ್ಲಾ ಇತರೆ ರಸ್ತೆಯಲ್ಲಿದ್ದಂತೆ ಇಲ್ಲಿಯೂ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಹಾಡುತ್ತ, ಕುಣಿಯುತ್ತ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ರಾತ್ರಿಯಾದರೂ ತಣ್ಣಗಾಗದ ಬಿಸಿ ವಾತಾವರಣದ ಸೆಕೆಯಿಂದ ಇಡೀ ಮೈ ತೊಯ್ದು ಹೋಗಿತ್ತು.

ಹಾಗೇ ವಿದ್ಯಾರ್ಥಿ ಸಮೂಹಗಳನ್ನು ನೀವಾರಿಸಿಕೊಂಡು, ಸೈಟಿಗೆ ತಲುಪುವ ದಾರಿ ಕೇಳುತ್ತ ಒಂದೆಡೆ ಬಂದಾಗ ಆಶ್ಚರ್ಯವಾಯಿತು. ಅಲ್ಲಿ ಮತ್ತೊಂದು ಗುಂಪು ಪ್ರತಿಭಟನೆಯಲ್ಲಿ ನಿರತವಾಗಿತ್ತು. ಜಂತರ್‌ ಮಂತರ್‌ ಸೈಟಿನಲ್ಲಿ ನಡೆಯುತ್ತಿದ್ದ ಕಾಕ್ರೋಚ್‌ ಜನತಾ ಪಾರ್ಟಿಗೆ ಸೇರಿರದ ಪಂಜಾಬಿ ಸಿಖ್ ವಿದ್ಯಾರ್ಥಿ ಸಮುದಾಯದ ಯುವಕರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಅಲ್ಲೂ ದೆಹಲಿ ಪೊಲೀಸ್‌ RAF CRPF ದಂಡು ಹೆಚ್ಚಾಗಿಯೇ ಇತ್ತು. ಹಾಗೇ ವಿದ್ಯಾರ್ಥಿಗಳ ಸಂಖ್ಯೆ ಕೂಡ. ವೇದಿಕೆ ಇರದೆ, ಯುವಕರು ಗುಂಪನ್ನು ಉದ್ದೇಶಿಸಿ, ದೆಹಲಿ ಪೊಲೀಸ್‌ ಬಸ್‌ ಮೇಲೆ ಕುಳಿತು ಮಾತಾಡುತ್ತಿದ್ದದ್ದು ವಿಶೇಷವಾಗಿತ್ತು.

ಜುಲೈ 23ರಂದು – ಹೆಚ್ಚಾಗಿ ಸಿಖ್‌ ಸಮುದಾಯದ ಯುವಕರು ವಾಲೆಂಟಿರ್‌ ಜವಾಬ್ದಾರಿಯನ್ನು ವಹಿಸಿಕೊಂಡು ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಂಘರ್ಷಕ್ಕೆ ಹೋಗದಂತೆ ಎಚ್ಚರವಹಿಸುವುದು ಕಂಡಿತು. ಕೂಡು ರಸ್ತೆಯ ಸರ್ಕಲ್‌ ನಲ್ಲಿ ಯುವಕರು ಕೈಗಳನ್ನು ಹಿಡಿದು ಮಾನವ ಸರಪಳಿ ರಚಿಸಿ, ಪೊಲೀಸರ ದಂಡಿನಿಂದ ದೂರದಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದರು. ಯುವಕರ ಘೋಷಣೆ, ಹಾಡು ನಿರಂತರ ಮೊಳಗುತ್ತಿತ್ತು. ಹಾಗೆ ಜಂತರ್‌ ಮಂತರ್‌ ಸೈಟಿನೊಳಗೆ ಹೋಗಲು ಮತ್ತು ಅಲ್ಲಿಂದ ಆಚೆ ಬರಲು ತ್ರಾಸ ಪಡಬೇಕಿತ್ತು. ಒಂದೇ ಸಾಲಿನ ಕ್ಯೂ ಮಾಡಿ ಒಬ್ಬೊಬ್ಬರನ್ನಾಗಿ ಒಳ ಹೋಗಲು, ಹೊರ ಬರಲು ಬಿಡುತ್ತಿದ್ದರು. ಹಾಗಾಗಿ ಕ್ಯೂನಲ್ಲಿ ತಾಸುಗಟ್ಟಲೆ ನಿಲ್ಲಬೇಕಾಗುತ್ತಿತ್ತು. ಮೊದಲೇ ಬಿಸಿಲಿನ ಧಗೆ ಅಷ್ಟೊಂದು ಉದ್ದ ಕ್ಯೂನಲ್ಲಿ ಹೇಗಪ್ಪ ನಿಲ್ಲುವುದು ಎಂದು, ಅಲ್ಲಿದ್ದ ಯುವಕನಿಗೆ ʼನಾನು ಬೆಂಗಳೂರಿಂದ ಬಂದಿದ್ದೇನೆ. ರಿಪೋರ್ಟ್‌ ಮಾಡಬೇಕು!ʼ ಎಂದು ಬುಸಿ ಬಿಟ್ಟೆ. ಒಂದು ನಿಮಿಷ ಪಕ್ಕಕ್ಕೆ ನಿಲ್ಲಲು ಹೇಳಿ ನಂತರ ಒಳಗೆ ಹೋಗಲು ಸಹಾಯ ಮಾಡಿದ.

ಜಂತರ್‌ ಮಂತರ್‌ ಗೆ ನನ್ನ ಮೊದಲ ಭೇಟಿ ಜುಲೈ 19 ರಿಂದಲೂ ನಾನು ಗಮನಿಸಿದ್ದು. ಅಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಯುವಕರು ಬಂದು ಸೇರಿಸುತ್ತಿದ್ದರೂ, ಯಾರಿಗೂ ಕುಡಿಯುವ ನೀರಿಗೆ ಮತ್ತು ಆಹಾರಕ್ಕೆ ಕೊರತೆ ಇರಲಿಲ್ಲ. ಅಲ್ಲಿಗೆ ಬಂದವರು ಮತ್ತು ಸೈಟಿಗೆ ಬರಲಾಗದವರು, ಹೊರಗಿನಿಂದಲೇ ಆಹಾರದ ಪೊಟ್ಟಣಗಳನ್ನು ತಾವೇ ಖರೀದಿಸಿ ಸೈಟಿಗೆ ಸರಬರಾಜು ಮಾಡುತ್ತಿದ್ದರು. ಜುಲೈ 23ರಂದು ಸಿಖ್‌ ಸಮುದಾಯದ ಯುವಕರು ಅಲ್ಲೇ ಅಡುಗೆ ತಯಾರು ಮಾಡುವ ಲಂಗರ್‌ ಹಾಕಿ, ಪ್ರತಿಭಟನಾಕಾರರ ಹಸಿವು ನೀಗಿಸುತ್ತಿದ್ದರು.

ಬಿಸಿಲ ಧಗೆಯಲ್ಲೇ ಸೈಟಿನಲ್ಲಿ ಧರಣಿ ಕೂತವರಿಗೆ, ಅವರ ಮಧ್ಯ ಅಲ್ಲಲ್ಲಿ ನಿಂತ ವಾಲೆಂಟಿರ್‌ ಗಳು ನಿರಂತರವಾಗಿ ಕೈ ಬೀಸಣಿಗೆಯಿಂದ ಗಾಳಿ ಹಾಕಿ, ಆದಷ್ಟು ಅವರು ದಣಿಯದಂತೆ ಶ್ರಮ ಪಡುತ್ತಿದ್ದರು. ಇನ್ನೂ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಂತವರಿಗೆ ಓಡಾಡಿಕೊಂಡು ಗಾಳಿ ಬೀಸುತ್ತಿದ್ದರು. ಹಾಗೆ ಒಬ್ಬ ಯುವಕ ನನಗೂ ಗಾಳಿ ಬೀಸುತ್ತ ನಿಂತ. ನಾನು “ಥ್ಯಾಂಕ್ಸ್…ಪರವಾಗಿಲ್ಲ ಬಿಡಿ” ಎಂದೆ. ಅದಕ್ಕವನು “ಸರ್…ನಮಗಾಗಿ ನೀವು ಇಷ್ಟೊಂದು ಬೆವರು ಹರಿಸುತ್ತಿದ್ದೀರ…ನಾವು ಇಷ್ಟು ಮಾಡದಿದ್ದರೆ ಹೇಗೆ?” ಅಂದ. ಆ ಯುವಕನ ವಿನಯ ನನ್ನ ಮನ ತಟ್ಟಿತು. ಈ ಮಕ್ಕಳು ಮನೆ ಬಿಟ್ಟು, ಓದುವುದನ್ನು ಬಿಟ್ಟು ಅನ್ಯಾಯವಾಗಿ ಎಷ್ಟೆಲ್ಲಾ ಸಂಕಷ್ಟಕ್ಕೆ ಸಿಕ್ಕರು ಎನಿಸಿತು.

ಕಳೆದ ದಿನಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಕಾಣುತ್ತಿದ್ದ ಜೆನ್‌ ಆಲ್ಫಾ ಮಕ್ಕಳು ಅಂದರೆ ಪ್ರೈಮರಿ, ಹೈಸ್ಕೂಲ್‌ ನಲ್ಲಿ ಓದುವ ಮಕ್ಕಳು, ಈಗ ಗುಂಪು ಗುಂಪುಗಳಾಗಿ ಬರತೊಡಗಿದ್ದರು. ಎಲ್ಲರೂ ಶಾಲಾ ಯೂನಿಫಾರಮ್‌ ನಲ್ಲಿ ಇದ್ದದ್ದು ನೋಡಿದರೆ ಬಹುಶಃ ಕ್ಲಾಸುಗಳಿಗೆ ಚಕ್ಕರ್‌ ಹೊಡೆದು ಬಂದಿರಬಹುದು. ʼಗಲಿ ಗಲಿ ಮೇ ಶೋರ್‌ ಹೇ…ಮೋದಿ ಸಾಲಾ ಚೋರ್‌ ಹೇ” ಘೋಷಣೆ ಕೂಗುತ್ತ ಪೋಸ್ಟರ್‌ ಗಳನ್ನು ಹಿಡಿದು ಮೆರವಣಿಗೆ ಸಾಗುತ್ತಿದ್ದರು. ಅದೇ ವಯಸ್ಸಿನ ಹೆಣ್ಣುಮಕ್ಕಳು ಬರತೊಡಗಿದ್ದರು. ಶಾಲೆಯಲ್ಲಿ ಟೀಚರ್‌ ಗೆ ಅಥವಾ ಮನೆಯಲ್ಲಿ ಪೋಷಕರಿಗೆ ಹೇಳಿ ಬಂದಿದ್ದೀರ? ಎಂಬ ಪ್ರಶ್ನೆಗೆ ಸಂಕೋಚದಿಂದ ತಲೆಯಾಡಿಸಿ ಜಾರಿ ಕೊಳ್ಳುತ್ತಿದ್ದರು. ಅಂಥಹ ಪುಟ್ಟಮಕ್ಕಳಿಬ್ಬರು “ಪಿ ಎಮ್‌ ಮೋದಿ ಚಹಾ ಬೇಕಾದರೆ ಮಾಡು…ಆದರೆ, ಜನರನ್ನು ಮೂರ್ಖರನ್ನಾಗಿ ಮಾಡಬೇಡ” ಬರಹಯುಳ್ಳ ದೊಡ್ಡ ಪೋಸ್ಟರ್‌ ಹಿಡಿದಿದ್ದರು.

ಮಗಳು ಫೋನ್‌ ಮಾಡಿದ್ದಳು. ʼಈ ಪ್ರತಿಭಟನೆ ಸದ್ಯಕ್ಕೆ ಮುಗಿಯುವಂತೆ ಕಾಣುವುದಿಲ್ಲ. ಮೂರು ತಿಂಗಳಾದರೂ ಆದೀತು…ಆರು ತಿಂಗಳೂ ಆದೀತು. ಯಾವುದಾದರೂ ಒಂದು ದಿನ ನಿಶ್ಚಯ ಮಾಡಿ ವಾಪಸ್ಸು ಬಂದು ಬಿಡುʼ ಎಂದಳು. ಅವಳು ಹೇಳಿದ್ದು ಸರಿಯೆನಿಸಿತು. ಸಿಜೆಪಿ ಸಂಚಾಲಕರು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ, ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ವಿಷಯದಲ್ಲಿ ಮೋದಿ ಸರ್ಕಾರ ಮೌನವಾಗಿತ್ತು. ಹಾಗೆಂದು ವಿದ್ಯಾರ್ಥಿಗಳು ಹಿಂದೆ ಸರಿಯುವ ಮನಸ್ಥಿತಿಯಲ್ಲಿರಲಿಲ್ಲ.

ಜುಲೈ 24ರ ಹೊತ್ತಿಗೆ ಅಭಿಜಿತ್‌ ದೀಪ್ಕೆ ಸೇರಿ ಸಿಜೆಪಿ ಸಂಚಾಲಕರು ಮೋದಿ ಸರ್ಕಾರಕ್ಕೆ, ರಾಜೀನಾಮೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 48 ಗಂಟೆಗಳ ಕಾಲ ಗಡುವು ನೀಡಿದರು. ಅಷ್ಟರೊಳಗೆ ಶಿಕ್ಷಣ ಮಂತ್ರಿ ರಾಜೀನಾಮೆ ಕೊಡದಿದ್ದರೆ, ಜುಲೈ 20ರಂದು ಆದ ಪ್ರತಿಭಟನೆಗಿಂತಲೂ ಹೆಚ್ಚು ಪಟ್ಟು ದೆಹಲಿಯಲ್ಲಿ ಮತ್ತೊಮ್ಮೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳುತ್ತೇವೆ ಎಂಬ ಎಚ್ಚರಿಕೆ ರವಾನಿಸಿದರು.

ಮಗಳಿಗೆ ಫೋನ್‌ ಮಾಡಿ, ಎರಡು ದಿನದ ಗಡುವು ಅಂದರೆ ಜುಲೈ 25 ಮತ್ತು 26 ನೋಡಿಕೊಂಡು 27ಕ್ಕೆ ಬೆಂಗಳೂರಿಗೆ ಹೊರಟು ಬರುತ್ತೇನೆ ಎಂದು ತಿಳಿಸಿದೆ.

ಆಳುವ ಸರ್ಕಾರಕ್ಕೆ ಮಾತೃ ಹೃದಯವಿರಬೇಕು. ಆದರೆ ಮೋದಿ ಸರಕಾರಕ್ಕೆ ಮಾನವ ಹೃದಯವೇ ಇರಲಿಲ್ಲ. 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಂಸತ್‌ ಚಲೋ ನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ದಾನವರ ದಾಳಿ ಆಗಿದೆ, ವಾಂಗ್ಚುಕ್‌ ಅವರ ಜೊತೆ ಐಸಾದ ನೇಹಾ ಬೋರಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪವಾಸ ನಿರಶನ ಮಾಡಿದ್ದಾರೆ…ಆದರೆ, ಕೇವಲ ಒಬ್ಬನೇ ಒಬ್ಬ ವ್ಯಕ್ತಿಯನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ತೋರುತ್ತಿರುವ ಹಠಮಾರಿತನ ಪ್ರಜಾತಂತ್ರ ವ್ಯವಸ್ಥೆಯ ಅಣಕ. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಮೇಲಿನ ದ್ವೇಷ, ಅಸಂವೇದನೆ ಅಸಹ್ಯ ಹುಟ್ಟಿಸುತ್ತಿತ್ತು. ಧರ್ಮೇಂದ್ರ ಪ್ರಧಾನ್‌ ಬಿಟ್ಟರೆ ಶಿಕ್ಷಣ ಮಂತ್ರಿಯಾಗುವ ಅರ್ಹತೆ, ಜಗತ್ತಿನಲ್ಲಿಯೇ ತನ್ನದು ಅತಿ ದೊಡ್ಡದು ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷದಲ್ಲಿ ಯಾರೊಬ್ಬನೂ ಇಲ್ಲವೇ? ಎಂಬ ಪ್ರಶ್ನೆ ಏಳುತ್ತಿತ್ತು.

ಬೆಂಗಳೂರಿಗೆ ಹೋಗುವ ಮುಂಚೆ, ಸಂಸತ್‌ ಚಲೋ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಪಟೇಲ್‌ ಚೌಕ್‌ ಈಗ ಹೇಗಿದೆ ನೋಡಿ ಬರೋಣವೆಂದು ಆಟೊ ಹತ್ತಿದೆ. ರಾತ್ರಿ ಸುಮಾರು ಹತ್ತುವರೆ ಗಂಟೆಯಾಗಿತ್ತು. ಜಂತರ್‌ ಮಂತರ್‌ ಗೆ ಹೋಗುವ ದಾರಿಯನ್ನು ಈಗಲೂ ಪೊಲೀಸ್‌ ನಿಗ್ರಹದಲ್ಲಿ, ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರು. ಆಟೊದವನು ಮತ್ತೊಂದು ರಸ್ತೆಯಲ್ಲಿ ತಂದು ಬಿಟ್ಟ. ಅದು ಕೇರಳ ಭವನಕ್ಕೆ ಹೋಗುವ ದಾರಿ. ಜಂತರ್‌ ಮಂತರ್‌ ಗೆ ಸೈಟಿಗೆ ಹೋಗುವ ಮತ್ತೊಂದು ರಸ್ತೆ. ಕಾಲು ಕಿಲೋಮೀಟರ್‌ ನಡೆದು ಹೋದರೆ ಅದು ಸೈಟಲ್ಲಿದ್ದ ಮುಖ್ಯ ವೇದಿಕೆಯ ಹಿಂಭಾಗಕ್ಕೆ ತಲುಪಿಸಿತು. ಇಷ್ಟು ದಿನಗಳಲ್ಲಿ ಅಂದೇ ಅಷ್ಟು ಸಮೀಪದಲ್ಲಿ ವೇದಿಕೆಯನ್ನು ನೋಡಲು ಸಾಧ್ಯವಾಗಿದ್ದು.

ವಿದ್ಯಾರ್ಥಿಗಳೊಂದಿಗೆ ಅಲ್ಲೇ ಒಂದು ತಾಸು ಉಳಿದೆ. ಹೊಟ್ಟೆ ಚುರುಗುಟ್ಟುತ್ತಿತ್ತು. ಹನ್ನೊಂದರ ರಾತ್ರಿ ಚೂನಾ ಮಂಡಿಲೀ ತಿಂಡಿ ಸಿಗುವುದು ಕಷ್ಟ. ವಾಲೆಂಟಿರ್‌ ಗಳು ಹಂಚುತ್ತಿದ್ದ ತಿಂಡಿ ಪೊಟ್ಟಣ ಪಡೆದು ರೂಮಿಗೆ ಬಂದಾಗ ಹನ್ನೆರಡು ಗಂಟೆಯಾಗಿತ್ತು. ಇಷ್ಟು ದಿನ ಇದ್ದು, ಯಾವ ಫಲಿತಾಂಶ ಕಾಣದೆ ವಾಪಸ್ಸು ಬೆಂಗಳೂರಿಗೆ ಹೋಗುವ ಚಿಂತೆಯಲ್ಲಿ ಮಲಗಿದೆ.

ಬೆಳಿಗ್ಗೆ ಎದ್ದಾಗ ಆಗಲೇ ಹತ್ತು ಘಂಟೆಯಾಗಿತ್ತು. ಕೆಲವು ದಿನಗಳಿಂದ ತಿಂಡಿಊಟಕ್ಕಾಗಿ ಅಲೆಯುವುದಕ್ಕೆ ಹೋಗುತ್ತಿರಲಿಲ್ಲ. ಮಗಳು ಬೆಂಗಳೂರಿನಿಂದಲೇ, ಆನ್‌ ಲೈನಲ್ಲಿ ಆರ್ಡರ್‌ ಮಾಡುತ್ತಿದ್ದರಿಂದ ಹೊಟೇಲ್ಲಿಗೆ ಸೀದಾ ತಿಂಡಿ ಪೊಟ್ಟಣವನ್ನು ಜೊಮೊಟೊ ಹುಡುಗರು ತಲುಪಿಸುತ್ತಿದ್ದರು. ಗಬಗಬನೇ ತಿಂಡಿ ತಿಂದು, ಅದಾಗಲೇ ಪರಿಚಯವಾಗಿದ್ದ, ನಿತ್ಯ ನನ್ನನ್ನು ಜಂತರ್‌ ಮಂತರ್‌ ಗೆ ಕರೆದೊಯ್ಯುತ್ತಿದ್ದ ಆಟೊ ಮಾಲೀಕ ನಕುಲ್‌ ಸಿಂಗ್‌ ನ ಗಾಡಿ ಹತ್ತಿ ಹೊರಟೆ.

ದೆಹಲಿ ಪ್ರತಿಭಟನೆ 1

ಜೈ ಸಿಂಗ್‌ ಮಾರ್ಗಕ್ಕೆ ಬಂದಾಗ ದಿನವೂ ತೆರೆದಿರುತ್ತಿದ್ದ ರಸ್ತೆಯನ್ನು ಬಂದ್‌ ಮಾಡಿದ್ದರು. ಹಿಂದಿನ ದಿನಾ ಜಂತರ್‌ ಮಂತರ್‌ ಹೊರಗಡೆ ಕೂಡು ರಸ್ತೆಯಲ್ಲಿ ಪೊಲೀಸ್‌ ಪಡೆಗಳು ಹೆಚ್ಚಿಸಿರುವುದನ್ನು ಗಮನಿಸಿದ್ದೆ. ಇವತ್ತು ಮತ್ತೇನು ಅನಾಹುತ ಕಾದಿದೆಯೊ ಎಂದು ಕೊಂಡು, ಬ್ಯಾರಿಕೇಡ್‌ ಬಳಿ ಇದ್ದ ಪೊಲೀಸ್‌ ಅನ್ನು ಏನೂ ಗೊತ್ತಿಲ್ಲದವನಂತೆ “ಸರ್…ಜಂತರ್‌ ಮಂತರ್‌ ನೋಡಲಿಕ್ಕೆ ಹೋಗಲು ಯಾವ ರಸ್ತೆಯಲ್ಲಿ ಹೋಗಬೇಕು?” ಅಂದೆ. ಅವನು ಎಲ್ಲಾ ತಿಳಿದವನಂತೆ “ಆರಾಮವಾಗಿರಿ. ಮಿನಿಷ್ಟರ್‌ ರಿಸೈನ್‌ ಮಾಡಿದ್ದಾರೆ. ಮುಂದೆ ಹೋಗಿ ಅಲ್ಲಿಂದ ಹೋಗಬಹುದು” ಅಂದ. ನನಗೆ ಶಾಕ್‌ ಆಯಿತು.

ಇವತ್ತು ಇನ್ನು ಜುಲೈ 25. ಸಿಜೆಪಿ ಗಡುವು ಕೊಟ್ಟು 12 ತಾಸು ಆಗಿರಲಿಲ್ಲ. ಆಗಲೇ ಧರ್ಮೇಂಧರ್‌ ಪ್ರಧಾನ್‌ ರಾಜೀನಾಮೆ? ಸಂಶಯಗೊಂಡು ಬೆಂಗಳೂರಿನ ಕೆಲವು ಪತ್ರಕರ್ತ – ಮಿತ್ರರಿಗೆ ಸುದ್ದಿ ನಿಜವಾ? ಪರೀಶಿಲಿಸಲು ಕೇಳಿ ಕೊಂಡೆ. ಹೆಚ್ಚು ಕಮ್ಮಿ ಅವರೂ ಅದನ್ನೇ ಹೇಳಿದರು. ರಾಜೀನಾಮೆ ಆಗಿದೆ. ಆಫೀಶಿಯಲ್‌ ಆಗಿ ಅನೌಸ್ಸ್‌ ಆಗಬೇಕು ಎಂದರು. ನನಗೆ ಟ್ರಾಫಿಕ್ಕಿನ ಆ ರಸ್ತೆಯಲ್ಲೇ ಕುಣಿದಾಡುವಂತಾಯಿತು. ಕೇರಳ ಭವನ ಇದ್ದ ರಸ್ತೆಯ ಕಡೆ ದಾಪುಗಾಲು ಹಾಕಿದೆ.

ಜಂತರ್‌ ಮಂತರ್‌ ಸೈಟಿನಲ್ಲಿ ವಿದ್ಯಾರ್ಥಿ, ಯುವಕರ ವಿಜಯೋತ್ಸಾಹದ ಸಂಭ್ರಮ ತಾರಕಕ್ಕೇರಿತ್ತು. ಖುಷಿಗೆ ಎಣೆಯೇ ಇರಲಿಲ್ಲ. ಎಲ್ಲರ ಮುಖದಲ್ಲಿ ಎಂಥದೋ ನಿರಾಳತೆ, ಮಂದಹಾಸ, ಸಂತೋಷ. ಬಿಸಿಲು, ಮಳೆ, ಲಾಠಿ ಏಟು, ಟಿಯರ್‌ ಗ್ಯಾಸ್‌…ಎಲ್ಲವನ್ನೂ ಮರೆತಂತೆ ಕುಣಿಯುತ್ತಿದ್ದರು.

ಎಂದಿಗಿಂತ ಜೋರಾಗಿ “ವಂದೇ ಮಾತರಂ” “ಭಾರತ್‌ ಮಾತಾಕೀ…ಜೈ” “ಜೈ ಭೀಮ್”‌ “ಇಂಕ್ವಿಲಾಬ್‌ ಜಿಂದಾಬಾದ್” ಘೋಷಣೆಯು ಜಂತರ್‌ ಮಂತರ್‌ ಸೈಟಿನಲ್ಲಿ ಪ್ರತಿಧ್ವನಿಸುತ್ತಿದ್ದವು. ವಿದ್ಯಾರ್ಥಿಯೊಬ್ಬ ಬಂದು ಸಿಹಿ ಲಡ್ಡು ತಿನ್ನಿಸಿದ. ಅವು ಮರೆಯಲಾರದ‌ ಭಾವುಕ ಕ್ಷಣಗಳು!

ವೇದಿಕೆಯು ಕಿಕ್ಕಿರಿದು ಎಲ್ಲರೂ ಪರಸ್ಪರ ಅಭಿನಂದಿಸುತ್ತಿದ್ದರು. ಅಭೀಜಿತ್‌ ದೀಪ್ಕೆ, ಸೌರಭ್‌ ದಾಸ್‌, ಅಶುತೋಶ್‌ ರಂಕಾ ಮತ್ತಿತರ ಎಲ್ಲಾ ಸಿಜೆಪಿ ಪದಾಧಿಕಾರಿಗಳು ಇಷ್ಟು ದಿನ ಹೋರಾಟದ ಸಾರ್ಥಕತೆಯ ಕ್ಷಣಗಳನ್ನು ಸಂಭ್ರಮಿಸುತ್ತಿದ್ದರು. ದೀಪ್ಕೆ, ಸೊನಮ್‌ ವಾಂಗ್ಚುಕ್‌ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೆಯೇ, ಯಾರ ಬೀಸು ಹೇಳಿಕೆಯಿಂದ ಜೆನ್‌ ಜಿ ಆಂದೋಲನ ಪ್ರಾರಂಭವಾಯಿತೊ ಆ ಸುಪ್ರೀಮ್‌ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತರನ್ನು ನೆನೆಯಲು ಮರೆಯಲಿಲ್ಲ. “ಈ ಜಯ ವಿದ್ಯಾರ್ಥಿಗಳ ಜಯ…ಈ ದೇಶದ ಯುವಜನರ ಜಯ…ಇಲ್ಲಿ ನೆರೆದ ಎಲ್ಲರ ಜಯ” ಎಂದ ದೀಪ್ಕೆ, ಆತ್ಮಹತ್ಯೆ ಮಾಡಿಕೊಂಡ 21 ವಿದ್ಯಾರ್ಥಿಗಳ ಪ್ರತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ಆಂದೋಲನದ ಯಶಸ್ಸನ್ನು ಅವರಿಗೆ ಸಮರ್ಪಿಸಿದರು.

ಇವತ್ತು ನಾಳೆ ಎಂದು ಮುಂದೆ ಹಾಕುತ್ತಲೇ ದೆಹಲಿಯಲ್ಲಿ ಉಳಿದದ್ದು ಸಾರ್ಥಕವೆನಿಸಿತು. ಮೊದಲಿಗೆ ಮಡದಿ, ಮಗಳು ಅಳಿಯನಿಗೆ ವಿಷಯ ತಿಳಿಸಿದೆ. ಅವರು ಬಹಳ ಖುಷಿಪಟ್ಟರು. ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಹಾಕಿದಾಗ ಎಲ್ಲರಿಂದಲೂ ಅಭಿನಂದನೆಯ ಸುರಿಮಳೆಯಾಯಿತು.

ವಿಜಯದ ಘೋಷಣೆ ಕೂಗುತ್ತ ವಿದ್ಯಾರ್ಥಿಗಳೊಂದಿಗೆ ಸುಮಾರು ಹೊತ್ತು ಅಲ್ಲೇ ಉಳಿದೆ. ಸೌರಭ್‌ ದಾಸ್‌ ಮತ್ತು ಅಶುತೋಶ್‌ ರಂಕಾ ರೊಂದಿಗೆ ಕೇಂದ್ರ ಮಂತ್ರಿಗಳಾದ ಜೆ ಪಿ ನಡ್ಡಾ, ಜಿತೇಂದ್ರ ಸಿಂಗ್‌ ಅವರ ಪತ್ರಿಕಾಗೋಷ್ಟಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿತ್ತು. ಸಿಜೆಪಿಯ ಪ್ರಮುಖ ಬೇಡಿಕೆಗಳಾದ, ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿ ಕುಟುಂಬದವರಿಗೂ ಪರಿಹಾರ ಕೊಡುವುದು ಸೇರಿದಂತೆ ಜುಲೈ 20ರಂದು ಶಾಂತಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಸ್ಸು ಪಡೆಯಬೇಕು; ಅದರ ಎಫ್‌ ಐ ಆರ್‌ ಕಾಪಿಗಳನ್ನು ಸಿಜೆಪಿ ಪದಾಧಿಕಾರಿಗಳಿಗೆ ಕೊಡಬೇಕು ಎಂಬ ಷರತ್ತುಗಳಿಗೆ ಮಂತ್ರಿಗಳು ಸಾರ್ವಜನಿಕರ ಎದುರಿಗೆ ಒಪ್ಪಿ, ಮುಂದೆಯೂ ದೆಹಲಿ ಅಥವಾ ದೇಶದೆಲ್ಲೆಡೆ ಯಾವ ಕೇಸುಗಳನ್ನು ವಿದ್ಯಾರ್ಥಿಗಳ ಮೇಲೆ ಹಾಕುವುದಿಲ್ಲ ಎಂದು ಭರವಸೆಯನ್ನು ಇತ್ತರು.

ಅಷ್ಟು ಬೇಗ ಮೋದಿ ಸರ್ಕಾರ ಮಣಿದು, ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಒಪ್ಪುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿ, ನಂಬುವುದು ಕಷ್ಟವಾಗಿತ್ತು. ಆರು ವರ್ಷದ ಹಿಂದೆ ಅಖಂಡ ರೈತ ಚಳುವಳಿಯ ಯಶಸ್ಸಿನ ನಂತರ ದೇಶದಲ್ಲಿ ವಿದ್ಯಾರ್ಥಿ ಆಂದೋಲನ ಯಶಸ್ವಿಯಾಗಿದ್ದು ಐತಿಹಾಸಿಕ ಸಾಧನೆ. ಕೇವಲ ಶೇಕಡ 34 ಮತದೊಂದಿಗೆ ಮಿತ್ರ ಪಕ್ಷಗಳ ಬೆಂಬಲದಿಂದ ಅಧಿಕಾರ ಹಿಡಿದ ಬಿಜೆಪಿ -ಮೋದಿ ಸರ್ಕಾರದ ಅಧಿಕಾರದ ನಶೆಗೆ, ದುರಂಹಕಾರಕ್ಕೆ ಈ ಚಳುವಳಿ ಸಾಕಷ್ಟು ಪೆಟ್ಟು ಕೊಟ್ಟಿತ್ತು. ಅಲ್ಲದೆ, ಜಂತರ್‌ ಮಂತರ್‌ ಪ್ರತಿಭಟನೆ ದೇಶದ ಎಲ್ಲೆಡೆ ಜನರಿಗೆ ಕೊಟ್ಟ ಮಾನಸಿಕ ಸ್ಥೈರ್ಯ, ಯಾವ ಅಂಜಿಕೆ ಇಲ್ಲದೆ ಆಳುವ ಸರ್ಕಾರದ ಅನೀತಿಗಳನ್ನು ಪ್ರಶ್ನಿಸುವ ಧೈರ್ಯ ಅಸಾಧಾರಣವಾದದು. ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ, ಪ್ರಜಾತಂತ್ರದಲ್ಲಿ ಆಳುವ ಸರ್ಕಾರವನ್ನು ಒಗ್ಗಟ್ಟಿದ್ದರೆ ಬಗ್ಗಿಸಬಹುದು ಎಂಬುದಕ್ಕೆ ಒಂದು ಉದಾಹರಣೆ ಅಷ್ಟೇ. ರಾಜೀನಾಮೆಯಿಂದ ಆಂದೋಲನ ಎಲ್ಲವನ್ನೂ ಸಾಧಿಸಿತು ಎಂದೇನಿಲ್ಲ. ಆದರೆ, ಅದರಿಂದ ಜೆನ್‌ ಜಿ ಮತ್ತು ಜೆನ್‌ ಆಲ್ಫಾ ಯುವಕರಲ್ಲಿ ಚಿಂತಿಸುವ, ಪ್ರಶ್ನಿಸುವ ಮನೋಧರ್ಮವನ್ನು ಹುಟ್ಟು ಹಾಕಿದ್ದು ದೊಡ್ಡ ಸಾಧನೆಯೇ!

ನೀಟ್‌ ಪರೀಕ್ಷೆಯ ಅವಾಂತರಗಳ ಕಾರಣವಾಗಿ ಆದ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಹಿಡಿದು ಸಂಸತ್‌ ಚಲೋ ಶಾಂತಿಯುತ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ನೋವು ತಿಂದದ್ದು ಮರೆತು ಬಿಡುವ ಸಂಗತಿ ಅಲ್ಲ. ನನಗೆ ಬಹಳಷ್ಟು ಬಾರಿ ಅನ್ನಿಸುವುದು, ಈ ಎಲ್ಲಾ ಅನ್ಯಾಯಗಳು ಘಟಿಸದಂತೆ ತಡೆಯಬಹುದಿತ್ತೆಂದು. ಆ ಶಕ್ತಿ ಇಬ್ಬರಿಗೆ ಇತ್ತು. ಆದರೆ, ಅವರು ಯಾಕೆ ಮೋದಿ ಸರ್ಕಾರದ ಈ ಬರ್ಬರ ಕೃತ್ಯಗಳಿಗೆ ಕುರುಡಾದರೊ ಗೊತ್ತಿಲ್ಲ!

ಚಂದ್ರಬಾಬು ನಾಯ್ಡು ಮತ್ತು ನಿತೀಶ್‌ ಕುಮಾರ್‌ – ಅಧಿಕಾರಕ್ಕಾಗಿ ಚುನಾವಣಾ ಮೈತ್ರಿ ಮಾಡಿಕೊಂಡು, ಗೆದ್ದು ಮೋದಿಯನ್ನು ಬೆಂಬಲಿಸಿದ್ದು ತಪ್ಪಲ್ಲ. ಇಬ್ಬರೂ ಆರ್‌ ಎಸ್‌ ಎಸ್‌ ಹಿನ್ನೆಲೆಯವರಲ್ಲ. ನಿತೀಶ್‌ ಕುಮಾರ್‌ ಸಮಾಜವಾದದಿಂದ ಬಂದವರಾಗಿದ್ದರೆ. ಚಂದ್ರಬಾಬು ನಾಯ್ಡುಗೆ ಹೋರಾಟ ಹಿನ್ನೆಲೆ ಇದೆ. ಪ್ರತಿಪಕ್ಷಗಳ ನಾಯಕರೂ ಆಗಿದ್ದವರು. ಮೋದಿ ಸರ್ಕಾರದ ಜನವಿರೋಧಿ ನೀತಿಗಳಿಗೆ, ಸರ್ಕಾರದ ಒಳಗಿದ್ದು ಕಿವಿ ಹಿಂಡಿದ್ದರೆ, ಇಂತಹ ಅನೇಕ ಅನಾಹುತಗಳನ್ನು ತಡೆಯಬಹುದಿತ್ತು. ಆದರೆ, ಅವರು ತಮಗೆ ಸಂಬಂಧವಿಲ್ಲದವರಂತೆ ವಿಮುಖರಾಗಿದ್ದಾರೆ. ಈ ಇಬ್ಬರೂ ಭಾರತದ ಇತಿಹಾಸದಲ್ಲಿ ಖಳನಾಯಕರಾಗಿ ಬಿಂಬಿತವಾಗುವುದರಲ್ಲಿ ಸಂಶಯವಿಲ್ಲ.

ಇಲ್ಲಿಗೆ ಬಂದಾಗಿಂದ, ಕಳೆದ ಒಂದು ವಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಒಂದು ಮಧುರ ಭಾಂಧವ್ಯ ಒದಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದ, ಬೇರೆ ಬೇರೆ ಭಾಷೆಯನ್ನಾಡುವ ಅವರೊಂದಿಗಿನ ಒಡನಾಟ ವಿಶಿಷ್ಟವಾದ ಅನುಭವ ಕೊಟ್ಟಿತ್ತು. ಆಂದೋಲನದ ಯಶಸ್ಸು ಸಂತೋಷ ಪಡುವಂತಿದ್ದರೂ, ಅಗಲಿಕೆ ಬೇಸರವನ್ನು ತರಿಸಿತ್ತು.

ದೆಹಲಿಗೆ ಬರುವ ಮುನ್ನ ಮತ್ತು ಬಂದ ಮೇಲೂ ದೆಹಲಿಯನ್ನು ನೋಡುವ ಆಸಕ್ತಿಯೇನೂ ಇರಲಿಲ್ಲ. ಹೆಚ್ಚೆಂದರೆ ಇಲ್ಲಿಂದ ಹೊರಡುವ ಮುಂಚೆ (ಫಲಿತಾಂಶ ಏನೇ ಇದ್ದರೂ) ರಾಜ್‌ ಘಾಟ್‌ ಗೆ ಹೋಗಿ ಬಾಪುವನ್ನು ನೋಡಿ ಬರುವ ಆಸೆ ಇತ್ತು. ಪ್ರತಿಭಟನೆಯ ಅವಧಿಯ ಅನಿಶ್ಚಿತೆಯಲ್ಲಿ ಆತ್ಮೀಯರೊಬ್ಬರು ʼಬರೋದು ಬಂದಿದ್ದೀರ…ಬಾಪುಗೆ ಒಂದು ನಮಸ್ಕಾರ ಹಾಕಿ ಬನ್ನಿʼ ಎಂದು ನೆನಪಿಸಿದ್ದರು.

ಆದರೆ, ಮಗಳು ಮತ್ತೆ ನೀನು ಅಷ್ಟು ದೂರ ಪಯಣಿಸಿ, ಐತಿಹಾಸಿಕ ಸ್ಥಳಗಳನ್ನು ನೋಡುವುದು ಆಗದ ಮಾತು. ಒಂದು ದಿನದ ಪ್ರವಾಸದ ಆಗ್ರಾ ಮತ್ತು ಮತ್ತೊಂದು ದಿವಸ ದೆಹಲಿಯಲ್ಲಿನ ನೋಡಬೇಕಾದ ಜಾಗಗಳನ್ನು ವೀಕ್ಷಿಸಿ ಬಾ ಎಂದಳು. ಅಳಿಯ ಲೋಕಲ್‌ ಖಾಸಗಿ ಸಂಸ್ಥೆಯ ಏಕ ದಿನ ಪ್ರವಾಸವನ್ನು ಬುಕ್‌ ಮಾಡಿದ. ಜುಲೈ 27ಕ್ಕೆ ಆಗ್ರಾ ಮತ್ತು ಜುಲೈ 28ಕ್ಕೆ ದೆಹಲಿ ಪ್ರವಾಸ ಎಂದಾಯಿತು.

ಇಲ್ಲಿಗೆ ಬಂದಾಗಿನಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಜುಲೈ 26ರಂದು ತಡವಾಗಿ ಎದ್ದವನು, ತಿಂಡಿ ತಿಂದು ನಕುಲ್‌ ದೇವ್‌ ನ ಆಟೊ ಹತ್ತಿ ಜಂತರ್‌ ಮಂತರ್‌ ಕಡೆ ಹೊರಟೆ. ಬೆಂಗಳೂರಿಗೆ ಹೋಗುವ ಮುನ್ನ ಪ್ರತಿಭಟನಾ ಸ್ಥಳ ಈಗ ಹೇಗಿದೆ? ಎಂದು ಮತ್ತೊಮ್ಮೆ ನೋಡುವ ಕುತೂಹಲವಿತ್ತು.

ವಿದ್ಯಾರ್ಥಿಗಳಿಂದ ಗಿಜಗಿಡುತ್ತಿದ್ದ ಆ ಜಾಗ ಸಂಪೂರ್ಣ ಖಾಲಿಯಾಗಿ ಭಣಗುಟ್ಟುತ್ತಿತ್ತು. ಕಳೆದ ದಿನಗಳಲ್ಲಿ ಓಡಾಡಿದ ರಸ್ತೆಗಳು, ಅವು ಕೂಡುವ ಹಾದಿ ಎಲ್ಲವೂ ಈಗ ಸ್ಪಷ್ಟವಾಗಿ ತಿಳಿಯುತ್ತಿತ್ತು. ಬಸ್ಸು, ಕಾರುಗಳು –ಕಳೆದ ದಿನಗಳಲ್ಲಿ ಏನೂ ಆಗಿಲ್ಲವೇನೊ ಎಂಬಂತೆ ವಾಹನ ಸಂಚಾರ ಸಾಗಿತ್ತು. ಒಂದಿಬ್ಬರು ಪೋಲೀಸರು ಬಿಟ್ಟರೆ RAF CRPF ಪೋಲೀಸರು ಇರಲಿಲ್ಲ.

ಎಂದಿನಂತೆ ವಿಡಿಯೋ ಮಾಡುತ್ತ ಟಾಲ್ ಸ್ಟಾಯ್‌ ಮಾರ್ಗ ಪ್ರವೇಶ ಮಾಡಿದೆ. ಅಲ್ಲಿ ಕುಳಿತಿದ್ದ ಪೋಲೀಸ್‌ ಒಬ್ಬಾತ ಕೂಗಿ ಕರೆದ. “ಒಳಗೆ ಹೋಗುವ ಆಗಿಲ್ಲ. ಯಾರಿಗೂ ಪ್ರವೇಶವಿಲ್ಲ” ಅಂದ. ಸರಕಾರಕ್ಕೆ ಇರುವ ಭಯ ಕಂಡು ನಗು ಬಂತು. ಮತ್ತೆ ವಿದ್ಯಾರ್ಥಿಗಳು ಜಮಾವಣೆಗೊಂಡರೆ ಎಂದು ಜಂತರ್‌ ಮಂತರ್‌ ಪ್ರೊಟೇಸ್ಟ್‌ ಸೈಟ್‌ ಭೇಟಿಯನ್ನು ನಿರ್ಬಂಧಿಸಿದ್ದರು. ಅಲ್ಲಿಂದ ನಡೆದು ಸಂಸತ್‌ ಮಾರ್ಗ್‌ ನಲ್ಲಿ ಕಾನೆಟ್‌ ಪ್ಲೇಸ್‌ ಮಾರ್ಕೆಟ್‌ ಏರಿಯಾಕ್ಕೆ ಬಂದಾಗ, ಅಲ್ಲೂ ಕೂಡ ಬ್ಯಾರಿಕೇಡ್‌ ಹಾಕಿ, ಸಾರ್ವಜನಿಕರು ಆ ರಸ್ತೆ ಬಳಸುವುದನ್ನು ತಡೆ ಹಿಡಿದಿದ್ದರು.

ಆಗ್ರಾಕ್ಕೆ ದೆಹಲಿಯಿಂದ ಸುಮಾರು ಮೂರುವರೆ ಗಂಟೆಗಳ ದೀರ್ಘ ಪಯಣ. ಆಗ್ರಾ ತಲುಪಿದಾಗ, ದೆಹಲಿಯ ಸೆಕೆಗೆ ಉಸ್ಸಪ್ಪ ಅನ್ನುತ್ತಿದ್ದವನಿಗೆ ಅಲ್ಲಿಯ ಬಿಸಿ ಹವೆಗೆ ತಲೆ ತಿರುಗಿ ಬಂದ ಆಗಾಯಿತು. ಅಬ್ಬಾ! ಮೋಡವಿದ್ದರೂ ಅದೆಂಥ ಕುದಿಯುವ ವಾತಾವರಣ. ಬಾಯಿ ಒಣಗಿ, ಮೈಯೆಲ್ಲಾ ಬೆವರು. ಆಗ್ರಾ ಕೋಟೆ, ತಾಜ್‌ ಮಹಲ್, ಇಷ್ಟವಿಲ್ಲದಿದ್ದರೂ ಮಥುರಾ, ಬೃಂದಾವನ ಎಂದು ಸುತ್ತು ಹೊಡೆದದ್ದಾಯಿತು.

ಶಾಲಾ ಪಠ್ಯಪುಸ್ತಕಗಳಲ್ಲಿ ಮೊಗಲರ ಆಳ್ವಿಕೆಯನ್ನು ಈ ವ್ಯಕ್ತಿ, ಧರ್ಮೇಂದ್ರ ಪ್ರಧಾನ್‌ ಎಗರಿಸಿ ಬಿಟ್ಟಿದ್ದಾರೆ. ಆ ಭವ್ಯ, ಅಗಾಧ, ಸುಂದರ ತಾಜ್‌ ಮಹಲ್‌ ಕಟ್ಟಡವನ್ನು ತೋರಿಸಿ ಮಕ್ಕಳು ಇದನ್ನು ಯಾರು ಕಟ್ಟಿಸಿದ್ದು ಎಂದು ಕೇಳಿದರೆ ಏನು ಹೇಳುವುದು? ಅನಿಸಿತು.

Katari 1

ಜುಲೈ 28ರಂದು ತರಾತುರಿಯ ದಿನ. ದೆಹಲಿ ಲೋಕಲ್‌ ಟ್ರಿಪ್‌ ಮುಗಿಸಿ, ರಾತ್ರಿ ಹತ್ತರ ವಿಮಾನ ಹತ್ತಿ ಬೆಂಗಳೂರಿಗೆ ಹೊರಡಬೇಕು. ಆ ದಿನ ದೆಹಲಿಯಲ್ಲಿ ಮಳೆಯೋ ಮಳೆ. ಧೋ ಎಂದು ಸುರಿವ ಮಳೆಯಲ್ಲಿ ಎಲ್ಲವನ್ನೂ ಕಿಟಿಕಿಯಿಂದಲೇ ನೋಡಬೇಕಾಯಿತು. ಸಫ್ದಾರ್‌ ಜಂಗ್‌ ರಸ್ತೆಯಲ್ಲಿನ ಇಂದಿರಾ ಗಾಂಧೀಜಿ ಅವರು ವಾಸವಿದ್ದ ಮನೆಯನ್ನು (ಇಂದಿರಾ ಭವನ ಎಂದೂ ಕರೆಯುತ್ತಾರೆ) ಮಳೆಯ ಕಾರಣವಾಗಿ ಒಳಗೆ ಉಳಿದು ಕೂಲಂಕಷವಾಗಿ ನೋಡಲು ಸಮಯ ಸಿಕ್ಕಿತು. ಇಂದಿರಾ ಮತ್ತು ರಾಜೀವ್‌ ಗಾಂಧಿಯವರ ಆಳ್ವಿಕೆಯ ದಿನಗಳು ಕಣ್ಮುಂದೆ ಹಾದು ಹೋದವು. ಕೆಲವು ಪೋಟೊಗಳಂತೂ ಕಣ್ಣು ಒದ್ದೆ ಮಾಡುವಂತಿವೆ.

ರಾತ್ರಿ ವಿಮಾನ ಪಯಣ ಇರುವುದರ ಬಗ್ಗೆ ಬಸ್ಸಿನ ಗೈಡ್‌, ಮ್ಯಾನೇಜರ್‌ ಗೆ ಹೇಳಿದ್ದೆ. ಅವರು ʼಪೂರ್ತಿ ದೆಹಲಿ ನೋಡುತ್ತ ಕೂಡಬೇಡಿ. ರಾಜ್‌ ಘಾಟ್‌ ನೋಡಲೇ ಬೇಕೆಂದಿದ್ದರೆ ಹತ್ತಿರ ಮೆಟ್ರೊ ಸ್ಟೇಷನ್‌ ಬಳಿ ಬಿಡುತ್ತೇನೆ. ಅಲ್ಲಿಂದ ನ್ಯೂ ದೆಹಲಿಗೆ ಮೆಟ್ರೋದಲ್ಲಿ ಹೋಗಿ, ರಾಜ್‌ ಘಾಟ್‌ ನೋಡಿ, ಹೊಟೇಲ್ಲಿಗೆ ಹೋಗಿ ಲಗ್ಗೇಜ್‌ ತೆಗೆದುಕೊಂಡು ಏರ್‌ ಪೋರ್ಟ್ ಗೆ ಸರಿಯಾದ ಸಮಯಕ್ಕೆ ತಲುಪಬಹುದುʼ ಎಂದು ಸಲಹೆ ನೀಡಿದರು. ನನಗೂ ಅದೇ ಸರಿಯೆನಿಸಿತು. ಬಸ್ಸಿನ ಗೈಡ್ ನಗುಮೊಗದ ಯುವಕ. “ಗಾಂಧೀ ಸಮಾಧಿ ಮುಂದೆ ಕಣ್ಮುಚ್ಚಿ ಕೂಡಬೇಡಿ. ರಾತ್ರಿ ಫ್ಲೈಟ್‌ ಹಿಡಿಯಬೇಕು…ನೆನಪಿರಲಿ” ಎಂದು ತಮಾಷೆ ಮಾಡಿದ್ದ.

ಮೊಬೈಲ್‌ ಎಗರಿಸಿದ ಹುಡುಗರು!

ನ್ಯೂದೆಹಲಿ ಮೆಟ್ರೋ ಸ್ಟೇಷನ್‌ ನಲ್ಲಿ ಇಳಿದು ಹೊರ ಬಂದರೆ ಜನವೋ ಜನ. ಆಟೋ ಒಂದನ್ನು ನಿಲ್ಲಿಸಿ, ರಾಜ್‌ ಘಾಟ್‌ ಗೆ ಬಿಟ್ಟು, ಒಂದತ್ತು ನಿಮಿಷ ಕಾದು, ನಂತರ ಚೂನಾಮಂಡಿ ಹೋಟೆಲ್ಲಿಗೆ ಬಿಡಬೇಕೆಂದು ತಿಳಿಸುತ್ತಿದ್ದೆ. ಅಷ್ಟರಲ್ಲಿ ಏಕಾಏಕಿ ಇಬ್ಬರು ಹುಡುಗರು ತಾವು ಆಟೋ ಹಿಡಿಯಬೇಕು ಎನ್ನುವ ಹಾಗೆ ಅವಸರಿಸುತ್ತ ಮೈಮೇಲೆ ಬಿದ್ದರು. “ಯಾಕಪ…ನಾನು ಆಟೋ ಹಿಡಿದಿರುವುದು ಕಾಣದೇ?” ಎನ್ನುವ ಹೊತ್ತಿಗೆ, “ಸಾರಿ” ಎನ್ನುತ್ತ ಹೊರಟರು. ಅದೇನು ಅನ್ನಿಸಿತೋ! ಆಟೋದವನು “ಸರ್…ನಿಮ್ಮ ಪಾಕೆಟ್‌ ಒಮ್ಮೆ ನೋಡಿ ಕೊಳ್ಳಿ” ಅಂದ. ಮುಂದಿನ ಎಡ ಜೇಬನ್ನು ಮುಟ್ಟಿಕೊಂಡೆ. ಎದೆ ಧಸಕ್ಕೆಂದು…ಕಣ್ಣಿಗೆ ಕತ್ತಲು ಕಟ್ಟಿದಂತಾಯಿತು. ಆ ಹುಡುಗರು ನನ್ನ ಮೊಬೈಲನ್ನು ಎಗರಿಸಿ ಬಿಟ್ಟಿದ್ದರು!

ಆ ಒಂದು ಕ್ಷಣ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಫ್ಲೈಟ್‌ ಟಿಕೇಟ್‌, ಬೋರ್ಡಿಂಗ್‌ ಪಾಸ್‌…ಎಲ್ಲವೂ ಅದರಲ್ಲೇ ಇದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಸುಮಾರು ಒಂದು ವಾರ ತೆಗೆದ ಜಂತರ್‌ ಮಂತರ್‌ ನ ವಿಡಿಯೊ ಫೂಟೇಜುಗಳು, ಫೋಟುಗಳು ಇದ್ದವು. ಕೇವಲ ಹತ್ತರಷ್ಟನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಎಲ್ಲವೂ ಅರೆಕ್ಷಣದಲ್ಲಿ ಮಾಯವಾಗಿತ್ತು! ಎಲ್ಲಾ ಜೋಪಾನವಾಗಿ ಇಟ್ಟುಕೊಳ್ಳಿ, ಒಂದು ಒಳ್ಳೆಯ ಸಾಕ್ಷ್ಯಚಿತ್ರ ಮಾಡಬಹುದು ಎಂದು ಗೆಳೆಯರೊಬ್ಬರು ಹೇಳಿದ್ದು… ಮನದಲ್ಲಿ ಹಾದು ಹೋಯಿತು. ದುಃಖ ಒತ್ತರಿಸಿ ಬರುತ್ತಿತ್ತು.

ಮಾರ್ಕೆಟ್‌ ನಂತಹ ಆ ಪ್ರದೇಶದಲ್ಲಿ, ಕೂಲಿ ಕೆಲಸಗಾರರು, ಕೆಳ ಮಧ್ಯಮ ವರ್ಗದವರೇ ಹೆಚ್ಚು ಓಡಾಡುತ್ತಿದ್ದದ್ದು. ಒಂದಷ್ಟು ತಳ್ಳು ಗಾಡಿ ಅಂಗಡಿಯವರು ಹಣ್ಣಿನ ಜ್ಯೂಸ್‌, ತರಕಾರಿ ಇತ್ಯಾದಿ ವ್ಯಾಪಾರ ಮಾಡುತ್ತಿದ್ದರು. ಎಲ್ಲರನ್ನೂ ಕೇಳುತ್ತ, ಬೇಡಿಕೊಂಡರೂ ಮನೆಗೆ ಕರೆ ಮಾಡಲು ಮೊಬೈಲ್‌ ಕೊಡಲು ಯಾರೂ ಸಿದ್ಧರಿರಲಿಲ್ಲ. ಕೊನೆಗೆ ಒಬ್ಬಾತ “ಸೀದಾ ಮುಂದೆ ಹೋಗಿ, ಪೋಲೀಸ್‌ ಸ್ಟೇಷನ್‌ ಇದೆ. ಅಲ್ಲೇ ಕಂಪ್ಲೇಂಟ್‌ ಕೊಡಿ. ಅವರೇ ಎಲ್ಲಾ ಸಹಾಯ ಮಾಡುತ್ತಾರೆ” ಅಂದ.

ಓಡುತ್ತ ತುಸು ದೂರದಲ್ಲಿದ್ದ ಕಮ್ಲಾ ಮಾರ್ಕೆಟ್‌ ಪೊಲೀಸ್‌ ಠಾಣೆಗೆ ಬಂದೆ. ಅಲ್ಲಿದ್ದ ಪೊಲೀಸ್‌, ನನ್ನ ಪರಿಸ್ಥಿತಿಯ ಗಂಭೀರತೆ ಗ್ರಹಿಸಿದನೋ ಏನೋ…ಕುಡಿಯಲು ನೀರು ಕೊಟ್ಟು, ಮಾತಾಡಲು ಮೊಬೈಲ್‌ ಕೊಟ್ಟ. ಮಡದಿ, ಮಗಳಿಗೆ ಆದ ಅನಾಹುತ ತಿಳಿಸಿದೆ. ಮಾತಾಡುವಾಗ ನನ್ನ ಗಂಟಲು ಕಟ್ಟಿ, ಅಳು ಬಂದು ಮಾತೇ ಹೊರಡುತ್ತಿರಲಿಲ್ಲ. ಮಗಳು ಸಂತೈಸಿ ಅಲ್ಲಿಂದ ಬೇಗ ಹೊರಟು ಹೊಸ ಮೊಬೈಲನ್ನು ಕೂಡಲೇ ಖರೀದಿಸಲು ಹೇಳಿದಳು. ಪೊಲೀಸ್‌ ಹೆಚ್ಚು ವಿಚಾರಣೆಗೆ ಹೋಗದೆ ದೂರನ್ನು ಬೇಗ ದಾಖಲಿಸಿಕೊಂಡು ಕಳುಹಿಸಿದರು.

ಆ ಜಾಗ ಕನ್ನೇಟ್‌ ಪ್ಲೇಸ್‌ ಎಂದು ಆಮೇಲೆ ತಿಳಿಯಿತು. ಹತ್ತಿರದಲ್ಲಿ ಮೊಬೈಲ್‌ ಅಂಗಡಿಗಳು ಇರಲಿಲ್ಲ. ನನ್ನ ಪರಿಸ್ಥಿತಿ ನೋಡಿ, ಆಟೋದವನೊಬ್ಬ ಪುಟ್ಟ ಮೊಬೈಲ್‌ ಅಂಗಡಿಗೆ ಕರೆತಂದ. ಸಿಕ್ಕ ಯಾವುದೋ ಬ್ರಾಂಡಿನ ಮೊಬೈಲ್‌ ಖರೀದಿಸಿ, ಹೊಸ ಸಿಮ್‌ ಕಾರ್ಡ್‌ ಕೊಳ್ಳುವಷ್ಟರಲ್ಲಿ ಸಮಯ ಆಗಲೇ ಏಳುವರೆ ದಾಟಿತ್ತು. ಹೊಟೇಲ್‌ ಬಂದರೆ, ಅಳಿಯ ಮಗಳು ಆಗಲೇ ಏರ್ ಪೋರ್ಟಿಗೆ ಕ್ಯಾಬನ್ನು ಬುಕ್‌ ಮಾಡಿದ್ದರು.

ಆ ಹೊಸ ಮೊಬೈಲು ಬಳಸುವುದು ಸುಲಭವಿರಲಿಲ್ಲ. ಏರ್‌ ಪೋರ್ಟಿಗೆ ಹೋಗುತ್ತಾ, ಕ್ಯಾಬ್‌ ನಲ್ಲೇ ಅಳಿಯನೊಂದಿಗೆ ಮಾತಾಡುತ್ತ ಬೋರ್ಡಿಂಗ್‌ ಪಾಸ್‌, ಟಿಕೇಟನ್ನು ಡೌನ್‌ ಲೋಡ್‌ ಮಾಡಿಕೊಂಡೆ. ಸದ್ಯ ಏರ್‌ ಪೋರ್ಟನ್ನು ಸರಿಯಾದ ಸಮಯಕ್ಕೆ ಸೇರಿದ್ದೆ.

ಬೆಂಗಳೂರಿನ ಮನೆಯನ್ನು ತಲುಪಿದಾಗ ರಾತ್ರಿ ಸುಮಾರು ಎರಡೂವರೆ ಆಗಿತ್ತು (ಜುಲೈ 29ರಂದು ಮುಂಜಾನೆ). ಎಲ್ಲವೂ ಸಂತೋಷವಾಗಿ ಮುಗಿದು ಖುಷಿಯಾಗಿ ಊರು ತಲುಪಲು ಉತ್ಸಾಹದಿಂದ ಇದ್ದವನಿಗೆ ಮೊಬೈಲ್‌ ಕಳುವು ಭಾರೀ ಆಘಾತವನ್ನು ತಂದಿತ್ತು. ಕಂಪ್ಲೇಟ್‌ ಕೊಟ್ಟು ಬಂದಿದ್ದೆನಾದರೂ ಅದು ಸಿಗುವ, ಸಿಕ್ಕರೂ ವಿಡಿಯೋ ಫೋಟೇಜುಗಳು ಸಿಗುವ ಯಾವ ಸಾಧ್ಯತೆಯೂ ಇರಲಿಲ್ಲ.

ಕೆಲವೊಮ್ಮೆ ಜೀವನದಲ್ಲಿ ಅನಿರೀಕ್ಷಿತವಾಗಿ ಹೊಸ ಸಂಬಂಧಗಳು ದೊರಕುವಂತೆ, ಅಷ್ಟೇ ಅನಿರೀಕ್ಷಿತವಾಗಿ ಕೆಲವನ್ನು ಕಳೆದುಕೊಳ್ಳಲು ಸಿದ್ದರಿರಬೇಕು ಅನಿಸಿತು. ಜಂತರ್‌ ಮಂತರ್‌ ವಿದ್ಯಾರ್ಥಿ ಪ್ರತಿಭಟನೆಯ ಸಂಭ್ರಮ ಜೀವನದುದ್ದಕ್ಕೂ ಮನದಲ್ಲೇ ಉಳಿಯುತ್ತದೆ. ಈ ದೇಶದಲ್ಲಿ ಎಲ್ಲವೂ ಮುಗಿದೇ ಹೋಯಿತು ಅನ್ನುವಾಗ ಜೆನ್‌ ಝಿ, ಆಲ್ಫಾಗಳು ಎಚ್ಚೆತ್ತ ಪರಿ ತಂದ ಸಮಾಧಾನ ಬದುಕಿಗೊಂದು ಸಾರ್ಥಕತೆಯ ಭಾವವನ್ನು ಮೂಡಿಸಿದ್ದಂತೂ ನಿಜ.

ef9fecf98bc37c5c50bf4e51777cfdf9112693bbefdb26f8cc99cf2956bc2bd3?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...