ಸಾವರ್ಕರ್ ಮತ್ತು ಆರ್ಎಸ್ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ ಬರವಣಿಗೆ ಮತ್ತು ನಾಟಕಗಳಿಗೆ ಅವಕಾಶ ಕಲ್ಪಿಸುವವರು, ತಮ್ಮ ಸೈದ್ಧಾಂತಿಕ ನಿಲುವಿಗೆ ವಿರುದ್ಧವಾದ ಐತಿಹಾಸಿಕ ನಿರೂಪಣೆಯನ್ನು ಸಹಿಸಿಕೊಳ್ಳಲಾಗದೆ ವಿರೋಧಿಸುತ್ತಿರುವುದು ಅವರ ದ್ವಂದ್ವ ನಿಲುವನ್ನು ಬಯಲುಮಾಡುತ್ತದೆ. ಇತಿಹಾಸದ ವ್ಯಕ್ತಿಗಳು ಮತ್ತು ಸಿದ್ಧಾಂತಗಳು ವಿಮರ್ಶೆಗೆ ಒಳಪಡಲೇಬೇಕು; ಭಿನ್ನಾಭಿಪ್ರಾಯಕ್ಕೆ ಉತ್ತರ ನೀಡಬೇಕೇ ಹೊರತು ಪುಸ್ತಕದ ಪುಟಗಳನ್ನು ಹರಿದುಹಾಕುವುದಲ್ಲ. ಪುಸ್ತಕವನ್ನು ನಿಷೇಧಿಸಬಹುದು, ಪುಟಗಳನ್ನು ಹರಿದುಹಾಕಬಹುದು; ಆದರೆ ಇತಿಹಾಸದ ಸತ್ಯವನ್ನು ಅಳಿಸಿಹಾಕಲು ಸಾಧ್ಯವಿಲ್ಲ.
ಸೋನಿಯಾ ಗಾಂಧಿಯವರ ಆತ್ಮಕಥನ Belonging: A Journey of Love ಪ್ರಕಟವಾದ ಬೆನ್ನಲ್ಲೇ ಅದರಲ್ಲಿರುವ ಸಾವರ್ಕರ್ ಮತ್ತು ಆರ್ಎಸ್ಎಸ್ ಕುರಿತ ಉಲ್ಲೇಖಗಳು ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಈ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿ, ಪುಸ್ತಕದ ಮಾರಾಟ ಮತ್ತು ಪ್ರಸಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಪುಸ್ತಕದ ಪ್ರತಿಗಳನ್ನು ಹರಿದುಹಾಕಿರುವುದು ಈ ವಿವಾದದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪುಸ್ತಕದ 201ನೇ ಪುಟದಲ್ಲಿ ಇಂದಿರಾ ಗಾಂಧಿಯವರು ಆರ್ಎಸ್ಎಸ್ನ ರಾಜಕೀಯದ ಬಗ್ಗೆ ಹೊಂದಿದ್ದ ವಿರೋಧದ ಹಿನ್ನೆಲೆಯಲ್ಲಿ, ಬ್ರಿಟಿಷರ ಆಡಳಿತದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಹಲ್ಲೆ ಮತ್ತು ಸೆರೆವಾಸವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಸಾವರ್ಕರ್ ಸೇರಿದಂತೆ ಆರ್ಎಸ್ಎಸ್ನ ಹಿರಿಯ ಸೈದ್ಧಾಂತಿಕ ನಾಯಕರು ಬ್ರಿಟಿಷ್ ಆಡಳಿತಗಾರರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಹಾಗೂ ಅದೇ ಸಂಘಟನೆಯ ಕೆಲವು ಸದಸ್ಯರು ಬ್ರಿಟಿಷರಿಗೆ ಮಾಹಿತಿದಾರರಾಗಿ ಸಹಕರಿಸುತ್ತಿದ್ದರು ಎಂಬ ನಿರೂಪಣೆಯಿದೆ.
443ನೇ ಪುಟದಲ್ಲಿ ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ವಿವರಿಸಲಾಗಿದೆ. ಅವರ ದೃಷ್ಟಿಕೋನದಲ್ಲಿ ಭಾರತವು ಮುಖ್ಯವಾಗಿ ಹಿಂದೂಗಳ ಪ್ರಾಬಲ್ಯವಿರುವ ರಾಷ್ಟ್ರವಾಗಿತ್ತು ಎಂಬ ಅಭಿಪ್ರಾಯವನ್ನು ಪುಸ್ತಕ ದಾಖಲಿಸುತ್ತದೆ. ಈ ಪರಿಕಲ್ಪನೆಯನ್ನು ಆರ್ಎಸ್ಎಸ್, ಬಿಜೆಪಿ ಮತ್ತು ಸಂಘ ಪರಿವಾರದ ಸೈದ್ಧಾಂತಿಕ ನಿಲುವುಗಳೊಂದಿಗೆ ಜೋಡಿಸಲಾಗಿದೆ. ಭಾರತದ ಸಂವಿಧಾನ ರೂಪಿಸಿರುವ ದೇಶದ ಸ್ವರೂಪ ಮತ್ತು ನಾಗರಿಕರ ಹಕ್ಕುಗಳು ಪಾಶ್ಚಿಮಾತ್ಯ ಮೌಲ್ಯಗಳಿಂದ ಬಂದವು ಹಾಗೂ ಹಿಂದೂ ನಾಗರಿಕತೆಯ ಆಶಯಗಳಿಗೆ ವಿರುದ್ಧವಾಗಿವೆ ಎಂಬುದು ಆ ಸಿದ್ಧಾಂತದ ನಿಲುವು ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆಯನ್ನು ಶಿವಸೇನೆ ಹರಿದು ಬಿಸಾಡಿದ್ದು ಯಾಕೆ?
Belonging: A Journey of Love ಕೇವಲ ರಾಜಕೀಯ ಅಭಿಪ್ರಾಯಗಳ ಸಂಕಲನವಲ್ಲ; ಲೇಖಕಿಯ ಜೀವನಾನುಭವಗಳ ಜೊತೆಗೆ ಇತಿಹಾಸದ ಘಟನೆಗಳು, ವ್ಯಕ್ತಿಗಳ ಪಾತ್ರಗಳು ಮತ್ತು ಸೈದ್ಧಾಂತಿಕ ನಿಲುವುಗಳನ್ನು ದಾಖಲಿಸುವ ಆತ್ಮಕಥನವಾಗಿದೆ. ಅದರಲ್ಲಿರುವ ನಿರೂಪಣೆಗಳನ್ನು ಒಪ್ಪುವುದು ಅಥವಾ ವಿರೋಧಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದು. ಆದರೆ ಇತಿಹಾಸದ ದಾಖಲೆಗಳು ತಮ್ಮ ರಾಜಕೀಯ ಸಿದ್ಧಾಂತಕ್ಕೆ ವಿರುದ್ಧವಾಗಿವೆ ಎಂಬ ಕಾರಣಕ್ಕೆ ಅವುಗಳನ್ನು ನಿರಾಕರಿಸುವ ಅಥವಾ ಮರೆಮಾಚುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವುದನ್ನೇ ರಾಜಕಾರಣದ ಭಾಗವಾಗಿಸಿಕೊಂಡಿರುವವರಿಗೆ ನೈಜ ಇತಿಹಾಸ ಅಸಹನೀಯವಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ.
ಮಹಾತ್ಮ ಗಾಂಧೀಜಿಯವರ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೊಳಗಾಗಿ ಗಲ್ಲಿಗೇರಿಸಲ್ಪಟ್ಟ ನಾಥೂರಾಮ್ ಗೋಡ್ಸೆಯನ್ನು ಸಮರ್ಥಿಸುವ ಪುಸ್ತಕಗಳು ಮತ್ತು ನಾಟಕಗಳಿಗೆ ಅವಕಾಶ ಕಲ್ಪಿಸುವವರು, ಗಾಂಧೀಜಿಯವರ ರಾಜಕೀಯ ಪರಂಪರೆ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ದಾಖಲಿಸುವ ಕೃತಿಯನ್ನು ವಿರೋಧಿಸುತ್ತಿರುವುದು ಅವರ ದ್ವಂದ್ವ ನಿಲುವಿಗೆ ಸಾಕ್ಷಿ. ಗಾಂಧೀಜಿಯವರ ಹಂತಕನ ಕೃತ್ಯವನ್ನು ಸಮರ್ಥಿಸುವುದಕ್ಕೆ ಅವಕಾಶವಿದೆ ಎನ್ನುವವರು, ಸಾವರ್ಕರ್ ಮತ್ತು ಆರ್ಎಸ್ಎಸ್ ಕುರಿತ ವಿಮರ್ಶಾತ್ಮಕ ನಿರೂಪಣೆಯನ್ನು ಎದುರಿಸಲು ಮಾತ್ರ ಸಿದ್ಧರಿಲ್ಲವೇ? ತಮ್ಮದೇ ಆದ ಇತಿಹಾಸದ ವ್ಯಾಖ್ಯಾನವನ್ನು ಮಂಡಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಬೇರೆಯವರ ವ್ಯಾಖ್ಯಾನವನ್ನು ನಿಷೇಧಿಸುವ ಅಧಿಕಾರ ಯಾರಿಗೂ ಇಲ್ಲ.
ಇತಿಹಾಸದ ಕುರಿತು ಭಿನ್ನಾಭಿಪ್ರಾಯವಿದ್ದರೆ ದಾಖಲೆಗಳ ಮೂಲಕ ಪ್ರತಿವಾದಿಸಲಿ. ಲೇಖನಗಳನ್ನು ಬರೆಯಲಿ, ಚರ್ಚೆ ನಡೆಸಲಿ. ಆದರೆ ಪುಸ್ತಕದ ಪುಟಗಳನ್ನು ಹರಿದುಹಾಕುವುದು, ಪ್ರಕಾಶಕರ ಮೇಲೆ ಒತ್ತಡ ಹೇರುವುದು ಮತ್ತು ಪುಸ್ತಕದ ಪ್ರಸಾರಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುವುದು ಯಾವ ರೀತಿಯ ಪ್ರಜಾಪ್ರಭುತ್ವದ ನಿಲುವು? ಒಬ್ಬ ವ್ಯಕ್ತಿಯ ರಾಜಕೀಯ ಸಿದ್ಧಾಂತವನ್ನು ಗೌರವಿಸುವುದು ಬೇರೆ; ಆ ಸಿದ್ಧಾಂತವನ್ನು ಪ್ರಶ್ನಿಸುವ ಹಕ್ಕನ್ನೇ ನಿರಾಕರಿಸುವುದು ಬೇರೆ. ಇದು ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳಲಾಗದ ಅಸಹಿಷ್ಣು ರಾಜಕಾರಣದ ಅಭಿವ್ಯಕ್ತಿಯಷ್ಟೇ.
ಇದನ್ನೂ ಓದಿ: ಅಂತರಂಗದ ಧ್ವನಿ ‘ಬಿಲಾಂಗಿಂಗ್’- ರಾಜೀವ್ ಹತ್ಯೆಯ ನಂತರದ ಧರ್ಮಸಂಕಟ ಬಿಚ್ಚಿಟ್ಟ ಸೋನಿಯಾ ಗಾಂಧಿ
ಈ ಪ್ರತಿಭಟನೆಯ ಸಂದರ್ಭದಲ್ಲಿ ಶಿವಸೇನೆಯ ಎರಡು ಬಣಗಳ ನಡುವಿನ ರಾಜಕೀಯ ವ್ಯತ್ಯಾಸವನ್ನೂ ಗಮನಿಸಬೇಕು. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪ್ರತ್ಯೇಕ ರಾಜಕೀಯ ಬಣವಾಗಿದ್ದು, ಸೋನಿಯಾ ಗಾಂಧಿಯವರ ಪುಸ್ತಕದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ, ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಅದು ಆಕ್ಷೇಪಿಸಿದೆ.
ಪುಸ್ತಕದ ಪ್ರತಿಗಳನ್ನು ಹರಿಯುವ ಸಂದರ್ಭದಲ್ಲಿ ಶಿವಸೇನೆ ನಾಯಕಿ ಶಾಯನಾ ಎನ್ ಸಿ ಅವರು ಬಾಳಾಸಾಹೇಬ್ ಠಾಕ್ರೆಯವರು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ಹಳೆಯ ಛಾಯಾಚಿತ್ರವಿದ್ದ ಪುಟವನ್ನೂ ಹರಿದಿದ್ದಾರೆ. ಆ ಛಾಯಾಚಿತ್ರದಲ್ಲಿ ಬಾಳಾಸಾಹೇಬ್ ಅವರ ಭಾವಚಿತ್ರವೂ ಇದ್ದುದರಿಂದ ಉದ್ಧವ್ ಠಾಕ್ರೆ ಬಣ ಇದನ್ನು ಆಕ್ಷೇಪಿಸಿದೆ. ಆದರೆ ಶಿಂದೆ ಬಣದವರು ಹರಿದದ್ದು ಬಾಳಾಸಾಹೇಬ್ ಅವರ ಚಿತ್ರವಲ್ಲ, ಮಣಿಶಂಕರ್ ಅಯ್ಯರ್ ಅವರ ಚಿತ್ರ ಎಂದು ಸಮರ್ಥಿಸಿಕೊಂಡಿದ್ದಾರೆ. ಸಾವರ್ಕರ್ ಅವರನ್ನು ಸಮರ್ಥಿಸುವ ಉದ್ದೇಶದಿಂದ ನಡೆದ ಪ್ರತಿಭಟನೆಯಲ್ಲೇ ಬಾಳಾಸಾಹೇಬ್ ಠಾಕ್ರೆಯವರ ಭಾವಚಿತ್ರವಿದ್ದ ಪುಟ ಹರಿದುಹೋಗಿರುವುದು ರಾಜಕೀಯ ವ್ಯಂಗ್ಯವಲ್ಲದೆ ಮತ್ತೇನು? ಅವರ ರಾಜಕೀಯ ಪರಂಪರೆಯ ವಾರಸುದಾರಿಕೆಗಾಗಿ ಪೈಪೋಟಿ ನಡೆಸುವವರೇ ಈ ಘಟನೆಯ ಕುರಿತು ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಜಾಪ್ರಭುತ್ವದಲ್ಲಿ ಯಾರೂ ವಿಮರ್ಶಾತೀತರಲ್ಲ. ಸಾವರ್ಕರ್ ಆಗಲಿ, ನೆಹರೂ ಆಗಲಿ, ಗಾಂಧೀಜಿಯಾಗಲಿ ಅಥವಾ ಇನ್ಯಾರೇ ಆಗಲಿ, ಅವರ ಬದುಕು, ಚಿಂತನೆ ಮತ್ತು ರಾಜಕೀಯ ನಿರ್ಧಾರಗಳು ಇತಿಹಾಸದ ಅಧ್ಯಯನಕ್ಕೆ ಒಳಪಡಲೇಬೇಕು. ವ್ಯಕ್ತಿಪೂಜೆಯ ಹೆಸರಿನಲ್ಲಿ ಇತಿಹಾಸದ ಪ್ರಶ್ನೆಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಸೋನಿಯಾ ಗಾಂಧಿಯವರ ಪುಸ್ತಕದಲ್ಲಿನ ವಿಚಾರಗಳು ತಪ್ಪು ಎಂದು ಸಾಬೀತುಪಡಿಸಲು ಬಯಸುವವರು ದಾಖಲೆಗಳ ಮೂಲಕ ಉತ್ತರಿಸಲಿ. ಪುಸ್ತಕ ನಿಷೇಧಿಸುವ ಬೇಡಿಕೆ ಇಡುವುದು ತಮ್ಮ ವಾದದ ದುರ್ಬಲತೆಯನ್ನು ತಾವೇ ಬಹಿರಂಗಪಡಿಸಿದಂತಾಗುತ್ತದೆ.
ಪುಸ್ತಕಗಳನ್ನು ನಿಷೇಧಿಸುವುದರಿಂದ ಇತಿಹಾಸ ಬದಲಾಗುವುದಿಲ್ಲ. ಪುಟಗಳನ್ನು ಹರಿದುಹಾಕುವುದರಿಂದ ಸತ್ಯ ಅಳಿಸಿಹೋಗುವುದಿಲ್ಲ. ಇತಿಹಾಸವನ್ನು ಎದುರಿಸುವ ಧೈರ್ಯವಿಲ್ಲದವರು ಮಾತ್ರ ಇತಿಹಾಸದ ಪುಸ್ತಕಗಳನ್ನೇ ಎದುರಾಳಿಗಳೆಂದು ಭಾವಿಸುತ್ತಾರೆ.

ಚಂದ್ರಶೇಖರ ಶೆಟ್ಟಿ
ಬರಹಗಾರ, ವ್ಯಂಗ್ಯಚಿತ್ರಕಾರ


