ಹಸಿರು ಕ್ರಾಂತಿ, ಗರೀಬಿ ಹಠಾವೋ, ಉಳುವವನೇ ಭೂಮಿಯ ಒಡೆಯ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಬಡತನ ನಿರ್ಮೂಲನೆ ಹಾಗೂ ಆಹಾರ ಸ್ವಾವಲಂಬನೆಗೆ ಕ್ರಾಂತಿಕಾರಿ ವೇಗ ನೀಡಿದ ಧೀಮಂತ ನಾಯಕಿ ಇಂದಿರಾ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪುರಮಠ ಸ್ಮರಿಸಿದರು.
ವಿಜಯಪುರ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತ ತನ್ನದೇ ಆದ ಪ್ರಭಾವ ಮತ್ತು ಗುರುತನ್ನು ಮೂಡಿಸುವಲ್ಲಿ ಇಂದಿರಾ ಗಾಂಧಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ. ಜನಪರ ನೀತಿ, ದಿಟ್ಟ ನಿರ್ಧಾರ ಹಾಗೂ ದೂರದೃಷ್ಟಿಯ ಆಡಳಿತದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದರು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಭಣ್ಣಿ ಮಾತನಾಡಿ, ಸರ್ಕಾರದ ಯೋಜನೆಗಳ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದೊಂದಿಗೆ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡುವ ಮೂಲಕ ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ಇಂದಿರಾ ಗಾಂಧಿ ಮಹತ್ವದ ಕೊಡುಗೆ ನೀಡಿದರು.
ಮಹಿಳಾ ಸಬಲೀಕರಣಕ್ಕೂ ವಿಶೇಷ ಆದ್ಯತೆ ನೀಡಿದ ಅವರು, ಧೈರ್ಯ, ದೃಢತೆ ಮತ್ತು ದಿಟ್ಟ ನಿರ್ಧಾರಗಳ ಮೂಲಕ ಭಾರತವನ್ನು ಸ್ವಾವಲಂಬಿ ಹಾಗೂ ಪ್ರಗತಿಪರ ರಾಷ್ಟ್ರವನ್ನಾಗಿಸಲು ಶ್ರಮಿಸಿದರು. ಅವರ ತ್ಯಾಗಮಯ ಬದುಕು ಮತ್ತು ನಾಯಕತ್ವ ಇಂದಿಗೂ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ವಿಜಯಪುರ ನಗರ ಕ್ಷೇತ್ರದ ಮಾಜಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಸುಭಾಸ ಕಾಲೇಬಾಗ, ವಿಜಯಕುಮಾರ ಘಾಟಗೆ, ಡಾ. ಜಿ.ಎಸ್. ಮಾಲಿಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಇಲಿಯಾಸ ಅಹ್ಮದ ಸಿದ್ದೀಕಿ, ಸಾಹೇಬಗೌಡ ಬಿರಾದಾರ, ಸರಫರಾಜ ಮಿರ್ದೆ, ಫೈರೋಜ ಶೇಖ, ಜೀಶಾನ ಬಕ್ಷಿ, ಕೃಷ್ಣಾ ಲಮಾಣಿ, ಅಶ್ಫಾಕ ಮನಗೂಳಿ, ಪೀರಾಂ ಜಮಖಂಡಿ, ಎಂ.ಬಿ. ಮೆಡೆಗಾರ, ಸಿ.ಎಸ್. ಕ್ಷೀರಸಾಗರ, ಕುಲದೀಪಸಿಂಗ ಪೋತೆವಾಲೆ, ಅಖ್ತರಹುಸೇನ ಮುತವಲ್ಲಿ, ಮಹಾದೇವ ರಾವಜಿ, ಕಲ್ಲಪ್ಪ ಪರಡಿ ಇದ್ದರು.




