ಶಿಕ್ಷಣ, ಕುಟುಂಬ ಮತ್ತು ಸಮಾಜದ ಪ್ರೋತ್ಸಾಹ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ವೈಯಕ್ತಿಕ ಧೈರ್ಯ ಒಟ್ಟಾಗಿ ಸೇರಿದರೆ, ಮುಂದಿನ ದಶಕಗಳಲ್ಲಿ ಕರ್ನಾಟಕದಿಂದ ಸಾವಿರಾರು ಯಶಸ್ವಿ ಕನ್ನಡಿಗ ಉದ್ಯಮಿಗಳು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಅಂದು, ‘ಸ್ಟಾರ್ಟ್ಅಪ್ ರಾಜಧಾನಿ’ಯ ನಿಜವಾದ ಸಾರಥಿಗಳು ಕನ್ನಡಿಗರೇ ಆಗುವ ದಿನ ದೂರವಿರುವುದಿಲ್ಲ. ನಮ್ಮ ಗುರಿ ಕೇವಲ ಆರ್ಥಿಕ ಅಂಕಿ-ಅಂಶಗಳಲ್ಲಿ ಜಗತ್ತನ್ನು ಮೀರಿಸುವುದಷ್ಟೇ ಆಗಬಾರದು. ನಾವು ಗಾಂಧೀಜಿ ಕನಸಿದ ‘ಸ್ವರಾಜ್ಯ’ವನ್ನು ಆಧರಿಸಿದ ನಾಡನ್ನು ಕಟ್ಟಬೇಕಿದೆ.
ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಮೂಲಕ ಜಾಗತಿಕ ವ್ಯಾಪಾರದಲ್ಲಿ ತನ್ನ ಛಾಪು ಮೂಡಿಸಿದ್ದ ಕನ್ನಡ ನಾಡು, ಇಂದು ತನ್ನ ರಾಜಧಾನಿ ಬೆಂಗಳೂರಿನ ಮೂಲಕ ಭಾರತದ ‘ಸ್ಟಾರ್ಟ್ಅಪ್ ರಾಜಧಾನಿ’ ಎಂಬ ಕಿರೀಟವನ್ನು ಧರಿಸಿದೆ. ಜಗತ್ತಿನ ‘ಸಿಲಿಕಾನ್ ವ್ಯಾಲಿ’ಗೆ ಸರಿಸಾಟಿಯಾಗಿ ನಿಂತು, ಸಾವಿರಾರು ನವೋದ್ಯಮಗಳಿಗೆ ಜನ್ಮ ನೀಡಿದೆ. ಆದರೆ, ಈ ಉದ್ಯಮಶೀಲತೆ ಯಶಸ್ಸಿನ ನಡುವೆಯೂ ಒಂದು ಪ್ರಶ್ನೆ ನಮ್ಮನ್ನು ನಿರಂತರವಾಗಿ ಕಾಡುತ್ತದೆ.
ಕನ್ನಡಿಗರು ಉದ್ಯಮಶೀಲತೆಯಲ್ಲಿ ಏಕೆ ಹಿಂದೆ ಬಿದ್ದಿದ್ದಾರೆ? ಈ ಪ್ರಶ್ನೆ ಕೇವಲ ಬೌದ್ಧಿಕ ಚರ್ಚೆಗೆ ಸೀಮಿತವಾಗಿಲ್ಲ, ಬದಲಿಗೆ ಸಾಮಾನ್ಯರ ಮಾತುಕತೆಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೂ ವ್ಯಾಪಿಸಿದೆ. ರಾಜ್ಯದ ಆರ್ಥಿಕ ಭೂಪಟದಲ್ಲಿ ಸ್ಥಳೀಯರ ಪಾಲುಗಾರಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಇದು ಕೇವಲ ಗ್ರಹಿಕೆಯೇ ಅಥವಾ ಅದರ ಹಿಂದೆ ಸಂಕೀರ್ಣ ಸತ್ಯಗಳಿವೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಚಾರಿತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಲ್ಲಿ ಆಳವಾದ ವಿಶ್ಲೇಷಣೆ ನಡೆಸುವುದು ಹಾಗೂ ಮುಂದಿನ ದಿನಗಳಲ್ಲಿ ಕನ್ನಡಿಗರನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸಲು ಒಂದು ಸ್ಪಷ್ಟ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಗ್ರಹಿಕೆಯ ಹಿಂದಿನ ವಾಸ್ತವ
ʼವ್ಯಾಪಾರ ಮಾಡುವುದು ನಮ್ಮ ಡಿಎನ್ಎ ನಲ್ಲೇ ಇಲ್ಲ’ ಎಂಬಂತಹ ಮಾತುಗಳು ಕನ್ನಡಿಗರ ಆತ್ಮವಿಶ್ವಾಸವನ್ನು ಕುಗ್ಗಿಸಿವೆ. ಈ ಗ್ರಹಿಕೆಯ ಹಿಂದೆ ಕೇವಲ ಭಾವನಾತ್ಮಕ ಕಾರಣಗಳಲ್ಲ, ಗಟ್ಟಿಯಾದ ವಾಸ್ತವಗಳಿವೆ. ಮೊದಲನೆಯದಾಗಿ, ಬೆಂಗಳೂರು ‘ಸ್ಟಾರ್ಟ್ಅಪ್ ರಾಜಧಾನಿ’ ಆಗಿದ್ದರೂ, ಇಲ್ಲಿನ ದೊಡ್ಡ ಮತ್ತು ಪ್ರಖ್ಯಾತ ಸ್ಟಾರ್ಟ್ಅಪ್ಗಳಾದ ಓಲಾ, ಫ್ಲಿಪ್ಕಾರ್ಟ್, ಸ್ವಿಗ್ಗಿ, ಝೊಮ್ಯಾಟೊಗಳ ಸಂಸ್ಥಾಪಕರಲ್ಲಿ ಹೆಚ್ಚಿನವರು ಹೊರರಾಜ್ಯದವರು. ಇದು ‘ನಮ್ಮ ನೆಲದಲ್ಲಿ ಬೇರೆಯವರು ಯಶಸ್ವಿಯಾಗುತ್ತಾರೆ, ಆದರೆ ನಾವು ಹಿಂದೆ ಉಳಿಯುತ್ತೇವೆ’ ಎಂಬ ಭಾವನೆಯನ್ನು ಬಲಪಡಿಸುತ್ತದೆ.
ಎರಡನೆಯದಾಗಿ, ನಮ್ಮ ಯಶಸ್ಸಿನ ದೃಷ್ಟಿಕೋನ ಸೀಮಿತವಾಗಿದೆ. ಇನ್ಫೋಸಿಸ್ನ ಎನ್ ಆರ್ ನಾರಾಯಣ ಮೂರ್ತಿ, ಬಯೋಕಾನ್ನ ಕಿರಣ್ ಮಜುಂದಾರ್ ಶಾ ಅವರಂತಹ ಅಪ್ರತಿಮ ಉದಾಹರಣೆಗಳಿದ್ದರೂ, ಅವುಗಳನ್ನು ‘ಅಪವಾದಗಳು’ ಎಂದೇ ಪರಿಗಣಿಸಲಾಗುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಸಾವಿರಾರು ಕನ್ನಡಿಗರಿದ್ದರೂ, ಅವರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದಿಲ್ಲ.
ಮೂರನೆಯದಾಗಿ, ಐತಿಹಾಸಿಕವಾಗಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಾರ್ವಾಡಿ, ಗುಜರಾತಿ ಸಮುದಾಯಗಳಿಗೆ ಹೋಲಿಸಿಕೊಂಡಾಗ, ಕನ್ನಡಿಗರು ಹಿಂದೆ ಉಳಿದಿದ್ದಾರೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ.
ಚರಿತ್ರೆಯ ಪುಟಗಳಲ್ಲಿ ಅಡಗಿದ ಉತ್ತರ
ಈ ಗ್ರಹಿಕೆಗೆ ಐತಿಹಾಸಿಕ ಮತ್ತು ಆರ್ಥಿಕ ಕಾರಣಗಳಿವೆ. ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿಗಳ ಭಾಗಗಳಲ್ಲಿ ಬಂದರುಗಳ ಅಭಿವೃದ್ಧಿ, ರೈಲ್ವೆ ಸಂಪರ್ಕ ಮತ್ತು ಬ್ರಿಟಿಷ್ ವಾಣಿಜ್ಯ ನೀತಿಗಳು ಕೆಲವು ಸ್ಥಳೀಯ ಸಮುದಾಯಗಳಲ್ಲಿ ಬಂಡವಾಳ ಕ್ರೋಢೀಕರಣಕ್ಕೆ ನೆರವಾದವು. ಆಂಧ್ರ, ತಮಿಳುನಾಡು, ಗುಜರಾತ್ನ ವ್ಯಾಪಾರಿ ಸಮುದಾಯಗಳು ಈ ಅವಕಾಶಗಳನ್ನು ಬಳಸಿಕೊಂಡು ಪೀಳಿಗೆಯಿಂದ ಪೀಳಿಗೆಗೆ ವ್ಯಾಪಾರದ ಜ್ಞಾನ ಮತ್ತು ಬಂಡವಾಳವನ್ನು ವರ್ಗಾಯಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಹಳೆಯ ಮೈಸೂರು ಸಂಸ್ಥಾನವು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಕೈಗಾರಿಕೀಕರಣವನ್ನು ಕಂಡರೂ, ಅದರ ಮಾದರಿಯು ‘ಸರ್ಕಾರಿ-ಪ್ರೇರಿತವಾಗಿತ್ತು’.
ಭದ್ರಾವತಿಯ ಉಕ್ಕು ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಬ್ಯಾಂಕ್ ಆಫ್ ಮೈಸೂರು ಮುಂತಾದವು ಸರ್ಕಾರದ ನೇತೃತ್ವದಲ್ಲಿ ಸ್ಥಾಪನೆಯಾದವು. ಇದು ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿತಾದರೂ, ಜನಸಾಮಾನ್ಯರಲ್ಲಿ ಖಾಸಗಿ ಉದ್ಯಮಶೀಲತೆಯ ಮನೋಭಾವ ಮತ್ತು ಅದಕ್ಕೆ ಬೇಕಾದ ಬಂಡವಾಳವನ್ನು ಸೃಷ್ಟಿಸಲು ವಿಫಲವಾಯಿತು. ಹೀಗಾಗಿ, ಜನರಲ್ಲಿ ಉದ್ಯಮ ಕಟ್ಟಿ ಬೆಳೆಸುವ ಬದಲು, ಸರ್ಕಾರದ ಸ್ಥಿರ ಉದ್ಯೋಗವನ್ನು ಅರಸುವ ಮನೋಭಾವ ಬಲವಾಗಿ ಬೇರೂರಿತು.
ಕೃಷಿ ಭೂಮಿಯಿಂದ ರಿಯಲ್ ಎಸ್ಟೇಟ್ ಭ್ರಮೆಗೆ
ಕರ್ನಾಟಕದ ಬಹುಪಾಲು ಸಮುದಾಯಗಳು ದೀರ್ಘಕಾಲದಿಂದ ಕೃಷಿ-ಕೇಂದ್ರಿತ ಆರ್ಥಿಕತೆಯನ್ನೇ ಅವಲಂಬಿಸಿದ್ದವು. ಭೂಮಿಯೇ ಮುಖ್ಯ ಆಸ್ತಿ ಮತ್ತು ಸಾಮಾಜಿಕ ಗೌರವದ ಸಂಕೇತವಾಗಿತ್ತು. ಕೃಷಿಯಿಂದ ಬಂದ ಆದಾಯವನ್ನು ವ್ಯಾಪಾರದಲ್ಲಿ ಮರುಹೂಡಿಕೆ ಮಾಡುವ ‘ರಿಸ್ಕ್’ ತೆಗೆದುಕೊಳ್ಳುವ ಬದಲು, ಮತ್ತಷ್ಟು ಭೂಮಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಭಾವಿಸಲಾಗಿತ್ತು. ಇದೇ ಮನೋಭಾವವು ಆಧುನಿಕ ಜಗತ್ತಿನಲ್ಲಿ, ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳ ಬೆಳವಣಿಗೆಯೊಂದಿಗೆ, ಒಂದು ವಿಚಿತ್ರ ರೂಪಾಂತರವನ್ನು ಪಡೆದುಕೊಂಡಿದೆ. ಹಿಂದೆ ಗೌರವ ಮತ್ತು ಭದ್ರತೆಯ ಸಂಕೇತವಾಗಿದ್ದ ಭೂಮಿ, ಇಂದು ತ್ವರಿತವಾಗಿ ಹಣ ಮಾಡುವ ಸರಕಾಗಿ ಮಾರ್ಪಟ್ಟಿದೆ. ನಾವೀನ್ಯತೆ, ಉತ್ಪಾದನೆ ಅಥವಾ ಸೇವಾ ವಲಯದಲ್ಲಿ ಶ್ರಮವಹಿಸಿ ಉದ್ಯಮ ಕಟ್ಟುವ ಬದಲು, ‘ರಿಯಲ್ ಎಸ್ಟೇಟ್’ ಅನ್ನೇ ಅತಿ ದೊಡ್ಡ ಉದ್ಯಮವೆಂದು ಭಾವಿಸುವ ಒಂದು ಹೊಸ ವರ್ಗ ಸೃಷ್ಟಿಯಾಗಿದೆ. ಪೂರ್ವಜರಿಂದ ಬಂದ ಅಥವಾ ಕೃಷಿ ಮಾಡುತ್ತಿದ್ದ ಭೂಮಿಯನ್ನು ಹೊರರಾಜ್ಯದ ಬಂಡವಾಳಶಾಹಿಗಳಿಗೆ ಅಥವಾ ಡೆವಲಪರ್ಗಳಿಗೆ ಮಾರಿ ಕೋಟಿಗಟ್ಟಲೆ ಗಳಿಸುವುದು ಸರಳ ಸೂತ್ರವಾಗಿದೆ. ಒಂದೆರಡು ಎಕರೆ ಜಮೀನು ಹೊಂದಿದ್ದ ಸಣ್ಣ ಕೃಷಿಕರು, ನಗರೀಕರಣದ ಅಬ್ಬರಕ್ಕೆ ಸಿಲುಕಿ ತಮ್ಮ ಭೂಮಿಯನ್ನು ಮಾರಿ, ಕನ್ನಡೇತರರು ಸ್ಥಾಪಿಸಿದ ಉದ್ಯಮಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಸಲಾಮ್ ಹೊಡೆಯುವಂತಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಜಮೀನ್ದಾರರ ಕಥೆಯೇ ಬೇರೆಯಾಗಿದೆ.
‘ಉಗುರುಸುತ್ತಿನ’ ಶ್ರೀಮಂತಿಕೆ ಮತ್ತು ಟೊಳ್ಳು ವೈಭವ
ಭೂಮಿ ಮಾರಾಟದಿಂದ ಬಂದ ಈ ಹಠಾತ್ ಹಣದ ಹೊಳೆಯು ಆತಂಕಕಾರಿ ಪರಿಣಾಮಗಳನ್ನು ಸೃಷ್ಟಿಸಿದೆ. ಈ ಹಣವನ್ನು ಮರುಹೂಡಿಕೆ ಮಾಡಿ ಮತ್ತೊಂದು ದೊಡ್ಡ ಉದ್ಯಮವನ್ನು ಕಟ್ಟುವ ಅಥವಾ ಉದ್ಯೋಗ ಸೃಷ್ಟಿಸುವ ದೂರದೃಷ್ಟಿ ಹಲವರಲ್ಲಿ ಕಾಣುತ್ತಿಲ್ಲ. ಬದಲಿಗೆ, ಈ ಸಂಪತ್ತು ವೈಯಕ್ತಿಕ ವೈಭವದ ಪ್ರದರ್ಶನಕ್ಕೆ ಬಳಕೆಯಾಗುತ್ತಿದೆ. ಮಣೆಗಟ್ಟಲೆ ಬಂಗಾರದ ಸರ, ಐಷಾರಾಮಿ ಕಾರುಗಳು ಮತ್ತು ಬೃಹತ್ ಬಂಗಲೆಗಳು ಯಶಸ್ಸಿನ ಮಾನದಂಡಗಳಾಗಿವೆ. ಈ ಸಂಪತ್ತಿನ ಪ್ರದರ್ಶನವು ‘ಉಗುರುಸುತ್ತು’ ಆದಂತೆ; ಹೊರನೋಟಕ್ಕೆ ಶ್ರೀಮಂತಿಕೆ ಕಂಡರೂ, ಆರ್ಥಿಕತೆಯ ನಿಜವಾದ ಉತ್ಪಾದನಾಶೀಲತೆಗೆ ಯಾವುದೇ ಕೊಡುಗೆ ನೀಡದ ಒಂದು ಟೊಳ್ಳು ಬೆಳವಣಿಗೆಯಾಗಿದೆ.
ಹಣದಿಂದ ಅಧಿಕಾರ: ಒಂದು ವಿಷವರ್ತುಲ
ಈ ಪ್ರವೃತ್ತಿಯ ಮುಂದಿನ ಹಂತ ಇನ್ನೂ ಅಪಾಯಕಾರಿ. ರಿಯಲ್ ಎಸ್ಟೇಟ್ ಮೂಲಕ ಗಳಿಸಿದ ಹಣ ಮತ್ತು ಸ್ಥಳೀಯ ಸಂಪರ್ಕವನ್ನು ಬಳಸಿಕೊಂಡು ರಾಜಕೀಯಕ್ಕೆ ಪ್ರವೇಶಿಸುವುದು ಅನೇಕರ ಗುರಿಯಾಗಿದೆ. ಗ್ರಾಮ ಪಂಚಾಯಿತಿಯಿಂದ ವಿಧಾನಸಭಾ ಚುನಾವಣೆಯವರೆಗೂ, ಭೂ ವ್ಯವಹಾರವನ್ನೇ ಮೂಲ ಬಂಡವಾಳವಾಗಿಸಿಕೊಂಡು ರಾಜಕೀಯ ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ರಾಜಕೀಯವನ್ನು ಸಮಾಜಸೇವೆಗಿಂತ ಹೆಚ್ಚಾಗಿ, ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ರಕ್ಷಿಸಿಕೊಳ್ಳುವ ಸಾಧನವಾಗಿ ಬಳಸಲಾಗುತ್ತಿದೆ. ಇದು ‘ಹಣದಿಂದ ಅಧಿಕಾರ, ಅಧಿಕಾರದಿಂದ ಮತ್ತಷ್ಟು ಹಣ’ ಎಂಬ ವಿಷವರ್ತುಲವನ್ನು ಸೃಷ್ಟಿಸಿದೆ. ನೈಜ ಉದ್ಯಮಶೀಲತೆಯಾದ ಸಮಸ್ಯೆ ಪರಿಹಾರ ಮತ್ತು ಮೌಲ್ಯವರ್ಧನೆಯ ಬದಲು, ಭೂಮಿ ಮಾರಿ ಗಳಿಸುವ ಹಣ ಮತ್ತು ಅಧಿಕಾರವೇ ‘ಮಹಾನ್ ಸಾಧನೆ’ ಎಂದು ಬಿಂಬಿತವಾಗುತ್ತಿರುವುದು ಯುವ ಪೀಳಿಗೆಗೆ ತಪ್ಪು ಸಂದೇಶ ರವಾನಿಸುತ್ತಿದೆ.
ಡಿಜಿಟಲ್ ಕ್ರಾಂತಿಯ ಭರವಸೆ
ಆದರೆ, ಈ ರಿಯಲ್ ಎಸ್ಟೇಟ್ ಮತ್ತು ರಾಜಕೀಯದ ವಿಷವರ್ತುಲದ ಆಚೆಗೆ ಒಂದು ಹೊಸ ಆಶಾದಾಯಕ ಜಗತ್ತು ತೆರೆದುಕೊಳ್ಳುತ್ತಿದೆ. ಅದುವೇ ಡಿಜಿಟಲ್ ಆರ್ಥಿಕತೆಯ ಜಗತ್ತು. ಇಲ್ಲಿ ಯಶಸ್ಸಿಗೆ ಪೂರ್ವಜರ ಆಸ್ತಿಯಾಗಲೀ, ರಾಜಕೀಯ ಸಂಪರ್ಕವಾಗಲೀ ಮಾನದಂಡವಲ್ಲ; ಬದಲಿಗೆ, ಸೃಜನಶೀಲತೆ, ಜ್ಞಾನ ಮತ್ತು ಮಾರುಕಟ್ಟೆಯ ಅರಿವೇ ನಿಜವಾದ ಬಂಡವಾಳ. ಇಂದು ಉತ್ತರ ಕರ್ನಾಟಕದ ಸಣ್ಣ ಹಳ್ಳಿಯ ಯುವಕನೊಬ್ಬ ಯೂಟ್ಯೂಬ್ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾನೆ. ಮೈಸೂರಿನ ಗೃಹಿಣಿಯೊಬ್ಬರು ಮನೆಯಲ್ಲೇ ತಯಾರಿಸಿದ ಸಾವಯವ ಉತ್ಪನ್ನಗಳನ್ನು ಇನ್ಸ್ಟಾಗ್ರಾಂ ಮೂಲಕ ಜಗತ್ತಿನಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಇ-ಕಾಮರ್ಸ್, ಆಪ್-ಆಧಾರಿತ ಸೇವೆಗಳು ಮತ್ತು ಡಿಜಿಟಲ್ ಮಾರ್ಕೆಟಿಂಗ್ನಂತಹ ಕ್ಷೇತ್ರಗಳಲ್ಲಿ ಸಾವಿರಾರು ಕನ್ನಡಿಗ ಯುವಕ-ಯುವತಿಯರು ಸದ್ದಿಲ್ಲದೆ ಹೊಸ ಕ್ರಾಂತಿಯನ್ನೇ ಮಾಡುತ್ತಿದ್ದಾರೆ.
ಐಟಿ ಕ್ರಾಂತಿ: ಉದ್ಯೋಗ ಸೃಷ್ಟಿ, ಉದ್ಯಮಶೀಲತೆಯಲ್ಲ
1990ರ ದಶಕದ ನಂತರ ಬೆಂಗಳೂರು ಐಟಿ ಸೇವಾ ಕ್ಷೇತ್ರದ ಕೇಂದ್ರವಾಗಿ ಬೆಳೆದಾಗ, ಅದು ಉದ್ಯಮಶೀಲತೆಯ ಕ್ರಾಂತಿಗಿಂತ ಹೆಚ್ಚಾಗಿ ‘ಉದ್ಯೋಗದ ಕ್ರಾಂತಿ’ಯನ್ನು ಸೃಷ್ಟಿಸಿತು. ಇದು ಲಕ್ಷಾಂತರ ಕನ್ನಡಿಗರಿಗೆ ಕೈತುಂಬಾ ಸಂಬಳದ, ಸುರಕ್ಷಿತವಾದ ಉದ್ಯೋಗಗಳನ್ನು ನೀಡಿತು. ಉತ್ತಮ ಸಂಬಳ ಮತ್ತು ಸ್ಥಿರ ಜೀವನಶೈಲಿ ಸಿಗುತ್ತಿರುವಾಗ, ಎಲ್ಲವನ್ನೂ ಪಣಕ್ಕಿಟ್ಟು ಉದ್ಯಮ ಕಟ್ಟುವ ಸಾಹಸಕ್ಕೆ ಕೈಹಾಕುವುದು ಹಲವರಿಗೆ ಅನಗತ್ಯವೆನಿಸಿತು. ಐಟಿ ಕ್ರಾಂತಿಯು ಕನ್ನಡಿಗರನ್ನು ಉತ್ತಮ ಉದ್ಯೋಗಿಗಳನ್ನಾಗಿ ರೂಪಿಸಿತೇ ಹೊರತು, ದೊಡ್ಡ ಸಂಖ್ಯೆಯಲ್ಲಿ ಉದ್ಯಮಶೀಲರನ್ನಾಗಿ ಪರಿವರ್ತಿಸಲಿಲ್ಲ.
ಸೋಲಿನ ಭಯ ಮತ್ತು ಸಮುದಾಯದ ಬೆಂಬಲದ ಕೊರತೆ
ಈ ಆರ್ಥಿಕ ಕಾರಣಗಳೊಂದಿಗೆ, ನಮ್ಮ ಸಾಂಸ್ಕೃತಿಕ ಮನಸ್ಥಿತಿಯೂ ಸೇರಿಕೊಂಡಿದೆ. ಕರ್ನಾಟಕದ ಸಾಂಪ್ರದಾಯಿಕ ಸಮಾಜದಲ್ಲಿ ನೌಕರಿಗೆ ಹೆಚ್ಚಿನ ಮನ್ನಣೆ ಇದೆ. ‘ಜೀವಕ್ಕೊಂದು ಕೆಲಸ, ಜೀವನಕ್ಕೊಂದು ಮನೆ’ ಎಂಬುದು ಮಧ್ಯಮ ವರ್ಗದ ಕುಟುಂಬಗಳ ಗುರಿಯಾಗಿದೆ. ಉದ್ಯಮದಲ್ಲಿನ ಅನಿಶ್ಚಿತತೆ ಮತ್ತು ಅಪಾಯಗಳ ಬದಲು ಸ್ಥಿರ ಸಂಬಳದ ನೌಕರಿಯನ್ನು ಆಯ್ದುಕೊಳ್ಳುವ ಮನೋಭಾವ ಬಲವಾಗಿದೆ. ನಮ್ಮ ಸಮಾಜದಲ್ಲಿ ಸೋಲನ್ನು ಒಂದು ಕಳಂಕವೆಂಬಂತೆ ನೋಡಲಾಗುತ್ತದೆ. ವ್ಯವಹಾರದಲ್ಲಿ ನಷ್ಟವಾದರೆ ಸಮಾಜ ಆಡಿಕೊಳ್ಳುತ್ತದೆ ಎಂಬ ಭಯವೇ ಅನೇಕರ ಕನಸುಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುತ್ತದೆ. ಇದಕ್ಕೆ ಪೂರಕವಾಗಿ, ಬೇರೆ ರಾಜ್ಯಗಳ ಕೆಲವು ಸಮುದಾಯಗಳಲ್ಲಿರುವಂತೆ, ವ್ಯಾಪಾರ-ವಹಿವಾಟಿಗೆ ಪೀಳಿಗೆಯಿಂದ ಪೀಳಿಗೆಗೆ ಬೆಂಬಲ ನೀಡುವ ಬಲಿಷ್ಠ ವ್ಯಾಪಾರಿ ಸಮುದಾಯದ ಜಾಲಗಳು ಕನ್ನಡಿಗರಲ್ಲಿ ಕಡಿಮೆ.
ಸಾಂಪ್ರದಾಯಿಕ ಸಮುದಾಯಗಳು: ವ್ಯಾಪಾರದಲ್ಲಿ ಹಿನ್ನಡೆ ಏಕೆ?
ಕರ್ನಾಟಕದ ಉದ್ಯಮಶೀಲತೆಯ ನಕ್ಷೆಯನ್ನು ಗಮನಿಸಿದಾಗ, ಸಾಂಪ್ರದಾಯಿಕವಾಗಿ ಪ್ರಬಲ ಸಮುದಾಯಗಳು ಸಹ ಬೃಹತ್ ಉದ್ಯಮಗಳನ್ನು ಕಟ್ಟುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಉದಾಹರಣೆಗೆ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದ ಬ್ರಾಹ್ಮಣ ಸಮುದಾಯವು, ಜ್ಞಾನ ಮತ್ತು ಆಡಳಿತಾತ್ಮಕ ವಲಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿತೇ ವಿನಾ, ವ್ಯಾಪಾರದ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದು ಕಡಿಮೆ. ಅವರಿಗೆ ಸ್ಥಿರವಾದ ಸಾಂಪ್ರದಾಯಿಕ ವೃತ್ತಿಗಳೇ ಹೆಚ್ಚು ಆಕರ್ಷಕವಾಗಿ ಕಂಡವು.
ಕೈತಪ್ಪಿದ ಬ್ಯಾಂಕಿಂಗ್, ಗಡಿ ದಾಟದ ಉದ್ಯಮಶೀಲತೆ
ವ್ಯಾಪಾರಿ ಹಿನ್ನೆಲೆಯುಳ್ಳ ಲಿಂಗಾಯತ ಮತ್ತು ಕರಾವಳಿಯ ಶೆಟ್ಟಿ ಸಮುದಾಯಗಳು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ವ್ಯವಹಾರಗಳು ಸ್ಥಳೀಯ ಮಾರುಕಟ್ಟೆಗಳಿಗೆ ಸೀಮಿತವಾದವು. ಸಿಂಡಿಕೇಟ್, ಕೆನರಾ, ವಿಜಯಾ, ಕಾರ್ಪೊರೇಷನ್ನಂತಹ ದೈತ್ಯ ಬ್ಯಾಂಕ್ಗಳನ್ನು ಹುಟ್ಟುಹಾಕಿದ ಕರಾವಳಿಯ ಉದ್ಯಮಶೀಲತಾ ಮನೋಭಾವ, ಬ್ಯಾಂಕಿಂಗ್ ರಾಷ್ಟ್ರೀಕರಣ ಮತ್ತು ಇತ್ತೀಚಿನ ವಿಲೀನ ಪ್ರಕ್ರಿಯೆಗಳಿಂದಾಗಿ ಸ್ಥಳೀಯರ ಕೈತಪ್ಪಿ ಹೋಯಿತು. ‘ಉಡುಪಿ ಹೋಟೆಲ್’ ಎಂಬ ಬ್ರ್ಯಾಂಡನ್ನು ಜಗತ್ತಿಗೆ ಪರಿಚಯಿಸಿದ ಕರಾವಳಿಗರ ಉದ್ಯಮಶೀಲತೆ, ಆ ವಲಯವನ್ನು ಮೀರಿ ರಾಜ್ಯದಾದ್ಯಂತ ಬೇರೆ ಕೈಗಾರಿಕೆಗಳಿಗೆ ವಿಸ್ತರಿಸಲಿಲ್ಲ.
‘ಸಂಪರ್ಕ’ವೇ ಬಂಡವಾಳವಾದಾಗ
ಇದೇ ಸಮಯದಲ್ಲಿ, ಆಧುನಿಕ ಕರ್ನಾಟಕದಲ್ಲಿ ಉದ್ಯಮಶೀಲತೆಯು ‘ನಾವೀನ್ಯತೆ’ ಅಥವಾ ‘ಮಾರುಕಟ್ಟೆಯ ಅರಿವು’ ಎಂಬುದಕ್ಕಿಂತ ಹೆಚ್ಚಾಗಿ ‘ರಾಜಕೀಯ ಸಂಪರ್ಕ’ವನ್ನು ಅವಲಂಬಿಸತೊಡಗಿತು. ಇಂದು ರಾಜ್ಯದ ಬಹುತೇಕ ದೊಡ್ಡ ಉದ್ದಿಮೆಗಳಾದ ಸಕ್ಕರೆ ಕಾರ್ಖಾನೆಗಳು, ಗಣಿಗಾರಿಕೆ, ಶಿಕ್ಷಣ ಸಂಸ್ಥೆಗಳು(ವಿಶೇಷವಾಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು) ಮತ್ತು ಮೂಲಸೌಕರ್ಯ ಯೋಜನೆಗಳು ಪ್ರಭಾವಿ ರಾಜಕಾರಣಿಗಳ ಕುಟುಂಬಗಳ ಒಡೆತನದಲ್ಲಿವೆ. ಇದು ‘ಸಂಪರ್ಕ ಆಧಾರಿತ ಬಂಡವಾಳಶಾಹಿ’ಗೆ (Crony Capitalism) ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ, ಯಾವುದೇ ರಾಜಕೀಯ ಬೆಂಬಲವಿಲ್ಲದ, ಕೇವಲ ತನ್ನ ಯೋಚನೆ ಮತ್ತು ಪರಿಶ್ರಮವನ್ನೇ ನಂಬಿದ ಸಾಮಾನ್ಯ ಕನ್ನಡಿಗನಿಗೆ ಈ ವಲಯಗಳಲ್ಲಿ ಸ್ಪರ್ಧಿಸುವುದು ಅಸಾಧ್ಯವಾಗಿದೆ.
ಉದ್ಯೋಗಿಗಳ ಸೃಷ್ಟಿ, ಉದ್ಯೋಗದಾತರಲ್ಲ
ನಮ್ಮ ಶೈಕ್ಷಣಿಕ ವ್ಯವಸ್ಥೆಯು ಕೂಡ ಉದ್ಯೋಗಿಗಳನ್ನು ಸೃಷ್ಟಿಸುವತ್ತ ಗಮನಹರಿಸುತ್ತದೆಯೇ ವಿನಾ ಉದ್ಯೋಗದಾತರನ್ನು ರೂಪಿಸುವತ್ತ ಅಲ್ಲ. ನಮ್ಮ ಪಠ್ಯಕ್ರಮಗಳು ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡಿ, ಉದ್ಯಮಶೀಲತೆಗೆ ಬೇಕಾದ ಪ್ರಾಯೋಗಿಕ ಜ್ಞಾನ, ಆರ್ಥಿಕ ಸಾಕ್ಷರತೆ ಮತ್ತು ಅಪಾಯ ನಿರ್ವಹಣೆಯಂತಹ ಕೌಶಲ್ಯಗಳನ್ನು ನಿರ್ಲಕ್ಷಿಸುತ್ತವೆ. ಇದರಿಂದಾಗಿ, ಉತ್ತಮ ಅಂಕ ಗಳಿಸಿದ ಯುವಜನರೂ ಕೂಡ ಪದವಿ ಪಡೆದ ತಕ್ಷಣ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದನ್ನೇ ಗುರಿಯಾಗಿಸಿಕೊಳ್ಳುತ್ತಾರೆ.
ಅಂಚಿನ ಸಮುದಾಯಗಳು: ಅಡೆತಡೆಗಳ ಹಾದಿ
ಕನ್ನಡಿಗರ ಉದ್ಯಮಶೀಲತೆಯ ಚರ್ಚೆಯಲ್ಲಿ, ದಲಿತರು ಮತ್ತು ಹಿಂದುಳಿದ ವರ್ಗಗಳಂತಹ ಐತಿಹಾಸಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಸ್ಥಿತಿ ಒಂದು ಗಂಭೀರ ಅಧ್ಯಯನಕ್ಕೆ ಅರ್ಹವಾಗಿದೆ. ಇವರ ಹಾದಿಯಲ್ಲಿನ ಅಡೆತಡೆಗಳು ಇಮ್ಮಡಿಯಾಗಿವೆ. ತಲೆಮಾರುಗಳಿಂದ ಬಂದ ಬಂಡವಾಳದ ಸಂಪೂರ್ಣ ಅನುಪಸ್ಥಿತಿ, ವ್ಯಾಪಾರ-ವಹಿವಾಟಿನ ಜ್ಞಾನ ಮತ್ತು ಸಂಪರ್ಕ ಜಾಲದ ಕೊರತೆ ಹಾಗೂ ಸಮಾಜದಲ್ಲಿ ಬೇರೂರಿರುವ ಪೂರ್ವಾಗ್ರಹಗಳು ಇವರನ್ನು ಉದ್ಯಮಶೀಲತೆಯಿಂದ ಬಹುದೂರ ಉಳಿಸಿವೆ.
ಕಾಗದದ ಮೇಲಿನ ಯೋಜನೆಗಳು
ಈ ಅಸಮಾನತೆಯನ್ನು ನಿವಾರಿಸಲು ಸರ್ಕಾರಗಳು ದಶಕಗಳಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಡಾ. ಬಿ ಆರ್ ಅಂಬೇಡ್ಕರ್ ಮತ್ತು ಡಿ. ದೇವರಾಜ ಅರಸ್ ಅಭಿವೃದ್ಧಿ ನಿಗಮಗಳ ಮೂಲಕ ಸಣ್ಣ ವ್ಯಾಪಾರಗಳಿಗೆ ನೇರ ಸಾಲ, ಸಬ್ಸಿಡಿ ಮತ್ತು ವಿವಿಧ ನೆರವುಗಳನ್ನು ಒದಗಿಸಲಾಗುತ್ತಿದೆ. ಆದರೆ, ಕಾಗದದ ಮೇಲಿರುವ ಈ ಯೋಜನೆಗಳು ಮತ್ತು ಫಲಾನುಭವಿಗಳಿಗೆ ತಲುಪುವ ವಾಸ್ತವದ ನಡುವೆ ದೊಡ್ಡ ಕಂದಕವಿದೆ. ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯ ಕೊರತೆ, ಸಂಕೀರ್ಣ ಅರ್ಜಿ ಪ್ರಕ್ರಿಯೆ, ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರವು ಅರ್ಹರನ್ನು ಯೋಜನೆಯಿಂದ ದೂರವಿಡುತ್ತದೆ. ನೀಡಲಾಗುವ ಸಾಲದ ಮೊತ್ತವೂ ಸ್ಪರ್ಧಾತ್ಮಕ ಉದ್ಯಮವನ್ನು ಕಟ್ಟಲು ಸಾಕಾಗುವುದಿಲ್ಲ.
ಮಹಿಳೆಯರು: ಅದೃಶ್ಯ ಶಕ್ತಿಯ ಅಗೋಚರ ಸವಾಲುಗಳು
ಕನ್ನಡಿಗರ ಉದ್ಯಮಶೀಲತೆಯಲ್ಲಿ ಬಹುತೇಕ ಅದೃಶ್ಯವಾಗಿರುವ, ಆದರೆ ಅಗಾಧ ಸಾಮರ್ಥ್ಯ ಹೊಂದಿರುವ ಮತ್ತೊಂದು ವರ್ಗವೆಂದರೆ ಮಹಿಳೆಯರು. ಸಾಂಪ್ರದಾಯಿಕವಾಗಿ, ಮಹಿಳೆಯರ ಪಾತ್ರವನ್ನು ಕುಟುಂಬಕ್ಕೆ ಸೀಮಿತಗೊಳಿಸಲಾಗಿದೆ. ಉದ್ಯಮ ಆರಂಭಿಸಲು ಅವರಿಗೆ ಸಾಮಾಜಿಕ ಪ್ರೋತ್ಸಾಹ, ಕೌಟುಂಬಿಕ ಬೆಂಬಲ ಮತ್ತು ಬಂಡವಾಳ ಸಿಗುವುದು ಅತ್ಯಂತ ಕಷ್ಟ. ಈ ಅಡೆತಡೆಗಳ ನಡುವೆಯೂ, ಆಹಾರ ಸಂಸ್ಕರಣೆ, ಬಟ್ಟೆ, ಕರಕುಶಲ ಮತ್ತು ಸಣ್ಣ-ಪುಟ್ಟ ಸೇವಾ ವಲಯಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಇವರ ಉದ್ಯಮಶೀಲತೆಗೆ ಸರಿಯಾದ ತರಬೇತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸಿದರೆ, ಅವರು ಗ್ರಾಮೀಣ ಆರ್ಥಿಕತೆಯ ಚುಕ್ಕಾಣಿ ಹಿಡಿಯಬಲ್ಲರು.
ಪರಿಹಾರದ ದಾರಿ: ‘ಹಿಂದ್ ಸ್ವರಾಜ್’ನ ಬೆಳಕಿನಲ್ಲಿ
ಈ ಸಮಸ್ಯೆಗೆ ಪರಿಹಾರವನ್ನು ಹುಡುಕುವಾಗ, ನಾವು ಕೇವಲ ಪಾಶ್ಚಿಮಾತ್ಯ ಆರ್ಥಿಕ ಮಾದರಿಗಳನ್ನು ಅನುಕರಿಸುವ ಬದಲು, ಮಹಾತ್ಮ ಗಾಂಧಿಯವರು ‘ಹಿಂದ್ ಸ್ವರಾಜ್’ನಲ್ಲಿ ಕಂಡಿದ್ದ ದಾರ್ಶನಿಕ ಹಾದಿಯನ್ನು ಅವಲೋಕಿಸುವುದು ಇಂದಿನ ತುರ್ತು ಅಗತ್ಯ. ಗಾಂಧೀಜಿ ಪ್ರತಿಪಾದಿಸಿದ್ದು ಕೇವಲ ರಾಜಕೀಯ ಸ್ವರಾಜ್ಯವನ್ನಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವು ಸ್ವಾವಲಂಬಿಯಾಗುವ ‘ಆರ್ಥಿಕ ಸ್ವರಾಜ್ಯ’ವನ್ನು. ಭೂಮಿಯನ್ನು ಕೇವಲ ಮಾರಾಟದ ವಸ್ತುವಾಗಿ ನೋಡದೆ, ಉತ್ಪಾದನೆಯ ಮೂಲವಾಗಿ ಕಾಣುವ ‘ಸ್ವದೇಶಿ’ ಚಿಂತನೆ ಮತ್ತು ಅಭಿವೃದ್ಧಿಯ ಫಲವು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ‘ಸರ್ವೋದಯ’ದ ತತ್ವದ ಬೆಳಕಿನಲ್ಲಿಯೇ ನಾವು ಕನ್ನಡಿಗರ ಉದ್ಯಮಶೀಲತೆಯ ಮುಂದಿನ ದಾರಿಯನ್ನು ರೂಪಿಸಬೇಕಿದೆ.
ಒಂದು ಸಾಮೂಹಿಕ ಹೊಣೆಗಾರಿಕೆ
ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಉದ್ಯಮಿಗಳನ್ನಾಗಿ ಮಾಡುವುದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಕೆಲಸವಲ್ಲ. ಇದೊಂದು ಸಾಮೂಹಿಕ ಜವಾಬ್ದಾರಿ. ಇದರಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಸಂಘಗಳು, ಮಾಧ್ಯಮ, ಮತ್ತು ಪ್ರತಿ ಕುಟುಂಬವೂ ತನ್ನದೇ ಆದ ಮಹತ್ವದ ಪಾತ್ರವನ್ನು ವಹಿಸಬೇಕಾಗುತ್ತದೆ.
ಸರ್ಕಾರದ ಪಾತ್ರ: ಘೋಷಣೆಯಿಂದ ಅನುಷ್ಠಾನದವರೆಗೆ
ಸರ್ಕಾರದ ಪಾತ್ರವು ಕೇವಲ ಯೋಜನೆಗಳನ್ನು ಘೋಷಿಸುವುದಕ್ಕೆ ಸೀಮಿತವಾಗಬಾರದು. ‘ಕರ್ನಾಟಕ ಕೈಗಾರಿಕಾ ನೀತಿ’, ‘ಐಡಿಯಾ2ಪಿಒಸಿ’ ಅನುದಾನದಂತಹ ಯೋಜನೆಗಳ ಬಗ್ಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕರಲ್ಲಿ ವ್ಯಾಪಕ ಅರಿವು ಮೂಡಿಸಿ, ಅರ್ಜಿ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ‘ಬಿಯಾಂಡ್ ಬೆಂಗಳೂರು’ ಚಿಂತನೆಯನ್ನು ನಿಜಾರ್ಥದಲ್ಲಿ ಕಾರ್ಯಗತಗೊಳಿಸಬೇಕು. ಹುಬ್ಬಳ್ಳಿ-ಧಾರವಾಡ-ಬೆಳಗಾವಿ ವಲಯವನ್ನು ಉತ್ಪಾದನಾ ಕೇಂದ್ರವಾಗಿ, ಮಂಗಳೂರನ್ನು ಮೀನುಗಾರಿಕೆ ಮತ್ತು ಫಿನ್ಟೆಕ್ ಕೇಂದ್ರವಾಗಿ ಹಾಗೂ ಮೈಸೂರನ್ನು ಪ್ರವಾಸೋದ್ಯಮ ಮತ್ತು ಆರೋಗ್ಯ-ಕ್ಷೇಮ ಉದ್ಯಮಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲು ವಿಶೇಷ ಕ್ಲಸ್ಟರ್ ಆಧಾರಿತ ಪ್ರೋತ್ಸಾಹಕಗಳನ್ನು ನೀಡಬೇಕು.
ಕೃಷಿಯಿಂದ ಕೃಷಿ-ಉದ್ಯಮದೆಡೆಗೆ
ನಮ್ಮ ಕೃಷಿ-ಕೇಂದ್ರಿತ ಮನೋಭಾವವನ್ನು ದೌರ್ಬಲ್ಯವಾಗಿ ನೋಡುವ ಬದಲು, ಅದನ್ನೇ ನಮ್ಮ ಅತಿ ದೊಡ್ಡ ಶಕ್ತಿಯಾಗಿ ಪರಿವರ್ತಿಸಲು ಸರ್ಕಾರವು ಒಂದು ಸ್ಪಷ್ಟ ನೀಲನಕ್ಷೆಯನ್ನು ರೂಪಿಸಬೇಕು. ರೈತರನ್ನು ಕೇವಲ ‘ಬೆಳೆಗಾರ’ರ ಸ್ಥಾನದಿಂದ ‘ಕೃಷಿ-ಉದ್ಯಮಿ’ಗಳ ಸ್ಥಾನಕ್ಕೆ ಏರಿಸಬೇಕಿದೆ. ಉದಾಹರಣೆಗೆ, ಟೊಮ್ಯಾಟೊ ಬೆಲೆ ಕುಸಿದಾಗ ಬೀದಿಗೆ ಎಸೆಯುವ ಬದಲು, ಅದನ್ನೇ ಬಳಸಿ ಕೆಚಪ್ ಅಥವಾ ಪ್ಯೂರಿ ತಯಾರಿಸುವ ಸಣ್ಣ ಸಂಸ್ಕರಣಾ ಘಟಕಗಳನ್ನು ತಾಲೂಕು ಮಟ್ಟದಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸಬೇಕು. ರಾಗಿ, ಸಿರಿಧಾನ್ಯ, ಕಾಫಿಯಂತಹ ನಮ್ಮ ನಾಡಿನ ವಿಶಿಷ್ಟ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ಮಾಡಿ, ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ‘ಫಾರ್ಮ್-ಟು-ಫೋರ್ಕ್’ ಸ್ಟಾರ್ಟ್ಅಪ್ಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸಬೇಕು.
ಶಿಕ್ಷಣ ಕೇಂದ್ರಗಳು: ಮನಸ್ಥಿತಿ ಪರಿವರ್ತನೆಯ ಮೂಲಗಳು
ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಶಿಕ್ಷಣ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಉದ್ಯಮಶೀಲತೆಯ ಪಾಠಗಳು ಪ್ರೌಢಶಾಲಾ ಹಂತದಿಂದಲೇ ಪಠ್ಯಕ್ರಮದ ಭಾಗವಾಗಬೇಕು. ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಗುರುತಿಸುವ, ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು ರಿಸ್ಕ್ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಬೇಕು. ಪ್ರತಿ ಕಾಲೇಜಿನಲ್ಲಿಯೂ ‘ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್’ (NAIN)ನಂತಹ ನಾವೀನ್ಯತಾ ಕೇಂದ್ರಗಳನ್ನು ಕ್ರಿಯಾಶೀಲಗೊಳಿಸಿ, ಯಶಸ್ವಿ ಕನ್ನಡಿಗ ಉದ್ಯಮಿಗಳನ್ನು ‘ಮೆಂಟರ್’ಗಳಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಆಲೋಚನೆಗಳಿಗೆ ಮಾರ್ಗದರ್ಶನ ನೀಡಬೇಕು.
ಜ್ಞಾನ ಹಂಚಿಕೆಯ ಜವಾಬ್ದಾರಿ
FKCCI, KASSIA ದಂತಹ ಸಂಘಗಳು ಮತ್ತು ಯಶಸ್ವಿ ಕಾರ್ಪೊರೇಟ್ ಕಂಪನಿಗಳು ನವೋದ್ಯಮಿಗಳಿಗೆ ತಮ್ಮ ಜ್ಞಾನ ಮತ್ತು ಸಂಪರ್ಕಗಳನ್ನು ಹಂಚಿಕೊಳ್ಳಬೇಕು. ಕರ್ನಾಟಕದ ಯಶಸ್ವಿ ಉದ್ಯಮಿಗಳು ಏಂಜೆಲ್ ಹೂಡಿಕೆದಾರರಾಗಿ(Angel Investors) ಮುಂದೆ ಬಂದು, ಭರವಸೆ ಮೂಡಿಸುವ ಸ್ಥಳೀಯ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಬೇಕು. ಇದಕ್ಕಾಗಿ ‘ಕರ್ನಾಟಕ ಏಂಜೆಲ್ ನೆಟ್ವರ್ಕ್’ನಂತಹ ಒಂದು ವ್ಯವಸ್ಥಿತ ವೇದಿಕೆಯನ್ನು ಸ್ಥಾಪಿಸಬೇಕು.
ಜಾಗತಿಕ ಕನ್ನಡಿಗರು: ಸ್ಥಳೀಯ ಬೆಳವಣಿಗೆಯ ಸೇತುವೆ
ಈ ಸ್ಥಳೀಯ ಹೂಡಿಕೆದಾರರ ಜಾಲದ ಜತೆಗೇ, ನಾವು ಜಾಗತಿಕವಾಗಿ ಹರಡಿರುವ ಕನ್ನಡಿಗರ ಶಕ್ತಿಯನ್ನು ಬಳಸಿಕೊಳ್ಳಬೇಕಿದೆ. ಇಂದು ಜಗತ್ತಿನಾದ್ಯಂತ ಉನ್ನತ ಸ್ಥಾನದಲ್ಲಿರುವ ಸಾವಿರಾರು ಕನ್ನಡಿಗರ ಜಾಗತಿಕ ಅನುಭವ, ಜ್ಞಾನ ಮತ್ತು ಬಂಡವಾಳವನ್ನು ನಮ್ಮ ನಾಡಿನ ಯುವ ಉದ್ಯಮಿಗಳಿಗೆ ತಲುಪಿಸಲು ಒಂದು ಸೇತುವೆಯನ್ನು ನಿರ್ಮಿಸಬೇಕಿದೆ. ಸರ್ಕಾರ ಮತ್ತು ಕೈಗಾರಿಕಾ ಸಂಘಗಳು ಸೇರಿ ಜಾಗತಿಕ ಕನ್ನಡ ಉದ್ಯಮಿಗಳ ವೇದಿಕೆ(Global Kannada Entrepreneurs Forum) ಸ್ಥಾಪಿಸಿ, ಅನಿವಾಸಿ ಕನ್ನಡಿಗರು ಇಲ್ಲಿನ ನವೋದ್ಯಮಗಳಿಗೆ ಮಾರ್ಗದರ್ಶನ ನೀಡಲು ಮತ್ತು ಹೂಡಿಕೆ ಮಾಡಲು ಅನುವು ಮಾಡಿಕೊಡಬೇಕು.
ಯಶಸ್ಸಿನ ಕಥೆಗಳ ಅನಾವರಣ
ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ತರುವಲ್ಲಿ ಮಾಧ್ಯಮದ ಪಾತ್ರ ಹಿರಿದಾದದ್ದು. ಮಾಧ್ಯಮಗಳು ಕೇವಲ ರಾಜಕೀಯ ಮತ್ತು ಮನರಂಜನೆಗೆ ಸೀಮಿತವಾಗದೆ, ಸ್ಥಳೀಯ ಯಶಸ್ವಿ ಉದ್ಯಮಿಗಳ ಸ್ಪೂರ್ತಿದಾಯಕ ಕಥೆಗಳನ್ನು, ವಿಶೇಷವಾಗಿ ಸಣ್ಣ ಪಟ್ಟಣಗಳಿಂದ ಬಂದವರ ಕಥೆಗಳನ್ನು ಹೆಚ್ಚು ಪ್ರಚುರಪಡಿಸಬೇಕು. ‘ಉದ್ಯಮಿಯಾಗು, ಉದ್ಯೋಗ ನೀಡು’ ಎಂಬ ಆಶಯವನ್ನು ಜನಪ್ರಿಯಗೊಳಿಸಬೇಕು.
ಯಶಸ್ಸಿನ ಮರುವ್ಯಾಖ್ಯಾನ
ಹಾಗೆಯೇ, ಮಾಧ್ಯಮಗಳು ಮತ್ತು ಸಮಾಜವು ‘ಯಶಸ್ಸು’ ಎನ್ನುವುದರ ವ್ಯಾಖ್ಯಾನವನ್ನೇ ವಿಸ್ತರಿಸಬೇಕಿದೆ. ಯಶಸ್ಸು ಎಂದರೆ ಸಾವಿರಾರು ಕೋಟಿ ಬಂಡವಾಳ ಸಂಗ್ರಹಿಸುವ ‘ಯುನಿಕಾರ್ನ್’ ಕಂಪನಿ ಕಟ್ಟುವುದು ಮಾತ್ರವಲ್ಲ. ಹತ್ತಾರು ಜನರಿಗೆ ಗೌರವಯುತ ಉದ್ಯೋಗ ನೀಡಿ, ಸ್ಥಿರವಾಗಿ ಬೆಳೆಯುತ್ತಿರುವ ಒಂದು ಸಣ್ಣ ಅಥವಾ ಮಧ್ಯಮ ಗಾತ್ರದ ಉದ್ದಿಮೆಯೂ ಅಷ್ಟೇ ದೊಡ್ಡ ಯಶಸ್ಸು. ಸ್ವಂತ ಬಂಡವಾಳದಿಂದ(Bootstrapped) ಕಟ್ಟಿ ಬೆಳೆಸಿದ ಇಂತಹ ಸಾವಿರಾರು ಸುಸ್ಥಿರ ಉದ್ಯಮಗಳನ್ನು ಗುರುತಿಸಿ ಗೌರವಿಸಿದಾಗ, ಉದ್ಯಮಶೀಲತೆಯು ಎಲ್ಲರಿಗೂ ಸಾಧ್ಯವಾಗುವಂತಹ ಗುರಿಯಾಗಿ ಕಾಣುತ್ತದೆ.
ಕುಟುಂಬ ಮತ್ತು ‘ಬೈ ಲೋಕಲ್’ ಸಂಸ್ಕೃತಿ
ಅತಿ ದೊಡ್ಡ ಬದಲಾವಣೆ ಆರಂಭವಾಗಬೇಕಿರುವುದು ಕುಟುಂಬಗಳಿಂದ. ಕುಟುಂಬಗಳು ಮಕ್ಕಳನ್ನು ಕೇವಲ ವೈದ್ಯ, ಎಂಜಿನಿಯರ್ ಆಗಲು ಒತ್ತಾಯಿಸುವುದನ್ನು ಬಿಟ್ಟು, ಅವರಲ್ಲಿರುವ ವ್ಯಾಪಾರದ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು. ‘ಸೋತರೆ ಏನಾಯಿತು, ಅದೊಂದು ಅನುಭವ’ ಎಂದು ಧೈರ್ಯ ತುಂಬುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಬೇಕು. ಇದರೊಂದಿಗೆ, ಕನ್ನಡಿಗರು ನಡೆಸುವ ಸಣ್ಣ-ಪುಟ್ಟ ವ್ಯಾಪಾರಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ‘ಬೈ ಲೋಕಲ್’ (ಸ್ಥಳೀಯ ಉತ್ಪನ್ನ ಖರೀದಿಸಿ) ಸಂಸ್ಕೃತಿಯನ್ನು ಬೆಳೆಸಬೇಕು. ಇದು ಕೇವಲ ಒಂದು ಖರೀದಿ ಕ್ರಿಯೆಯಲ್ಲ, ನಮ್ಮ ಸಮುದಾಯವನ್ನು ಬಲಪಡಿಸುವ ಒಂದು ಮಹತ್ವದ ಹೆಜ್ಜೆ.
ಸ್ವರಾಜ್ಯದ ತತ್ವದ ಮೇಲೆ ನವಕರ್ನಾಟಕ
ಕನ್ನಡಿಗರಲ್ಲಿ ಉದ್ಯಮಶೀಲತೆಯ ಮನೋಭಾವ ಇಲ್ಲವೆನ್ನುವುದು ಒಂದು ಅರ್ಧಸತ್ಯ. ಬದಲಾಗುತ್ತಿರುವ ಜಗತ್ತಿನಲ್ಲಿ ಈ ಮನಸ್ಥಿತಿಯೂ ಬದಲಾಗುತ್ತಿದೆ. ಈಗ ಬೇಕಾಗಿರುವುದು ಒಂದು ಸಾಮೂಹಿಕ ಪ್ರಯತ್ನದ ಕಿಡಿ. ಶಿಕ್ಷಣ, ಕುಟುಂಬ ಮತ್ತು ಸಮಾಜದ ಪ್ರೋತ್ಸಾಹ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ವೈಯಕ್ತಿಕ ಧೈರ್ಯ ಒಟ್ಟಾಗಿ ಸೇರಿದರೆ, ಮುಂದಿನ ದಶಕಗಳಲ್ಲಿ ಕರ್ನಾಟಕದಿಂದ ಸಾವಿರಾರು ಯಶಸ್ವಿ ಕನ್ನಡಿಗ ಉದ್ಯಮಿಗಳು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಅಂದು, ‘ಸ್ಟಾರ್ಟ್ಅಪ್ ರಾಜಧಾನಿ’ಯ ನಿಜವಾದ ಸಾರಥಿಗಳು ಕನ್ನಡಿಗರೇ ಆಗುವ ದಿನ ದೂರವಿರುವುದಿಲ್ಲ. ನಮ್ಮ ಗುರಿ ಕೇವಲ ಆರ್ಥಿಕ ಅಂಕಿ-ಅಂಶಗಳಲ್ಲಿ ಜಗತ್ತನ್ನು ಮೀರಿಸುವುದಷ್ಟೇ ಆಗಬಾರದು. ನಾವು ಗಾಂಧೀಜಿ ಕನಸಿದ ‘ಸ್ವರಾಜ್ಯ’ವನ್ನು ಆಧರಿಸಿದ ನಾಡನ್ನು ಕಟ್ಟಬೇಕಿದೆ. ಇಲ್ಲಿ ಪ್ರತಿಯೊಬ್ಬ ಉದ್ಯಮಿಯೂ ಸ್ವಾವಲಂಬಿ, ಇಲ್ಲಿನ ಅಭಿವೃದ್ಧಿಯು ‘ಸರ್ವೋದಯ’ದ ತತ್ವದಂತೆ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ ಮತ್ತು ಇಲ್ಲಿನ ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗದೆ, ಸಮಾಜದ ಹಿತಕ್ಕಾಗಿ ಬಳಕೆಯಾಗುತ್ತದೆ. ಆ ದಿನ, ಕನ್ನಡ ನಾಡು ಕೇವಲ ಜ್ಞಾನ ಮತ್ತು ಸಂಪತ್ತಿನ ಕೇಂದ್ರವಾಗಷ್ಟೇ ಅಲ್ಲ, ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಸಾರುವ ಉದ್ಯಮಶೀಲರ ತವರು ಮನೆಯಾಗಿಯೂ ರಾರಾಜಿಸಲಿದೆ.

ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.




