ಹಸಿವು, ಹಕ್ಕು ಮತ್ತು ‘ದೇವರ ಹೆಣ’

Date:

ಹಸಿದವನಿಗೆ ಮಾಂಸವನ್ನು ನಿರಾಕರಿಸುವುದು ಕೇವಲ ದ್ವೇಷವಲ್ಲ, ಅದು ತನ್ನ ಜಾತಿಯ ಪಾವಿತ್ರ್ಯವನ್ನು ಹಸಿದ ಹೊಟ್ಟೆಯ ಮೇಲೆ ಹೇರುವ ಕ್ರೌರ್ಯ. ಇಂದಿನ ಗೋರಕ್ಷಣೆಯ ರಾಜಕಾರಣ ಹಿನ್ನೆಲೆಯಲ್ಲಿ ಈ 'ದೇವರ ಹೆಣ' ಕಥೆಯ ಒಳನೋಟ ಇನ್ನಷ್ಟು ಪ್ರಸ್ತುತವೆನಿಸುತ್ತದೆ.

ಸಾವು ಯಾರಿಗೆ ನಷ್ಟ? ಯಜಮಾನನಿಗೆ ಅದು ಕೇವಲ ಆಸ್ತಿಯ ನಷ್ಟವಾದರೆ, ಹಸಿದ ಒಕ್ಕಲಿಗೆ ಅದು ಹಬ್ಬದ ನಿರೀಕ್ಷೆ. ಕುಂ.ವೀರಭದ್ರಪ್ಪನವರ ‘ದೇವರ ಹೆಣ’ ಕಥೆ ಇಂಥದ್ದೇ ಒಂದು ನೈತಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಮುಖಾಮುಖಿಯಾಗಿಸುತ್ತದೆ. ಈ ಕಥೆಯನ್ನು ಸಾಮಾನ್ಯವಾಗಿ, ಸತ್ತ ಎತ್ತಿನ ಮಾಂಸದ ಮೇಲಿನ ದಲಿತನ ಹಕ್ಕನ್ನು ಊರಿನ ಗೌಡ ನಿರಾಕರಿಸುವ ಕಥೆಯಾಗಿ ಮಾತ್ರವೇ ಓದಲಾಗಿದೆ. ಈ ಓದು ತಪ್ಪಲ್ಲ, ಆದರೆ ಅಪೂರ್ಣ. ಪಠ್ಯವನ್ನು ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಜಾತಿ ದೌರ್ಜನ್ಯದ ದಾಖಲೆಯಷ್ಟೇ ಇಲ್ಲ; ಬರಗಾಲದ ರಾಜಕೀಯ ಅರ್ಥಶಾಸ್ತ್ರ, ದೈವದ ಮರಣದ ದೇವತಾಶಾಸ್ತ್ರ, ಅಧೀನ ಮನುಷ್ಯನ ಮಾತಿಗೆ ಕಿವಿಯೇ ಇಲ್ಲದ ಸಮಾಜದ ಚಿತ್ರ, ವಸಾಹತೋತ್ತರ ರಾಜ್ಯಯಂತ್ರದ ಅಸಂಗತ ನಾಟಕ ಹಾಗೂ ನಗುವಿನ ಮೂಲಕವೇ ದುರಂತವನ್ನು ಹರಿತಗೊಳಿಸುವ ಸೌಂದರ್ಯಶಾಸ್ತ್ರ ಇವೆಲ್ಲವೂ ಒಂದರೊಳಗೊಂದು ಹೆಣೆದುಕೊಂಡಿವೆ.

- Advertisement -

ಕಥೆ ಆರಂಭವಾಗುವುದೇ ಒಂದು ವಿಲಕ್ಷಣ ನಗುವಿನಿಂದ. ‘ಅನ್ನ’ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೇ ಠೊಣ್ಣಿ ಹಹ್ಹಹ್ಹ ಎಂದು ನಕ್ಕುಬಿಡುತ್ತಾನೆ. ಕುಂ.ವೀ. ಅವರ ಕಥನದಲ್ಲಿ ಬಯಲುಸೀಮೆಯ ಬರಡು ನೆಲ ಕೇವಲ ಹಿನ್ನೆಲೆಯಲ್ಲ, ಅದೂ ಒಂದು ಕ್ರೂರ ಪಾತ್ರವಾಗಿ ಉಸಿರಾಡುತ್ತದೆ. ಮಳೆ ಕಾಣದ ನೆಲವೇ ಹಸಿದ ಹೊಟ್ಟೆಯಂತೆ ಉರಿಯುತ್ತಿರುವ ಈ ಲೋಕದಲ್ಲಿ ಭೂಮಿ ಮತ್ತು ಜಠರ ಒಂದೇ ರೂಪಕದಲ್ಲಿ ಬೆಸೆದುಕೊಂಡಿದ್ದು, ಪ್ರಕೃತಿಯ ಬರಗಾಲ ಮತ್ತು ಮನುಷ್ಯ ನಿರ್ಮಿತ ಸಾಮಾಜಿಕ ಬರಗಾಲಗಳು ಪರಸ್ಪರ ಕೈಜೋಡಿಸಿವೆ. ಮಕ್ಕಳು ತಮ್ಮನ್ನೇ ನವಣಕ್ಕಿ ಅನ್ನ, ಸಾರನ್ನಾಗಿ ಕಲ್ಪಿಸಿಕೊಂಡು ಉಂಡಂತೆ ನಟಿಸುವಲ್ಲಿ, ಹಸಿವಿನ ಕ್ರೂರತೆ ಮಕ್ಕಳ ಕಲ್ಪನೆಯ ಮಟ್ಟಕ್ಕೂ ಇಳಿದಿದೆ. ಹಿರಿಮಗ ಸುಟ್ಟ ಇಲಿ ತಿಂದು ಮುಖದಲ್ಲಿ ಕಳೆ ತುಂಬಿಕೊಂಡಿದ್ದಾನೆ. ಬರಿದಾದ ನೆಲುವು, ತಣ್ಣನೆಯ ಒಲೆಯಲ್ಲಿ ಮಲಗಿದ ಬೆಕ್ಕು ಅಡುಗೆಮನೆಯೇ ಶವಾಗಾರವಾಗಿರುವುದನ್ನು ಸಂಕೇತಿಸುತ್ತವೆ. ಠೊಣ್ಣಿ ಎಕ್ಕೆಯ ಎಲೆಯನ್ನೇ ಚಿಲುಮೆಯಾಗಿಸಿ ಹೊಗೆಸೊಪ್ಪು ಸೇದುತ್ತಾನೆ. ಆ ನಶೆಯಲ್ಲಿ ಯಜಮಾನನ ಮನೆಯ ಎತ್ತಿನ ಆಕಾರ ಅವನ ತಲೆಯೊಳಗೆ ಮೂಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಡ್ಡಂಡ ಕಾರ್ಯಪ್ಪನವರ ನಾಟಕದ ವಿವಾದ: ಗೋಡ್ಸೆ ವೈಭವೀಕರಣದ ಹಿಂದೆ...

ಗೋಡ್ಸೆಯನ್ನು ವೈಭವೀಕರಿಸುವ ರಾಜಕೀಯವನ್ನು ಕೇವಲ ಒಬ್ಬ ವ್ಯಕ್ತಿಯ ಅಭಿಮಾನ ಅಥವಾ ಇತಿಹಾಸದ ಪರ್ಯಾಯ ಓದು ಎಂದು ಸೀಮಿತಗೊಳಿಸಲಾಗದು. ಅದರ ಮೂಲಕ ಗಾಂಧೀಜಿಯವರನ್ನು ಸಾರ್ವಜನಿಕ ಸ್ಮೃತಿಯಿಂದ ದೂರಮಾಡಿ, ಅವರ ಹತ್ಯೆಯನ್ನು ಸಮರ್ಥಿಸಬಹುದಾದ ವಾತಾವರಣ ನಿರ್ಮಿಸುವ...

ಗೋಮಾಂಸ ನಿಷೇಧವಿರಲಿ,’ಬೀಫ್ ತಿನ್ನಬೇಡಿ’ ಎಂದೂ ಹೇಳಿಲ್ಲ ಮನುಸ್ಮೃತಿ!

ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು ತಾನೇ ಸೃಷ್ಟಿಸಿದ ಈ ವೈರುಧ್ಯಗಳನ್ನೂ ನಾವು ಎತ್ತಿ ತೋರಿಸಬೇಕಾಗುತ್ತದೆ. ಮನುಸ್ಮೃತಿ ನೇರವಾಗಿ 'ಬೀಫ್ ತಿನ್ನಬೇಡಿ' ಎಂದೂ ಹೇಳಿಲ್ಲ, 'ತಿನ್ನಿ' ಎಂದೂ...

ಇಸ್ರೇಲ್ ರಾಜಕೀಯದ ಚದುರಂಗದಾಟ: ಅತಂತ್ರ ಬಿಕ್ಕಟ್ಟಿನಿಂದ ಹೊರಬರಲು ಇರುವ...

ಇಸ್ರೇಲ್‌ನ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಭಿನ್ನವಾಗಿದೆ ಹಾಗೂ ಹೆಚ್ಚು ಸಂಕೀರ್ಣವಾಗಿದೆ. ಇಸ್ರೇಲ್ ಅನುಸರಿಸುತ್ತಿರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ (Parliamentary Democracy) ವ್ಯವಸ್ಥೆಯಾಗಿದೆ. ಇಲ್ಲಿ ದೇಶದ ಜನತೆ ನೇರವಾಗಿ ತಮ್ಮ ಪ್ರಧಾನಮಂತ್ರಿಯನ್ನು...

ಬರಗಾಲದಲ್ಲಿ ಜನ ಸಾಯುವುದು ಆಹಾರವಿಲ್ಲದೆ ಅಲ್ಲ, ಆಹಾರದ ಮೇಲಿನ ಅರ್ಹತೆಯ ಸಂಬಂಧಗಳು ಕುಸಿದಾಗ ಎಂಬ ಅಮರ್ತ್ಯ ಸೇನ್ ಪ್ರತಿಪಾದನೆಯನ್ನು ಈ ಕಥೆ ಜೀವಂತವಾಗಿ ಅನಾವರಣಗೊಳಿಸುತ್ತದೆ. ಎತ್ತಿನ ಹೆಣದ ರೂಪದಲ್ಲಿರುವ ಆಹಾರದ ಮೇಲೆ ಠೊಣ್ಣಿಗೆ ಪರಂಪರೆಯ ಹಕ್ಕಿದೆ. ಆದರೆ ”ಇದು ಅಗಸನ ಕತ್ತೆಯಲ್ಲ, ಮನೆಯ ಎತ್ತು” ಎಂಬ ಒಂದೇ ವಾಕ್ಯದಲ್ಲಿ ಗೌಡ ಆ ಹಕ್ಕನ್ನು ರದ್ದುಪಡಿಸುತ್ತಾನೆ. ಜೇಮ್ಸ್ ಸಿ. ಸ್ಕಾಟ್ ಹೇಳುವ ‘ನೈತಿಕ ಆರ್ಥಿಕತೆ’ ಇಲ್ಲಿ ಮುರಿದುಬೀಳುತ್ತದೆ. ಒಕ್ಕಲಿಗೆ ಬದುಕುವ ಖಾತ್ರಿ ಕೊಟ್ಟು ಅದಕ್ಕೆ ಪ್ರತಿಯಾಗಿ ವಿಧೇಯತೆ ಪಡೆಯುವುದು ಯಜಮಾನಿಕೆಯ ಅಲಿಖಿತ ಒಪ್ಪಂದ. ಠೊಣ್ಣಿ ತನ್ನ ಸೇವೆಗಳ ಪಟ್ಟಿಯನ್ನು ಮನಸ್ಸಿನಲ್ಲೇ ಒಪ್ಪಿಸುತ್ತಾನೆ; ಗಾಡಿಗಟ್ಟಲೆ ಕಟ್ಟಿಗೆ ಕಡಿದದ್ದು, ಕೊಟ್ಟಿಗೆಯ ನೆಲವನ್ನು ತನ್ನ ಮುಖ ಕಾಣುವಷ್ಟು ನುಣುಪಾಗಿ ಬಳಿದದ್ದು, ತೆನೆಯ ಮೇಲೆ ಗುಬ್ಬಿ ಕೂತು ಮೈಲಿಗೆ ಮಾಡದಂತೆ ಹೊಲದ ತುಂಬ ಕಣ್ಣಾಗಿ ಕಾದದ್ದು. ತಾನೇ ಮೈಲಿಗೆಯೆಂದು ಪರಿಗಣಿತನಾದವನು ಇತರರ ಧಾನ್ಯವನ್ನು ಗುಬ್ಬಿಯ ಮೈಲಿಗೆಯಿಂದ ಕಾಯುತ್ತಿದ್ದ ಎಂಬ ವಿರೋಧಾಭಾಸ ಇಲ್ಲಿ ಬೆತ್ತಲಾಗುತ್ತದೆ. ಆ ಮನೆಗೆ ತಾನು ಹಿರಿಯ ಮಗನಂತೆ ಎಂದು ಅವನು ನಂಬಿದ್ದ; ಆ ನಂಬಿಕೆಯೇ ಅವನ ದೊಡ್ಡ ಭ್ರಮೆಯಾಗಿ ಪರಿಣಮಿಸುತ್ತದೆ.

ಇದನ್ನು ಓದಿದ್ದೀರಾ?: ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್ ಸಾಹೇಬ್’

ಈ ಹಕ್ಕಿನ ಸ್ವರೂಪವೇ ಸಂಕೀರ್ಣವಾದುದು. ಸತ್ತ ದನ ಹೊರುವ, ತೊಗಲು ಸುಲಿಯುವ ವೃತ್ತಿಯನ್ನು ಅಸ್ಪೃಶ್ಯತೆಯ ಕುರುಹೆಂದು ಕಂಡು ಅದನ್ನು ತೊರೆಯಬೇಕೆಂದು ಅಂಬೇಡ್ಕರ್ ಕರೆಕೊಟ್ಟದ್ದು ಇತಿಹಾಸ. ಆದರೆ ಠೊಣ್ಣಿಯ ಮುಂದೆ ಆ ಸೈದ್ಧಾಂತಿಕ ಸ್ಪಷ್ಟತೆಯ ಐಷಾರಾಮವಿಲ್ಲ. ಅವನಿಗೆ ಅದು ಉಳಿದಿರುವ ಏಕೈಕ ಆಸ್ತಿ. ಎಂಬತ್ತರ ದಶಕದ ಬಂಡಾಯ ಸಾಹಿತ್ಯದಲ್ಲಿ ದಲಿತ ಪಾತ್ರಗಳು ಸೈದ್ಧಾಂತಿಕ ಘೋಷಣೆಗಳನ್ನು ಕೂಗುವ ಕ್ರಾಂತಿಕಾರಿಗಳಾಗಿ ಚಿತ್ರಿತವಾಗುತ್ತಿದ್ದ ಮಾದರಿಯನ್ನು ಕುಂ.ವೀ. ಇಲ್ಲಿ ಮುರಿಯುತ್ತಾರೆ. ದಲಿತ ಪಾತ್ರವನ್ನು ಆದರ್ಶೀಕರಿಸದೆ, ಅವಮಾನಕರ ಕೆಲಸವೇ ಬದುಕಿನ ಕೊನೆಯ ಆಸರೆಯಾಗುವ ಕಟು ವಾಸ್ತವವನ್ನು ಮತ್ತು ಹಸಿದ ಮನುಷ್ಯನ ಹವಣಿಕೆಯನ್ನು ಕುಂ.ವೀ. ನೇರವಾಗಿ ಕಟ್ಟಿಕೊಡುತ್ತಾರೆ. ಇಲ್ಲಿ ಆಹಾರವೇ ಶುದ್ಧಿ-ಅಶುದ್ಧಿಗಳನ್ನು ನಿರ್ಧರಿಸುವ ‘ಆಹಾರ ರಾಜಕಾರಣ’ವೂ ಕೆಲಸ ಮಾಡಿದೆ; ಸತ್ತ ಎತ್ತು ಯಜಮಾನನಿಗೆ ಪೂಜಿಸಬೇಕಾದ ನಂದಿಯಾದರೆ, ಠೊಣ್ಣಿಗೆ ಜೀವ ಉಳಿಸುವ ಮಾಂಸ. ಗೌಡ ಸತ್ತ ಎತ್ತಿಗೆ ಪೂಜೆ, ವಾದ್ಯ, ಧೂಪ, ಸಮಾಧಿ ಕೊಟ್ಟು ಅದನ್ನು ಪಾವಿತ್ರ್ಯದ ಗಡಿಯೊಳಗೆ ಎಳೆದುಕೊಳ್ಳುವ ಮೂಲಕ ಆಹಾರವನ್ನು ಮಣ್ಣುಪಾಲು ಮಾಡುತ್ತಾನೆ. ಹಸಿದವನಿಗೆ ಮಾಂಸವನ್ನು ನಿರಾಕರಿಸುವುದು ಕೇವಲ ದ್ವೇಷವಲ್ಲ, ಅದು ತನ್ನ ಜಾತಿಯ ಪಾವಿತ್ರ್ಯವನ್ನು ಹಸಿದ ಹೊಟ್ಟೆಯ ಮೇಲೆ ಹೇರುವ ಕ್ರೌರ್ಯ. ಇಂದಿನ ಗೋರಕ್ಷಣೆಯ ರಾಜಕಾರಣ ಹಿನ್ನೆಲೆಯಲ್ಲಿ ಈ ಕಥೆಯ ಒಳನೋಟ ಇನ್ನಷ್ಟು ಪ್ರಸ್ತುತವೆನಿಸುತ್ತದೆ.

ಕಥೆಯ ಶೀರ್ಷಿಕೆ ಮತ್ತು ಪಾತ್ರಗಳ ನಾಮಕರಣದಲ್ಲೇ ಸಾಮಾಜಿಕ ಶ್ರೇಣೀಕರಣದ ಅಣಕವಿದೆ. ನಾಲ್ಕು ಕಾಲಿನ ಪ್ರಾಣಿಗೆ ಇಲ್ಲಿ ‘ದೇವರು’ ಎಂಬ ದೈವತ್ವದ ಪಟ್ಟವಿದೆ; ಧಾರ್ಮಿಕ ಪಾವಿತ್ರ್ಯವನ್ನು ಹೆಸರಿನಲ್ಲೇ ಹೊತ್ತಿರುವ ‘ಶಿವಪೂಜೆ ಗೌಡ’ ಕ್ರೂರ ಶೋಷಕನಾಗಿದ್ದಾನೆ; ಆದರೆ ಬೆವರು ಸುರಿಸಿ ದುಡಿಯುವ ಮನುಷ್ಯ ಮಾತ್ರ ಯಾವುದೇ ಘನತೆಯಿಲ್ಲದೆ, ದೇಹದ ಊನ ಅಥವಾ ಒರಟುತನವನ್ನು ಧ್ವನಿಸುವ ‘ಠೊಣ್ಣಿ’ ಎಂಬ ಹೆಸರಿನೊಂದಿಗೆ ಅಂಚಿಗೆ ತಳ್ಳಲ್ಪಟ್ಟಿದ್ದಾನೆ. ಹೀಗಾಗಿ ‘ದೇವರ ಹೆಣ’ ಎಂದರೆ ಪ್ರಾಣಿಯ ಹೆಣವೂ ಹೌದು, ದೈವದ ಮರಣದ ಸೂಚನೆಯೂ ಹೌದು. ಕಥೆಯ ತುಂಬ ಶಿವನ ನೆರಳಿದೆ. ಎತ್ತು ಶಿವನ ವಾಹನ ಬಸವ, ಎಕ್ಕೆಯ ಎಲೆ ಶಿವನ ಮೂರನೆಯ ಕಣ್ಣು, ಯಜಮಾನ ಶಿವಪೂಜೆ ಗೌಡ, ಅವನ ಬಾಯಲ್ಲಿ ಎತ್ತು ‘ಶಿವನ ಪಾದ’ ಸೇರುತ್ತದೆ, ಒದೆ ತಿಂದ ಠೊಣ್ಣಿಯ ಹೊಟ್ಟೆಯ ‘ಶಿವ’ ವಯ್ಕ್ ವಯ್ಕ್ ಎಂದು ಹೊರಬೀಳುತ್ತಾನೆ. ಶಿವ ಪಶುಪತಿ; ಆದರೆ ಪಶುವನ್ನು ಪೂಜಿಸುವ ಧರ್ಮ ಹಸಿದ ಮನುಷ್ಯನನ್ನು ಹೊರಗಿಡುತ್ತದೆ. ಆ ಎತ್ತಿಗೆ ಕಾಡೌಷಧ ಕುಡಿಸಿ ಜೋಪಾನ ಮಾಡಿದ್ದ ಠೊಣ್ಣಿಯೇ, ಅದಕ್ಕೆ ಗುಣವಾಗದ ರೋಗ ಬಂದಾಗ ಸಂತೋಷಿಸುತ್ತಾ ಮಾಂಸ ಕೆಡದಿರಲೆಂದು ಕುಲದೇವರಲ್ಲಿ ಬೇಡುತ್ತಾನೆ; ಪ್ರೀತಿ ಮತ್ತು ಹಸಿವು ಒಂದೇ ಎದೆಯಲ್ಲಿ ಸಹಬಾಳ್ವೆ ನಡೆಸುತ್ತವೆ. ಫ್ರೆಡ್ರಿಕ್ ನೀತ್ಸೆಯ ‘ದೇವರು ಸತ್ತಿದ್ದಾನೆ’ ಎಂಬ ಘೋಷಣೆ ಪಶ್ಚಿಮದ ಬೌದ್ಧಿಕ ಬಿಕ್ಕಟ್ಟಾದರೆ, ”ದೇವರು ಕೊಟ್ಟ ಹೆಣವನ್ನೇ ತಿಂದು ಬದುಕುವವರು ನಾವು” ಎಂಬ ಅವನ ನುಡಿ ವಿಮೋಚನಾ ದೇವತಾಶಾಸ್ತ್ರದ ಒರಟು ಜಾನಪದ ರೂಪದಂತಿದೆ. ಬಡವನ ದೇವರು ಧ್ಯಾನದ ವಸ್ತುವಲ್ಲ, ಹೊಟ್ಟೆ ತುಂಬಿಸುವ ದೇಹ.

ಇದನ್ನು ಓದಿದ್ದೀರಾ?: ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

‘ಅಧೀನ ವ್ಯಕ್ತಿ ಮಾತನಾಡಬಲ್ಲನೇ?’ ಎಂಬ ಗಾಯತ್ರಿ ಸ್ಪಿವಾಕ್ ಪ್ರಶ್ನೆಯಂತೆ, ಇಲ್ಲಿ ಠೊಣ್ಣಿಗೆ ಧ್ವನಿಯಿದ್ದರೂ ಕೇಳುವ ಕಿವಿಗಳಿಲ್ಲ. ಠೊಣ್ಣಿ ದೇವರ ಆರೋಗ್ಯ ವಿಚಾರಿಸುವ ನೆಪದಲ್ಲಿ ತನ್ನ ಬೇಡಿಕೆ ಮಂಡಿಸುತ್ತಾನೆ. ಕಟುಗ ಅವನ ಮುಂಗಡದ ಮನವಿಗೆ ”ಮೊದಲು ತೊಗಲು ಕೊಡು, ಆಮೇಲೆ ದುಡ್ಡು” ಎಂದು ಮಾರುಕಟ್ಟೆಯ ಭಾಷೆಯಲ್ಲಿ ಉತ್ತರಿಸುತ್ತಾನೆ. ಕೇರಿಯ ಜನ ‘ಒಗ್ಗಟ್ಟಾಗಿ ಕೇಳೋಣ’ ಎಂಬ ಕರೆಗೆ ಉಪದೇಶದ ಉತ್ತರ ಕೊಡುತ್ತಾರೆ. ಗ್ರಾಮ್ಷಿಯ ಪರಿಭಾಷೆಯಲ್ಲಿ ಇದು ಯಜಮಾನ ಸಂಸ್ಕೃತಿಯ ಒಪ್ಪಿಗೆಯಾದರೆ, ಸಾಮಾಜಿಕ ನೆಲೆಯಲ್ಲಿ ಬರಗಾಲವು ದಮನಿತರ ಒಗ್ಗಟ್ಟನ್ನು ಮುರಿದು, ವೈಯಕ್ತಿಕ ಉಳಿವಿಗಾಗಿ ಯಜಮಾನನಿಗೆ ಮಣಿಯುವಂತೆ ಮಾಡುವ ದುರಂತಕ್ಕೆ ಸಾಕ್ಷಿಯಾಗಿದೆ. ಇದು ಠೊಣ್ಣಿಯ ಒಂಟಿತನವನ್ನು ತೀವ್ರಗೊಳಿಸುತ್ತದೆ. ಗೌಡರ ಅಂಗಳ ತುಳಿಯುತ್ತಿದ್ದಂತೆ ಠೊಣ್ಣಿ, ತಲತಲಾಂತರಗಳಿಂದ ಮೈಗೂಡಿಬಂದ ದಾಸ್ಯದ ಅಭ್ಯಾಸವೆಂಬಂತೆ ಕೈ ಕಟ್ಟಿ ಸೊಂಟ ಬಗ್ಗಿಸುತ್ತಾನೆ. ಅಧೀನತೆ ಇಲ್ಲಿ ವಿಚಾರವಲ್ಲ, ದೇಹದ ಅಭ್ಯಾಸ. ಸ್ಕಾಟ್ ಹೇಳುವ ‘ಗುಪ್ತ ಪಠ್ಯ’ ಕೂಡ ಇಲ್ಲಿದೆ. ಗೌಡ ”ನಿನ್ನ ದೇವರು ಶಿವನ ಪಾದ ಸೇರಿತು” ಎಂದು ಛೇಡಿಸಿದಾಗ ಠೊಣ್ಣಿ ಒಳಗೊಳಗೇ ನಗುತ್ತಾನೆ. ಹಿಡಿದು ಕೂರಿಸಿದಾಗ ‘ಅಲಕ್ ನಿರಂಜನ್’ ಎಂದು ಜೋಗಿಯಂತೆ ಕುಳಿತು, ಸೋಲನ್ನೇ ವೈರಾಗ್ಯದ ಭಂಗಿಯಾಗಿಸಿಕೊಳ್ಳುತ್ತಾನೆ. ಆದರೆ ಆ ಗುಪ್ತ ಪಠ್ಯ ಬಹಿರಂಗವಾಗಿ ಸ್ಫೋಟಗೊಳ್ಳುವ ಕ್ಷಣದಲ್ಲಿ ಕಥೆ ತಿರುಗುತ್ತದೆ. ”ಬದುಕಿರೋವರ್ಗೂ ನಿಮ್ದು, ಸತ್ಮ್ಯಾಕೆ ನಮ್ದು” ಎಂದು ಅವನು ಗೌಡರ ಮುಖಕ್ಕೇ ಹೇಳುತ್ತಾನೆ. ಉತ್ತರವಾಗಿ ಬರುವುದು ಆಳುಗಳ ಏಟು.

ಹಗಲಿನಲ್ಲಿ ಸೋತ ಠೊಣ್ಣಿ ರಾತ್ರಿ ಮಚ್ಚು ಮಸೆದು ಸಲಿಕೆ ಹಿಡಿದು ಹೊರಡುತ್ತಾನೆ. ಅವನು ಅಗೆಯುವುದು ಪ್ರಾಣಿಯ ಗೋರಿಯನ್ನಷ್ಟೇ ಅಲ್ಲ, ಜೀವ ಕಳೆದುಕೊಂಡ ಸಾಮಾಜಿಕ-ನೈತಿಕ ವ್ಯವಸ್ಥೆಯ ಶವವನ್ನು. ಮರುದಿನ ವಿಕ್ರಮಾರ್ಕನು ಬೇತಾಳನನ್ನು ಹೊತ್ತಂತೆ ಅವನು ತೊಗಲನ್ನು ಹೊತ್ತೊಯ್ಯುತ್ತಾನೆ. ವಿಕ್ರಮನಿಗೆ ಬೇತಾಳ ನೈತಿಕ ಒಗಟು ಹಾಕಿದಂತೆ, ಈ ತೊಗಲು ನಾಗರಿಕ ಸಮಾಜಕ್ಕೆ ‘ಜಾತಿ ಮತ್ತು ಹಸಿವಿನ ಒಗಟನ್ನು’ ಒಡ್ಡುತ್ತದೆ. ಬೇತಾಳನ ಒಗಟಿಗೆ ಉತ್ತರ ಕೊಡದಿದ್ದರೆ ತಲೆ ಸಿಡಿಯುವುದೆಂಬ ಜಾನಪದ ಶಾಪ ಇಲ್ಲಿ ಉತ್ತರವಿಲ್ಲದ ಇಡೀ ಹಳ್ಳಿಗೇ ಅನ್ವಯಿಸುವಂತಿದೆ. ಇದರ ನಡುವೆ ಬರುವ ಪ್ರಾಣಿಲೋಕವೂ ಅರ್ಥಗರ್ಭಿತವಾಗಿದೆ. ಗೌಡರ ‘ಟಾಮಿ’, ಠೊಣ್ಣಿಯ ‘ಹುಲಿ’ಯೊಂದಿಗೆ ಕಾದಾಡಿ ಸೋತು ಊಳಿಟ್ಟರೆ, ಹುಲಿ ಯಾರ ಬೆದರಿಕೆಗೂ ಜಗ್ಗದೆ ಠೊಣ್ಣಿಯ ಕುಟುಂಬದೊಂದಿಗೇ ನಿಲ್ಲುತ್ತದೆ. ಎರಡು ನಾಯಿಗಳ ಈ ಕದನ ಜಾತಿ-ವರ್ಗ ಸಂಘರ್ಷದ ಚಿಕ್ಕ ಪ್ರತಿಕೃತಿಯಂತೆ ಮೂಡಿಬಂದಿದೆ.

ಬಯಲುಸೀಮೆಯ ಒರಟು ಆಡುನುಡಿ, ಹೆಣ-ತೊಗಲು-ಮಾಂಸ, ಕೆಮ್ಮು-ಕಫ, ಹಸಿವಿನಿಂದ ಗುಡುಗುವ ಹೊಟ್ಟೆ- ಇಂತಹ ವಿವರಗಳೇ ಕಥೆಯನ್ನು ಕಟ್ಟುತ್ತವೆ. ರಷ್ಯನ್ ಸಿದ್ಧಾಂತಿ ಮಿಖಾಯಿಲ್ ಬಾಖ್ತಿನ್ ಹೇಳುವ ‘ಗ್ರೊಟೆಸ್ಕ್ ರಿಯಲಿಸಂ’ ಇಲ್ಲಿ ಸಮರ್ಥವಾಗಿ ದುಡಿದಿದೆ; ದೇಹದ ಹಸಿವು, ಕಫ, ಮಾಂಸ ಮತ್ತು ವಿಕಟ ನಗುವಿನ ಮೂಲಕ ಪವಿತ್ರವನ್ನು ಅಪವಿತ್ರದೊಂದಿಗೆ ಬೆರೆಸುವ ಈ ಕಥನಕ್ರಮ, ಅಧಿಕಾರದ ಹುಸಿ ಗಾಂಭೀರ್ಯವನ್ನು ಕೆಳಗಿಳಿಸಿ ಅಣಕಿಸುತ್ತದೆ. ಮುಂಶಿ ಪ್ರೇಮ್‌ಚಂದ್ ಅವರ ‘ಕಫನ್’ನಲ್ಲಿ ಹಸಿವು ನೈತಿಕತೆಯನ್ನೇ ತೊಡೆದುಹಾಕುವ ಕಹಿಸತ್ಯವಾಗಿ ಬಂದರೆ, ಕುಂ.ವೀ.ಯಲ್ಲಿ ಅದು ನೈತಿಕತೆಯ ವ್ಯಾಖ್ಯಾನವನ್ನೇ ತಲೆಕೆಳಗು ಮಾಡುತ್ತದೆ.

ಇದನ್ನು ಓದಿದ್ದೀರಾ?: ರವಿಕುಮಾರ್ ನೀಹ ಅವರ ‘ನೀಗೊನಿ’

ಕಥೆಯ ದ್ವಿತೀಯಾರ್ಧವು ಕಾನೂನು ಮತ್ತು ರಾಜ್ಯಯಂತ್ರದ ಅಸಂಗತತೆಯನ್ನು ಬಯಲುಮಾಡುವ ಕಪ್ಪು ಪ್ರಹಸನದಂತಿದೆ. ಗೌಡರ ಮಗ ಎಲ್‌ಎಲ್‌ಬಿಯಲ್ಲಿ ಅನುತ್ತೀರ್ಣನಾದ ವಕೀಲ. ಠೊಣ್ಣಿಯನ್ನು ಕಂಡ ಕ್ಷಣವೇ ಅವನ ತಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಮುಗಳು ಒಂದೇ ಸಮನೆ ಮೂಡಿ ತಲೆಯೇ ನ್ಯಾಯಾಲಯವಾಗುತ್ತದೆ. ವಸಾಹತು ಕಾಲದ ಸಂಹಿತೆ ಸ್ವತಂತ್ರ ಭಾರತದ ಹಳ್ಳಿಯಲ್ಲಿ ಸ್ಥಳೀಯ ಯಜಮಾನನ ಕೈಯಾಯುಧವಾಗಿರುವುದನ್ನು ಇದಕ್ಕಿಂತ ತೀಕ್ಷ್ಣವಾಗಿ ಹೇಳಲಾಗದು. ಆದರೆ ನಿಜವಾದ ವಿಡಂಬನೆ ಅಂತ್ಯದಲ್ಲಿ ಸ್ಫೋಟಗೊಳ್ಳುತ್ತದೆ. ಪೊಲೀಸರು ಬಂದಾಗ ಠೊಣ್ಣಿ ಬೇಡುವುದು ಕ್ಷಮೆಯನ್ನಲ್ಲ, ಜೈಲನ್ನು. ಪ್ರಭುತ್ವದ ದಂಡನಾ ಸಾಧನವಾದ ಸೆರೆಮನೆಯೇ ಹಸಿದ ಠೊಣ್ಣಿಗೆ ಎರಡು ಹೊತ್ತು ಗಂಜಿ ನೀಡುವ ‘ಕಲ್ಯಾಣ ಕೇಂದ್ರ’ವಾಗಿ ಕಾಣುವ ಈ ವಿಪರ್ಯಾಸದಲ್ಲಿ ಅಪರಾಧ-ಶಿಕ್ಷೆಗಳ ಅರ್ಥವೇ ತಲೆಕೆಳಗಾಗುತ್ತದೆ. ಇನ್‌ಸ್ಪೆಕ್ಟರ್‍‌ನ ಬೆದರಿಕೆಗೆ ಜಗ್ಗದೆ ಠೊಣ್ಣಿ ಇನ್ನೂ ದೊಡ್ಡ ತಪ್ಪು ಮಾಡುವ ಸವಾಲೆಸೆದಾಗ, ಇನ್‌ಸ್ಪೆಕ್ಟರ್‍ರೇ ಬೆಚ್ಚಿ ಜೀಪೇರಿ ಹೊರಡುತ್ತಾನೆ. ಪ್ರಭುತ್ವದ ಕಾನೂನು ಮತ್ತು ಭಯ ಕೆಲಸ ಮಾಡುವುದು ಕಳೆದುಕೊಳ್ಳಲು ಏನಾದರೂ ಇರುವ ಮನುಷ್ಯನ ಮೇಲೆ ಮಾತ್ರ; ಕಳೆದುಕೊಳ್ಳಲು ಏನೂ ಇಲ್ಲದವನ ಮುಂದೆ ರಾಜ್ಯದ ದಂಡನಾ ಶಕ್ತಿಯೇ ನಿಶ್ಶಕ್ತವಾಗಿ ಬೆಚ್ಚಿಬೀಳುತ್ತದೆ. ವ್ಯವಸ್ಥೆ ಅವರನ್ನು ಅಪರಾಧಿಗಳೆಂದು ಗುರುತಿಸಲೂ ಆಗದಷ್ಟು ಹೊರಗಿಟ್ಟಿದೆ.

ಕಥೆಯ ಕೊನೆಯಲ್ಲಿ ಮೂಡುವ ಪ್ರಶ್ನೆ, ‘ದೇವರ ಹೆಣ’ ಯಾವುದು? ಸಮಾಧಿಯಲ್ಲಿ ಮಲಗಿದ ಎತ್ತು ಮಾತ್ರವೇ? ಕಡೆಯ ದೃಶ್ಯದಲ್ಲಿ ಜೀಪಿನ ಧೂಳಿನಲ್ಲಿ ಠೊಣ್ಣಿ ”ಬರುತ್ತೇನೆ” ಎಂದು ಕೂಗುತ್ತ ಓಡುತ್ತಾನೆ, ಅವನ ನಾಯಿ ಹುಲಿಯೂ ಬೊವ್ ಬೊವ್ ಎನ್ನುತ್ತ ಜೊತೆಯಾಗುತ್ತದೆ. ಮನುಷ್ಯ-ಪ್ರಾಣಿಯ ನಡುವಿನ ಗೆರೆ ಹಸಿವಿನ ಮುಂದೆ ಅಳಿಸಿಹೋಗುತ್ತದೆ. ಅನ್ನ ಕೇಳಿದರೆ ದೊಣ್ಣೆ, ಹಕ್ಕು ಕೇಳಿದರೆ ಸೆರೆಮನೆ ಸಿಗುವ ಜಗತ್ತಿನಲ್ಲಿ ಮನುಷ್ಯನ ಅಸ್ತಿತ್ವವೇ ಒಂದು ಅಣಕವಾಗಿ ಕಾಣುತ್ತದೆ; ಠೊಣ್ಣಿಯ ಈ ಓಟ ಆಲ್ಬರ್ಟ್ ಕಾಮೂ ಹೇಳುವ ಬದುಕಿನ ‘ಅಸಂಗತತೆ’ಯ ಪರಾಕಾಷ್ಠೆಯಂತೆ ಜಗತ್ತಿನ ಮುಖಕ್ಕೆ ರಾಚುತ್ತದೆ. ಆ ಓಟ ಜೈಲಿನತ್ತಲೋ, ಅನ್ನದತ್ತಲೋ ಅಥವಾ ಮನುಷ್ಯನೆಂದು ಗುರುತಿಸುವ ಲೋಕದತ್ತಲೋ ಎಂಬುದನ್ನು ಕಥೆ ಬಿಡಿಸಿ ಹೇಳುವುದಿಲ್ಲ. ಆ ಅಸ್ಪಷ್ಟತೆಯೇ ಕಥೆಯನ್ನು ದಲಿತ ಕಥನದ ಚೌಕಟ್ಟಿನ ಜೊತೆಗೇ ಮನುಷ್ಯ ಸ್ಥಿತಿಯ ಕಥನವಾಗಿ ಬೆಳೆಸುತ್ತದೆ.

ಇದನ್ನು ಓದಿದ್ದೀರಾ?: ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’

Ravi sidlipura
ಡಾ. ರವಿ ಎಂ. ಸಿದ್ಲಿಪುರ
+ posts

ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಡಾ. ರವಿ ಎಂ. ಸಿದ್ಲಿಪುರ
ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ನ. 5ರಂದು ಫ್ರೀಡಂ ಪಾರ್ಕ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಬೃಹತ್ ಪ್ರತಿಭಟನೆ

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್...

ಶಿವಮೊಗ್ಗ | SC ST ಮೀಸಲಾತಿ ಹೆಚ್ಚಳ ಅನುಮೋದನೆ ಆಗ್ರಹಿಸಿ ಧರಣಿ

ಇಂದಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಈ ಹಿಂದಿನ...

ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ

ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳು ಉಳಿದ ಉದಾಹರಣೆಗಳಿಲ್ಲ. 1980ರಲ್ಲಿ ರೈತರ ಮೇಲೆ...

ಭಾರತ – ನ್ಯೂಜಿಲೆಂಡ್ ಏಕದಿನ ಸರಣಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿವ ಉತ್ಸಾಹದಲ್ಲಿ ಕೊಹ್ಲಿ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ತಂಡ...