ಈ ಮಹಾ ಬಿಕ್ಕಟ್ಟಿನಿಂದ ಹೊರಬರಲು ಜಪಾನ್ ಸರ್ಕಾರ ಉಚಿತ ಶಿಶುಪಾಲನಾ ಕೇಂದ್ರಗಳು, ಪೋಷಕರಿಗೆ ಹೆಚ್ಚಿನ ರಜೆ, ಆರ್ಥಿಕ ಭತ್ಯೆಯಂತಹ ಯೋಜನೆಗಳನ್ನು ಶುರು ಮಾಡಿದೆ. ಯುವಕ-ಯುವತಿಯರು ಮದುವೆಯಾಗುವಂತೆ ಪ್ರೋತ್ಸಾಹಿಸಲು ಸರ್ಕಾರವೇ ಅಧಿಕೃತ ‘ಡೇಟಿಂಗ್ ಆಪ್’ಗಳನ್ನು ಕೂಡ ಲಾಂಚ್ ಮಾಡಿದೆ. ಸೂಪರ್ ಕಂಪ್ಯೂಟರ್, ಬುಲೆಟ್ ಟ್ರೈನ್ ಹಾಗೂ ಅದ್ಭುತ ತಂತ್ರಜ್ಞಾನ ಹೊಂದಿರುವ ಜಪಾನ್ಗೆ, ಈಗ ತನ್ನದೇ ದೇಶವನ್ನು ಮುನ್ನಡೆಸಲು ‘ಮನುಷ್ಯರ’ ಕೊರತೆ ಎದುರಾಗಿರುವುದು ಪ್ರಕೃತಿ ಮತ್ತು ಕಾಲ ಸೃಷ್ಟಿಸಿರುವ ವಿಚಿತ್ರ ವ್ಯಂಗ್ಯವೇ ಸರಿ.
ವಿಶ್ವದ ಅತ್ಯಾಧುನಿಕ ಹಾಗೂ ಅತಿ ದೊಡ್ಡ ಆರ್ಥಿಕತೆಗಳಲ್ಲಿ ಒಂದಾದ ಜಪಾನ್ ಸದ್ಯದ ಮಟ್ಟಿಗೆ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಆಂತರಿಕ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ. ಅದು ವೇಗವಾಗಿ ಕುಸಿಯುತ್ತಿರುವ ಅದರ ಜನಸಂಖ್ಯೆ. ಜಪಾನ್ ಸರ್ಕಾರದ ಇತ್ತೀಚಿನ ರಾಷ್ಟ್ರೀಯ ಜನಗಣತಿ ಹಾಗೂ ಅಧಿಕೃತ ಅಂಕಿ-ಅಂಶಗಳು ಇಡೀ ವಿಶ್ವವೇ ಅಚ್ಚರಿಪಡುವ ಸತ್ಯಗಳನ್ನು ಹೊರಹಾಕಿದ್ದು, ಪ್ರಧಾನಿ ಶಿಗೆರು ಇಶಿಬಾ ಅವರು ಇದನ್ನು ದೇಶದ ಪಾಲಿನ “ನಿಶ್ಯಬ್ದ ತುರ್ತು ಪರಿಸ್ಥಿತಿ” (Quiet Emergency) ಎಂದು ಕರೆದಿದ್ದಾರೆ. ಯುವ ಪೀಳಿಗೆಯು ಮದುವೆ ಮತ್ತು ಮಕ್ಕಳ ಹೆರುವಿಕೆಯಿಂದ ದೂರ ಉಳಿಯುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ.
ಐದು ವರ್ಷಗಳಿಗೊಮ್ಮೆ ನಡೆಯುವ ಜಪಾನ್ನ ರಾಷ್ಟ್ರೀಯ ಜನಗಣತಿಯ ಪ್ರಾಥಮಿಕ ವರದಿಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆ 12.3 ಕೋಟಿಗೆ (123.05 ಮಿಲಿಯನ್) ಕುಸಿದಿದೆ. 2020ರ ಜನಗಣತಿಗೆ ಹೋಲಿಸಿದರೆ ಕೇವಲ ಐದೇ ವರ್ಷಗಳಲ್ಲಿ ಬರೋಬ್ಬರಿ 30.9 ಲಕ್ಷದಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಇದು 1920ರಲ್ಲಿ ಜಪಾನ್ ಜನಗಣತಿ ಆರಂಭಿಸಿದ ನಂತರ ದಾಖಲಾದ ಅತ್ಯಂತ ಭೀಕರ ಇಳಿತವಾಗಿದ್ದು, ಶೇಕಡಾ 2.5 ರಷ್ಟು ತೀವ್ರ ಕುಸಿತ ದಾಖಲಿಸಿದೆ. ಈ ದರ ಮುಂಚಿನ 5 ವರ್ಷಗಳ ಕುಸಿತದ ದರಕ್ಕಿಂತ ಮೂರು ಪಟ್ಟು ವೇಗ ಪಡೆದುಕೊಂಡಿದ್ದು, ಜಾಗತಿಕ ಜನಸಂಖ್ಯೆಯ ಪಟ್ಟಿಯಲ್ಲಿ ಜಪಾನ್ 11ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.

ಜಪಾನ್ನ ಈ ದುಸ್ಥಿತಿಗೆ ಪ್ರಮುಖ ಕಾರಣ ಕುಸಿಯುತ್ತಿರುವ ಜನನ ಪ್ರಮಾಣ ಮತ್ತು ಹೆಚ್ಚುತ್ತಿರುವ ಮರಣ ಪ್ರಮಾಣಗಳ ನಡುವಿನ ಭಾರಿ ವ್ಯತ್ಯಾಸ. ಆರೋಗ್ಯ ಸಚಿವಾಲಯದ ಇತ್ತೀಚಿನ ವಾರ್ಷಿಕ ವರದಿಗಳ ಪ್ರಕಾರ, ಜಪಾನ್ನಲ್ಲಿ ವರ್ಷವೊಂದರಲ್ಲಿ ಜನಿಸಿದ ಒಟ್ಟು ಮಕ್ಕಳ ಸಂಖ್ಯೆ ಕೇವಲ 6,86,061 ಮಾತ್ರ. ಜಪಾನ್ನಲ್ಲಿ 1899ರಿಂದ ಜನನವನ್ನು ದಾಖಲಿಸಲಾಗುತ್ತಿದೆ. ಅಲ್ಲಿಂದ ದೇಶದಲ್ಲಿ ವಾರ್ಷಿಕ ಜನನ ಪ್ರಮಾಣ 7 ಲಕ್ಷಕ್ಕಿಂತ ಕೆಳಗೆ ಇಳಿದಿರುವುದು ಇದೇ ಮೊದಲು. ಮತ್ತೊಂದೆಡೆ, ಕೇವಲ ಜಪಾನಿ ಮೂಲ ಪ್ರಜೆಗಳ ಸಂಖ್ಯೆಯನ್ನೇ ಪರಿಗಣಿಸಿದರೆ ಒಂದೇ ವರ್ಷದಲ್ಲಿ 9,08,574 ಜನರು ಕಡಿಮೆಯಾಗಿದ್ದಾರೆ. ಇದು ಸತತ 16ನೇ ವರ್ಷದ ನಿರಂತರ ಕುಸಿತವಾಗಿದ್ದು, ಹುಬ್ಬೇರುವಂತೆ ಮಾಡಿದೆ.
ಇದರೊಂದಿಗೆ ಜಪಾನ್ನಲ್ಲಿ ಜಂಟಿ ಕುಟುಂಬ (ವಿಭಕ್ತ ಕುಟುಂಬ)ಗಳು ಮಾಯವಾಗಿ ಒಂಟಿ ಮನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 1970ರಲ್ಲಿ ಒಂದು ಕುಟುಂಬದಲ್ಲಿ ಸರಾಸರಿ 3.45 ಜನರಿದ್ದರೆ, ಈಗ ಅದು 2.15ಕ್ಕೆ ಕುಸಿದಿದೆ. ಅದರಲ್ಲೂ ರಾಜಧಾನಿ ಟೋಕಿಯೋದಲ್ಲಿ ಈ ಪ್ರಮಾಣ ಕೇವಲ 1.88 ರಷ್ಟಿದ್ದು, ಒಂಟಿಯಾಗಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಒಟ್ಟು 47 ಪ್ರಾಂತ್ಯಗಳಲ್ಲಿ ಕೇವಲ ಟೋಕಿಯೋ ಮತ್ತು ಒಕಿನಾವಾ ಮಾತ್ರ ಜನಸಂಖ್ಯೆಯಲ್ಲಿ ಚೇತರಿಕೆ ಕಂಡಿದ್ದು, ಉಳಿದ 45 ಪ್ರಾಂತ್ಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಉದಾಹರಣೆಗೆ ಹೊಕ್ಕಾಯ್ಡೊ ಪ್ರಾಂತ್ಯವೊಂದರಲ್ಲೇ 2,39,000 ಪ್ರಜೆಗಳು ಕಡಿಮೆಯಾಗಿದ್ದಾರೆ.
ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಜಪಾನ್ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ವೃದ್ಧರನ್ನು ಹೊಂದಿರುವ ಎರಡನೇ ದೇಶ (ಮೊದಲ ಸ್ಥಾನದಲ್ಲಿ ಮೊನಾಕೊ ಇದೆ). ಪ್ರಸ್ತುತ ಜಪಾನ್ನ ಒಟ್ಟು ಪ್ರಜೆಗಳಲ್ಲಿ ಶೇ.30ರಷ್ಟು ಜನರು 65 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದಾರೆ. ಆದರೆ, 15 ವರ್ಷದೊಳಗಿನ ಮಕ್ಕಳ ಪಾಲು ಕೇವಲ ಶೇ. 10 ರಷ್ಟಿದೆ. ಇತ್ತೀಚೆಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ, ಜಪಾನ್ನ ತಾಮಿಕೊ ಇಟೂಕಾ (116 ವರ್ಷ) ನಿಧನರಾದರು. ಜಪಾನ್ನಲ್ಲಿ ಜೀವಿತಾವಧಿ ಹೆಚ್ಚಿರುವುದು ಒಳ್ಳೆಯದೇ ಆದರೂ, ದುಡಿಯುವ ಯುವ ವರ್ಗ ಕಡಿಮೆಯಾಗಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇಶದ ವೈದ್ಯಕೀಯ ಮತ್ತು ಸಾಮಾಜಿಕ ಕಲ್ಯಾಣ ವೆಚ್ಚಗಳು ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿವೆ.
ಈ ವೃದ್ಧಾಪ್ಯದ ಹೆಚ್ಚಳವು ‘ಕೊಡೊಕುಶಿ’ (Kodokushi) ಎಂಬ ಹೊಸ ಸಾಮಾಜಿಕ ಪಿಡುಗಿಗೆ ಕಾರಣವಾಗಿದೆ, ಇದರರ್ಥ “ಯಾರೂ ಇಲ್ಲದೆ ಒಂಟಿಯಾಗಿ ಸಾಯುವುದು”. ಅನೇಕ ವೃದ್ಧರು ತಮ್ಮ ಮನೆಗಳಲ್ಲಿ ಒಂಟಿಯಾಗಿ ಮರಣ ಹೊಂದುತ್ತಾರೆ ಮತ್ತು ಅವರು ಮೃತಪಟ್ಟ ದಿನಗಳ ನಂತರವಷ್ಟೇ ವಿಷಯ ಬೆಳಕಿಗೆ ಬರುತ್ತದೆ. ಈ ಒಂಟಿತನದ ಸಮಸ್ಯೆಯನ್ನು ನಿವಾರಿಸಲು ಜಪಾನ್ ಸರ್ಕಾರ ಪ್ರತ್ಯೇಕವಾಗಿ ‘ಒಂಟಿತನ ನಿವಾರಣಾ ಸಚಿವಾಲಯ’ವನ್ನೇ (Ministry of Loneliness) ಸ್ಥಾಪಿಸಿದೆ. ಅಲ್ಲದೆ, ಯುವ ಕಾರ್ಮಿಕರ ಕೊರತೆಯಿಂದಾಗಿ ಜಪಾನ್ನ ಒಟ್ಟು ಕಾರ್ಮಿಕ ಬಲದಲ್ಲಿ ಶೇ. 13ಕ್ಕಿಂತ ಹೆಚ್ಚು ಜನ 65 ವರ್ಷ ದಾಟಿದ ವಯೋವೃದ್ಧರೇ ಇಂದಿಗೂ ಟ್ಯಾಕ್ಸಿ ಡ್ರೈವಿಂಗ್, ಸೆಕ್ಯೂರಿಟಿ ಮುಂತಾದ ಕೆಲಸಗಳಲ್ಲಿ ಮುಂದುವರಿದಿದ್ದಾರೆ.

ಜನಸಂಖ್ಯೆ ಕೊರತೆಯಿಂದಾಗಿ ಜಪಾನ್ನ ಗ್ರಾಮೀಣ ಭಾಗಗಳು ಸಂಪೂರ್ಣವಾಗಿ ನಿರ್ಜನವಾಗುತ್ತಿದ್ದು, ಭೂತ ಬಂಗಲೆಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ದಶಕಗಳಲ್ಲಿ ಜಪಾನ್ನಲ್ಲಿ ಪಾಳುಬಿದ್ದ ಅಥವಾ ವಾರಸುದಾರರಿಲ್ಲದೆ ಕೈಬಿಟ್ಟ ಮನೆಗಳ (ಸ್ಥಳೀಯವಾಗಿ ಇವುಗಳನ್ನು ‘ಅಕಿಯಾ’ – Akiya ಎನ್ನಲಾಗುತ್ತದೆ) ಸಂಖ್ಯೆ ಯಾವ ಪ್ರಮಾಣದಲ್ಲಿ ಏರಿದೆಯೆಂದರೆ, ಬರೋಬ್ಬರಿ 40 ಲಕ್ಷದ ಗಡಿ ದಾಟಿದೆ. ನಗರ ಪ್ರದೇಶಗಳಿಗೆ ವಲಸೆ ಹೋದ ಯುವಕರು ತಮಗೆ ಪಿತ್ರಾರ್ಜಿತವಾಗಿ ಬಂದ ಗ್ರಾಮೀಣ ಮನೆಗಳನ್ನು ನವೀಕರಿಸಲು ಅಥವಾ ಅವುಗಳ ತೆರಿಗೆ ಕಟ್ಟಲು ಆಸಕ್ತಿ ತೋರುತ್ತಿಲ್ಲ. ಪರಿಣಾಮ ಹಳ್ಳಿಗಳ ಶಾಲಾ-ಕಾಲೇಜುಗಳು ಮತ್ತು ಆಸ್ಪತ್ರೆಗಳು ಮುಚ್ಚುತ್ತಿದ್ದು, ಇವುಗಳನ್ನು ಉಳಿಸಲು ಸರ್ಕಾರ ಈಗ ವಿದೇಶಿಗರಿಗೆ ಅತ್ಯಂತ ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ನೀಡುವ ಯೋಜನೆಗಳನ್ನು ತರುತ್ತಿದೆ.
ಮನುಷ್ಯರ ಮತ್ತು ಕಾರ್ಮಿಕರ ಈ ತೀವ್ರ ಅಭಾವವನ್ನು ನೀಗಿಸಲು ಜಪಾನ್ ಈಗ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ಅನ್ನು ಅತಿಯಾಗಿ ನೆಚ್ಚಿಕೊಳ್ಳುತ್ತಿದೆ. ಆಸ್ಪತ್ರೆಗಳು ಮತ್ತು ವೃದ್ಧಾಶ್ರಮಗಳಲ್ಲಿ ವೃದ್ಧರನ್ನು ನೋಡಿಕೊಳ್ಳಲು ‘ಕೇರ್ಬಾಟ್ಸ್’ (Carebots) ಎಂಬ ವಿಶೇಷ ರೋಬೋಟ್ಗಳನ್ನು ಬಳಸಲಾಗುತ್ತಿದೆ. ಹಾಗೆಯೇ, ಹೋಟೆಲ್ಗಳಲ್ಲಿ ಸಪ್ಲೈ ಮಾಡಲು, ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಗಾಗಿ ಮನುಷ್ಯರ ಬದಲಿಗೆ ರೋಬೋಟ್ಗಳನ್ನು ನಿಯೋಜಿಸಲಾಗುತ್ತಿದೆ. ಆದರೆ ಇದು ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ತೆರಿಗೆದಾರರು ಕಡಿಮೆಯಾಗಿರುವುದರಿಂದ ಜಪಾನ್ನ ಜಿಡಿಪಿಗೆ ಹೋಲಿಸಿದರೆ ದೇಶದ ಒಟ್ಟು ಸಾಲದ ಅನುಪಾತ ಬರೋಬ್ಬರಿ ಶೇ. 260ಕ್ಕಿಂತಲೂ ಅಧಿಕವಾಗಿದೆ.
ಉತ್ಪಾದನೆ, ಹೋಟೆಲ್ ಉದ್ಯಮ ಹಾಗೂ ಚಿಲ್ಲರೆ ವ್ಯಾಪಾರ ವಲಯವನ್ನು ಉಳಿಸಿಕೊಳ್ಳಲು ಜಪಾನ್ ಈಗ ವಿದೇಶಿ ಕಾರ್ಮಿಕರನ್ನು ಅನಿವಾರ್ಯವಾಗಿ ನೆಚ್ಚಿಕೊಳ್ಳಬೇಕಾಗಿ ಬಂದಿದ್ದು, ಸದ್ಯ ದೇಶದಲ್ಲಿ ದಾಖಲೆಯ 36.7 ಲಕ್ಷ ವಿದೇಶಿ ನಿವಾಸಿಗಳಿದ್ದಾರೆ (ಒಟ್ಟು ಜನಸಂಖ್ಯೆಯ ಶೇ. 3 ರಷ್ಟು). ಆದರೆ, ಇದು ದೇಶದ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಹಣದುಬ್ಬರದಿಂದ ಕಂಗಾಲಾಗಿರುವ ಮತದಾರರನ್ನು ಸೆಳೆಯಲು ಅಲ್ಲಿ “ಜಪಾನೀಸ್ ಫಸ್ಟ್” (Japanese First) ಎಂಬ ಹೊಸ ವಲಸೆ ವಿರೋಧಿ ಪಕ್ಷ ಉದಯಿಸಿದ್ದು, ವಿದೇಶಿಗರ ವಿರುದ್ಧ ಸುಳ್ಳು ವದಂತಿಗಳನ್ನು ಹರಡುತ್ತಿದೆ. ಮತ್ತೊಂದೆಡೆ, ಪ್ರಧಾನಿ ಸೇರಿದಂತೆ ಹಲವು ರಾಜಕೀಯ ನಾಯಕರು ವಿದೇಶಿಗರ ಒಳಹರಿವಿನ ವಿರುದ್ಧ ಕಠಿಣ ಕ್ರಮಗಳಿಗೆ ಒತ್ತಾಯಿಸುತ್ತಿದ್ದಾರೆ.

ಕೇಲವೇ ದಶಕಗಳ ಹಿಂದಿನ ಇತಿಹಾಸ ತೆಗೆದುಕೊಂಡರೆ, ಇಡೀ ಜಗತ್ತು ‘ಜನಸಂಖ್ಯಾ ಸ್ಫೋಟ’ (Population Explosion) ಎಂಬ ಮಹಾ ಬಿಕ್ಕಟ್ಟಿನಿಂದ ತತ್ತರಿಸುತ್ತಿತ್ತು. ಸಂಪನ್ಮೂಲಗಳ ಕೊರತೆ, ಹಸಿವು ಮತ್ತು ಬಡತನಕ್ಕೆ ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆಯೇ ಕಾರಣ ಎಂದು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿದ್ದವು. ಇದನ್ನು ನಿಯಂತ್ರಿಸಲು ಚೀನಾದ ‘ಒಂದು ಮಗು ನೀತಿ’ (One-child policy) ಯಿಂದ ಹಿಡಿದು, ಭಾರತ ಸೇರಿದಂತೆ ಹಲವು ದೇಶಗಳು ‘ನಾವು ಇಬ್ಬರು ನಮಗೆ ಇಬ್ಬರು’ ಎಂಬ ಕಠಿಣ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದವು. ಮನುಷ್ಯರ ಸಂಖ್ಯೆ ಹೆಚ್ಚಾಗಿ ಭೂಮಿಗೆ ಭಾರವಾಗುತ್ತಿದೆ ಎಂದು ಅಂದು ಇಡೀ ಜಗತ್ತು ಭೀತಿಗೊಳಗಾಗಿತ್ತು. ಆದರೆ, ಕಾಲಚಕ್ರ ಉರುಳಿದಂತೆ ಇಂದು ಜಾಗತಿಕ ಜನಸಂಖ್ಯಾ ಶಾಸ್ತ್ರವೇ ಸಂಪೂರ್ಣವಾಗಿ ‘ಯು-ಟರ್ನ್’ ಪಡೆದುಕೊಂಡಿದೆ!
ಇದನ್ನೂ ಓದಿ: ಹೆಣ್ಣು ದೀರ್ಘಕಾಲ ಬದುಕಬಹುದು, ಜೀವಿಸುವುದು ಕಷ್ಟ!
ಅತಿ ನಿಯಂತ್ರಣದ ಅಡ್ಡಪರಿಣಾಮವೋ ಅಥವಾ ಬದಲಾದ ಜಾಗತಿಕ ಸವಾಲುಗಳೋ, ಅಂದು ಜನಸಂಖ್ಯೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದ ಜಗತ್ತಿಗೆ, ಇಂದು ಅದೇ ಜನಸಂಖ್ಯೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಹೊಸ ತಲೆನೋವು ಶುರುವಾಗಿದೆ. ವಿಶೇಷವಾಗಿ ಜಪಾನ್. ಅತಿಯಾದ ನಗರೀಕರಣ, ವೃತ್ತಿಜೀವನದ ಒತ್ತಡ ಮತ್ತು ಬದಲಾದ ಜೀವನಶೈಲಿಯಿಂದಾಗಿ ಜಪಾನ್ ಮಾತ್ರವಲ್ಲದೆ ಚೀನಾ, ದಕ್ಷಿಣ ಕೊರಿಯಾ, ಯುರೋಪ್ ಹಾಗೂ ಸಿಂಗಾಪುರದಂತಹ ದೇಶಗಳೂ ಈಗ ಜನಸಂಖ್ಯೆ ಇಳಿತದ ಭೀಕರ ಸವಾಲನ್ನು ಎದುರಿಸುತ್ತಿವೆ. ಅಂದು ಜನಸಂಖ್ಯೆಯನ್ನು ತಗ್ಗಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ ಸರ್ಕಾರಗಳು, ಇಂದು ಮಗು ಹೆತ್ತರೆ ಕೈತುಂಬಾ ಹಣ, ಉಚಿತ ಶಿಕ್ಷಣ ನೀಡುವುದಾಗಿ ದಂಪತಿಗಳ ಹಿಂದೆ ಬೀಳುತ್ತಿರುವುದು ಇತಿಹಾಸದ ವಿಚಿತ್ರ. ಅತಿಯಾದ ಜನಸಂಖ್ಯಾ ನಿಯಂತ್ರಣ ನೀತಿಗಳು ದೀರ್ಘಾವಧಿಯಲ್ಲಿ ದೇಶವೊಂದನ್ನು ಹೇಗೆ ವೃದ್ಧಾಶ್ರಮವನ್ನಾಗಿ ಪರಿವರ್ತಿಸಬಲ್ಲದು ಎಂಬುದಕ್ಕೆ ಪ್ರಸ್ತುತ ಜಪಾನ್ ಎದುರಿಸುತ್ತಿರುವ ಬಿಕ್ಕಟ್ಟೇ ಜಗತ್ತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಈ ಮಹಾ ಬಿಕ್ಕಟ್ಟಿನಿಂದ ಹೊರಬರಲು ಜಪಾನ್ ಸರ್ಕಾರ ಉಚಿತ ಶಿಶುಪಾಲನಾ ಕೇಂದ್ರಗಳು, ಪೋಷಕರಿಗೆ ಹೆಚ್ಚಿನ ರಜೆ, ಆರ್ಥಿಕ ಭತ್ಯೆಯಂತಹ ಯೋಜನೆಗಳನ್ನು ಶುರು ಮಾಡಿದೆ. ಯುವಕ-ಯುವತಿಯರು ಮದುವೆಯಾಗುವಂತೆ ಪ್ರೋತ್ಸಾಹಿಸಲು ಸರ್ಕಾರವೇ ಅಧಿಕೃತ ‘ಡೇಟಿಂಗ್ ಆಪ್’ಗಳನ್ನು ಕೂಡ ಲಾಂಚ್ ಮಾಡಿದೆ. ಆದರೆ, ಬದಲಾಗುತ್ತಿರುವ ಆಧುನಿಕ ಜೀವನಶೈಲಿ, ಮಕ್ಕಳನ್ನು ಸಾಕುವುದು ದುಬಾರಿ ಎಂಬ ಭಾವನೆ ಮತ್ತು ಕೆಲಸದ ಒತ್ತಡದಿಂದಾಗಿ ಯುವ ಜಪಾನಿಯರು ಇದ್ಯಾವುದಕ್ಕೂ ಮಣಿಯುವಂತೆ ಕಾಣುತ್ತಿಲ್ಲ. ಸೂಪರ್ ಕಂಪ್ಯೂಟರ್, ಬುಲೆಟ್ ಟ್ರೈನ್ ಹಾಗೂ ಅದ್ಭುತ ತಂತ್ರಜ್ಞಾನ ಹೊಂದಿರುವ ಜಪಾನ್ಗೆ, ಈಗ ತನ್ನದೇ ದೇಶವನ್ನು ಮುನ್ನಡೆಸಲು ‘ಮನುಷ್ಯರ’ ಕೊರತೆ ಎದುರಾಗಿರುವುದು ಪ್ರಕೃತಿ ಮತ್ತು ಕಾಲ ಸೃಷ್ಟಿಸಿರುವ ವಿಚಿತ್ರ ವ್ಯಂಗ್ಯವೇ ಸರಿ.




