ಹೊಸ ಓದು | ನಡುಬಗ್ಗಿಸದ ಎದೆಯ ದನಿ: ಶೂದ್ರ ಯುವಕರು ಓದಬೇಕಾದ ಪುಸ್ತಕ

0
326
ನವೀನ್ ಸೂರಿಂಜೆ
ನವೀನ್ ಸೂರಿಂಜೆ
ಸಂಘ ಪರಿವಾರದ ಕರಾಳ ಸತ್ಯಗಳನ್ನು ಕುರಿತು ಇಲ್ಲಿಯವರೆಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಈ ಎಲ್ಲ ಪುಸ್ತಕಗಳಿಗಿಂತ ಹೆಚ್ಚು ಜೀವಂತವಾಗಿರುವುದು ಗೆಳೆಯ ಮಹೇಂದ್ರ ಕುಮಾರ್ ಅವರನ್ನು ಕುರಿತು ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ‘ನಡು ಬಗ್ಗಿಸದ ಎದೆಯ ಧ್ವನಿ’. ಈ ಪುಸ್ತಕವನ್ನು ಎಲ್ಲರೂ- ಅದರಲ್ಲೂ ಶೂದ್ರ ಯುವಕರು ಓದಬೇಕಾದ ಅಗತ್ಯವಿದೆ.

ನನ್ನ ‘ದೇಶಕ್ಕಾಗಿ ಆರ್‍‌ಎಸ್ಎಸ್ ಬಿಟ್ಟೆ’ ಪುಸ್ತಕವೂ ಸೇರಿದಂತೆ ಸಂಘ ಪರಿವಾರದ ಕರಾಳ ಸತ್ಯಗಳನ್ನು ಕುರಿತು ಇಲ್ಲಿಯವರೆಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಈ ಎಲ್ಲ ಪುಸ್ತಕಗಳಿಗಿಂತ ಹೆಚ್ಚು ಜೀವಂತವಾಗಿರುವುದು ಗೆಳೆಯ ಮಹೇಂದ್ರ ಕುಮಾರ್ ಅವರನ್ನು ಕುರಿತು ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ಪುಸ್ತಕ. ‘ನಡು ಬಗ್ಗಿಸದ ಎದೆಯ ಧ್ವನಿ’ ಎಂಬುದು ಈ ಪುಸ್ತಕಕ್ಕೆ ಇಟ್ಟಿರುವ ಅರ್ಥಪೂರ್ಣ ಹೆಸರು. ಈ ಹೆಸರಿನಲ್ಲೇ ಮಹೇಂದ್ರ ಕುಮಾರ್ ಅವರ ವ್ಯಕ್ತಿತ್ವದ ಚಿತ್ರಣ ಇದೆ. ಸುಮಾರು 200 ಪುಟಗಳ ಈ ಪುಸ್ತಕವನ್ನು ಓದಲು ಪ್ರಾರಂಭಿಸಿದರೆ ಕೆಳಗಿಡಲು ಮನಸ್ಸೇ ಬರುವುದಿಲ್ಲ. ಅಷ್ಟೊಂದು ಆಕರ್ಷಕ ನಿರೂಪಣೆ ಇಲ್ಲಿದೆ.

ತಾನು ನಂಬಿದ ಸಿದ್ಧಾಂತವನ್ನು ಹುಂಬನಂತೆ ಕಾರ್ಯರೂಪಕ್ಕೆ ತರುತ್ತಿದ್ದ ವ್ಯಕ್ತಿ ಮಹೇಂದ್ರ ಕುಮಾರ್. ಆತನೇ ನಮ್ಮ ಎದುರಿಗೆ ಕುಳಿತು ತನ್ನ ಕಥೆಯನ್ನು ಹೇಳಿಕೊಂಡಂತೆ ಈ ಪುಸ್ತಕವನ್ನು ನವೀನ್ ಬರೆದಿದ್ದಾರೆ. ಬಾಲ್ಯದ ಬಡತನ, ಹಸಿವು, ಕಷ್ಟಕೋಟಲೆ, ದುಶ್ಚಟಗಳನ್ನೇ ಮೈವೆತ್ತ ತಂದೆಯ ಕ್ರೌರ್ಯ, ಮಕ್ಕಳಿಗಾಗಿ ಸದಾ ದುಡಿಯುವ ತಾಯಿಯ ಮಮತೆ ಮತ್ತು ಪರಿಶ್ರಮ ಇತ್ಯಾದಿಗಳನ್ನು ಮಹೇಂದ್ರ ಕುಮಾರ್ ಸ್ಪಷ್ಟವಾಗಿ ಇಲ್ಲಿ ನಿರೂಪಿಸಿದ್ದಾರೆ. ಮಲೆನಾಡಿನ ಒಕ್ಕಲಿಗರು ಎಂದರೆ ಶ್ರೀಮಂತರೇ ಇರಬೇಕೆಂದು ನಾವು ಬಯಲು ಸೀಮೆಯ ಒಕ್ಕಲಿಗರು ಭಾವಿಸಿರುತ್ತೇವೆ. ಆದರೆ ಮಹೇಂದ್ರ ಅವರ ಬಾಲ್ಯದ ಬದುಕನ್ನು ಗಮನಿಸಿದರೆ, ಮಲೆನಾಡಿನ ಒಕ್ಕಲಿಗರ ಬಡತನದ ಬಹುದೊಡ್ಡ ಅನುಭವ ಲೋಕ ಎದುರಾಗುತ್ತದೆ.

ಮಹೇಂದ್ರ ಕುಮಾರ್ ಬಾಲಕನಾಗಿದ್ದಾಗಲೇ ಅವರ ತಂದೆ ಈ ಹುಡುಗನನ್ನು ಮಂಗಳೂರಿನ ಒಬ್ಬ ಬೇಕರಿ ಮಾಲೀಕನಿಗೆ ಮಾರಿಬಿಡುತ್ತಾರೆ. ಅಲ್ಲಿ ಆತ ಜೀತಗಾರನಂತೆ ಬದುಕಬೇಕಾಗುತ್ತದೆ. ಆ ಅನುಭವವನ್ನು ಹೀಗೆ ಹೇಳಿಕೊಳ್ಳುತ್ತಾರೆ. “ಬೇಕರಿಯಲ್ಲಿ ಹತ್ತರಿಂದ ಹನ್ನೆರಡು ಜನ ಕೆಲಸಕ್ಕೆ ಇದ್ದ ನೆನಪು. ಬೆಳಗಿನ ರಾತ್ರಿಯವರೆಗೆ ಕೆಲಸ ಕೆಲಸ. ಮುಂಜಾನೆ ಬೆಳಕು ಹರಿಯುವುದಕ್ಕೆ ಮೊದಲು ಕೆಲಸ ಶುರು ಮಾಡಬೇಕಿತ್ತು. ನನಗೆ ಸಂಬಳ ಎಷ್ಟೆಂದು ಗೊತ್ತಿರಲಿಲ್ಲ. ಬೇಕರಿ ಮಾಲೀಕ ವಿದ್ಯಾಧರ ಹೆಗಡೆಯವರು ಹೇಳಲಿಲ್ಲ. ನಾನು ಕೇಳಿರಲಿಲ್ಲ. ತಂದೆಯ ಜೊತೆ ಮಾತನಾಡಿ ಇರ್ತಾರೆ ಎಂದುಕೊಂಡಿದ್ದೆ. ಒಂದು ತಿಂಗಳಾದರೂ ಸಂಬಳ ಆಗದೆ ಇದ್ದಾಗಲೇ ಸತ್ಯ ಅರಿವಾಗಿದ್ದು. ನಾನು ಕೆಲಸಕ್ಕೆ ಸೇರಿಕೊಳ್ಳುವ ಮುಂಚೆಯೇ ನನ್ನ ಅಪ್ಪ ವಿದ್ಯಾಧರ ಹೆಗಡೆಯವರಿಂದ ಹಣ ಪಡೆದುಕೊಂಡಿದ್ದರು. ಅರ್ಥಾತ್ ಕೆಲ ವರ್ಷಗಳಿಗೆ ನನ್ನನ್ನು ವಿದ್ಯಾಧರ ಹೆಗಡೆಯವರಿಗೆ ಮಾರಲಾಗಿತ್ತು. ನಾನು ಬೇಕರಿಯಲ್ಲಿ ಜೀತ ಮಾಡಬೇಕಿತ್ತು.”

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ವಂತ ತಂದೆಯೇ ಮಗನನ್ನು ಮಾರಾಟ ಮಾಡಿದ್ದ ಪರಿಸ್ಥಿತಿಯಲ್ಲಿ ಮಹೇಂದ್ರ ಕುಮಾರ್ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆ ಕಾಲದಲ್ಲಿ ಆತ ಎಂಥಾ ಬಟ್ಟೆ ಹಾಕಿದ್ದೆ, ಯಾವ ಊಟ ಮಾಡಿದ್ದೆ ಎಂಬುದರ ಅರಿವೇ ಇರಲಿಲ್ಲವಂತೆ. ಅದೇ ಸಂದರ್ಭದಲ್ಲಿ ಕರಾವಳಿಯ ಹೋಟೆಲ್‌ಗಳಲ್ಲಿ ಹೊರಗೆ ತೆಂಗಿನ ಚಿಪ್ಪು ಇಟ್ಟು ದಲಿತರಿಗೆ ನೀರು ಮತ್ತು ಚಹಾ ಕೊಡುತ್ತಿದ್ದರಂತೆ. ಇದನ್ನೆಲ್ಲಾ ಕಣ್ಣಾರೆ ಕಂಡ ಮಹೇಂದ್ರ ಕೊನೆಯಲ್ಲಿ ಒಂದು ಮಾತು ಹೇಳುತ್ತಾರೆ “ಮಂಗಳೂರನ್ನು ಬುದ್ಧಿವಂತರ ಜಿಲ್ಲೆ, ಧಾರ್ಮಿಕರ ಊರು, ಹಿಂದುತ್ವದ ತವರೂರು ಎನ್ನುತ್ತಾರೆ. ನನ್ನ ಕಡುಕಷ್ಟದ ದಿನಗಳಲ್ಲಿ ಕರಾವಳಿಯ ಯಾವ ಹಿಂದುತ್ವವು, ಯಾವ ದೇವರು, ಧರ್ಮವು ನನ್ನ ಸಹಾಯಕ್ಕೆ ಬರಲಿಲ್ಲ”.

ಇದನ್ನು ಓದಿದ್ದೀರಾ?: ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?

ನಮ್ಮ ದೇಶ ಸೈರಣೆಯ ಮನಸ್ಥಿತಿಯುಳ್ಳ ಜನ ಬದುಕಿರುವ ದೇಶ. ಎಂದಿಗೂ ಭಿನ್ನ ಜಾತಿ ಮತ ಧರ್ಮಗಳ ಜನರೊಂದಿಗೆ ಜಗಳ ಕಾದಿಲ್ಲ. ಈ ಮಾತಿಗೆ ಮಹೇಂದ್ರ ಕುಮಾರ್ ತಮ್ಮ ಬದುಕಿನಲ್ಲಿ ನಡೆದ ಎರಡು ಘಟನೆಗಳನ್ನು ಸಾಕ್ಷಿಯಾಗಿ ನೀಡುತ್ತಾರೆ. ಆ ಹೊತ್ತಿಗಾಗಲೇ ಮಹೇಂದ್ರ ಭಜರಂಗ ದಳದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುತ್ತಾರೆ. ಒಂದು ಮುಂಜಾನೆ ನಾಲ್ಕು ಗಂಟೆಯ ಹೊತ್ತಿನಲ್ಲಿ ಒಬ್ಬ ಬ್ರಾಹ್ಮಣ ಬಾಗಿಲು ಬಡಿಯುತ್ತಾನೆ. ತನ್ನ ಗರ್ಭಿಣಿ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ್ದೇನೆ, ತುಂಬಾ ಬ್ಲೀಡಿಂಗ್ ಆಗ್ತಾ ಇದೆ, ತಕ್ಷಣ ರಕ್ತ ಬೇಕು ಎಂದು ಕೇಳಿಕೊಳ್ಳುತ್ತಾನೆ. ಮಹೇಂದ್ರ ಕುಮಾರ್ ಆ ಬ್ರಾಹ್ಮಣನನ್ನು ಜೊತೆಯಲ್ಲೇ ಕರೆದುಕೊಂಡು ನೌಷದ್ ಎನ್ನುವ ಮುಸ್ಲಿಮನ ಮನೆಗೆ ಹೋಗುತ್ತಾರೆ. ಆ ಹುಡುಗ ತಕ್ಷಣವೇ ತಯಾರಾಗಿ ಬಂದು ಆಸ್ಪತ್ರೆಯಲ್ಲಿ ಆ ಬ್ರಾಹ್ಮಣ ಮಹಿಳೆಗಾಗಿ ರಕ್ತ ಕೊಡುತ್ತಾನೆ. ಆ ರಕ್ತ ಸಾಕಾಗುವುದಿಲ್ಲ. ಆತ ತನ್ನ ಇನ್ನೊಬ್ಬ ಕ್ರಿಶ್ಚಿಯನ್ ಗೆಳೆಯ ಮೋಯಿ (ಇಮಾನುವೆಲ್) ಎನ್ನುವ ಹುಡುಗನನ್ನು ಕರೆದುಕೊಂಡು ಬಂದು ರಕ್ತ ಕೊಡಿಸುತ್ತಾನೆ. ಆ ಬ್ರಾಹ್ಮಣ ಮಹಿಳೆಯ ಹೃದಯದಲ್ಲಿ ಈ ಮುಸ್ಲಿಂ ಹಾಗೂ ಕ್ರೈಸ್ತ ಹುಡುಗರ ರಕ್ತ ಹರಿಯತೊಡಗುತ್ತದೆ. ಮುಸ್ಲಿಂ ದ್ವೇಷವನ್ನೇ ಉಂಡು ಉಸಿರಾಡುತ್ತಿದ್ದ ಮಹೇಂದ್ರ ಕುಮಾರ್ ಒಮ್ಮೆ ಸಾವು ಬದುಕಿನ ಇಕ್ಕಟ್ಟಿಗೆ ಸಿಲುಕುತ್ತಾರೆ. ಅವರನ್ನು ಕಾಪಾಡಿದ್ದು ಕಾರ್ಕಳ ಸಮೀಪದ ಅಜೆಕಾರಿನ ಅನ್ವರ್ ಎನ್ನುವ ಮುಸ್ಲಿಂ ಹುಡುಗ.

ಮಲೆನಾಡಿನ ಗಾಂಧಿ ಎಂದೇ ಪ್ರಸಿದ್ಧರಾಗಿದ್ದ, ಪ್ರಾಮಾಣಿಕ ರಾಜಕಾರಣಿ ಹೆಚ್.ಜಿ. ಗೋವಿಂದೇಗೌಡರ ಪ್ರಭಾವ ವಲಯದಲ್ಲಿ ಇದ್ದ ಮಹೇಂದ್ರ ಕುಮಾರ್ ಇದ್ದಕ್ಕಿದ್ದ ಹಾಗೆ ಮುಸ್ಲಿಂ ದ್ವೇಷಿಯಾಗಿ ಬದಲಾಗುವುದು ಒಂದು ವಿಷಾದನೀಯ ಸಂಗತಿ. ಆಗತಾನೆ ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುತ್ತಿದ್ದ ಮಹೇಂದ್ರ ಮಂಗಳೂರಿನಲ್ಲಿ ನಡೆಯುತ್ತಿದ್ದ ಹಿಂದೂ ಸಮಾಜೋತ್ಸವಕ್ಕೆ ಕೊಪ್ಪದಿಂದ ಉಚಿತವಾಗಿ ಹೊರಟಿದ್ದ ಬಸ್ಸಿನಲ್ಲಿ ಹೋಗುತ್ತಾರೆ. ಹಿಂತಿರುಗಿ ಬಂದಾಗ ಹಿಂದುತ್ವದ ದುಷ್ಟ ವ್ಯಾಘ್ರಕ್ಕೆ ಬಲಿಯಾಗಿ ಬದಲಾಗುತ್ತಾರೆ. ಅಲ್ಲಿಂದ ಆಚೆಗೆ ನಡೆದಿದ್ದೆಲ್ಲಾ ಬಹುದೊಡ್ಡ ದುರಂತ ನಾಟಕ. ಈ ನಾಟಕದ ಪಾತ್ರಧಾರಿಗಳು, ಅವರ ನಟನೆ, ಸಂಭಾಷಣೆ, ವರ್ತನೆ ಎಲ್ಲವೂ ಈ ಪುಸ್ತಕದ ಪ್ರತಿ ಪುಟದಲ್ಲೂ ದಾಖಲಾಗಿವೆ. ಶೂದ್ರ ಹುಡುಗರ ಖಾಲಿ ತಲೆಗೆ ಹಿಂದುತ್ವದ ವಿಷದ ನಶೆ ತುಂಬುವ ಬ್ರಾಹ್ಮಣರ ಕುತಂತ್ರಗಳು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತವೆ.

ನಾಶವಾಗುತ್ತಿರುವ ಹಿಂದೂ ಧರ್ಮವನ್ನು ಕಾಪಾಡಬೇಕು ಎನ್ನುವ ಭ್ರಮೆಗೆ ಬಿದ್ದ ಮಹೇಂದ್ರ ಕುಮಾರ್, ಸುಧೀರ್ ಮರೋಳ್ಳಿ, ಭೋಜರಾಜ್, ಮೋಹನ್ ಮನಸೋಳಿ, ಆವಳ್ಳಿ ಗಿರೀಶ್ ಮುಂತಾದ ಶೂದ್ರ ಹುಡುಗರು ಮುಂದಿನ ದಿನಗಳಲ್ಲಿ ಎಂತಹ ಕಡುಕಷ್ಟಗಳಿಗೆ ಸಿಲುಕಿ ಹಾಕಿಕೊಳ್ಳುತ್ತಾರೆ ಎನ್ನುವ ವಾಸ್ತವ ಸಂಗತಿಗಳನ್ನು ನಮ್ಮ ಜನ ಓದಲೇಬೇಕು.

ಮಹಾಕವಿ ಕುವೆಂಪು ಹುಟ್ಟಿದ, ಪೂರ್ಣಚಂದ್ರ ತೇಜಸ್ವಿ ಇಡೀ ಜೀವಮಾನ ಕಳೆದ ಚಿಕ್ಕಮಗಳೂರು ಜಿಲ್ಲೆಗೆ ಈ ಹುಡುಗರು ಕೋಮುವಾದದ ಕೇಸರಿ ಬಣ್ಣ ಹಚ್ಚಲು ತಯಾರಾಗುತ್ತಾರೆ. ಬಜರಂಗದಳಕ್ಕೆ ಯಾವ ಆದಾಯದ ಮೂಲವೂ ಇರದ ಕಾಲದಲ್ಲಿ ಈ ಹುಡುಗರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ತಿರುಗಾಡುತ್ತಿದ್ದರು. ತರೀಕೆರೆಯಲ್ಲಿ ನಡೆದ ಭಜರಂಗದಳದ ಅಭ್ಯಾಸ ವರ್ಗದ ಖರ್ಚು ವೆಚ್ಚಗಳನ್ನು ತೂಗಿಸಲು ಭೋಜರಾಜ್ ತಮ್ಮ ಮೋಟಾರ್ ಸೈಕಲ್ ಅನ್ನು ಮಾರಿಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದೆಷ್ಟೋ ಹುಡುಗರು ಜೈಲು ಪಾಲಾಗುತ್ತಾರೆ. ಕೆಲವರಂತೂ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ.

ಚರಿತ್ರೆಯ ಉದ್ದಕ್ಕೂ ನಾವು ಕಂಡುಕೊಂಡಂತೆ ಬ್ರಾಹ್ಮಣರು ಸಾಮಾನ್ಯವಾಗಿ ಸತ್ಯ ಹೇಳುವದಿಲ್ಲ. ಅದಕ್ಕಾಗಿ ಬಸವಣ್ಣ “ವಿಪ್ರರು ನುಡಿದಂತೆ ನಡೆಯರು. ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ” ಎಂದು ಒಂದು ವಚನದಲ್ಲಿ ಖಚಿತವಾಗಿ ಹೇಳುತ್ತಾರೆ. ಅವರ ಮೋಸ, ವಂಚನೆ, ಸುಳ್ಳು, ತಟವಟಗಳ ಬಗ್ಗೆ ನಮ್ಮ ಜನಕ್ಕೆ ಚೆನ್ನಾಗಿ ಗೊತ್ತಿದ್ದರೂ ಸಹ, ಮತ್ತೆ ಮತ್ತೆ ಅವರು ಬೀಸುವ ಬಲೆಗೆ ಬೀಳುತ್ತಲೇ ಇದ್ದಾರೆ. ಈ ಪುಸ್ತಕದಲ್ಲೂ ಅಂತಹ ಹಲವು ಪ್ರಸಂಗಗಳನ್ನು ಉಲ್ಲೇಖಿಸಲಾಗಿದೆ.

ಇದನ್ನು ಓದಿದ್ದೀರಾ?: ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಬಾಬಾಬುಡನ್ ಗಿರಿಯಲ್ಲಿ ದತ್ತಾತ್ರೇಯನ ಪಾದುಕೆಗಳು ಇದ್ದವು ಎಂದು ನಂಬಿಸಿ, ಹುರಿದುಂಬಿಸಿ ಮಹೇಂದ್ರ ಕುಮಾರ್ ಮತ್ತು ಗೆಳೆಯರನ್ನು ಹೋರಾಟಕ್ಕೆ ಎಳೆದು ತರಲಾಗುತ್ತದೆ. ಈ ಹುಡುಗರು ಅಲ್ಲಿಗೆ ಹೋಗಿ ಪರೀಕ್ಷಿಸಿದಾಗ ಯಾವ ಪಾದುಕೆಯೂ ಅಲ್ಲಿ ಇರುವುದಿಲ್ಲ. ಆಗ ತರೀಕೆರೆಯ ಮೂರ್ತಿ ಎನ್ನುವ ಕಾರ್ಪೆಂಟರನನ್ನು ಕರೆಸಿ, ಆತನ ಕೈಯಲ್ಲಿ ಹಳೆ ಕಾಲದ ರೀತಿ ಕಾಣುವಂತೆ ಪಾದುಕೆಯನ್ನು ತಯಾರು ಮಾಡಿಸುತ್ತಾರೆ. ಅದನ್ನು ಅಲಂಕಾರ ಮಾಡಿ ರಥ ಯಾತ್ರೆ ಪ್ರಾರಂಭಿಸುತ್ತಾರೆ. ನಮ್ಮ ದಡ್ಡ ಜನ ಅದನ್ನು ಸತ್ಯವೆಂದು ನಂಬಿ ಭಾವುಕತೆಯಿಂದ ಆರಾಧಿಸತೊಡಗುತ್ತಾರೆ. ಸಾಕಷ್ಟು ದೇಣಿಗೆಯನ್ನು ಕೊಡುತ್ತಾರೆ. ಅಲ್ಲಿಗೆ ಧಾವಿಸಿ ಬಂದ ಕಲ್ಲಡ್ಕ ಪ್ರಭಾಕರ ಭಟ್ಟರು, ದತ್ತಾತ್ರೇಯನ ಜೊತೆಗೆ ಅನುಸೂಯಾ ದೇವಿಯನ್ನು ಜೋಡಿಸುವ ಮೂಲಕ ಮಹಿಳೆಯರನ್ನು ಸೆಳೆಯುವ ಹೊಸ ತಂತ್ರ ರೂಪಿಸುತ್ತಾರೆ.

ಆ ಪಾದುಕೆಯನ್ನು ಮಾಡಿಕೊಟ್ಟ ಬಡಗಿ ಮೂರ್ತಿ ಹಣ ಕೇಳಿದಾಗ, ಆತನನ್ನು ಬಜರಂಗದಳದ ಹುಡುಗರು ಹೊಡೆದು ಕಳಿಸುತ್ತಾರೆ. ಈ ಪಾದುಕೆಯ ಬಲದಿಂದಲೇ ಹಲವರು ಶಾಸಕರಾಗುತ್ತಾರೆ. ಕೆಲವರು ಮಂತ್ರಿಗಳೂ ಆಗುತ್ತಾರೆ.

ಮುಂದಿನ ಕಾರ್ಯತಂತ್ರಗಳ ಬಗ್ಗೆ ಯೋಚಿಸಲು ಮತ್ತೊಂದು ಬೈಠಕ್ ಸೇರಲಾಗುತ್ತದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಮಹೇಂದ್ರ ಕುಮಾರ್ ಹೆಗಲಿಗೆ ಕಟ್ಟುತ್ತಾರೆ. ಆ ಬೈಠಕ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ತು ಮುಂತಾದ ಸಂಘಟನೆಗಳ ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಸೇರಿಕೊಳ್ಳುತ್ತಾರೆ. ಅವರೆಲ್ಲರೂ ಬ್ರಾಹ್ಮಣರೇ ಆಗಿರುವುದನ್ನು ಮಹೇಂದ್ರ ಕುಮಾರ್ ಸೂಕ್ಷ್ಮವಾಗಿ ಗಮನಿಸುತ್ತಾರೆ. “ಈಗ ಮುಸಲ್ಮಾನ ಮೌಲ್ವಿಗಳು ಮಾತ್ರ ಅಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ, ನಾವು ಅಲ್ಲಿಗೆ ಬ್ರಾಹ್ಮಣ ಅರ್ಚಕರನ್ನು ಪೂಜೆಗೆ ನೇಮಿಸುವಂತೆ ಹೋರಾಟ ಆರಂಭಿಸಬೇಕು” ಎನ್ನುವ ನಿರ್ಣಯ ಕೈಗೊಳ್ಳಲಾಗುತ್ತದೆ‌. ಇದರ ಅರ್ಥ ಬ್ರಾಹ್ಮಣರ ತಟ್ಟೆಕಾಸಿನ ಹೊಟ್ಟೆಪಾಡಿಗಾಗಿ ಮಹೇಂದ್ರ ಕುಮಾರ್ ಅವರಂತಹ ಶೂದ್ರ ಹುಡುಗರು ಕೆಲಸ ಮಾಡಬೇಕಾಗಿತ್ತು ಎಂದಲ್ಲವೆ? ಹೋರಾಟ, ಪ್ರತಿಭಟನೆ, ಉಪವಾಸ, ವನವಾಸ, ಪೊಲೀಸರ ಲಾಠಿ ಏಟು, ಹತ್ತಾರು ಪೊಲೀಸ್ ಕೇಸು, ಜೈಲುವಾಸ ಇತ್ಯಾದಿಗಳಿಗೆ ಶೂದ್ರ ಹುಡುಗರು ಬಲಿಯಾಗುತ್ತಿದ್ದರು. ಅದರ ಪ್ರತಿ ಫಲವನ್ನು ಬ್ರಾಹ್ಮಣರು ನಿರಾಯಾಸವಾಗಿ ಉಣ್ಣುತ್ತಿದ್ದರು. ಇದನ್ನೇ ತಾನೆ ಭಗವದ್ಗೀತೆಯಲ್ಲಿ “ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚಿನಂ.” ಅಂದರೆ, ಕೆಲಸ ಮಾಡುವುದಷ್ಟೇ ನಿನ್ನ ಕೆಲಸ. ಫಲಾಫಲಗಳನ್ನು ಮಾತ್ರ ಕೇಳಬಾರದು ಎನ್ನುವ ಅರ್ಥದಲ್ಲಿ ಅಲ್ಲವೇ ಭೂಸುರರು ಹೇಳಿರುವುದು.

ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಅಧಿಕಾರವನ್ನು ಗಿಟ್ಟಿಸಲು ಸಿ.ಟಿ. ರವಿ ಮತ್ತು ಕಾರ್ಕಳ ಸುನಿಲ್ ಕುಮಾರ್ ನಡುವೆ ಪೈಪೋಟಿ ಶುರುವಾಗುತ್ತದೆ. ಕಾರ್ಯಕ್ರಮವೊಂದರಲ್ಲಿ ಅವರಿಬ್ಬರು ಕುತ್ತಿಗೆ ಪಟ್ಟಿ ಹಿಡಿದು ಪರಸ್ಪರ ಹೊಡೆದಾಡುತ್ತಾರೆ. ನೂರಾರು ಜನ ಬಡ ಕಾರ್ಯಕರ್ತರನ್ನು ತಮ್ಮ ರಾಜಕೀಯ ದುರಾಸೆಗಾಗಿ ಬಿಜೆಪಿ ನಾಯಕರು ಹೇಗೆ ಬಲಿಕೊಟ್ಟರು ಎನ್ನುವ ಕರಾಳ ಸತ್ಯವನ್ನು ಮಹೇಂದ್ರ ಇಲ್ಲಿ ಕಟ್ಟಿಕೊಡುತ್ತಾರೆ. ಮನೆ ಮಠ, ತಂದೆ ತಾಯಿ, ಹೆಂಡತಿ ಮಕ್ಕಳನ್ನು ತೊರೆದು ಪ್ರಾಮಾಣಿಕತೆಯಿಂದ ದುಡಿಯುವ ಶೂದ್ರ ಹುಡುಗರು ಬ್ರಾಹ್ಮಣ್ಯದ ಕುಟಿಲ ತಂತ್ರಗಳಿಗೆ ಬಲಿಯಾಗದೆ ವಂಚನೆಯನ್ನು ಅರ್ಥಮಾಡಿಕೊಳ್ಳಬೇಕು.

ಆ ಬೈಠಕ್ಕಿನಲ್ಲಿ ಬ್ರಾಹ್ಮಣ ಅರ್ಚಕರನ್ನು ದತ್ತಪೀಠದ ಪೂಜೆಗೆ ನೇಮಿಸಲು ಹೋರಾಟ ಮಾಡಬೇಕು ಎಂದು ಮಹೇಂದ್ರ ಕುಮಾರ್ ಮತ್ತಿತರ ಭಜರಂಗ ದಳದ ಹುಡುಗರು ಹೋರಾಟ ಶುರು ಮಾಡಿ, ಜೈಲು ಪಾಲಾಗುತ್ತಾರೆ. ಹೋರಾಟಕ್ಕಾಗಲಿ, ಜೈಲಿಗಾಗಲಿ ಒಬ್ಬ ಬ್ರಾಹ್ಮಣ ಹುಡುಗನು ಬರುವುದಿಲ್ಲ. ಜೈಲಿನಿಂದ ಬಿಡಿಸಲು ಸಹ ಈ ಬ್ರಾಹ್ಮಣರು ಪ್ರಯತ್ನ ಮಾಡುವುದಿಲ್ಲ. ಕೊನೆಗೆ ಭೋಜರಾಜ್ ಎನ್ನುವ ಶೂದ್ರ ಹುಡುಗ ತನ್ನ ಮನೆಯ ಒಡವೆಗಳನ್ನು ಮಾರಿ ಮಹೇಂದ್ರ ಕುಮಾರ್ ಮತ್ತಿತರರನ್ನು ಜೈಲಿನಿಂದ ಬಿಡುಗಡೆ ಮಾಡಿಸುತ್ತಾರೆ.

ಸಂಘ ಪರಿವಾರದವರು ಸಾಮಾನ್ಯವಾಗಿ ಮುಸ್ಲಿಮರು, ಕ್ರೈಸ್ತರ ವಿರುದ್ಧ ಶೂದ್ರ ಹುಡುಗರನ್ನು ಎತ್ತಿ ಕಟ್ಟುತ್ತಾರೆ. ಅದರ ಜೊತೆಗೆ ಕಮ್ಯುನಿಸ್ಟರ ಬಗ್ಗೆಯೂ ದ್ವೇಷ ಉಂಟಾಗುವಂತೆ ಮಾತನಾಡುತ್ತಾರೆ. ನಾನಂತೂ ಕಮ್ಯುನಿಸ್ಟ್ ಅಲ್ಲ. ನನಗೆ ಎಡಪಂಥ ಬಲಪಂಥಗಳ ನಡುವಿನ ವ್ಯತ್ಯಾಸ ಮುಖ್ಯವಲ್ಲ. ನಾನು ಅರ್ಥ ಮಾಡಿಕೊಂಡಂತೆ ಎಡಪಂಥೀಯರು ದೇವರು ಧರ್ಮ ಜಾತಿ ಮತ ಸಂಪ್ರದಾಯಗಳ ವಿರುದ್ಧ ಮಾತನಾಡುತ್ತಾರೆ. ಬಡವರು, ದಮನಿತರು, ಶೋಷಿತರು ಹಾಗೂ ಅಸಹಾಯಕರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಬಲಪಂಥೀಯರು ಪುರೋಹಿತಶಾಹಿ ಹಾಗೂ ಶ್ರೀಮಂತರ ಪರವಾಗಿ ಇರುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ನಾನು ಈ ಎರಡೂ ಪಂಥಗಳ ಬಗ್ಗೆ ಅಷ್ಟೇನು  ಆಸಕ್ತಿ ಇಟ್ಟುಕೊಂಡಿಲ್ಲ. ಮಹಾಕವಿ ಕುವೆಂಪು ಹೇಳಿದ ಪತಿತೋದ್ಧರಣ ಪಂಥಕ್ಕೆ ನಾನು ಸೇರಿದ್ದೇನೆ. ಮಹೇಂದ್ರ ಕುಮಾರ್ ಅವರಂತಹ ಮುಗ್ಧ, ಹುಂಬ ಶೂದ್ರ ಹುಡುಗರ ತಲೆಯಲ್ಲಿ ಬ್ರಾಹ್ಮಣರು, ಕಮ್ಯುನಿಸ್ಟರ ವಿರುದ್ಧವಾದ ಒಂದು ಸುಳ್ಳು ಅಸಹನೆ ಹುಟ್ಟು ಹಾಕಿರುತ್ತಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟ ಸಮಿತಿಯ ಮೂಲಕ ಮಲೆನಾಡಿನ ಪ್ರಾಕೃತಿಕ ಸಂಪತ್ತನ್ನು ಕಾಪಾಡಲು ಎಡಪಂಥೀಯರು ಆ ಕಾಲದಲ್ಲಿ ಸಾಕಷ್ಟು ಹೋರಾಟಗಳನ್ನು ರೂಪಿಸುತ್ತಾರೆ. ಆ ಹೋರಾಟದಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಯು.ಆರ್‌ ಅನಂತಮೂರ್ತಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸ್ವತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಚಿಂತಕ ಪ್ರೊ. ಕೆ. ರಾಮದಾಸ್,  ಹೋರಾಟಗಾರರಾದ ಕಲ್ಕುಳಿ ವಿಠ್ಠಲ ಹೆಗಡೆ, ಸಿರಿಮನೆ ನಾಗರಾಜ್, ಕೆ.ಎಲ್. ಅಶೋಕ್, ಪತ್ರಕರ್ತೆ ಗೌರಿ ಲಂಕೇಶ್ ಮುಂತಾದವರು ಮುಂಚೂಣಿಯಲ್ಲಿ ಇರುತ್ತಾರೆ‌. ಇವರನ್ನೆಲ್ಲ ಎಡಪಂಥೀಯರು ಎಂದು ತಪ್ಪಾಗಿ ಭಾವಿಸಿ, ಅವರ ಸಭೆಯನ್ನು ಹಾಳು ಮಾಡಲು ಮಹೇಂದ್ರ ಹೋಗುತ್ತಾರೆ. ಹೋರಾಟಗಾರ ಕೆ.ಎಲ್. ಅಶೋಕ್, ಭಜರಂಗಿ ಮಹೇಂದ್ರ ವಿರುದ್ಧ ಅಲ್ಲಿ ಸಮಾವೇಶಗೊಂಡಿದ್ದ ಆದಿವಾಸಿ ಮಹಿಳೆಯರನ್ನು ನಿಲ್ಲಿಸುತ್ತಾರೆ. ಆ ಮಹಿಳೆಯರು ಮಹೇಂದ್ರರ ಕಪಾಳಕ್ಕೆ ಹೊಡೆದು ವಾಪಸ್ ಕಳಿಸುತ್ತಾರೆ. ಪರಿವರ್ತಿತ ಜೀವನದ ಅಂತ್ಯ ಕಾಲದಲ್ಲಿ ಮಹೇಂದ್ರ ಕುಮಾರ್ ಈ ಕಮ್ಯುನಿಸ್ಟರ ಹೋರಾಟದ ಕಾರಣದಿಂದಾಗಿಯೇ ಮಲೆನಾಡು ಈಗ ಸುರಕ್ಷಿತವಾಗಿದೆ ಎನ್ನುವ ಅಭಿಮಾನದ ಮಾತುಗಳನ್ನು ಆಡುತ್ತಾರೆ.

ಇದನ್ನು ಓದಿದ್ದೀರಾ?: ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

ಹಿಂದುತ್ವದ ಭ್ರಮೆ ಹಾಗೂ ಬ್ರಾಹ್ಮಣರು ಸೃಷ್ಟಿಸುತ್ತಿದ್ದ ಸುಳ್ಳುಗಳ ಬಲೆಗೆ ಬಿದ್ದ ಪೊಳಲಿ ಅನಂತು ಎನ್ನುವ ಯುವಕನ ಬದುಕು ಹೇಗೆ ಸರ್ವನಾಶವಾಯಿತು ಎಂಬುದನ್ನು ಕೃತಿಯಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ಟರಂತಹ ವೈದಿಕರು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ ರೌಡಿಗಳನ್ನಾಗಿ ಮಾಡಬಲ್ಲರು. ರಾಜಕಾರಣಿಗಳನ್ನಾಗಿ ಮಾಡಬಲ್ಲರು. ಕೊಲ್ಲಬಲ್ಲರು‌ ಹಾಗು ಕೊಲ್ಲಿಸಬಲ್ಲರು ಎನ್ನುವ ಸತ್ಯ ಇಲ್ಲಿ ಅಸ್ಪಷ್ಟವಾಗಿ ನಿರೂಪಣೆಗೊಂಡಿದೆ.

ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಅವರ ಗಮನಕ್ಕೆ ಬರದಂತೆ ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಲಾಗುತ್ತದೆ. ದಾಳಿಗಳ ತರುವಾಯ ಅದನ್ನು ಸಮರ್ಥನೆ ಮಾಡಿಕೊಳ್ಳಲು ಮಹೇಂದ್ರ ಕುಮಾರ್ ಅವರನ್ನು ಸಾರ್ವಜನಿಕರ ಮುಂದೆ ನಿಲ್ಲಿಸುವ ತಂತ್ರವನ್ನು ಹೆಣೆಯಲಾಗಿರುತ್ತದೆ. ಈ ದಾಳಿಗಳ ಹಿಂದೆ ಇದ್ದ ಕಲ್ಲಡ್ಕ ಪ್ರಭಾಕರ್ ಮತ್ತು ಪುರಾಣಿಕ್ ಎನ್ನುವ ವೈದಿಕರು ಮಹೇಂದ್ರ ಕುಮಾರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಅವರು ನಡೆಸಿದ ಸಂಚಿಗೆ ಬಲಿಯಾಗಿ ಮಹೇಂದ್ರ ಜೈಲು ಪಾಲಾಗುತ್ತಾರೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಮಹೇಂದ್ರರಿಗೆ ಬಿಜೆಪಿ ಸರ್ಕಾರ ತನ್ನನ್ನು ಕಾಪಾಡುತ್ತದೆ ಎನ್ನುವ ಹುಂಬ ಧೈರ್ಯ ಇರುತ್ತದೆ. ಗೃಹ ಸಚಿವರಾಗಿದ್ದ ಡಾ. ವಿ.ಎಸ್. ಆಚಾರ್ಯ ತಮ್ಮ ಅಧಿಕಾರವನ್ನು ಕಾಪಾಡಿಕೊಳ್ಳಲು ಮಹೇಂದ್ರರನ್ನು ಬಲಿಪಶು ಮಾಡುತ್ತಾರೆ.

ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ ಪಡೆದು ಜೀವನ ಮಾಡುವ ಯಾವುದೇ ಸರ್ಕಾರಿ ನೌಕರನಾಗಲಿ, ಪೊಲೀಸರಾಗಲಿ ಪಕ್ಷಪಾತಕ್ಕೆ ಒಳಗಾಗಬಾರದು. ಆದರೆ ಆ ಕಾಲದ ಕರಾವಳಿ ಜಿಲ್ಲೆಗಳಲ್ಲಿ ಇದ್ದ ಪೊಲೀಸರು ಸಂಪೂರ್ಣ ಕೇಸರಿಮಯ ಆಗಿರುತ್ತಾರೆ. ಭಜರಂಗ ದಳದ ಹುಡುಗರ ಹೆಸರಿನಲ್ಲಿ ಪೊಲೀಸರೇ ಚರ್ಚುಗಳ ಮೇಲೆ ದಾಳಿ ಮಾಡುತ್ತಾರೆ. ಎಂ.ಕೆ. ಗಣಪತಿ ಎನ್ನುವ ಪೊಲೀಸ್ ಇನ್ಸ್‌ಪೆಕ್ಟರ್ ನಡೆಸಿದ ದುಷ್ಕೃತ್ಯಗಳನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ತಾಯ ಮೊಲೆ ಹಾಲು ನಂಜಾಗಿ ಕೊಲ್ಲುವಂತೆ ಪೊಲೀಸರ ಈ ಕೃತ್ಯ ನಮ್ಮಂತಹ ಓದುಗರನ್ನು ದಂಗುಬಡಿಸುತ್ತದೆ. ಕಾಪಾಡಬೇಕಾದವರೇ ಕೊಲ್ಲುವ ರಕ್ಕಸರಾಗುವುದು ನಿಜಕ್ಕೂ ದುರಂತ.

ಭಜರಂಗ ದಳ, ಶ್ರೀರಾಮ ಸೇನೆ ಮುಂತಾದ ಬಲಪಂಥೀಯ ಸಂಘಟನೆಗಳಲ್ಲಿ ತನು ಮನ ಧನಗಳನ್ನು ತ್ಯಾಗ ಮಾಡಿ ತೊಡಗಿಸಿಕೊಂಡ ಶೂದ್ರ ಹುಡುಗರ ಪೆದ್ದುತನ ಹಾಗೂ ಬ್ರಾಹ್ಮಣರ ಬುದ್ದಿವಂತಿಕೆಯ ಬಗೆಗೆ ಮಹೇಂದ್ರ ಇಲ್ಲಿ ನೇರವಾಗಿ ಮಾತನಾಡುತ್ತಾರೆ. ಬ್ರಾಹ್ಮಣರು ಅಜೆಂಡಾವನ್ನು ಫಿಕ್ಸ್ ಮಾಡುತ್ತಾರೆ. ಅವರ ಅಜೆಂಡಾದ ಮರ್ಮ ಅರಿಯದ ಭಜರಂಗ ದಳದ ಶೂದ್ರ ಹುಡುಗರು ಅದನ್ನು ಜಾರಿ ಮಾಡುತ್ತಾರೆ ಎನ್ನುವುದನ್ನು ಸತ್ಯದರ್ಶಿನಿ ಎನ್ನುವ ಪುಸ್ತಕದ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಇಂತಹ ಹಲವು ಸತ್ಯ ಸಂಗತಿಗಳನ್ನು ನೀವೇ ನೇರವಾಗಿ ಓದಿ ತಿಳಿದುಕೊಳ್ಳಬೇಕು. ನಮ್ಮ ದೇಶದ ಪ್ರಜಾಪ್ರಭುತ್ವ, ಸಂವಿಧಾನಗಳನ್ನು ಕಾಪಾಡಲು ಮುಂದಾಗಬೇಕು. ಬ್ರಾಹ್ಮಣ್ಯದ ಕುತಂತ್ರಗಳಿಗೆ ನಮ್ಮ ತಾತ ಮುತ್ತಾತಂದಿರಂತೆ ಬಲಿಯಾಗಬಾರದು.

ಮಹೇಂದ್ರರ ಸಾವು ತೀರಾ ಅನಿರೀಕ್ಷಿತ. ಅವರು ಈಗಲೂ ಬದುಕಿರಬೇಕಾಗಿತ್ತು ಎಂದು ಅಂದುಕೊಳ್ಳುತ್ತೇವೆ. ಅದು ಸಾಧ್ಯವಿಲ್ಲ ಎಂಬ ವಾಸ್ತವವೂ ನಮಗೆ ಗೊತ್ತಿದೆ. ಮಹೇಂದ್ರ ಕುಮಾರ್ ಅವರನ್ನು ನಮ್ಮ ದಲಿತ, ಶೂದ್ರ ಹುಡುಗರ ಮನಸ್ಸಿನಲ್ಲಿ ಮತ್ತೆ ಜೀವಂತವಾಗಿ ಸೃಷ್ಟಿಸಲು ಸಾಧ್ಯವಿದೆ. ಅದಕ್ಕೆ ಈ ಪುಸ್ತಕ ಸಂಪೂರ್ಣ ಪೋಷಕಾಂಶಗಳನ್ನು ನೀಡುತ್ತದೆ. ತುಂಬಾ ಅರ್ಥಪೂರ್ಣವಾಗಿ ಈ ಪುಸ್ತಕವನ್ನು ರಚಿಸಿದ ನವೀನ್ ಸೂರಿಂಜೆ ಹಾಗು ಪ್ರಕಟಿಸಿದ ಬಸವರಾಜ ಸೂಳಿಬಾವಿ ಅವರಿಗೆ ಕೃತಜ್ಞತೆಗಳು.

-ಎಲ್.ಎನ್. ಮುಕುಂದರಾಜ್

(ಪುಸ್ತಕಕ್ಕಾಗಿ: 9480286844, ಲಡಾಯಿ ಪ್ರಕಾಶನ)

LEAVE A REPLY

Please enter your comment!
Please enter your name here