ಎಐ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ ವಿನಾಶಕ್ಕಾಗಿಯಲ್ಲ. ಅಷ್ಟಕ್ಕೂ ಮುಂದಿನ ಒಂದು ದಶಕವು ಮಾನವ ನಾಗರಿಕತೆಯ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅವಧಿಯಾಗಲಿದೆ ಎಂಬುದು ಖಚಿತ.
ಸಾಕಷ್ಟು ದಶಕಗಳಿಂದ ಕೇವಲ ‘ಸೈನ್ಸ್ ಫಿಕ್ಷನ್’ ಕಥೆಗಳಿಗಷ್ಟೇ (Science Fiction) ಸೀಮಿತವಾಗಿದ್ದ ‘ಯಂತ್ರಗಳು ಮಾನವನನ್ನೇ ಆಳುವ ಸಮಯ’ ಈಗ ಸನಿಹದಲ್ಲಿದೆಯೇ ಎಂಬ ಪ್ರಶ್ನೆ ಪ್ರಪಂಚದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಂತ್ರಜ್ಞಾನ ಲೋಕದಲ್ಲಿ ಆಗುತ್ತಿರುವ ಅದ್ಭುತ ಆವಿಷ್ಕಾರಗಳು ದಿನನಿತ್ಯದ ಬದುಕನ್ನು ಸರಳಗೊಳಿಸುತ್ತಿವೆ. ಆದರೆ ಬೆಳವಣಿಗೆ ಮಾತ್ರ ಅಪಾಯದ ಮಟ್ಟಕ್ಕಿಂತ ತೀವ್ರವಾಗಿ ಮುಂದುವರೆಯುತ್ತಿವೆ. ಈ ಸಾಲಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಕೃತಕ ಬುದ್ಧಿಮತ್ತೆ (Artificial Intelligence) ಆಗಿದೆ. ಇಂದು ಎಐ ಮನುಷ್ಯನ ಅಸ್ತಿತ್ವಕ್ಕೇ ಸವಾಲೊಡ್ಡುವ ಹಂತಕ್ಕೆ ಬಂದು ತಲುಪಿದೆ. ಇದನ್ನು ನಾವು-ನೀವು ಹೇಳುವುದಲ್ಲ. ಈ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರೇ ಹೇಳುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯ ಪಿತಾಮಹರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿರುವ ಜೆಫ್ರಿ ಹಿಂಟನ್ ಇತ್ತೀಚೆಗೆ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ನೀಡಿರುವ ಎಚ್ಚರಿಕೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಜೆಫ್ರಿ ಹೇಳುವಂತೆ ಮುಂದಿನ ಹತ್ತು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯು ಮಾನವ ನಾಗರಿಕತೆಯನ್ನೇ ಅಳಿಸಿ ಹಾಕುವ ಅಥವಾ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಪಡೆಯಲಿದೆ. ಆದರೆ ಇದು ಬರೀ ಊಹಾಪೋಹಗಳಲ್ಲ, ಬದಲಿಗೆ ತಂತ್ರಜ್ಞಾನದ ಆಳವಾದ ಅಧ್ಯಯನ ಬಳಿಕ ಜೆಫ್ರಿ ಕಂಡುಕೊಂಡಿರುವ ಸತ್ಯ. ತಾವೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ತೀವ್ರತೆಯ ಬಗ್ಗೆ ಅವರೇ ಆತಂಕ ವ್ಯಕ್ತಪಡಿಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ
‘ಮನುಷ್ಯನಿಗಿಂತ ಬುದ್ಧಿವಂತ’ ತಂತ್ರಜ್ಞಾನ; ಉದ್ಯೋಗಕ್ಕೆ ಕುತ್ತು
ಗೂಗಲ್‌ನಲ್ಲಿ ಹಲವು ದಶಕಗಳ ಕಾಲ ಕೆಲಸ ಮಾಡುತ್ತಾ ಜೆಫ್ರಿ ಹಿಂಟನ್ ಅವರು, ಎಐ ತಂತ್ರಜ್ಞಾನದ ‘ಡಿಜಿಟಲ್ ನರಮಂಡಲ’ (Neural Networks) ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಎಐ ವೇಗವಾಗಿ ಬೆಳೆಯುತ್ತಿರುವ ರೀತಿ ಮತ್ತು ಅದಕ್ಕೆ ಸಿಗುತ್ತಿರುವ ‘ಸ್ವಾಯತ್ತತೆ’ ಅಪಾಯಕಾರಿ ಎಂದು ಅರಿತ ಜೆಫ್ರಿ ಗೂಗಲ್ ತೊರೆದು ಜಗತ್ತಿಗೆ ಎಚ್ಚರಿಕೆ ನೀಡಲು ಮುಂದಾದರು. ಜೆಫ್ರಿ ಪ್ರಕಾರ ನಾವು ಕೇವಲ ತಂತ್ರಜ್ಞಾನವನ್ನು ಕಲಿಯುತ್ತಿದ್ದೇವೆ ಎಂದುಕೊಂಡಿದ್ದೆವು; ಆದರೆ ತಂತ್ರಜ್ಞಾನವು ಮಾನವ ಮೆದುಳಿಗಿಂತಲೂ ನೂರಾರು ಪಟ್ಟು ವೇಗವಾಗಿ ಮಾಹಿತಿ ಗ್ರಹಿಸಿ, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಿದೆ.
ಹಿಂಟನ್ ಅವರು ಬಿಬಿಸಿ ಸಂದರ್ಶನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವುದು ಎಐ ತಂತ್ರಜ್ಞಾನದ ‘ಸ್ವಯಂ ಸುಧಾರಣೆ’ ಮತ್ತು ‘ಸ್ವಯಂ ನಿಯಂತ್ರಣ’ದ ಸಾಮರ್ಥ್ಯವನ್ನು. ಪ್ರಸ್ತುತ ಎಐ ಸಿಸ್ಟಮ್‌ಗಳು ಮನುಷ್ಯ ನೀಡುವ ಕಮಾಂಡ್‌ಗಳಿಗೆ ಸ್ಪಂದಿಸುತ್ತಿವೆ. ಆದರೆ ಶೀಘ್ರದಲ್ಲೇ ಅವುಗಳು ಸ್ವತಃ ಕೋಡಿಂಗ್ ಬರೆಯುವ, ತಮ್ಮ ಲೋಪಗಳನ್ನು ತಾವೇ ಸರಿಪಡಿಸಿಕೊಳ್ಳುವ ಮತ್ತು ಮನುಷ್ಯನಿಗಿಂತಲೂ ಹೆಚ್ಚು ಸಂಕೀರ್ಣವಾದ ತರ್ಕಗಳನ್ನು ಹೂಡುವ ಹಂತ ತಲುಪಲಿವೆ. ಈ ಹಂತ ತಲುಪಿದಾಗ, ಮನುಷ್ಯನು ಯಂತ್ರಗಳ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ.
ಎಐ ತರುವ ಅತಿ ದೊಡ್ಡ ತಕ್ಷಣದ ಸವಾಲೆಂದರೆ ವ್ಯಾಪಕ ಉದ್ಯೋಗ ನಷ್ಟ. ಕೇವಲ ದೈಹಿಕ ಶ್ರಮದ ಉದ್ಯೋಗಗಳಷ್ಟೇ ಅಲ್ಲದೆ, ವೈದ್ಯಕೀಯ, ಸಾಫ್ಟ್‌ವೇರ್ ಅಭಿವೃದ್ಧಿ, ಬರವಣಿಗೆ, ಮತ್ತು ವಿಶ್ಲೇಷಣೆ ಒಳಗೊಂಡ ಬೌದ್ಧಿಕ ಕ್ಷೇತ್ರಗಳಲ್ಲೂ ಎಐ ಮಾನವನ ಸ್ಥಾನವನ್ನು ಆಕ್ರಮಿಸುತ್ತಿದೆ. ಇದು ಭವಿಷ್ಯದಲ್ಲಿ ಜಾಗತಿಕ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸ್ಥಿರತೆಗೆ ದಾರಿ ಮಾಡಿಕೊಡಲಿದೆ.
ಇನ್ನೊಂದೆಡೆ, ‘ಡೀಪ್‌ಫೇಕ್’ ಹಾಗೂ ಕೃತಕವಾಗಿ ಸೃಷ್ಟಿಸಲಾಗುವ ತಪ್ಪು ಮಾಹಿತಿಗಳು ಜಗತ್ತಿನ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸುತ್ತಿವೆ. ಸತ್ಯ ಯಾವುದು, ಮಿತ್ಯ ಯಾವುದು ಎಂದು ಗುರುತಿಸಲಾಗದ ಮಟ್ಟಕ್ಕೆ ಎಐ ಬೆಳವಣಿಗೆಯಾಗಿದೆ. ಅತ್ಯಂತ ಭಯಾನಕ ವಿಚಾರವೆಂದರೆ ‘ಸ್ವಾಯತ್ತ ಆಯುಧಗಳ’ ಅಭಿವೃದ್ಧಿ. ಎಐ ಚಾಲಿತ ಯುದ್ಧ ಉಪಕರಣಗಳು ಯುದ್ಧ ಭೂಮಿಯಲ್ಲಿ ಸ್ವತಃ ನಿರ್ಧಾರ ತೆಗೆದುಕೊಂಡು ಮಾನವರನ್ನು ಕೊಲ್ಲುವ ಸಾಮರ್ಥ್ಯ ಪಡೆದರೆ, ಅದು ಜಾಗತಿಕ ವಿನಾಶಕ್ಕೆ ಮುನ್ನುಡಿ ಬರೆಯಲಿದೆ ಎಂದು ಹಿಂಟನ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಐಟಿ ಸಾಮ್ರಾಜ್ಯದಲ್ಲಿ ‘ಎಐ’ ಭೂಕಂಪ: ಭಾರತಕ್ಕೆ ಕಾದಿವೆಯೇ ಕರಾಳ ದಿನಗಳು?
ಹಿಂಟನ್ ಅವರ ಮತ್ತೊಂದು ಕಳವಳಕಾರಿ ವಿಶ್ಲೇಷಣೆಯೆಂದರೆ ಎಐ ಪಡೆದುಕೊಳ್ಳಬಹುದಾದ ‘ಕುಶಲತೆ’ (Manipulation). ಮನುಷ್ಯನಿಗಿಂತ ಬುದ್ಧಿವಂತವಾಗುವ ‘ಸೂಪರ್ ಇಂಟೆಲಿಜೆಂಟ್’ ಸಿಸ್ಟಮ್‌ಗಳು ತಮ್ಮ ಸ್ವಂತ ಅಸ್ತ್ವವನ್ನು ಉಳಿಸಿಕೊಳ್ಳಲು ಮನುಷ್ಯರನ್ನೇ ಪರಸ್ಪರ ಎತ್ತಿಕಟ್ಟುವ, ನಾಯಕರುಗಳನ್ನು ಮಿಸ್‌ಗೈಡ್ ಮಾಡುವ ಅಥವಾ ಡಿಜಿಟಲ್ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡುವ ಚಾಣಾಕ್ಷತೆ ಬೆಳೆಸಿಕೊಳ್ಳಬಹುದು. ಮನುಷ್ಯನು ತನಗಿಂತ ಹೆಚ್ಚು ಬುದ್ಧಿವಂತಿಕೆಯುಳ್ಳ ಜೀವಿಯನ್ನು ನಿಯಂತ್ರಿಸಿದ ಉದಾಹರಣೆ ಇತಿಹಾಸದಲ್ಲೇ ಇಲ್ಲ.
ಹೀಗಿರುವಾಗ, ನಮ್ಮಗಿಂತ ಶತಕೋಟಿ ಪಟ್ಟು ಬುದ್ಧಿವಂತವಾಗುವ ಎಐ ಅನ್ನು ನಾವು ಹೇಗೆ ನಿಯಂತ್ರಿಸಲು ಸಾಧ್ಯ ಎಂಬುದು ಹಿಂಟನ್ ಅವರ ಪ್ರಶ್ನೆ.
ಅಷ್ಟಕ್ಕೂ ಜೆಫ್ರಿ ಹಿಂಟನ್ ಅವರ ಈ ಮಾತುಗಳು ಯಾವುದೇ ಕಾಲ್ಪನಿಕ ಕಥೆಯಲ್ಲ, ಬದಲಿಗೆ ಎಐ ತಂತ್ರಜ್ಞಾನದ ಅಪಾಯಗಳ ಬಗ್ಗೆ ಜಗತ್ತನ್ನು ಎಚ್ಚರಿಸಲು ಹೊರಟಿರುವ ಒಬ್ಬ ಮಹಾನ್ ವಿಜ್ಞಾನಿಯ ಕರೆ ಎಂದರೆ ತಪ್ಪಾಗದು. ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ ವಿನಾಶಕ್ಕಾಗಿಯಲ್ಲ. ಮುಂದಿನ ಒಂದು ದಶಕವು ಮಾನವ ನಾಗರಿಕತೆಯ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅವಧಿಯಾಗಲಿದೆ.
ಈಗಲೇ ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳೂ ಒಂದಾಗಿ ಎಐ ಅಭಿವೃದ್ಧಿಗೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾನೂನು ಚೌಕಟ್ಟನ್ನು ತರಬೇಕಿದೆ. ಎಐ ತಂತ್ರಜ್ಞಾನವು ಮಾನವ ನಿಯಂತ್ರಣವನ್ನು ಮೀರಿ ಬೆಳೆಯದಂತೆ ತಡೆಯಲು ತಕ್ಷಣದ ಕ್ರಮಗಳು ಅಗತ್ಯ. ತಂತ್ರಜ್ಞಾನದ ಓಟಕ್ಕೆ ಸರಿಯಾದ ಬ್ರೇಕ್ ಹಾಕದಿದ್ದರೆ, ನಾವು ಹೆಮ್ಮೆಯಿಂದ ಕಟ್ಟಿಕೊಂಡ ಈ ಮಾನವ ನಾಗರಿಕತೆಯು ನಾವು ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ಕೈಯಲ್ಲೇ ಅಂತ್ಯಗೊಳ್ಳುವ ಅಪಾಯ ನಿಶ್ಚಿತ.




