ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ ದುಷ್ಪರಿಣಾಮಗಳ ಕುರಿತೂ ಯುವಜನರು ಜಾಗೃತರಾಗುವುದು ಅತ್ಯಗತ್ಯ. ಇದಕ್ಕಾಗಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಯುವಕರಲ್ಲಿ ಸ್ವತಂತ್ರ ಚಿಂತನೆ ಹಾಗೂ ಆಳವಾದ ಅಧ್ಯಯನ ಪ್ರವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಬೇಕಿದೆ.
ಇಂದು ನಮ್ಮ ಬದುಕಿನ ಪ್ರತಿಯೊಂದು ಭಾಗದಲ್ಲೂ ಕೃತಕ ಬುದ್ಧಿಮತ್ತೆ (Artificial Intelligence – AI) ಪ್ರಭಾವವಿದೆ. ಶಿಕ್ಷಣ, ವೈದ್ಯಕೀಯ, ಉದ್ದಿಮೆ ಹಾಗೂ ದಿನನಿತ್ಯದ ಸರಳ ಕೆಲಸಗಳಿಗೂ ಎಐ ತಂತ್ರಜ್ಞಾನವನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನ ನಮಗೆಷ್ಟು ಸೌಲಭ್ಯಗಳನ್ನು ನೀಡಿದೆಯೋ ಅದರೊಂದಿಗೆ ನಮ್ಮಿಂದ ಅಪಾರ ಅಮೂಲ್ಯವಾದ ಆಲೋಚನಾ, ಚಿಂತನಾ ಶಕ್ತಿಯನ್ನೇ ಕಸಿದುಕೊಳ್ಳುತ್ತಿದೆ. ಅದರಲ್ಲೂ ವಿಶೇಷವಾಗಿ ಯುವಜನರ ಬೌದ್ಧಿಕ ಸಾಮರ್ಥ್ಯದ ಮೇಲೆ ಎಐ ಬೀರುತ್ತಿರುವ ಪ್ರಭಾವವು ಹಲವು ತಜ್ಞರನ್ನು ಕಂಗಾಲಾಗಿಸಿದೆ.
ಅಮೆರಿಕದ ಪ್ರಸಿದ್ಧ ಮಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಕೈಗೊಂಡಿರುವ ಸಂಶೋಧನೆ ಹಾಗೂ ಅಧ್ಯಯನ ವರದಿಗಳಲ್ಲಿ ಎಐ ಬಳಕೆಯಿಂದ ಯುವಜನರ ಬೌದ್ಧಿಕ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಆತಂಕಕಾರಿ ಅಂಶಗಳು ಹೊರಬಂದಿವೆ. ಸ್ವತಃ ಆಲೋಚನೆ ಮಾಡುವ, ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಹೊಸ ಕಲ್ಪನೆಗಳನ್ನು ಹುಟ್ಟುಹಾಕುವ ಮಾನವನ ನೈಸರ್ಗಿಕ ಪ್ರಕ್ರಿಯೆಯನ್ನು ಯಂತ್ರಗಳಿಗೆ ವಹಿಸಿಕೊಟ್ಟ ಈ ಎಐ ಕ್ರಾಂತಿಯ ಹಿಂದಿನ ಕರಾಳ ಮುಖವನ್ನು ಈ ಅಧ್ಯಯನ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಉದ್ಯೋಗಕ್ಕೂ ಕುತ್ತು, ಘನತೆಗೂ ಪೆಟ್ಟು: ಎಐ ತಂತ್ರಜ್ಞಾನದಲ್ಲಿ ಮಹಿಳೆಯರೇ ಬಲಿಪಶು
This video cannot be played in your browser. Open the video directly
ಈ ಅಧ್ಯಯನ ವರದಿ ಪ್ರಕಾರ ಇಂದಿನ ಯುವ ಪೀಳಿಗೆಯು ತಮ್ಮ ದೈನಂದಿನ ನಿರ್ಧಾರಗಳು, ಲೇಖನ, ಕವನಗಳು, ಇತರೆ ಬರಹಗಳು, ಗಣಿತದ ಸಮಸ್ಯೆಗಳು ಹಾಗೂ ಸೃಜನಶೀಲ ಚಿಂತನೆಗಳಿಗಾಗಿ ಸಂಪೂರ್ಣವಾಗಿ ಎಐ ಪರಿಕರಗಳನ್ನೇ ಅವಲಂಬಿಸುತ್ತಿದ್ದಾರೆ. ಈ ಅತಿಯಾದ ಅವಲಂಬನೆ ಅಪಾಯಕಾರಿ ಹಂತಕ್ಕೆ ತಲುಪಿದೆ. ಎಷ್ಟು ಭಯಾನಕವೆಂದರೆ ಇಂದಿನ ಯುವಜನರಲ್ಲಿ ಸ್ವತಂತ್ರ ಆಲೋಚನಾ ಶಕ್ತಿಯೇ ಕುಸಿಯುತ್ತಿದೆ.
ಅಷ್ಟು ಮಾತ್ರವಲ್ಲದೆ ನಾನು ಓದಿದ ಮಾಹಿತಿ ಸತ್ಯವೇ, ಮಿಥ್ಯವೇ ಎಂಬ ಆಲೋಚನೆಯನ್ನೂ ಮಾಡದೆ ಪ್ರತಿಯೊಂದಕ್ಕೂ ಎಐ ನೀಡುವ ಉತ್ತರಗಳನ್ನೇ ನಂಬುತ್ತಿದ್ದಾರೆ ಇಂದಿನ ಯುವಜನರು. ಎಐ ನೀಡಿದ ಉತ್ತರ ಸತ್ಯವಾಗಿದೆಯೇ ಎಂಬುದನ್ನು ಸ್ವತಃ ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನೂ ಯುವಜನರು ಕಳೆದುಕೊಳ್ಳುತ್ತಿದ್ದಾರೆ. ಅಂದರೆ ‘ಕ್ರಿಟಿಕಲ್ ಥಿಂಕಿಂಗ್’ (Critical Thinking) ಕ್ಷೀಣಿಸುತ್ತಿದೆ. ಎಐನ ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ ಎನ್ನುತ್ತದೆ ಎಂಐಟಿ ಅಧ್ಯಯನ ವರದಿ.
ವರದಿ ಪ್ರಕಾರ ಯುವಜನರು ಬರವಣಿಗೆ, ಕಲೆ, ಮತ್ತು ವಿನ್ಯಾಸದಂತಹ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಎಐ ಮೇಲೆ ಅವಲಂಬಿತವಾಗುತ್ತಿದ್ದಾರೆ. ಇದರಿಂದಾಗಿ ಮಾನವನ ನೈಸರ್ಗಿಕ ಕಲ್ಪನಾಶಕ್ತಿ ಮತ್ತು ಹೊಸತನ ಮರೆಯಾಗುತ್ತಿದೆ. ಅದಕ್ಕೂ ಮುಖ್ಯವಾಗಿ ಮಾಹಿತಿ ಸುಲಭವಾಗಿ ಸಿಗುವುದರಿಂದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಅಥವಾ ದೀರ್ಘಾವಧಿ ಗಮನವಿಟ್ಟು ಅಧ್ಯಯನ ಮಾಡುವ ಸಾಮರ್ಥ್ಯ ಯುವಜನರಲ್ಲಿ ಕಡಿಮೆಯಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಆಲೋಚನೆ ಮಾಡುವ ಪ್ರಕ್ರಿಯೆಯನ್ನೇ ತಂತ್ರಜ್ಞಾನಕ್ಕೆ ಯುವಜನರು ಸೇರಿದಂತೆ ಎಲ್ಲರೂ ಒಪ್ಪಿಸಿದ್ದಾರೆ. ಇದರಿಂದಾಗಿ ಮಾನವ ಸಮಾಜವು ತಂತ್ರಜ್ಞಾನದ ಗುಲಾಮನಾಗುವ ಅಪಾಯವಿದೆ ಎಂಬುದನ್ನು ನಾವು ಅಲ್ಲಗಳೆಯಲಾಗದು.
ಮಾನವ ಜನಾಂಗದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಿತೇ ಎಐ?
ಇಂತಹ ಅಧ್ಯಯನ ವರದಿಗಳು ಬಿಡುಗಡೆಯಾಗುತ್ತಿರುವ ನಡುವೆಯೇ ಸೂಪರ್ ಇಂಟೆಲಿಜೆಂಟ್ ಎಐ (Superintelligent AI) ವ್ಯವಸ್ಥೆಗಳು ಮುಂದೆ ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗಬಹುದು ಎಂದು ಹಲವು ಕಂಪ್ಯೂಟರ್ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ನಾಯಕರು ಆಗಾಗೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿಂದೆ ‘ಸೆಂಟರ್ ಫಾರ್ ಎಐ ಸೇಫ್ಟಿ’ ಹೊರಡಿಸಿದ ಜಾಗತಿಕ ಹೇಳಿಕೆಯಲ್ಲಿ, ಎಐ ತಂತ್ರಜ್ಞಾನದಿಂದ ಉಂಟಾಗಬಹುದಾದ ವಿನಾಶದ ಅಪಾಯವನ್ನು ಸಾಂಕ್ರಾಮಿಕ ರೋಗಗಳು ಅಥವಾ ಪರಮಾಣು ಯುದ್ಧಗಳಿಗೆ ಹೋಲಿಸಲಾಗಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಎಐ ಬಳಸಿ ಸೈಬರ್ ದಾಳಿ: ಅಪಾಯದತ್ತ ಸಾಗುತ್ತಿರುವ ಜಗತ್ತು
ಹೀಗೆ ಪ್ರಸ್ತುತ ಪರಿಸ್ಥಿತಿಯನ್ನು ನಾವು ಗಮನಿಸಿದಾಗ ಸಹಕಾರಿ ಪರಿಕರವಾಗಿ ಬಳಕೆಯಾಗಬೇಕಾದ ತಂತ್ರಜ್ಞಾನ ಇಂದು ಮಾನವನ ಬೌದ್ಧಿಕ ಸ್ಥಾನವನ್ನು ತುಂಬುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಎಐ ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ನಾವು ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಾಧ್ಯ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ ದುಷ್ಪರಿಣಾಮಗಳ ಕುರಿತೂ ಯುವಜನರು ಜಾಗೃತರಾಗುವುದು ಅತ್ಯಗತ್ಯ. ಇದಕ್ಕಾಗಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಯುವಕರಲ್ಲಿ ಸ್ವತಂತ್ರ ಚಿಂತನೆ ಹಾಗೂ ಆಳವಾದ ಅಧ್ಯಯನ ಪ್ರವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಬೇಕಿದೆ.
ಒಟ್ಟಾರೆಯಾಗಿ ಎಐ ಮಾನವಕುಲಕ್ಕೆ ಶಾಪವಾಗಬೇಕೇ ಅಥವಾ ವರವಾಗಬೇಕೇ ಎಂಬುದು ನಾವು ಅದನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದರ ಮೇಲೆ ನಿರ್ಧರಿತ, ಆಧಾರಿತ. ಎಐ ತಂತ್ರಜ್ಞಾನದ ಬಳಕೆಯೊಂದಿಗೆ ನಮ್ಮ ಸೃಜನಶೀಲತೆ, ಆಲೋಚನಾ ಶಕ್ತಿ ತುಂಬಿದರೆ ಮಾತ್ರ ಬಳಕೆ ಸಹಾಯಕಾರಿ. ಇಲ್ಲವಾದರೆ ನಾವು ಬೌದ್ಧಿಕವಾಗಿ ಶೂನ್ಯಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಎಐ ತಂತ್ರಜ್ಞಾನಕ್ಕೆ ಸೂಕ್ತ ನಿಯಂತ್ರಣ ಚೌಕಟ್ಟು ರೂಪಿಸುವುದು, ಮಾನವನ ನೈಸರ್ಗಿಕ ಬುದ್ಧಿಮತ್ತೆಯನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




