ಮಹಾರಾಷ್ಟ್ರದಲ್ಲಿ ತಾನು ಶಿವನ ಅವತಾರ ಎಂದು ಹೇಳಿಕೊಂಡ ನಕಲಿ ದೇವಮಾನವ ಬಾಬಾ ಹೃಷಿಕೇಶ್ ವೈದ್ಯ ಎಂಬಾತನನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ವಾರ ಮಾಜಿ ಮರ್ಚಂಟ್ ನೇವಿ ಅಧಿಕಾರಿ ಅಶೋಕ್ ಖರಾತ್‌ನನ್ನು ಬಂಧಿಸಲಾಗಿದೆ. ದೇಶದಲ್ಲಿ ಇಂತಹ ಹಲವರು ಆಧ್ಯಾತ್ಮ, ದೇವರ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ದೇವರು, ಧರ್ಮ, ಆಧ್ಯಾತ್ಮದ ಹೆಸರಿನಲ್ಲಿ ಈ ದೇಶದಲ್ಲಿ ನಡೆದ, ನಡೆಯುತ್ತಿರುವ ಅನಾಚಾರಗಳಿಗೆ ಲೆಕ್ಕವೇ ಇಲ್ಲ. ಮಠಗಳನ್ನು ಕಟ್ಟಿ ಲೋಕೋದ್ಧಾರ ಮಾಡುವ ವೇಷ ತೊಟ್ಟ ಬ್ರಹ್ಮಚರ್ಯದ ಸೋಗಿನಲ್ಲಿರುವ ನಕಲಿ ದೇವಮಾನವರು ಎಸಗಿದ ಅತ್ಯಾಚಾರಗಳ ಸಾಲು ಸಾಲು ಪ್ರಕರಣಗಳು ಬೆಳಕಿಗೆ ಬಂದು ಹಾಗೇ ಇತಿಹಾಸದ ಹಾಳೆ ಸೇರಿವೆ.
ಒಂದೇ ವಾರದಲ್ಲಿ ಮಹಾರಾಷ್ಟ್ರದಲ್ಲಿ ಎರಡು ಪ್ರಕರಣ ವರದಿಯಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲೊಬ್ಬ ಬಾಬಾ ತಾನು ಶಿವನ ಅವತಾರ ಎಂದು ಹೇಳಿಕೊಂಡು ಹೀನ ಕೃತ್ಯದಲ್ಲಿ ತೊಡಗಿಕೊಂಡಿದ್ದ. ಹೃಷಿಕೇಶ್ ವೈದ್ಯ ಎಂಬ ಸ್ವಯಂಘೋಷಿತ ದೇವಮಾನವ “ನಾನು ಶಿವನ ಅವತಾರ, ನೀನು ನನ್ನ ಪಾರ್ವತಿ” ಎಂದು ಹೇಳಿಕೊಂಡು 35 ವರ್ಷದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತ ದೂರುದಾರೆಯು ಮಾಣಿಕ್‌ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಆ ನಂತರ ಮಂಜರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. “ತಾನು ಸಾಕ್ಷಾತ್ ಶಿವನ ಅವತಾರ, ನೀನು ನನ್ನ ಪಾರ್ವತಿ” ಎಂದು ನಂಬಿಸಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂದು ಆಥನ ಬಂಧನವಾಗಿದೆ.
ಇದನ್ನು ಓದಿದ್ದೀರಾ ಮಹಾರಾಷ್ಟ್ರ | ‘ಶಿವನ ಅವತಾರ’ ಎಂದು ಹೇಳಿ ಅತ್ಯಾಚಾರ ಮಾಡಿದ್ದ ‘ದೇವಮಾನವ’ನ ಬಂಧನ
ಆಧ್ಯಾತ್ಮಿಕ ಬೋಧನೆಗಳ ಮೂಲಕ ಮಹಿಳೆಗೆ ಹತ್ತಿರವಾದ ಈತ 2023ರಲ್ಲಿ ಮಹಿಳೆಯನ್ನು ಪುಣೆಯ ಮಂಜರಿ ಪ್ರದೇಶದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಮೊದಲ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಸಮಯದಲ್ಲಿ ತೆಗೆದ ಫೋಟೋಗಳನ್ನು ಉಪಯೋಗಿಸಿಕೊಂಡು ನಿರಂತರ ಬ್ಲಾಕ್‌ಮೇಲ್ ಮಾಡುತ್ತಿದ್ದ. ಬಳಿಕ 2025 ರಲ್ಲಿ ವಸೈನಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನೌಕಾಪಡೆಯ ಮಾಜಿ ಅಧಿಕಾರಿ ಅಶೋಕ್ ಖರಾತ್ ಪ್ರಕರಣ: ಮಾಜಿ ಮರ್ಚಂಟ್ ನೇವಿ ಅಧಿಕಾರಿ ಅಶೋಕ್ ಖರಾತ್ ತಾನು ದೇವಮಾನವ ಎಂದು ಘೋಷಿಸಿಕೊಂಡು ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ. 55 ಕ್ಕೂ ಹೆಚ್ಚು ಅಸಭ್ಯ ವಿಡಿಯೊಗಳು ಈತನ ಬಳಿ ಇದ್ದವು. ಶಿರಡಿಯ ಯುವತಿಗೆ ಆಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ ಮಾರ್ಚ್ 18ರಂದು ಮಹಾರಾಷ್ಟ್ರ ಪೊಲೀಸರು ಈ ಡೋಂಗಿ ಬಾಬನನ್ನು ಬಂಧಿಸಿದ್ದಾರೆ.
ತನ್ನ ದೈವಿಕ ಶಕ್ತಿಗಳನ್ನು ಬಳಸಿಕೊಂಡು ಯುವತಿಯ ತಂದೆ ತಾಯಿಯನ್ನು ಕೊಲ್ಲುವುದಾಗಿ ಹೆದರಿಸಿದ ಬಾಬ ಖತಾರ್ ಜುಲೈ ಮತ್ತು ಡಿಸೆಂಬರ್‌ನಲ್ಲಿ ಹಲವಾರು ಬಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಶೋಕ್ ಖರಾತ್ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಅತ್ಯಾಚಾರಿ ಬಾಬನ ಸಂಪೂರ್ಣ ಹಿನ್ನೆಲೆ ಹಾಗೂ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದರು. ಭಾರತದಲ್ಲಿ ಇಂತಹ ದೇವಮಾನವರು ನಡೆಸಿದ ಪೈಶಾಚಿಕ ಕೃತ್ಯಗಳ ಪಟ್ಟಿ ಬಹಳ ದೊಡ್ಡದಿದೆ
ಆಸಾರಾಮ್ ಬಾಪು ಎಂಬ ಕಳ್ಳ ಬಾಬ: ಭಾರತ ಅಷ್ಟೇ ಅಲ್ಲ ಜಗತ್ತಿನ ಹಲವೆಡೆ ಪ್ರಚಾರ ಪಡೆದಿದ್ದ, ಪ್ರಪಂಚದ ಹಲವೆಡೆ 400 ಆಶ್ರಮಗಳನ್ನು ತೆರೆದಿದ್ದ ಈತ ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಿದ್ದನಂತೆ. 2013ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ನಂತರ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
77 ವರ್ಷದ ಮುದುಕ ಆಸಾರಾಮ್ ಬಾಪು ಜೋಧ್‌ಪುರದ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ. ಈತನ ಮೇಲೆ ಇನ್ನಿತರ ಅತ್ಯಾಚಾರ ಪ್ರಕರಣಗಳು ಕೇಳಿ ಬಂದವು. ಆ ಸಮಯದಲ್ಲಿ ಅಪಾರ ಭಕ್ತ ಅನುಯಾಯಿಗಳನ್ನು ಹೊಂದಿದ್ದರಿಂದ ಜೋಧ್‌ಪುರದಲ್ಲಿ ಹಿಂಸಾಚಾರ ನಡೆವ ಭೀತಿ ಮನೆ ಮಾಡಿತ್ತು. ಬಿಬಿಸಿ ವರದಿಯ ಪ್ರಕಾರ ಅಂದು ಜೋಧ್‌ಪುರ ಸುತ್ತಮುತ್ತ ಯಾವುದೇ ಹಿಂಸೆಗಳು ಈ ಭಕ್ತರಿಂದ ನಡೆಯದಂತೆ ತಡೆಯಲು ಕಠಿಣ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಾಬಾನ ಸಹಚರರಿಗೂ 20 ವರ್ಷದ ಸಜೆ ವಿಧಿಸಿತ್ತು ಕೋರ್ಟ್.
2002 ಹಾಗೂ 2004ರ ಅವಧಿಯಲ್ಲಿ ಗುಜರಾತ್‌ನ ಸೂರತ್ ಮಹಿಳೆಯಿಂದ ಬಾಪು ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈತ ಎಷ್ಟು ಪ್ರಭಾವಶಾಲಿಯಾಗಿದ್ದ ಎಂಬುದಕ್ಕೆ ಸಾಕ್ಷಿ ಈತನ ಭಕ್ತವೃಂದ. ಡೆಬ್‌ಸೈಟ್‌ನಲ್ಲಿ 40 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದ ಆಸಾರಾಮ್ ಬಾಪು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಪಾಸ್ತಿ ಹೊಂದಿದ್ದ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಈತನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈತ ಸಾಮಾನ್ಯ ಸ್ವಾಮೀಜಿಯಾಗಿರಲಿಲ್ಲ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದವರ ಮೇಲೆ ರೊಚ್ಚಿಗೆದ್ದ ಈತ ಎರಡು ಪ್ರಕರಣಗಳ ಒಟ್ಟು 9 ಸಾಕ್ಷಿಗಳ ಮೇಲೆ ಹಲ್ಲೆ ನಡೆಸಿದ್ದ. ಮೂವರ ಜೀವ ತೆಗೆದಿದ್ದ.
ಗುರ್ಮಿತ್ ರಾಮ್ ರಹೀಂ ಸಿಂಗ್ ಪ್ರಕರಣ: ಪಂಜಾಬ್ ಹರಿಯಾಣದಲ್ಲಿ ನಡೆದ ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆಗೆ ತಕ್ಕುದಾದ ಪ್ರಕರಣ ಇದು. 2002 ರಲ್ಲಿ ಅನಾಮಧೇಯ ಯುವತಿಯೊಬ್ಬಳು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಪತ್ರ ಬರೆಯುತ್ತಾಳೆ. ಆಕೆ ಈ ಗುರು ರಾಮ್ ರಹೀಂ ಸಿಂಗ್‌ನ ಅನುಯಾಯಿ, ಆತನಿಂದ ಅತ್ಯಾಚಾರಕ್ಕೆ ಒಳಗಾಗಿ ದೂರು ನೀಡಿದ ಮೊದಲ ಪ್ರಕರಣ ಇದಾಗಿತ್ತು.
ಮಹಾರಾಜ್ ನನ್ನನ್ನು ತನ್ನ ಆಶ್ರಮದ ಕೋಣೆಗೆ ಕರೆದೊಯ್ದ, ಆತ ತನ್ನನ್ನು ಮನಸಾರೆ ಪ್ರೀತಿಸುತ್ತಿರುವುದಾಗಿ ಹೇಳಿದ. ತನ್ನನ್ನು ಪ್ರಣಯಿಸುವುದಾಗಿ ಹೇಳಿಕೊಂಡ, ತನ್ನ ಸೇವಕಿಯಾಗು ಎಂದು ಕೇಳಿಕೊಂಡ ಗುರುವಿಗೆ ತಾನು ತನ್ನ ತನು ಮನ ಧನವನ್ನು ಅರ್ಪಿಸಿದ್ದೆ. ನಿರಾಕರಿಸುವ ಮಾತನಾಡಿದರೆ ಆತ “ನಾನು ದೇವರು. ನಿನ್ನನ್ನು ಕೊಲ್ಲುತ್ತೇನೆ” ಎಂದು ಹೆದರಿಸಿದ. ಹೀಗೆ ಹೆದರಿಸಿ ನಿರಂತರವಾಗಿ ಈ ದೇವಮಾನವ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದನು.

ಆಕೆ ಬರೆದ ಪತ್ರ ಆಧರಿಸಿ ಸರ್ಕಾರ ನಡೆಸಿದ ತನಿಖೆಯಿಂದ ಇಂತಹ 40ರಿಂದ 50 ಪ್ರಕರಣಗಳು ಬೆಳಕಿಗೆ ಬಂದವು. ಸಿಬಿಐ ಪ್ರಕರಣ ಕೈಗೆತ್ತಿಕೊಂಡ ಮೇಲೂ ನ್ಯಾಯ ಸಿಗಲು 15 ವರ್ಷಗಳ ಸುಧೀರ್ಘ ಕಾಲ ಹಿಡಿಯಿತು. ಈ ಬಗ್ಗೆ ಸ್ಥಳೀಯ ಹರಿಯಾಣಿ ಪತ್ರಿಕೆಯಲ್ಲಿ ವರದಿ ಬರೆದ ರಾಮ್‌ಚಂದರ್ ಛತ್ರಪತಿ ಅವರ ಕೊಲೆ ಮಾಡಿಸಿದ್ದ. ಈತ ಎಷ್ಟು ನೀಚ ಕೊಲೆಗಡುಕ ಬಾಬ ಎಂಬುದಕ್ಕೆ ಇದೇ ಸಾಕ್ಷಿ. ಪೂರಾ ಸಚ್ ಎಂಬ ಪತ್ರಿಕೆಯು “ಸ್ವಾಮಿಯ ಅನೈತಿಕ ಕೃತ್ಯಗಳನ್ನು ಬಯಲಿಗೆಳೆದಿದ್ದಕ್ಕೆ ಪತ್ರಕರ್ತ ರಾಮ್‌ಚಂದರ್ ಕೊಲೆ ಮಾಡಲಾಗಿದೆ” ಎಂಬ ಆರೋಪ ಮಾಡಿತ್ತು.
2017ರಲ್ಲಿ ಪಂಜಾಬ್ ಹರಿಯಾಣ ಕೋರ್ಟ್ 20 ವರ್ಷ ಸೆರೆವಾಸ ಶಿಕ್ಷೆ ವಿಧಿಸಿತು. ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇಂತಹ ಹೀನ ಕೃತ್ಯ ನಡೆಸಿದ ಈತ ಮನುಷ್ಯನಾಗಲು ಅನರ್ಹ! ಅಂಥದ್ದರಲ್ಲಿ ಈತನನ್ನು ದೇವರು ಎಂದು ಪೂಜಿಸುವ ಅನುಯಾಯಿಗಳು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದರು. ಇವರ ಹುಚ್ಚುತನದಿಂದ 38 ಜನರು ಪ್ರಾಣ ಕಳೆದುಕೊಂಡರು.
“ನಾನು ರಾಮ್‌ಸಿಂಗ್ ಜಿ, ಮಸ್ತಾನ್‌ಜಿ ಅವರ ಸಚ್ಚಾ ಸೌಧ ಭೂಮಿಗೆ ನಮಸ್ಕರಿಸುತ್ತೇನೆ…” ಪ್ರಧಾನಿ ಮೋದಿ ಅವರು ಅಕ್ಟೋಬರ್ 11, 2014 ರಂದು ಹರಿಯಾಣದ ಸಿರ್ಸಾದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ ಮಾತುಗಳು. ಪ್ರಧಾನಿ ನರೇಂದ್ರ ಮೋದಿ ಗುರ್ಮಿತ್ ರಾಮ್ ರಹೀಂ ಸಿಂಗ್‌ನನ್ನು ಹಲವು ರ್ಯಾಲಿಗಳಲ್ಲಿ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ಅಂದಿನ ಹರಿಯಾಣದ ಮುಖ್ಯಮಂತ್ರಿಗೂ ಈ ದೇವಮಾನವನ ಜೊತೆಗೆ ನಂಟಿತ್ತು.
ಕರ್ನಾಟಕದ ರಾಘವೇಶ್ವರ ಭಾರತೀ ಪ್ರಕರಣ: ಶಿವಮೊಗ್ಗದ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಪ್ರಕರಣ ಕರ್ನಾಟದಲ್ಲಿ ಅತಿ ಹೆಚ್ಚು ಸಂಚಲನ ಸೃಷ್ಟಿ ಮಾಡಿದ ಪ್ರಕರಣ. ಈತನ ಮೇಲೆ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಮಠದ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅವರು, ಸ್ವಾಮೀಜಿ 2011 ಮತ್ತು 2014ರ ನಡುವೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದರು. ಇದಾದ ನಂತರ ಮತ್ತೊಬ್ಬ ಮಹಿಳೆ, ತಾನು 15 ವರ್ಷದ ಅಪ್ರಾಪ್ತೆಯಾಗಿದ್ದಾಗ ನನ್ನ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.
ತನ್ನ ಅನುಯಾಯಿಗಳಿಗೆ ತಾನು ರಾಮನ ಪರಮಾವತಾರ ಎಂದು ಬೆಪ್ಪರನ್ನಾಗಿಸುತ್ತಿದ್ದ. ಈತ ತಾನು ಮಾಡುವ ಎಲ್ಲಾ ಕಾರ್ಯಗಳು ರಾಮನ ಇಚ್ಚೆ, ತನಗೆ ಮಾಡುವ ಸೇವೆ ರಾಮನಿಗೆ ಸಲ್ಲುತ್ತದೆ ಎಂದು ಅನುಯಾಯಿಗಳನ್ನು ನಂಬಿಸಿದ್ದ ಎಂದು ದೂರುದಾರೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದರು.
ಪ್ರಕರಣ ಪ್ರತಿ ಬಾರಿ ಕೋರ್ಟ್ ಮೆಟ್ಟಿಲೇರಿದಾಗಲೂ ಪರಿಹಾರ ಸಿಗದೆ ಮುಂದೂಡಲಾಗುತ್ತಿತ್ತು. 2014ರಲ್ಲಿ ಏಕಕಾಲದಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆದವು. ಮೊದಲನೆಯದಾಗಿ, ಗೀತಾ ಅವರ ಅತ್ಯಾಚಾರ ಪ್ರಕರಣವನ್ನು ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು; ಎರಡನೆಯದಾಗಿ, ರಾಘವೇಶ್ವರ ಸ್ವಾಮಿ ಕರ್ನಾಟಕ ಹೈಕೋರ್ಟ್‌ನಲ್ಲಿ ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. 2014ರಿಂದ ಹೈಕೋರ್ಟ್‌ನ ಸುಮಾರು 10 ನ್ಯಾಯಾಧೀಶರು ರಾಘವೇಶ್ವರ ಭಾರತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. 2025 ಮಾರ್ಚ್ 7ರಂದು ಕೋರ್ಟ್ ಸಿಐಡಿ ತನಿಖಾ ತಾಂತ್ರಿಕ ಲೋಪ ಹಾಗೂ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಕೊಟ್ಟು ಪ್ರಕರಣ ವಜಾಗೊಳಿಸಿತು.
ಈತ ಹವ್ಯಕ ಬ್ರಾಹ್ಮಣ ಪಂಗಡಕ್ಕೆ ಸೇರಿದ ಶಂಕರಾಚಾರ್ಯರ ಅನುಯಾಯಿ. ಸಹಜವಾಗಿಯೇ ಬಹಳ ಪ್ರಬಲ ಹಿನ್ನೆಲೆ ಹೊಂದಿರುವುದರಲ್ಲಿ ಸಂಶಯವಿಲ್ಲ. ಇವನಿಗೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಜೊತೆಗೂ ಸಂಪರ್ಕವಿತ್ತು. ಹೀಗೆ ದೇಶದೆಲ್ಲೆಡೆ ಇಂತಹ ಆಧ್ಯಾತ್ಮ ಗುರುಗಳ ವೇಷ ತೊಟ್ಟು ಭಕ್ತರೆಂದು ಬಂದ ಮಹಿಳೆಯರನ್ನು ಅತ್ಯಾಚಾರ ನಡೆಸಿದ ಹತ್ತಾರು ಪ್ರಕರಣಗಳನ್ನು ದಾಖಲಾಗಿದೆ.




